“ಜಾತ್ರೆ ಸೀನ್ ಶೂಟಿಂಗ್ ಗೆ ಬಂದ ಜನ…”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 2

(ಮಾಲ್ಗುಡಿ ಡೇಸ್ ಪ್ರಾಜೆಕ್ಟಿನಲ್ಲಿ ಕೆಲಸ ಮಾಡಿದ್ದ “ಸಾವಂತ್”ಅವರ ನೆನಪುಗಳು)


ಪರಮ್: ಎಲ್ಲಿ ಶೂಟ್ ಮಾಡಿದ್ರಿ? ಲೊಕೇಶನ್ ಎಲ್ಲಿ? ಇಡೀ ಮಾಲ್ಗುಡಿ ಡೇಸ್ ಶೂಟ್ ಆಗಿದ್ದರ ವಾತಾವರಣ ಹೇಳಿ…


ಸಾವಂತ್: ಆಗುಂಬೆಯಲ್ಲಿ ಅವಾಗೆಲ್ಲಾ ಮಡ್ ರೋಡ್ ಇತ್ತು. ಇಡೀ ಆಗುಂಬೆಯಲ್ಲಿ ನಮ್ಮ ಜನಗಳು ಎಲ್ಲರೂ ಉಳ್ಕೊಂಡಿದ್ವಿ. ಅಲ್ಲಿ ಒಂದು ದೇವಸ್ಥಾನ ಇದೆ. ಆ ದೇವಸ್ಥಾನದ ಹೆಸರು ಕುಮಾರಸ್ವಾಮಿನೋ ಏನೋ ಇದೆ, ಮರೆತು ಹೋಯಿತು. ಅಕ್ಕ ಪಕ್ಕ ಮನೆಗಳು ಎಲ್ಲ ನಮಗೆ ಕೊಟ್ಟಿದ್ರು, ಒಂದು ಮನೆಯಲ್ಲೇ ಅಡುಗೆ ಎಲ್ಲಾ ರೆಡಿಯಾಗೋದು. ಎಲ್ಲರಿಗೂ ಬೇರೆ ಬೇರೆ ರೂಮ್, ನಮಿಗೆ ಅಲ್ಲಿ ಮಲ್ಕೋ ಇಲ್ಲಿ ಮಲ್ಕೋ ಅಂತ ಯಾರೂ ಹೇಳ್ತಿರ್ಲಿಲ್ಲ. ಎಲ್ಲರಿಗೂ ಬೆಡ್ ಇತ್ತು, ಮುಖ್ಯವಾದ ಏನೇನು ಫೆಸಿಲಿಟೀಸ್ ಬೇಕೋ ಅವೆಲ್ಲಾ ಇತ್ತು. ಬಿಸಿ ನೀರು ಎಲ್ಲರಿಗೂ.


ನೀವು ನಂಬ್ತಿರೋ ಬಿಡ್ತಿರೋ ಎರಡೆರಡು ಟ್ರಕ್ ಇಲ್ಲಿಂದ ಹೊರಡೋದು ಬೆಂಗ್ಳೂರಿಂದ ಒಂದು ಟ್ರಕ್ ಬರೀ ಗ್ರಾಸರೀಸ್, ಇನ್ನೊಂದರಲ್ಲಿ ಕಾಸ್ಟ್ಯೂಮ್ ಮತ್ತೆ ಬೇಕಾಗಿರುವ ವಸ್ತುಗಳೆಲ್ಲವೂ. ಅಲ್ಲಿ ನಾವು ಏಳ್ತಾ ಇದ್ದಿದ್ದು ಬೆಳಗ್ಗೆ ಐದು ಗಂಟೆಗೆ. ನೀವು ನಂಬ್ತಿರೊ ಬಿಡ್ತೀರೊ ಬೆಳಗ್ಗೆ ಏಳು ಗಂಟೆಗೆ ಸೀನ್ ವಿಥ್ ಕ್ಯಾಮರಾ ಲೈನಪ್ ಆಗಿ ನಿಂತ್ಕೊಂಡಿರೋರು. ಬೆಳಗ್ಗೆ ಏಳು ಗಂಟೆಗೆ ಫಸ್ಟ್ ಶಾಟ್ ತೆಗೊಂಡ್ಮೆಲೆನೇ ಟಿಫನ್ ಮಾಡ್ತಾಯಿದ್ದದ್ದು.ಪರಮ್: ಬಿಫೋರ್ ಬ್ರೇಕ್ಫಾಸ್ಟ್ ಒಂದು ಶಾಟ್ ಮುಗ್ದೋಗಿರುತ್ತೆ?


ಸಾವಂತ್: ಅಲ್ಲಿ ಒಬ್ಬರು ಪಣಿಯಾರ್ ಅಂತ ಇದ್ದರು. ಪಾಪ ಅವ್ರು, ಈಗ ಇದ್ದಾರೊ ಇಲ್ವೋ ಗೊತ್ತಿಲ್ಲ. ಪಣಿಯಾರ್ ಹೋಟೇಲ್ ಅಲ್ಲಿ ನಾವು ರೆಗ್ಯುಲರ್ ಟೀ ಕುಡಿಯಕ್ಕೆ ಹೋಗೊದು ಬೆಳಗ್ಗೆ ಎದ್ದು. ಅವರು “ಸಾಬ್ ಫಸ್ಟ್ ಶಂಕರ್ ಸಾರ್ ಬರ್ತಾರೆ, ಎರಡನೇಯವರು ನೀವು ಬರೊದು, ನಂತರ ಎಲ್ಲರೂ ಬರ್ತನೇ ಇರ್ತಾರೆ”ಅಂತ ಹೇಳ್ತಿದ್ರು. ಸೋ ಬೆಳಗ್ಗೆ ಐದು ಗಂಟೆಗೆ ಎದ್ದು ಶಂಕರ್ ಸರ್ ಟೀ ಕುಡಿಯಕ್ಕೆ ಹೋಗ್ತಿದ್ರು.


ಪರಮ್: ಸೋ ಎಲ್ಲರಿಗೂ ಮುಂಚೆ ಎದ್ದು ಬಿಡೋರು?


ಸಾವಂತ್: ಎಲ್ಲರಿಗೂ ಮುಂಚೆ ಸರ್, ಆಮೇಲೆ ಅವ್ರು ಏನಾದ್ರೊಂದು ಕೆಲ್ಸ ಮಾಡ್ತನೇ ಇರೋರು. ಅವ್ರ ಬಗ್ಗೆ ನಾನೇನು ಹೇಳ್ಬೇಕಾಗಿಲ್ಲ ಬಹಳ ಜನ ತುಂಬಾ ಹೇಳಿದಾರೆ.


ಪರಮ್: ಸೋ ಆಗುಂಬೆ ಅಲ್ಲದೆ ಬೇರೆ ಯಾವ ಲೊಕೇಶನ್ ಮಾಲ್ಗುಡಿ ಡೇಸ್ ಗೆ?


