“ತಮಿಳುನಾಡಿನಲ್ಲಿ ನಡಿಬೇಕಿದ್ದ ಶೂಟಿಂಗ್”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 4

(ಶಂಕರ್ ನಾಗ್ ಆತ್ಮೀಯ ಗೆಳೆಯ ಜಗದೀಶ್ ಮಲ್ನಾಡ್ ಅವರ ನೆನಪುಗಳು)


ಬೇಸಿಕಲಿ ನಾವೆಲ್ಲ ರಂಗಭೂಮಿಯಿಂದ ಬಂದವ್ರು. ಶಂಕರ್ ನಾಗ್ ದು ಒಂದು ಟ್ರೂಪ್ ಇತ್ತು. ‘ಸಂಕೇತ್’ಅಂತ. ಅದರಲ್ಲಿ ನಾಟಕಗಳೆಲ್ಲ ಮಾಡ್ತಾ ಇದ್ವಿ. ಶಂಕರ್ ನಾಗ್ ನಿರ್ದೇಶನಕ್ಕೂ ಇಳ್ದಿದ್ರು. ‘ಮಿಂಚಿನ ಓಟ’ಅಂತ ಒಂದು ಸಿನಿಮಾನೂ ಮಾಡಿದ್ರು. ಅದಕ್ಕೆ ಅವಾರ್ಡ್ ಕೂಡ ಬಂದಿತ್ತು. ‘ಗೀತ’ಸಿನಿಮಾ ಆಗಿತ್ತು. ಅದಕ್ಕೆ ಕೂಡ ಅವಾರ್ಡ್ ಬಂದಿತ್ತು. ಅದನ್ನ ಜನ ಇಷ್ಟ ಪಟ್ಟಿದ್ರು. ಒಬ್ಬ ಸೃಜನಶೀಲ ನಿರ್ದೇಶಕ ಅಂತ ಶಂಕರ್ ನಾಗ್ ಗೆ ಒಂದು ಹೆಸರಿತ್ತು. “ಶಂಕರ್ ನಾಗ್ ಡೈರೆಕ್ಟ್ ಮಾಡಿದ್ರೆ ಬೇರೆ ತರ ಇರುತ್ತೆ, ತುಂಬ ನ್ಯಾಚುರಲ್ ಆಗಿ ಇರುತ್ತೆ”ಅಂತ ಅಭಿಪ್ರಾಯ ಇತ್ತು.


