ನನ್ನ ತಂದೆ ಮಾಡಿದ ಈ ಪುಣ್ಯದ ಕೆಲಸಗಳು ಇಂದು ನನ್ನನ್ನ ಬೆಳೆಸಿವೆ

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 61
ನನ್ನ ಸ್ನೇಹಿತನೊಬ್ಬ ಮಾವಿನ ಹಣ್ಣನ್ನು ಮಾರುತ್ತಿದ್ದ. ಅವನಿಗೆ ಕೊಡಬೇಕಾದವರು ದುಡ್ಡು ಕೊಟ್ಟಿರಲಿಲ್ಲ. ಮೈಸೂರಿನ ಕೆ.ಆರ್‌.ಮಾರ್ಕೆಟ್‌ ಹಿಂದೆ ಮದೀನಾ ಹೋಟೆಲ್‌ ಎಂದಿತ್ತು. ನಿನಗೆ ಮಲಯಾಳಂ ಬರುತ್ತದೆ ಅಲ್ವಾ ಹಾಗಾಗಿ ನೀನೇ ಹೋಗಿ ಮಾತಾಡು ಎಂದು ಅವನು ಹೇಳಿದ. ಸರಿ ಎಂದು ಹೋದೆ. ಮಾತನಾಡುವಾಗ ಆ ಹೋಟೆಲ್‌ ಮಾಲೀಕ, ನೀನು ಪಂಡಿತರ ಮಗ ಅಲ್ವಾ ಎಂದ್ರು. ಹೌದು, ಎಂದೆ. ತಕ್ಷಣವೇ ಕುರ್ಚಿ ಹಾಕಿ ಕೂರಿಸಿದ್ರು. ಆ ಕಾಲಕ್ಕೆ 10 ಸಾವಿರ ದುಡ್ಡು. ಅದೆನ್ನೆಲ್ಲ ಕೊಟ್ಟ. ಒಂದು ಬುಟ್ಟಿ ಹಣ್ಣು ನನಗೆ ಕೊಟ್ಟು ಕಳುಹಿಸಿದ್ರು.


‘ನನಗೆ ಚಿಕನ್‌ ಪಾಕ್ಸ್‌ ಆದಾಗ, ನನ್ನ ರೂಮ್‌ನಲ್ಲಿದ್ದವರು ಹೊರಗಡೆ ಹಾಕಿದ್ರು. ಆಗ ಪಂಡಿತರೇ ಬಂದು ಟಾಂಗಾ ಗಾಡಿಯಲ್ಲಿ ನನ್ನನ್ನು ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದ್ರು. ಅವರಿಂದಲೇ ನಾನು ಇವತ್ತು ಇಷ್ಟು ದೊಡ್ಡ ಜಾಗದಲ್ಲಿ ಕೂತಿರುವುದು’ ಎಂದ್ರು. ಅಪ್ಪ ಮಾಡಿದ ಕೆಲಸಕ್ಕೆ ನನಗೂ ಗೌರವ ಸಿಗುತ್ತದಾ ಎಂದು ಆಗ ನನಗೆ ಅನಿಸಿತು.


ಊಟದ ಸಮಯಕ್ಕೆ ಚಿಕಿತ್ಸೆಗೆಂದು ಬರುವವರಿಗೆ ಅಪ್ಪ ಊಟ ಹಾಕದೇ ಕಳುಹಿಸುತ್ತಿರಲಿಲ್ಲ. ನಾನು ಮೊದಲು ಅನುಕರಣೆ ಮಾಡಿದ್ದು, ತಂದೆಯ ಧ್ವನಿಯನ್ನೇ. ಆಗಿನ್ನು ನಾನು ಚಿಕ್ಕವನು. ನಾನು ತಂದೆಯ ಟೋಪಿ ಹಾಕಿಕೊಂಡು ಕುರ್ಚಿಯ ಮೇಲೆ, ಮುಖ ಮುಚ್ಚುವಂತೆ ಪೇಪರ್ ಇಟ್ಕೊಂಡು ಕೂರುತ್ತಿದ್ದೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುವವರು ತಂದೆಯೆಂದು ನನ್ನ ಬಳಿ ಸಮಸ್ಯೆ ಹೇಳುತ್ತಿದ್ರು. ಮೊದಲು ಅವರಿಗೆ ಗೊತ್ತಾಗದಿದ್ರೂ, ಚಿಕ್ಕ ಹುಡುಗನ ಧ್ವನಿಯನ್ನು ಕಂಡು ಹಿಡಿಯುತ್ತಿದ್ರು. ಆಗ ನಾನು ನಾಲ್ಕನೇ ತರಗತಿಯಲ್ಲಿದ್ದೆ.


