ನನ್ನ ಸಂಸಾರ ಚನ್ನಾಗಿದೆ ಅಂದ್ರೆ ಅದಕ್ಕೆ ಕಾರಣ ಕುಮಾರ ಬಂಗಾರಪ್ಪನವರು

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ-22
ಬ್ಯಾಂಕ್ ಜನಾರ್ಧನ್: ಎನ್.ಎಸ್ ರಾವ್ ಅವರ ಕೊನೇ ಕಾಲದಲ್ಲಿ ಅವರ ಜೊತೆಯಲ್ಲೂ ಆಕ್ಟ್ ಮಾಡಿದ್ದೆ ನಾನು. ಆಗ ಮುಸುರಿ ಅವರು ಹೋಗ್ಬಿಟ್ಟಿದ್ರು. ಅಲ್ಲಿಂದ ಉಮಾಶ್ರೀ ಹಾಗೂ ನನ್ನ ಕಾಂಬಿನೇಶನ್ ಸ್ಟಾರ್ಟ್ ಆಯ್ತು. ರೇಖಾದಾಸ್ ಜೊತೆನೂ ಕಾಂಬಿನೇಶನ್ ಸ್ಟಾರ್ಟ್ ಆಯ್ತು. ಶ್ರೀದೇವಿ, ಲಕ್ಷ್ಮೀ ದೇವಿ ಅವರ ಜೊತೆಯಲ್ಲೂ ಸ್ಟಾರ್ಟ್ ಆಯ್ತು. ಜಯಮ್ಮನ ಜೊತೆಯಲ್ಲೂ ಕಾಂಬಿನೇಶನ್ ಸ್ಟಾರ್ಟ್ ಆಯ್ತು. ಈ ಮಧ್ಯದಲ್ಲಿ ಏನಾಯ್ತು ಅಂದ್ರೆ ನನ್ನ ಸಂಸಾರ ಬೆಳೀತಲ್ವಾ? ನಂಗೆ ಬರ್ತಾ ಇದ್ದಂತಹ ಸಂಬಳಕ್ಕಿಂತ ಚಿತ್ರರಂಗದಲ್ಲೇ ಬರ್ತಾ ಇದ್ದಂತಹ ದುಡ್ಡಲ್ಲೇ ಎರಡು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸ್ದೆ. ಮೊದಲನೇ ಮಗಳ ಮದುವೆ ಮಾಡೋವಾಗ ನಮ್ಮ ತಂದೆ ಮಾಡಿದ್ದ ಸ್ವಂತ ಮನೆ ಇತ್ತು. ಆ ಮನೆನ ಮಾರ್ದೆ. ಈ ಹುಡುಗಾಟದಲ್ಲಿ ದುಡ್ಡು ಇರ್ಲಿಲ್ಲ. ದುಡ್ಡಿಲ್ದೇ ಇದ್ದಾಗ್ಲೇ ಎರಡನೇ ಮಗಳ ಮದುವೆ ಫಿಕ್ಸ್ ಆಯ್ತು. ಒಂದು ಪೈಸೆನೂ ದುಡ್ಡು ಇಲ್ಲ. ಸಂಭಾವನೆ ಕೊಡ್ತಾ ಇದ್ದದ್ದು ಸಾಲ್ತಾ ಇರ್ಲಿಲ್ಲ ಅವಾಗ. ಕೊನೆಗೆ ಒಬ್ಬ ಮಹಾನುಭಾವ. ಇವತ್ತಿಗೂ ನಾನು ಅವನನ್ನ ನೆನೆಸ್ಕೋತೀನಿ. ಇವತ್ತು ನನ್ನ ಸಂಸಾರ ಹಾಗೂ ನನ್ನ ಮಕ್ಕಳು ಚನ್ನಾಗಿದ್ದಾರೆ ಅಂದ್ರೆ ಅದಕ್ಕೆ ಕಾರಣ ಒಬ್ಬರೇ ಒಬ್ರು. ಕುಮಾರ್ ಬಂಗಾರಪ್ಪ. ಅವಾಗ ಅವರ ಅಪ್ಸರೆ ಸಿನಿಮಾ ಮಾಡಿದ್ದೆ.


ಪರಮ್: ಅಂಗೈಯಲ್ಲಿ ಅಪ್ಸರೆ?