ಸಾವಂತ್: ಆಗುಂಬೆ ಆಮೇಲೆ ಕಾರ್ಕಳ ಅಲ್ಲೇನೆ ಮೇಜರ್ ಲೊಕೇಶನ್. ಮತ್ತೆ ಬೆಂಗಳೂರಲ್ಲಿ ಮೊದಲು ‘ಪಪ್ಪೂಸ್ ಕಾಟೇಜ್’ಅಂತ ಇತ್ತು. ಯಡಿಯೂರು ಲೇಕ್ ಇದ್ಯಲ್ಲ, ಅಲ್ಲಿ ಆರ್ಟ್ ಡೈರಕ್ಟರ್ ಜಾನ್ ದೇವರಾಜ್ ಮನೆ ಇತ್ತು. ಅದರ ಅಕ್ಕ ಪಕ್ಕ ಸೆಟ್ ಹಾಕೊಂಡು ಶೂಟ್ ಮಾಡ್ತಾ ಇದ್ವಿ. ಸುಮಾರು ಹಳೇ ಮನೆ ಅದು. ಅಲ್ಲಿ ಏನೇನು ಇತ್ತೋ ಅವೆಲ್ಲಾ ಯೂಸ್ ಮಾಡ್ತಾ ಇದ್ವಿ. ಬಸವನಗುಡಿಯಲ್ಲಿ ಹಳೆ ಮನೆಗಳು ಈಗ್ಲೂ ಇವೆ. ಅಲ್ಲೂ ಶೂಟ್ ಮಾಡಿದ್ವಿ. ಮೇಜರ್ ಸ್ವಾಮಿ ಅಂಡ್ ಫ್ರೆಂಡ್ಸ್. ಆಮೇಲೆ ಮಿಠಾಯಿವಾಲ, ಸ್ವೇಟ್ ಫಾರ್ ಏಂಜಲ್ಸ್ ಹೀಗೆ ಸುಮಾರು ಎಪಿಸೋಡ್ ಶೂಟ್ ಮಾಡಿದ್ವಿ.


ಪರಮ್: ಇಪ್ಪತ್ತಾರು ಎಪಿಸೋಡ್ ಮಾಡಿದ್ರಾ? ಟೋಟಲ್ ಎಷ್ಟು ಎಪಿಸೋಡ್ ಆಯಿತು ಅದು?


ಸಾವಂತ್: ಅದು ನಲವತ್ತೆಂಟೋ… ಐವತ್ತಮೂರು ಎಪಿಸೋಡ್ ಏನೋ ಆಗಿದೆ.


ಪರಮ್: ಶಂಕರ್ ನಾಗ್ ಅಷ್ಟೊತ್ತಿಗಾಗ್ಲೇ ಸ್ಟಾರ್. ಅವ್ರು ಸಿನಿಮಾದಲ್ಲೆಲ್ಲ ಕಾಣಿಸ್ಕೊಂಡಿದ್ರು. ಆಗುಂಬೆ ಅಥವಾ ಸುತ್ತ ಮುತ್ತಲ ಹಳ್ಳಿಗಳು… ಇವತ್ತೇ ಆಗುಂಬೆ ಕಾರ್ಕಳ ಎಲ್ಲಾ ರಿಮೋಟ್ ಪ್ಲೇಸಸ್. ಅವಾಗ ಇನ್ನೂ ರಿಮೋಟ್ ಪ್ಲೇಸ್. ನೀವು ಹೇಳಿದ ಹಾಗೆ ಮಡ್ ರೋಡೆಲ್ಲಾ ಇತ್ತು. ಶಂಕರ್ ಸ್ಟಾರ್ ಬೇರೆ. ಆಗ ಜನಗಳ ರೆಸ್ಪಾನ್ಸ್ ಹೇಗಿರ್ತಾ ಇತ್ತು? ಕ್ರೌಡ್ ಮುತ್ಕೊತಾ ಇರ್ಲಿಲ್ವಾ?


ಸಾವಂತ್: ಸರ್ ಕ್ರೌಡ್ ಮುತ್ಕೊತಾ ಇತ್ತು. ಶಂಕರ್ ಸರ್ ಎಷ್ಟು ಪ್ರೀತಿಯಿಂದ ಹ್ಯಾಂಡಲ್ ಮಾಡ್ತಿದ್ರು ಅಂದ್ರೆ ಅವ್ರು ಒಂಥರಾ ಸ್ಟಾರ್ ಅಂತನೇ ಅನಿಸ್ಕೊತಾ ಇರ್ಲಿಲ್ಲ. ನಿಮಿಗೆ ಹೇಳಿದ್ನಲ್ಲ ಅವ್ರು ಒಳ್ಳೆ ಹ್ಯೂಮನ್ ಬೀಯಿಂಗ್ ಅಂತ, ನಿಮಗೆ ನಾನು ಅವಾಗ್ಲೇ ಹೇಳ್ತಾ ಇದ್ದೆ, ಅವ್ರು ಎಷ್ಟು ಡೌನ್ ಟು ಅರ್ಥ್ ಅಂತ. ನಾವು ನಡ್ಕೊಂಡು ಹೋಗ್ಬೇಕಾದ್ರೆ ಅವ್ರು ಕಾರಲ್ಲಿ ಬರ್ರ್ತಾ ಇದ್ರೆ, ಎಲ್ಲಿಗಯ್ಯ? ಕೂತ್ಕೊ ಅಂತ ಎಲ್ಲರನ್ನ ಕರ್ಕೊಂಡು ಹೋಗೋರು. ಅವ್ನ ಪಾಡಿಗೆ ಬರ್ತಾನೆ ಬಿಡು, ಅದು ನನ್ನ ಕೆಲ್ಸ ಅಲ್ಲ ಅಂತ ಯೋಚ್ನೆ ಮಾಡುವವರಲ್ಲ. ಕರ್ಕೊಂಡು ಹೋಗ್ತಿದ್ರು ಅವ್ರು.


ಪರಮ್: ಸೊ ಅವ್ರಿಗೆ ಯಾವುದೂ ತಲೆಯಲ್ಲೇ ಇರ್ಲಿಲ್ವಾ? ಅವ್ರೊಬ್ಬ ಸ್ಟಾರ್ ಅಂತ?


ಸಾವಂತ್: ಆಮೇಲೆ ಪ್ರತೀ ದಿವ್ಸ ಏನೂಂತಂದ್ರೆ ಒಂದು ಚಿಕ್ಕ ಮೀಟಿಂಗ್ ಇರೋದು. ಮೀಟಿಂಗ್ ಅಲ್ಲಿ ಇವತ್ತೇನು ಮಾಡಿದ್ವಿ, ನಾಳೆ ಏನು ಮಾಡ್ಬೇಕು, ಇವತ್ತು ಏನು ಕುಂದು ಕೊರತೆ ಆಯ್ತು, ಯಾಕಿದಾಯ್ತು ಅಂತ ಡಿಸ್ಕಷನ್ ಮಾಡ್ತಾ ಇದ್ವಿ. ಎವ್ರಿ ಸಾಟರ್ಡೇ ಆಲ್ ಚೀಫ್ಸ್ ಕಾಸ್ಟ್ಯೂಮ್ಸ್, ಆರ್ಟ್, ಎಸೋಸಿಯೇಟ್ ಡರೆಕ್ಟರ್ಸ್ ಎಲ್ಲರೂ ಒಟ್ಟಿಗೆ ಕೂತ್ಕೊಂಡು ಒನ್ ಅವರ್ ಡಿಸ್ಕಶನ್ ಮಾಡ್ತಿದ್ವಿ. ಹೆಂಗಂದ್ರೆ ಪ್ರೊಡಕ್ಷನ್ ಮ್ಯಾನೇಜರ್ ಗಳಿಗೆಲ್ಲಾ ಏನೇಳ್ತಾರಪ್ಪಾ ಅಂದ್ರೆ “ಒಂದು ಜಾತ್ರೆ ಸೀಕ್ವೆನ್ಸು, ಆ ಜಾತ್ರೆ ಸೀಕ್ವೆನ್ಸಲ್ಲಿ ಹದಿನೈದು ಸಾವಿರ ಜನಗಳು ಇರ್ಬೇಕು”ಅಷ್ಟೇ.