ಮಾಲ್ಗುಡಿ ಡೇಸ್ ಗೆ ಸಂಬಂಧ ಪಟ್ಟ ಹಾಗೆ ಅದರ ಪ್ರೊಡ್ಯೂಸರ್ ಹೆಸರು ‘ಟಿ.ಎಸ್. ನರಸಿಂಹನ್’ ಅಂತ. ಅವ್ರು ಚಿಲ್ರನ್ ಫಿಲ್ಮ್ ಸೊಸೈಟಿನಲ್ಲಿ ತುಂಬ ಆಕ್ಟೀವ್. ಮೇಯ್ನ್ ಪೊಸಿಷನಲ್ಲೇ ಇದ್ರು. ಅನೇಕ ಮಕ್ಕಳ ಸಿನಿಮಾ ಕೂಡ ಮಾಡಿದ್ರು. ಕಮರ್ಷಿಯಲ್ ‘ಬಂಗಾರದ ಜಿಂಕೆ’ಅಂತ ನಾಗಾಭರಣ ಅವ್ರ ನಿರ್ದೇಶನದಲ್ಲಿ ಮಾಡಿದ್ರು. ಅದರ ಜೊತೆಗೆ ಆರ್. ಕೆ. ನಾರಾಯಣ್ ಅವ್ರ ಸಬ್ಜೆಕ್ಟ್ ‘ಬ್ಯಾಂಕರ್ ಮಾರ್ಗಯ್ಯ’ಅಂತ. ಅದನ್ನ ಅವ್ರು ಡೈರೆಕ್ಟ್ ಮಾಡಿದ್ರು. ಟಿ.ಅಸ್.ನರಸಿಂಹನ್ ಪ್ರೊಡ್ಯೂಸ್ ಮಾಡಿದ್ರು.
ಆ ಸಮಯದಲ್ಲಿ ಬಹುಷಃ ಅವ್ರಿಬ್ಬರಿಗೆ ಪರಿಚಯ. ಅಥವಾ ಪ್ರಪೋಸಲ್ ಬಂದಿದೆ. “ನನ್ನ ಕತೆಗಳನ್ನೆಲ್ಲಾ ಸಿನಿಮಾ ಮಾಡೋದಾದ್ರೆ ನೀನು ಮಾಡು” ಅಂತ. ನರಸಿಂಹನ್ ಅವ್ರ ಫ್ಯಾಮಿಲಿಗೆ ಆರ್.ಕೆ.ನಾರಾಯಣ್ ಪ್ಯಾಮಿಲಿ ಸ್ವಲ್ಪ ಹತ್ತಿರದ ಪರಿಚಯ ಇತ್ತು. ಹಾಗಾಗಿ ನರಸಿಂಹನ್ ಅವ್ರಿಗೆ ಆರ್.ಕೆ ನಾರಾಯಣ್ ಕತೆಗಳನ್ನ ಸಿನಿಮಾ ಮಾಡ್ಬೇಕು ಅಂತ ತಲೆಗೆ ಹೋಯ್ತು. ಅದಕ್ಕೊಬ್ಬ ಸರಿಯಾದ ನಿರ್ದೇಶಕ ಬೇಕಲ್ಲ! ಶಂಕರ್ ನಾಗ್ ಹತ್ರ ಮಾಡಿಸಬಹುದು ಅಂತ ಅವರಿಗೆ ಅನಿಸಿದೆ. ಬಿಕಾಸ್ ‘ಮಿಂಚಿನ ಓಟ’ ಎಲ್ಲಾ ನೋಡಿದ್ರು. ಸೆನ್ಸಿಬಲ್ ಅಂತ ಅನ್ಸಿತ್ತು. ರಂಗಭೂಮಿಯವರು ಅಂತ ಗೊತ್ತಿತ್ತು. ರೆಗ್ಯುಲರ್ ಕಮರ್ಶಿಯಲ್ ಡೈರೆಕ್ಟರ್ ಗಳಿಗಿಂತ ಬೆಟರ್ ಪೊಸಿಶನ್ ನಲ್ಲಿ ಶಂಕರ್ ನಾಗ್ ಇದ್ದಿದ್ರಿಂದ ಶಂಕರ್ ನಾಗ್ ನ ಆರಿಸ್ಕೊಂಡ್ರು.


ಶಂಕರ್ ನಾಗ್ ಅವ್ರನ್ನ ಅಪ್ರೋಚ್ ಮಾಡ್ದಾಗ, ಶಂಕರ್ ನಾಗ್ ತುಂಬಾ ಓದ್ತಾರೆ. ಆರ್.ಕೆ.ನಾರಾಯಣ್ ಅವ್ರದ್ದು ಅಂತಲ್ಲ, ಬಹಳ ಕಾದಂಬರಿಗಳನ್ನೆಲ್ಲ ಓದ್ತಾರೆ. ಆರ್.ಕೆ. ನಾರಾಯಣ್ ಅವ್ರಿಗೆ ನೋಬೆಲ್ ಪ್ರಶಸ್ತಿ ಬರೋದ್ರಲ್ಲಿತ್ತು. ಆಮಟ್ಟದ ರೈಟರ್ ಅವರು. ಆಲ್ ಓವರ್ ಇಂಡಿಯಾ ಇವನ್ ಹೊರ ದೇಶಗಳಲ್ಲಿ, ಪೆಂಗ್ವಿನ್ ಅಲ್ಲೆಲ್ಲಾ ಅವರ ಪುಸ್ತಕಗಳು ಫೇಮಸ್ ಆಗಿದ್ದವು. ಇಂಟರ್ ನ್ಯಾಶನಲ್ ಅಕ್ಲಾಯಿಮ್ಡ್ ರೈಟರ್ ಅವ್ರು. ಆರ್. ಕೆ. ನಾರಾಯಣ್ ಅಂದ್ರೆ ಸಾಮಾನ್ಯ ಎಲ್ಲರಿಗೂ ಗೊತ್ತು.


