“ನಟಿ ಲಕ್ಷ್ಮೀ ಬದುಕು 15ನೇ ವಯಸ್ಸಿನಲ್ಲೇ ನಿರ್ಧಾರವಾಗಿತ್ತು”

ದೊರೈ-ಭಗವಾನ್ ಲೈಫ್ ಸ್ಟೋರಿ – ಭಾಗ 10


(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)


1968ರಲ್ಲಿ ಜೇಡರ ಬಲೆ ಸಿನಿಮಾದ ಅಂದಾಜು ಖರ್ಚು 2 ಲಕ್ಷದ 75 ಸಾವಿರ. ಪ್ರಿಂಟ್‌ಗೆ 50 ಸಾವಿರ ಕಡಿಮೆ ಆಯ್ತು. ದುಡ್ಡು ಕೊಡುವವರೆಗೂ ಲ್ಯಾಬೊರೇಟರಿ ಅವರು ನಮಗೆ ಪ್ರಿಂಟ್‌ ಕೊಡಲ್ಲ ಅಂದ್ರು. ಆದರೆ, ನಮ್ಮ ಬಳಿ ಹಣ ಇರಲಿಲ್ಲ. ಡೇಟ್ಸ್‌ ಅನೌನ್ಸ್‌ ಮಾಡಿಬಿಟ್ಟಿದ್ವಿ. ಮೇನಕಾದಲ್ಲಿ ಬೆಳಿಗ್ಗೆ 11 ಗಂಟೆಗೆ ಮಾರ್ನಿಂಗ್‌ ಶೋ ಇತ್ತು. ರಾತ್ರಿ 10 ಗಂಟೆಯಾಗಿತ್ತು. ಒಂದು ಪ್ರಿಂಟ್‌ ಕೂಡ ಆಚೆ ಬಂದಿರಲಿಲ್ಲ. ದಾವಣಗೆರೆ, ಹುಬ್ಬಳ್ಳಿ ಎಲ್ಲಾ ಕಡೆನೂ ಅನೌನ್ಸ್‌ ಆಗಿ ಬಿಟ್ಟಿದೆ. 15 ಪ್ರಿಂಟ್‌ ಬರಬೇಕಿತ್ತು. ನನಗೆ ಏನು ಮಾಡಬೇಕು ಅಂತಾನೇ ತೋಚಲಿಲ್ಲ. ರಾತ್ರಿ 10 ಗಂಟೆಗೆ 50 ಸಾವಿರ ಎಲ್ಲಿಂದ ತರುವುದು. ವೇಣುಗೋಪಾಲ್‌ ಅವರು 50 ಸಾವಿರ ಕೊಡಬೇಕಿತ್ತು. ತಂದುಕೊಡ್ತೀನಿ ಅಂದಿದ್ರು. ಆದ್ರೆ, ತಂದು ಕೊಡಲಿಲ್ಲ.


