“ಡಾ.ರಾಜ್‌ ಅರ್ಕೆಸ್ಟ್ರಾದಲ್ಲಿ ದುಡಿದ ಹಣ ಹೋಗ್ತಿದ್ದಿದ್ದು ಎಲ್ಲಿಗೆ”

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 18


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)


‘ಹೊಸ ಬೆಳಕು’ ಸಿನಿಮಾದಲ್ಲಿನ ಹೊಸ ಬೆಳಕು ಮೂಡುತ್ತಿದೆ ಎಂಬ ಟೈಟಲ್‌ ಸಾಂಗ್‌ ಬಹಳ ಅದ್ಭುತವಾಗಿದೆ. ಅದೊಂದು ಸ್ಟೇಜ್‌ ಸಾಂಗ್‌. ಅದರಲ್ಲಿ ಹಿಂದೆ ನಿಂತವರು ಆರ್ಕೆಸ್ಟ್ರಾದವರು. ಅವರೆಲ್ಲ ಮೈಸೂರಿನ ಹುಡುಗರು. ರಮೇಶ್‌ ಎಂದು ನಮ್ಮ ಸಿನಿಮಾದಲ್ಲಿ ನಟಿಸಿದ್ರು. ನನ್ನ ತಮ್ಮಂದಿರು ಆರ್ಕೆಸ್ಟ್ರಾದಲ್ಲಿದ್ದಾರೆ, ನೀವ್ಯಾಕೆ ಅವರನ್ನು ಬಳಸಿಕೊಳ್ಳಬಾರದು ಎಂದು ಕೇಳಿದ್ರು. ಸರಿ ಅವರನ್ನು ಕರೆದುಕೊಂಡು ಬಾ ಎಂದೆ. ಆ ಹಾಡಿನಲ್ಲಿ ಮ್ಯೂಸಿಕ್‌ ಇನ್‌ಸ್ಟ್ರುಮೆಂಟ್‌ ಬಾರಿಸಿದವರೆಲ್ಲ ಒಂದೇ ಕುಟುಂಬದವರು. ಆಗ ನನಗೊಂದು ಯೋಚನೆ ಬಂತು. ಇದೇ ಆರ್ಕೆಸ್ಟ್ರಾವನ್ನು ಬಳಸಿಕೊಂಡು ವೇದಿಕೆ ಪ್ರದರ್ಶನವನ್ನು ಜನರ ಮುಂದೆ ಪ್ರಸ್ತುತ ಪಡಿಸಿದರೆ, ರಾಜ್‌ಕುಮಾರ್‌ ಅವರ ಜನಪ್ರಿಯತೆ ಹೆಚ್ಚಾಗುತ್ತದಲ್ವಾ ಅನಿಸಿತು. ರಾಜ್‌ಕುಮಾರ್‌ ಅವರ ಬಳಿ, ನಾವು ಬೇರೆ, ಬೇರೆ ಊರಿಗೆ ಹೋಗಿ ಹಾಡಿನ ಕಾರ್ಯಕ್ರಮ ನಡೆಸಿಕೊಡಬಹುದಲ್ವಾ ಎಂದೆ. ಅದರಿಂದ ಜನರ ಜನತೆಗಿನ ನಿಮ್ಮ ಸಂಪರ್ಕ ಹೆಚ್ಚುವುದರ ಜೊತೆಗೆ ಜನಪ್ರಿಯತೆಯೂ ಸಿಗುತ್ತದೆ ಎಂದೆ. ಈಗಿರುವ ಜನಪ್ರಿಯತೆಗಿಂತ ಇನ್ನೇನು ಎಂದು ಅವರು ಕೇಳಿದ್ರು.