ಅವರ ತಮ್ಮನ ಬಗ್ಗೆ ನಿಮಗೆ ಗೊತ್ತಿರಬಹುದು. ಆರ್. ಕೆ. ಲಕ್ಷ್ಮಣ್ ಅವ್ರು ಟೈಮ್ಸ್ ಆಫ್ ಇಂಡಿಯಾ ದಲ್ಲಿ ಕಾರ್ಟೂನಿಸ್ಟ್. ಅವರೂ ಬಹಳ ಫೇಮಸ್. ಆಗ ನರಸಿಂಹನ್ ಅವ್ರು ಶಂಕರ್ ನಾಗ್ ಗೆ ಬಂದು ಒಪ್ಪಿಸಿದಾಗ, ಶಂಕರ್ ನಾಗ್ ಗೆ ಆರ್.ಕೆ.ನಾರಾಯಣ್ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಅವಾಗ ಆ ಕತೆಗಳನ್ನಲ್ಲಾ ಮೆಮೊರಾಯಿಸ್ ಮಾಡ್ಕೊಂಡು ಖುಷಿಯಿಂದನೇ ಒಪ್ಕೊಂಡ್ರು.


ಅಲ್ಲಿಂದ ಟೀಮ್ ಕಟ್ಟೊದು ಇದ್ಯಲ್ಲ, ನಮ್ದೇ ಒಂದು ಟೀಮ್ ಇತ್ತು ಆಲ್ರಡಿ. ನಾವು ಅವಾಗಾಗ್ಲೇ ‘ನೋಡಿ ಸ್ವಾಮಿ ನಾವಿರೋದು ಹೀಗೆ’ಶೂಟ್ ಮಾಡಿದ್ವಿ. ನಾನು, ರಮೇಶ್ ಭಟ್, ಕಾಶಿ, ಸಾವಂತ್ ಅಸೋಸಿಯೇಟ್ ಡೈರೆಕ್ಟರ್, ಪಿಂಕಿ ಮತ್ತು ಅರುಂಧತಿ ಅವ್ರು. ಶಂಕರ್ ನಾಗ್ ಮಾಡಿರೋ ಎಲ್ಲ ಸಿನಿಮಾದ ನಿರ್ಮಾಣ ನಿರ್ವಹಣೆ ನಂದೇ. ಆಕ್ಸಿಡೆಂಟ್, ನೋಡಿ ಸ್ವಾಮಿ ನಾವಿರೋದೇ ಹೀಗೆ, ಪರಮೇಶಿ ಪ್ರೇಮ ಪ್ರಸಂಗ. ಆಗಾಗ್ಲೇ ನನಗೆ ಸಿನಿಮಾ ಪ್ರೊಡಕ್ಷನ್ ಸ್ವಲ್ಪ ಕೈಗೆ ಬಂದಿತ್ತು.


ಶಂಕರ್ ಬಂದು ಪ್ರಾಜೆಕ್ಟ್ ಬಗ್ಗೆ ಹೇಳಿದಾಗ ನಮಗೂ ಬಹಳ ಖುಷಿಯಾಯ್ತು, ಹೊಸ ಪ್ರಾಜೆಕ್ಟ್, ಬೇರೆ ತರ ಇರುತ್ತೆ. ಅವಾಗ ಶಂಕರ್ ನಾಗ್ ಒಪ್ಕೊಂಡ ಮೇಲೆ ದೂರದರ್ಷನದ ಅಪ್ರೂವಲ್ ಕೂಡ ಸಿಕ್ತು. ಅವ್ರೂ ನೋಡ್ತಾರೆ ಡೈರೆಕ್ಟರ್ ಯಾರು? ಕ್ಯಾಲಿಬರ್ ಏನು, ಅವ್ರು ಏನೇನು ಮಾಡಿದಾರೆ. ಹಾಗೆ ಪ್ರಾಜೆಕ್ಟ್ ಒಕೆ ಆಯ್ತು. ಶಂಕರ್ ಗೆ. ಬಾಂಬೆ ರಂಗಭೂಮಿ, ಮರಾಠಿ ರಂಗಭೂಮಿ, ಕನ್ನಡ ರಂಗಭೂಮಿ ಹಾಗೂ ಬೆಂಗಳೂರಿನಲ್ಲಿ ಇದ್ದಂತಹ ಇಂಗ್ಲೀಷ್ ರಂಗ ಭೂಮಿ ಕಾಂಟ್ಯಾಕ್ಟ್ ಇದ್ದಿದ್ರಿಂದ ಆಕ್ಟರ್ ಗಳಿಗೆ ಏನೂ ಕೊರತೆನೇ ಇರ್ಲಿಲ್ಲ. ನಂತರ ಸ್ಕ್ರಿಪ್ಟ್ ಎಲ್ಲಾ ಮಾಡ್ಕೊಂಡ್ರು, ಸ್ಕ್ರೀನ್ ಪ್ಲೇ ‘ಮರಿಯಮ್ ಜೇಗ್ಪುರ್ವಾಲ’ಮಾಡಿದ್ರು. ಅವ್ರು ಬಾಂಬೇಯವರು, ಶಂಕರ್ ನಾಗ್ ಜೊತೆಯಲ್ಲಿ ನಾಟಕ ಎಲ್ಲಾ ಮಾಡಿದ್ರು ಅವ್ರು.


