
“ಪೊಲೀಸರ ಕಣ್ಣಿಗೆ ಖಾರದ ಪುಡಿ”
ನಿವೃತ್ತ ಪೋಲಿಸ್ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್ ಅನುಭವಗಳು ಭಾಗ 12
ಶಿವಾಜಿನಗರದಲ್ಲಿ ಕೋಮು ಗಲಭೆ ನಡೆಯುತ್ತಿತ್ತು. ತಲ್ವಾರ್ ಹಿಡಿದುಕೊಂಡು ಪೊಲೀಸರಿಗೆ ಚಾಲೆಂಜ್ ಮಾಡಿದ್ರು. ಆಗ ನಾನು ಸಿಸಿಬಿಯ ಎಸಿಪಿ ಆಗಿದ್ದೆ. ನಮ್ಮ ವಿಶೇಷ ತಂಡವನ್ನು ಗಲಭೆ ನಿಯಂತ್ರಿಸಲು ಅಲ್ಲಿಗೆ ಕರೆಸಿದ್ರು. ನನ್ನನ್ನು, ಅಶೋಕ್, ನಾಗರಾಜ್, ಪ್ರತಾಪ್ಸಿಂಗ್, ರಂಗಪ್ಪ ಅವರನ್ನು ಸೇವೆಯಲ್ಲಿ ಇರುವವರೆಗೂ ಎಲ್ಲೇ ಗಲಭೆ ನಡೆದರೂ ಕರೆಸಿ ಅನ್ನುತ್ತಿದ್ರು. ಕೋಮು ಗಲಭೆಗಳಲ್ಲಿ ಲೀಡ್ ಮಾಡುವುದು ಬಹಳ ಮುಖ್ಯ. ನನ್ನ ಮೇಲೆ ದಾಳಿ ಮಾಡಲು ಯಾವ ರೌಡಿಗಳಿಗೂ ತಾಕತ್ತಿಲ್ಲ. ಅವರು ಕನಸಿನಲ್ಲಿಯೂ ಅದನ್ನು ಯೋಚನೆ ಮಾಡುವುದಿಲ್ಲ. ನನ್ನ ಮೈಮೇಲೆ ನಾಲ್ಕೈದು ಕಡೆ ಗಾಯಗಳಿವೆ. ಕೋಮುಗಲಭೆಯಲ್ಲಿ ಗಾಯಗಳಾಗುತ್ತವೆ. ಎಲ್ಲಿಂದಲೋ ಕಲ್ಲುಗಳು ಬಂದು ಬೀಳುತ್ತವೆ. ಈ ಸಂದರ್ಭದಲ್ಲಿ ಲೀಡ್ ಮಾಡುವುದರಿಂದ ಫ್ರಂಟ್ನಲ್ಲಿಯೇ ಇರುತ್ತೇನೆ. ನನ್ನ ಮುಂದೆ ಕಾನ್ಸ್ಟೆಬಲ್ ಇರಲು ಬಿಡುತ್ತಿರಲಿಲ್ಲ. ಅವರು ನಾವು ಹೋಗುತ್ತೇವೆ ಎಂದು ಬರುತ್ತಿದ್ರು. ದಯವಿಟ್ಟು ಬೇಡ, ನೀವು ಹಿಂದೆ ಬನ್ನಿ ಅನ್ನುತ್ತಿದ್ದೆ.
