
ದಯಾನಂದ ಅವರ ಆರಂಭದ ದಿನದ ಕಷ್ಟಗಳು
ಮಿಮಿಕ್ರಿ ದಯಾನಂದ ಲೈಫ್ಸ್ಟೋರಿ ಭಾಗ 9

ನಂತರ ಕೊಪ್ಪಳದಿಂದ ಬೆಂಗಳೂರಿಗೆ ವರ್ಗಾವಣೆ ಆಯ್ತು. ಚಾಮರಾಜಪೇಟೆಯಲ್ಲಿ ನೆಲೆಸಿದೆ. ಇಲ್ಲಿಗೆ ಬಂದ ವೇಳೆ ಗೌಡ್ತಿ ಗಂಗವ್ವ ಎಂಬ ನಾಟಕ ನಡೆಯುತ್ತಿತ್ತು. ಮೈಸೂರಿನ ಕಲಾವಿದರು ಆ ನಾಟಕವನ್ನು ಮಾಡಿದ್ರು. ಅದನ್ನು ನೋಡಲು ಎಂಪಿ. ಶಂಕರ್ ಅವರು ಬಂದಿದ್ದರು. ಮೈಸೂರು ಲೋಕೇಶ್ ಅವರು ನಾಟಕ ನಿರ್ವಹಣೆಯ ಜೊತೆಗೆ ಪ್ರಮುಖ ಪಾತ್ರವನ್ನು ಮಾಡಿದ್ದರು. ನಂದು ಕೂಡ ಪ್ರಮುಖವಾದ ಕಡವನ ಪಾತ್ರ. ಟೋಟಲ್ ಸೌಂಡ್ ರೆಕಾರ್ಡಿಂಗ್ ಇರುವ ನಾಟಕವದು. ಆರು ಗಂಟೆಗೆ ಟೇಪ್ ರೆಕಾರ್ಡಿಂಗ್ ಆನ್ ಮಾಡಿದ್ರೆ, ರಿರೆಕಾರ್ಡಿಂಗ್ ಪೂರ್ತಿ ಬರುತ್ತದೆ. ಡೈಲಾಗ್ ಮಾತ್ರ ನಾವು ಹೇಳಬೇಕಿತ್ತು. ಒಂದು ಡೈಲಾಗ್ ತಪ್ಪಿದರೂ, ಪೂರ್ತಿ ನಾಟಕ ಹಳಿ ತಪ್ಪುತ್ತಿತ್ತು. ನಾಟಕವನ್ನು ಚೆನ್ನಾಗಿಯೇ ಮಾಡಿದೆವು. ಆದರೆ ದುಡ್ಡು ಬರಲಿಲ್ಲ.
ನನ್ನ ಶೋ ನೋಡಿ ಸಿನಿಮಾದವರೊಬ್ಬರು ಮೋತಿಮಹಲ್ ಹೋಟೆಲ್ಗೆ ಬನ್ನಿ ಅಂದ್ರು. ನಾನು ಬಹಳ ಖುಷಿಯಿಂದ ಬಟ್ಟೆಯನ್ನು ಇಸ್ತ್ರಿ ಮಾಡಿ ಸೈಕಲ್ ಹತ್ತಿಕೊಂಡು ಹೋದೆ. ಆರು ಗಂಟೆಗೇ ಅಲ್ಲಿ ಹೋಗಿ ನಿಂತಿದ್ದೆ. ಆದರೆ, ಅವರೆಲ್ಲ 8 ಗಂಟೆಗೆ ಬಂದ್ರು. ಎಲ್ಲ ಕೂತಿದ್ರು, ನನ್ನನ್ನು ಕರೆದ್ರು ಹೋದೆ. ಮಿಮಿಕ್ರಿ ಮಾಡಿಸಿದ್ರು. ಎಲ್ಲ ಕುಡಿಯುತ್ತಿದ್ರು. ನೀವು ಕುಡಿಯಿರಿ ಎಂದ್ರು. ಅಭ್ಯಾಸ ಇಲ್ಲ ಎಂದೆ. ಸಿಗರೇಟ್ ಸೇದಿ, ನಾನ್ವೆಜ್ ತಿನ್ನಿ ಅಂದ್ರು. ಬೇಡ ಅಂದೆ. ಸರಿ ನಾಳೆ ಬನ್ನಿ ಅಂದ್ರು. ಅವತ್ತೆ ಅವರೊಟ್ಟಿಗೆ ಕುಡಿದು, ತಿಂದಿದ್ರೆ ಬಹುಶಃ ಅವರಿಗೆ ಜತೆ ಆಗುತ್ತಿದ್ದೆ ಅನಿಸುತ್ತದೆ. ಆದರೆ, ಹಾಗಾಗಲಿಲ್ಲ.