ಶಂಕರ್ ನಾಗ್ ‘ಸಾಯಿ ಪರಾಂಜಪ್ಯೇ’ಅನ್ನೋ ಡೈರೆಕ್ಟರ್ ಜೊತೆ ಅಸಿಸ್ಟಂಟ್ ಆಗಿ ವರ್ಕ್ ಮಾಡಿದ್ರು. ಅವರ ಹತ್ತಿರನೇ ನಿರ್ದೇಶನ ಕಲ್ತಿದ್ದು. ಅಲ್ಲಿ ಅವರ ಟೀಮ್ನಲ್ಲೇ ‘ಮರಿಯಮ್ ಜೇಗ್ಪುರ್ವಾಲ’ ಪರಿಚಯ ಆಗಿದ್ದು. ಯಾಕಂದ್ರೆ ಸ್ಕ್ರೀನ್ ಪ್ಲೇ ಬೇಕಾಗಿದ್ದು ಹಿಂದಿಯಲ್ಲಿ. ಆಮೇಲೆ ಅರುಂಧತಿಯವರು ಅದನ್ನ ಹಿಂದಿಗೆ ಟ್ರಾನ್ಸ್ಲೇಟ್ ಮಾಡಿದ್ರು. ಒಂದು ಹಂತಕ್ಕೆ ಬಂದ್ಮೇಲೆ ಯಾವ ಕ್ಯಾರೆಕ್ಟರಿಗೆ ಸೂಟೆಬಲ್ ಆರ್ಟಿಸ್ಟ್ ಯಾರೂಂತ? ಬಾಂಬೆ ಥಿಯೇಟರ್ ನಿಂದ ಸ್ವಲ್ಪ ಆರ್ಟಿಸ್ಟ್ ಗಳು, ಕನ್ನಡ ಥಿಯೇಟರ್ ಇಂದ ಸ್ವಲ್ಪ ಆರ್ಟಿಸ್ಟ್ಗಳು, ಮತ್ತೆ ಬೆಂಗಳೂರಿನ ಇಂಗ್ಲೀಷ್ ಥಿಯೇಟರ್ ನಿಂದ ಸ್ವಲ್ಪ ಆರ್ಟಿಸ್ಟ್ ಗಳು. ಈ ತರ ಇಂಟರ್ನ್ಯಾಶನಲ್ ಅಕ್ಲಾಯಿಮ್ಡ್ ಥಿಯೇಟರ್ ಪರ್ಸನಾಲಿಟೀಸ್ ಎಲ್ಲಾ ಇದ್ರು. ಬಾಂಬೆಯಿಂದ ಒಳ್ಳೆ ಒಳ್ಳೆ ದೊಡ್ಡ ಆಕ್ಟರ್ ಗಳು ಇದ್ದಾರೆ, ಹರೀಶ್ ಪಟೇಲ್ ಅಂತ ಬಂದಿದ್ರು. ಹಿಂದಿ ರಂಗಭೂಮಿಯಿಂದ ಸುಮಾರ್ ಜನ ಬಂದಿದ್ರು. ಕನ್ನಡ ರಂಗಭೂಮಿಯಿಂದ ನಮ್ಮ ಸಿ.ಆರ್.ಸಿಂಹ ಅವ್ರು, ಬಿ.ಜಯಶ್ರೀ ಅವ್ರು, ಜಿ.ಕೆ.ಗೋವಿಂದರಾವ್ ಅವ್ರು, ಮಲ್ಲಿಗೆ ನಾಗರಾಜ್ ಅವ್ರು, ಎಮ್.ಸಿ.ಆನಂದ್, ಗುರು ಮೂರ್ತಿ ಈತರ ಸುಮಾರು ಜನ ಕನ್ನಡದವರು. ಎಲ್ಲರಿಗೂ ಕ್ಯಾರೆಕ್ಟರ್ ಏನೂಂತ ಕೇಳೋದಕ್ಕಿಂತ ಹಿಂದಿ ಸೀರಿಯಲ್ ಮಾಡ್ತಿದ್ದಾರೆ, ದೂರದರ್ಶನದಲ್ಲಿ ಬರುತ್ತೆ ಅನ್ನೋ ಎಕ್ಸಾಯಿಟ್ಮೆಂಟ್ ಎಲ್ಲರಿಗೂ ಇತ್ತು.


