ಪಾರ್ವತಮ್ಮನವರು ಖಡಾಖಂಡಿತವಾಗಿ ಬೇಡ ಎಂದು ತಿರಸ್ಕರಿಸಿದ ಕಥೆ!

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 22


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)

ಪ್ಯಾರಿಸ್‌ನಲ್ಲಿ ಆದಂತೆ ಮತ್ತೊಂದು ಟೆನ್ಷನ್‌ ಕೊಡುವಂತಹ ಘಟನೆ ನಡೆಯಿತು. ನಮ್ಮ ಜೊತೆ ಮಾತನಾಡುತ್ತ ಹೋಟೆಲ್‌ನಲ್ಲಿ ಕೂತಿದ್ದ ರಾಜ್‌ಕುಮಾರ್‌ ಅವರು ಹೀಗೆ ಒಂದು ರೌಂಡ್‌ ಹೋಗಿ ಬರ್ತೇನೆ ಎಂದು ಒಬ್ಬರೇ ಹೋದ್ರು. ಅವರಿಗೆ ವಾಕಿಂಗ್ ಮಾಡಿ ಅಭ್ಯಾಸ. ಟೂರ್‌ಗೆ ಬಂದ ಮೇಲೆ ಹೋಗೇ ಇರಲಿಲ್ಲ. ಹಾಗಾಗಿ ಹೋದ್ರು.
ಕನ್ನಡದ ಆರಾಧ್ಯದೈವ ಕಳೆದುಹೋಗಿದ್ದರು

ಟೋಕಿಯೊ ರಸ್ತೆಯಲ್ಲಿರುವ ಪ್ರತಿಯೊಂದು ಅಂಗಡಿಯೂ ಸೌಂದರ್ಯದ ಪ್ರದರ್ಶನದ ಮಳಿಗೆಯಂತಿರುತ್ತದೆ. ಅಂಗಡಿಗಳ ಸೌಂದರ್ಯ ನೋಡುತ್ತಾ ಹೋಗುತ್ತಿದ್ದ ರಾಜ್‌ಕುಮಾರ್‌ ಅವರು ದಾರಿ ತಪ್ಪಿಸಿಕೊಂಡು ಬಿಟ್ಟಿದ್ರು. ಎಷ್ಟು ತಿರುಗಿದ್ರು, ಹೋಟೆಲ್‌ ಅವರಿಗೆ ಸಿಗಲಿಲ್ಲ. ನಾನು ಕೊಟ್ಟಿದ್ದ ವಿಸಿಟಿಂಗ್‌ ಕಾರ್ಡ್‌ ಅವರಿಗೆ ಆಗ ಉಪಯೋಗಕ್ಕೆ ಬಂತು. ಟೋಕಿಯೊದಲ್ಲಿ ಆ ಕಾಲದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ರೆ ಹೊಡೆಯುತ್ತಿದ್ರು. ರಾಜ್‌ಕುಮಾರ್‌ ಅವರಿಗೆ ಕನ್ನಡ ಬಿಟ್ರೆ ಬೇರೆ ಭಾಷೆ ಬರುತ್ತಿರಲಿಲ್ಲ. ಕೆಲವೊಂದು ಇಂಗ್ಲಿಷ್‌ ಪದ ಅವರಿಗೆ ಹೇಳಿಕೊಟ್ಟಿದ್ದೆ. ಹಾಗಾಗಿ ಅವರು ಹೋಟೆಲ್‌ನ ವಿಸಿಟಿಂಗ್‌ ಕಾರ್ಟ್‌ ತೋರಿಸಿ, ‘ದಿಸ್‌ ಹೋಟೆಲ್‌ ವೇರ್‌’ ಎಂದು ಯಾರಿಗೋ ಕೇಳಿದ್ದಾರೆ. ಯಾರೋ ಒಬ್ಬ ಪುಣ್ಯಾತ್ಮ, ನಾನೇ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ, ಹೋಟೆಲ್‌ ಬಾಗಿಲಿಗೆ ತಂದು ಬಿಟ್ಟು ಹೋಗಿದ್ದ. 7 ಗಂಟೆಗೆ ಹೋದವರು 7.30 ಆದರೂ ಬಂದಿರಲಿಲ್ಲ ನಮಗೆ ಟೆನ್ಷನ್‌ ಶುರುವಾಗಿತ್ತು. ನಾವು ಅಕ್ಕಪಕ್ಕದ ರಸ್ತೆಯಲ್ಲಿ ಹುಡುಕುತ್ತಿದ್ವಿ, ಹೋಟೆಲ್‌ ಬಾಗಿಲಿಗೆ ಬಂದಾಗ ರಾಜ್‌ಕುಮಾರ್ ನಿಂತಿದ್ರು. ಎಲ್ಲಿ ಹೋಗಿದ್ರಿ ಎಂದ್ರು. ನಿಮ್ಮನ್ನೇ ಹುಡುಕಿಕೊಂಡು ಹೋಗಿದ್ದೆವು ಅಂದೆವು. ಗೋವಿಂದ್‌ರಾಜ್‌ ಅವರ ಭಾವ ಆದ್ದರಿಂದ ಅವರಿಗೆ ಹೃದಯ ಬಾಯಿಗೆ ಬಂದಿತ್ತು. ರಾಜ್‌ಕುಮಾರ್‌, ಪಾರ್ವತಮ್ಮ ಮತ್ತು ರಾಜ್‌ಕುಮಾರ್‌ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಗೋವಿಂದ ರಾಜ್‌ ಅವರಿಗೆ ವಹಿಸಿದ್ದೆವು. ತಾಯಿಗೆ ಮತ್ತು ಪಾರ್ವತಮ್ಮ ನವರಿಗೆ ಹೇಳಿದ್ರೆ ಎಲ್ಲಿ ಭಯಬೀಳುತ್ತಾರೋ ಎಂದು ಹೇಳಿ ನಾವು ಹೇಳಿರಲಿಲ್ಲ. ನಾವೇ ಹುಡುಕಾಟ ನಡೆಸುತ್ತಿದ್ದೆವು.