ರಾಮಣ್ಣ ಎಂದು ನಮ್ಮ ಪ್ರೊಡಕ್ಷನ್‌ ಮ್ಯಾನೇಜರ್‌ ಇದ್ರು. ಅವರು ರಾತ್ರಿ ರಾಜ್‌ಕುಮಾರ್‌ ಅವರ ಮನೆಗೆ ಹೋಗಿದ್ರು. ಪಾರ್ವತಮ್ಮ ಅವರು ಏನ್‌, ರಾಮಣ್ಣ ಪ್ರಿಂಟ್‌ ಎಲ್ಲ ಹೋಯ್ತಾ ಎಂದು ಕೇಳಿದ್ದಾರೆ. ಇಲ್ಲ, ದುಡ್ಡು ಕೊಡಲಿಲ್ಲ ಎಂದು ಲ್ಯಾಬೊರೇಟರಿ ಅವರು ಹಿಡ್ಕೊಂಡು ಕೂತಿದ್ದಾರೆ. ಅಯ್ಯಯ್ಯೋ, ಹುಬ್ಬಳ್ಳಿಯಲ್ಲೆಲ್ಲ ರಿಲೀಸ್‌ ಇದೆಯಲ್ಲ. ಆಗಲೇ 10 ಗಂಟೆ ಆಗಿದೆ. ಬೆಳಿಗ್ಗೆ ರಿಲೀಸ್‌ ಆಗಬೇಕಲ್ವಾ ಅಂದ್ರು. ಯಾರು ಫೈನಾನ್ಷಿಯರ್‌ ಅಂತ ಕೇಳಿದ್ರು. ರತ್ನಂ ಅಯರ್‌. ಅವರಿಗೆ ಫೋನ್‌ ಮಾಡಿ ಅಂದ್ರು ಪಾರ್ವತಮ್ಮನವರು. ರಾಮಣ್ಣ ಫೋನ್‌ ಮಾಡಿ ಕೊಟ್ರು. ರತ್ನಂ ಅಯ್ಯರ್‌, “ಇಲ್ಲಮ್ಮ 50 ಸಾವಿರ ಕೊಡೋವರೆಗೂ ಆಗಲ್ಲ ಅಂದ್ರು”. ಸರಿ ನಾನು ಚೆಕ್‌ ಕಳಿಸುತ್ತೇನೆ. ಪ್ರಿಂಟ್‌ ಕೊಡಿ ಅಂದಿದ್ದಾರೆ. ಅದಕ್ಕೆ ಅವರು ಚೆಕ್‌ ಎಲ್ಲ ತೆಗೆದುಕೊಳ್ಳಲ್ಲ. ಕ್ಯಾಷ್‌ ಕೊಟ್ಟರೇನೆ ಪ್ರಿಂಟ್‌ ಕೊಡುವುದು ಅಂದಿದ್ದಾರೆ. ಆಗ, ಪಾರ್ವತಮ್ಮ ಅವರು ಮನೆಯಲ್ಲಿದ್ದ ಒಂದೊಂದು ಕಾಸನ್ನು ಜೋಡಿಸಿ, 50 ಸಾವಿರ ಮಾಡಿ ಲ್ಯಾಬೊರೇಟರಿಗೆ ಕೊಟ್ರು.
ನಂತರ ಲ್ಯಾಬೊರೇಟರಿ ಅವರು 50 ಸಾವಿರ ಬಂದಿದೆ ಪ್ರಿಂಟ್‌ಗಳನ್ನೆಲ್ಲ ಕೊಟ್ಟುಬಿಡ್ಲಾ ಅಂತ ಕೇಳಿದ್ರು. ಆಗ ರತ್ನಂ ಅಯ್ಯರ್‌ ಅವರು ಕ್ಯಾಶ್‌ ಕೊಟ್ಟಿದ್ದಾರೋ, ಚೆಕ್ ಕೊಟ್ಟಿದ್ದಾರೋ ಎಂದ್ರು. ಕ್ಯಾಷ್‌ ಕೊಟ್ಟಿದ್ದಾರೆ ಎಂದ ಮೇಲೆ ಪ್ರಿಂಟ್‌ ರಿಲೀಸ್ ಮಾಡಿ, ಲೆಟರ್‌ ನಾನು ಬೆಳಿಗ್ಗೆ ಕಳುಹಿಸಿತ್ತೇನೆ ಅಂದ್ರು.