ಶಿವಾಜಿನಗರದಲ್ಲಿ ಹೋಗುತ್ತಿದ್ದಾಗ ನಂಜುಂಡೇಗೌಡ ಎಂದು, ಅವರೀಗ ವಿಜಯನಗರದಲ್ಲಿ ಎಸಿಪಿ ಆಗಿದ್ದಾರೆ. ಆಗ ಅವರು ನನ್ನ ಜೊತೆ ಸಬ್ಇನ್ಸ್ಪೆಕ್ಟರ್ ಆಗಿದ್ರು. ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಎಲ್ಲರೂ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಿದ್ರು. ಸಾಯಂಕಾಲ. ಏನು ಅಂತಾ ನೋಡಿದ್ರೆ, ಮೆಣಸಿನಪುಡಿ ತೂರಿಬಿಟ್ಟಿದ್ದಾರೆ. ಮನೆಯ ಮೇಲಿನ ಮಹಡಿ ಮೇಲಿಂದ ಮೆಣಸಿನಪುಡಿ ಹಾಕುತ್ತಿದ್ರು. ಅಲ್ಲಿ ನುಗ್ಗಿದ್ರೆ ಬಂದೋಬಸ್ತ್ ಮಾಡಿಬಿಟ್ಟಿದ್ರು. ನಾವು ಅವರನ್ನು ಹಿಡಿಯಲೇಬೇಕು ಅಂತಾ ಬಾಗಿಲು ಒಡೆದು ನುಗ್ಗ ಬೇಕಾದ್ರೆ, ಒಬ್ಬ ಅಡ್ಡ ಬಂದು ಪೊಲೀಸರ ಮೇಲೆ ತಲ್ವಾರ್ ಬೀಸಿ ಬಿಟ್ಟ. ಅಲ್ಲೊಬ್ಬ ಮುದುಕ ಇದ್ದ. ಆತನಿಗೆ 70–75 ವರ್ಷ ಇರಬಹುದು. ಬಿಳಿ ಪೈಜಾಮ, ಜುಬ್ಬಾ ಹಾಕಿಕೊಂಡಿದ್ದ. ಬಿಳಿ ದಾಡಿ ಬಿಟ್ಟುಕೊಂಡಿದ್ದ. ನಮಗೆ ದಾರಿ ಮಾಡಿ ಕೊಡುವ ಬದಲು, ಒಂದಿಷ್ಟು ಮೆಣಸಿನ ಪುಡಿಯನ್ನು ನಂಜುಂಡೇಗೌಡ ಅವರ ಮುಖಕ್ಕೆ ಹಾಕಿಬಿಟ್ಟ. ಅವರು ಸುಧಾರಿಸಿಕೊಳ್ಳಲು 20 ನಿಮಿಷ ಆಗಿಹೋಯ್ತು. ಎಲ್ಲರನ್ನೂ ಬಡಿದು ಒಳಗೆ ನುಗ್ಗಿದ್ವಿ. ನುಗ್ಗಬೇಕಾದ್ರೆ ಆ ಮುದುಕನಿಗೆ ಪೆಟ್ಟು ಬಿತ್ತು. ಸಣ್ಣ ಗಾಯ, ಆದ್ರೆ ಬಿಳಿ ಜುಬ್ಬದ ಮೇಲೆಲ್ಲ ರಕ್ತ ಹರಿಯಿತು. ಅವನನ್ನು ಹಿಡ್ಕೊಂಡು ಅವರೆಲ್ಲ ಮೆರವಣಿಗೆ ಮಾಡಿದ್ರು. ನೋಡ್ರಿ, ಪೊಲೀಸ್ನವರು ಹೀಗೆ ಹೊಡೆದಿದ್ದಾರೆ ಎಂದು ಪ್ರಚಾರ ಮಾಡಿದ್ರು.
