ನಾವು ಮನೆ ಕಟ್ಟಲು ಸಹಾಯ ಮಾಡಿದ್ದು ಅಂಬಿ ಅಣ್ಣ

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 13

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ನಾವು ಸಣ್ಣ ಮನೆಯಲ್ಲಿದ್ದೆವು. ಯಾರಾದ್ರೂ ಬಂದ್ರೆ ಒಂದು ಕುರ್ಚಿ ಹಾಕೋದಕ್ಕೂ ಜಾಗ ಇಲ್ಲ. ಏನು ಮಾಡೋದು? ಹೆಂಗಾದ್ರೂ ಮಾಡಿ ಒಂದು ಮನೆ ಕಟ್ಟಿಸ್ಬೇಕಲ್ಲಾ? ಅಂತ ಮನಸ್ಸಲ್ಲೇ ಅನ್ಕೊಳ್ತಾ ಇದ್ದೆ. ಅಷ್ಟರಲ್ಲಿ ಯಾರೋ ಬಂದು “ಶಂಕರ ಮಠದ ಹತ್ರ ಒಂದು ಜಾಗ ಇದೆ. ಅವರು ಮಾರ್ತಾ ಇದ್ದಾರೆ ನಿಮ್ಗೆ ಬೇಕಾದ್ರೆ ತಗೊಳಿ” ಅಂತ ಹೇಳಿದ್ರು. ಆಗ ನಾನು ಬಂದು ಜಾಗ ನೋಡ್ದೆ. ಆದರೆ ಅವಾಗ ದುಡ್ಡಿಲ್ಲ ನಮ್ಮ ಹತ್ರ. ಏನು ಐದೋ ಹತ್ತು ಸಾವಿರ ಕೊಡ್ತಿದ್ರು ಸುಧೀರ್ ಅವರಿಗೆ. ಅದರಲ್ಲಿ ಸ್ವಲ್ಪ ಎತ್ತಿಟ್ಟಿದ್ವಿ. ಮಾಂಗಲ್ಯನ ಮಾರ್ಬಿಟ್ಟು ಈಜಾಗ ಒಂದು ಲಕ್ಷರೂಪಾಯಿಗೆ ತಗೊಂಡ್ವಿ. ಅವಾಗ ನಮ್ಮ ಮನೆಯಲ್ಲಿ ಏನೇ ಆದ್ರೂ ಅಂಬರೀಶ್ ಅಣ್ಣನ ಹತ್ರ ಎಲ್ಲಾ ವರದಿ ಒಪ್ಪಿಸ್ತಾ ಇದ್ರು. ಹಾಗೇ ಇದನ್ನೂ ಹೇಳಿದ್ರು. “ಸುಧೀರ್ ನಿನ್ನ ನಾನು ಎಲ್ಲಾ ಪಿಚ್ಚರಲ್ಲೂ ಹಾಕ್ಕೊತೀನಿ ನೀನು ಒಂದು ಗೂಡು ಅಂತ ಕಟ್ಕೊ, ಒಬ್ಬ ಖಳನಾಯಕನಾಗಿ ಬಂದು ಇನ್ನೂ ಮೂರು ವರ್ಷ ಆಗಿಲ್ಲ ನೀನು ಒಂದು ಮನೆ ಕಟ್ತಾ ಇದ್ದೀಯ ಅಂದ್ರೆ ನಮಗೆ ಹೆಮ್ಮೆಯ ವಿಷಯ. ನಾವೇ ಇನ್ನೂ ಲಾಡ್ಜಲ್ಲಿ ಇದ್ದೀವಿ. ನೀನು ಮನೆ ಕಟ್ತಿದ್ದೀಯ ಅಂದ್ರೆ ತುಂಬಾ ಒಳ್ಳೆಯ ವಿಷಯ ಅಂತ ಹೇಳಿ, ಅವರ ಹಾಗೂ ವಿಷ್ಣೂವರ್ಧನ್ ಅವರ ಸಹಾಯದಿಂದ ನಾವು ಒಂದು ಮನೆ ಕಟ್ಟಿದ್ವಿ. ನಮ್ಮ ಮನೆ ಗೃಹಪ್ರವೇಶಕ್ಕೆ ಅಂಬರೀಶ್ ಅಣ್ಣಾವ್ರೇ ಬಂದ್ರು “ನಂಗೆ ಬಾರೀ ಖುಷಿಯಾಗುತ್ತೆ ನೀನು ಮಾಡೋ ಸಾಧನೆಗೆ” ಅಂತ ಹೇಳಿ, ನಾವು ಎಲ್ಲೂ ಸಾಲಗಾರರಾಗ್ಬಾರ್ದು, ನಾವು ಮತ್ತೆ ಬೆಂಗಳೂರಿಗೆ ಬಂದು ತೊಂದರೆ ಪಡ್ಬಾರ್ದು ಅಂತ ಹೇಳಿ ಅವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೂಡ ಸಹಾಯ ಮಾಡಿದ್ದಾರೆ.