ನಾಲ್ಕು ಅಂಬಾಸಿಡರ್‌ ಕಾರನ್ನು ಅಲ್ಲಿಂದ ಬುಕ್‌ ಮಾಡಿದ್ವಿ. ಕೊನೆದು ಬೆಂಗಳೂರು ಪ್ರಿಂಟ್‌. ಬೆಳಿಗ್ಗೆ 4.30 ಅಲ್ಲಿಂದ ಹೊರಟಿದ್ದು. 10.30 ಆದ್ರೂ ಇಲ್ಲಿಗೆ ಪ್ರಿಂಟ್‌ ಬಂದಿಲ್ಲ. ರಿಲಯನ್ಸ್ ಮೂವೀಸ್‌ ಎಂದು ಇಲ್ಲಿಯ ಡಿಸ್ಟ್ರಿಬ್ಯೂಟರ್‌. ಮೊದಲನೇ ಜೇಮ್ಸ್ ಬಾಂಡ್‌ ಚಿತ್ರ. ರಾಜ್‌ಕುಮಾರ್‌ ಅವರು ಇಂಗ್ಲಿಷ್‌ ವೇಷ ಭೂಷಣದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಜೇಡರ ಬಲೆ ಸಿನಿಮಾಕ್ಕೆ ಒಳ್ಳೆಯ ಹೈಪ್‌ ಸಿಕ್ಕಿತ್ತು. ಆಫೀಸ್ ಮುಂದೆ ಜನ ಜಮಾಯಿಸಿದ್ರು. ಪ್ರಿಂಟನ್ನು ಕಾರಿನಿಂದ ಇಳಿಸಿ, ಆಫೀಸ್‌ನಲ್ಲಿ ಪೂಜೆ ಮಾಡಿ ಥಿಯೇಟರ್‌ಗೆ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿ ಇದ್ದಂತಹ ಪದ್ಧತಿ. ಆದರೆ, ಆಫೀಸ್‌ ಒಳಗೆ ಹೋಗೋದಕ್ಕೆ ಜನ ಬಿಟ್ಟಿಲ್ಲ. ಜನಗಳೇ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿ, ಥಿಯೇಟರ್‌ಗೆ ಕೊಟ್ಟು ಬಿಟ್ರು.


ಪಿಚ್ಚರ್‌ ರಿಲೀಸ್ ಆಯ್ತು, ಹುಬ್ಬಳ್ಳಿಯಲ್ಲೆಲ್ಲ ಮಾರ್ನಿಂಗ್ ಷೋ ಕ್ಯಾನ್ಸಲ್‌ ಆಯ್ತು. 3 ಗಂಟೆಗೆ ಅಲ್ಲಿಗೆ ಹೋಗಿದ್ದು ಪ್ರಿಂಟ್‌. ಅಂದು ಭಾನುವಾರ ಕೆಂಪೇಗೌಡ ರಸ್ತೆ ಪೂರ್ತಿ ಜನ ಇದ್ರು. ಅದರಲ್ಲಿ ಒಬ್ಬ ಹುಡುಗ ಎಲ್ಲರ ತಲೆ ಮೇಲೆ ನಡೆದುಕೊಂಡು ಹೋಗಿ ಟಿಕೆಟ್‌ ತೆಗೆದುಕೊಳ್ಳುವ ಸಾಹಸ ಮಾಡಿದ. ಮುಂದೆ ಹೋಗ್ತಾ ಇದ್ದ ಅವನನ್ನು ಕೆಳಗೆ ಹಾಕಿ ಜನ ತುಳಿದುಬಿಟ್ರು. ಅವನು ಸತ್ತೇ ಹೋದ. ಅವನ ಕುಟುಂಬದವರಿಗೆ ರಾಜ್‌ಕುಮಾರ್‌ ಅವರು 3 ಸಾವಿರ ಕೊಟ್ರು. ನಮ್ಮ ಆಫೀಸ್‌ನಿಂದಲೂ ಒಂದೂವರೆ ಸಾವಿರ ಕೊಟ್ವಿ. ಆಮೇಲೆ ಆ ಸಿನಿಮಾ 25 ವಾರ ಹೋಯ್ತು.


