ನಟ ಆಗೋಕು ಮುಂಚೆ ರಮೇಶ್‌ ಭಟ್‌ ಮಾಡ್ತಿದ್ದದ್ದು ಯಾವ ಬ್ಯುಸಿನೆಸ್

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 15

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)




ಆಗ ನಾನು ಎಲ್ಲಾ ತಂಡಗಳಲ್ಲೂ ಕೆಲಸ ಮಾಡ್ತಿದ್ದೆ. ಕೇವಲ ಒಂದೇ ತಂಡಕ್ಕೆ ಸೀಮಿತ ಆಗಿರ್ಲಿಲ್ಲ. ನನಗೆ ಬ್ಯುಸ್ನೆಸ್ ಜಾಗ ಇದ್ರುನೂ, ರಿಹರ್ಸಲ್ ಟೈಮಲ್ಲಿ ಯಾರನ್ನೋ ಬಿಟ್ಟು ಹೋಗಿ ಮಾಡ್ತಿದ್ದೆ. ಬಣ್ಣದ ಗೀಳು ನನ್ನ ಎಳ್ಕೊಂಡು ಹೋಗ್ಬಿಡೋದು. ಹಾಗಾಗಿ ಬೇರೆ ತಂಡದವ್ರೆಲ್ಲಾ, “ಏನಪ್ಪಾ ನೀವು ಸ್ಟಾರ್ ಗಳ ಜೊತೆ ಇರೋವ್ರು.” ಅಂತೆಲ್ಲಾ ಹೇಳವ್ರು. ಆಗ ಶಂಕರ್ ಅವ್ರಿಗೆ ನನ್ನ ಬಗ್ಗೆ ಇಂಪ್ರೆಷನ್ ಸ್ವಲ್ಪ ಜಾಸ್ತಿ ಇತ್ತು. ಅವ್ರು ಹೇಳ್ವವ್ರು “ನೀನು ನನ್ನ ಸರ್ ಅಂತ ಹೇಳ್ಬೇಡ, ನಾವಿಬ್ರೂ ಒಂದೇ ವಯಸ್ಸಿನವರ ಥರ ಕಾಣಿಸ್ತೀವಿ. ನೀ ಶಂಕರ್ ಅಂತ ಕರಿ. ನಾನು ರಮೇಶ್ ಅಂತ ಕರಿತೀನಿ” ಅಂತ. ಸೋ ಇದು ನಮ್ಮ ಸ್ನೇಹಕ್ಕೆ ಒಂದು ವೇದಿಕೆ ಸೃಷ್ಟಿ ಮಾಡ್ಕೊಡ್ತು.


ಅಂಜುಮಲ್ಲಿಗೆ ಜೊತೆಜೊತೆಯಲ್ಲೇ ಮಿಂಚಿನ ಓಟ ಸಿನಿಮಾ ಪ್ಲಾನ್ ಮಾಡಿದ್ರು. ಸರಿ ನನಗೆ “ಪ್ರೊಡಕ್ಷನ್ ನೋಡ್ಕೊ”ಅಂತ ಹೇಳಿದ್ರು. ಯಾಕಂದ್ರೆ ಗೌರಿ ನನ್ನ ಬಗ್ಗೆ ಹೇಳಿದ್ರು. “ಅವ್ನು ಪ್ರೊಡಕ್ಷನ್ ನೀಟಾಗಿ ಹ್ಯಾಂಡಲ್ ಮಾಡ್ತಾನೆ. ನೀನು ಅವ್ನ ಇಟ್ಕೋ” ಅಂತ. ಯಾಕಂದ್ರೆ ನಾವು ಮೋಹನ್ ಮುರುಳಿ ಪ್ರೊಡಕ್ಷನಲ್ಲಿ, ‘ಸ್ಪಂದನ’ ಅಂತ ಒಂದು ಸಿನಿಮಾ ಮಾಡಿದ್ವಿ. ಇದಕ್ಕೆ ಮುಂಚೆನೇ ನಾನು ಆರು, ಏಳು ಸಿನಿಮಾದಲ್ಲಿ ಆಕ್ಟ್ ಮಾಡಿ ಆಗಿತ್ತು. ಶಂಕರ್ ಅವ್ರು ಕರ್ದಾಗ್ಲೂ ನಾನು ಮೈಸೂರಲ್ಲಿ ಒಂದು ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದೆ. ಅದು ‘ಸಿ.ವಿ ರಾಜೇಂದ್ರನ್’ ಅಂತ ಒಬ್ಬ ತಮಿಳು ಡೈರೆಕ್ಟರ್ ಡೈರೆಕ್ಷನ್ ಮಾಡ್ತಿದ್ರು. ಅದೇ ಡೈರಕ್ಟರ್ ಜೊತೆ ಶಂಕರ್ ನಾಗ್ ಅವ್ರು ಕೆಲ್ಸ ಮಾಡ್ತಾ ಇದ್ರು. ‘ಪ್ರೀತಿ ಮಾಡು ತಮಾಷೆ ನೋಡು’ ಅಂತ ಸಿನಿಮಾ. ಒಂದು ಶೆಡ್ಯೂಲ್ ಏನೋ ಆಗಿತ್ತು ಅದ್ರದ್ದು. ಹಂಗಾಗಿ ಶಂಕರ್ ಅವ್ರು ಆರ್ಟ್ ಡೈರೆಕ್ಟರ್ ಗೆ ಫೋನ್ ಮಾಡಿ ಮೈಸೂರಿಂದ ನನ್ನನ್ನ ಕರೆಸಿ ಕೊಂಡ್ರು. ಅದು ಫಸ್ಟ್ ಮೀಟಿಂಗ್ ನಂದು,