ಪರಮ್: ನೀವೇ ಕ್ರಿಯೇಟ್ ಮಾಡಿದ್ರಾ? ಹದಿನೈದು ಸಾವಿರ ಜನರದ್ದು ಜಾತ್ರೆ?


ಸಾವಂತ್: ಮತ್ತೆ? ಅವ್ರು ಏನು ಮಾಡೋದು ಅಂದ್ರೆ, ಪಾಂಪ್ಲೆಟ್ ಪ್ರಿಂಟ್ ಮಾಡ್ಸಿ ಅಕ್ಕಪಕ್ಕ ಇರುವ ಊರವರಿಗೆಲ್ಲಾ ಹಂಚಿ ಬಿಡೋದು. ನೀವು ಯೋಚ್ನೆ ಮಾಡಿ ಊಟ ತಿಂಡಿ ಕೊಡ್ಬೇಕು. ಸುಮ್ನೆ ಯಾರಾದ್ರು ಬಿಟ್ಟಿ ಬರ್ತಾರ? ಬೆಳಗ್ಗಿನಿಂದ ಸಾಯಂಕಾಲದ ವರೆಗೂ ಇರ್ಬೇಕು ತಾನೆ? ಹ್ಞಾ! ಅವ್ರಿಗೆ ಅಟ್ಲೀಸ್ಟ್ ನೀರು ಊಟ ತಿಂಡಿ ಎಲ್ಲಾ ಬೇಕಲ್ವ. ಅಷ್ಟು ಜನರಿಗೆ ಎಲ್ಲಾ ಪ್ರವಾಯ್ಡ್ ಮಾಡಿದ್ರು.


ಪರಮ್: ಹದಿನೈದು ಸಾವಿರ ಜನಕ್ಕೂ?


ಸಾವಂತ್: ಎಲ್ಲಾ ಇಡೀ ಜಾತ್ರೆನೇ ಕ್ರಿಯೇಟ್ ಮಾಡಿದ್ರು. ಆನೆ, ರೋಡ್ ರೋಲರ್, ಯಕ್ಷಗಾನ ಎಲ್ಲಾ. ಮೊದಲು ಒಂದು ರಿಹರ್ಸಲ್. ಆರ್ಟಿಸ್ಟ್ ಎಲ್ಲಿ ಹೋಗ್ತಾನೆ? ಎಲ್ಲಿ ಬರ್ತಾನೆ? ಕ್ಯಾಮರಾ ಮೂವ್ಮೆಂಟ್ ಹೇಗಿರ್ಬೇಕು? ಅವಾಗ ವಾಕಿಟಾಕಿ ಬೇರೆ ಇರ್ಲಿಲ್ಲ. ಕೂಗೊದೇ ಸಿಗ್ನಲ್ ಅಲ್ಲಿ. ಆಮೇಲೆ ನಾವೆಲ್ಲಾ ಇರ್ತಿದ್ವಲ್ಲ ನಮಿಗೆಲ್ಲ ಕೆಲ್ಸ ಏನಂದ್ರೆ ಒಬ್ಬ ಮೂವ್ ಆದ್ಮೇಲೆ ಇನ್ನೊಬ್ಬನನ್ನ ರೆಡಿ ಮಾಡ್ಬೇಕು. ಮಧ್ಯದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಇರ್ತಾರಲ್ಲ, ಅವ್ರಲ್ಲಿ ಒಬ್ಬೊಬ್ಬ ವಿಥಿನ್ ಹಾಫೆನ್ ಅವರಲ್ಲಿ ನಾಲಕ್ಕೈದು ಸಲ ಬಟ್ಟೆ ಚೇಂಜ್ ಮಾಡಿರ್ತಾನೆ. ನಮಿಗೆ ಗೊತ್ತಾಗ್ತಾ ಇರ್ಲಿಲ್ಲ ಯಾವನು ಹೋದ ಯಾವನು ಬಂದಾಂತ. ಈ ಕಡೆಯಿಂದ ಹೋದವನೇ ಬಂದ್ರೆ ಬೇರೆ ಯಾರೋ ಬಂದ್ರು ಅಂತ ಅನಿಸೋದು. ಅಲ್ಲಿ ಹೋದ ತಕ್ಷಣ ಅಷ್ಟು ಫಾಸ್ಟಾಗಿ ಚೇಂಜ್ ಮಾಡ್ತಿದ್ರು. ಅದು ಡಿಲೇ ಆಗ್ಬಾರ್ದು ಕಾಸ್ಟ್ಯೂಮೇ ಬೇರೆ ಕಲರೇ ಬೇರೆ ಹಂಗೆ ರಡಿಯಾಗ್ತಾ ಇದ್ರು. ‌


ಆಮೇಲೆ ಲೋಕಲ್ ಜನ ಬಂದ್ರೆ ಶೂಟಿಂಗಿಗೆ ಅವ್ರಿಗೆ ಅಷ್ಟೇ ರಿಸ್ಟ್ರಿಕ್ಷನ್. ದೊಂಬಿ ತರ ನನಿಗೆ ಸಿಕ್ತು, ನಿನಿಗೆ ಇಲ್ಲ. ಅನ್ನುವ ಹಾಗೆ ಇಲ್ಲ. ಎಲ್ಲಾ ಲೈನಲ್ಲಿ ಇನ್ಕ್ಲೂಡಿಂಗ್ ಶಂಕರ್ ಸರ್ ಅವ್ರು. ಊಟಕ್ಕೆ ಬ್ರೇಕ್ ಆದ್ರೆ ನಾನು ಡೈರಕ್ಟರ್ ಅಂತ ಹೋಗಿ ಕೂತ್ಕೊತಿರ್ಲಿಲ್ಲ. ಅವ್ರೂ ಕೂಡ ಲೈನಲ್ಲಿ ನಿಂತ್ಕೊತಾ ಇದ್ರು.


ಪರಮ್; ಶಂಕರ್ ಸರ್? ಯಾರೋ ತಂದ್ಕೊಡ್ತಾರೆ, ಟೇಬಲ್ ಹಾಕ್ತಾರೆ? ಇವಾಗ ಹಾಕ್ತಾರಲ್ಲ ಟೇಬಲ್?