ಇನ್ನೊಂದು ವಿಷಯ ಹೇಳ್ತೀನಿ. ಒಂದು ಪಿಚ್ಚರಲ್ಲಿ ಜಯಮಾಲಿನಿ ಡ್ಯಾನ್ಸ್ ಇತ್ತು. ಅದು ಮಡ್ರಾಸಲ್ಲಿ ಎ.ವಿ.ಎಮ್ ಸ್ಟುಡಿಯೋದಲ್ಲಿ ಡ್ಯಾನ್ಸ್ ಇತ್ತು. ಸುಧೀರ್ ಅವರ ಜೊತೆಯಲ್ಲಿ ಅದು ಯಾವುದೋ ಹಾಡು. ಆಮೇಲೆ “ಎ.ವಿ.ಎಮ್ ಸ್ಟುಡಿಯೋಗೆ ನಿನ್ನ ಹೆಂಡ್ತಿನೂ ಕರ್ಕೊಂಡು ಬಾ” ಅಂತ ಹೇಳಿದ್ರು. ಫಸ್ಟ್ ಟೈಮ್ ಅಂಬರೀಶ್ ಅಣಾವ್ರೇ ನಮಗೆ ಫ್ಲೈಟ್ ಟಿಕೇಟ್ ತೆಗೆದು ಕೊಟ್ರು. ನಾವಿಬ್ರೂ ಫ್ಲೈಟಲ್ಲಿ ಹೋದ್ವಿ, ಇವರಿಗೆ ಮೂರು ದಿವ್ಸ ಸಾಂಗ್ ಇತ್ತು. ಅವರು ಶೂಟಿಂಗ್ ಮಾಡ್ತಾ ಇದ್ರು. ನಾನು ಎ.ವಿ.ಎಮ್ ಸ್ಟುಡಿಯೋ ಎಲ್ಲಾ ಅಡ್ಡಾಡ್ಕೊಂಡು ಬಂದೆ. ಅವತ್ತು ಶ್ರೀದೇವಿ, ರಾಜೇಶ್ ಖನ್ನ, ಜಯಸುಧಾ, ಜಯಪ್ರಧಾ. ಅವರದ್ದೆಲ್ಲಾ ದೊಡ್ಡ ದೊಡ್ಡ ಸೆಟ್‍ನಲ್ಲಿ ಶೂಟ್ ಇತ್ತು. ಅವರನ್ನೆಲ್ಲಾ ನೋಡ್ಕೊಂಡು ಮಾತಾಡಿಸ್ಕೊಂಡು ಸಂಜೆಯವರೆಗೂ ಅಲ್ಲೇ ಇದ್ದೆ ನಾನು. ಆಮೇಲೆ ಅಂಬರೀಶ್ ಅಣ್ಣಾವ್ರು “ನಿನ್ನ ಹೆಂಡ್ತಿ ಕಳ್ದೋಗಿದ್ದಾಳೋ ಏನೋ ಬೆಳಗ್ಗೆ ಹೋಗಿದ್ದಾಳೆ ಇನ್ನೂ ಬಂದೇ ಇಲ್ಲ ನೋಡೋ”ಅಂದ್ರು. “ಇಲ್ಲಣ್ಣಾ ಅವಳಿಗೆ ಸಿನಿಮಾ ನಟರು ಅಂದ್ರೆ ಭಾರೀ ಹುಚ್ಚು. ಅಲ್ಲೇ ಇರ್ತಾಳೆ” ಅಂದ್ರು. ಅವಾಗ ರಾಜೇಶ್ ಖನ್ನ ಹಾಗೂ ಶ್ರೀದೇವಿದು ಒಂದು ಹಾಡು ಶೂಟಿಂಗ್ ನಡಿತಾ ಇತ್ತು. ಅದನ್ನ ನೋಡ್ಕೊಂಡು ಕೂತ್ಬಿಟ್ಟಿದ್ದೆ ನಾನು.


