
ನಿಜವಾಗ್ಲು ದೆವ್ವಗಳು ಇದಿಯಾ? ಇದನ್ನ ಓದಿ
ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 77

ಕೊಪ್ಪಳದಲ್ಲಿ ಆದಂತೆ ಬೆಂಗಳೂರಿನಲ್ಲೂ ಭಯ ಹುಟ್ಟಿಸುವಂತಹ ಒಂದು ಘಟನೆ ನಡೆಯಿತು. ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ಪದ್ಮವಾಸಂತಿ ಅವರ ಮನೆಯ ಪಕ್ಕದ ಮನೆಯನ್ನು ನನಗೆ ಬಾಡಿಗೆಗೆ ಕೊಟ್ಟಿದ್ರು. ಡೆಡ್ ಎಂಡ್ ಗಿದ್ದ ಹಂಚಿನ ಮನೆ ಅದು. ಅಲ್ಲಿ ನಾನು ರಘು ಎನ್ನುವವರು ‘ಕಲಾ ಕುಟೀರ’ ಎಂಬ ನಾಟಕ ತಂಡ ಕಟ್ಟಿಕೊಂಡಿದ್ದೆವು.
ಬೆಡ್, ಸೂಟ್ ಕೇಸ್ ಅಷ್ಟೇ ಆಗಿನ ಕಾಲದಲ್ಲಿ ನನ್ನ ಆಸ್ತಿ. ಖಾಲಿ ಮನೆಯಲ್ಲಿ ನನ್ನ ಸಾಮಗ್ರಿ ಇಟ್ಟು ಕೂತುಕೊಂಡಿದ್ದೆ. ರಾತ್ರಿ 10.30ಗೆ ಸಿಮೆಂಟ್ ಜಾಲರಿಯಿಂದ ಕೈಯೊಂದು ಕಾಣಿಸಿತು. ಹೆದರಿಕೊಂಡು ಕೂತೆ. ನೋಡಿದ್ರೆ, ಪದ್ಮವಾಸಂತಿ ಅವರ ತಮ್ಮ ಸಿನಿಮಾ ನೋಡಿಕೊಂಡು ಬರುತ್ತಿದ್ದ. ಆಂಕಲ್ ನೀವಾ ಈ ಮನೆಗೆ ಬಂದಿರೋದು ಎಂದು ಕಿಟಕಿಯಿಂದ ಕೈಮಾಡಿದ್ದ. ಈಕಡೆ ಬಾರಪ್ಪ ಎಂದೆ. ಬಂದು ಮಾತಾಡಿಸಿಕೊಂಡು ಸುಮ್ನೆ ಹೋಗಿದ್ರೆ ಪರ್ವಾಗಿಲ್ಲ. ಯಾಕೆ ನೀವು ಈ ಮನೆಗೆ ಬಂದಿದ್ದು, ಇಲ್ಲಿ ರಾತ್ರಿ ಆದ್ರೆ ಯಾರೋ ದೀಪ ಹಿಡ್ಕೊಂಡು ತಿರುಗುತ್ತಾರೆ. ಆ ಕಾರಣಕ್ಕೆ ಹಿಂದೆ ಇದ್ದವರು ಮನೆ ಬಿಟ್ಟು ಹೋದ್ರು. 3 ಗಂಟೆ ಮೇಲೆ ಗೆಜ್ಜೆ ಸೌಂಡ್ ಬರುತ್ತೆ ಎಂದ. ಮನೆಗೆ ಬಂದಿದ್ದ ಮೊದಲ ದಿನ. ಈ ಮಾತನ್ನು ಕೇಳಿದ ಮೇಲೆ ಹೇಗೆ ನಿದ್ದೆ ಬರುತ್ತದೆ. ಎರಡೆರಡು ಬೆಡ್ಶೀಟ್ ಹೊದ್ದುಕೊಂಡು ಮಲಗಿದ್ದೆ. ರಾತ್ರಿ 12 ಗಂಟೆಗೆ ಗೆಜ್ಜೆಯ ಶಬ್ದ ಕೇಳಿಸಲು ಶುರುವಾಯ್ತು. ಆಗಿದ್ದು, ಆಗೋಯ್ತು ಸಾಯೋದು ಗ್ಯಾರಂಟಿ ಎಂದು ಬೆಡ್ಶೀಟ್ ತೆಗೆದು ನೋಡಿದೆ. ಮನೆಯ ಹಿಂದೆ ಕಲ್ಲಿನ ಕಂಬ ನೆಟ್ಟಿದ್ರು. ಆ ಕಡೆ ಕೇಶವ ಶಿಲ್ಪ ಇತ್ತು. ಜನರ ಶಾರ್ಟ್ಕಟ್ ದಾರಿಯದು. ಅಲ್ಲಿ ದನವನ್ನು ಕಟ್ಟಿದ್ರು. ಅದರ ಕೊರಳಲ್ಲಿ ಗೆಜ್ಜೆ ಇತ್ತು. ಆ ದನ ಕಂಬಕ್ಕೆ ಕತ್ತನ್ನು ತಿಕ್ಕುವ ಮೂಲಕ ಕೆರೆದುಕೊಳ್ಳುತ್ತಿತ್ತು. ಅದಕ್ಕೆ ಆ ಶಬ್ದ ಬರುತ್ತಿತ್ತು.
ಒಂದು ಗಂಟೆಗೆ ಮನೆ ಸುತ್ತ ದೀಪ ಹಿಡಿದು ಸುತ್ತುವಂತೆ ಕಾಣುತ್ತಿತ್ತು. ಏನಪ್ಪ ಎಂದು ನೋಡಿದ್ರೆ, ರಮೇಶ್ ಭಟ್ ಅವರು ಶಂಕರ್ನಾಗ್ ಜೊತೆಗೆ ರಿಹರ್ಸಲ್ ನಡೆಸಿ ಲೇಟಾಗಿ ಬರುವುದು ಅದೇ ರಸ್ತೆಯಲ್ಲಿ. ಅವರ ಮನೆ ಅಲ್ಲಿಯೇ ಇತ್ತು. ಆ ರಸ್ತೆಯಲ್ಲಿ ಅವರು ಲೈಟ್ ಆನ್ ಮಾಡಿ ಕಾರನ್ನು ತಿರುಗಿಸುತ್ತಿದ್ರು. ನಮ್ಮ ಮನೆಯ ಕಿಟಕಿ ಜಾಲರಿಯಿಂದ ಆ ಕಾರಿನ ಲೈಟ್ ಕಾಣುತ್ತಿತ್ತು. ಹಾಗಾಗಿ ಅದು ದೆವ್ವದ ಮನೆಯಾಗಿತ್ತು. ಆ ಮನೆಯಲ್ಲಿಯೇ ನಾನು ಮೂರು ವರ್ಷ ಇದ್ದೆ.
ನನ್ನ ಬದುಕಿನ ಬಹಳಷ್ಟು ಬದಲಾವಣೆಗಳು ಆ ಮನೆಯಲ್ಲಿಯೇ ಆಗಿದ್ದು. ರೆಡಿಯೊದಲ್ಲಿ ಬರುವ ಹಾಡಿನಲ್ಲಿರುವ ಹಿರೊಗಳಂತೆ ಅನುಕರಣೆ ಮಾಡುತ್ತಿದ್ದೆ. ಚನ್ನಕೇಶವ ಮೂರ್ತಿ, ರಮೇಶ್ ಪಂಡಿತ್, ಇಂದಿರೇಶ್ ಪಂಡಿತ್, ನಾಗೇಶ್.. ಅವರೆಲ್ಲ ಅಲ್ಲಿಗೆ ಬರುತ್ತಿದ್ರು. ಅವರೆಲ್ಲ ನನ್ನ ಪ್ರತಿಭೆಯನ್ನು ಪ್ರೋತ್ಸಾಹಿಸಿದರು. ಹಲವು ನಾಟಕಗಳಲ್ಲಿ ಅಭಿನಯಿಸಿದ್ದೆ. ನಂತರ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದೆ.
ಮುಂದುವರೆಯುವುದು...