
“ಚಿ.ಉದಯಶಂಕರ್ ಗೆ ಕನ್ನಡ ದಾಸ ಬಿರುದು ಬಂದಿದ್ದು”
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 18
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)
ಎಸ್.ಎ ಶ್ರೀನಿವಾಸ ಪಾರ್ವತಮ್ಮ ರಾಜ್ಕುಮಾರ್ ಅವರ ತಮ್ಮ. ಅವನು ಮೈಸೂರಿನಲ್ಲಿದ್ದಾನೆ. ಅವನಿಗೊಂದು ಸಿನಿಮಾ ಮಾಡಿಕೊಡಿ ಎಂದು ಪಾರ್ವತಮ್ಮನವರು ಕೇಳಿದ್ರು. ‘ಹೊಸ ಬೆಳಕು’ ಸಿನಿಮಾ ಮಾಡೆದೆವು. ಅದು ಕಾದಂಬರಿ ಆಧಾರಿತವಾದದ್ದು. ವಾಣಿ ಅದರ ಲೇಖಕರು. ಆ ಕಾದಂಬರಿಯನ್ನು ಕೊಟ್ಟಿದ್ದು ಪಾರ್ವತಮ್ಮ ರಾಜ್ಕುಮಾರ್ ಅವರೇ. ಸರಿತಾ ಅದರ ಹೀರೊಯಿನ್. ರಂಗರಾವ್ ಅವರು ಮ್ಯೂಸಿಕ್ ಡೈರೆಕ್ಟರ್. ಒಳ್ಳೊಳ್ಳೆ ಹಾಡುಗಳನ್ನು ಇದರಲ್ಲೂ ಕೊಟ್ಟಿದ್ದಾರೆ.
ಆ ಸಿನಿಮಾದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಹಾಡು ಬೇಕಿತ್ತು. ಆಗ ಕವನ ತೆಗೆದುಕೊಳ್ಳುವ ಯೋಚನೆ ಬಂತು. ಬೇಕಾದಷ್ಟು ಕವನ ಓದಿದೆ. ಅದರಲ್ಲಿ ಕುವೆಂಪು ಅವರ ‘ತೆರೆದಿದೆ ಮನೆ ಓ... ಬಾ’ ಅತಿಥಿ ಇಷ್ಟವಾಯ್ತು. ಅದನ್ನು ತೆಗೆದುಕೊಂಡು ಹೋಗಿ ರಂಗರಾವ್ ಅವರಿಗೆ ಕೊಟ್ಟು, ಟ್ಯೂನ್ ಮಾಡುವಂತೆ ಹೇಳಿದೆ. ಅಯ್ಯಯ್ಯೋ ನನ್ನ ಕೈಯಲ್ಲಿ ಆಗುವುದಿಲ್ಲ. ಟ್ಯೂನ್ ಕೊಡುತ್ತೇನೆ. ಅದಕ್ಕೆ ನೀವು ಸಾಹಿತ್ಯ ಬರೆಸಿ ಅಂದ್ರು. ಅದೇ ಸಾಹಿತ್ಯ ಬೇಕಾದ್ರು ಬರೆಸಿ ಎಂದ್ರು. ಆಗಲ್ಲ ಎನ್ನಬೇಡ. ಇದಕ್ಕೆ ಟ್ಯೂನ್ ಹಾಕಲೇಬೇಕು ಎಂದೆ. ಆಗ ಒಪ್ಪಿಕೊಂಡು, ಒಂದು ವಾರ ಸಮಯ ಕೊಡಿ ಅಂದರು. ಒಂದು ವಾರ ಅಲ್ಲ ಬೇಕಿದ್ರೆ ಹತ್ತು ದಿವಸ ತೆಗೆದಿಕೊ ಎಂದೆ. ಆಗ ಒಪ್ಪಿಕೊಂಡ್ರು.