ಸಾವಂತ್: ಅಯ್ಯೋ ಅವ್ರೆಲ್ಲಿ ಸರ್, ಯು ಕಾಂಟ್ ಬಿಲೀವ್. ಒಂದು ಇನ್ಸಿಡೆಂಟ್ ಹೇಳ್ತೀನಿ. ಇಲ್ಲೇ ಬೆಂಗ್ಳೂರಲ್ಲಿ ಶೂಟ್ ಮಾಡ್ತಿದ್ವಿ. “ನಿನ್ ಚಪ್ಲಿ ಕೊಡೊ” ಅಂತ ಚಪ್ಲಿ ಇಸ್ಕೊಂಡ್ರು. “ಜಗ್ಗ ಇವ್ನಿಗೆ ಬೇರೆ ಚಪ್ಲಿ ಕೊಡ್ಸು”. ಅವ್ರಿಗೆ ಏನೋ ಬೇಕಾಗಿತ್ತು ತೆಗೊಂಡ್ರು. ಹೀಗೆ “ನನಿಗೆ ಹೊಸದೇ ಬೇಕು ಅಂತೇನೂ ಹೇಳ್ತಿರ್ಲಿಲ್ಲ. ಆ ತರದವರಲ್ಲ, ಮಾರ್ವಲಸ್ ಮ್ಯಾನ್| ಒಂಥರಾ ಮನುಷ್ಯತ್ವ ಇರುವ ವ್ಯಕ್ತಿ.


ನಾನು ಅನಂತ ಸರ್ ಜೊತೆ ಮೂರ್ನಾಲಕ್ಕು ಸಿನಿಮಾ ಮಾಡಿದ್ದೀನಿ. ಅವ್ರು ಎಲ್ಲಾದ್ರಲ್ಲೂ ಪರ್ಟಿಕ್ಯುಲರ್ “ನನಿಗೆ ಹಿಂಗೇ ಬೇಕು”ಅನ್ತಿದ್ರು. ಇನ್ನೊಬ್ರಿಗೆ ಗಾಡಿ ಹಾಕೊ ಕೆಲ್ಸ ಅಲ್ಲ ಅವ್ರದ್ದು. ಏನಾದ್ರೂ ಅವ್ರಿಗೆ ಸರಿ ಬರ್ಲಿಲ್ಲ ಅಂದ್ರೆ “ಸರಿ ಬರ್ಲಿಲ್ಲ”ಅಂತ ನೇರವಾಗಿ ಹೇಳ್ತಿದ್ರು.

ಅಲ್ಲ ಏನೂಂತಂದ್ರೆ ಸೌತ್ ಇಂಡಿಯನ್ ಸ್ಲ್ಯಾಂಗಲ್ಲೇ ಹಿಂದಿ ಲಾಂಗ್ವೇಜ್ ಬೇಕಾಗಿತ್ತು ಶಂಕರ್ ಅವ್ರಿಗೆ. ಹಿಂದಿ ಆಗಿದ್ರಿಂದ ಬಾಂಬೆ ಅವ್ರನ್ನ ಕರೆಸಬಹುದಾಗಿತ್ತು. ಬಟ್ ಸ್ಲ್ಯಾಂಗ್ ನಾವು ಮಾತಾಡೋ ಧಾಟಿ ಇದ್ಯಲ್ಲ, ಅದು ಸೌತ್ ಇಂಡಿಯನ್ ತರ, ಅದು ಸಿಕ್ತಿರ್ಲಿಲ್ಲ. ರಂಗಭೂಮಿ ಕಲಾವಿದರನ್ನೆಲ್ಲ ಸೆಲೆಕ್ಟ್ ಮಾಡ್ಕೊಂಡ್ರು.


ಈಗ ನೀವು ಕೂಡ ರಂಗಭೂಮಿ ಕಲಾವಿದ್ರು ಅಲ್ವಾ?. ನೀವು ರಿಹರ್ಸಲ್ ಎಲ್ಲ ಮಾಡಿ ಒಂದು ನಾಟಕ ಮಾಡಿದ್ರೆ ನಮ್ದು ಅಂತ ಒಂದು ಬಾಂಡಿಂಗ್ ಬಂದ್ಬಿಡುತ್ತೆ ಅಲ್ವಾ? ಸಿನಿಮಾ ಆಗ್ಲಿ ನಾಟಕ ಆಗ್ಲಿ, ಮುಗಿದು ನಾವು ಎಲ್ಲರೂ ಇನ್ನು ಒಂದು ತಿಂಗ್ಳು ಸಿಗಲ್ಲ ಅಂದ್ರೆ ಬೇಜಾರಾಗ್ತಿತ್ತು. ಆ ಶೂಟಿಂಗ್ ಮಾಡ್ಬೇಕಾದ್ರೆ “ಬಾರಮ್ಮ, ಏನಾಯ್ತೋ ಬಾರೊ”ಅಂತ ಮಾತಾಡಿಸ್ತಿದ್ರು. ನಾವಿನ್ನೂ ಚಿಕ್ಕವ್ರು ಅವಾಗ. ನಮಗೆ ಏನೂ ಜಾಸ್ತಿ ಗೊತ್ತಿರ್ಲಿಲ್ಲ ಸಿನಿಮಾದ ಬಗ್ಗೆ. ಎಷ್ಟು ಹೆಲ್ಪ್ ಮಾಡೋರು ಅಂದ್ರೆ ಏನಾದ್ರೂ ತಪ್ಪಾದ್ರೆ ಹೇಳಿ ಸರಿ ಪಡ್ಸೋರು.


ಪರಮ್: ನಿಮ್ಗೆ ಪೇಮೆಂಟ್ ಎಷ್ಟಿತ್ತು ಸರ್? ಸುಮ್ಮನೆ ಒಂದು ಕುತೂಹಲಕ್ಕೆ ಕೇಳ್ದೆ...


ಸಾವಂತ್: ಅವಾಗ ನಮ್ಗೆ ಇದ್ದ ಪೇಮೆಂಟ್ ಬಗ್ಗೆ ಹೇಳ್ತಿನಿ. ನನಿಗೆ ಫಸ್ಟ್ ಎಪಿಸೋಡ್ 600 ರೂಪಾಯಿ. ನೂರು ಎಪಿಸೋಡ್ ಮುಗಿದ ನಂತರ 750 ರೂಪಾಯಿ ಮಾಡಿದ್ರು. ನನಗೆ ಪೇಮೆಂಟ್ ಜಾಸ್ತಿ ಆಗಿರೋದು ಗೊತ್ತೇ ಇರ್ಲಿಲ್ಲ. ನಮ್ ಪ್ರೊಡ್ಯೂಸರ್ ಭದ್ರಿ ಅವ್ರು “ನಿನ್ಗೆ ಇನ್ನೂ ಪೇಮೆಂಟ್ ಬಾಕಿ ಇದೆ ಕಣೊ ಕೊಡ್ಬೇಕು” ಅಂದ್ರು. ಯಾಕೆ ಸಾರ್ ಬಂದೈತೆ ಅಂದೆ. “ಇಲ್ಲಾ ಶಂಕರ್ ನಿನ್ ಪೇಮೆಂಟ್ ಜಾಸ್ತಿ ಮಾಡಿದಾರೆ”ಅಂದ್ರು. ಅದಾಗಿ ಮೂರನೇ ಎಪಿಸೋಡಿಗೆ, ಅಂದ್ರೆ ಮೂರು ವಾರ ಆದ್ಮೇಲೆ ನನ್ ಪೇಮೆಂಟು ಸಾವಿರದ ಮುನ್ನೂರೈವತ್ತು ರೂಪಾಯಿವರೆಗೂ ಬಂದಿತ್ತು. ಏನ್ಸಾರ್ ಒಂದು ವಾರಕ್ಕೆ ಸಾವಿರದ ಮುನ್ನೂರ ಐವತ್ತು ರೂಪಾಯಿ ಅಂದ್ರೆ ನಮ್ಮ ಮುಂದೆ ಯಾರಿದ್ದಾರೆ?