ಸೋ ಎಲ್ಲ ಸೂಟೆಬಲ್ ಕ್ಯಾರೆಕ್ಟರ್ ಸೆಲೆಕ್ಟ್ ಆಯ್ತು. ನನಿಗೂ ಒಂದು ಕ್ಯಾರೆಕ್ಟರ್ ಫಿಕ್ಸ್ ಮಾಡಿದ್ರು. ಸಿದ್ದ ಅಂತ ಅದರಲ್ಲಿ ನನ್ದೇ ಮುಖ್ಯ ಪಾತ್ರ. ಹೀಗೆ ಯಾರ್ಯಾರಿಗೆ ಯಾವ್ಯಾವ ಕ್ಯಾರೆಕ್ಟರ್ ಸೂಟ್ ಆಗುತ್ತೆ ಅವ್ರನ್ನೆಲ್ಲಾ ಸೆಲೆಕ್ಟ್ ಮಾಡಿದ್ದಾಯ್ತು. ಆಮೇಲೆ ಪ್ರೀ ಪ್ರೊಡಕ್ಷನ್ ಗೆ ಎಲ್ಲಾ ಒಂದು ಕಡೆ ಕೂತ್ಕೊಬೇಕು, ಮಾತಾಡ್ಬೇಕು. ಆಮೇಲೆ ವುಡ್ ಲ್ಯಾಂಡ್ ಹೊಟೇಲ್ ಇದೆ ರಿಚ್ ಮಂಡ್ ಸರ್ಕಲ್ ಹತ್ರ, ಅಲ್ಲಿ ಒಂದು ಕಾಟೇಜ್ ಬುಕ್ ಮಾಡಿದ್ವಿ. ಅಲ್ಲಿ ಕೂತ್ಕೊಂಡು ಡಿಸ್ಕಶನ್ ಶುರುವಾಯ್ತು, ಪ್ರೀ ಪ್ರೊಡಕ್ಷನ್ ವರ್ಕ್ ಶರುವಾಯ್ತು. ಆರ್ಟ್ ಡೈರೆಕ್ಟರ್ ಜಾನ್ ದೇವರಾಜ್ ಸೆಲೆಕ್ಟ್ ಆದ್ರು. ಅವ್ರು ಒಬ್ಬ ಅಧ್ಭುತ. ಸ್ಥಳದಲ್ಲೇ ಏನು ಬೇಕಾದ್ರೂ ಕ್ರಿಯೇಟ್ ಮಾಡಿ ಕೊಡೊರು. ಆ ಮೇಲೆ ಕಾಸ್ಟ್ಯೂಮ್ ಗೆ ಸುಂದರಶ್ರೀ ಅವ್ರು ಫಿಕ್ಸ್ ಆದ್ರು. ಸಂಗೀತ ವೈದ್ಯನಾಥ್ ಸೆಲೆಕ್ಟ್ ಆದ್ರು. ವೈದ್ಯನಾಥ್ ಜೊತೆ ಶಂಕರ್ ನಾಗ್ ‘ಮಿಂಚಿನ ಓಟ’ದಲ್ಲಿ ಕೆಲ್ಸ ಮಾಡಿದ್ರು.