3 ಮಹಡಿಯಿಂದ ಸೈಜ್ಗಲ್ಲುಗಳನ್ನು ಹಾಕುತ್ತಿದ್ರು. ಎಂಥ ಪರಿಸ್ಥಿತಿ ನಮಗೆ ಎಂದ್ರೆ, ಮೆಣಸಿನಕಾಯಿ ಪುಡಿ ತೂರುತ್ತಿದ್ರು. ಆ್ಯಸಿಡ್ ಬಾಟಲಿಗಳನ್ನು ಹಾಕುತ್ತಿದ್ರು. ಸೈಜ್ಗಲ್ಲುಗಳಿಗಳಿಂದ ತಪ್ಪಿಸಿಕೊಳ್ಳಬಹುದು. ಆದರೆ, ಸಣ್ಣ ಕಲ್ಲುಗಳಿಂದ ತಪ್ಪಿಸಿಕೊಳ್ಳಲು ಆಗುವುದೇ ಇಲ್ಲ. ಗುರಿ ಇಟ್ಟು ಹೊಡೆಯುವುದರಿಂದ ಆ ನೋವು ತಡೆದುಕೊಳ್ಳುವುದೇ ಕಷ್ಟ. ನಂಜುಂಡೇಗೌಡರಿಗೆ ಏಟು ಬಿದ್ದು ಬಿಡ್ತು. ಒಬ್ಬೊಬ್ಬರಿಗೆ ಏಟು ಬೀಳಲು ಶುರುವಾಯಿತು. ನುಗ್ಗಿ ಹೊಡೆದ್ವಿ. ಕೋಮು ಗಲಭೆಗಳು ದೊಡ್ಡದಾಗುವುದು ರಾಜಕಾರಣಿಗಳ ಕೆಟ್ಟ ನಿಲುವುಗಳಿಂದ. ಅವರು ಯಾರನ್ನೋ ಓಲೈಸಲು ಹೋಗುತ್ತಾರೆ. ನಾವು ಯಾರ ಓಲೈಕೆಗೂ ಹೋಗುವುದಿಲ್ಲ. ಗಲಭೆಕೋರರನ್ನು ಬಡಿದು ನಿಯಂತ್ರಣಕ್ಕೆ ತರುವುದು ನಮ್ಮ ಜಾಯಮಾನ.
ಎರಡು ಗಂಟೆ ರಾತ್ರಿಯಲ್ಲಿ ತಲ್ವಾರ್ಗಳನ್ನು ಇಟ್ಕೊಂಡು ಓಡಾಡುತ್ತಿದ್ರು. ನಾವು ಲೈಟ್ ಕಂಬದ ಕೆಳಗೆ ನಿಂತು ಅವರಿಗೆ ಮುಖ ತೋರಿಸುತ್ತಿದ್ವಿ. ಉರ್ದುವಿನಲ್ಲಿ ಕೆಲವರು, ತಮಿಳಿನಲ್ಲಿ ಮತ್ತೆ ಕೆಲವರು ಸಿಸಿಬಿಯವರು ಬಂದಿದ್ದಾರೆ ಎಂದು ಅವರವರೇ ಮಾತಾಡೋದು ಕೇಳಿಸುತ್ತಿತ್ತು. ನಮ್ಮನ್ನು ಅವರು ಗುರುತಿಸಿದ್ದಾರೆ ಇನ್ನು ನಾವು ನುಗ್ಗಿ ಹೊಡೆಯಬೇಕು. ಇಲ್ಲಂದ್ರೆ ಎರಡು ದಿನ ಮುಂದುವರಿಯುತ್ತದೆ ಎಂದು ನಿರ್ಧರಿಸಿದ್ವಿ. ನುಗ್ಗಿ ಬಡಿದು ಒಂದಷ್ಟು ಜನರನ್ನು ದಸ್ತಗಿರಿ ಮಾಡಿದ್ವಿ. ದಸ್ತಗಿರಿ ಮಾಡಿದ ತಕ್ಷಣ ಎಲ್ಲ ಸ್ತಬ್ಧ ಆಗೋಯ್ತು. ನಾವೆಷ್ಟು ಸುಸ್ತಾಗಿದ್ವಿ ಅಂದ್ರೆ ಬರೀ ನೀರು