ರಾಜ್‌ಕುಮಾರ್‌ ಅವರು ನಮ್ರತೆಯಲ್ಲಿ ಸಿದ್ಧ ಪುರುಷ. ಅವರಂತೆ ಇರುವವರು ಬಹಳ ಕಡಿಮೆ. ಇವೆಲ್ಲ ಯಾಕೆ ಬೇಕು ಅಂದ್ರು. ಅದಕ್ಕೆ ನಾನು, ನಾವಿರುವುದು ಸಿನಿಮಾ ರಂಗದಲ್ಲಿ ನಮ್ಮ ಜನಪ್ರಿಯತೆ ಹೆಚ್ಚಾದಷ್ಟು ಜನರ ಜತೆಗಿನ ಸಂಪರ್ಕ ಹೆಚ್ಚಾಗುತ್ತದೆ ಎಂದೆ. ಸರಿ ನಿಮ್ಮಿಷ್ಟ ಎಂದ್ರು. ಮೈಸೂರಿನ ಕಲಾಮಂದಿರದಲ್ಲಿ ಒಂದು ಪ್ರದರ್ಶನವನ್ನು ಕೊಟ್ಟುಬಿಟ್ಟೆವು. ಅದು ಯಶಸ್ಸು ಕಂಡಿತು. ಜನ ಕಿಕ್ಕಿರಿದು ತುಂಬಿದ್ರು. ಮೈಸೂರು ವಿಶ್ವವಿದ್ಯಾಲಯದ ಹೊರಾಂಗಣ ವೇದಿಕೆಯಲ್ಲಿ ಟ್ರಯಲ್‌ಗೆಂದು ಉಚಿತವಾಗಿ ಪ್ರದರ್ಶನ ಕೊಟ್ಟೆವು, ಅಲ್ಲಿಯೂ ಪ್ರೇಕ್ಷಕರು ತುಂಬಿ ಹೋಗಿದ್ರು.ಸುಮಾರು 16–20 ಹಾಡುಗಳನ್ನು ಮೂರು ಗಂಟೆಯಲ್ಲಿ ಹಾಡುತ್ತಿದ್ದರಿಂದ ರಾಜ್‌ಕುಮಾರ್‌ ಅವರಿಗೂ ಜೋಶ್‌ ಬಂತು. ಮ್ಯೂಸಿಕಲ್‌ ನೈಟ್ಸ್ ಅನ್ನು ರಾಜ್‌ಕುಮಾರ್‌ ಅವರು ಹಣ ಸಂಪಾದನೆಗೆ ಮಾಡುತ್ತಾರೆ ಎಂಬ ಹೆಸರು ಬರಬಾರದು. ಆಗ ರಾಜ್‌ಕುಮಾರ್‌ ಧನದಾಹಿ ಎನಿಸಿಕೊಳ್ಳುತ್ತಾರೆ. ಹೀಗೊಂದು ಅಪವಾದ ಸಮಾಜದಲ್ಲಿ ಬರಬಾರದು. ಹಾಗಾಗಿ ಇದನ್ನು ಮಾಡುವುದು ಬೇಡ ಎಂದು ಬಿಟ್ರು. ಕಲಾಮಂದಿರದಲ್ಲಿ ಮಾಡಿದ ಪ್ರದರ್ಶನದಿಂದ ಹಣ ಬಂದಿತ್ತು. ಈ ರೀತಿ ಪ್ರದರ್ಶನ ಮಾಡಿದ್ರೆ ಅದನ್ನು ದಾನ ಧರ್ಮಗಳಿಗೆ ಬಳಸಿಕೊಳ್ಳೋಣ ಎಂದು ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ರಾಜ್‌ಕುಮಾರ್‌ ಅವರು ಹೇಳಿದ್ರು. ಆಗ ಹುಟ್ಟಿಕೊಂಡಿದ್ದೇ ರಾಜ್‌ಕುಮಾರ್‌ ಚಾರಿಟಬಲ್‌ ಟ್ರಸ್ಟ್‌. ಮ್ಯೂಸಿಕಲ್‌ ನೈಟ್ಸ್‌ ಆಯೋಜನೆಗೆ ಆಗುವ ಖರ್ಚು ಕಳೆದು ಉಳಿದ ಹಣವನ್ನು ಚಾರಿಟಬಲ್‌ ಟ್ರಸ್ಟ್‌ಗೆ ಕೊಟ್ಟುಬಿಡುವುದು ಎಂದು ಯೋಚನೆ ಮಾಡಿದೆವು. 57 ಮ್ಯೂಸಿಕಲ್‌ ನೈಟ್ಸ್‌ ಕಾರ್ಯಕ್ರಮ ಮಾಡಿದೆವು. ಅದು ನನ್ನ ಯೋಜನೆ ಆಗಿದ್ದರಿಂದ ನಾನೇ ಇನ್‌ಚಾರ್ಜ್‌ ಆಗಿದ್ದೆ. ಅದರ ಆ್ಯಂಕರ್‌ ಕೂಡ ನಾನೇ. ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಅದರಲ್ಲಿ ಹಾಡಿದ್ದಾರೆ. ಆಗ ಪುನೀತ್‌ ಬಹಳ ಚಿಕ್ಕವನಾಗಿದ್ದ. ‘ಕಾಣದಂತೆ ಮಾಯವಾದವನು’ ಅವನ ಇಷ್ಟದ ಹಾಡು. ‘ಮಾಮ ನೀವು ಪಕ್ಕದಲ್ಲಿರಿ ನಾನು ಹಾಡ್ತೇನೆ’ ಅನ್ನುತ್ತಿದ್ದ. ಚಿತ್ರೀಕರಣದ ಸಂದರ್ಭದಲ್ಲಿಯೂ, ಮಾಮ ‘ನೀವು ಪಕ್ಕದಲ್ಲಿದ್ರೆ ನಾನು ಆ್ಯಕ್ಟ್‌ ಮಾಡ್ತೇನೆ’ ಅಂತಿದ್ದ.