ಪರಮ್: ಒಂದು ವಾರಕ್ಕೆ ಸಾವಿರದ ಮುನ್ನೂರ ಐವತ್ತು ರೂಪಾಯಿ ?


ಸಾವಂತ್: ಅದೂ ಒಂದು ಎಪಿಸೋಡಿಗೆ, ಅಂದ್ರೆ ಅವಾಗ ಏನು?


ಪರಮ್: ಅಯ್ಯೊಪ್ಪ…. ತುಂಬ ದೊಡ್ಡ ಅಮೌಂಟ್ ಅದು


ಸಾವಂತ್: ಅಲ್ವಾ? ಅದೊಂದೇ ಅಲ್ಲ. ನಾನು ಟೆಕ್ನೀಷಿಯನ್ ಆಗಿ ಅಂದ್ರೆ ಎಸೋಸಿಯೇಟ್ ಡೈರೆಕ್ಟರ್ ಆಗಿ ವರ್ಕ್ ಮಾಡ್ತಿದ್ದೀನಿ ಅಂದ್ರೆ ನಂದು ಅದರ ಪೇಮೆಂಟ್ ಬೇರೆ. ನಾನು ಏನಾದ್ರು Acting ಮಾಡಿದ್ರೆ ಅದರ ಪೇಮೆಂಟ್ ಬೇರೆ ಕೊಡ್ತಿದ್ರು. ಅದಕ್ಕೆ ಡಬ್ ಮಾಡಿದ್ರೆ ಅದಕ್ಕೆ ಪೇಮೆಂಟ್ ಬೇರೆ. ಹೀಗೆ ಮೂರು ಪೇಮೆಂಟ್ ಕೊಡ್ತಾಯಿದ್ರು.‌


ಪರಮ್: ಒಂದು ಕೆಲ್ಸ ವಹಿಸಿದ್ದೀವಿ ಎಲ್ಲಾ ಮಾಡಿ ಅಂತ ಇರ್ಲಿಲ್ಲ?


ಸಾವಂತ್: ಈಗ “ನೀನಿಲ್ಲಿ ಟೆಕ್ನೀಷಿಯನ್ ಒಂದು ಡೈಲಾಗ್ ಇದೆ ಹೇಳು” ಅಂದ್ರೆ, ಹೇಳಿದ ಕೆಲ್ಸ ಆಯ್ತು ಅಂತ ಇಟ್ಕೊಳಿ. “ನೀನು ಟೆಕ್ನೀಷಿಯನ್ ನಿನ್ನ ಪೇಮೆಂಟ್ ಕೊಟ್ಟಿದೀವಲ್ಲ”ಅಂತ ಹೇಳ್ತಿರ್ಲಿಲ್ಲ. ಯಾಕಂದ್ರೆ “ಆ ರೋಲಿಗೆ ಇನ್ನೊಬ್ಬನ್ನ ಕರೆಸ್ತಾ ಇರ್ಲಿಲ್ವಾ? ಅವ್ನಿಗೆ ಕೊಡ್ತಿರ್ಲಿಲ್ವಾ ಪೇಮೆಂಟು? ಅವ್ನಿಗೆ ಕೊಡೊದನ್ನ ಇವ್ನಿಗೆ ಕೊಡಿ. ಡಬ್ಬಿಂಗ್ ಬೇರೆಯವ್ನು ಮಾಡಿದ್ರೆ ಅವ್ನಿಗೆ ಕೊಡ್ತಿರ್ಲಿಲ್ವಾ? ಅವ್ನಿಗೆ ಕೊಡೊದನ್ನ ಇವ್ನಿಗೆ ಕೊಡಿ”. ಹಂಗೆಲ್ಲಾ ಮಾಡೊರು. ನಾವು ತಕೊಂಡಿದೀವಿ, ಅವ್ರು ಕೊಟ್ಟಿದಾರೆ.


ಶಂಕರ್ ಸರ್ ಅವ್ರ ಮಾಲ್ಗುಡಿ ಡೇಸ್ ಕಂಪ್ಲೀಟ್ ಆದ್ಮೇಲೆ ‘ನಿಗೂಡ ರಹಸ್ಯ’ ಅಂತ ಒಂದು ಸಿನಿಮಾ ಮಾಡಿದ್ವಿ. ಅದಾದ್ಮೇಲೆ ‘ಜೋಕುಮಾರ ಸ್ವಾಮಿ’ ಶೂಟಿಂಗ್ ಗೆ ಹೋಗಿದ್ದೆ. ನಾನು ಹೋಗ್ಲೇ ಬೇಕು ಅಂತಿದ್ರು, ಅದಕ್ಕಾಗಿ ನಾನು ಹೋಗ್ತಿದ್ದೆ. ಮಧ್ಯ ಆಕ್ಸಿಡೆಂಟ್ ಆಯ್ತು ಸರ್. ಅದು ನಮ್ಮ ದುರ್ದೈವ, ನಮ್ ಇಂಡಸ್ಟ್ರಿ ದುರ್ದೈವ.


ಇದೆಲ್ಲಾ ಆದ್ಮೇಲೆ ಅನಂತ್ ಸರ್ ಗೆ ಮಾಲ್ಗುಡಿ ಡೇಸ್ ಮಾಡೊದಿಕ್ಕೆ ಬಂತು. ಆಮೇಲೆ ಅನಂತ್ ಸರ್ ನನ್ನ ಕರೆದು “ನೀನು ಅಸೋಸಿಯೇಟಾಗಿ ವರ್ಕ್ ಮಾಡು” ಅಂತಂತಂದ್ರು. ನನಿಗೆ 5000 ರೂಪಾಯಿ ಅಡ್ವಾನ್ಸ್ ಕೊಟ್ಟು ಎಲ್.ಎಚ್. ಅಲ್ಲಿ ಕೂರ್ಸಿ ಸ್ಕ್ರಿಪ್ಟ್ ಕೊಟ್ಟು “ನೀನು ಶೆಡ್ಯೂಲ್ ಬ್ರೇಕ್ ಡೌನ್ ಮಾಡು”ಅಂದ್ರು. ಶೆಡ್ಯೂಲೆಲ್ಲ ಬ್ರೇಕ್ ಡೌನ್ ಮಾಡಿ ಎಲ್ಲಾ ಆಗಿ ರೆಡಿಯಾಗುವ ಅಷ್ಟೊತ್ತಿಗೆ ಅನಂತ್ ಸರ್ ಎಲೆಕ್ಷನಲ್ಲಿ ಗೆದ್ರು. ಆಮೇಲೆ ಆ ಪ್ರಾಜೆಕ್ಟ್ ನಿಂತೋಯ್ತು.