ಎಡಿಟರ್ ಸುರೇಶ್ ಅರಸ್. ಯಾಕೆಂದ್ರೆ ನರಸಿಂಹನ್ ಅವ್ರುದು ಒಂದು ಎಡಿಟಿಂಗ್ ರೂಮ್ ಇತ್ತು, ಅದರ ಮುಖ್ಯಸ್ತ ಸುರೇಶ್ ಅರಸ್. ಅವ್ರು ‘ಬಂಗಾರದ ಜಿಂಕೆ, ‘ಬ್ಯಾಂಕರ್ ಮಾರ್ಗಯ್ಯ’ಮತ್ತೆ ಕೆಲವು ಮಕ್ಕಳ ಸಿನಿಮಾಗಳು ಕೂಡ ಎಡಿಟ್ ಮಾಡಿದ್ರು. ಅವ್ರದ್ದೇ ಎಡಿಟಿಂಗ್ ರೂಮ್ ಕೂಡ ಇತ್ತು. ಅದೊಂದು ಅಡ್ವಂಟೀಜ್ ಆಯ್ತು. ಅದರ ಜೊತೆ ಸಂಕೇತ್ ಸ್ಟುಡಿಯೋ ಕೂಡ ಪ್ರಾರಂಭ ಆಗಿತ್ತು. ಅದ್ರಿಂದ ರೆಕಾರ್ಡಿಂಗ್, ರೀ ರೆಕಾರ್ಡಿಂಗ್ ಎಲ್ಲಾ ಅಲ್ಲೇ ಮಾಡೊದೂಂತ ತೀರ್ಮಾನ ಆಯ್ತು. ಇವಾಗ ಇನ್ಪ್ರಾಸ್ಟ್ರೆಕ್ಚರ್ ವೈಸ್ ಎಲ್ಲಾ ನಮ್ಮ ಹತ್ರ ಇದೆ ಅಂತಾಯ್ತು. ಡೈರೆಕ್ಟರ್ ನಮ್ಮವರೇ, ಅಸಿಸ್ಟೆಂಟ್ಸ್, ಅಸೋಸಿಯೇಟ್ಸ್ ನಮ್ಮವರೇ. ಅರುಂಧತಿ ಅವರಿಗೆ ಹಾಗೂ ಪಿಂಟಿ ಅವರಿಗೆ ಹಿಂದಿ ಚೆನ್ನಾಗಿ ಬರ್ತಿತ್ತು. ಹಾಗಾಗಿ ಹಿಂದಿ ಹಾಗೂ ಕನ್ನಡದಲ್ಲಿ ಯಾವುದೇ ಪ್ರಾಬ್ಲಮ್ ಇರ್ತಿರ್ಲಿಲ್ಲ.


