ದೇವೆಗೌಡರ ಜುಬ್ಬ ಪಂಚೆ ಟವಲ್‌ ನಾನು ಹಾಕೊಂಡಿದ್ದೆಫಿಲ್ಮ್‌ಡಿವಿಷನ್‌ಗೆ ಹೊರತುಪಡಿಸಿ ಇನ್ನೊಂದು ಡಾಕ್ಯುಮೆಂಟರಿ ತೆಗೆದೆ. ಅದು ನಮ್ಮೆಲ್ಲರ ಪ್ರೀತಿ ಪಾತ್ರರಾದ ಎಚ್‌.ಡಿ.ದೇವೇಗೌಡರ ಬಗ್ಗೆ. ಆಗ ಅವರು ಪ್ರಧಾನಿಯಾಗಿದ್ದರು. ಕೆಎಂಎಫ್‌ಗೆ ಒಂದು ಡಾಕ್ಯುಮೆಂಟರಿ ಮಾಡಿದ್ದೆ. ಅದನ್ನು ನೋಡಿ, ರೇವಣ್ಣ ಅವರು ನನ್ನ ಅಪ್ಪನ್ನ ಕುರಿತು ಒಂದು ಸಾಕ್ಷ್ಯಚಿತ್ರ ತೆಗೆಯಬಹುದಲ್ವಾ ಎಂದರು. ನೀವು ಹೇಳಿದ ಮೇಲೆ ಮಾಡದೇ ಇರುತ್ತೇನಾ, ಮಾಡಬಹುದು ಎಂದೆ.

‘ಹರದನಹಳ್ಳಿಯಿಂದ ಹೊಸದೆಹಲಿಗೆ’ ಎಂದು ಶೀರ್ಷಿಕೆ ಕೊಟ್ಟು, ಸ್ಕ್ರಿಪ್ಟ್‌ ತಯಾರಿಸಿದೆ. ಅದನ್ನು ರೇವಣ್ಣ ಅವರಿಗೆ ಹೇಳಿದಾಗ ತುಂಬಾ ಚೆನ್ನಾಗಿದೆ ಮಾಡಿ ಎಂದರು. ಹರದನಹಳ್ಳಿಗೆ ಹೋದೆ. ಅಲ್ಲಿ ದೇವೇಗೌಡರು ಉಳಿಮೆಯನ್ನು ಮಾಡಿದ್ದರಂತೆ. ದೇವೇಗೌಡರ ಒಂದು ಬಟ್ಟೆ ಕೊಡಿ ಎಂದು ಕೇಳಿದೆ. ಎರಡು ಜೊತೆ ಜುಬ್ಬ, ಪಂಚೆ, ಟವಲನ್ನು ದೇವೇಗೌಡರೇ ಕೊಟ್ಟರು. ಅದನ್ನು ನಾನೇ ಹಾಕಿಕೊಂಡು, ಲಾಂಗ್‌ ಶಾಟ್‌ನಲ್ಲಿ ಹರದನಹಳ್ಳಿಯಲ್ಲಿ ಉಳುಮೆ ಮಾಡಿದ್ದೇನೆ. ಅವರ ಮನೆ, ಹೊಲ ಗದ್ದೆ ಶೂಟ್‌ ಮಾಡಿದೆ. ಅಲ್ಲಿ ಅವರ ಸಮಕಾಲೀನರ ಸಂದರ್ಶನ ಮಾಡಿದೆ. ಹೊಳೆನರಸೀಪುರದಲ್ಲಿ ಅವರು ಪಂಚಾಯಿತಿ ಸದಸ್ಯ ಮತ್ತು ಪ್ರೆಸಿಡೆಂಟ್‌ ಆಗಿದ್ರು. ಅಲೆಲ್ಲ ಹೋಗಿ ಶೂಟ್ ಮಾಡಿದೆ.


ದೇವೇಗೌಡರು ಬೆಂಗಳೂರಿಗೆ ಬಂದಿದ್ದರು. ದೆಹಲಿಗೆ ಹೋಗಲು ಅವರ ವಿಮಾನ ಎಚ್‌ಎಎಲ್‌ ಏರ್‌ಪೋರ್ಟ್‌ನಲ್ಲಿ ರೆಡಿಯಾಗಿ ನಿಂತಿತ್ತು. ಅಲ್ಲಿ ನಾನು ಶೂಟ್‌ ಮಾಡಬೇಕಿತ್ತು. ಗೌರಿಶಂಕರ್‌ ಕ್ಯಾಮೆರಾಮೆನ್‌. ಅಲ್ಲಿ ಹೋಗಿ ಕಾಯುತ್ತಿದ್ದೆ. ಗೌರಿ ಬಂದಿರಲಿಲ್ಲ. ಪೈಲಟ್‌ ಮತ್ತು ಅಲ್ಲಿದ್ದ ಅಧಿಕಾರಿಗಳು ಸಮಯವಾಯ್ತು, ವಿಮಾನ ಟೇಕ್‌ ಆಫ್‌ ಮಾಡಬೇಕು ಎಂದು ಹೇಳಿದರು. ರೇವಣ್ಣ ಅವರು ಕ್ಯಾಮೆರಾಮೆನ್‌ ಬರಬೇಕು ಸ್ವಲ್ಪ ಸಮಯ ಕಾಯುವಂತೆ ತಿಳಿಸಿದರು. 20 ನಿಮಿಷ ತಡವಾಗಿ ಗೌರಿ ಅಲ್ಲಿಗೆ ಬಂದ. ವಿಮಾನ ನಮಗೋಸ್ಕರ ನಿಲ್ಲಿಸಿದ್ರು. ಪೈಲಟ್‌, ಪ್ರೊಟೊಕಾಲ್ ಅಧಿಕಾರಿಗಳೆಲ್ಲ ನಮಗೆ ಬೈದರು.ಮುಂದುವರೆಯುವುದು...

17 views