ನಮಗಿಂತ ಹೆಚ್ಚು ಶ್ರಮಪಟ್ಟವನು ನಮ್ಮ ಆರ್ಟ್‌ ಡೈರೆಕ್ಟರ್‌ ಚಲಂ ಅವರು. ನಾವೇನು ಹೋಳಿದ್ವೊ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ರು. ಯಾರೂ ಏನೇ ಹೇಳಿದ್ರು ಅದನ್ನು ಕಾರ್ಯ ರೂಪಕ್ಕೆ ತರುವುದು ಬಹಳ ಮುಖ್ಯ. ಭಾರತದ ಚಲನಚಿತ್ರದಲ್ಲಿ ಬಾಂಡ್‌ ಸಿನಿಮಾದ ಪರಂಪರೆಯನ್ನು ಹುಟ್ಟುಹಾಕಿದ್ದೆ “ಕನ್ನಡ ಸಿನಿಮಾ”. ಜೇಡರ ಬಲೆ ಎನ್ನುವುದು ಗೊತ್ತಿರುವ ವಿಷಯವೇ. ಅದನ್ನು ನಿಮಿತ್ತ ಮಾತ್ರವಾಗಿ ನಡೆಸಿಕೊಂಡು ಬಂದ್ವಿ. ಅದಕ್ಕೆ ಸಾರ್ಥಕತೆಯೂ ಸಿಕ್ತು. ಉತ್ತರ ಭಾರತದಲ್ಲಿಯೂ ಅದನ್ನೇ ಕಾಪಿ ಮಾಡಿದ್ರು. ತಮಿಳು, ತೆಲುಗು, ಹಿಂದಿ, ಮಲಯಾಳಂ ಎಲ್ಲ ಭಾಷೆಯಲ್ಲಿಯೂ ಆ ರೀತಿಯ ಸಿನಿಮಾಗಳನ್ನು ಪ್ರಾರಂಭಿಸಿದ್ರು.


ತುಂಡು ಬಟ್ಟೆ, ಬಿಚ್ಚು ಉಡುಗೆ ಡಾನ್ಸ್‌ಗಳನ್ನು ಶುರು ಮಾಡಿದ್ದು ನಾವೇ. ಈಗ ಅದೇ ಐಟಂ ಸಾಂಗ್‌ ಆಗಿದೆ. ಜೇಮ್ಸ್‌ ಬಾಂಡ್‌ ಸಿನಿಮಾಗಳಲ್ಲಿ ಕ್ಲಬ್‌ ಡಾನ್ಸ್‌ಗಳಿರುತ್ತಿತ್ತು. ಅಲ್ಲಿ ಮ್ಯೂಸಿಕ್ ಇರಲಿಲ್ಲ. ಆದ್ರೆ, ನಮಗೆ ಹಾಡುಗಳ ಜೊತೆಗೆ ಡಾನ್ಸ್‌ ಕೂಡ ಇರಬೇಕಿತ್ತು. ಭಾರತ ಚಿತ್ರರಂಗದ ಪರಂಪರೆ ಪ್ರಕಾರ ಹಾಡುಗಳಿಲ್ಲದೇ ಚಿತ್ರಗಳಿಲ್ಲ. ಚಿತ್ರಗಳಿಲ್ಲದೇ ಹಾಡಿಲ್ಲ. ಈಗ ಐಟಂ ಸಾಂಗ್‌ ಎನ್ನುವುದನ್ನು ಮೊದಲು ಕ್ಯಾಬ್ರೆ ಡಾನ್ಸ್‌ ಎನ್ನುತ್ತಿದ್ರು. ವಿಜಯಲಲಿತಾ, ಜ್ಯೋತಿಲಕ್ಷ್ಮಿ, ಜಯಮಾಲಿನಿ….. ಇಂತಹ ಪರಂಪರೆಯನ್ನು ಹುಟ್ಟುಹಾಕಿದ್ದೆ ಜೇಡರ ಬಲೆ ಸಿನಿಮಾ. ಅದಕ್ಕೆ ಒಳ್ಳೆಯ ಸಂಗೀತ ಬೇಕಿತ್ತು. ಇಂಗ್ಲಿಷ್‌ ಧಾಟಿಯಲ್ಲಿರಬೇಕಿತ್ತು. ಅದನ್ನು ವೆಂಕಟೇಶ್‌ ಸಮರ್ಥವಾಗಿ ಕೊಟ್ಟಿದ್ದಾನೆ. ಅವರಿಗೆ ಸಮರ್ಥವಾಗಿ ಸಹಾಯ ಮಾಡಿದ್ದು ಇಳಯರಾಜ. ಇಳಯರಾಜ, ವೆಂಕಟೇಶ್‌ಗೆ ಅಸಿಸ್ಟೆಂಟ್‌. ವೆಂಕಟೇಶ್‌ ದ್ರೋಣಾಚಾರ್ಯ ಆದ್ರೆ, ಇವನು ಅರ್ಜುನ. ಗುರು, ಶಿಷ್ಯ ಪರಂಪರೆಯನ್ನು ಇಳಯರಾಜ, ವೆಂಕಟೇಶ್‌ ಅವರನ್ನು ಗಮನಿಸಿ ತಿಳಿದುಕೊಳ್ಳಬಹುದು. ಆಗಿನ ಕಾಲದಲ್ಲಿ ಇಳಯರಾಜ ಅವರಿಗೆ ದಿನಕ್ಕೆ 2 ರೂಪಾಯಿ ಕೊಡುತ್ತಿದೆವು. ಇಂಗ್ಲೆಂಡ್‌ನಲ್ಲಿ ಆರ್ಕೇಸ್ಟ್ರಾಕ್ಕೆ ಹೋಗಿ ಅವನು 20 ಕೋಟಿಯನ್ನು ತೆಗೆದುಕೊಂಡಿದ್ದಾನೆ. ಅದು ಬೇರೆ ಸಮಾಚಾರ. ಅವರವರ ಪ್ರತಿಭೆ ಮೇಲೆ ಹೋಗುತ್ತದೆ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಪ್ರತಿಭೆ ಜ್ವಾಲಾಮುಖಿಯ ಹಾಗೆ ಅದು ಸ್ಫೋಟಿಸಿತ್ತೆಂದರೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ದೊರೆ ಭಗವಾನ್‌ ಅವರು ನನಗೆ ಪ್ರೋತ್ಸಾಹ ನೀಡುತ್ತಿದ್ರು. ಹಾಡು ಹೇಳ್ತೇವೆ, ಗಿಟಾರ್ ಬಾರಿಸು ಎಂದು ಹೇಳುತ್ತಿದ್ರು ಎಂದು ಆತನೇ ಎಷ್ಟೋ ಕಡೆ ಹೇಳಿಕೊಂಡಿದ್ದಾನೆ.