ಎಲ್ಲಾ ಟೀಮ್ ಸೆಟ್ ಆದ್ಮೇಲೆ ಲೊಕೇಶನ್ ಎಲ್ಲಿ ಮಾಡೊದು? ಅಷ್ಟರಲ್ಲಾಗ್ಲೇ ತಮಿಳ್ನಾಡಲ್ಲಿ ಕೆಲವು ಲೊಕೇಶನ್ ನೋಡಿದ್ರು. ಯಾಕೆಂದ್ರೆ ಮಾಲ್ಗುಡಿ ಅಂದ್ರೆ ಸುಮಾರು ಜನರಿಗೆ ಗೊತ್ತಿರಬಹುದು ‘ಮಲ್ಲೇಶ್ವರಂʼ ನ ಮೊದಲನೇ ‘ಮಾಲ್’‘ಬಸವನಗುಡಿ’ಯಕೊನೆ ಗುಡಿ ಇವೆರಡು ಸೇರಿ ಮಾಲ್ಗುಡಿ ಅಂತ ಆಗಿರೋದು. ಇದು ಸಾಮಾನ್ಯ ಸುಮಾರು ಜನರಿಗೆ ಗೊತ್ತಿದೆ. ಯಾಕಂದ್ರೆ, ಆರ್.ಕೆ.ನಾರಾಯಣ ಅವ್ರು ಬೇಸಿಕಲಿ ಮೈಸೂರಿನವರು, ಅವ್ರು ಮಾತಾಡುತ್ತಿದ್ದದ್ದು ತಮಿಳು, ಹಾಗಾಗಿ ತಮಿಳ್ನಾಡಿನ ಕಾಂಟ್ಯಾಕ್ಟ್ ಕೂಡ ಇತ್ತು. ತಮಿಳ್ನಾಡಿನಲ್ಲಿ ಸ್ವಲ್ಪ ಹಳೇ ಕಾಲದ ಮನೆಗಳು ಸಿಗುತ್ತೆ. ಎಷ್ಟು ಹಳೇ ಕಾಲದ ಮನೆಗಳು ಅಂತ ಹೋದ್ರೂ ಯಾವುದೋ ಒಂದು ಹೊಸ ಬ್ಯುಲ್ಡಿಂಗ್ ಅಥವಾ ಲೈಟ್ ಕಂಬಗಳು ಮಧ್ಯದಲ್ಲಿತ್ತು. ಇದನ್ನೆಲ್ಲಾ ಅವಾಯ್ಡ್ ಮಾಡ್ಕೊಂಡು ಪೀರಿಯೆಡ್ ಮಾಡ್ಕೊಬೇಕೂಂತ ಆದಾಗ ನಾವು ಎಷ್ಟು ಕಷ್ಟ ಪಡ್ಬೇಕು. ಏನೇನು ಮಾಡೊಕ್ಕೆ ಸಾಧ್ಯ ಅಂತ ಪ್ರಾಕ್ಟಿಕಲ್ ಆಗಿ ಯೋಚ್ನೆ ಮಾಡಲೇ ಬೇಕಾಗಿತ್ತು.


ಹಾಗೆ ಹುಡುಕಾಟದಲ್ಲಿದ್ದಾಗ ಯಾರೋ ಆಗುಂಬೆ ಬಗ್ಗೆ ಹೇಳಿದ್ರು. ಆಗುಂಬೆ ಅಂತ ಒಂದು ಪ್ಲೇಸ್ ಇದೆ ಲಿಟ್ರಲ್ಲಿ ಅದು ಡೆಡ್ ಪ್ಲೇಸ್. ನೋ ಇಂಪ್ರುಮೆಂಟ್. ಅದು ಬೆಳಿಯಲ್ಲ, ಅಲ್ಲಿ ಯಾರೂ ಕೂಡ ಇಂಡಸ್ಟ್ರಿ ಏನೂ ಶುರು ಮಾಡಲ್ಲ, ಯಾರೂ ಮನೆಗಳು ಕಟ್ಟಲ್ಲ. ಏನಿದ್ಯೋ ಅದೇ. ಎಲ್ಲಾ ಹಂಚಿನ ಮನೆಗಳು ಅದೇ ಒಂದು ರೋಡು. ಅಷ್ಟೇ ಇರೋದು. ಶಂಕರ್ ನಾಗ್ ಮತ್ತೆ ಪ್ರೊಡ್ಯೂಸರ್ ಹೋಗಿ ನೋಡ್ಕೊಂಡು ಬಂದ್ರು. ಮಾಲ್ಗುಡಿಗೆ ಆಗುಂಬೆ ಪರ್ಫೆಕ್ಟ್ ಪ್ಲೇಸ್. ಅದೂ ಬೇರೆ ಆಗುಂಬೆ ಕರ್ನಾಟಕದಲ್ಲೇ ಇದೆ. ದಟ್ ಈಸ್ ಅನದರ್ ಅಡ್ವಂಟೇಜ್. ಅದನ್ನೆಲ್ಲಾ ನೋಡ್ಕೊಂಡು ಫಿಕ್ಸ್ ಮಾಡ್ಕೊಂಡ್ರು.