ಅದಾದ್ಮೇಲೆ ಒಂದು ಐದಾರು ವರ್ಷ ಆದ್ಮೇಲೆ ಗುಲ್ಙಾರ್ ಅವ್ರಿಗೆ ಹೋಯ್ತು. ಅವಾಗ ನನಗೆ ಏನು ಬರ್ಲಿಲ್ಲ. ಇನ್ನೊಬ್ರು ನಮ್ಮ ಫ್ರೆಂಡ್ ಕೆಲ್ಸ ಮಾಡಿದ್ರು. ಅಲ್ಲಿಂದ ಅದು ಅವ್ರಿಂದ ತಪ್ಪಿ ಎಸ್. ರಾಮಚಂದ್ರ ಕ್ಯಾಮೆರಾ ಮ್ಯಾನ್ ಅವ್ರು ಮಾಲ್ಗುಡಿ ಡೇಸ್ ಡೈರೆಕ್ಷನ್ ಮಾಡ್ಬೇಕಿತ್ತು, ಅವರು ಸ್ಕ್ರಿಪ್ಟ್ ರೆಡಿ ಮಾಡಿ, ಆರ್ಟಿಸ್ಟ್ ಸೆಲೆಕ್ಷನ್ ಆಯ್ತು. ಮತ್ತೆ ಏನೋ ಪ್ರಾಬ್ಲಮ್ ಆಗಿ ಮತ್ತೆ ಅದು ನಿಂತೋಯ್ತು.

ಅದಾಗಿ ಎರಡ್ಮೂರು ವರ್ಷಕ್ಕೆ ಕವಿತಾ ಲಂಕೇಶ್ ಅವ್ರ ಕೈಗೆ ಬಂತು. ಕವಿತಾ ಲಂಕೇಶ್ ಅವ್ರ ಜೊತೆ ಆಲ್ರಡಿ ಎರಡ್ಮೂರು ಸಿನಿಮಾ ಮಾಡಿದ್ದೆ ನಾನು. ಅವ್ರು “ಮಾಲ್ಗುಡಿ ಡೇಸ್ ನನಿಗೆ ಬಂದಿದೆ ಮಾಡ್ತಿರಾ?” ಅಂದ್ರು, “ಮಾಡ್ತಿನಿ ಮೇಡಮ್” ಅಂದೆ. ಅದಕ್ಕೆ ನಾನು ಅಸೋಸಿಯೇಟ್ ಡೈರೆಕ್ಟರ್ ಆಗಿ ಮಾಡ್ದೆ. ಆಗ ನರಸಿಂಹನ್ ಸರ್ ನನಿಗೆ ಒಂದು ಶಾಲು, ಹೂವು, ಹಣ್ಣು ಎಲ್ಲಾ ಕೊಟ್ಟು “ಒಳ್ಳೆದಾಗ್ಲಪ್ಪ ನಿನಗೆ, ಚೆನ್ನಾಗಿ ಕೆಲ್ಸ ಮಾಡು”ಅಂತ ಅಂದ್ರು.


ಈಗ “ಪ್ರೊಡ್ಯೂಸರ್ ಸರ್ ಕನ್ವೇನ್ಸ್ ಕೊಡಿ” ಅಂದ್ರೆ, ಈಗಿನ ಜನ ಎಲ್ಲಾ ಜೊತೆಯಲ್ಲಿ ಮಾತಾಡಿ ಅಂತಾರೆ. ನರಸಿಂಹನ್ ಅವ್ರು ಹಾಗಲ್ಲ “ಏನಪ್ಪ ನಿಮ್ ಕನ್ವೇನ್ಸ್ ಎಷ್ಟಪ್ಪಾ ಕೊಡೊದು?” ಅಂತ ಕೇಳ್ತಿದ್ರು. “ಸರ್ ನಂದು ಪೆಟ್ರೋಲ್ ಗೆ ಇಷ್ಟಾಗುತ್ತೆ. ಅಂತೆಲ್ಲಾ ಕಾಲ್ಕ್ಯುಲೇಟ್ ಮಾಡಿ, ನಾನು “ಅರವತ್ತೈದು ರೂಪಾಯಿ”ಅಂತ ಹೇಳಿದ್ರೆ, “ನಾನು ನಿನ್ಗೆ ಎಪ್ಪತ್ತೈದು ರೂಪಾಯಿ ಕೊಡ್ತೀನಿ. ನೀನು ನಿನ್ನ ಮನೆಯಲ್ಲಿ ತಿಂದು ಬಂದು ನನ್ನ ಕೆಲ್ಸ ಮಾಡ್ಬೇಕಾಗಿಲ್ಲ ಆಯ್ತ? ಊಟ ತಿಂಡಿ ಮಾಡು ಚೆನ್ನಾಗಿ ಮಾಡು. ಭದ್ರಿ ಇವ್ನಿಗೆ ಹದಿನೈದು ದಿವ್ಸದ್ದು ಕನ್ವೇಯನ್ಸ್ ಅಡ್ವಾನ್ಸಾಗಿ ಕೊಟ್ಬಿಡು”. ಹಾಗೆ ಅಡ್ವಾನ್ಸಾಗಿ ಕೊಡೋರು ನಮಿಗೆ. ಹಾಗಿದ್ರೆ ಎಲ್ಲಾ ಬರ್ತಾರೆ, ಯಾರಿಗೆ ಕೆಲ್ಸ ಮಾಡಕ್ಕೆ ಇಷ್ಟ ಇರಲ್ಲ ಅಲ್ವಾ? ಹಿ ವಾಸ್ ಪ್ರೊವಾಯ್ಡಿಂಗ್ ಎವ್ರಿಥಿಂಗ್. ಖುಷಿಯಾಗಿ ಕೆಲ್ಸ ಮಾಡ್ತಿದ್ರು ಎಲ್ಲಾರು. ಯಾಕಂದ್ರೆ ಎಲ್ರಿಗೂ ಹೊಟ್ಟೆ ಅನ್ನೊದೊಂದು ಇರುತ್ತೆ ಅಲ್ವಾ?