ಚಿತ್ರರಂಗದಲ್ಲಿ ಐಟಂ ಸಾಂಗ್‌ ತಂದಂತಹ ಕ್ರೆಡಿಟ್‌, ಡಿಬಿಟ್‌ ಎರಡೂ ನಮಗೆ ಸಿಗಬೇಕು. ಐಟಂ ಸಾಂಗ್‌ ಚಿತ್ರರಂಗದಲ್ಲಿ ಅತಿರೇಕಕ್ಕೆ ಹೋಯ್ತು. ಐಟಂ ಸಾಂಗ್‌ ಇಲ್ಲದಿದ್ರೆ ನಿಮ್ಮ ಚಿತ್ರಗಳೇ ಬೇಡ ಎಂದು ಡಿಸ್ಟ್ರಿಬ್ಯೂಟರ್ಸ್‌ ಹೇಳುವ ಸ್ಥಿತಿಗೆ ತಲುಪಿತ್ತು. ಆಮೇಲೆ ಹಿರೋಯಿನ್‌ಗಳೇ ಐಟಂ ಸಾಂಗ್‌ ಮಾಡಲು ಶುರು ಮಾಡಿದ ಮೇಲೆ ಆ ಪರಂಪರೆ ನಿಂತುಹೋಯ್ತು. ನಮ್ಮನ್ನು ನೋಡಿಕೊಂಡು, ತೆಲುಗು ಚಿತ್ರರಂಗದವರು ಕೃಷ್ಣನನ್ನು ಹಾಕಿಕೊಂಡು ಅಂತಹ ಸಿನಿಮಾ ಮಾಡಿದ್ರು. ಆದರೆ, ಅದು ಯಶಸ್ಸು ಆಗಲಿಲ್ಲ. ಮಲಯಾಳಂನಲ್ಲಿ ಪ್ರೇಮ್‌ ನಜೀರ್‌ ಹಾಕಿಕೊಂಡು ಮಾಡಲು ಶುರು ಮಾಡಿದ್ರು, ತಮಿಳಿನಲ್ಲಿ ಜಯಶಂಕರ್‌, ಹಿಂದಿಯಲ್ಲಿ ಮಿಥುನ್‌ ಚಕ್ರವರ್ತಿಯನ್ನು ಹಾಕಿಕೊಂಡು ಮಾಡಲು ಶುರುಮಾಡಿದ್ರು. ರಾಜ್‌ಕುಮಾರ್‌ ಅವರು ಪ್ರಸ್ತುತ ಪಡಿಸಿದ ಹಾಗೆ ಯಾರೂ ಮಾಡಲಿಲ್ಲ. ಹಾಗಾಗಿ, ಯಾರಿಗೂ ಆ ಮಟ್ಟಿಗೆ ಯಶಸ್ಸು ಆಗಲಿಲ್ಲ.


