ಪ್ರಿಂಟಿಂಗ್‌ ಪ್ರೆಸ್‌ ಹುಡಗನಾಗಿದ್ದ ನನ್ನ ಜೊತೆ ಆತ್ಮೀಯವಾಗಿ ಇರ್ತಿದ್ರು

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 127

(ಶಂಕರ್ ನಾಗ್ ಅವರ‌ ಒಡನಾಡಿ‌ ಬಿ.ಸುರೇಶ ಅವರ ನೆನಪುಗಳು)ಶಂಕರ್‌ ನನ್ಹತ್ರ ಮಾತಾಡ್ತನೇ ಪಕ್ಕದಲ್ಲಿರುವ ಅಡುಗೆ ಮನೆಗೆ ಹೋಗಿ ಕಾಫಿ ಅಥವಾ ಟೀ ಮಾಡ್ಕೊಂಡು ಬಂದು ಟೀ ಕುಡಿಯೋ ಅನ್ತಿದ್ರು. ನನ್ನನ್ನ ಬೇರೆಯವನು ಅಂತ ಅಥವಾ ನಾನೊಬ್ಬ ಪ್ರಿಂಟಿಂಗ್ ಪ್ರಸ್ ಇಂದ ಬಂದ ಹುಡುಗ ಅಂತ ಅವ್ರು ನೋಡ್ಲೇ ಇಲ್ಲ. ಆಗ ನೀನೇನು ಮಾಡ್ತಿದ್ದೀಯ? ಅಂತ ಕೇಳಿದ್ರು, ನಾನು ನಾಟಕ ಮಾಡ್ತಿದ್ದೀನಿ ಅಂದೆ. ಅಷ್ಟೊತ್ತಿಗಾಗ್ಲೇ ಒಂದು ನಾಟಕ ಬರ್ದಿದ್ದೆ, ಒಂದೆರಡು ನಾಟಕ ಡೈರೆಕ್ಟ್ ಮಾಡಿದ್ದೆ. ಸೋ ಇವನೂ ಕೂಡ ನಾಟಕದವನೇ ಅಂತ “ ಇವತ್ತು ಸಂಜೆ ನಾಟಕ ಇದೆ ಕಣೊ, ಸ್ವಲ್ಪ ಬ್ಯಾಕ್ ಸ್ಟೇಜ್ ವರ್ಕ್ ಎಲ್ಲಾ ಮಾಡ್ಬೇಕು, ಸಂಜೆ ರವೀಂದ್ರ ಕಲಾಕ್ಷೇತ್ರಕ್ಕೆ ಬಂದ್ಬಿಡೋ”ಅಂದ್ರು. ನಾನು ಹೋದೆ ಅವ್ರು ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ಶೋ ನಡಿತಾ ಇತ್ತು. ‘ಪಿಳ್ಳಿ’ಅಂತ ಒಬ್ಬ ಹುಡುಗಿ ‘ಗಾಯತ್ರಿ ಪುಟ್ಟಿ ಅಂತ ಕರಿತಾರೆ ಆಕೆ ಬ್ಯಾಕ್ ಸ್ಟೇಜ್ ಮುಖ್ಯಸ್ತೆ ಆಗಿದ್ಳು. ಅವ್ಳು ಯಾರ್ಯಾರಿಗೆ ಏನೇನು ಕೆಲ್ಸ ಅಂತ ಹೇಳ್ತಿದ್ಳು. ಅವ್ರು ಹೇಳಿದ್ದಂತಹ ಸಣ್ಣಪುಟ್ಟ ಕೆಲಸಗಳನ್ನ, ಪ್ರಾಪರ್ಟೀಸ್ ತಗೊಂಡು ಹೋಗಿ ಇಡೋದು ಇಂತ ಕೆಲಸಗಳನ್ನ ಮಾಡ್ತಿದ್ದೆ. ಇವತ್ತು ರಂಗಶಂಕರದ ಕ್ರಿಯೇಟಿವ್ ಡೈರಕ್ಟರ್ ಆಗಿರುವಂತಹ ಹಾಗೂ ನನ್ನ ಊರಿನವನೇ ಆದ ಸುರೇಂದ್ರನಾಥ್ ಅದೇ ತಂಡದಲ್ಲಿ ಬೆಳಕು ವಿನ್ಯಾಸಕನಾಗಿ ಕೆಲ್ಸ ಮಾಡ್ತಾ ಇದ್ದ. ಅವ್ನು “ ಬಾರೊ ನನ್ನ ಜೊತೆ” ಅಂತ ಕರೆದಾಗ ಮಧ್ಯದಲ್ಲಿ ಅವನ ಜೊತೆ ಬೆಳಕು ವಿನ್ಯಾಸಕನ ಸಹಾಯಕನಾಗಿ ಕೂಡ ಕೆಲಸ ಮಾಡಿದ್ದೀನಿ. ಈ ಪ್ರೋಸೆಸಲ್ಲಿ ಅವ್ರು ಆಕ್ಸಿಡೆಂಟ್ ಅನ್ನುವ ಸಿನಿಮಾ ಮಾಡಿದ್ರು. ಆ ಸಮಯದಲ್ಲಿ ನಾನು ಸೈಕಲಿಂದ ಪ್ರಮೋಟ್ ಆಗಿ ಮೋಟಾರ್ ಬೈಕಿಗೆ ಬಂದಿದ್ದೆ. ಅದು ಕೂಡ ಅವ್ರಿಗೆ ಗೊತ್ತಿತ್ತು. “ ಏಯ್ ನಾಳೆ ಒಂದು ಇನ್ಸಪೆಕ್ಟರ್ ರೋಲ್ ಇದೆ ಕಣೊ, ಆ ಸಿನಿಮಾದವ್ರ ಹತ್ರ ದುಡ್ಡಿಲ್ಲ, ನಿನ್ನ ಬೈಕೆ ಓಡಿಸ್ತೀನಿ ನಾನು” ಹೀಗೆಲ್ಲಾ ನನ್ನನ್ನ ರೇಗಿಸ್ತಿದ್ರು. ತುಂಬಾ ಅಪರೂಪದ ವ್ಯಕ್ತಿ. ಆ ಇಡೀ ಫ್ಯಾಮಿಲಿನೇ ಯಾರನ್ನೂ ಕೆಳಗಿಟ್ಟು ನೋಡುವವರಲ್ಲ, ಎಲ್ಲರನ್ನೂ ಸಮಾನವಾಗಿ ನೋಡುವಂತಹ ಒಂದು ಫ್ಯಾಮಿಲಿ. ಅವ್ರ ಮನೆಯ ನಾಯಿ ಕೂಡ ಅಷ್ಟೇ ಪ್ರೀತಿ ಮಾಡೋದು ನಮ್ಮನ್ನ. ಅಂದ್ರೆ ತುಂಬಾ ಮಾನವೀಯವಾದಂತಹ ಒಂದು ವಾತಾವರಣ.ಮುಂದುವರೆಯುವುದು…

17 views