ಬಟ್ ಶಂಕರ್ ಸರ್ ಇದ್ದಾಗ ಮಾಲ್ಗುಡಿ ಎಕ್ಸಪೀರಿಯನ್ಸ್ ಬೇರೆ. ಕವಿತಾ ಮೇಡಮ್ ಇದ್ದಾಗ ಬೇರೆ. ನಾನು ಅಲ್ಲಿಯ ವಾತಾವರಣದ ಬಗ್ಗೆ ಹೇಳ್ತಿದ್ದೀನಿ. ಅವಾಗ ಏನಾಗಿತ್ತು ಅಂದ್ರೆ ನಾವು ಶೂಟಿಂಗ್ ಮಾಡುವಾಗ ಫಿಲ್ಮಲ್ಲಿ ಶೂಟ್ ಮಾಡ್ತಾ ಇದ್ವಿ. ಟೇಪ್ ರೆಕಾರ್ಡರ್ ಮತ್ತೆ ನಾಗರಾದಲ್ಲಿ ವಾಯ್ಸ್ ರೆಕಾರ್ಡಿಂಗ್ ಮಾಡ್ತಿದ್ವಿ. ಅಲ್ಲಿ ಪಕ್ಕದಲ್ಲಿ ಯಾರು ಕೂಗಿದ್ರೂ ಏನೂ ಪ್ರಾಬ್ಲಮ್ ಇರ್ತಿರ್ಲಿಲ್ಲ ಯಾಕಂದ್ರೆ ನಾವು ಡಬ್ಬಿಂಗ್ ನಲ್ಲಿ ಸರಿ ಮಾಡ್ತಿದ್ವಿ. ಆ ಮೇಲೆ ಅಲ್ಲಿ ಎಲ್ಲಾ ಮಡ್ ರೋಡ್ಗಳು. ಅಲ್ಲಿ ವೆಹಿಕಲ್ ಆಕ್ಷೆಸ್ ಕಡಿಮೆ ಇತ್ತು. ಯಾವಾಗೋ ಒಂದು ವೆಹಿಕಲ್ ಬರೋದು. 1985-1986 ರಲ್ಲಿ. ನಮಿಗೆ ಅಲ್ಲೆಲ್ಲೋ ದೂರದಲ್ಲಿ ವೆಹಿಕಲ್ ಬರೋದು, ಪೆ..ಪೇ ಅಂತ ಹಾರನ್ ಆಗುವಾಗ ಗೊತ್ತಾಗೊದು. ಕೂಗಿದ್ರೆ ನಮಿಗೇನು ಪ್ರಾಬ್ಲಮ್ ಇದ್ದಿಲ್ಲ. ಬಟ್ 2000ನೇ ಇಸವಿಯಲ್ಲಿ ಕವಿತಾ ಮೇಡಮ್ಗೆ ಬಂತಲ್ಲಾ ಅವಾಗ ಅಲ್ಲಿ ಹೋದ್ರೆ, ಟೋಟಲ್ ಮನೆಗಳೆಲ್ಲಾ ಹಂಗೇ ಇತ್ತು. ದೊಡ್ಡ ಡಿಫೆರೆನ್ಸೇನು ಇರ್ಲಿಲ್ಲ. ಬಟ್ ಟೋಟಲ್ ರೊಡೆಲ್ಲಾ ಥಾರ್ ರೋಡಾಗಿತ್ತು. ಸಂದಿ ಗುಂದಿ ಎಲ್ಲಾ ಥಾರ್ ರೋಡು, ಸಿಮೆಂಟು ಎಲ್ಲಾ ಹಾಕಿದ್ರು. ಮೊದಲಿಗಿಂತ ಈಗಿನ ಜನಗಳೆಲ್ಲ ಕರಪ್ಟ್ ಆಗಿದ್ರು.


ಏನಂದ್ರೆ “ಶೂಟಿಂಗ್ ಮಾಡ್ಕೊತಾರೆ ನಮಿಗೆ ಏನೂ ದುಡ್ಡು ಕೊಡೊದಿಲ್ಲ ನಮ್ಮನೆಗೆ” ಅಂತಿದ್ರು ಅಲ್ಲಿಯ ಜನ. ಮೊದ್ಲು ಯಾರು ಇದ್ನ ಶುರು ಮಾಡ್ತಿದ್ರು ಗೊತ್ತಿಲ್ಲ. ಆಮೇಲೆ ಸಿಕ್ಕಾಪಟ್ಟೆ ವೆಹಿಕಲ್ ಗಳು. ಎರಡು ಮೂರು ನಿಮಿಷಕ್ಕೊಂದು ವೆಹಿಕಲ್ ಬರೋದು. ಸ್ಪಾಟ್ ರೆಕಾರ್ಡಿಂಗ್ ಬೇರೆ. ಮೊದ್ಲೆಲ್ಲ ಹಂಗೇ ಕವಿತಾ ಮೇಡಮ್ ಅವ್ರು ಬೀಟಾದಲ್ಲಿ ಮಾಡಿದ್ದು. ಸ್ಪಾಡ್ ರೆಕಾರ್ಡಿಂಗ್ ಸೌಂಡೇನಾದ್ರು ಹೆಚ್ಚು ಕಡಿಮೆ ಆದ್ರೆ ಒನ್ ಮೋರ್ ಶಾಟ್ ತೆಕೊತಾ ಇದ್ವಿ.


ಪರಮ್: ಈಗ ಟ್ಯೂರಿಸ್ಟ್ ಬೇರೆ ಪಿಕಪ್ ಆಗ್ಬಿಟ್ಟು ತುಂಬಾ ಪ್ರಾಬ್ಲಮ್ ಅಲ್ವಾ?


ಸಾವಂತ್: ಹ್ಞಾ, ಹೌದು. ಆಗ ನಾವು ಹಾಕೊಂಡಿರುವ ಪ್ಲಾನ್ ಸ್ವಲ್ಪ ಡಿಲೇ ಆಗೊದು. ಸಪೋಸ್ ನಾವು ಮೂರು ದಿವ್ಸ ಅಂತ ಪ್ಲಾನ್ ಹಾಕೊಂಡು, ಮೂರು ದಿವ್ಸದಲ್ಲೇ ಮುಗಿದ್ರೆ. ವೆಲ್ ಆಂಡ್ ಗುಡ್. ಇಲ್ಲಾಂದ್ರೆ ಒಂದು ದಿವ್ಸ ಹೆಚ್ಚು ಕಡಿಮೆ ಆಗ್ಬಿಡೋದು. ಬಿಕಾಸಾಫ್ ದಿಸ್ ವೆಹಿಕಲ್ಸ್.


ಪರಮ್: ಆ ಊರಿನವ್ರ ಕೊ ಆಪರೇಶನ್ ಹೇಗಿತ್ತು? ಮೊದ್ಲು ಫಸ್ಟ್ ಸೀಜನ್ ಮಾಡ್ದಾಗ?


ಸಾವಂತ್: ಅವಾಗ ನೀವು ನಂಬ್ತೀರೊ ಬಿಡ್ತೀರೊ? ಅದೊಂಥರಾ ನಮ್ಮನೆನೇ ಇದ್ದಂಗಾಗಿತ್ತು. ನಾವು ನಮಿಗೇನಾದ್ರು ಬೇಕಾದ್ರೆ, ಬಿಕಾಸ್ ಹಳೆ ಕಾಲದ ವಸ್ತುಗಳು ಎಲ್ಲಾ ಕಡೆ ಸಿಗಲ್ಲ. ಬೆಂಗ್ಳೂರಲ್ಲಿ ಸಿಗಲ್ಲ. ಎಲ್ಲಿ ಹೋಗಿ ತಗೋಬೇಕು? ಅದನ್ನ ಊರಿನವರ ಮನೆಗೆ ಹೋಗಿ “ಸರ್ ಇದನ್ನ ತಗೊತಾ ಇದ್ದೀನಿ,”ಅಥವಾ “ಅಮ್ಮಾ ಇದ್ನ ತೆಗೊತಾ ಇದ್ದಿನಿ” ಅಂದ್ರೆ, “ಹೂ ತೆಗೊಳಿ” ಅಂತಿದ್ರು. ನಮಿಗೆ ಒಂಥರಾ ಫ್ರೀಡಮ್.