ಜೇಡರ ಬಲೆ ಸಿನಿಮಾ ಯಶಸ್ಸು ‘ಸಿಐಡಿ99 ಗೋವಾ’ ಮಾಡಲು ಪ್ರೇರಣೆಯಾಯಿತು. ಜೇಮ್ಸ್‌ ಬಾಂಡ್‌ ಸಿನಿಮಾಗಳ ಟೈಟಲ್‌ ಕಾರ್ಡ್‌ಗಳಲ್ಲಿ ಕೊನೆಯಲ್ಲಿ ‘ಅವರ್‌ ನೆಕ್ಸ್ಟ್‌’ ಎಂದು ಹಾಕಿರುತ್ತಿದ್ರು. ಮುಂದಿನ ಸಿನಿಮಾವನ್ನು ಆಗಲೇ ಅದರಲ್ಲಿ ಹಾಕುತ್ತಿದ್ರು. ಹಾಗೆ ನಾವು ಕೂಡ ‘ಅವರ್‌ ನೆಕ್ಸ್ಟ್‌’ ನಮ್ಮ ಮುಂದಿನ ಸಿನಿಮಾ ‘ಸಿಐಡಿ99 ಗೋವಾ’ ಎಂದು ಹಾಕಿದ್ವಿ.


ಆಗ ಫಾರಿನ್‌ ಸಂಸ್ಕೃತಿ ಇದ್ದಿದ್ದು ಗೋವಾದಲ್ಲಿ ಮಾತ್ರವೇ. ಪೋರ್ಚುಗೀಸ್‌ ಕಾಲೊನಿ ಅದು. ಅಲ್ಲಿ ಕ್ಯಾಬ್ರೆ, ಪಬ್‌ ಕಲ್ಚರ್‌ ಎಲ್ಲ ಇದ್ದ ಕಾರಣ ಗೋವಾ ಎಂದು ಹಾಕಿಕೊಂಡ್ವಿ. ಪಿಕ್ಚರ್‌ ಕೂಡ ಶುರು ಮಾಡಿದ್ವಿ. ಬಸ್‌, ರೈಲು ಅನುಕೂಲ ಇರಲಿಲ್ಲ ಆಗ, ಕಾರುಗಳಲ್ಲೇ ಹೋಗಬೇಕಿತ್ತು. ನಾವು ಆರು ಕಾರುಗಳಲ್ಲಿ ಮದ್ರಾಸ್‌ನಿಂದ ಗೋವಾಕ್ಕೆ ಹೊರಟಿದ್ವಿ. ಆ ಸಿನಿಮಾದ ಹಿರೋಯಿನ್‌ ಲಕ್ಷ್ಮೀ. ಜೇಮ್ಸ್ ಬಾಂಡ್‌ ಸಿನಿಮಾಗಳಲ್ಲಿ ಒಂದೊಂದು ಸಿನಿಮಾಕ್ಕೆ ಬೇರೆ, ಬೇರೆ ಹೀರೊಯಿನ್‌ ಇರುತ್ತಿದ್ರು. ಹಾಗಾಗಿ ನಾವು ಹೊಸ ಹೀರೋಯಿನ್ ಹುಡುಕುತ್ತಿದ್ವಿ. ‘ಜೇಡರ ಬಲೆ’ಯಲ್ಲಿ ಜಯಂತಿ ಹಿರೋಯಿನ್‌.


