ನಾನೂ ಒಂದು ಕಾಲದಲ್ಲಿ ಹೋರಾಟಗಾರನಾಗಿದ್ದೆ

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 133

(ಶಂಕರ್ ನಾಗ್ ಅವರ‌ ಒಡನಾಡಿ‌ ಬಿ.ಸುರೇಶ ಅವರ ನೆನಪುಗಳು)ನಾನು ಜಾನ್ ದೇವರಾಜ್ ಬಾಲ್ಯದಿಂದನೇ ಗೆಳೆಯರು. ನಮ್ಮಿಬ್ಬರ ಮನೆ ಚಾಮರಾಜಪೇಟೆ ಯಲ್ಲೇ ಇತ್ತು. ಅವ್ನು ಕ್ರಿಷ್ಚಿಯನ್ನ ಕನ್ನಡಿಗರಿಗಾಗಿ ಹೋರಾಟ ಮಾಡ್ತಿದ್ದವ್ನು, ನಾನೂ ಅವ್ನ ಹೋರಾಟದಲ್ಲಿ ಹೋಗಿ ಸೇರ್ಕೊಳ್ತಾ ಇದ್ದೆ ಹಾಗಾಗಿ ನಾವಿಬ್ಬರು ಬಾರೀ ಗೆಳೆಯರು, 1975 ಎಮರ್ಜನ್ಸಿ ಕಾಲದಿಂದ. ನನ್ನ ಸೈಕಲ್ನಲ್ಲಿ ಅವ್ರ ಮನೆಯಿಂದ ಒಂದು ಏಣಿ ತಗೊಂಡು ಹೋಗಿ ಗೋಡೆಗಳ ಮೇಲೆ ಇಂದಿರಾ ಗಾಂಧಿಗೆ ದಿಕ್ಕಾರ ಅಂತ ಬರೆಯುವುದು. ಈ ತರ ಕೆಲ್ಸಗಳೆಲ್ಲಾ ನಾನು ಜಾನ್ ದೇವರಾಜು ಚಿಕ್ಕವ್ರಿದ್ದಾಗಿನಿಂದ ಬಹಳ ಮಾಡಿದ್ದೀವಿ.


ಒಂದು ಸಲ ಅರೆಸ್ಟಾಗಿ ಇಬ್ಬರೂ ಮೈನರ್ ಅಂತ ಬಿಟ್ಟಿದ್ದೂ ಹೌದು. ಇಂತಹ ಜಾನ್ ದೇವರಾಜ್ ಮಾಲ್ಗುಡಿ ಡೇಸಲ್ಲಿ ಆರ್ಟ್ ಡೈರೆಕ್ಟರ್ ಆದಾಗ, ವಿಶಿಷ್ಟವಾದ ಕೆಲಸಗಳಿದ್ದಾಗ ನನ್ನನ್ನ ಕರಿತಾ ಇದ್ದ. ಗಾಂಧಿ ವಿಗ್ರಹ ಆಗ್ಬೇಕು ಅರ್ಜೆಂಟಾಗಿ ಬಾರೋ, ಇನ್ನೇನೋ ಪೇಂಟಿಂಗ್ ಆಗ್ಬೇಕು ಬಾರೋ ಅಂತ ಕರಿತಾ ಇದ್ದ. ಹಾಗಾಗಿ ಅವ್ನ ಸಹಾಯಕನಾಗಿ ಸುಮಾರು ಎಪಿಸೋಡಲ್ಲಿ ನಾನು ಕೆಲ್ಸ ಮಾಡಿದ್ದೀನಿ. ಉದಾಹರಣೆಗೆ ಯಡಿಯೂರು ಕೆರೆಯ ದಂಡೆಯ ಮೇಲೆ ಒಂದು ಎರಡ್ಮೂರು ಸಂತೆಯ ದೃಶ್ಯಗಳನ್ನ ಚಿತ್ರೀಕರಣ ಮಾಡಿದ್ರು ಅವಾಗ ನಾನು ಜಾನ್ ದೇವರಾಜ್ ಗೆ ಸಹಾಯಕನಾಗಿ ಕೆಲ್ಸ ಮಾಡಿದ್ದೆ. ಹಾಗೂ ಶಂಕರ್ ರಾತ್ರಿ ಹತ್ತುವರೆ ಗಂಟೆಗೆ ಬಂದು “ನನಿಗೆ ಇಲ್ಲಿ ಒಂದು ವಿಗ್ರಹ ಬೇಕು” ಅಂತ ಹೇಳಿ ಹೋಗ್ತಿದ್ರು. ನಾವು ರಾತ್ರಿಯೆಲ್ಲಾ ಕೆಲ್ಸ ಮಾಡಿ ಅವ್ರು ಬೆಳಗ್ಗೆ ಬರುವಷ್ಟರಲ್ಲಿ ರೆಡಿ ಮಾಡಿ ಇಡ್ತಿದ್ವಿ.ಮುಂದುವರೆಯುವುದು…

19 views