ರಾಜ್‌ಕುಮಾರ್‌ ಅವರು ಮಯೂರ ಶೂಟಿಂಗ್‌ನಲ್ಲಿದ್ದ ಸಂದರ್ಭದಲ್ಲಿ ಪಾರ್ವತಮ್ಮ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ನಾನು ಮತ್ತು ನನ್ನ ಹೆಂಡತಿ ತಕ್ಷಣವೇ ಪಾರ್ವತಮ್ಮ ಅವರನ್ನು ಮದ್ರಾಸ್‌ನ ಕಲ್ಯಾಣಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ನಮ್ಮ ಮನೆ ಹತ್ತಿರವೇ ಆ ಆಸ್ಪತ್ರೆ ಇತ್ತು. ನನ್ನ ಹೆಂಡತಿ ಅವರ ಜೊತೆಗಿರುತ್ತಿದ್ರು. ಪುನೀತ್‌ ಹುಟ್ಟಿದ. ನಾನು ಹೊರಗಿದ್ದೆ. ಮಗು ಹುಟ್ಟಿದ ತಕ್ಷಣ ನರ್ಸ್‌ ತೆಗೆದುಕೊಂಡು ಬಂದು, ಪಾರ್ವತಮ್ಮ ಅವರಿಗೆ ಗಂಡು ಮಗು ಹುಟ್ಟಿದೆ ನೋಡಿ ಎಂದು ನನ್ನ ಕೈಗೆ ಕೊಟ್ರು. ನಾನು ದೂರದಿಂದಲೇ ಮುತ್ತಿಟ್ಟು ಕೊಟ್ಟೆ. ಅವರು ಒಳಗೆ ತೆಗೆದುಕೊಂಡು ಹೋದ್ರು. ಇದಾದ ನಾಲ್ಕೈದು ದಿನದ ನಂತರ, ಹುಟ್ಟಿದ ತಕ್ಷಣ ಮಗು ನಿನ್ನ ಕೈಗೆ ಕೊಟ್ಟಿದ್ದಾರೆ. ಅವನು ಹೆಸರಾಂತ ನಟನಾಗುತ್ತಾನೋ ಎನೋ ಗೊತ್ತಿಲ್ಲ. ಹೆಸರುವಾಸಿ ಯಾಗುತ್ತಾನೆ ಎಂದು ಮಾತ್ರ ಹೇಳ್ತೇನೆ ಎಂದು ಪಾರ್ವತಮ್ಮ ಹೇಳಿದ್ರು. ಅವರ ಅಂದಿನ ಭವಿಷ್ಯವಾಣಿ ನಿಜವಾಗಿದೆ.


