ನಾನು ಕಲಾವಿದೆ ಆಗಲು ಕಾರಣ ಆ… ದಿನ

ಖ್ಯಾತ ಖಳನಟ ಸುಧೀರ್ ಲೈಫ್ ಸ್ಟೋರಿ ಭಾಗ 1

(ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಮಾಲತಿ ಸುಧೀರ್: ನಾನು ಕಲಾವಿದೆ ಆಗ್ಬೇಕು ಅಂತ ಬಂದವಳಲ್ಲ, ಅಥವಾ ನಮ್ಮ ಮನೆಯಲ್ಲಿ ಯಾರೂ ಕಲಾವಿದರಾಗಿ ಹುಟ್ಟಿದವರೂ ಅಲ್ಲ. ಈ ಪೀಳಿಗೆನೇ ನಂಗೆ ಗೊತ್ತಿಲ್ಲ. ನಾನು ಸುಮ್ಮನೆ ಮನೆಯಲ್ಲಿ ಹಾಡ್ಕೊಂಡು ಡ್ಯಾನ್ಸ್ ಮಾಡ್ಕೊಂಡು ಇದ್ದವಳು. ಸಿನಿಮಾಗಳಲ್ಲಿ ಬರುವ ಹಾಡುಗಳಿಗೆ ಕುಣಿತಾ ಇದ್ದೆ. ನಾನು ಹುಟ್ಟಿದ್ದು ಹುಬ್ಬಳ್ಳಿಯ, ಗೋಕುಲ ರಸ್ತೆಯಲ್ಲಿರುವ ವಿಕಾಸ್ ನಗರದಲ್ಲಿ. ನಮ್ಮ ತಂದೆ ತಾಯಿ ಕೆ.ಎಸ್.ಆರ್.ಟಿ.ಸಿ ಯಲ್ಲಿ ಕೆಲ್ಸ ಮಾಡ್ತಿದ್ರು. ಅವರಿಗೆ ನಾವು ಐದು ಜನ ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು. ಐದೂ ಜನ ಹೆಣ್ಣು ಮಕ್ಕಳಲ್ಲಿ ನಾಲ್ಕು ಜನಕ್ಕೆ ಕೆ.ಎಸ್.ಆರ್.ಟಿ.ಸಿ ಅಥಾವ ರೈಲ್ವೇ ಡಿಪಾರ್ಟ್‍ಮೆಂಟಲ್ಲಿ ಇರೋರಿಗೆ ಕೊಟ್ಟಿದ್ದಾರೆ. ನನಗೆ ಒಬ್ಬಳಿಗೆ ಚಿತ್ರರಂಗದ ಪರಿಚಯ ಆಯ್ತು.


ಹೇಗೆ ಅಂದ್ರೆ ನಾನು ಒಂದು ಸಲ ನಮ್ಮ ಮನೆಯ ಹತ್ರ ಒಂದು ಗೆಟ್ ಟು ಗೆದರ್ ಮಾಡಿದ್ರು. ಆ ಗ್ಯಾದರಿಂಗಲ್ಲಿ ಡ್ಯಾನ್ಸ್ ಮಾಡಿದ್ದೆ. ಬಂಗಾರದ ಮನುಷ್ಯ ಚಿತ್ರದ ‘ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು’ ಹಾಡು ತುಂಬಾ ಫೇಮಸ್ ಆಗಿದ್ದ ಕಾಲ ಅದು 1977. ಅದೇ ಹಾಡಿಗೆ ನಾನು ಡ್ಯಾನ್ಸ್ ಮಾಡಿದ್ದೆ. ಎಲ್ಲಾ ಜನಗಳಿಗೆ ತುಂಬಾ ಇಷ್ಟ ಆಗ್ಬಿಡ್ತು. ಎಲ್ಲರೂ “ಒನ್ಸ್ ಮೋರ್, ಒನ್ಸ್ ಮೋರ್” ಅಂತ ಮತ್ತೆ ಅದನ್ನೇ ಮಾಡ್ಸಿದ್ರು. ಅಲ್ಲಿ ಒಬ್ಬರು ಶಂಕರಣ್ಣ ಅನ್ನೋರು ನನ್ನ ಪ್ರತಿಭೆನ ನೋಡ್ಬಿಟ್ಟು ಅವರ ಮನಸ್ಸಿನಲ್ಲೇ ಇಟ್ಕೊಂಡಿದ್ರು. ಯಾರಿಗೂ ಏನೂ ಹೇಳಿರ್ಲಿಲ್ಲ.

