ನನ್ನ ಜೊತೆಗಿದ್ದ ಪೊಲೀಸನೇ ಕಳ್ಳನಾಗಿದ್ದ

ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 73
ಕೊಪ್ಪಳದ ಊರಾಚೆಯ ಗದಗ ರಸ್ತೆಯಲ್ಲಿ, ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಹ್ಲಾದ್‌ಆಚಾರ್‌ಅವರ ಮನೆಯ ಪಕ್ಕದಲ್ಲಿ ಹೊಸ ಮನೆಯೊಂದನ್ನು ಕಟ್ಟಿಸಿದ್ರು. ಪಕ್ಕದ ಮನೆ ನನಗೆ ಕೊಟ್ರು. ಕಲಾವಿದನೆಂಬ ಗೌರವದಿಂದ ಅಲ್ಲಿ ಇರಲು ಅವಕಾಶ ಮಾಡಿಕೊಟ್ರು. ನನ್ನ ಜೊತೆಗೆ ಇನ್ನೊಬ್ಬ ವ್ಯಕ್ತಿ ಇದ್ದ. ಅವನು ಪೊಲೀಸ್‌ಡಿಪಾರ್ಟ್‌ಮೆಂಟ್‌ನಿಂದ ಕೆಲಸ ಕಳೆದುಕೊಂಡವನು. ಮೂರ್ನಾಲ್ಕು ದಿವಸದಿಂದ ಜೊತೆಗಿದ್ವಿ. ಸಿನಿಮಾ ನೋಡಲು ಹೋಗೋಣ ಎಂದು ಒಮ್ಮೆ ಹೇಳಿದ. ನಾನು ಖುಷಿಯಿಂದಲೇ ಹೋದೆ. ರಾತ್ರಿ ಒಂದು ಗಂಟೆಗೆ ಹೋಟೆಲ್‌ಗೆ ಕರೆದುಕೊಂಡು ಹೋಗಿ ಉಪ್ಪಿಟ್ಟು ತಿನ್ನು ಎಂದು ಹಟ ಮಾಡಿದ. ಬೇಡ ಅಂದ್ರು ಕೇಳಲಿಲ್ಲ.


ಮನೆಯ ಮುಂದೆ ಪಿಡಬ್ಲ್ಯೂಡಿ ಕ್ವಾರ್ಟಸ್‌ಇತ್ತು. ಮನೆ ಹತ್ತಿರ ಸೈಕಲ್‌ನಲ್ಲಿ ಬಂದಾಗ, ಹಾವು ಸತ್ತಿದೆ ನೋಡು ಕಪ್ಪೆ ನುಂಗಿರುವ ಹಾವಿದು ಎಂದ. ನಾನು ಅಲ್ಲಿ ನೋಡು ನಮ್ಮನೆಯೊಳಗೆ ಲೈಟ್ ಉರಿಯುತ್ತಿದೆ ಎಂದೆ. ಲೈಟ್‌ನೀವೇ ಆನ್‌ಮಾಡಿ ಬಂದಿರಬೇಕು ಎಂದ. ನಾನು ಹಾವಿನ ಕಥೆ ಬಿಡಪ್ಪ ಎಂದು ಮನೆಯ ಬಳಿ ಓಡಿದೆ. ಮನೆ ಹತ್ತಿರ ಹೋಗಿ ನೋಡಿದ್ರೆ, ಲೈಟ್ ಉರಿಯುತ್ತಿತ್ತು. ನನಗೆ ತಕ್ಷಣವೇ ಏನು ಯೋಚನೆ ಬಂತೋ ಗೊತ್ತಿಲ್ಲ. ನಂ. 8 ನೀನು ಈ ಕಡೆಯಿಂದ ಬಾ, 64 ನೀನು ಆ ಕಡೆಯಿಂದ ಬಾ, ಸೀತಪ್ಪ ಅಟ್ಯಾಕ್‌ಮಾಡು ಎಂದು ಪೊಲೀಸ್‌ಆಫೀಸರ್ ತರಹ ಕೂಗಿಕೊಂಡೆ. ಮೈಗೆ ಎಣ್ಣೆ ಹಚ್ಚಿಕೊಂಡಿದ್ದ, ಮೂರು ಜನ ಓಡಿಹೋದ್ರು. ನಾನು ಅವರ ಹಿಂದೆ ಓಡಿಹೋದೆ. ಮುಂದೆ ಕ್ವಾಟ್ರಸ್‌ಇತ್ತಲ್ವಾ, ಹಾಗಾಗಿ ಜನ ನನ್ನ ಹಿಂದೆ ಬಂದಿರುತ್ತಾರೆ ಎಂದುಕೊಂಡಿದ್ದೆ. ಒಂದು ಹಳ್ಳ ಇತ್ತು ಜಂಪ್‌ಮಾಡಿ ಓಡಿದೆ, ಎರಡು ಬ್ಯಾಗ್‌ಬಿಸಾಕಿ, ಬೆಟ್ಟದ ಮೇಲೆ ಅವರು ಹತ್ತಿದ್ರು. ನನಗೆ ಹತ್ತಲು ಆಗುತ್ತಿರಲಿಲ್ಲ. ತಿರುಗಿ ನೋಡಿದ್ರೆ, ಒಬ್ಬ ಕೂಡ ನನ್ನ ಹಿಂದೆ ಇರಲಿಲ್ಲ. ಆ ಕಳ್ಳರು ಎಲ್ಲ ಮನೆಯ ಬಾಗಿಲ ಚಿಲಕಕ್ಕೆ ಕಡ್ಡಿ ಹಾಕಿದ್ರು. ಯಾರೂ ಆಚೆಗೆ ಬರಲು ಆಗುತ್ತಿರಲಿಲ್ಲ. ಬಂದವರು ದರೋಡೆಕೋರರು.