ಇನ್ನು ಮೇಲೆ ಒಬ್ಬರೇ ಹೋಗಬೇಡಿ. ಎಲ್ಲಿಗೇ ಹೋಗಬೇಕಾದ್ರು ಜತೆಗೆ ಯಾರನ್ನಾದರೂ ಕರೆದುಕೊಂಡು ಹೋಗಿ ಎಂದು ಹೇಳಿದೆ. ಜಪಾನ್‌ ಪ್ರವಾಸ ಮುಗಿಸಿಕೊಂಡು ನೇರವಾಗಿ ಹಾಂಕಾಂಗ್‌ಗೆ ಹೋದೆವು. ಅಲ್ಲಿಂದ ಬ್ಯಾಂಕಾಕ್‌ಗೆ ಬಂದೆವು.


ಬ್ಯಾಂಕಾಕ್‌ ಮಸಾಜ್‌ ಮತ್ತು ಡಾ.ರಾಜ್

ವಾಕಿಂಗ್‌ ಹೋಗಬೇಕು ಎಂದು ರಾಜ್‌ಕುಮಾರ್‌ ಅವರು ಹೊರಗೆ ಬಂದಿದ್ದರು. ಆ ವೇಳೆ ಕನ್ನಡದವನ್ನೊಬ್ಬ ನೀವು ರಾಜ್‌ಕುಮಾರ್‌ ಅಲ್ವಾ ಎಂದು ಅವರನ್ನು ಕೇಳಿದ್ದಾನೆ. ಅವರು ಹೌದು ಎಂದಿದ್ದಾರೆ. ನಿಮಗೊಂದು ಒಳ್ಳೆಯ ಮಸಾಜ್‌ ಕೊಡಿಸುತ್ತೇನೆ ಬನ್ನಿ ಎಂದು ಕರೆದಿದ್ದಾನೆ. ರಾಜ್‌ಕುಮಾರ್‌ ಅವರಿಗೆ ಇಷ್ಟವಿಲ್ಲ. ಅವನು ಬಿಡುತ್ತಿಲ್ಲ. ಇಲ್ಲಿಗೆ ಬರುವವರೆಲ್ಲ ಮಸಾಜ್‌ಗೆ ಬರೋದು ಸರ್‌, ಬನ್ನಿ ಎಂದು ಒತ್ತಾಯ ಮಾಡಿದ್ದಾನೆ. ಅವರ ಜೇಬಿನಲ್ಲಿ ದುಡ್ಡಿರಲಿಲ್ಲ. ಅವನು ಬಿಡಲು ತಯಾರೇ ಇಲ್ಲ. ಅದೇ ವೇಳೆಗೆ ನಾನು ಅಲ್ಲಿಗೆ ಹೋದೆ. ನೋಡಿ ಭಗವಾನ್‌ ಇವನು ಮಸಾಜ್‌ ಅಂಥ ಅಂತಿದ್ದಾನೆ. ಅದೇನು ಅಂಥ ಕೇಳಿ ಅಂದ್ರು.