ಆ ಸಮಯದಲ್ಲಿ ಮಿನುಗುತಾರೆ ಕಲ್ಪನಾ ಅವರ ‘ಮಿನುಗುತಾರೆ ಮಿತ್ರ ಮಂಡಳಿ’ಗ್ರೂಪ್ ಹುಬ್ಳಿಗೆ ಬಂತು. “ಕಲ್ಪನಾ ಅಂದ್ರೆ ಅಳುವ ನಾಟಕನೇ ಇರುತ್ತೆ ಅಂತ ಜನಗಳಿಗೆ ಒಂದು ಭಾವನೆ ಇರುತ್ತೆ. ಹಾಗಾಗಿ ಒಂದು ಡ್ಯಾನ್ಸ್ ಇದ್ರೆ ಒಂದು ಮಸಾಲೆ ಇದ್ದಂಗೆ ಇರುತ್ತೆ. ಹಾಗಾಗಿ ಒಂದು ಡ್ಯಾನ್ಸರ್ ಬೇಕು”ಅಂತ ಕಲ್ಪನಾ ಅವರು ಡಿಸ್ಕಷನ್ ಮಾಡ್ತಿರೋವಾಗ ಈಶಂಕರಣ್ಣನ ಕಿವಿಗೆ ಬಿತ್ತು “ನೋಡ್ರಿ ಒಂದು ಹದಿನಾರು ವರ್ಷದ ಹುಡುಗಿ ಇದ್ದಾಳೆ. ತುಂಬಾ ಚನ್ನಾಗಿ ಡ್ಯಾನ್ಸ್ ಮಾಡ್ತಾಳೆ. ಅವಳಿಗೆ ವಿಧ್ಯೆ ಗೊತ್ತಿಲ್ಲ ಏನೂ ಗೊತ್ತಿಲ್ಲ. ಅವಳಿಗೆ ಆಕಲೆ ದೈವ ದತ್ತವಾಗಿ ಬಂದಿದೆ”ಅಂತ ಹೇಳಿದ್ರು. ತಕ್ಷಣನೇ ಕಲ್ಪನಾಜೀ ಅವರು ನಮ್ಮ ಮನೆ ಹುಡುಕ್ಕೊಂಡು ಬಂದ್ರು. ಕಾರು ತುಂಬಾ ಜನ ಬಂದು ಬಿಟ್ಟಿದ್ರು, ನಾನು ಯಾರದ್ದೋ ಮನೆ ಅಡ್ರಸ್ ಕೇಳ್ತಿದ್ದಾರೆ ಅಂತ ಅನ್ಕೊಂಡಿದ್ದೆ. “ಯಾರು ಬೇಕು ನಿಮ್ಗೆ?” ಅಂತ ಕೇಳಿದ್ರೆ. ಕಲ್ಪನಾಜೀ ಅವರು ಮುಂದೆ ಕೂತ್ಕೊಂಡು “ನೀನೇ ಬೇಕು”ಅಂತ ಹೇಳಿದ್ರು. ನನ್ನ ಯಾಕೆ ಕೇಳ್ತಿದ್ದಾರೆ ಅಂತ ನಂಗೆ ತುಂಬಾ ಭಯ ಆಯ್ತು. ಕಾರಲ್ಲಿ ಎಮ್.ಎನ್. ಲಕ್ಷ್ಮೀ ದೇವಿ ಅವರು ಕೂತಿದ್ರು. ಮಸುರೀ ಕೃಷ್ಣಮೂರ್ತಿ ಅವರಿದ್ರು, ರಾಮಚಂದ್ರ ಶಾಸ್ತ್ರೀಗಳಿದ್ರು, ಸುಂದರ ಕೃಷ್ಣ ಅರಸ್ ಇದ್ರು, ಕಲ್ಪನಾಜೀ ಅವರಿದ್ರು. ಐದು ಜನ ಕಾರ್ ತಗೊಂಡು ಬಂದಿದ್ರು. “ಆ ಹುಡುಗಿನ ನೋಡ್ಬೇಕು” ಅಂತ. ಸರಿ ನೋಡಿ “ನೀನು ವುಡ್‍ಲ್ಯಾಂಡ್ಸ್ ಹೋಟ್ಲಿಗೆ ಬಾರಮ್ಮಾ” ಅಂತ ಕರೆದ್ರು.ಮುಂದುವರೆಯುವುದು…


19 views