ನಾನು ಬ್ಯಾಂಕ್‌ ಬಿಟ್ಟು ನಾಟಕಕ್ಕೆ ಬರಲು ಕಾರಣ ಎರಡು…

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ - 6ಸಂಬಳ ಎಲ್ಲಾ ಬರ್ತಿದ್ದಿದ್ರಿಂದ ಗುಡಿಸಲು ಮನೆಯಿಂದ ಹಂಚಿನ ಮನೆಗೆ ಬಂದ್ವಿ. ಹಂಚು ಅಂದ್ರೆ ಮೊದಲು ಕಾಡಂಚು ಅಂತಿತ್ತಲ್ವಾ? ಆ ಮನೆಗೆ ಬಂದ್ವಿ. ಬ್ಯಾಂಕಲ್ಲಿ ಸೇರಿದ್ಮೇಲೆ, ನಾಟಕಗಳಲ್ಲಿ ಪಾರ್ಟ್ ಮಾಡಕ್ಕೆ ಶುರು ಮಾಡಿದ್ಮೇಲೆ. ನಾಟಕಗಳಲ್ಲಿ ಒಂದು ಶೋಗೆ ನೂರು ರೂಪಾಯಿ ಕೊಡ್ತಾ ಇದ್ರು. ಬ್ಯಾಂಕಲ್ಲಿ ತಿಂಗಳಿಗೆ ಸಂಬಳ ಐವತ್ತು ರೂಪಾಯಿ. ಇಲ್ಲಿ ದಿನಕ್ಕೆ ನೂರು ರೂಪಾಯಿ ಕೊಡೋರು. ನಾಟಕಗಳಲ್ಲಿ ಹಣ ಕೂಡ ಹೆಚ್ಚಾಗಿ ಬರ್ತಾ ಇದ್ದಿದ್ರಿಂದ ಬ್ಯಾಂಕಿಗೆ ಜಾಸ್ತಿ ರಜೆ ಹಾಕಿ, ಮೆಡಿಕಲ್ ಸರ್ಟಿಫಿಕೇಟ್ ಕೊಟ್ಟು ಹೆಚ್ಚಾಗಿ ನಾಟಕಕ್ಕೇ ಹೋಗೋದಕ್ಕೆ ಶುರು ಮಾಡ್ದೆ. ಕೊನೆಗೆ ಚಿತ್ರರಂಗದಲ್ಲಿ ಪಾರ್ಟ್ ಮಾಡ್ಬೇಕು ಅಂತ ಬಹಳ ಚಿಂತೆಯಾಗೋದಕ್ಕೆ ಶುರುವಾಯ್ತು. ನಾನು ಒಂದು ಕಂಪೆನಿಯ ನಾಟಕದಲ್ಲಿ ಪಾರ್ಟ್ ಮಾಡ್ತಾ ಇದ್ದೆ, ಆಗ ಧೀರೇಂದ್ರ ಗೋಪಾಲ್ ಅವರು ಆ ನಾಟಕ ನೋಡೋದಕ್ಕೆ ಬಂದ್ರು. ಅಂದ್ರೆ ಮಾರನೇ ದಿವ್ಸ ಆ ಕಂಪೆನಿಯಲ್ಲಿ ಅವರ ನಾಟಕ. ನಂದು ಲಾಸ್ಟ್ ಡೇ. ಅವರು ಬಂದು ನಾಟಕ ನೋಡಿದ್ರು “ಏಯ್ ಏನಯ್ಯಾ ಇಷ್ಟು ಚನ್ನಾಗಿ ಮಾಡ್ತಾ ಇದ್ದೀಯ? ನೀವೆಲ್ಲಾ ಚಿತ್ರರಂಗಕ್ಕೆ ಬರ್ಬೇಕಯ್ಯಾ” ಅಂದ್ರು. “ಅಯ್ಯೋ ನಮ್ಮನ್ನ ಯಾರು ಕೇಳ್ತಾರೆ ಸಾರ್? ಇಲ್ಲೇ ಯಾರೂ ಕೇಳಲ್ಲ. ನಮಗೆಲ್ಲಾ ಆಗಲ್ಲ ಬಿಡಿ” ಅಂದೆ. “ಇಲ್ಲಯ್ಯ ಒಂದ್ಸಲ ಬೆಂಗ್ಳೂರಿಗೆ ಬಂದ್ರೆ ನನ್ನ ನೋಡಯ್ಯ” ಅಂದ್ರು.


ನಂತರ ಹೀಗೆ ನಾಟಕ, ಬ್ಯಾಂಕ್ ಅಂತೆಲ್ಲಾ ದಿನ ಕಳೀತು. ಮನೆಯಲ್ಲಿ ಅಬ್ಜಕ್ಷನ್ ಶುರುವಾಯ್ತು. “ಸರಿಯಾಗಿ ಬ್ಯಾಂಕ್‍ಗೆ ಹೋಗದೇ ಬಣ್ಣ ಹಚ್ಚಕ್ಕೆ ಹೋಗ್ತೀಯ” ಆಗ ಆ ಟೈಮಲ್ಲಿ ಬಣ್ಣ ಹಚ್ಚಿ ಕುಣಿತಾ ಇದ್ದಾರೆ ಅಂದ್ರೆ ಒಂಥರಾ ನಿಕೃಷ್ಟ. “ಏಯ್ ಬಣ್ಣ ಹಚ್ಚಕ್ಕೆ ಹೋಗಿದ್ದಾನ್ಲೇ ಕಂಪೆನಿಯಲ್ಲಿ” ಅಂತ. ನಮ್ಮ ಮನೆಯಲ್ಲಿ ತಂದೆ ತಾಯಿಗಳ ಗಲಾಟೆ ಜಾಸ್ತಿ ಆಯ್ತು. “ಸರಿಯಾಗಿ ಕೆಲ್ಸಕ್ಕೆ ಹೋಗಲ್ಲ ಅಂತೀಯ, ಏನು ಆ ನಾಟಕ ಕಂಪೆನಿಯಲ್ಲಿ ಕೂತ್ಕೊಂಡಿದ್ದೀಯ” ಹಾಗೆ ಹೀಗೆ ಅಂದ್ರು. ಆದ್ರೂ ಬಿಡ್ಲಿಲ್ಲ.ಮುಂದುವರೆಯುವುದು…

24 views