ನೀವು ಜತೆಗೆ ಬಂದ್ರೆ ನಾನು ಬರುತ್ತೇನೆ ಅಂದ್ರು. ಆಗ ನಾನು ಬನ್ನಿ ಇಲ್ಲಿ, ಎಂದು ಬದಿಗೆ ಕರೆದುಕೊಂಡು ಹೋಗಿ, ಮಸಾಜ್‌ ಎಂದ್ರೆ ಏನು ಗೊತ್ತಾ ನಿಮಗೆ ಎಂದು ವಿವರಿಸಿದೆ. ಆಗ ಅವರು, ಅಯ್ಯೋ ದೇವರೇ, ಅದಕ್ಕ ಇವನು ಕರೆಯುತ್ತಿರುವುದು. ಹೀಗೆಲ್ಲ ಉಂಟಾ ಪ್ರಪಂಚದಲ್ಲಿ. ಹೇಗಾದ್ರು ಮಾಡಿ ಅವನಿಂದ ತಪ್ಪಿಸಿ ಎಂದ್ರು. ನಾನು ಹೋಗಿ, ನೀನು ಕನ್ನಡದವನೇ ಅಲ್ವಾ ಎಂದೆ. ಹೌದು ಎಂದ. ರಾಜ್‌ಕುಮಾರ್‌ ಗೊತ್ತಲ್ವಾ ನಿನಗೆ ಎಂದೆ. ಹೌದು ಸ್ವಾಮಿ, ಅವರ ಕಟ್ಟಾ ಅಭಿಮಾನಿ ನಾನು ಎಂದ. ಅವರು ಬರುವುದಿಲ್ಲ. ದಯವಿಟ್ಟು ಬಲವಂತ ಮಾಡಬೇಡ. ಅವರ ಇಷ್ಟಕ್ಕೆ ಅವರನ್ನು ಬಿಟ್ಟುಬಿಡು ಎಂದೆ. ನಾವಿಬ್ಬರೂ ಬರುವುದಿಲ್ಲ ಎಂದೆ. ಅವನಿಗೆ ಸ್ವಲ್ಪ ದುಡ್ಡು ಕೊಟ್ಟು, ನೀನು ಇದಕ್ಕೋಸ್ಕರ ಕಷ್ಟಪಡುತ್ತಿರುವುದಲ್ವಾ ತೆಗೆದುಕೊಂಡು ದಯವಿಟ್ಟು ಹೋಗು ಎಂದು ಕಳುಹಿಸಿಕೊಟ್ಟೆ. ರಾಜ್‌ಕುಮಾರ್‌ ಅವರು ನೆಮ್ಮದಿಯ ನಿಟ್ಟುಸಿರು ಬಿಟ್ರು. ಅದಕ್ಕೆ ನೀವು ಜತೆಗಿರಬೇಕು ಎನ್ನುವುದು. ನೀವಿದ್ದರೆ ಇಂತಹ ಕಷ್ಟದಿಂದ ಪಾರು ಮಾಡ್ತೀರ ಅಂದ್ರು.


ರಾಜ್‌ಕುಮಾರ್‌ ಅವರು ಎಂತಹ ಮುಗ್ಧರು ಎಂದ್ರೆ, ಅವರಿಗೆ ಪ್ರಪಂಚದ ವ್ಯವಹಾರವೇ ಗೊತ್ತಿರಲಿಲ್ಲ. ಪ್ರಪಂಚದಲ್ಲಿ ಏನೇನು ನಡೆಯುತ್ತಿರುತ್ತದೆ ಎಂಬುದೇ ಅವರಿಗೆ ತಿಳಿದಿರಲಿಲ್ಲ. ಆ ಮುಗ್ಧತೆಯೇ ಅವರ ಸರಳತೆ, ಸಜ್ಜತೆ, ಸನ್ನಡತೆಗೆ ಕಾರಣ. ಅವರು ಬೆಳೆದ ಸಂಸ್ಕಾರ, ಸಂಪ್ರದಾಯ, ನಿಬಂಧನೆಗಳನ್ನು ಜೀವನ ಪೂರ್ತಿ ಪಾಲಿಸಿಕೊಂಡು ಬಂದ್ರು. ಅದು ರಾಜ್‌ಕುಮಾರ್‌ ಅವರ ವೈಶಿಷ್ಟ್ಯ.