ಆ ಸಿನಿಮಾದಲ್ಲಿ ‘ಕಣ್ಣೀರ ಧಾರೆ ಇದೇಕೆ ಇದೇಕೆ’ ಹಾಡಿದೆ. ಅದನ್ನು ರಾಜ್ಕುಮಾರ್ ಅವರು ಹಾಡಿ ಮುಗಿಸಿದಾಗ, ರಂಗರಾವ್ ಅವರ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಅಷ್ಟು ಭಾವಪೂರ್ಣವಾಗಿ ರಾಜ್ಕುಮಾರ್ ಅವರು ಹಾಡಿದ್ರು. ರಂಗರಾವ್ ಅವರು ಸೀದಾ ವಾಯ್ಸ್ ರೂಮ್ಗೆ ಹೋಗಿ ರಾಜ್ಕುಮಾರ್ ಅವರನ್ನು ತಬ್ಬಿ ಕಾಲಿಗೆ ಬಿದ್ರು. ವೆಂಕಟೇಶ್ ತರಹನೇ ಅವರು ಒಳ್ಳೆಯ ವೀಣಾ ಪ್ರವೀಣರು. ಏನು ಅದ್ಭುತವಾಗಿ ಹಾಡಿದ್ರಿ ಅಣ್ಣಾ... ನನ್ನ ಕಣ್ಣಲ್ಲಿ ನೀರು ಬಂದುಬಿಡ್ತು ಎಂದು ತೆಲುಗಿನಲ್ಲಿ ಅಂದ್ರು. ಎಲ್ಲ ನೀವು ಕಲಿಸಿದ್ದು. ನಿಮ್ಮ ರಾಗವನ್ನು ನಾನು ಹಾಡಿದ್ದೇನಷ್ಟೇ. ಅದರ ಕ್ರೆಡಿಟ್ ನಿಮಗೆ ಸೇರಬೇಕು ಎಂದು ರಾಜ್ಕುಮಾರ್ ಹೇಳಿದ್ರು. ರಾಜ್ಕುಮಾರ್ ಅವರು ಬಹಳ ಸಂಪ್ರೀತರು. ಯಾವುದನ್ನು ನಾನು ಚೆನ್ನಾಗಿ ಮಾಡಿದ್ದೇನೆ ಎಂದು ಹೇಳುತ್ತಲೇ ಇರಲಿಲ್ಲ. ಇನ್ನು ಚೆನ್ನಾಗಿ ಮಾಡಬಹುದಿತ್ತು ಎಂದು ಹೇಳುತ್ತಿದ್ರು.
ನಾವು ಕಥೆಗೆ ಎಷ್ಟು ಪ್ರಾಮುಖ್ಯ ಕೊಡುತ್ತಿದೆವೋ, ಅದರಲ್ಲಿ ಬರುವ ಸನ್ನಿವೇಶದ ಹಾಡುಗಳಿಗೂ ಅಷ್ಟೇ ಪ್ರಾಮುಖ್ಯ ಕೊಡುತ್ತಿದೆವು. ಸನ್ನಿವೇಶಕ್ಕೆ ತಕ್ಕ ರಾಗಗಳು ಅದಕ್ಕೆ ತಕ್ಕ ಸಾಹಿತ್ಯ ಇದುದ್ದರಿಂದಲೇ ನಮ್ಮ ಸಿನಿಮಾಗಳಲ್ಲಿ ಅಷ್ಟೊಂದು ಅದ್ಭುತವಾದ ಹಾಡುಗಳಿರುತ್ತಿದ್ದವು.
ಚಿ.ಉದಯಶಂಕರ್ ಅವರ ಪೆನ್ನಿನ ಇಂಕ್ನಲ್ಲಿ ಸಾಹಿತ್ಯದ ಸತ್ವವೇ ಅಡಗಿರುತ್ತಿತ್ತು. ಟ್ಯೂನ್ ಕೊಡುತ್ತಿದ್ದ ಕೆಲವೇ ಸಮಯದಲ್ಲಿ ಸಾಹಿತ್ಯ ಕೊಟ್ಟುಬಿಡುತ್ತಿದ್ದ. ತಮಿಳಿನ ಚಿತ್ರಸಾಹಿತಿ ಕನ್ನದಾಸನ್ ಕ್ಷಣ ಮಾತ್ರದಲ್ಲಿ ಸಾಹಿತ್ಯ ರಚನೆ ಮಾಡಿಕೊಡುತ್ತಿದ್ರು. ಅಂತಹದೊಂದು ಪ್ರಾವೀಣ್ಯತೆ ಅವರದಾಗಿತ್ತು. ಅದಕ್ಕೆ ಇವನಿಗೆ ಎಷ್ಟೋ ಸಲ ಕನ್ನದಾಸನ್ ತರಹ ನೀನು, ಅವನು ಕನ್ನದಾಸನ್ ಆದ್ರೆ ನೀನು ಕನ್ನಡದ ದಾಸನ್ ಎಂದು ಹೇಳುತ್ತಿದ್ದೆ. ಸಿಗರೇಟ್ ಸೇದಿ ಮುಗಿಸುವುದರೊಳಗೆ ‘ಆಡಿಸಿದಾತ ಬೇಸರ ಮೂಡಿ’ ಬರೆದು ಮುಗಿಸಿದ್ದ ಅವನು. ಒಟ್ಟಿಗೆ ಕೂತು ಸ್ಕ್ರೀನ್ ಪ್ಲೇ ಮಾಡುತ್ತಿದ್ದರಿಂದ ಅವನಿಗೆ ಸನ್ನಿವೇಶ ಚೆನ್ನಾಗಿ ಗೊತ್ತಿರುತ್ತಿತ್ತು.