ಒಂದು ಕಾಲದ ಪ್ರೊಡಕ್ಷನ್‌ ಮ್ಯಾನೇಜರ್‌ ಇವರು ಸಕಲ ಕಲಾವಲ್ಲಭ

ಶೂಟಿಂಗ್ ಮಧ್ಯದಿಂದ ಬಂದು ಅವ್ರನ್ನ ಭೇಟಿ ಮಾಡಿ, ಆ ಮೇಲೆ ಶೂಟಿಂಗ್ ಗೆ ಮತ್ತೆ ಹೋಗಿದ್ದೆ. ನಾನು ಹೇಳಿದ್ನಲ್ಲ ಮೋಹನ್ ಮುರುಳಿ ಪ್ರೊಡಕ್ಷನ್ ಕಂಪೆನಿಗೆ, ಏಳು ಸಿನಿಮಾಗಳಿಗೆ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲ್ಸ ಮಾಡಿದ್ದೆ. ನಾನು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲ್ಸ ಮಾಡಿದ್ದಲ್ಲ, ಪ್ರೊಡ್ಯೂಸರ್ ಕೂಡ ನನ್ನ ಸ್ನೇಹಿತರೇ, ಅವ್ರು ಕೂಡ ರಂಗಭೂಮಿಯವರೇ ‘ಕೃಷ್ಣ ರಾಜು’ ಅಂತ. ಅವ್ರು ನನ್ನ ಕರೆದರು, “ಬಾರೋ ನೀನು ನನ್ನ ಹತ್ರ ಇದ್ರೆ ಸಹಾಯ ಆಗುತ್ತೆ” ಅಂತ. ಅವ್ರ ಜೊತೆಯಲ್ಲಿ ನಾನು ಒಂದು ಸಣ್ಣ ಬ್ಯುಸ್ನೆಸ್ ಮಾಡ್ತಿದ್ದೆ, ಏನಪ್ಪ ಬ್ಯುಸ್ನೆಸ್ ಅಂದ್ರೆ ಮಾರ್ನಿಂಗ್ ಶೋ ಗೆ ಹಳೆ ಸಿನಿಮಾಗಳನ್ನ ತಗೊಂಡು ಒಂದು ವಾರ, ಎರಡು ವಾರ ಓಡ್ಸೋದು ಅದ್ರಿಂದ ಏನೋ ಒಂದು ಸ್ವಲ್ಪ ಮಿಕ್ಕೋದು. ಸಿನಿಮಾದ ಜೊತೆ ಏನೋ ಒಂದು ಸಂಬಂಧ. ಹಂಗಾಗಿ ಅವ್ರು ಸಿನಿಮಾ ಶುರು ಮಾಡ್ದಾಗ್ಲೂ “ನೀನು ಬಾ ನನ್ನ ಜೊತೆಯಲ್ಲೇ ಇರು” ಅಂತಂದ್ರು.