ಇಂಗ್ಲೆಂಡಿನಲ್ಲಿನ ಮೇಣದ ಪ್ರತಿಮೆಗಳು

ಇಂಗ್ಲೆಂಡ್‌ನಲ್ಲಿ ಮೇಡಮ್​ ಟುಸ್ಸಾಡ್​ ಮೇಣದ ಪ್ರತಿಮೆಗಳನ್ನು ನೋಡಿ ನಾವು ಬೆರಗಾಗಿದ್ದೆವು. ಅಲ್ಲಿಯ ಪ್ರತಿಮೆಗಳು ನಿಜವಾದ ಮನುಷ್ಯರೇನೋ ಎಂಬಂತೆ ಭಾಸವಾಗುತ್ತಿತ್ತು. ಚಾರ್ಲಿ ಚಾಪ್ಲಿನ್‌, ಅಮೆರಿಕ ಅಧ್ಯಕ್ಷರು, ನಟರ ಪ್ರತಿಮೆ ಇತ್ತು. ಅಮೆರಿಕ ಅಧ್ಯಕ್ಷರ ಭಾಷಣವನ್ನು ಕೇಳಿಸಿದ್ರು. ಶಬ್ದಕ್ಕೆ ತಕ್ಕಂತೆ ತುಟಿ ಚಲನೆಯೂ ಇರುತ್ತದೆ. ಅದನ್ನು ಹೇಗೆ ಮಾಡಿದ್ದಾರೆ ಎಂಬ ಕುತೂಹಲ ಉಂಟಾಯಿತು ಹಾಗಾಗಿ ಕೇಳಿ ತಿಳಿದುಕೊಂಡೆ. ಲೈಟ್‌ ತುಟಿಯ ಮೇಲೆ ಫ್ಲಿಕರ್ ಆಗುವುದರಿಂದ ತುಟಿ ಚಲನೆಯಾಗುತ್ತದೆ. ತುಟಿಯ ಮೇಲೆ ಲೈಟನ್ನು ಫೋಕಸ್‌ ಮಾಡಿರುತ್ತಾರೆ. 1978ನಲ್ಲಿ ನಾವು ಪ್ರವಾಸ ಹೋದ ಸಂದರ್ಭದಲ್ಲಿಯೇ ಅಮೆರಿಕದಲ್ಲಿ ಟಿ.ವಿ ಕೂಡ ಇತ್ತು. ರಿಮೋಟ್‌ ಮೂಲಕ ಚಾನಲ್‌ ಬದಲಾಯಿಸುತ್ತಿದ್ರೆ, ನಮಗೆ ಆಶ್ಚರ್ಯ ಆಗುತ್ತಿತ್ತು. ನಮ್ಮಲ್ಲಿ ಟಿ.ವಿ ಬಂದಿದ್ದು 1982ನಲ್ಲಿ. ದೊಡ್ಡ ಡಬ್ಬದ ತರಹ ಇತ್ತು. ಅದಕ್ಕೊಂದು ಆ್ಯಂಟೆನಾ ಇತ್ತು. ಮನೆಯ ಮೇಲೆ ಹೋಗಿ ಅದನ್ನು ತಿರುಗಿಸಬೇಕಿತ್ತು. ಈಗ ಬಿಡಿ ಮೊಬೈಲ್‌ನಲ್ಲಿ ಏನು ಬೇಕಾದ್ರು ನೋಡಬಹುದು.