ವಿಜಯವಾಹಿನಿ ಸ್ಟುಡಿಯೊದಲ್ಲಿ ವಿಜಯ ಸತ್ಯಂ ಎಂಬ ಸಹಾಯಕ ನಿರ್ದೇಶಕರಿದ್ರು. ಕನ್ನಡದವರು ಅವರು. ನಂತರ ಎರಡು ಸಿನಿಮಾವನ್ನು ಅವರು ನಿರ್ದೇಶನ ಮಾಡಿದ್ದಾರೆ. ರುಕ್ಮಿಣಿ ಎಂದು ತೆಲುಗು, ತಮಿಳು ನಟಿಯೊಬ್ಬರಿದ್ದಾರೆ. ಅವರು ಮಗಳಿಗೆ ಸಿನಿಮಾಕ್ಕೆ ಬರುವ ಆಸೆ ಇದೆ. ನೀವು ಸಂಪರ್ಕಿಸಿ ಎಂದ್ರು. ರುಕ್ಮಣಿಯವರನ್ನು ಹುಡುಕಿಕೊಂಡು ಹೋದ್ವಿ. ಅವರು ಸಿಕ್ಕಿದ್ರು. 2 ಗಂಟೆ ಆಗಿತ್ತು, 3 ಗಂಟೆಗೆ ಕಾನ್ವೆಂಟ್‌ನಿಂದ ಮಗಳು ಬರ್ತಾಳೆ ಕಾಯ್ರಿ ಅಂದ್ರು. ನಾವು ಕಾದೆವು. ಲಕ್ಷ್ಮೀ ಬಂದಳು. ಆಕಾಶ ನೀಲಿ ಬಣ್ಣದ ಯೂನಿಫಾರಂ, ಬಿಳಿ ಶರ್ಟ್‌ ಹಾಕಿಕೊಂಡಿದ್ಲು. ಆ ವಯಸ್ಸಿನಲ್ಲಿ ತುಂಬಾ ಆಕರ್ಷಕವಾಗಿದ್ದಳು. ನಾವು ಇಂಪ್ರೆಸ್‌ ಆದೆವು. 14–15 ವರ್ಷದ ಹುಡುಗಿ ಆಗ ಆಕೆ. ಮುಖದಲ್ಲಿ ಒಳ್ಳೆಯ ಕಳೆ ಇತ್ತು. ಸ್ಕೂಲ್‌ ಡ್ರೆಸ್‌ನಲ್ಲಿ ಬಹಳ ಚಿಕ್ಕವಳ ತರಹ ಕಂಡ್ಳು. ಹೇಗಪ್ಪ ಇವಳನ್ನು ಹಿರೋಯಿನ್‌ ತರಹ ಹಾಕಿಕೊಳ್ಳೋದು ಅನಿಸಿತು.


