ಜಗ್ಗೇಶ್‌ ಮತ್ತೆ ನಾನು ಅವಕಾಶಕ್ಕಾಗಿ ಪಟ್ಟ ಕಷ್ಟ!!!

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ – 10
1981ರಲ್ಲಿ ನಾನು ಬೆಂಗಳೂರಿಗೆ ಟ್ರಾನ್ಸ್ ಫರ್ ತಗೊಂಡ್ಬಿಟ್ಟೆ. ಜೆ.ಸಿ ರೋಡ್ ಬ್ರಾಂಚ್‍ಗೆ ಟ್ರಾನ್ಸ್ ಫರ್ ಮಾಡಿದ್ರು. ಇಲ್ಲಿ ಬಂದ್ಮೇಲೆ ಇನ್ನೂ ಜಾಸ್ತಿ ಆಯ್ತು, ಹೇಗೆ ಅಂದ್ರೆ, ಬೆಳಗ್ಗೆ ಏಳು ಗಂಟೆಗೆ ಮನೆ ಬಿಟ್ರೆ ಹತ್ತು ಗಂಟೆ ತನಕ ಹೋಟೆಲ್ ಮೋತೀಮಹಲ್, ಹೈಲ್ಯಾಂಡ್ ಈ ಹೋಟ್ಲುಗಳೆಲ್ಲಾ ಸುತ್ತಾಡೋದು. ಎಲ್ಲೆಲ್ಲಿ ಯಾವ ಶೂಟಿಂಗ್ ನಡಿತಾ ಇದೆ ಅಂತ ನೋಡೋದು. ನಾವು ಡೈರೆಕ್ಟರ್‍ನ ಹಿಡಿತಾ ಇರ್ಲಿಲ್ಲ. ಅಸೋಸಿಯೇಟ್ ಡೈರೆಕ್ಟರ್ಸ್‍ನ ಹಿಡಿತಾ ಇದ್ವಿ. ಯಾಕಂದ್ರೆ ಸಣ್ಣ ಸಣ್ಣ ಪಾತ್ರ ಅವರಿಗೇ ತಾನೆ ಗೊತ್ತಿರೋದು. ಪೋಲೀಸ್ ಹಾಗೂ ಸಣ್ಣ ಪಾತ್ರಗಳನ್ನೆಲ್ಲಾ ಅವರೇ ಹೇಳ್ತಾ ಇದ್ರು. ಡೈರೆಕ್ಟರ್ ಗಮನಕ್ಕೇ ತಗೊಳ್ತಾ ಇರ್ಲಿಲ್ಲ. ಮತ್ತೆ ಪ್ರೊಡಕ್ಷನ್ ಮ್ಯಾನ್ಭೆಜರ್‍ಗಳನ್ನೆಲ್ಲಾ ಸ್ವಲ್ಪ ಕಾಂಟ್ಯಾಕ್ಟ್ ಮಾಡ್ತಾ ಇದ್ವಿ. ಹೀಗಿರ್ಬೇಕಾದ್ರೆ ಜಗ್ಗೇಶ್, ನಾನು, ಕಿಲ್ಲರ್ ವೆಂಕಟೇಶ್ ನಾವೆಲ್ಲಾ ಜೊತೆಯಾಗಿ ಹೋಗ್ತಾ ಇದ್ವಿ ಪಾತ್ರಗಳನ್ನ ಕೇಳಕ್ಕೆ. ಹೋಟೆಲ್ ಹೈಲ್ಯಾಂಡಲ್ಲಿ ನಾವು ಆಗ ತಾನೆ ಸೇರ್ಕೊಳ್ತಾ ಇದ್ವಿ.


ಯಾವುದಾದ್ರೂ ಒಂದು ಪಿಚ್ಚರ್ ಸ್ಟಾರ್ಟ್ ಆಯ್ತು ಅಂದ್ರೆ ನಾವು ಮೂರು ನಾಲ್ಕು ಜನ ಸೇರ್ಕೊತಾ ಇದ್ವಿ. ನನ್ನ ಹತ್ರನೂ ಬುಲೆಟ್ ಇತ್ತು. ಜಗ್ಗೇಶ್ ಹತ್ರನೂ ಬುಲೆಟ್ ಇತ್ತು. ಜಾವಾ ಹೆಚ್.ಡಿ. ಯಾವುದಾದ್ರೂ ಪಿಚ್ಚರ್ ಅನೌನ್ಸ್ ಆದ ತಕ್ಷಣನೇ ಹೋಟೆಲ್ ಹೈಲ್ಯಾಂಡ್‍ಗೆ ಬರ್ತಾ ಇದ್ವಿ ನಾವು. ಜಗ್ಗೇಶ್ ಮೊದಲು ಹೋಗಿ ಎಲ್ಲಾ ಕೇಳ್ಕೊಂಡು ಬಂದು ನನ್ನ ಕಳಿಸ್ತಿದ್ರು. “ಇಂಥ ರೂಮಲ್ಲಿ ಡೈರೆಕ್ಟರ್ ಇದ್ದಾರೆ, ಹೋಗಿ ನೋಡು” ಅಂತ. ಹೀಗೇ ನಮ್ಮ ಪರಿಚಯ ಬೆಳೀತು.


ಪರಮ್: ಜಗ್ಗೇಶ್ ಕೂಡ ಒದ್ದಾಡ್ತಾ ಇದ್ರಾ?


ಬ್ಯಾಂಕ್ ಜನಾರ್ಧನ್: ಹೌದು ಜಗ್ಗೇಶ್ ಕೂಡ ಒದ್ದಾಡ್ತಾ ಇದ್ರು. ಅವರೂ ನನ್ನ ಹಾಗೇ ಸಿಂಗಲ್ ಪಾರ್ಟ್ ಮಾಡ್ತಾ ಇದ್ರು. ಒಂದು ಸೀನ್ ಎರಡು ಸೀನ್ ಮಾಡ್ತಾ ಇದ್ರು. ನಾವೆಲ್ಲಾ ಜೊತೆಯಾದ್ವಿ. ಜೊತೆಯಾಗಿ ಪಾತ್ರಗಳ ಹುಡುಕಾಟದಲ್ಲಿದ್ವಿ. ಹಾಗೆಲ್ಲಾ ಮಾಡ್ತಿದ್ರೂ ಮನಸ್ಸಿಗೆ ನೆಮ್ಮದಿ ಇರ್ಲಿಲ್ಲ. ಅವರಿಗೆ ಹೀರೋ ಆಗ್ಬೇಕು ಅಂತ ಆಸೆ ಇತ್ತು. ನಂಗೆ ಏನಾದ್ರೂ ದೊಡ್ಡ ಕ್ಯಾರೆಕ್ಟರ್ ಸಿಕ್ಕಿದ್ರೆ ಸಾಕು, ಏನಾದ್ರೂ ಮಾಡೋಣ ಅಂತ ನಾನು ಹುಮ್ಮಸ್ಸಿನಲ್ಲಿದ್ದೆ.ಮುಂದುವರೆಯುವುದು…


40 views