ಟೋಕಿಯೊದಿಂದ ಸಿಂಗಾಪುರಕ್ಕೆ ಬಂದೆವು. ಅಲ್ಲಿ ಮುಸ್ತಫಾ ಎಂಬ ಮಳಿಗೆಯಿದೆ. ಅಲ್ಲಿ ಸಿಗದ ವಸ್ತುಗಳೇ ಇಲ್ಲ. ಬಂಗಾರಕ್ಕಾಗಿಯೇ ಪ್ರತ್ಯೇಕ ವಿಭಾಗವಿದೆ. ಅದು ಮಿನಿ ದುಬೈ ಇದ್ದಂತೆ ಇದೆ. ಅಲ್ಲಿ ಹೋದ್ರೆ ಚಿನ್ನದ ಮನೆಯಲ್ಲಿಯೇ ಇರುವಂತೆ ಅನಿಸುತ್ತದೆ. ರಾಜ್‌ಕುಮಾರ್‌ ಅವರು ನಿಬ್ಬೆರಗಾಗಿ ಹೋದರು. ಅಪಾರ್ಟ್‌ಮೆಂಟ್‌ನಂತಿರುವ ಆ ಮಳಿಗೆಯಲ್ಲಿ ಒಂದು ಸೆಕ್ಷನ್‌ನಲ್ಲಿ ಹತ್ತರಿಂದ ಇಪ್ಪತ್ತು ಸಾವಿರ ಸೂಟ್‌ಕೇಸ್‌, ಇನ್ನೊಂದರಲ್ಲಿ ಲಕ್ಷದವರೆಗೂ ಹ್ಯಾಂಡ್‌ಬ್ಯಾಗ್ ಬಿದ್ದಿತ್ತು. ದಿವಸಕ್ಕೆ ಏನಿಲ್ಲವೆಂದರೂ, ₹10 ಲಕ್ಷ ಡಾಲರ್‌ ವ್ಯಾಪಾರ ನಡೆಯುತ್ತದೆ ಅಲ್ಲಿ. ಬರೀ ಟೂರಿಸ್ಟ್‌ಗಳೇ ತುಂಬಿದ್ರು. ಸಂತೆ ತರಹ ಇತ್ತದು.


ವಿದೇಶದಲ್ಲಿದ್ರೂ ವೆಂಕಟೇಶ್ವರ ದೇವಸ್ಥಾನದ

ಇದಕ್ಕೂ ಮುಂಚೆ ಪ್ರವಾಸದಲ್ಲಿ ಭಾರತೀಯ ಆಹಾರ ಹುಡುಕಿಕೊಂಡು ಹೋಗಿದ್ದೆವು. ಆದರೆ ಅದು ಭಾರತದ ಆಹಾರದಂತಿರಲಿಲ್ಲ. ನ್ಯೂಯಾರ್ಕ್‌ನಲ್ಲಿ ಅಶೋಕ ಹೋಟೆಲ್‌ಗೆ ಹೋಗಿದ್ವಿ. ಸಿಂಗಾಪುರದಲ್ಲಿ ಶರವಣ ಭವನ ಎಂದಿದೆ. ಅಲ್ಲಿ ವೆಂಕಟೇಶ್ವರನ ದೇವಸ್ಥಾನವೂ ಇದೆ. ಅಲ್ಲಿ ಹೋಗಿ ಊಟ ಮಾಡಿದ ಮೇಲೆ ರಾಜ್‌ಕುಮಾರ್‌ ಅವರು, ಇವತ್ತಿಗೆ ನನಗೆ ಪ್ರವಾಸ ತೃಪ್ತಿ ಆಯ್ತು ಅಂದ್ರು. ಎರಡು ಹೊತ್ತು ಅಲ್ಲಿ ಊಟ ಮಾಡಿ, ಊರು ನೋಡಲು ಹೋಗುತ್ತಿದ್ದೆವು. ಸಿಂಗಾಪುರವೇ ನಮ್ಮ ಪ್ರಪಂಚ ಪರ್ಯಟನೆಯ ಕೊನೆಯ ಸ್ಥಳವಾಗಿತ್ತು. ಟೂರ್‌ ಹೇಗಿತ್ತು ಎಂದು ರಾಜ್‌ಕುಮಾರ್‌ ಅವರನ್ನು ಕೇಳಿದೆ. ಫಸ್ಟ್‌ ಕ್ಲಾಸ್‌ ಆಗಿತ್ತು ಎಂದ್ರು.


