ನಮ್ಮ ಹಳ್ಳಿಗಳು ಭಾರತದ ಭಾವೈಕ್ಯತೆಯ ಸಂಕೇತ

ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಲೈಫ್ ಸ್ಟೋರಿ - ಭಾಗ 10ಒಬ್ಬ ಕಲಾವಿದನಿಗೆ ಗ್ರಾಮ್ಯ ಬಾಲ್ಯ ತುಂಬಾ ಸಹಾಯ ಮಾಡುತ್ತೆ ಸಾರ್. ಅವನಿಗೆ ಹಳ್ಳಿ ಬದುಕಿನ ರೀತಿಯನ್ನ ಹೇಳ್ಕೊಡುತ್ತೆ. ನಮ್ಮ ಹಳ್ಳಿಯಲ್ಲಿ ಮೊಹರಮ್ ಕುಣಿತಕ್ಕೆ ನಾವೆಲ್ಲರೂ ಹುಲಿ ಕುಣಿತ ಕುಣಿತಾ ಇದ್ವಿ. ಅನೇಕ ಜನರು ಹುಲಿ ಕುಣಿತ ಕುಣಿತಾ ಇದ್ರು. ಹಾಗೇ ನಮ್ಮಲ್ಲಿ ರಥೋತ್ಸವ ಆದ್ರೆ ಮುಸ್ಲಿಮ್ಸ್ ಎಲ್ಲಾ ಬಂದು ಊಟ ತಿಂಡಿ ಹಂಚೊದು, ಕೊಡೋದು ಎಲ್ಲಾ ಮಾಡ್ತಿದ್ರು. ಅಲ್ಲಿ ಆಗ್ತಾ ಇದ್ದ ರಾಮೋತ್ಸವಗಳು, ಗಣೇಶೋತ್ಸವಗಳು ಇವೆಲ್ಲಾ ಭಾರತ ಭಾವೈಕ್ಯತೆಯ ಸಂಕೇತ ಹಳ್ಳಿಗಾಡಿನಲ್ಲಿ ತುಂಬಾ ಚನ್ನಾಗಿ ನಿರೂಪಿತವಾಗಿದೆ. ನಾನು ಚಿಕ್ಕಂದಿನಲ್ಲಿ ಅದನ್ನ ಕಣ್ಣಾರೆ ನೋಡಿದ್ದೀನಿ. ಅದಕ್ಕೇ ನನಗೆ ಇಡೀ ಭಾರತದ ಬಗ್ಗೆ ಅತ್ಯಂತ ಹೆಮ್ಮೆ ಇದೆ.


ಪ್ರಪಂಚದಲ್ಲಿ ಹನ್ನೆರಡು ದೇಶಗಳನ್ನ ಸುತ್ತಾಡ್ಕೊಂಡು ಬಂದಿದ್ದೀನಿ ನಾನು. ಆದರೆ ನನಗೆ ಈಗ್ಲೂ ನಾಗಮಂಗಲದಲ್ಲಿ ನೋಡಿದಂತಹ ಅಪೂರ್ವವಾದ ಬದುಕು, ಬೆಳ್ಳೂರಿನಲ್ಲಿ ಕಂಡಿದ್ದು, ಮಂಡ್ಯ ಜಿಲ್ಲೆಯಲ್ಲಿ ಹಳ್ಳಿ ಗಾಡಿನ ಪರಿಸರ ನಾನು ನೋಡಿದ್ದು ರೋಮಾಂಚನ.


ನಾನು ಸಿಟಿಗೆ ಬಂದ್ಮೇಲೆ “ಅಯ್ಯೋ ಏನೋ ಮಿಸ್ ಆಯ್ತೇನೋ? ಗ್ರಾಮ ಹೋಯ್ತೇನೋ?” ಅನ್ಸುತ್ತೆ. ಬಟ್ ಮಂಡ್ಯ ದೊಡ್ಡ ಹಳ್ಳಿ. ನಾನೀಗ ಮಂಡ್ಯ ರಮೇಶ್ ಆಗಿ ಯಾವುದೋ ಒಂದು ಡೈಲಾಗ್ ಹೇಳ್ತೀನಿ ಆ ಭಾಷೆ ಮಾತಾಡ್ತೀನಿ ಅಂತಂದ್ರೆ ಅದಕ್ಕೆ ನಾನು ಬೆಳೆದ ಸಂತೆ, ನಾನು ಓಡಾಡಿದ ದಾರಿಗಳು, ನಾನು ನೋಡಿದ ಸಿನಿಮಾ ಥಿಯೇಟರ್‍ಗಳು, ಅಲ್ಲಿ ಫಸ್ಟ್ ಡೇ ರಾಜ್ ಕುಮಾರ್ ಸಿನಿಮಾಗಳಿಗೋಸ್ಕರ ಟಿಕೇಟ್ ತಗೊಳ್ಳಿಕ್ಕೆ ಒದ್ದಾಡ್ತಾ ಇದ್ದದ್ದು ಎಲ್ಲಾ ಅನುಭವಗಳು ಅದರ ಹಿಂದೆ ಇದೆ ಸಾರ್. ಆಅನುಭವಗಳನ್ನ ನಮ್ಮ ಮುಂದಿನ ತಲೆ ಮಾರಿಗೆ ಶಾಸ್ತೋಕ್ತವಾಗಿ ರಂಗಭೂಮಿಯ ಮೂಲಕ ಕೊಡೋ ಪ್ರಯತ್ನ ಮಾಡ್ತಾ ಇದ್ದೀನಿ ಅಷ್ಟೇ.ಮುಂದುವರೆಯುವುದು…

19 views