ಪಾರ್ವತಮ್ಮ ಅವರು ಪ್ರೊಡ್ಯೂಸರ್ ಆಗಿದ್ದಕ್ಕೆ ಕಾರಣ “ರಾಜ್‌ ಕುಮಾರ್ ಸಿನಿಮಾದಿಂದಾದ ನಷ್ಟ”

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 35


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ತರಾಸು ಅವರ ‘ಆಕಸ್ಮಿಕ’ ಪುಸ್ತಕ ಅಣ್ಣಾವ್ರಿಗೆ ಸಿಕ್ತು. ಆ ಕಥೆಯನ್ನು ಒಪ್ಪಿಕೊಂಡು ಅವರು ಚಿತ್ರ ಮಾಡಿದ್ರು. ನಾಗಾಭರಣ ಅದರ ನಿರ್ದೇಶನ ಮಾಡಿದ್ರು. ಅದರಲ್ಲಿ ಅವರಿಗೆ ನಾಟಕದ ದೃಶ್ಯ ಬಹಳ ಮೆಚ್ಚುಗೆಯಾಗಿತ್ತು. ಆ ದೃಶ್ಯ ಅವರನ್ನು ನಾಟಕರಂಗದ ಜೀವನಕ್ಕೆ ಕರೆದುಕೊಂಡು ಹೋಗಿತಂತೆ. ತುಂಬಾ ಖುಷಿಯಾಯ್ತು ಆ ದೃಶ್ಯದಲ್ಲಿ ನಟಿಸಿದ್ದು ಎಂದು ಅವರೇ ನನ್ನ ಬಳಿ ಹೇಳಿದ್ರು. ಅವರ ಜೊತೆಯಲ್ಲಿ ಗೀತಾ ನಟಿಸಿದ್ರು. ಈ ಎಲ್ಲ ಸಿನಿಮಾಗಳಿಗೆ ಪಾರ್ವತಮ್ಮ ಅವರೇ ಪ್ರೊಡ್ಯೂಸರ್‌. ಅವರು ಸುಮಾರು 80 ಸಿನಿಮಾಗಳನ್ನು ಪ್ರೊಡ್ಯೂಸ್‌ ಮಾಡಿದ್ದಾರೆ.


ಪಾರ್ವತಮ್ಮ ಅವರು ಪ್ರೊಡ್ಯೂಸರ್ ಆಗಿದ್ದಕ್ಕೂ ಕಾರಣವೊಂದಿದೆ. ರಾಜ್‌ಕುಮಾರ್‌ ಅವರ ಚಿತ್ರವೊಂದು ಬಹಳ ನಿರೀಕ್ಷೆ ಹುಟ್ಟಿಸಿತ್ತು. ವಿದೇಶಗಳಲ್ಲೆಲ್ಲ ಆ ಸಿನಿಮಾದ ಶೂಟಿಂಗ್‌ ನಡೆದಿತ್ತು. ಆ ಸಿನಿಮಾ ಬಹಳ ವಿಷಾದಕರ ರೀತಿಯಲ್ಲಿ ನೆಲಕಚ್ಚಿತು. ರಾಜ್‌ಕುಮಾರ್‌ ಅವರ ಯಾವ ಸಿನಿಮಾವೂ ಅಷ್ಟೊಂದು ನಷ್ಟ ಅನುಭವಿಸರಲಿಲ್ಲ. ಅದರಿಂದ ರಾಜ್‌ಕುಮಾರ್‌ ಅವರಿಗೆ ಬೇಸರ ಆಯ್ತು. ಆ ಚಿತ್ರದ ಪ್ರೊಡ್ಯೂಸರ್‌, ‘ರಾಜ್‌ಕುಮಾರ್‌ ಚಿತ್ರ ಮಾಡಿದ್ರೆ, ಎಲ್ಲ ದುಡ್ಡು ಮಾಡಿಕೊಳ್ತಾರೆ ನಾನು ಲಾಸ್‌ ಮಾಡಿಕೊಂಡೆ’ ಎಂದು ಗಾಂಧಿನಗರದಲ್ಲೆಲ್ಲ ಹೇಳ್ಕೊಂಡು ತಿರುಗಾಡಿದ. ‘ಸಿನಿಮಾದಿಂದಾಗಿ 40 ಲಕ್ಷ ನಷ್ಟ ಆಯ್ತು. ಮನೆ ಮಾರುವ ಸ್ಥಿತಿಗೆ ಬಂದಿದ್ದೇನೆ. ಬೀದಿಗೆ ಬಂದು ಬಿದ್ದು ಬಿಟ್ಟಿದ್ದೇನೆ’ ಎಂದು ಹೇಳಿಕೊಂಡು ತಿರುಗಾಡಿದ. ಇದು ರಾಜ್‌ಕುಮಾರ್‌ ಕಿವಿಗೆ ಬಿತ್ತು. ಅವರು ಪಾರ್ವತಿ ಬಾ ಇಲ್ಲಿ ಎಂದು ಕರೆದು, ಆ ಸಿನಿಮಾದ ಪ್ರೊಡ್ಯೂಸರ್‌ ಯಾರು ಎಂದು ಕೇಳಿದ್ರು. ಅದಕ್ಕೆ ಪಾರ್ವತಮ್ಮನವರು ಉತ್ತರ ಕೊಟ್ರು. ಅವರೆಷ್ಟು ಕಳೆದುಕೊಂಡಿದ್ದಾರೆ ಎಂದು ಮತ್ತೆ ಕೇಳಿದ್ರು. ಅದಕ್ಕವರು 40 ಲಕ್ಷ ಕಳೆದುಕೊಂಡಿದ್ದಾರೆ ಎಂದು ಹೇಳಿದ್ರು. ಅದಕ್ಕೆ ರಾಜ್‌ಕುಮಾರ್‌, ‘ಹಾಗಿದ್ರೆ 40 ಲಕ್ಷ ಚೆಕ್‌ ಬರೆದು ಅವರಿಗೆ ತಲುಪಿಸು’ ಎಂದು ಹೇಳಿದ್ರು. ಚೆಕ್‌ ಬರೆದು ಪ್ರೊಡ್ಯೂಸರ್‌ಗೆ ತಲುಪಿಸಿಯೂ ಬಿಟ್ಟರು. ಮನೆ ಮಾರಬೇಡಿ. ಅದರಲ್ಲಿಯೇ ನೀವು ಸುಭದ್ರವಾಗಿರಿ ಎಂಬ ಸಂದೇಶವನ್ನು ಅದರ ಜೊತೆಗೆ ಕಳುಹಿಸಿದ್ರು.

ಇದಾದ ಮೇಲೆ ರಾಜ್‌ಕುಮಾರ್‌ ಅವರು, ‘ಇನ್ನು ಮಂದೆ ನಾವೇ ಸಿನಿಮಾಗಳ ಪ್ರೊಡ್ಯೂಸ್‌ ಮಾಡೋಣ. ಅದರ ಲಾಭ– ನಷ್ಟವನ್ನು ನಾವೇ ವಹಿಸಿಕೊಳ್ಳೋಣ. ಇನ್ನೊಬ್ಬರಿಗೆ ಕಷ್ಟ ಕೊಡುವುದು ಬೇಡ ಅಂದುಬಿಟ್ರು. ಹಾಗಾಗಿ ಪಾರ್ವತಮ್ಮನವರು ಪ್ರೊಡಕ್ಷನ್‌ ಶುರು ಮಾಡಲೇ ಬೇಕಾಯ್ತು.


ನಾವು ಅಷ್ಟು ಆಪ್ತರಾಗಿದ್ರೂ, ನಂತರದಲ್ಲಿ ನಮಗೂ ಕಾಲ್‌ಶೀಟ್‌ ಇರಲಿಲ್ಲ. ನಮಗೆ ಕೊಟ್ರೆ ಬೇರೆಯವರೂ ಬಂದು ಕೇಳ್ತಾರಲ್ವಾ ಹಾಗಾಗಿ ಯಾರಿಗೂ ಕೊಟ್ಟಿರಲಿಲ್ಲ. ಆದರೆ, ನಿರ್ದೇಶನದ ಜವಾಬ್ದಾರಿ ನಮಗೆ ಕೊಡುವಂತೆ ರಾಜ್‌ಕುಮಾರ್‌ ಹೇಳುತ್ತಿದ್ರು. ದೊರೆ ಭಗವಾನ್‌ ಅವರ ನಿರ್ದೇಶನವೆಂದರೆ ನಾನು ನೆಮ್ಮದಿಯಾಗಿ ನಿದ್ದೆ ಮಾಡ್ತೇನೆ. ಕಥೆ ಕೂಡ ಕೇಳುವುದಿಲ್ಲ. ಅಷ್ಟು ನಂಬಿಕೆ ಇದೆ ಅನ್ನುತ್ತಿದ್ರು.ಮುಂದುವರೆಯುವುದು...

22 views