ಅವಾಗೆಲ್ಲಾ ಹೆಚ್ಚು ಮದ್ರಾಸಲ್ಲಿ ಶೂಟಿಂಗ್. ಹಾಗಾಗಿ ನಾನು ಹೆಚ್ಚು ಮದ್ರಾಸ್ ಗೆ ಓಡಾಡ್ತಿದ್ದೆ. ಎಲ್ಲಾ ಡಿಪಾರ್ಟ್ಮೆಂಟಲ್ಲೂ ಕೆಲ್ಸ ಮಾಡಿದ್ದೆ ಅವಾಗ. ಆನ್ ಲೊಕೇಶನ್ ಶೂಟೆಲ್ಲಾ ಇರ್ತಿರ್ಲಿಲ್ಲ ಅವಾಗ. ಎಲ್ಲಾ ಸ್ಟುಡಿಯೋಗಳಲ್ಲೇ ಹೆಚ್ಚು ಶೂಟಿಂಗ್ ಇರ್ತಿತ್ತು. ಹಾಸ್ಪೆಟಲ್ ಶೂಟ್ ಇದ್ರೆ, ಅಲ್ಲಿ ಒಂದು ಬೆಡ್ ಸಾಕಾ? ಅಥವಾ ಎರಡು ಬೆಡ್ ಬೇಕಾ? ಇದೆಲ್ಲಾ ಆರ್ಟ್ ಡೈರಕ್ಟರ್ ಹತ್ರ ಡಿಸ್ಕಸ್ ಮಾಡ್ಕೊಂಡು, ಅವ್ರಿಗೆ ಮೆಟೀರಿಯಲ್ ಎಲ್ಲಾ ಪ್ರವಾಯ್ಡ್ ಮಾಡಿ ಸೆಟ್ ಹಾಕ್ಸೋದು. ಆ ಜವಾಬ್ದಾರಿಯಲ್ಲೂ ಕೆಲ್ಸ ಮಾಡಿದ್ದೀನಿ. ಆಮೇಲೆ ವಾರ್ಡ್ರೋಬ್ ಇಂಚಾರ್ಜ್, ಕಾಸ್ಟ್ಯೂಮ್ ಪರ್ಚೇಸ್ ಮಾಡ್ತನೇ ಇರ್ಬೇಕಾಗುತ್ತೆ. ಒಂದು ಸಣ್ಣ ಕಾಸ್ಟ್ಯೂಮ್ ಆದ್ರುನೂ, ಅದನ್ನ ಪರ್ಚೇಸ್ ಮಾಡಿ ಹೊಲ್ಸಿ, ಸರಿಯಾದ ಟೈಮಲ್ಲಿ ಅವ್ರ ಕೈಗೆ ಕೊಡ್ಬೇಕಾಗುತ್ತೆ. ಸೊ ಅದ್ರ ಜವಾಬ್ದಾರಿ ಕೂಡ ತಗೊಂಡು ಕೆಲಸ ಮಾಡಿದ್ದೆ. ಪ್ರೊಡಕ್ಷನ್ ಓವರಾಲ್, ಟ್ರಾನ್ಸಪೊರ್ಟ್ ಯಾರು, ಫುಡ್ ಯಾರು, ಎಷ್ಟು ಜನ ಇರ್ತಾರೆ. ಬೇರೆ ಎಲ್ಲನೂ. ಕಮ್ಯೂನಿಕೇಟ್ ಮಾಡ್ಬೇಕು ಒಬ್ರಿಂದ ಒಭ್ರಿಗೆ. ಈ ಅಭ್ಯಾಸ ಇದ್ದಿದ್ರಿಂದ ಗೌರಿಯವರು ಹೇಳಿದ್ರು “ಹಿ ಈಸ್ ದ ರೈಟ್ ಪರ್ಸನ್, ನೀನು ಬೇರೆ ಯಾರ ಹತ್ರನೂ ಹೋಗ್ಬೇಡ” ಅಂತ. ಸರಿ ಶಂಕರ್ ಹೇಳಿದ್ರು “ ಯು ಟೇಕ್ ಕೇರ್ ಆಫ್ ಪ್ರೊಡಕ್ಷನ್ ಅಂತ” ನಾನು ಹೇಳ್ದೆ “ಇಲ್ಲಪ್ಪ, ನಾನು ಆಕ್ಟ್ ಮಾಡ್ಬೇಕು ಅಂತಿದ್ದೀನಿ, ಹೀರೋ ಆಗ್ಬೇಕು ಅಂತಿದ್ದೀನಿ, ನಾನು ಪ್ರೊಡಕ್ಷನ್ ಎಲ್ಲಾ ಮಾಡಿ ಆಗಿದೆ. ಬೋರ್ ಅದು, ಆಮೇಲೆ ಅದು ಥಾಂಕ್ಸ್ ಲೆಸ್ ಜಾಬ್. ಬೇಡ” ಅಂದೆ. “ಯಾಕೆ ಆತರ ಫೀಲ್ ಮಾಡ್ತಿದ್ದೀಯ? ಐ ಆಮ್ ದೇರ್, ಐ ವಿಲ್ ಬಿ ವಿತ್ ಯು” ಅಂದ್ರು. “ಸರಿಯಪ್ಪಾ, ಕೆಲ್ಸ ಆಗೋದಕ್ಕೆ ಮುಂಚೆ ಎಲ್ರೂ ಹಾಗೆ ಹೇಳ್ತಾರೆ, ಏನಾದ್ರೂ ಹೆಚ್ಚುಕಮ್ಮಿ ಆದ್ರೆ, ಇಲ್ಲ ನಮ್ಮ ಮ್ಯಾನೇಜರ್ ಅಂತ ತಲೆಮೇಲೆ ಹಾಕ್ತಾರೆ, ಬೇಡಪ್ಪಾ” ಅಂದೆ. “ಇಲ್ಲ ನೀನು ಮಾಡು, ಏನೂ ಆಗಲ್ಲ” ಅಂದ್ರು.



ಮುಂದುವರೆಯುವುದು…

10 views