47 ದಿನಗಳ ನಮ್ಮ ಪ್ರವಾಸದ ಖರ್ಚು ಆಗಿನ ಕಾಲದಲ್ಲಿ ಒಬ್ಬರಿಗೆ ₹55 ಸಾವಿರ ಆಗಿತ್ತು. ಇವತ್ತು ಡಾಲರ್‌ ಬೆಲೆ ₹ 80ಗೆ ಬಂದು ನಿಂತಿದೆ. ಆಗ ಒಂದು ಡಾಲರ್‌ ಬೆಲೆ ₹ 8 ಇತ್ತು. ಆಗ ನಮಗೆ ಒಂದು ಪಾಸ್‌ಪೋರ್ಟ್‌ಗೆ 500 ಡಾಲರ್‌ ಖರ್ಚಿಗೆ ಕೊಡುತ್ತಿದ್ರು. ಎಂ.ಜಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಮಾತ್ರವೇ ಫಾರಿನ್‌ ಎಕ್ಸಚೇಂಜ್‌ ಇದ್ದದ್ದು.


ಎಲ್ಲಿಂದ ಶುರು ಮಾಡಿದೆವೋ ಅಲ್ಲಿಗೆ ಬಂದು ಇಳಿದೆವು. ಭಿಕ್ಷೆ ಬೇಡಿದ ಸಂದರ್ಭ ಒಂದಾದರೆ, ಬ್ಯಾಗಿನಲ್ಲಿ ದುಡ್ಡು ಇಟ್ಕೊಂಡು ವಿದೇಶದಲ್ಲಿ ಪ್ರಯಾಣಿಸಿದ ಅನುಭವ ಇನ್ನೊಂದು. ನನ್ನ ಕನಸು ಇಷ್ಟು ಭವ್ಯವಾಗಿ ನನಸಾಗಲು ಮೊದಲನೆಯದಾಗಿ ಭಗವಂತನ ಕೃಪೆ ಕಾರಣವಾದರೆ, ಇನ್ನೊಂದು ರಾಜ್‌ಕುಮಾರ್‌ ಅವರು ಕೊಟ್ಟಂತಹ ಉತ್ತೇಜನ ಮತ್ತು ಪ್ರೇರಣೆ. ದೇವರ ರೂಪದಲ್ಲಿಯೇ ಅವರು ಬಂದಂತೆ ಅನಿಸುತ್ತದೆ. 1978ರಲ್ಲಿ ಡೈಮಂಟ್‌ ರಾಕೆಟ್‌ಗೆ 38 ಲಕ್ಷ ಖರ್ಚಾಗಿತ್ತು. ಇವತ್ತಿನ, ₹ 3.80 ಕೋಟಿಗೆ ಸಮ.


ಪ್ರವಾಸಕ್ಕೆ ಹೋಗುವಾಗಲೇ ನಮ್ಮ ಸಹಾಯಕ ರೇಣುಕಾಶರ್ಮನಿಗೆ ‘ಚಂದನದ ಗೊಂಬೆ’ಯ ಡಬ್ಬಿಂಗ್‌ ಮುಗಿಸುವಂತೆ ಹೇಳಿದ್ದೆವು. ಅವನಿಗೆ ಆ ಸಾಮರ್ಥ್ಯ ಇತ್ತು. ನಾವು ಟೂರ್‌ ಮುಗಿಸಿ ಬರುವುದರೊಳಗೆ ಆತ ಡಬ್ಬಿಂಗ್‌ ಮುಗಿಸಿದ್ದ. ನಮಗೆ ಸಮಯವನ್ನು ವ್ಯರ್ಥ ಮಾಡಲು ಇಷ್ಟವಿರಲಿಲ್ಲ. ನಾವು ಬರುವುದರೊಳಗೆ ‘ಚಂದನದ ಗೊಂಬೆ’ ತಯಾರಾಗಿತ್ತು. ಬಂದ ನಂತರ ರಿಲೀಸ್‌ ಮಾಡಿದೆವು. ಆ ಸಿನಿಮಾಕ್ಕೆ ಅದ್ಭುತ ಪ್ರತಿಕ್ರಿಯೆ ಲಭಿಸಿತು. ತೆಲುಗಿಗೆ ರಿಮೇಕ್‌ ರೈಟ್ಸ್‌ ಹೋಯ್ತು. ₹1.5 ಲಕ್ಷ ಕೊಟ್ರು. ಆಗಿನ ಕಾಲಕ್ಕೆ ಒಳ್ಳೆಯ ಮೊತ್ತವದು.