ಅಷ್ಟು ದಿವಸ ಧೀರನ ತರಹ ಇದ್ದ ನಾನು ತರಗೆಲೆ ತರಹ ನಡುಗಿ ಹೋದೆ. ಅವರು ನನ್ನ ಮುಖವನ್ನು ನೋಡಿದ್ರು. ಮತ್ತೆ ದಾಳಿ ಮಾಡಬಹುದು ಎಂಬ ಭಯವಿತ್ತು ನನಗೆ. ನನ್ನ ಫ್ರೆಂಡ್ಸ್‌ಎಲ್ಲ ಟ್ರಾನ್ಸ್‌ಫರ್‌ಆಗಿ ಹೋಗಿದ್ರು. ನಾಲ್ಕು ಗಂಟೆಗೆ ಪೊಲೀಸ್‌ಕಾನ್‌ಸ್ಟೆಬಲ್‌ಬಂದ್ರು. ದುಡ್ಡೇನಾದ್ರೂ ಹೋಗಿದ್ದೀಯಾ ಎಂದ್ರು. ಹಳೆ ಜೇಬಿನಲ್ಲಿ 3.50 ಸಾವಿರ ಇಟ್ಟಿದ್ದೆ. ಅದು ದರೋಡೆಕೋರರ ಕೈಗೆ ಸಿಕ್ಕಿರಲಿಲ್ಲ. ಅಲ್ಲಿಯೇ ಇತ್ತು. ಒಂದು ದೂರು ಬರೆದುಕೊಡ್ರಿ ಎಂದ್ರು. ಸರ್‌, ಯಾರು ಸರ್ ಇದನ್ನು ಮಾಡಿರೋದು ಎಂದೆ. ಸಂಸರ್ಗ ಸರಿಯಾಗಿರಬೇಕು ಸರ್‌.. ಎಂದು ಹೇಳಿ ಹೊರಟು ಹೋದ್ರು.

ನನ್ನ ಜೊತೆ ಇದ್ದ ವ್ಯಕ್ತಿ ಹೈವೇ ಕಳ್ಳರ ಗ್ಯಾಂಗ್‌ಗೆ ಸಪೋರ್ಟ್‌ಮಾಡುತ್ತಿದ್ದ ಕಾರಣಕ್ಕೆ ಅವನನ್ನು ಪೊಲೀಸ್‌ಇಲಾಖೆಯಿಂದ ಅಮಾನತು ಮಾಡಿದ್ರು. ಅದು ನನಗೆ ಗೊತ್ತಿರಲಿಲ್ಲ. ಅವನು ಮನೆಗೆ ಬಂದಿದ್ದಾಗ ನಾನು ಮೇಲಿಂದ ಒಂದು ಬಾಕ್ಸ್‌ತೆಗೆದೆ. ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಅಫಜಲ್‌ಖಾನ್‌ಪಾತ್ರ ಮಾಡಿದ್ದೆ. ಪಾತ್ರಕ್ಕಾಗಿ ಮಾಡಿಸಿದ್ದ ಕಿರೀಟ ಇತ್ತು. ಡಾಬು ಸೇರಿದಂತೆ ಹಲವು ಸಾಮಗ್ರಿ ಇತ್ತು. ಏನ್ರಿ ಇದು ಎಂದು ಅವ ಕೇಳಿದ್ದ. ಇದೆಲ್ಲ ನನ್ನ ತಾತನ ಆಸ್ತಿ ಎಂದಿದ್ದೆ. ಬಂಗಾರದ ಎಂದಿದ್ದ, ಹೌದು ಎಂದಿದ್ದೆ ತಮಾಷೆಗೆ. ಅವನು ಅದನ್ನು ನಿಜ ಎಂದುಕೊಂಡಿದ್ದ. ನನಗೆ ನಿಧಿ ಸಿಕ್ಕಿದೆ ಎಂದುಕೊಂಡಿದ್ದ. ಅದನ್ನು ಕಳುವು ಮಾಡಿಸಲು ಹೀಗೆ ಮಾಡಿದ್ದ ಎಂಬುದು ನಂತರ ಗೊತ್ತಾಯಿತು. ಕಿನ್ನಾಳದಲ್ಲಿ ಅದನ್ನು ಮಾಡಿಸಿದ್ದು, ಅವೆಲ್ಲ ಬಂಗಾರವೇ ಎನಿಸುವಂತಿರುತ್ತಿತ್ತು. ಹೇಗಪ್ಪ ಈ ಊರಲ್ಲಿ ಬದುಕುವುದು ಎನ್ನುವಂತಾಯಿತು. ಆಫೀಸಿಗೆ ಹೋದಾಗ ನನಗೆ ಬೆಂಗಳೂರಿಗೆ ಟ್ರಾನ್ಸ್‌ಫರ್‌ಆಗಿರುವ ಲೆಟರ್‌ಕೊಟ್ರು.ಮುಂದುವರೆಯುವುದು...

29 views