
ದರ್ಶನ್ ಗಣೇಶ್ ಒಂದೇ ಧಾರವಾಹಿಯಲ್ಲಿ ಅಭಿನಯಿಸಿದ್ದರು
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 44
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ರಾಜ್ಕುಮಾರ್ ಕುಟುಂಬದವರು ಅವರಿಗೆ ಕೊಡುತ್ತಿದ್ದ ಮರ್ಯಾದೆಯನ್ನು ನನಗೂ ಕೊಡುತ್ತಾರೆ. ಎಲ್ಲರೂ ಮಾಮ ಎಂದೇ ಕರೆಯುತ್ತಾರೆ. ಮ್ಯೂಸಿಕಲ್ ನೈಟ್ಸ್ನಲ್ಲಿ ರಾಮ್ಕುಮಾರ್, ರಾಘವೇಂದ್ರ, ಪುನೀತ್, ಶಿವರಾಜ್ಕುಮಾರ್ ಹಾಡು ಹೇಳುತ್ತಿದ್ರು. ಇವರೆಲ್ಲ ಹಾಡುತ್ತಿದ್ದ ವೇಳೆ ರಾಜ್ಕುಮಾರ್ ಬಿಡುವು ಪಡೆಯುತ್ತಿದ್ರು. ಮ್ಯೂಸಿಕಲ್ ನೈಟ್ಸ್ ಸಂಪೂರ್ಣ ಜವಾಬ್ದಾರಿ ನಾನೇ ವಹಿಸಿಕೊಂಡಿದ್ದೆ. ಯಾರೊಬ್ಬರೂ ನನ್ನ ಮಾತಿಗೆ ಅಡ್ಡ ಬರುತ್ತಿರಲಿಲ್ಲ.
ವಿಜಯರಾಘವೇಂದ್ರನಿಗೆ ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಸೀಟು ತೆಗೆಸಿಕೊಟ್ಟು ಕಳುಹಿಸಿದ್ದೆ. ವಿಜಯರಾಘವೇಂದ್ರನನ್ನು ಹಾಕಿಕೊಂಡು ಉದಯ ಮೂವೀಸ್ಗೆ ‘ಅತ್ತಿಗೆ’ ಎಂದು ಸೀರಿಯಲ್ ತೆಗೆದಿದ್ದೆ. ಆದಾದ ಮೇಲೆ ‘ಶ್ರೀಮತಿ’ ಎಂಬ ಧಾರಾವಾಹಿ ತೆಗೆದೆ. ಅದರಲ್ಲಿ ದರ್ಶನ್ ಮತ್ತು ಗಣೇಶ್ ಹೀರೊ. ತೂಗುದೀಪ್ ಇಲ್ಲದೇ ನಾವು ಸಿನಿಮಾ ಮಾಡುತ್ತಿರಲಿಲ್ಲ. ರಾಜ್ಕುಮಾರ್ ಇದ್ದ ಸಿನಿಮಾಗಳಲ್ಲಿ ಅವರು ಇರುತ್ತಿದ್ರು. ದರ್ಶನ್ ಹಾಕಿಕೊಂಡು ಸಿನಿಮಾ ಮಾಡೋಣ ಎಂದುಕೊಂಡೆ ಆದರೆ ಅವಕಾಶ ಆಗಲಿಲ್ಲ.
ಈಗ ನಾನು ಪತ್ರಿಕೆಗಳಲ್ಲಿ ಲೇಖನ ಬರೆದುಕೊಂಡು ಆರಾಮಾಗಿದ್ದೇನೆ. ದೊರೆಯವರ ಶಾಸ್ತ್ರದ ಪ್ರಕಾರನೇ ನಾನು ನನ್ನ ಜೀವನದಲ್ಲಿ ಅತ್ಯಂತ ಸುಖವಾಗಿದ್ದೇನೆ. ನನಗೆ ನಾಲ್ಕು ಜನ ಮಕ್ಕಳು. ಮೊದಲನೆಯವಳಿಗೆ ಒಂದು ಗಂಡು, ಇನ್ನೊಂದು ಹೆಣ್ಣು. ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಮೊಮ್ಮಗಳು ಪಂಜಾಬಿಯವನನ್ನು ಮದುವೆ ಆಗಿದ್ದು, ಮೊಮ್ಮಗ ಪರಿಚಯವಿದ್ದ ಆಸ್ಟ್ರೇಲಿಯಾದ ಹುಡುಗಿಯನ್ನು ಮದುವೆಯಾಗಿದ್ದಾನೆ. ಎಲ್ಲಾ ಹಾಯಾಗಿ ಸಂತೋಷವಾಗಿದ್ದಾರೆ. ಮೊದಲ ಮಗನ ಒಬ್ಬಳೇ ಮಗಳು ಆಫ್ರಿಕಾದ ಘಾನಾದಲ್ಲಿದ್ದಾಳೆ. ಮೂರನೇ ಮಗನಿಗೆ ಎರಡು ಗಂಡು ಮಕ್ಕಳು. ಅದರಲ್ಲಿ ಒಬ್ಬ ಎಂಎಫ್ಎಂ, ಇನ್ನೊಬ್ಬ ಏರೋನಾಟಿಕ್ಸ್ ಎಂಜಿನಿಯರ್. ನಾಲ್ಕನೇ ಮಗ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದಾನೆ. 25 ವರ್ಷಗಳ ಹಿಂದೆ ಅವನು ಅಲ್ಲಿಗೆ ಹೋಗಿದ್ದ. ಅವನ ಹೆಂಡತಿ ಮದ್ರಾಸ್ನವಳು. ಅವಳು ಬ್ಯಾಂಕ್ ಆಫ್ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಾಳೆ. ಅವರಿಗೆ ಮೂರು ಮಕ್ಕಳು. ಅಲ್ಲಿಯೇ ಹುಟ್ಟಿದ್ದು. ಅದರಲ್ಲಿ ಒಬ್ಬ ಮಗ 6.3 ಇಂಚು ಇದ್ದಾನೆ. ಫಾಸ್ಟ್ಬೌಲರ್ ಆಗಿ ಆಸ್ಟ್ರೇಲಿಯನ್ ಕ್ರಿಕೆಟ್ ಅಸೋಸಿಯೇಷನ್ ತರಬೇತಿ ಪಡೆದಿದ್ದಾನೆ. ಯಾವ ವಿಷಯದಲ್ಲಿಯೂ ನನಗೆ ಯೋಚನೆ ಇಲ್ಲ. ನನ್ನ ಮೊಮ್ಮಕ್ಕಳು, ಮಕ್ಕಳೆಲ್ಲ ಚೆನ್ನಾಗಿದ್ದಾರೆ.
ಮೊದಲ ಕಂತಿನ ಸಂಚಿಕೆಗಳು ಇಲ್ಲಿಗೆ ಮುಕ್ತಾಯಗೊಂಡವು...
ಸಂದರ್ಶನ: ಕೆ.ಎಸ್. ಪರಮೇಶ್ವರ