ಹೊಸಬೆಳಕು ಆದ ನಂತರ ರಾಜ್‌ಕುಮಾರ್‌ ಕಾಲ್‌ಶೀಟ್‌ ಒಂದೂವರೆ ವರ್ಷ ಇರಲಿಲ್ಲ. ಸಮ್ನೆ ಕೂರುವುದು ಯಾಕೆಂದು ತರಾಸು ಅವರ ‘ಬೆಂಕಿಯ ಬಲೆ’ ಕಾದಂಬರಿಯನ್ನು ಸಿನಿಮಾವಾಗಿಸಲು ಸಜ್ಜಾದೆವು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತರಾಸು ಅವರ ಕಥೆ ಚಿತ್ರವಾದಷ್ಟು ಬೇರೆ ಯಾವ ಲೇಖಕನದು ಆಗಿಲ್ಲ.


ಅನಂತಮೂರ್ತಿಯ ಅವರ ಘಟಶ್ರಾದ್ಧಗೆ ₹ 500 ಕೊಟ್ಟು ರೈಟ್ಸ್‌ ತೆಗೆದುಕೊಂಡಿದ್ದೆವು. ನಾವು ಅದನ್ನು ಸಿನಿಮಾ ಮಾಡಲ್ಲ ಎಂಬುದು ಗೊತ್ತಾದ ಬಳಿಕ ಪ್ರೇಮ ಕಾರಂತ ಅವರು ಅದರ ರೈಟ್ಸ್ ಕೇಳಿದ್ರು. ಪ್ರೇಮ ಕಾರಂತ ಅವರ ಮದುವೆಯ ಸಂದರ್ಭದಿಂದಲೂ ಅವರು ನನಗೆ ಗೊತ್ತು. ಅವರು ಕೇಳಿದಾಗ ಕೊಡದೇ ಇರಲು ಆಗಲಿಲ್ಲ. ಅಲ್ಲದೇ 2 ವರ್ಷಕ್ಕೆ ಒಪ್ಪಂದ ಆಗಿತ್ತು. ಅದು ಮುಗಿಯುವ ಹಂತದಲ್ಲಿತ್ತು. ಇದಲ್ಲದೇ ಮಾಸ್ತಿ ಅವರ ಸುಬ್ಬಣ್ಣ ಕಾದಂಬರಿಯ ರೈಟ್ಸ್‌ ಕೂಡ ತೆಗೆದುಕೊಂಡಿದ್ದೆವು. ಒಂದು ವರ್ಷದಲ್ಲಿ ಸಿನಿಮಾ ಆರಂಭಿಸದೇ ಹೋದರೆ, ಇದರ ರೈಟ್ಸ್‌ ವಾಪಸ್‌ ನನಗೆ ಬರುತ್ತದೆ ಎಂದು ಅವರು ಒಪ್ಪಂದ ಮಾಡಿಕೊಂಡಿದ್ರು. ‘ಸುಬ್ಬಣ್ಣ’ ಸಿನಿಮಾ ಮಾಡಲೇಬೇಕೆಂದು ವರದಪ್ಪ ಮತ್ತು ರಾಜ್‌ಕುಮಾರ್‌ ಅವರಿಗೆ ಕಥೆ ಹೇಳಿದೆವು. ಅವರು ಅದನ್ನು ಒಪ್ಪಿಕೊಂಡಿದ್ರು. ‘ಹೊಸ ಬೆಳಕು’ ಆದ ಮೇಲೆ ಸಿನಿಮಾ ಮಾಡುವುದೆಂದು ಯೋಚಿಸಿದೆವು. ರಾಜ್‌ಕುಮಾರ್ ಅವರು ರಾತ್ರಿ ಮಲಗುವಾಗ ಪಾರ್ವತಮ್ಮ ಅವರಿಗೆ ‘ಸುಬ್ಬಣ್ಣ’ ಕಥೆಯನ್ನು ಹೇಳಿದ್ರಂತೆ. ರಾಜ್‌ಕುಮಾರ್‌ ಅವರ ಬಳಿ ಚೆನ್ನಾಗಿದೆ ಕಥೆ ಎಂದು ಪಾರ್ವತಮ್ಮ ಹೇಳಿದ್ದಾರೆ. ಮರುದಿನ ನನಗೆ ಫೋನ್‌ ಮಾಡಿ ಬರಲು ಹೇಳಿದ್ರು. ಏನು ಅತ್ತಿಗೆ ಎಂದು ಕೇಳಿದೆ. ಅದಕ್ಕವರು ಈ ಪಿಕ್ಚರ್‌ ಮಾಡಿದ್ರೆ ನಿನ್ನ ತಲೆ ಕಡಿದು ಬಿಡುತ್ತೇನೆ ಎಂದ್ರು. ಯಾಕೆ ಅತ್ತಿಗೆ ಎಂದೆ. ಆ ಕಥೆಯಲ್ಲಿ ಹೆಂಡತಿ ಮಕ್ಕಳನ್ನು ಸಾಕಲು ಆಗದೇ ಅವರನ್ನು ಬೀದಿಗೆ ಹಾಕಿ, ಗಂಡ ಮನೆ ಬಿಟ್ಟು ಹೋಗ್ತಾನೆ. ಅದನ್ನು ರಾಜ್‌ಕುಮಾರ್‌ ಮಾಡಿದ್ರೆ ಯಾರಯ್ಯ ಒಪ್ಪಿಕೊಳ್ಳುತ್ತಾರೆ. ಮೊದಲಿಗೆ ನಾನೇ ಒಪ್ಪಿಕೊಳ್ಳುವುದಿಲ್ಲ. ಹೆಂಡತಿ ಮಕ್ಕಳನ್ನು ಬಿಡುವುದೆಂದ್ರೆ, ನನ್ನನ್ನು ಮತ್ತು ನನ್ನ ಮಕ್ಕಳನ್ನು ಬಿಟ್ಟ ಹಾಗೆ ಆಗುತ್ತೆ ಅಂದ್ರು. ಅದರ ಸಹವಾಸವೇ ಬೇಡ ಎಂದು ಬಿಟ್ಟುಬಿಟ್ಟೆವು.