‘ಹೊಸ ಬೆಳಕು’ ಸಿನಿಮಾದಲ್ಲಿನ ಡಾಕ್ಟರ್‌ ಪಾತ್ರವನ್ನು ನಾನೇ ನಿರ್ವಹಿಸಿದ್ದೆ. ಆ್ಯಕ್ಟರ್‌ ಆಗಬೇಕೆಂದು ನನ್ನ ಬಾಲ್ಯದ ಆಸೆ. ಆಗ ನಾನು ತುಂಬಾ ಸಿನಿಮಾಗಳನ್ನು ನೋಡುತ್ತಿದ್ದೆ. ನಟನಾಗಬೇಕೆಂಬ ನಶೆ ನನಗೆ ಚಿಕ್ಕವಯಸ್ಸಿನಿಂದಲೂ ಇತ್ತು. ಆಗೆಲ್ಲ ಬಡತನವಿತ್ತು, ಸೌಕರ್ಯಗಳಿರಲಿಲ್ಲ. ಸಿನಿಮಾ ನೋಡಲು ಅಪ್ಪ, ಅಮ್ಮನ ಬಳಿ ಕಾಸು ಕೇಳುವ ಹಾಗಿರಲಿಲ್ಲ. ಕೇಳಿದ್ರೆ ಸರಿಯಾಗಿ ಒದೆ ಬೀಳುತ್ತಿತ್ತು. ಹೇಗಾದ್ರು ಕಾಸು ಮಾಡಬೇಕು ಎನಿಸುತ್ತಿತ್ತು. 1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಶುರುವಾಯ್ತು. ಆ ಸಂದರ್ಭದಲ್ಲಿ ಮೈಸೂರಿಗೆ ಮಹಾತ್ಮಗಾಂಧಿ, ಸರ್ದಾರ್‌ ಪಟೇಲ್‌, ನೆಹರೂ, ಮೌಲಾನ ಕಲಾಂ ಅಜಾದ್‌ ಅವರೆಲ್ಲ ಬಂದು, ಸ್ವಾತಂತ್ರ್ಯದ ಬಗ್ಗೆ ಜನರಿಗೆ ಪ್ರೇರಣೆ ನೀಡಲು ಟೌನ್‌ಹಾಲ್‌ನಲ್ಲಿ ಭಾಷಣ ಕೊಡುತ್ತಿದ್ರು. ನಾನು ಮುಂದೆಯೇ ಕುಳಿತು ಅಷ್ಟು ಜನರ ಭಾಷಣ ಕೇಳಿದ್ದೆ. ಆ ಸಂದರ್ಭದಲ್ಲಿ ಮೈಸೂರಿನಲ್ಲಿ ಚಳವಳಿ ಶುರುವಾಯ್ತು. ಇಂಗ್ಲಿಷ್‌ ಬೋರ್ಡ್‌ಗಳಿಗೆಲ್ಲ ಸುಣ್ಣ ಬಳಿಯುತ್ತಿದ್ರು.