ಅವಳು ವೈ.ವಿ. ರಾವ್‌ ಅವರ ಮಗಳು. ಅವರು ಕನ್ನಡದ ಮೊದಲ ನಿರ್ದೇಶಕರು. ಹಾಗಾಗಿ ಆಕೆಗೆ ಕನ್ನಡದ ಗಂಧ ಒಂಚೂರು ಇತ್ತು. ಏನಮ್ಮ, ನಮ್ಮ ಸಿನಿಮಾದಲ್ಲಿ ನಟಿಸುತ್ತೀಯಾ? ರಾಜ್‌ಕುಮಾರ್‌ ಹೀರೊ, ಬಾಂಡ್‌ ಸಿನಿಮಾ ಅಂದ್ವಿ. ರಾಜ್‌ಕುಮಾರ್‌ ಅವರ ಸಿನಿಮಾನಾ! ಖಂಡಿತಾ ಮಾಡುತ್ತೇನೆ ಎಂದು ಉತ್ಸಾಹಭರಿತವಾಗಿ ಹೇಳಿದ್ಲು. ಆದ್ರೆ, ಕೆಲವು ನಿಯಮಗಳಿವೆ ಅಂದೆ. ಏನು ನಿಯಮ ಅಂದ್ಲು. ಮೊದಲನೇಯದು, ಈಜು ಉಡುಗೆ ತೊಡಬೇಕು. ಆದ್ರೆ, ಅಸಭ್ಯವಾಗಿ ತೋರಿಸಲ್ಲ. ಬಿಕಿನಿ ಹಾಕೊಲ್ಲ ಅಂದ್ವಿ. ಒನ್‌ಪೀಸ್‌ ಸೂಟ್‌ ಹಾಕ್ತೇವೆ ಒಪ್ಪಿಗೆ ಇದೇಯಾ ಅಂದ್ವಿ. ಹಾಕ್ತೇನೆ ಅದಕ್ಕೇನಂತೆ ಅಂದ್ಲು. ಈಜು ಬರಬೇಕು ಅದು ಎರಡನೇ ಷರತ್ತು ಅಂದ್ವಿ. ಫಸ್ಟ್‌ಕ್ಲಾಸ್‌ ಆಗಿ ಈಜು ಬರುತ್ತದೆ ಅಂದ್ಲು. ತುಂಡುಡುಗೆ ಹಾಕಿದಾಗ ಕಾಲೆಲ್ಲ ಚೆನ್ನಾಗಿರಬೇಕು ಅಂದ್ವಿ. ತಕ್ಷಣವೇ ಫ್ರಾಕ್‌ ಎತ್ತಿ, ನೋಡಿ, ನನ್ನ ತೊಡೆ ಚೆನ್ನಾಗಿದೆ ಅಂದು ಬಿಟ್ಲು. ಏನ್‌, ಬೋಲ್ಡ್‌ ಸರ್‌... ಆಯ್ತಮ್ಮ. ನೀನು ಓಕೆ. ಮಿಕ್ಕ ವಿಷಯವನ್ನು ನಿನ್ನ ತಾಯಿ ಹತ್ತಿರ ಬಂತು ಮಾತಾಡ್ತೇವೆ ಎಂದು ಬಂದು ಬಿಟ್ವಿ.


ಮೊದಲ ಮಹಡಿಯಲ್ಲಿತ್ತು ಅವರ ಮನೆ. ನಾವು ಮೆಟ್ಟಿಲಿಳಿದು ಕೆಳಗೆ ಬಂದ ತಕ್ಷಣವೇ, ದೊರೆ ಅವರು ನನ್ನ ಹೆಗಲ ಮೇಲೆ ಕೈ ಹಾಕಿ, ʼದಿಸ್‌ ಗರ್ಲ್‌ ಈಸ್‌ ಗೋಯಿಂಗ್‌ ಟು ಬಿಕಂ ಒನ್‌ ಆಫ್‌ ದಿ ಟಾಪ್‌ ಮೋಸ್ಟ್‌ ಹಿರೋಯಿನ್ ಆಫ್‌ ದಿ ಕನ್ನಡ ಫಿಲ್ಮ್‌ ಇಂಡಸ್ಟ್ರ್ರಿ’ ಎಂದ್ರು. ಯಾಕೆ ಎಂದೆ, ‘ಶೀ ಈಸ್‌ ವೇರಿ ಬೋಲ್ಡ್‌’ ಅಂದ್ರು. ಅವಳು ತುಂಬಾ ಆಕರ್ಷಕವಾಗಿದ್ದು, ಅವಳ ಮುಖ ನೋಡಿದ ತಕ್ಷಣವೇ ಗೊತ್ತಾಯ್ತು ಅಂದ್ರು. ಅವತ್ತು ಅವರು ಹೇಳಿದ್ದು ನಿಜ ಆಯ್ತು. ಹೀಗೆ ಅವರು ಕೆಲವರಿಗೆ ಹೇಳಿದ್ದು, ಅದು ನಿಜ ಆಗಿದೆ.


ಮುಂದುವರಿಯುವುದು...


ಸಂದರ್ಶನ: ಕೆ.ಎಸ್‌. ಪರಮೇಶ್ವರ್‌


27 views