ಆಮೇಲೆ ನಾವೆಲ್ಲಾ ಹೋಗಿ ಆಗುಂಬೆ ನೋಡಿದ್ವಿ. ಸರಿ ಈಗ ನಮಿಗೆಲ್ಲಾ ವ್ಯವಸ್ಥೆ ಆಗ್ಬೇಕಲ್ವ? ಪ್ರೀ ಪ್ರೊಡಕ್ಷನ್, ಯಾರ್ಯಾರು ಎಲ್ಲೆಲ್ಲಿರ್ಬೇಕು?, ಯಾರ್ಯಾರಿಗೆ ಎಲ್ಲೆಲ್ಲಿ ರೂಮ್?, ಅಡುಗೆ ಎಲ್ಲಿ ಮಾಡ್ಸೊದು?, ಬರೋದು ಹೇಗೆ?, ಹೋಗೋದು ಹೇಗೆ?, ಕಾಸ್ಟ್ಯೂಮಿಗೆ ಎಲ್ಲಿ ಜಾಗ? ಇದನ್ನೆಲ್ಲಾ ಪ್ಲಾನ್ ಮಾಡ್ಕೊಂಡ್ವಿ. ಆಗುಂಬೆಯಲ್ಲಿ ಒಂದು ಹೋಟೆಲ್, ಲಾಡ್ಜ್ ಇರ್ಲಿಲ್ಲ. ಇರೋದು ಒಂದು ಐ.ಬಿ ಮಾತ್ರ. ಆ ಐ.ಬಿ ನಲ್ಲಿ ಅನಂತನಾಗ್ ಹಾಗೂ ಮುಖ್ಯವಾದ ಪಾತ್ರಧಾರಿಗಳು ಯಾರಾದ್ರೂ ಇದ್ರೆ, ಅವ್ರು ಇರ್ತಾ ಇದ್ರು. ನಾವೆಲ್ಲರೂ, ಶಂಕರ್ ನಾಗ್ ಸೇರಿ ಎಲ್ಲರೂ ಆಗುಂಬೆಯಲ್ಲಿ ಪೇಯಿಂಗೆಸ್ಟ್. ಒಬ್ಬೊಬ್ಬರ ಮನೆಯಲ್ಲಿ ಒಬ್ಬೊಬ್ಬರು ಇರ್ತಾ ಇದ್ವಿ. ಅಲ್ಲಿ ಒಂದು ಡಾಕ್ಟರ್ ಮನೆ ಖಾಲಿ ಇತ್ತು ಅದನ್ನ ನಾವು ಸರಿ ಮಾಡಿಸ್ಕೊಂಡು ಅದ್ರಲ್ಲಿ ಶಂಕರ್ ನಾಗ್ ಮತ್ತೆ ಅವರ ಫ್ಯಾಮಿಲಿ ಇರ್ತಾ ಇದ್ರು. ಕ್ಯಾಮರಾಮೆನ್ ರಾಮಚಂದ್ರ ಇದ್ರು, ಅವ್ರ ಅಸಿಸ್ಟೆಂಟ್ ಮಲ್ಲಿಕಾರ್ಜುನ (ಮಲ್ಲಿ) ಹಾಗೆ ಸುಮಾರು ಜನ ಒಬ್ಬೊಬ್ಬರ ಮನೆಗೆ ಹೋಗಿ ಅವ್ರನ್ನ ರಿಕ್ವೆಸ್ಟ್ ಮಾಡ್ಕೊಳೋದು, ಒಂದು ರೂಮ್ ಕೇಳೋದು, ಅಲ್ಲೇ ಇರೋದು. ಬೆಳಗ್ಗೆ ಎದ್ದು ಹೋಗೋದು. ರಾತ್ರಿ ಊಟ ಎಲ್ಲಾ ಮೆಸ್ ಅಲ್ಲೇ ರೆಡಿಯಾಗ್ತಾ ಇತ್ತು. ಅಲ್ಲೇ ಊಟ ಮಾಡ್ಕೊಂಡು ಬರೋದು. ಹೀಗೆ ಸ್ಕ್ರಿಪ್ಟ್ ವರ್ಕ್ ಎಲ್ಲಾ ವುಡ್ ಲ್ಯಾಂಡ್ ಹೋಟೇಲ್ ಅಲ್ಲಿ ಆದ್ಮೇಲೆ ಆರ್ಟಿಸ್ಟ್ ಎಲ್ಲಾ ಫೈನಲ್ ಆದ್ಮೇಲೆ ಮಾಲ್ಗುಡಿ ಹಾಲ್ ಗೆ ಶಿಫ್ಟ್ ಆದ್ವಿ.


ಮುಂದುವರೆಯುವುದು…

ಸಂದರ್ಶನ-ಕೆ.ಎಸ್ ಪರಮೇಶ್ವರ

20 views