ನಮ್ಮ ಊರಿನ ಜನರಿಂದಾನೇ ನಾನು ಕಲಾವಿದ ಆದದ್ದು

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ - 4ಒಂದು ದಿನ ಏನಾಯ್ತು ಆ ಊರಿಗೆ ಒಂದು ನಾಟಕ ಕಂಪೆನಿ ಬಂತು. ಸಿದ್ದೇಶ್ವರ ನಾಟ್ಯ ಸಂಘ ಅಂತ. ಅವರಿಗೆ ಕಲೆಕ್ಷನ್ ಆಗದೇ ಲಾಸ್ ಆಯ್ತು. ಅವಾಗ ಊರಿನ ಜನ ಎಲ್ಲಾ “ನಮ್ಮೂರಲ್ಲಿ ಒಬ್ಬ ಜನಾರ್ಧನ ಅಂತ ಹುಡುಗ ಇದ್ದಾನೆ. ಅವನನ್ನ ಹಾಕೊಂಡು ಒಂದು ನಾಟಕ ಮಾಡಿ, ಕಲೆಕ್ಷನ್ ಆಗುತ್ತೆ. ಅವನೇ ಮಾಡಿರೋ ನಾಟಕ ಗೌಡ್ರ ಗದ್ಲ ಅಂತ ಇದೆ. ಅವನನ್ನ ಹಾಕೊಂಡು ಮಾಡಿ” ಅಂದ್ರು. ನಾನು ಬ್ಯಾಂಕಲ್ಲಿದ್ದಾಗ ಪ್ರೊಪ್ರಾಯ್ಟರ್ ಬಂದ್ರು. “ನಾಟಕ ಮಾಡ್ಬೇಕು” ಅಂದ್ರು. “ಅಯ್ಯಯ್ಯೋ ನಾವೇನೋ ಚಟಕ್ಕೋಸ್ಕರ ನಾಟಕ ಆಡ್ತೀವಿ, ನಿಮ್ಮ ಕಂಪೆನಿಗಳಿಗೆಲ್ಲಾ ನಾಟಕ ಆಡಕ್ಕೆ ನಮ್ಮ ಕೈಯಲ್ಲಿ ಆಗಲ್ಲ.” “ಇಲ್ಲ ಸಾರ್ ಬಹಳ ಲಾಸ್ ಆಗಿದೆ. ಏನೋ ಊರಿನ ಜನ ಎಲ್ಲಾ ನಿಮ್ಮ ಹೆಸರು ಹೇಳ್ತಾ ಇದ್ದಾರೆ. ದಯವಿಟ್ಟು ಮಾಡ್ಕೊಡಿ ಸಾರ್. ನಮಗೆ ಮುಂದಿನ ಊರಿಗೆ ಹೋಗಕ್ಕೆ ದಯವಿಟ್ಟು ಅನುಕೂಲ ಮಾಡ್ಕೊಡಿ ಸಾರ್” ಅಂದ್ರು. ಹಾಗೂ ಹೀಗೂ ಒಪ್ಕೊಂಡೆ. ದಿನಕ್ಕೆ ಒಂದು ಶೋ. ಯಾಕಂದ್ರೆ ಸಣ್ಣ ಊರಲ್ವಾ ಅವಾಗ? ಹತ್ತು ಗಂಟೆಗೆ ಶೋ.


ಪರಮ್: ರಾತ್ರಿ ಹತ್ತು ಗಂಟೆಗೆ?