ಪೊಲೀಸ್‌ ಸ್ಟೇಷನ್‌ ಪಕ್ಕದಲ್ಲಿಯೇ ಹ್ಯಾಮಲ್‌ಟನ್‌ ಬಿಲ್ಡಿಂಗ್‌ ಇತ್ತು. ಅಲ್ಲಿ ಸುಣ್ಣ ಬಳಿಯುವುದು ಹೋರಾಟಗಾರರಿಗೆ ಸುಲಭವಾಗಿರಲಿಲ್ಲ. ಸುಣ್ಣ ಬಳಿದರೆ, ಫೈರಿಂಗ್‌ ಮಾಡಲು ಆರ್ಡರ್‌ ಇತ್ತು. ಹಾಗಾಗಿ ಹುಡುಗರನ್ನು ಕಳುಹಿಸಲು ಯೋಜನೆ ಹಾಕಿಕೊಂಡ್ರು. ಹುಡುಗರನ್ನು ಕಳುಹಿಸಿದ್ರೆ ಬಂಧಿಸಲು ಆಗುತ್ತಿರಲಿಲ್ಲ. ಹತ್ತು ವರ್ಷದ ಕೆಳಗಿನವರನ್ನು ಆಗೆಲ್ಲ ಅರೆಸ್ಟ್‌ ಮಾಡುತ್ತಿರಲಿಲ್ಲ. ಬಾಲಾಪರಾಧಿಗಳು ಆಗ ಇರಲಿಲ್ಲ. ಹಾಗಾಗಿ, ನಮ್ಮ ಕೈಗೆ ಪೊರಕೆ, ಮಡಿಕೆ ಕೊಟ್ಟು ಹ್ಯಾಮಲ್‌ಟನ್‌ ಬಿಲ್ಡಿಂಗ್‌ ಗೆ ಸುಣ್ಣ ಹೊಡಿರಿ ಅಂದ್ರು. ನಾಲ್ಕೈದು ಜನ ಹುಡುಗರಲ್ಲಿ ನಾನ್ನೊಬ್ಬ. ಸುಣ್ಣ ಹಚ್ಚಲು ಹೋದಾಗ ಪೊಲೀಸ್‌ನವರು ಬಂದ್ರು, ನಾವೆಲ್ಲ ಓಡಿ ಹೋಗಿಬಿಟ್ಟೆವು. ಲಾಠಿ ಏಟಿಗೆ ಸಿಕ್ಕಿದ್ರೆ ಸತ್ತು ಹೋಗುತ್ತಿದ್ವಿ. ಮಡಿಕೆಯೆಲ್ಲ ಪುಡಿಪುಡಿಯಾಗಿ ಹೋಯ್ತು. ಆದರೆ, ಆಗಲೇ ಸುಣ್ಣ ಬಳಿದಿದ್ವಿ. ಹಾಗೆ ನೋಡಿದ್ರೆ ನಾನು ಒಂದು ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ. ಪಿಂಚಣಿ ಕೊಡಬೇಕು ನನಗೆ. ಆದರೆ, ಜೈಲಿಗೆ ಹೋಗಿರಲಿಲ್ಲ (ನಗು).


ಈ ಪರಿಸ್ಥಿತಿಗಳಲ್ಲಿ ನನಗೆ ಸಿನಿಮಾ ನೋಡುವ ಆಸೆ, ದುಡ್ಡು ಹೊಂದಿಸುವುದೇ ಸವಾಲಾಗಿತ್ತು. ಸರ್ಕಾರಿ ಶಾಲೆಗೆ ಹೋಗುತ್ತಿದ್ದೆ. ಹೋಂ ವರ್ಕ್‌ ಇರಲಿಲ್ಲ. ಸಂಜೆ ಆರಾಮಾಗಿರುತ್ತಿದ್ವಿ. ಅರಮನೆ ಬಳಿ ಕೋಟೆ ಆಂಜನೇಯ ಗುಡಿ ಇದೆ. ಅಲ್ಲಿಯ ಅರ್ಚಕರು ನಮ್ಮ ಬಳಿಯೇ ಇದ್ರು. ನನ್ನ ತಾಯಿ ಮೇಲೆ ಗೌರವ ಅವರಿಗೆ. ಆಗೆಲ್ಲ ಪೂಜೆಗೆಂದು ಭಕ್ತರು ತಂದ ತೆಂಗಿನ ಕಾಯಿಯಲ್ಲಿ ಒಂದು ಹೋಳು ಅರ್ಚಕರು ಇಟ್ಟುಕೊಂಡು, ಇನ್ನೊಂದನ್ನು ಭಕ್ತರಿಗೆ ಕೊಡುತ್ತಿದ್ರು. ಒಂದು ರಾಶಿ ತೆಂಗಿನಕಾಯಿ ಹೋಳು ಬಿದ್ದಿರುತ್ತಿತ್ತು. ಶನಿವಾರ ದಿವಸ ಬಹಳ ಇರುತ್ತಿತ್ತು. ದೇವಸ್ಥಾನಕ್ಕೆ ಹೋದ್ರೆ ಅರ್ಚಕರು ಅಮ್ಮನಿಗೆ ಕೊಡು ಎಂದು ಆರೆಂಟು ತೆಂಗಿನ ಹೋಳು ಕೊಡುತ್ತಿದ್ರು. ಒಂದು ಹೋಳು ಇಟ್ಟುಕೊಂಡು ಉಳಿದ ಹೋಳುಗಳನ್ನು ಟೌನ್‌ಹಾಲ್‌ ಮುಂದಿನ ಬಿಲ್ಡಿಂಗ್‌ ಸಮೀಪ ಬ್ರಾಹ್ಮಣರೊಬ್ಬರು ನಿಪ್ಪಟ್ಟು, ವಡೆ ಮಾರುತ್ತಿದ್ರು. ಅವರ ಬಳಿ ಹೋಗಿ ಭಟ್ರೆ ಕಾಯಿ ಹೋಳು ಇದೆ ಅಂದ್ರೆ, ಅವರು ಅದನ್ನು ತೆಗೆದುಕೊಂಡು ಒಂದಾಣೆ ಕೊಡುತ್ತಿದ್ರು.


