ನನ್ನ ಮಿಮಿಕ್ರಿ ನೋಡಿ ಅಣ್ಣಾವ್ರು ಹೇಳಿದ ಆ ಮಾತಿಗೆ ಅತ್ತುಬಿಟ್ಟಿದ್ದೆ

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 14ಧೃವತಾರೆ ಸಿನಿಮಾದಲ್ಲಿ ನಟಿಸಲು ಕರೆದ್ರು. ಚಿತ್ರೀಕರಣದ ಸಮಯದಲ್ಲಿ ಬಿಡುವಿನ ವೇಳೆ ಎಲ್ಲರ ಮುಂದೆ ಮಿಮಿಕ್ರಿ ಮಾಡುತ್ತಿದ್ದೆ. ರಾಜ್‌ಕುಮಾರ್‌ ಅವರು ಕಾಸ್ಟ್ಯೂಮ್‌ ರೂಮ್‌ನಲ್ಲಿ ಕೂತಿದ್ರು. ನಾನು ಏನೊ ತೆಗೆದುಕೊಂಡು ಬರಲು ಹೋದೆ. ಅವರಿಗೆ ಯಾರೋ ಮಿಮಿಕ್ರಿ ಮಾಡಿದ್ದನ್ನು ಹೇಳಿಬಿಟ್ಟಿದ್ರು. ನಾನು ಹೋದಾಗ ಅವರು, ಎಲ್ಲರಿಗೂ ಕಾಮಿಡಿ ಮಾಡಿ ತೋರಿಸಿದ್ರಂತೆ. ನಾವೇನು ಮಾಡಿದ್ದೇವೆ. ನಮಗೂ ತೋರಿಸಿ ಎಂದವರೇ, ಕಲಾವಿದರಿಗೆ ಪ್ರೇಕ್ಷಕರು ಬೇಕು ಕರೆಯಿರಿ ಎಲ್ಲರನ್ನೂ ಅಂದ್ರು. ಎಲ್ಲ ಬಂದು ನಿಂತುಕೊಂಡ್ರು.


ಹಿಂದಿ ನಟರನ್ನೆಲ್ಲ ಅನುಕರಣೆ ಮಾಡಿದೆ. ನಾನು ಒಬ್ಬೊಬ್ಬರ ಅನುಕರಣೆ ಮಾಡಿದಂತೆ ಅವರು ಅವರ ಕಥೆಗಳನ್ನು ಹೇಳುತ್ತಿದ್ರು. ಹಿಂದಿ ಭಾಷೆಯ ಮೇಲಿನ ನನ್ನ ಹಿಡಿತವನ್ನು ಮೆಚ್ಚಿಕೊಂಡ್ರು. ಎಲ್ಲರದು ಮಾಡಿ ಸುಮ್ಮನೆ ನಿಂತೆ. ರಾಜ್‌ಕುಮಾರ್‌ ಅವರದು ಮಾಡ್ತಿರಂತೆ ಅಂದ್ರು. ಅದಕ್ಕೆ ಇಲ್ಲ ಅಣ್ಣಾ, ಅಂಬರೀಷ್‌ ಅವರದು ಮಾಡುತ್ತೇನೆ ಎಂದು ಹೇಳಿ ಮಾಡಿದೆ. ಅಂಬರೀಷ್‌ ಅವರಿಗಿಂತ ಚೆನ್ನಾಗಿಯೇ ಅವರನ್ನೇ ಅನುಕರಿಸುತ್ತೀರಿ ಎಂದ್ರು. ಶಂಕರ್‌ನಾಗ್‌ ಅವರನ್ನು ಅನುಕರಿಸಿದೆ. ರಾಜ್‌ಕುಮಾರ್‌ ಅವರದು ಎಂದ್ರು. ನಾನು ಇಲ್ಲ ಎಂದ್ರು ಬಿಡಲಿಲ್ಲ. ವಿಷಲ್‌ ಹಾಕಿ ಪ್ರೇಕ್ಷಕರು ಕೇಳುತ್ತಿದ್ದಾರೆ ಎಂದ್ರು. ‘ನೋಡ್ರಿ ಇಷ್ಟು ಬಲವಂತ ಮಾಡಬೇಡಿ. ತಮ್ಮಂಥ ದೊಡ್ಡವರ ಮುಂದೆ ನಾವು ಪುಟ್ಟ ಕಲಾವಿದರು’ ಎಂದು ಅವರನ್ನು ಅನುಕರಣೆ ಮಾಡಿದೆ. ಅವರ ಹೊಗಳಿಕೆಯ ಮಾತುಗಳನ್ನು ಕೇಳಿ ನನ್ನ ಕಣ್ಣಲ್ಲಿ ನೀರು ಬಂತು. ಕೋಟಿ ಜನರನ್ನು ರಂಜಿಸಿರುವ ಕಲಾವಿದ ನನ್ನ ನಟನೆಯನ್ನು ನೋಡಿ ಎಂಥ ಕಲೆ ಎಂದು ಹೊಗಳಿದಾಗ ನನಗೆ ಆಸ್ಕರ್‌ ಪ್ರಶಸ್ತಿಯೇ ಸಿಕ್ಕಷ್ಟು ಖುಷಿಯಾಯ್ತು. ಹಲವಾರು ವರ್ಷ ತಪಸು ಮಾಡಿರುವುದರ ಫಲವಿದು. ಹುಡುಕಾಟಕ್ಕೆ ಸಿಗುವುದಿಲ್ಲ ಇವೆಲ್ಲ. ಎಷ್ಟು ದೊಡ್ಡ ಸಾಧನೆ ಅಲ್ವಾ ಇದು ಎಂದ್ರು. ನನಗೆ ಗಂಟಲಿನವರೆಗೂ ನೀರು ತುಂಬಿತ್ತು. ಮಾತನಾಡಲು ಆಗಲೇ ಇಲ್ಲ.ಮುಂದುವರೆಯುವುದು...

13 views