ಕುವೆಂಪು ಅವರಿಗೆ ಹೋಗಿ ಕೇಳಿದ ತಕ್ಷಣವೇ, ನೀವು ಬಳಸಿಕೊಳ್ಳಿ ಎಂದು ಸಂತೋಷವಾಗಿ ಹೇಳಿದ್ರು. ವಾಣಿ ಅವರಿಗೆ ಐದು ಸಾವಿರ ಕೊಟ್ಟಿದ್ದೆವು. ಅವರು ಸಂತೋಷವಾಗಿ ತೆಗೆದುಕೊಂಡ್ರು. ಎರಡು ಕನಸಿಗೆ ಎರಡು ಸಾವಿರ ಕೊಟ್ಟಿದ್ವಿ.
ಗೋಪಾಲಕೃಷ್ಣ ಅಡಿಗರ ಅನಾಥೆ ಕಾದಂಬರಿ ಓದಿದೆವು. ಇದರ ಕಥೆ ತುಂಬಾ ಚೆನ್ನಾಗಿದೆ. ಇದರ ರೈಟ್ಸ್ ಬೇಕು ಎಂದು ಅಡಿಗರ ಬಳಿ ಹೋದೆವು. ನನ್ನ ಹತ್ತಿರ ರೈಟ್ಸ್ ಇಲ್ಲ. ಕೀರ್ತಿರಾಜ್ ಎಂಬುವರಿಗೆ 500ಕ್ಕೆ ಬರೆದುಕೊಟ್ಟಿದ್ದೇನೆ. ಅವನು ತೆಗೆದುಕೊಂಡು ಹೋಗಿ ಮೂರು ವರ್ಷ ಆಯ್ತು. ಪಿಕ್ಚರ್ ಕೂಡ ಮಾಡಿಲ್ಲ. ಅವನ ಹತ್ತಿರ ಪಿಕ್ಚರ್ ಮಾಡ್ತಾನಾ ಕೇಳಿ. ಬೇಕಿದ್ರೆ ದುಡ್ಡು ಕೊಟ್ಟುಬಿಡಿ. ಅವನು ಮಾಡದೇ ಹೋದ್ರೆ ನೀವು ಮಾಡಿ ಅಂದ್ರು. ಸರಿ ಎಂದು ನಾವು ಕೀರ್ತಿರಾಜ್ನನ್ನು ಹುಡುಕಿದ್ರೆ ಎಲ್ಲೂ ಸಿಗಲಿಲ್ಲ. ಪೇಪರ್ನಲ್ಲಿ ಜಾಹೀರಾತು ಕೊಟ್ಟೆವು.
‘ಗೋಪಾಲಕೃಷ್ಣ ಅಡಿಗರ ಅನಾಥ ಕಾದಂಬರಿಯನ್ನು ಸಿನಿಮಾ ಮಾಡಲು ಅದರ ಹಕ್ಕು ಸ್ವಾಮ್ಯಕ್ಕಾಗಿ ಅವರ ಬಳಿ ಮಾತನಾಡಿದ್ದೇವೆ. ಇದಕ್ಕೆ ಯಾರಾದ್ರೂ ವಿರೋಧಿಸುವವರಿದ್ರೆ ಈ ಪ್ರಕಟಣೆ ಬಂದ ಹದಿನೈದು ದಿನಗಳ ಒಳಗೆ ಸಂಪರ್ಕಿಸಬೇಕು. ಹದಿನೈದು ದಿನದ ನಂತರವೂ ಯಾರೂ ವಿರೋಧ ಸೂಚಿಸದಿದ್ದರೆ ಈ ಕಥೆ ಆಧಾರಿತ ಸಿನಿಮಾವನ್ನು ಮುಂದುವರಿಸುತ್ತೇವೆ’ ಎಂದು ಪ್ರಕಟಣೆ ಹಾಕಿದೆವು.