ಮೈಸೂರಿನಲ್ಲಿ ನ್ಯೂ ಒಪೆರಾ, ಕೃಷ್ಣ, ಒಲಂಪಿಯಾ ಈ ಮೂರು ಥಿಯೇಟರ್‌ ಆಗಿನ ಕಾಲದಲ್ಲಿ ಜನಪ್ರಿಯವಾಗಿತ್ತು. ಕೃಷ್ಣ ಥಿಯೇಟರ್‌ ಮೊದಲ ಮಹಡಿಯಲ್ಲಿತ್ತು. ಕೆಳಗಡೆ ಅಂಗಡಿಗಳಿದ್ದವು. ಈ ಥಿಯೇಟರ್‌ನಲ್ಲಿ ಬರೀ ಫೈಟಿಂಗ್‌ ಪಿಕ್ಚರ್‌ಗಳೇ ಇರುತ್ತಿತ್ತು. ನಾದಿಯ, ವಿಠಲ್‌ ರಾವ್‌, ಜಾನ್‌ ಕವಾಸ್‌ ಅವರ ಸಿನಿಮಾಗಳೇ ಇರುತ್ತಿತ್ತು. ನಾದಿಯ ಸಿನಿಮಾ ಬಂದು ಬಿಟ್ಟರಂತೂ ಮೊದಲ ಮಹಡಿ ಕುಸಿಯುವಂತೆ ಜನ ಸೇರುತ್ತಿದ್ರು. ಹೆಣ್ಣು ಫೈಟಿಂಗ್‌ ಮಾಡುತ್ತಾಳೆ ಎಂಬುದು ವಿಶೇಷವಾಗಿತ್ತು. ಗಾಂಧಿ ಕ್ಲಾಸ್‌ಗೆ ಎರಡಾಣೆ ಇತ್ತು. ಗೇಟ್‌ಕಿಪರ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ವಿ. ಅವನಿಗೆ ಒಂದಾಣೆ ಕೊಟ್ರೆ ಒಳಗೆ ಬಿಡುತ್ತಿದ್ದ.

ಒಲಂಪಿಯಾ ಟಾಕೀಸ್‌ನಲ್ಲಿ ಬಾಂಬೆ ಟಾಕೀಸ್‌, ಶಾಂತಾರಾಮ್‌, ನ್ಯೂ ಥಿಯೇಟರ್‌ ಪಿಕ್ಚರ್‌ ಬರುತ್ತಿತ್ತು. ಒಪೆರಾದಲ್ಲಿ ತಮಿಳು, ತೆಲುಗು ಸಿನಿಮಾ ಇರುತ್ತಿತ್ತು. ಒಲಂಪಿಯಾದಲ್ಲಿ ಜಾಸ್ಥಿ ಹೋಗಲು ಆಗುತ್ತಿರಲಿಲ್ಲ. ಗೇಟ್‌ ಕೀಪರ್‌ ಪರಿಚಯ ಇರಲಿಲ್ಲ. ಹಾಗಾಗಿ, ಅವನು ಸಹಾಯ ಮಾಡುತ್ತಿರಲಿಲ್ಲ. ಅದಕ್ಕೊಂದು ಐಡಿಯಾ ಮಾಡಿದೆ. ಅರಮನೆ ಆವರಣದಲ್ಲಿ ತ್ರಿನೇಷನ ಗುಡಿಯಿದೆ. ಅಲ್ಲಿ ಶಿವರಾತ್ರಿ ದಿವಸ ಮಹಾಪೂಜೆ ನಡೆಯುತ್ತಿತ್ತು. ರಾತ್ರಿಯೆಲ್ಲ ಜಾಗರಣೆ ಇತ್ತು. ನೂರಾರು ಜನ ಭಕ್ತರು ಬರುತ್ತಿದ್ರು. ಅಲ್ಲಿ ಹುಡುಗರು ತಟ್ಟೆ ಹಿಡಿದು ಭಿಕ್ಷೆ ಬೇಡುತ್ತಿದ್ರು. ಭಕ್ತರು ಅವರಿಗೆ ಕಾಸು ಹಾಕುತ್ತಿದ್ರು. ಬಹಳ ಸಾಹುಕಾರರಾದ್ರೆ ಒಂದಾಣೆ ಕೊಡುತ್ತಿದ್ರು.