ಬ್ಯಾಂಕ್ ಜನಾರ್ಧನ್: ಹೌದು ರಾತ್ರಿ ಹತ್ತು ಗಂಟೆಗೆ ಶೂ. ಅದೇನು ಊರಿನ ಜನಗಳಿಗೆ ನನ್ನ ಮೇಲೆ ಅಭಿಮಾನನೋ ಏನೋ ಗೊತ್ತಿಲ್ಲ ಹೌಸ್ ಫುಲ್ ಆಗೋಯ್ತು. ಥಿಯೇಟರ್ ಹೌಸ್‍ಫುಲ್ ಆಗೋಯ್ತು. ನಾಲ್ಕು ದಿವ್ಸ ನಾನು ಮಾಡ್ದೆ. ನಾಲಕ್ಕೂ ದಿವ್ಸನೂ ಹಳ್ಳಿಯಿಂದ ಜನ ಗಾಡಿ ಕಟ್ಕೊಂಡು ಬಂದು ನಾಟಕ ನೋಡ್ತಿದ್ರು ಗೌಡ್ರ ಗದ್ಲ ಅನ್ನೋ ನಾಟಕ. ಅವಾಗ ನಮ್ಮ ಕುಳ್ಳಿ ಜಯಮ್ಮ ಅವರು ನಾಟಕ ಕಂಪೆನಿಯಲ್ಲಿದ್ರು. ಅವರು ಸ್ವಲ್ಪ ಹೆಸರುವಾಸಿ ಆಗಿದ್ರು. ಗೌಡ್ರ ಗದ್ಲ ನಾಟಕದಲ್ಲಿ ಮಧುರಾ ಅಂತ ಒಂದು ಪಾತ್ರ ಇದೆ, ಆ ಪಾತ್ರ ಬಹಳ ಫೇಮಸ್. ಅವರನ್ನ ಕರ್ಸಿದ್ವಿ. ಅವರ ಜೊತೆ ನಾಲ್ಕು ದಿವ್ಸ ಡೇಟ್ಸ್ ಕೊಟ್ಟಿದ್ರು. ನಾಲ್ಕು ದಿವ್ಸ ಫುಲ್ ಕಲೆಕ್ಷನ್ ಹೌಸ್ ಫುಲ್ ಆಗೋಯ್ತು. ಹಾಗಾಗಿ ಅವರಿಗೆ ಕ್ಯಾಂಪ್‍ಗಳೆಲ್ಲಾ ಮಾಡ್ಕೊಂಡು ಮುಂದೆ ಹೋಗಕ್ಕೆ ದಾರಿ ಆಯ್ತು.


ನಾನು ನಾಟಕ ಕಂಪೆನಿಯಲ್ಲಿ ಆಕ್ಟ್ ಮಾಡಿದ್ದು ಎಲ್ಲಾ ನಾಟಕ ಕಂಪೆನಿಗಳಿಗೆ ವಿಷಯ ಹರಡ್ಬಿಡ್ತು. ನಾಟಕ ಕಂಪೆನಿಯವರು “ಗೌಡ್ರ ಗದ್ಲ ನಾಟಕ ಜನಾರ್ಧನ್‍ನ ಹಾಕೊಂಡು ಮಾಡಿದ್ವಿ. ನಾಲ್ಕು ದಿವ್ಸ ಹೌಸ್‍ಫುಲ್ ಆಗಿತ್ತು ನಮಗೇನೂ ತೊಂದರೆ ಆಗ್ಲಿಲ್ಲ” ಅಂತ. ಈ ತರ ಪ್ರಚಾರ ಆಗಿ ಆಗಿ ನಾಟಕ ಕಂಪೆನಿಯವರು ನನ್ನ ಕರೆಯೋದಕ್ಕೆ ಶುರು ಮಾಡಿದ್ರು. “ಸರ್ ನಮಗೆ ಒಂದು ನಾಲ್ಕು ದಿವ್ಸ ಮಾಡ್ಕೊಡಿ ಸಾರ್” ಅಂತ. ಯಾವಾಗ ಹೀಗೆ ಶುರುವಾಯ್ತೋ ಬ್ಯಾಂಕಿಗೆ ಹೋಗೋದು ಕಮ್ಮಿ ಮಾಡ್ಬಿಟ್ಟೆ. ವಾರಕ್ಕೆ ಮೂರು ನಾಲ್ಕು ದಿವ್ಸ ಡೇಟ್ ಕೊಡಕ್ಕೆ ಶುರು ಮಾಡ್ಬಿಟ್ಟೆ. ಪ್ರತೀ ನಾಟಕ ಕಂಪೆನಿಗಳಲ್ಲಿ ಪ್ರಚಾರ ಜಾಸ್ತಿ ಆಗ್ಬಿಡ್ತು. ಈ ತರ ಪ್ರಚಾರ ಆಗುವಾಗ ನಂಗೆ ಇನ್ನೂ ಸ್ವಲ್ಪ ಆಸೆ ಶುರುವಾಯ್ತು “ಯಾಕೆ ನಾನು ಸಿನಿಮಾದಲ್ಲಿ ಮಾಡ್ಬಾರ್ದು?” ಅಂತ. ಸಿನಿಮಾದಲ್ಲಿ ಆಕ್ಟ್ ಮಾಡ್ಬೇಕು ಅನ್ನೋ ಹುಚ್ಚು.ಮುಂದುವರೆಯುವುದು…

20 views