ತಂದೆಯವರು ಹೀಗೆ ಬಂದವರಿಗೆ ಕೊಟ್ಟು, ಕೊಟ್ಟು ಸುಮಾರು ಆಸ್ತಿಯನ್ನೆಲ್ಲ ಮಾರಿಕೊಂಡ್ರು. ಚಿಕಿತ್ಸೆಗೆಂದು ಮಡಿಕೇರಿಯಿಂದ ಬರುವವರು ಕಿತ್ತಳೆ, ದೊಡ್ಡ ಬಳ್ಳಾಪುರದಿಂದ ಬರುವವರು ಚಕೋತ.. ಹೀಗೆ ಹಣ್ಣುಗಳನ್ನು ತರುತ್ತಿದ್ರು. ಆದರೆ, ತಂದೆ ಕೆಲವು ಕಾಯಿಲೆಗಳಿಗೆ ಪ್ರತಿಫಲ ತೆಗೆದುಕೊಳ್ಳುತ್ತಿರಲಿಲ್ಲ. ಕ್ಲಿನಿಕ್‌ ಹೊರಗೆ ಇಡಲು ಹೇಳುತ್ತಿದ್ರು. ಬರುವ ರೋಗಿಗಳಿಗೆ ಅದನ್ನು ತೆಗೆದುಕೊಂಡು ಹೋಗಲು ಹೇಳುತ್ತಿದ್ರು. ಒಮ್ಮೆ ಒಬ್ಬ ಮಹಿಳೆಗೆ ಹಣ್ಣುಗಳನ್ನು ತಿನ್ನು ಎಂದ್ರು. ಅವರು ಯಾವ ಹಣ್ಣು ತಿನ್ನಬೇಕು ಎಂದು ಕೇಳಿದ್ರು. ಅದಕ್ಕೆ ಅಪ್ಪ ಹೊರಗೆ ಇವೆ ತೆಗೆದುಕೊಂಡು ಹೋಗಿ ಅಂದಿದ್ರು. ಆಕೆ ಒಂದು ವಾರದ ಮೇಲೆ ಬಂದು ಹೊಟ್ಟೆ ಸರಿಯಿಲ್ಲ. ಲೂಸ್‌ ಮೋಷನ್ ಶುರುವಾಗಿದೆ ಹಣ್ಣು ತಿಂದ ಮೇಲೆ ಎಂದು ಹೇಳಿದಳು. ಯಾವ ಹಣ್ಣು ತೆಗೆದುಕೊಂಡು ಹೋಗಿದ್ದೆ ಎಂದು ಅಪ್ಪ ಕೇಳಿದ್ರು, ಅದಕ್ಕೆ ಆಕೆ ಹುಣಸೇ ಹಣ್ಣು ಎಂದಿದ್ದಳು. ಈ ವಿಷಯಕ್ಕೆ ನಾವು ತಂದೆಯನ್ನು ತಮಾಷೆ ಮಾಡುತ್ತಿದ್ವಿ. ಆ ಕಾಲದಲ್ಲಿ ವೈದ್ಯರನ್ನು ಸ್ವಾಮಿಗಳನ್ನು ನೋಡಲು ಬರುವಂತೆ ಬರುತ್ತಿದ್ರು.


ನಾಲ್ಕು ಜನಕ್ಕೆ ದಾನ ಮಾಡುವುದರಿಂದ ನಮ್ಮ ಮಕ್ಕಳಿಗೆ ಉಪಯೋಗವಾಗುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ನನ್ನ ತಂದೆ ಯಾರ‍್ಯಾರಿಗೆ ಒಳ್ಳೆಯದು ಮಾಡಿದ್ರೋ ಅವರೆಲ್ಲ ದೇಶ, ರಾಜ್ಯಗಳ ವಿವಿಧ ಭಾಗಗಳಲ್ಲಿ ಇದ್ದಾರೆ. ಹಾಗಾಗಿಯೇ ನನಗೆ ರಾಜ್ಯ, ವಿದೇಶಗಳನ್ನು ಸುತ್ತುವ ಭಾಗ್ಯ ದೊರಕಿದೆ. ನಾನು ಯಾವುದೇ ಊರಿಗೆ ಹೋದರೂ, ಜನರು ನನಗಾಗಿ ಕಾದು ಕರೆದುಕೊಂಡು ಹೋಗ್ತಾರೆ. ಸಾಮಾನ್ಯರ ಜೊತೆಗೆ ಲಕ್ಷಾಧೀಶ್ವರರು, ಕ್ಲಬ್‌ ಪ್ರೆಸಿಡೆಂಟ್‌, ಡಾಕ್ಟರ್‌... ಹೀಗೆ ಹಲವರು ಕಾದು ಐಬಿವರೆಗೆ ಕರೆದುಕೊಂಡು ಹೋಗಿ, ಊಟ ಕೊಡಿಸುತ್ತಾರೆ. ಮನೆಗೆ ಕರೆದುಕೊಂಡು ಹೋಗಿ ಆತಿಥ್ಯ ಮಾಡುತ್ತಾರೆ. ಅವರ ಅಜ್ಜ, ಅಪ್ಪ ಯಾರೋ ನನ್ನ ಅಪ್ಪನಿಂದ ಸಹಾಯ ಪಡೆದಿದ್ದಾರೆ ಎಂಬ ಕಾರಣಕ್ಕೆ ಅವರು ಅಷ್ಟು ಪ್ರೀತಿ ತೋರಿಸುತ್ತಾರೆ.ಮುಂದುವರೆಯುವುದು...

25 views