ಮರುದಿನ ಮತ್ತೆ ಹೋಗಿ ಬಾಗಿಲು ತಟ್ಟಿದೆ. ಅವರು ಆಗಲೇ ಟೈಟ್ ಆಗಿಬಿಟ್ಟಿದ್ರು. ಇರಿ ಬರ್ತಿನಿ ಎಂದು ಹೇಳಿ ಹೋದವರು, ರಾತ್ರಿ 12 ಗಂಟೆವರೆಗೂ ಬಾಗಿಲಲ್ಲೇ ಕಾಯುವಂತೆ ಮಾಡಿದ್ರು. ಅವರು ನನ್ನನ್ನು ಮರೆತೇ ಹೋಗಿದ್ರು. ನನಗೆ ಲೈಟಾಗಿ ಜ್ವರ ಬಂದುಬಿಡ್ತು. ರಾತ್ರಿ 12 ಗಂಟೆ ಮೇಲೆ ಬಂದ ಅವರು ಅಯ್ಯೋ ಇವರು ಇದ್ದಾರಲ್ವಾ ಇಲ್ಲೇ ಎಂದವರು, ನಿಮಗೆ ಮುಂದಿನ ಸಿನಿಮಾದಲ್ಲಿ ಹೇಳುತ್ತೇನೆ. ನಿಮ್ಮ ಫೋನ್ ನಂಬರ್ ಇದೆಯಾ ಅಂದ್ರು. ನಾನು ಇಲ್ಲ ಎಂದೆ. ಆಫೀಸ್ನಲ್ಲಿ ಫೋನ್ ಇದೆಯಲ್ವಾ ನಂಬರ್ ಕೊಟ್ಟು ಹೋಗಿ ಅಂದ್ರು. ನನಗೆ ಕಾಲು ಎತ್ತಲು ಆಗದಷ್ಟು ಜ್ವರ ಮತ್ತು ಹೊಟ್ಟೆ ಹಸಿವು ಶುರುವಾಗಿತ್ತು. ನನ್ನ ಗ್ರಹಚಾರಕ್ಕೆ ಸೈಕಲ್ ಕೂಡ ಹಾಳಾಗಿತ್ತು. ನಾನು ಅದನ್ನು ಎತ್ತಿಕೊಂಡೆ ಮೆಜೆಸ್ಟಿಕ್ ನಿಂದ ಚಾಮರಾಜಪೇಟೆವರೆಗೆ ಎತ್ತಿಕೊಂಡು ಮೆಲ್ಲನೆ ಜಿನುಗುತ್ತಿದ್ದ ಮಳೆಯಲ್ಲಿ ನೆನೆದುಕೊಂಡು ಬಂದಿದ್ದೇನೆ.
ಆದರೆ, ಮುಂದೊಂದು ದಿನ ನಾನು ಆಯೋಜಿಸಿದ್ದ ಪಾರ್ಟಿಗೆ ಅವರು ಬಂದಿದ್ದರು. ಸಿನಿಮಾ ಚಿತ್ರೀಕರಣ ವೇಳೆಯಲ್ಲಿಯೂ ಕಾರಿನಲ್ಲಿ ಹೋಗಿ ನಾನು ಇಳಿಯುವ ಸಂದರ್ಭದಲ್ಲಿ, ಅವರುಗಳೇ ಬನ್ನಿ ಸರ್ ಎಂದು ಗೌರವ ಕೊಡಲು ಪ್ರಾರಂಭಿಸಿದ್ರು. ಆದರೆ, ನನಗೆ ಆಗ ಗೊತ್ತಾಗಿದ್ದು ಅವರೆಲ್ಲ ಡೈರೆಕ್ಟರ್ ಅಲ್ಲ,. ಅಸಿಸ್ಟೆಂಟ್ ಡೈರೆಕ್ಟರ್ಗಳೆಂದು. ಅವರ ಮೋಜಿಗಾಗಿ ನನ್ನನ್ನು ಬಳಸಿಕೊಂಡಿದ್ದರು. ಆದರೆ, ನಾನು ಅದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಮೊದಲಿನ ರೀತಿಯಲ್ಲಿಯೇ ಗೌರವದಿಂದಲೇ ಮಾತನಾಡಿಸುತ್ತಿದ್ದೆ.
ಮುಂದುವರೆಯುವುದು...