ನನ್ನ ಮುಖ ಎಷ್ಟು ಅಗಲವಾಗಿರುತ್ತದೋ ಅದೇ ಗಾತ್ರದಲ್ಲಿ ಅಂಬರೀಷ್‌ ಅವರದು ಇರಬೇಕು ಎಂದು ರಾಜ್‌ಕುಮಾರ್‌ ಹೇಳಿದ್ರು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 36


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಒಂದು ದಿನ ಪಾರ್ವತಮ್ಮನವರು ಏನಾದ್ರು ಕಥೆ ಮಾಡು ನಿಮ್ಮ ಅಣ್ಣನಿಗೆ. ಕಥೆ ಹುಡುಕುತ್ತಿದ್ದೇನೆ ಸಿಗುತ್ತಿಲ್ಲ ಅಂದ್ರು. ಆಗ ನಾನು ‘ಒಡಹುಟ್ಟಿದವರು’ ಕಥೆ ಬರೆದೆ. ಆ ಕಥೆ ರಾಜ್‌ಕುಮಾರ್‌, ಪಾರ್ವತಮ್ಮನವರಿಗೆ ಇಷ್ಟ ಆಯ್ತು. ಕಥೆ ಫಸ್ಟ್‌ಕ್ಲಾಸ್‌ ಆಗಿದೆ ಎಂದು ಉದಯ್‌ಶಂಕರ್‌ ಹೇಳಿದ. ಪಿಕ್ಚರ್ ಶುರುವಾಯ್ತು. ತಮ್ಮನ ಪಾತ್ರಕ್ಕೆ ಯಾರನ್ನು ಹಾಕುವುದು ಎಂದು ಯೋಚಿಸುತ್ತಿದ್ದಾಗ ಅಂಬರೀಷ್‌ ಅವರನ್ನು ಹೋಗಿ ಕೇಳಿ ಎಂದು ರಾಜ್‌ಕುಮಾರ್‌ ಅವರೇ ಸಲಹೆ ಕೊಟ್ಟರು.


ಒಡಹಟ್ಟಿದವರು ಸಿನಿಮಾದಲ್ಲಿ ನಟಿಸಲು ಅಂಬರೀಷ್‌ ಅವರನ್ನು ಕೇಳಿದಾಗ, ‘ಅಣ್ಣಾ ಕರೆದ್ರೆ ನಾನು ಬರದೇ ಇರುತ್ತೇನಾ’ ಎಂದು ಖುಷಿಯಿಂದ ಒಪ್ಪಿಕೊಂಡ್ರು. ಪೋಸ್ಟರ್‌, ಪೇಪರ್‌ ಸೇರಿದಂತೆ ಯಾವುದರಲ್ಲಿಯೇ ನೀವು ಪ್ರಚಾರ ಕೊಟ್ಟರೂ ನನ್ನ ಮುಖ ಎಷ್ಟು ಅಗಲವಾಗಿರುತ್ತದೋ ಅದೇ ಗಾತ್ರದಲ್ಲಿ ಅಂಬರೀಷ್‌ ಅವರದು ಇರಬೇಕು ಎಂದು ರಾಜ್‌ಕುಮಾರ್‌ ಹೇಳಿದ್ರು. ಒಂದು ದಿನ ನಾನು ರಾಜ್‌ಕುಮಾರ ಕಪಾಲಿ ಥಿಯೇಟರ್‌ ಬಳಿ ಹೋಗುತ್ತಿದೆವು. ಆಗ ನಾನು ‘ಮುತ್ತುರಾಜಣ್ಣ ಇಲ್ಲಿ ನಿಮ್ಮ 65 ಕಟೌಟ್‌ ಹಾಕಿಸುತ್ತೇನೆ’ ಎಂದೆ. ಅದಕ್ಕವರು ಅಂಬರೀಷ್‌ ಅವರದು 65 ಅಡಿ ಕಟೌಟೇ ಇರಬೇಕು. ಒಂದು ಅಡಿ ಕಡಿಮೆ ಆದರೂ ನಾನೇ ಬಂದು ನನ್ನ ಕಟೌಟ್‌ ಇಳಿಸುತ್ತೇನೆ ಎಂದ್ರು. ಅಂತಹ ಪರಿಜ್ಞಾನ ಇರುವವರು ಬಹಳ ಕಡಿಮೆ.


ಒಡಹುಟ್ಟಿದವರು ಎಲ್ಲ ಪೋಸ್ಟರ್‌ಗಳಲ್ಲಿಯೂ ಇಬ್ಬರು ನಟರ ಮುಖವನ್ನು ಒಂದೇ ಗಾತ್ರದಲ್ಲಿ ಹಾಕಲಾಗಿದೆ. ರಾಜ್‌ಕುಮಾರ್‌ ಅವರು ಹೇಳುವುದರಲ್ಲಿ ಯಾವಾಗಲೂ ನ್ಯಾಯ ಇರುತ್ತಿತ್ತು. ಅನ್ಯಾಯದ ಮಾತನ್ನು ಯಾವತ್ತು ಅವರು ಆಡಿಲ್ಲ.
ಮುಂದುವರೆಯುವುದು...

15 views