ಕೊನೆಗೆ ಅಂಬರೀಶ ಅಣ್ಣಾವ್ರು ಬಂದ್ರು ಎರಡು ದಿವ್ಸದಲ್ಲಿ ಹಾಡೆಲ್ಲಾ ಮುಗೀತು. ಮತ್ತೆ ನಮಗೆ ಫ್ಲೈಟ್ ಟಿಕೇಟ್ ಮಾಡ್ಸಿ ನಂಗೆ ಒಂದು ಚೆಕ್ ಕೊಟ್ರು. ನಂಗೆ ಫ್ಲೈಟಲ್ಲಿ ಬರುವ ಸಂಭ್ರಮ, ಚಕ್ ಎಲ್ಲಿಂದ ನೋಡ್ಬೇಕು? ನಾನು ನೋಡ್ಲೇ ಇಲ್ಲ. ಬೆಂಗ್ಳೂರಿಗೆ ಬಂದು ಮನೆಯಲ್ಲಿ ಕೂತ್ಕೊಂಡು ಆಚಕ್‍ನ ನೋಡಿ “ಸುಧೀರ್ ಅವರೇ ಐದು ಸಾವಿರ ರೂಪಾಯಿ ಕೊಟ್ಟಿದ್ದಾರೆ ಅಂಬರೀಷಣ್ಣ”ಅಂತ ನಾನಂದೆ. “ಹೌದಾ ಐದು ಸಾವಿರ ಕೊಟ್ಟಿದ್ದಾರಾ? ಇರ್ಲಿ ಬಿಡು, ಅವರು ಪ್ರೀತಿಯಿಂದ ಐದು ರೂಪಾಯಿ ಕೊಟ್ರೂ ಅದು ನಮಗೆ ಆಶೀರ್ವಾದ”ಅಂದ್ರು. ಸುಧೀರ್ ಅವರು ಅಂಬರೀಶಣ್ಣನ್ನ ಅಷ್ಟೇ ಗೌರವಿಸ್ತಾ ಇದ್ರು, ಅಷ್ಟೇ ಪ್ರೀತಿಸ್ತಾ ಇದ್ರು. ಅವರೂ ಕೂಡ “ನೀನು ನನ್ನ ತಮ್ಮ ಕಣೋ” ಅಂತನೇ ಪ್ರೀತಿ ಮಾಡ್ತಾ ಇದ್ರು. ಅವಾಗ “ಕೊಡು ಇಲ್ಲಿ ಚೆಕ್ ಬ್ಯಾಂಕಿಗೆ ಹಾಕೋಣ” ಅಂದ್ರು “ತಗೊಳ್ರೀ” ಅಂತ ಕೊಟ್ಟೆ. “ಏಯ್ ಗೂಬೆ ಇದು ಐದು ಸಾವಿರ ಅಲ್ಲ, ಐವತ್ತು ಸಾವಿರ ಚೆಕ್ ಕೊಟ್ಟವ್ರೆ ನೋಡಿಲ್ಲಿ” ಅಂದ್ರು.


ಪರಮ್: ನೀವು ಸರಿ ಓದಿರ್ಲಿಲ್ಲ?


ಮಾಲತಿ ಸುಧೀರ್: ಅಂದ್ರೆ ಸರಿಯಾಗಿ ಸೊನ್ನೆಗಳೆಲ್ಲಾ ನೋಡ್ಲೇ ಇಲ್ಲ. ಐದು ಸಾವಿರ ಅಂತ ಬ್ಯಾಂಕಲ್ಲಿ ಕೊಟ್ಟಿದ್ದಿದ್ರೆ ಹೋಗ್ತಿತ್ತಲ್ವಾ? ಅಂತ ಐವತ್ತು ಸಾವಿರ ರೂಪಾಯಿನ ಬ್ಯಾಂಕಿಂದ ತಗೊಂಡು ಬಂದು ಮನೆ ಕಟ್ಸಕ್ಕೆ ಶುರು ಮಾಡಿದ್ರು. ಅದಕ್ಕೇ ನಮ್ಮ ಮನೆಗೆ ಇವತ್ತಿಗೂ ಅಂಬರೀಶ್ ನಿಲಯ ಅಂತನೇ ಹೆಸರಿಟ್ಟಿರೋದು. ನಮ್ಮ ಸುಧೀರ್ ಅವರಿಗೆ ಅನ್ನ ಹಾಗೂ ಆಶ್ರಯ ಕೊಟ್ಟವರನ್ನ ಮರೆಯ ಬಾರ್ದು ಅಂತನೇ ನಮ್ಮ ಹಳೆ ಮನೆಯಲ್ಲಿ ಅಂಬರೀಶ್ ನಿಲಯ ಅಂತನೇ ಹೆಸರಿರೋದು. ಇವತ್ತು ಅಂಬರೀಶ್ ಹಾಗೂ ಸುಧೀರ್ ಇಬ್ಬರೂ ಸತ್ತು ಸ್ವರ್ಗದಲ್ಲಿದ್ದಾರೆ. ಆದರೆ ಅವರ ನೆನಪುಗಳು ಯಾವಾಗ್ಲೂ ನಮಗೆ ಇರುತ್ತೆ. ಮತ್ತೆ ಅನ್ನ ಕೊಟ್ಟು ಆರ್ಶಯ ಕೊಟ್ಟವರನ್ನ ಮರಿಬಾರ್ದು ಅಂತ ಹೇಳಿರೋದು ನಾನು ಮತ್ತು ನನ್ನ ಮಕ್ಕಳು ಅದನ್ನ ನಡೆಸ್ಕೊಂಡೇ ಬರ್ತಾ ಇದ್ದೀವಿ. ಇದು ಚಿತ್ರರಂಗಕ್ಕೆ ಬಂದ ಒಂದು ಸಾಧನೆ.ಮುಂದುವರೆಯುವುದು…

34 views