ಶಿವರಾತ್ರಿ ದಿವಸ ಮಧ್ಯಾಹ್ನ 2.30ಗೆ ಹೋಗಿ ಬಿಡುತ್ತಿದ್ದೆ. ಸಿಕ್ಕಾಪಟ್ಟೆ ಜನ ಇರುತ್ತಿದ್ರು. ಆರು ಗಂಟೆಗೆ ಬಾಗಿಲು ಹಾಕಿಬಿಡುತ್ತಿದ್ರು. ಕಚ್ಚೆ, ಟವಲ್‌ ಕಟ್ಟಿಕೊಂಡು ಜನಿವಾರ ಹಾಕಿಕೊಂಡು, ವಿಭೂತಿ ಹಾಕಿಕೊಳ್ಳುತ್ತಿದ್ದೆ. ಹಾಗಾಗಿ, ಸುಲಭವಾಗಿ ಒಳಗೆ ಬಿಡುತ್ತಿದ್ರು. ತಟ್ಟೆ ತುಂಬಾ ಕಾಸು ಸಿಗುತ್ತಿತ್ತು. ಒಂದು ರಾತ್ರಿ ನಿದ್ದೆ ಕೆಟ್ಟು ಸಂಪಾದನೆ ಮಾಡುವ ದುಡ್ಡು, ಒಂದು ತಿಂಗಳು ಸಿನಿಮಾ ನೋಡಲು ಸಾಕಾಗುತ್ತಿತ್ತು. ಥಿಯೇಟರ್‌ ಬಳಿಯೇ ಉಡುಪಿ ಹೋಟೆಲ್‌ ಇತ್ತು. ಮೂರು ಕಾಸಿಕೊಂದು ದೋಸೆ ಸಿಗುತ್ತಿತ್ತು. ಕೈಯಲ್ಲಿ ದುಡ್ಡಿರುತ್ತಿದ್ದರಿಂದ ಅಲ್ಲಿ ತಿಂದು ಸಿನಿಮಾ ನೋಡಲು ಹೋಗುತ್ತಿದ್ದೆ. ಒಪೆರಾ ಟಾಕೀಸ್‌ನಲ್ಲಿ ತಮಿಳು, ತೆಲುಗು ಸಿನಿಮಾ ಇದಿದ್ದರಿಂದ ಅಲ್ಲಿಗೆ ಹೋಗುತ್ತಿರಲಿಲ್ಲ. ಒಲಂಪಿಯಾಗೆ ಹೋಗುತ್ತಿದ್ದೆ. ಅಲ್ಲಿ ಹಿಂದಿ ಸಿನಿಮಾಗಳು ಇರುತ್ತಿತ್ತು. ಹಿಂದಿ ಸಿನಿಮಾಗಳ ಹಾಡುಗಳಿಂದ ನಾನು ಪ್ರಭಾವಿತನಾಗಿದೆ.

ಮುಂದುವರಿಯುವುದು...

ಸಂದರ್ಶನ: ಕೆ.ಎಸ್‌.ಪರಮೇಶ್ವರ

33 views