ಒಂದ್ಸಲ ಹಾಗೇ ನಾವು ರಿಪ್ಪನ್ ಪೇಟೆಯಲ್ಲಿ “ಎಳೆಯರು ನಾವು ಗೆಳೆಯರು”ಶೂಟಿಂಗ್ ಮಾಡ್ತಿದ್ದಾಗ, ಎಲ್ಲರೂ ಉಪ್ಪಿನ್ಕಾಯಿ ತೆಗೊಳಕ್ಕೆ ಹೋದ್ವಿ. ಹೋದಾಗ ಮದುಕಿಯೊಬ್ಬರು “ನೀವು ಮಾಲ್ಗುಡಿ ಡೇಸಲ್ಲಿ ಮಾಡ್ದವ್ರು ಅಲ್ವಾ?” ಅಂತ ಕೇಳಿದ್ರು. ಅವ್ರು ಮುದುಕಿ ಆಗಿದ್ರು ಪಾಪ. “ಹೌದು ಮಾಡ್ತಿದ್ವಿ ನಿಮಗೆ ಹೇಗೆ ಗೊತ್ತು?” ಅಂದ್ರೆ, “ನಾವು ಆಗುಂಬೆಯವರಲ್ವಾ ನಿಮ್ಮ ಮುಖ ನೆನಪಿತ್ತು. ನೀವು ಅವಾಗವಾಗ ಬರ್ತಿದ್ರಿ ಅಲ್ವಾ?” ಅಂದ್ರು. ಸೋ ಅವಾಗ ಜನಗಳು ಎಷ್ಟು ಚೆನ್ನಾಗಿ ಗುರುತು ಹಿಡಿಯೊರು? ಅಂದ್ರೆ ಆ ಜನರೇಶನ್ ಅವ್ರು, ಬಟ್ ಇವಾಗ ಹಂಗಲ್ಲ.


ಪರಮ್: ಇವಾಗ ಆ ಅಟ್ಯಾಚ್ಮೆಂಟ್ ಇಲ್ಲ ಟೆಕ್ನಾಲಜಿ ಬಂದು..?


ಸಾವಂತ್: ಹಾ ಟೆಕ್ನಾಲಜಿ ಅಂದ್ರೆ ಕರಪ್ಟ್ ಅಂತ ಹೇಳಿ. ಸೀದಾ ಹೇಳ್ಬೇಕು ಅಂದ್ರೆ ಕರಪ್ಟ್, ಸ್ವಾರ್ಥ ಅಷ್ಟೆ. ಸ್ವಾರ್ಥ ಅಂದ್ರೆ ಅವ್ರ ಮನಸ್ಸಲ್ಲಿ ಇರ್ಬೇಕು, ನಮಿಗೆ ಅದು ತಪ್ಪು ಅನಿಸೋದು ಅವ್ರಿಗೆ ಸರಿ ಅನಿಸಬಹುದು ಅಲ್ವಾ?


ಪರಮ್: ಶಂಕರ್ ಬಗ್ಗೆ ಒಂದೆರಡು ಇನ್ಸಿಡಂಟ್ ಹೇಳಿ ಸರ್, ನಿಮಗೆ ಮರೆಯಲಾಗದ ಘಟನೆಗಳು ಯಾವುದಾದ್ರು ಇದ್ರೆ? ಮಾಲ್ಗುಡಿ ಡೇಸ್ ಟೀಮಿಂದ ಕಲ್ತದ್ದು ಹಾಗೇ ಕೆಲವು ಘಟನೆಗಳು ಹಂಚ್ಕೊಬೊದಾ?


ಸಾವಂತ್: ಏನಂದ್ರೆ ಅವ್ರು ಏನೇ ಕೆಲ್ಸ ಮಾಡಿದ್ರೂ ಕೂಡ ಒಬ್ಬನೇ ಕೂತ್ಕೊಂಡು, “ನೀನು ಅವ್ನಿಗೆ ಹೇಳು”ಅಂತ ಹೇಳ್ತಿರ್ಲಿಲ್ಲ. ‘ಜೋಕುಮಾರ ಸ್ವಾಮಿ’ಸಿನಿಮಾ ಆಗಬೇಕಾದ್ರೆ ಎಲ್ಲಾ ಟೀಮ್ ಒಂದು ರೌಂಡ್ ಟೇಬಲ್ ಅಲ್ಲಿ ಕಂಟ್ರೀ ಕ್ಲಬ್ಬಲ್ಲಿ ಕೋತ್ಕೊಂಡು, ಈ ವರ್ಕ್ ಹಿಂಗೆ ಅಂತ ಡಿಸ್ಕಸ್ ಮಾಡ್ತಿದ್ರು.

ಆಮೇಲೆ ಅವ್ರ ಕಂಟ್ರೀಕ್ಲಬ್ ಕೆಲ್ಸಗಳು ಸ್ವಲ್ಪ ಡಿಲೇ ಆಗ್ತಾ ಇತ್ತು. ಅಷ್ಟರಲ್ಲೇ ಓಪನಿಂಗ್ ಆಗ್ಬೇಕು. ಆ ಟೈಮಿಗೆ ಕೆಲಸಗಳು ಆಗ್ತಾ ಇಲ್ಲ. “ಏನು ಮಾಡೋದು? ಈಗಿಷ್ಟು ಜನರಿದ್ದೀವಿ. ಆ ವರ್ಕ್ ಆಗ್ಬೇಕಾದ್ರೆ ನಾವು ಎಷ್ಟು ಫಾಸ್ಟಾಗಿ ಕೆಲ್ಸ ಮಾಡ್ಬೇಕು? ವರ್ಕಿಂಗ್ ಹ್ಯಾಂಡ್ ಬೇಕಾ ಬೇಡ್ವಾ?” ಅಂತ ಡಿಸ್ಕಷನ್ ಮಾಡಿ “ಹತ್ತು ದಿನದಲ್ಲಿ ಆಗುವ ಕೆಲ್ಸನ ನಾವು ಮೂರು ದಿವ್ಸದಲ್ಲಿ ಮುಗಿಸ್ಬೇಕು. ಸೋ ಹಾಗಾದ್ರೆ ಒಂದು ಐನೂರು ಜನರನ್ನ ಕರೆಸಿ, ಕೆಲಸಕ್ಕೆ ಅವರನ್ನ ಡಿಸ್ಟ್ರಿಬ್ಯೂಟ್ ಮಾಡಿದ್ರೆ ವರ್ಕಿಂಗ್ ಹ್ಯಾಂಡ್ಸ್ ಗಳು ಜಾಸ್ತಿ ಆಗುತ್ತೆ, ವರ್ಕ್ ಫಾಸ್ಟಾಗಿ ಆಗುತ್ತೆ”ಅಂತ. ಆಮೇಲೆ ಒಬ್ಬೊಬ್ಬರಿಗೆ “ಐವತ್ತು ಜನರ ಕೆಲಸಗಳನ್ನ ನೋಡ್ಕೊಳೋದು ನಿನ್ನ ಜವಾಬ್ದಾರಿ”. ಹೀಗೆ ಕೆಲಸಗಳನ್ನ ಡಿವೈಡ್ ಮಾಡಿ ಫಾಸ್ಟಾಗಿ ವಿಥಿನ್ ಟೈಮ್ ಮಾಡೋರು. ಹೀಗೆ ತುಂಬ ಕ್ಯಾಲ್ಕ್ಯುಲೇಶನ್ ಮಾಡ್ತಿದ್ರು.


ಮುಂದುವರೆಯುವುದು…

ಸಂದರ್ಶನ - ಕೆ.ಎಸ್ ಪರಮೇಶ್ವರ


32 views