
‘ಜೀವನ ಚೈತ್ರ’ ತುಂಬಾ ಕಷ್ಟಪಟ್ಟು ಅಣ್ಣಾವ್ರಿಗೆ ಒಪ್ಪಿಸಿದ ಕಥೆ!

ದೊರೈ ಭಗವಾನ್ ಲೈಫ್ ಸ್ಟೋರಿ - ಭಾಗ 26
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)
ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮಾಡಿದ ಸಿನಿಮಾ
ಸಾಮಾನ್ಯವಾಗಿ ನಾವು ಬಹುತೇಕ ಸಿನಿಮಾಗಳ ಚಿತ್ರೀಕರಣವನ್ನು 20–25 ದಿವಸಗಳಲ್ಲಿ ಮುಗಿಸುತ್ತಿದ್ದೇವು. ಅತಿ ಹೆಚ್ಚು ದಿವಸ ಚಿತ್ರೀಕರಣ ನಡೆಸಿದ ಸಿನಿಮಾ ‘ಜೀವನ ಚೈತ್ರ’. ‘ಜೀವನ ಚೈತ್ರ’ ಹುಟ್ಟಿದ್ದರ ಹಿಂದೆಯೂ ಕಥೆಯಿದೆ. ಆ ಸಿನಿಮಾಕ್ಕೂ ಮೊದಲು ಹೆಚ್ಚುಕಮ್ಮಿ ಮೂರು, ನಾಲ್ಕು ವರ್ಷ ರಾಜ್ಕುಮಾರ್ ಅವರು ಯಾವ ಸಿನಿಮಾಗಳನ್ನು ಮಾಡಿರಲಿಲ್ಲ. ಅವರಿಗೆ ನಿರಾಸಕ್ತಿ ಹುಟ್ಟುಬಿಟ್ಟಿತ್ತು. ಉದಯ್ಶಂಕರ್ ಯಾವ ಕಥೆಯನ್ನು ಹೇಳಿದ್ರು, ಇದು ಚೆನ್ನಾಗಿಲ್ಲ ಅನ್ನುತ್ತಿದ್ರು. ಯಾಕೋ ನಟಿಸುವ ಮನಸ್ಸೇ ಇಲ್ಲ ಅನ್ನುತ್ತಿದ್ರಂತೆ. ಇಲ್ಲ ನೀವು ಈ ಸಿನಿಮಾ ಮಾಡಲೇಬೇಕು ಇಲ್ಲದಿದ್ರೆ ವಜ್ರೇಶ್ವರಿ ಕಂಬೈನ್ಸ್ ನಿಲ್ಲುವ ಸ್ಥಿತಿಗೆ ಬಂದುಬಿಡುತ್ತೆ ಎಂದು ಉದಯ್ಶಂಕರ್ ಹೇಳಿದ್ರೆ, ಮಾಡಲೇಬೇಕು ಎಂದಾದರೆ ಒಳ್ಳೆಯ ಕಥೆ ತೆಗೆದುಕೊಂಡು ಬನ್ನಿ ನೋಡೋಣ ಎಂದು ಅವರು ಹೇಳುತ್ತಿದ್ರು.
ಒಂದು ದಿವಸ ನಾನು, ಪಾರ್ವತಮ್ಮ, ಉದಯ್ಶಂಕರ್ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಹೋಗಿದ್ದೆವು. ಪೂಜೆ ಮಾಡಿಸಿಕೊಂಡು ಹೊರಗಡೆ ಬರುವ ವೇಳೆ, ನಾಲ್ಕೈದು ಆಟೊ ರಿಕ್ಷಾ ನಿಂತಿತ್ತು. ದೇವಸ್ಥಾನದ ಗೇಟ್ನಲ್ಲಿ ಡ್ರೈವರ್ಗಳೆಲ್ಲ ನಿಂತಿದ್ರು. ಹತ್ತು ಜನ ಹುಡುಗರಿದ್ರು. ಅವರೆಲ್ಲ ಯಾಕ್ರೀ ನಮ್ಮ ಅಣ್ಣನಿಗೆ ನೀವು ಒಳ್ಳೆಯ ಕಥೆ ಕೊಡುತ್ತಿಲ್ಲ. ಮೂರ್ನಾಲ್ಕು ವರ್ಷಗಳಿಂದ ನಾವು ಕಾಯುತ್ತಿದ್ದೇವೆ. ಒಳ್ಳೆಯ ಕಥೆ ಕೊಟ್ರೆ ಅವರು ನಟಿಸುತ್ತಾರಂತೆ. ನೀವ್ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ರು. ನಾವು ಶಪಥ ಮಾಡುತ್ತಿದ್ದೇವೆ. ಇನ್ನೊಂದು ವಾರದಲ್ಲಿ ಒಳ್ಳೆಯ ಕಥೆ ಕೊಟ್ಟಿಲ್ಲ ಅಂದ್ರೆ ನಿಮ್ಮನ್ನು ಸಾಯಿಸಿ ಬಿಡುತ್ತೇವೆ ಎಂದು ಧಮಕಿ ಹಾಕಿದ್ರು. ಉದಯ್ಶಂಕರ್ ನಡಗಿ ಹೋಗಿಬಿಟ್ಟ. ಕೆಲವರು ಸ್ವಾಮಿ ಒಳ್ಳೆಯ ಕಥೆ ಕೊಡಿ. ನಾವು ಒಂದು ತಿಂಗಳು ಕಾಯುತ್ತೇವೆ. ದಯವಿಟ್ಟು ಕೊಡಿ ಸ್ವಾಮಿ ಎಂದು ಕೈಮುಗಿದ್ರು.
ವಿಶಾಲಾಕ್ಷಿ ದಕ್ಷಿಣ ಮೂರ್ತಿ ಎಂಬುವವರ ಕಥೆ ಒಪ್ಪಿದ ರಾಜಣ್ಣ
ಇದೇ ಗುಂಗಿನಲ್ಲಿ ಅಲ್ಲಿಂದ ಕಾರಿನಲ್ಲಿ ಹೋಗುತ್ತಿದ್ದೆವು. ದಾರಿ ಮಧ್ಯೆ, ಪಾರ್ವತಮ್ಮನವರು, ಉದಯ್ಶಂಕರ್, ಇಲ್ಲಿಯೇ ಹನುಮಂತನಗರದಲ್ಲಿ ನಿಮ್ಮ ಅತ್ತೆಯ ಮನೆ ಇದೆ ಎಂದು ನೀವು ಹೇಳಿದ್ದು, ಜ್ಞಾಪಕ ಇದೆ. ಅವರದೊಂದು ಒಳ್ಳೆಯ ಕಥೆ ಓದಿದ್ದೆ. ವ್ಯಾಪ್ತಿ– ಪ್ರಾಪ್ತಿ ಅದರ ಹೆಸರು. ಅದೇನಾದ್ರು ರೈಟ್ಸ್ ಸಿಕ್ಕಿದ್ರೆ ನೋಡಿ, ಅಣ್ಣನಿಗೆ ಕಥೆ ಹೇಳೋಣ. ಯಾವತ್ತೋ ಆ ಪುಸ್ತಕ ಓದಿದ್ದೆ. ಈಗ ಅದು ನನ್ನ ಬಳಿ ಇಲ್ಲ. ಅವರನ್ನು ಕೇಳಿ ಅಂದ್ರು. ಕಾರು ತಿರುಗಿಸಿ ಅವರ ಮನೆಗೆ ಹೋದೆವು. ವಿಶಾಲಾಕ್ಷಿ ದಕ್ಷಿಣಾಮೂರ್ತಿ ಎಂದು ಅವರ ಅತ್ತೆಯ ಹೆಸರು. ಅತ್ತೆ ನಿಮ್ಮ ಕಥೆ ಇದೆಯಂತಲ್ವಾ. ಅದನ್ನು ಪಾರ್ವತಮ್ಮ ಓದಿದ್ದಾರೆ ಚೆನ್ನಾಗಿದೆ ಎಂದು ಹೇಳಿದ್ರು. ಅದರ ರೈಟ್ಸ್ ಕೊಡುತ್ತೀರಾ ಅಂದ. ಅದರ ರೈಟ್ಸ್ ಕೊಡಕ್ಕೆ ಆಗಲ್ಲವಲ್ಲ ಎಂದ್ರು. ಏಕೆ ಅಂದ್ರೆ, ಕೆ.ಬಿ. ಜಯರಾಂ ಬಂದು 5 ಸಾವಿರಕ್ಕೆ ತೆಗೆದುಕೊಂಡು ಹೋಗಿದ್ದಾನೆ ಅಂದ್ರು. ಆ ಪುಸ್ತಕ ಇದ್ರೆ ಕೊಡಿ ಎಂದು ಪಾರ್ವತಮ್ಮ ಕೇಳಿದ್ರು. ಅವರು ಕೊಟ್ರು. ಸರಿ ಎಂದು ನಾವು ಬಂದೆವು.