ಏಳು ದಿನದಲ್ಲಿ ಕೀರ್ತಿರಾಜ್ ಹುಡುಕಿಕೊಂಡು ಬಂದ. ನೀವು ಸಿನಿಮಾ ಮಾಡಲು ಆಗುವುದಿಲ್ಲ. ಅದನ್ನು ನಾನು ಸಿನಿಮಾ ಮಾಡಬೇಕು ಎಂದಿದ್ದೇನೆ. ನನ್ನ ಜೀವ ಇರುವವರೆಗೂ ಈ ಕಥೆಯನ್ನು ಯಾರಿಗೂ ಕೊಡುವುದಿಲ್ಲ. ನನ್ನ ಆಯಸ್ಸು ಪೂರ್ಣವಾಗುವುದರೊಳಗೆ ಈ ಕಥೆಯನ್ನು ಸಿನಿಮಾ ಮಾಡೇ ಮಾಡುತ್ತೇನೆ. ನಾನು ರೈಟ್ಸ್ ಕೊಡುವುದಿಲ್ಲ ಎಂದ. ಅಡಿಗರ ಬಳಿ ಹೋದಾಗ ಅಲ್ಲಿಯೇ ಇರುತ್ತಿದ್ದ ಅನಂತಮೂರ್ತಿಯವರ ಪರಿಚಯವಾಯ್ತು.
ಎಸ್.ಎಲ್.ಭೈರಪ್ಪ ಅವರ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯನ್ನು ಸಿನಿಮಾ ಮಾಡಲು ಯೋಚಿಸಿದೆವು. ಕಥೆಯನ್ನು ಓದಿದ್ವಿ ಅಷ್ಟೆ. ಭೈರಪ್ಪ ಅವರನ್ನು ಸಂಪರ್ಕಿಸಿರಲಿಲ್ಲ. ಆ ಕಥೆಯ ನಿರ್ದೇಶನಕ್ಕೆ ಬಿ.ವಿ.ಕಾರಂತ ಹಾಗೂ ಗಿರೀಶ ಕಾರ್ನಾಡ ಅವರೇ ಸೂಕ್ತ ಎನಿಸಿತು. ಅವರನ್ನು ಸಂಪರ್ಕಿಸಿದೆವು. ಮಿನರ್ವ ಸರ್ಕಲ್ನ ಕಾಮತ್ ಹೋಟೆಲ್ನಲ್ಲಿ ಗಿರೀಶ್ ಕಾರ್ನಡ್ ಅವರ ಪರ್ಮನೆಂಟ್ ರೂಮ್ ಇತ್ತು. ಅಲ್ಲಿ ಹೋಗಿ ಮಾತಾಡಿದೆ. ಅವರು ಕಾರಂತ ಅವರನ್ನು ಕರೆಸಿ ಇಬ್ಬರೂ ಮಾತಾಡಿಕೊಂಡು, ಮರುದಿನ ಬರಲು ನನಗೆ ಹೇಳಿದ್ರು. ಮತ್ತೊಮ್ಮೆ ಹೋದಾಗ, ಇದನ್ನು ಕನ್ನಡದಲ್ಲಿ ಮಾಡಿದ್ರೆ ಗಿಟ್ಟಲ್ಲ ನಿಮಗೆ. ಕನ್ನಡ ಮತ್ತು ಹಿಂದಿಯಲ್ಲಿ ಮಾಡ್ರಿ ಎಂದು ಕಾರ್ನಾಡ್ ಸಲಹೆ ಕೊಟ್ರು. ಆಗ ಕನ್ನಡ ಮತ್ತು ಹಿಂದಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ಗೆ ಇದ್ದಷ್ಟು ವ್ಯತ್ಯಾಸವಿತ್ತು. ಹಿಂದಿ ಮಾಡುವುದಾದ್ರೆ ಸಿಕ್ಕಾಪಟ್ಟೆ ದುಡ್ಡು ಬೇಕು. ಅಷ್ಟೆಲ್ಲ ಖರ್ಚು ಮಾಡಲು ನಾವು ತಯಾರಿಲ್ಲ. ಹಿಂದಿ ಬೇಡ ನಮಗೆ. ದಯವಿಟ್ಟು ಕನ್ನಡ ಮಾಡಿಕೊಡಿ ಅಂದೆವು. ಮಾಡಿದ್ರೆ ಎರಡೂ ಮಾಡಬೇಕು. ಇಲ್ಲದಿದ್ರೆ ಮಾಡಲು ಆಗುವುದಿಲ್ಲ ಅಂದ್ರು. ನಾನು ನಡೆದ ಘಟನೆಯನ್ನು ವರದಪ್ಪ ಬಳಿ ಹೀಗೆ ಮಾತನಾಡುವಾಗ ಹೇಳಿದೆ. ಅವನು ಚಂದುಲಾಲ್ ಬಳಿ ಹೇಳಿದ್ದಾನೆ. ಚಂದುಲಾಲ್ ನಾನು ಎರಡು ಭಾಷೆಯಲ್ಲೂ ಮಾಡುತ್ತೇನೆ ಎಂದು ಕಾರ್ನಾಡ್ ಅವರಿಗೆ ಅಡ್ವಾನ್ಸ್ ಕೊಟ್ಟಿದ್ದಾನೆ. ಭೈರಪ್ಪ ಅವರ ಬಳಿ ರೈಟ್ಸ್ ಕೂಡ ಪಡೆದುಕೊಂಡ್ರು. ‘ಗೋಧೂಳಿ’ ಎಂದು ಹಿಂದಿಯಲ್ಲೂ ‘ತಬ್ಬಲಿಯು ನೀನಾದೆ ಮಗನೆ’ ಎಂದು ಕನ್ನಡದಲ್ಲೂ ಮಾಡಿದ್ರು. ಕನ್ನಡದಲ್ಲಿ ಸುಮಾರಾಗಿ ನಡೀತು. ಹಿಂದಿಯಲ್ಲಿ ನಸೀರುದ್ದೀನ್ ಷಾ ನಟಿಸಿದ್ರು. ಅಲ್ಲಿ ಸಂಪೂರ್ಣವಾಗಿ ನಷ್ಟ ಅನುಭವಿಸಿತು. ಹಿಂದಿಯಲ್ಲಿ ಮಾಡಿದ್ರೆ ನಷ್ಟ ಆಗುತ್ತದೆ ಎಂಬುದು ನಮಗೆ ಮೊದಲೇ ಗೊತ್ತಿತ್ತು. ಅದು ನಮ್ಮ ಅನುಭವ. ಹಿಂದಿಯಲ್ಲೂ ಪ್ರೊಡ್ಯೂಸರ್ ಆಗಬೇಕೆಂಬ ಆಸೆಯಿಂದ ಅವನು ಹಾಗೆ ಮಾಡಿದ. ಅದು ಅವನ ಉದ್ಧಟತನ.
ಅನಂತಮೂರ್ತಿ, ಅಡಿಗರು, ಕಾರ್ನಾಡರ ಜೊತೆ ಹೀಗೆ ನಮ್ಮ ಸಂಬಂಧ ಬೆಳೆದಿತ್ತು. ಅ.ನ.ಕೃಷ್ಣರಾಯರು, ಬೀಚಿ, ತರಾಸು ಅವರ ಬಗ್ಗೆ ಮೊದಲೇ ಹೇಳಿದ್ದೇನೆ. ‘ಹೊಸ ಬೆಳಕು’ ಆದ ಮೇಲೆ ತರಾಸು ಅವರ ಕಾದಂಬರಿಯನ್ನು ಸಿನಿಮಾ ಮಾಡುವ ಎಂದು ತಯಾರಿ ಮಾಡಿಕೊಂಡೆವು.
ಮುಂದುವರಿಯುವುದು...
ಸಂದರ್ಶನ: ಕೆ.ಎಸ್. ಪರಮೇಶ್ವರ