ತುಮಕೂರ ಮಹದೇವಯ್ಯನವರ ಜೊತೆ ನಾಟಕದ ಅನುಭವ

ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 76
ನಾನು ಬೆಂಗಳೂರಿಗೆ ಮೊದಲು ಬಂದಾಗ, ಗುರುರಾಜ್‌ ಚೌಡಯ್ಯ ಅವರೆಲ್ಲ ಸೇರಿ ಮೀಟಿಂಗ್‌ ಮಾಡುತ್ತಿದ್ರು. ನಾನೂ ಅಲ್ಲಿಗೆ ಹೋಗಿದ್ದೆ. ಆಗ ನನಗೆ ಮಿಮಿಕ್ರಿ ಮಾಡುವಂತೆ ಹೇಳಿದ್ರು. ಮಾಡಿದೆ. ಮುಂದಿನ ತಿಂಗಳು 11ನೇ ತಾರೀಖಿಗೆ ಮುನಿರೆಡ್ಡಿಪಾಳ್ಯ ಬಾ ಎಂದ್ರು. ಯಾಕೆ ಎಂದೆ. ನಾಟಕ ಇದೆ ಎಂದ್ರು.


ತುಮಕೂರು ಕಲಾವಿದರ ‘ಸಿನಿಮಾ ಪ್ರಪಂಚ’ ನಾಟಕವದು. ದೊಡ್ಡ ಕಲಾವಿದರೇ ಇದ್ರು. ಅದೇ ಸಮಯಕ್ಕೆ ಸರಿಯಾಗಿ ನನಗೆ ಕಾಲಿಗೆ ಪೆಟ್ಟಾಗಿತ್ತು. ಯಾರೋ ಆ್ಯಕ್ಸಿಡೆಂಟ್‌ ಮಾಡಿ ಹೋಗಿದ್ರು. ನಾಟಕದ ಅವಕಾಶವನ್ನು ತಪ್ಪಿಸಿಕೊಳ್ಳಲು ಮನಸ್ಸಿರಲಿಲ್ಲ. ಮುನಿರೆಡ್ಡಿಪಾಳ್ಯದಲ್ಲಿ ದಸರಾ ಸಮಾರಂಭದ ಸಂದರ್ಭವದು. ನಾನು ಒಂದು ಡಬ್ಬ ಅಕ್ಕಿ ತೆಗೆದುಕೊಂಡು ಅದರ ಮೇಲೆ ಕಾಲಿಟ್ಟುಕೊಂಡು ಆಟೊದಲ್ಲಿ ಹೋದೆ. ನಾನು ಸುಮ್ನೆ ನೆವ ಹೇಳಿ ತಪ್ಪಿಸಿಕೊಂಡೆ ಎಂದು ಅವರು ಅಂದುಕೊಳ್ಳಬಾರದು ಎಂಬ ಕಾರಣಕ್ಕೆ ಅಷ್ಟೊಂದು ಕಷ್ಟಪಟ್ಟು ಹೋಗಿದ್ದೆ. ಆದರೆ, ಅವರು ವೇದಿಕೆ ಮೇಲೆ ಹೋಗುವಂತೆ ಹೇಳಿದ್ರು.


ವೇದಿಕೆ ಮೇಲೆ ಹೋದೆ. ಅದರಲ್ಲಿ ಸಂದರ್ಶನವೊಂದರ ಸೀನ್‌ ಇದೆ. ಅದೇ ಪಾತ್ರಧಾರಿಯಾಗಿ ನಾನು ಹೋದೆ. ಏನಯ್ಯಾ ನಿನಗೆ ಟಾಲೆಂಟ್‌ ಇದೆ ಎಂದ್ರು. ನಾನು ಎಲ್ಲರ ತರಹ ಮಾತಾಡುತ್ತೇನೆ ಎಂದೆ. ಕಾಲಿಗೆ ಏನು ಮಾಡಿಕೊಂಡೆ ಅಂದ್ರು. ಅದ್ಹೇಗೆ ತಲೆಗೆ ಪಟ್‌ ಎಂದು ಹೊಳೆಯಿತೊ ಗೊತ್ತಿಲ್ಲ. ಯುಟಿಲಿಟಿ ಬಿಲ್ಡಿಂಗ್‌ ಮೇಲೆ ನಿಂತಿದ್ದೆ. ಪ್ರಭಾಕರ್‌ ಫೈಟ್‌ ನಡಿತಿತ್ತು. ಮೇಲುಗಡೆಯಿಂದ ನನ್ನ ಎತ್ತಿ ಹಾಕಿದ್ರು. ಮುಖ ಮಾತ್ರ ಪ್ರಭಾಕರ್‌ ಅವರದ್ದು ತೋರಿಸಿದ್ರು ಸರ್‌ ಎಂದು. ಜನ ಎಲ್ಲ ಚಪ್ಪಾಳೆ ಹೊಡೆದ್ರು.