ಮನೆಗೆ ಬಂದು ಕಥೆಯನ್ನು ಮತ್ತೊಮ್ಮೆ ಓದಿದ ಪಾರ್ವತಮ್ಮ, ವರದಪ್ಪ ಅವರ ಬಳಿ ಕಥೆ ತುಂಬಾ ಚೆನ್ನಾಗಿದೆ ರಾಜ್ಕುಮಾರ್ ಅವರಿಗೆ ಹೇಳು ಅಂಥ ಹೇಳಿದ್ರು. ಆಗ ಅವರು, ಅಣ್ಣಾ ಸಿನಿಮಾ ಮಾಡೋಲ್ಲ ಅಂತಿದ್ದಾನೆ. ಕಥೆ ಹೇಳಿದ್ರೆ ಚೆನ್ನಾಗಿರಲ್ಲ ಅಂದ್ರು. ಅವರು ನಂತರ ಉದಯ್ಶಂಕರ್ ಅವರನ್ನು ಕರೆದು, ಕಥೆ ಓದಲು ಹೇಳಿದ್ರು. ಅವನು ಒಂದು ದಿವಸದಲ್ಲಿ ಕಥೆ ಓದಿದ. ಮರುದಿನ ಬಂದ. ತುಂಬಾ ಚೆನ್ನಾಗಿದೆ ಕಥೆ ಎಂದ. ಸರಿ, ಈ ಕಥೆಗೆ ಬೇಕಾದ ತಯಾರಿಗಳನ್ನೆಲ್ಲ ಮಾಡಿ. ಒಂದು ವಾರ ಸಮಯ ಕೊಡುತ್ತೇನೆ ನಿಮಗೆ. ಈ ವೇಳೆ ಆರೇಳು ಕೆಟ್ಟ ಕಥೆಗಳನ್ನು ಅಣ್ಣವ್ರಿಗೆ ಹೇಳಿ. ಅವರು ಒಪ್ಪುವುದಿಲ್ಲ ಎಂದು ಗೊತ್ತಿರುವಂತಹ ಕಥೆಗಳನ್ನೇ ಹೇಳಿ. ಕೊನೆಯದಾಗಿ ಈ ಕಥೆ ಹೇಳಿ ಎಂದು ಪಾರ್ವತಮ್ಮ ಹೇಳಿದ್ರು. ಉದಯ್ಶಂಕರ್ ಮೂರ್ನಾಲ್ಕು ಕಳಪೆ ಕಥೆಗಳನ್ನು ಹೇಳಿ, ನಂತರ ಈ ಕಥೆ ಹೇಳಿದ್ದಾನೆ. ಆಗ, ರಾಜ್ಕುಮಾರ್ ಅವರು, ನೀವು ಹೇಳಿದ ಎಲ್ಲ ಕಥೆಗಳಿಗಿಂತ ಇದು ಚೆನ್ನಾಗಿದೆ. ಪಾರ್ವತಿಗೆ ಹೇಳಿ ಎಂದು ಹೇಳಿದ್ದಾರೆ. ಆಗ ಉದಯ್ಶಂಕರ್, ಪಾರ್ವತಮ್ಮ ಅವರೇ ಈ ಕಥೆಯನ್ನು ಓಕೆ ಮಾಡಿ ನಿಮಗೆ ಹೇಳಿ ಅಂಥ ಹೇಳಿದ್ದು ಎಂದಿದ್ದಾರೆ. ಹಂಗಾ.. ಸರಿ ಅದೇನು ಬೇಕೊ ಮಾಡಿ ಎಂದು ರಾಜ್ಕುಮಾರ್ ಹೇಳಿದರು.
ಮುಂದುವರೆಯುವುದು...