‘ಬೆಂಕಿಯ ಬಲೆ’ ಶೂಟಿಂಗ್ ಮಾಡುವ ವೇಳೆ ಮೈಸೂರಿನ ದಾಸ ಪ್ರಕಾಶ್‌ ಹೋಟೆಲ್‌ಗೆ ನನಗೊಂದು ಲೆಟರ್‌ ಬಂತು. ಅದನ್ನು ತೆರೆದು ನೋಡಿದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರದು. ಅದರಲ್ಲಿ 8,400 ಚೆಕ್‌ ಇತ್ತು. ಆ ಕಾದಂಬರಿಯ ರೈಟ್ಸ್‌ಗೆ ₹10 ಸಾವಿರ ಕೊಟ್ಟಿದ್ದೆವು. ಲೆಟರ್‌ ಓದಿದೆ. ನನ್ನ ಕಾದಂಬರಿಯಾದ ‘ಸುಬ್ಬಣ್ಣ’ವನ್ನು ಸಿನಿಮಾ ಚಿತ್ರೀಕರಣಕ್ಕೆಂದು ತೆಗೆದುಕೊಂಡಿದ್ರಿ. ಒಂದು ವರ್ಷದ ಅವಧಿ ಮುಗಿದಿದೆ. ನೀವು ಕೊಟ್ಟಿರುವ ₹ 10 ಸಾವಿರದಲ್ಲಿ ₹ 1.60ಸಾವಿರ ಆದಾಯ ತೆರಿಗೆ ಕಟ್ಟಿದ್ದೇನೆ. ಆ ಹಣವನ್ನು ಕಳೆದು 8,400 ಚೆಕ್‌ ಇದರಲ್ಲಿ ಇಟ್ಟಿದ್ದೇನೆ ಎಂದು ಬರೆದಿದ್ರು. ಈ ರೀತಿಯ ಸಾಹಿತಿಗಳು ಇರುತ್ತಾರಾ ಎಂದು ಆಶ್ಚರ್ಯವಾಯ್ತು. ಮಾಸ್ತಿ ಅವರ ದೊಡ್ಡ ಗುಣ ಈ ಘಟನೆಯಿಂದ ತಿಳಿಯುತ್ತದೆ.
ಮುಂದುವರಿಯುವುದು...

ಸಂದರ್ಶನ: ಕೆ.ಎಸ್‌. ಪರಮೇಶ್ವರ

58 views