ತುಮಕೂರು ಮಹದೇವ ಅವರು, ವೇದಿಕೆ ಮೇಲೆಯೇ ಅಖಂಡ ಕರ್ನಾಟಕದ ತುಂಬೆಲ್ಲ ನೀನು ಶೋ ಮಾಡುತ್ತೀಯ. ಅದ್ಭುತವಾದ ಕಲೆ. ಕರ್ನಾಟಕದ ಮೂಲೆ ಮೂಲೆಯ ಜನರು ನಿನಗೆ ಅನ್ನ ಹಾಕಿ, ಸಾಕುತ್ತಾರೆ. ಪ್ರಪಂಚದಾದ್ಯಂತ ಶೋ ಮಾಡುತ್ತೀಯ ಎಂದ್ರು. ಅವರು ಆಮೇಲೂ ನನಗೆ ಬಹಳಷ್ಟು ವರ್ಷ ಅವಕಾಶ ಕೊಟ್ರು.


ನಾಟಕ ಮಾಡಬೇಕಾದರೆ ಪಾತ್ರಧಾರಿಗಳು ತಮ್ಮ ಸೀನ್‌ ಇಲ್ಲವೆಂದು ಅಲ್ಲಲ್ಲಿ ತಿರುಗುತ್ತಿದ್ರೆ, ಅವರು ಕರೆದು, ಬೆಳಿಗ್ಗೆಯಿಂದ ಸಂಜೆವರೆಗೆ ಸಿಮೆಂಟ್‌, ಮಣ್ಣು ಹೋರು, ಬಾಗಿಲು ಕಾಯಿ ಎಂದು ನಿನಗೆ ಹೇಳುವುದಿಲ್ಲ. ಜನ ದುಡ್ಡುಕೊಟ್ಟು ನಮಗೋಸ್ಕರ ಕಾಯ್ದುಕೊಂಡು ಕೂತಿರುತ್ತಾರೆ. ಈ ಮೂರು ಗಂಟೆ ಸ್ಟೇಜ್‌ಮೇಲೆ ಏನು ನಡೆಯುತ್ತಿದೆ ಎಂಬುದನ್ನು ನೋಡಿಕೊಂಡು ಸೈಡ್‌ ವಿಂಗ್‌ನಲ್ಲಿ ಬಿದ್ದಿರಿ. ಎಲ್ಲೆಲ್ಲೋ ಬೀಡಿ ಸೇದುಕೊಂಡು, ಕುಡಿದುಕೊಂಡು ಮಾತಾಡಿಕೊಂಡು ನಿಲ್ಲಬೇಡಿ ಎಂದು ಹೇಳುತ್ತಿದ್ರು. ಅವರು ಹೇಳಿದ್ದು ಬೇರೆಯವರಿಗೆ. ಆದರೆ, ಆ ಮಾತು ನನಗೆ ನಾಟಿತು. ನಾನು ಅಂದಿನಿಂದ ಅದನ್ನು ಅಳವಡಿಸಿಕೊಂಡೆ. ಇವತ್ತಿನವರೆಗೂ ನಾನು ಕಾರ್ಯಕ್ರಮಕ್ಕೆ ಹೋದಾಗ ಅದು ಮುಗಿಯುವವರೆಗೂ ನೋಡುತ್ತೇನೆ. ಯಾರಾದ್ರೂ ತಪ್ಪು ಮಾಡಿದ್ರೆ ಅದರಿಂದಲೂ ಕಲಿಯುವುದು ಇರುತ್ತದೆ.


ಹೊಟ್ಟೆ ತುಂಬಾ ಊಟ ಹಾಕುತ್ತಿದ್ರು ಅವರು. ಪೇಮೆಂಟ್‌ಕೂಡ ಸರಿಯಾಗಿಯೇ ಕೊಡುತ್ತಿದ್ರು. ಅಂತಹ ಮಹಾನ್ ವ್ಯಕ್ತಿಗಳ ಜೊತೆಗೆ ಪಾತ್ರ ಮಾಡಿದ್ದು, ದೊಡ್ಡ ವಿಷಯ. ಹಲವು ನಾಟಕಗಳಿಗೆ ಬಣ್ಣ ಹಚ್ಚಿದೆ. ಹೊಸತನ್ನು ಕಲಿಯುವ ಅವಕಾಶ ದೊರಕಿತು.ಮುಂದುವರೆಯುವುದು...

15 views