ನನ್ನ ಗೆಳೆಯ ಜೇಬಲ್ಲಿ ಉಪ್ಪಿಟ್ಟು ತುಂಬ್ಕೊಂಡು ಬರೋನು…

ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಲೈಫ್ ಸ್ಟೋರಿ - ಭಾಗ 7ಕಂಪನಿ ನಾಟಕಗಳನ್ನ ನೋಡಿ ನೋಡಿ ನಾನೇ ಒಂದು ಕುರುಕ್ಷೇತ್ರದ ನಾಟಕ ಮಾಡ್ಕೊಂಡ್ಬಿಟ್ಟೆ. ‘ಕೌರವರ ಗರ್ವ ಭಂಗ’ಅಂತ. ಆರನೇ ಕ್ಲಾಸಲ್ಲಿ ನಾನೇ ‘ಶಿವಶಂಕರ ಸಮಿತಿ’ಅಂತ ಒಂದು ತಂಡವನ್ನ ಕಟ್ಕೊಂಡೆ.


ಪರಮ್: ಆರನೇ ಕ್ಲಾಸಲ್ಲೇ?


ಮಂಡ್ಯ ರಮೇಶ್: ಆರನೇ ಕ್ಲಾಸಲ್ಲೇ ನಾನೊಂದು ತಂಡ ಕಟ್ದೆ ಸಾರ್. ಅಲ್ಲಿ ನನ್ನ ಫ್ರೆಂಡ್ ಒಬ್ಬ ರುದ್ರೇಶ ಅಂತ ಅವರದ್ದು ಪ್ರೆಸ್ ಇತ್ತು. ಹಾಗಾಗಿ ಅವನು ಟಿಕೆಟ್ ಪ್ರಿಂಟ್ ಮಾಡಿಸ್ಕೊಂಡು ಬಂದ. ಸತೀಶ್ ಬೈಕಾಡಿ ಅಂತ ಒಬ್ಬ ಇದ್ದ ಅವರದ್ದು ಹೋಟ್ಲು ಇತ್ತು ಅವನು ಜೋಬೊಳಗೆಲ್ಲಾ ಉಪ್ಪಿಟ್ಟು, ಚಕ್ಕುಲಿ, ದಾರದುಂಡೆ ಎಲ್ಲಾ ತುಂಬ್ಕೊಂಡು ಬರ್ತಿದ್ದ. ಜೇಬಲ್ಲಿ ಉಪ್ಪಿಟ್ಟು ತುಂಬ್ಕೊಂಡು ಬರ್ತಿದ್ದ, ನಾವು ಅದನ್ನ ತಿನ್ನೋರು. ನನ್ನ ಜೊತೆ ಇನ್ನೂ ಬದುಕ್ತಾ ಇದ್ದಾನೆ ಅವನು. ಅವನು ಉಪ್ಪಿಟ್ಟು ಕೊಟ್ರೆ ಅವನನ್ನ ನಾಟಕಕ್ಕೆ ಸೇರಿಸ್ಕೊಳೋದು ನಾನು. ಅವನಿಗೊಂದು ಪಾತ್ರ. ಇನ್ನೊಬ್ಬ ಸುರೇಶ್ ಅಂತ ಅವನನ್ನ ಕಾಕ ಅಂತ ಕರೀತಿದ್ವಿ. ಅವನು ಮೇಕಪ್ ಮಾಡ್ತಿದ್ದ. ನಾಗೇಶ, ಚಿದಂಬರ, ಸತೀಶ ಈ ತರ ಈಶಗಳು ಬೇಕಾದಷ್ಟು ಜನ ಇದ್ರು ನನ್ನ ಜೊತೆ. ಸೀನಿ ಅಂತ ಒಬ್ಬ ತುಂಟ ಹುಡುಗ ಇದ್ದ. ಅದೆಷ್ಟೊಂದು ವೆರೈಟಿ ಕ್ಯಾರೆಕ್ಟರ್‍ಗಳೆಲ್ಲಾ ಇದ್ರು. ಮೋಹನ ಅಂತ ಒಬ್ಬ ಅವನು ಯಾವಾಗ್ಲೂ ಆಂಜನೇಯನ ರೋಲ್ ಮಾಡ್ತಿದ್ದ. ಯಾಕಂದ್ರೆ ಮೂತಿ ಹಾಗೇ ಇಟ್ಕೊತಾ ಇದ್ದ.