ಬ್ಯಾಂಕ್ ಜನಾರ್ಧನ್: ಅಂಗೈಯಲ್ಲಿ ಅಪ್ಸರೆ ಪಿಚ್ಚರ್ ಮಾಡ್ತಾ ಇದ್ದೆ. ಆಗ ಮೈಸೂರು ಪ್ರೀಮಿಯರ್ ಸ್ಟುಡಿಯೋದಲ್ಲಿ ಶೂಟಿಂಗ್ ನಡಿತಾ ಇತ್ತು. ಮದುವೆ ಫಿಕ್ಸ್ ಆಗಿದೆ. ಮದುವೆಗೆ ಇನ್ನೊಂದು ವಾರ ಇದೆ. ನನ್ನ ಹತ್ರ ದುಡ್ಡಿಲ್ಲ. ಬೆಂಗಳೂರಲ್ಲಿ ಯಾರ ಹತ್ರ ಕೇಳೋಣ? ಏನು ಮಾಡೋದು? ಅಂತ ಯೋಚನೆ ಆಗ್ಬಿಡ್ತು. ನೆಂಟರಿಷ್ಟರ ಹತ್ರ ಕೇಳಕ್ಕೆ ಧೈರ್ಯ ಇಲ್ಲ. ಅದೇ ಯೋಚನೆಯಲ್ಲಿ ಶೂಟಿಂಗ್‍ನಲ್ಲಿ ಸುಮ್ಮನೆ ಕೂತಿದ್ದೆ. ಕುಮಾರ್ ಬಂಗಾರಪ್ಪ ನೋಡಿದ್ರು ಅನ್ಸುತ್ತೆ, ಕರೆದ್ರು. “ಏನು ಡಲ್ ಆಗಿದ್ದೀರ?” ಅಂದ್ರು. “ಸರ್ ಹೀಗೆ ಆಗ್ಹೋಗಿದೆ ಸಾರ್. ಮದುವೆ ಫಿಕ್ಸ್ ಆಗಿದೆ. ಹದಿನೈದು ದಿವ್ಸ ಟೈಮ್ ಇದೆ. ಕೈಯಲ್ಲಿ ಒಂದು ಪೈಸೆ ಇಲ್ಲ ಸಾರ್. ಏನು ಮಾಡ್ಬೇಕು ಅಂತ ಗೊತ್ತಾಗ್ತಾ ಇಲ್ಲ ಸಾರ್” ಅಂದೆ. “ಹೌದಾ? ಸರಿ ಶೂಟಿಂಗ್ ಮುಗಿಸ್ಕೊಂಡು ಆಫೀಸ್‍ಗೆ ಬನ್ನಿ” ಅಂದ್ರು. ಸರಿ ಶೂಟಿಂಗ್ ಎಲ್ಲಾ ಮುಗಿಸ್ಕೊಂಡು ಅವರ ಆಫೀಸ್‍ಗೆ ಹೋದೆ. ನಾನು ಏನೂ ಅವರ ಹತ್ರ ಕೇಳಿಲ್ಲ ಸಾರ್. ಆಗಿನ ಕಾಲದಲ್ಲಿ ಐವತ್ತು ಸಾವಿರ ರೂಪಾಯಿ ಕೊಟ್ರು.


ಪರಮ್: ಎಷ್ಟು ವರ್ಷದ ಹಿಂದೆ?


ಬ್ಯಾಂಕ್ ಜನಾರ್ಧನ್: ಅಂಗೈಯಲ್ಲಿ ಅಪ್ಸರೆ ಅಂದ್ರೆ ಲೆಕ್ಕ ಹಾಕ್ಕೊಳಿ.


ಪರಮ್: ನೈಂಟೀಸಲ್ಲಿ?


ಬ್ಯಾಂಕ್ ಜನಾರ್ಧನ್: ಅವಾಗ ನಾನು ಇನ್ನೂ ಬೆಳಿತಾ ಇದ್ದೆ ಅಷ್ಟೇ. ನಾನು ಹೇಳಿದ್ನಲ್ಲಾ ನಿಮಗೆ ದುಡ್ಡೇನೂ ಬರ್ತಾ ಇರ್ಲಿಲ್ಲ ನಮಗೆ. ಇಡೀ ಪಿಚ್ಚರ್‍ಗೆ ಐದು ಸಾವಿರ ರೂಪಾಯಿ ಕೊಡ್ತಿದ್ರು. ಅವತ್ತು ಐವತ್ತು ಸಾವಿರ ರೂಪಾಯಿ ಕೊಟ್ರು ಸಾರ್. ನಾನು ಹೋದ ತಕ್ಷಣ ಕವರಲ್ಲಿ ಕೊಟ್ರು. ನಾನು ಎಣ ಸ್ಲಿಲ್ಲ. ಮನೆಗೆ ಬಂದು ನೋಡಿದ್ರೆ ಐವತ್ತು ಸಾವಿರ ಇದೆ ಸಾರ್. ನಂಗೆ ಹೇಗಾಗೋಯ್ತು ಅಂದ್ರೆ, ಭಗವಂತ ಕಣ್ಣು ಬಿಟ್ನೇನೋ ಅಂತ ಹೇಳಿ ಆ ಐವತ್ತು ಸಾವಿರ ರೂಪಾಯಿಯಲ್ಲಿ ಮಗಳ ಮದುವೆ ಮಾಡಿಸ್ಬಿಟ್ಟೆ ಸಾರ್. ಇವತ್ತಿಗೂ ನಾವು ಯಾರನ್ನಾದ್ರೂ ನೆನೆಸ್ಕೊತೀವಿ ಅಂದ್ರೆ ಕುಮಾರ್ ವಸಂತ್‍ನ ನೆನೆಸ್ಕೊತೀವಿ. ಅದು ಎಲ್ಲೂ ಹೇಳ್ಕೊಂಡಿಲ್ಲ ನಾನು. ಎಲ್ಲೂ ಹೇಳ್ಬೇಕು ಅಂತ ಹೇಳಿರ್ಲಿಲ್ಲ ಅವರು. ಆದರೆ ಇವತ್ತಿಗೂ ನನ್ನ ಕಷ್ಟಕ್ಕಾದವರು ಕುಮಾರ್ ಬಂಗಾರಪ್ಪ. ಮೂರನೇ ಮಗಳ ಮದುವೆ ಅಷ್ಟೊತ್ತಿಗೆ ಸ್ವಲ್ಪ ದುಡ್ಡು ಸಿಕ್ತಿತ್ತು.ಮುಂದುವರೆಯುವುದು…

275 views