ಪರಮ್: ಮೇಕಪೇ ಬೇಡ?


ಮಂಡ್ಯ ರಮೇಶ್: ಮೇಕಪೇ ಬೇಡ. ಮೋಹಿನಿ ಬಸ್ಮಾಸುರ ನಾಟಕ ಆಗೋದು. ಆ ಕಾಲದಲ್ಲಿ ನಾನೇ ದುರ್ಯೋದನ. ನಾನು ಒಣಗಿ ನಾಯಿಗೆ ಹೊಡೆಯೋ ಕೋಲು ಇದ್ದಂಗಿದ್ದೆ ಸಾರ್. ಆದರೆ ನಾಟಕ ಬರೆದೋನು ನಾನಲ್ವಾ? ತಂಡ ಕಟ್ದೋನು ನಾನಲ್ವಾ? ಅದಷ್ಟೂ ಡೈಲಾಗ್ ನಾನೇ ಬರ್ಕೊಂಡಿರೋದ್ರಿಂದ ನನಗೇ ಗೊತ್ತಿರೋದಲ್ವಾ? ಹಂಗಾಗಿ ನಾನೇ ಕುರುಕ್ಷೇತ್ರದಲ್ಲಿ ದುರ್ಯೋದನ. “ನಾನು ಒಂದು ಇಂಚು ಜಾಗವನ್ನು ಕೊಡಲಾರೆ”ಹೀಗೆಲ್ಲಾ ಮಾತಾಡ್ತಾ ಇದ್ದೆ. ಅವಾಗ್ಲೇ ಟಿಕೇಟ್ ಅಷ್ಟೂ ಸೋಲ್ಡ್ ಔಟ್ ಆಯ್ತು ಸಾರ್. ಇಪ್ಪತ್ತು ರೂಪಾಯಿ ಕಲೆಕ್ಟ್ ಆಗಿತ್ತು. ಅದರಲ್ಲಿ ಹತ್ತು ರೂಪಾಯಿ ನಮ್ಮ ಶಿವಶಂಕರ ಸಮಿತಿಗೆ. ಜಾಗರಣೆ ಮಾಡ್ತೀವಿ ಶಿವರಾತ್ರಿಗೆ ಅಂತ ಹತ್ತು ರೂಪಾಯಿ ಎತ್ತಿಟ್ಬಿಟ್ಟು ಇನ್ನೂ ಹತ್ತು ರೂಪಾಯಿಗೆ ಹೋಟ್ಲಲ್ಲಿ ಕದ್ದು ಕದ್ದು ತಿಂಡಿ ತಿನ್ತಿದ್ವಿ. ಆಕಾಲದಲ್ಲಿ ಹೋಟ್ಲಲ್ಲಿ ತಿಂಡಿ ತಿನ್ನೊದು ಅಂದ್ರೆ ಅವಮಾನ ಅಂತ. ಮನೆಯಿಂದ ಹೊರಗೆ ಯಾರೂ ತಿನ್ಬಾರ್ದು ಅಂತ. ಸಣ್ಣ ಊರಲ್ವಾ ನಾಗಮಂಗಲ?


ಪರಮ್: ಯಾರೇ ಏನೇ ಮಾಡಿದ್ರೂ ಗೊತ್ತಾಗ್ಬಿಡುತ್ತೆ?


ಮಂಡ್ಯ ರಮೇಶ್: ಗೊತ್ತಾಗ್ಬಿಡುತ್ತೆ. ಎಲ್ಲಾ ಕರ್ದು ಉಗಿಯೋರು, ಬೈಯ್ಯೋರು.ಮುಂದುವರೆಯುವುದು…


37 views