ಕುಡಿದುಕೊಂಡು ಕೆಲಸ ಮಾಡಿದ್ವಿ. ಊಟ ಇರಲೇ ಇಲ್ಲ. ಒಂದು ಸರ್ಕಲ್ನಲ್ಲಿ ಕೂತಿದ್ವಿ. ಟೀ ತರ್ಸೋದಕ್ಕೆ ಕಳಿಸಿದ್ವಿ. ಮೆಜೆಸ್ಟಿಕ್ನಿಂದ ತರಬೇಕಿತ್ತು. ಎಲ್ಲರೂ ಒಂದು ಮನೆಯಲ್ಲಿ ಬಕೆಟ್ನಲ್ಲಿ ನೀರು ತೆಗೆದುಕೊಂಡು ಮುಖ ತೊಳೆದುಕೊಳ್ಳುತ್ತಿದ್ವಿ. ಆಗ ಒಬ್ಬ ಹೆಂಗಸು ನಮ್ಮ ಹತ್ತಿರ ಬರುತ್ತಿದ್ದಳು. ಪೊಲೀಸ್ನವರೆಲ್ಲ ಏನೋ ಕುತಂತ್ರ ಇರೋ ಹಾಗಿದೆ. ಆಕೆ ಸ್ವಲ್ಪವೂ ಭಯ ಇಲ್ಲದೇ ಹೀಗೆ ಬರುತ್ತಿದ್ದಾಳೆ ಎಂದು ಹೇಳಿದ್ರು. ಮೈಕ್ನಲ್ಲಿ ಕರ್ಫ್ಯೂ ಇರೋದನ್ನು ಹೇಳಿ ಅಂದಾಗ, ಕೈಯಲ್ಲಿ ಎರಡು ಬ್ಯಾಗ್ ಇದೆ ಸರ್ ಎಂದು ಪೊಲೀಸರೊಬ್ಬರು ಹೇಳಿದ್ರು. ಆಗಾಗ ನಾವೇ ಖಾಲಿ ಬ್ಯಾಗ್ಗಳನ್ನು ಮುಟ್ಟಬೇಡಿ. ಸ್ಫೋಟಕಗಳು ಇರುವ ಸಾಧ್ಯತೆ ಇರುತ್ತದೆ ಪೊಲೀಸರಿಗೆ ತಿಳಿಸಿ ಎಂದು ಎಚ್ಚರಿಕೆ ಕೊಡುತ್ತಿದ್ವಿ. ನಮಗೇ ಆ ಸ್ಥಿತಿ ಬಂತು. ಎರಡು ಬ್ಯಾಗ್ಗಳು ಭಾರವಾಗಿತ್ತು. ನಮಗೆ ಆತಂಕ ಶುರುವಾಯಿತು. ಹೆಣ್ಣು ಮಗಳನ್ನು ಎದುರಿಸಲು ಆಗೋಲ್ವಾ ಎಂದು ಯಾರಾದ್ರು ಹೇಳಬಹುದು. ತಕ್ಷಣ ಮೈಕ್ನಲ್ಲಿ ಕರ್ಫ್ಯೂ ಜಾರಿಯಲ್ಲಿದೆ ಎಂದು ಅನೌನ್ಸ್ ಮಾಡಿದ್ರು. ಎಲ್ಲ ಭಾಷೆಯಲ್ಲೂ ಅನೌನ್ಸ್ ಮಾಡುತ್ತೇವೆ ನಾವು. ಆಗ ಅಜ್ಜಿ ಎರಡು ಬ್ಯಾಗ್ಗಳನ್ನು ಕೆಳಗಿಟ್ಟು ಕೈಯೆಲ್ಲ ಮುಗಿಯಲು ಶುರು ಮಾಡಿದ್ರು. ಮುಸ್ಲಿಂ ಅಜ್ಜಿ. ಕೆಲವರಿಗೆ ಆತಂಕ. ಕಾಶ್ಮೀರದಲ್ಲಿ ಹೀಗಾಯ್ತು. ಅಲ್ಲಿ ಹೀಗಾಯ್ತು ಅಂತೆಲ್ಲ ಕಥೆ ಹೇಳಲು ಶುರು ಮಾಡಿದ್ರು. ಏನಿಲ್ಲ ಬಿಡ್ರಿ, ಬರ್ಲಿ ಬಿಡಿ. ಎಲ್ಲಾ ಹುಷಾರಾಗಿರಿ ಅಂದೆ, ಎಲ್ಲ ಅಲರ್ಟ್ ಆದ್ವಿ. ಅಜ್ಜಿ ಬ್ಯಾಗ್ ತೆಗೆದುಕೊಂಡು ಬಂದ್ರು. ನಾನು ಮುಂದೆ ಹೋಗಿ ಕರ್ಫ್ಯೂ ಇದೆ ಬರಬೇಡಿ ಅಂದೆ. ಆಗ ಅವರು ಇಲ್ಲ ಮಗನೇ, ನಾನು ನಿಮ್ಮ ಹತ್ತಿರನೇ ಬರುತ್ತಿರುವುದು ಎಂದ್ರು. ನನಗೆ ಏನಪ್ಪ ಈ ಅಜ್ಜಿ, ಟಿಯರ್ ಗ್ಯಾಸ್, ಫೈರಿಂಗ್, ಲಾಠಿ ಚಾರ್ಜ್ ಆಗಿದೆ. ಜನ ನಡುಗಿ ಹೋಗಿ ಬಿಟ್ಟಿದ್ದಾರೆ. ನನ್ನನ್ನ ತಡಿಬೇಡಿ. ನಿಮ್ಮ ತಾಯಿ ಬಂದ್ರೆ ತಡಿತೀರಾ ಅಂದ್ರು. ನಿಮ್ಮ ತಾಯಿ ಬಂದ್ರೆ ಈಗೇನು ಮಾಡುತ್ತಿದ್ರಿ ಎಂದು ಹತ್ತಿರದಲ್ಲಿ ಬಂದು ಕೇಳಿದ್ರು, ಬನ್ನಿ ಅಂದೆ. ಪೊಲೀಸ್ನವರೆಲ್ಲ ಸುಸ್ತಾಗಿ ಹೋಗಿದ್ರು. ಎಲ್ಲ ಸರ್ಕಲ್ನ ಲೈಟ್ಕಂಬದ ಕೆಳಗೆ ಕೂತಿದ್ರು. ಎಲ್ಲ ಮುಖ ತೊಳೆದುಕೊಂಡಿದ್ವಿ. ಮುಖ ಒರೆಸಲು ಟವಲ್ ಇರಲಿಲ್ಲ. ಅಜ್ಜಿ ಇವೆಲ್ಲವನ್ನು ನೋಡಿದೆ. ನಾಲ್ಕು ಫ್ಲಾಸ್ಕ್ನಲ್ಲಿ ಟೀ, ಬಿಸ್ಕತ್ ತಂದಿತ್ತು. ಕಾನ್ಸ್ಟೆಬಲ್ನಿಂದ ಹಿಡಿದು ನನ್ನ ವರೆಗೂ ಎಲ್ಲರಿಗೂ ಕಪ್ಗೆ ಹಾಕಿ, ಟೀ ಕುಡೀರಿ, ಬಿಸ್ಕತ್ ತಿನ್ನಿ ಕೊಟ್ರು. ಮುಖ ಒರೆಸಿಕೊಳ್ಳಿ ಬಟ್ಟೆಯ ಸಣ್ಣ, ಸಣ್ಣ ನ್ಯಾಪ್ಕಿನ್ ಕೂಡ ಕೊಟ್ರು. ಆಮೇಲೆ ನಮ್ಮ ಜೊತೆಗಿರುವ ಪೊಲೀಸ್ನವರಿಗೆಲ್ಲ, ಏನಪ್ಪ ಮಾಡಿಬಿಟ್ಟಿದ್ದಾರೆ ತಪ್ಪಾಯ್ತು. ನೀವು ಇಷ್ಟು ಕೆಲಸ ಮಾಡುತ್ತಿದ್ದೀರಿ. ಈ ಗಂಡಸರಿಗೆ ಇದು ಅರ್ಥವೇ ಆಗೋದಿಲ್ವಲ್ಲ ಅಂದ್ರು. ಕನಿಷ್ಠ ಅಜ್ಜಿಯಾದರೂ, ನಮ್ಮ ಕಷ್ಟವನ್ನು ಅರಿತುಕೊಂಡ್ರಲ್ಲ ಅಂತಾ ನಮಗೆ ಖುಷಿಯಾಯಿತು. ಇದು ಗಲಭೆಯಲ್ಲಿ ನಾವು ಹೈರಾಣಾದಾಗ ಯಾರೋ ಒಬ್ಬರು ಈ ರೀತಿಯಾಗಿ ನಮ್ಮ ಕಷ್ಟವನ್ನು ಅರಿತು ಶ್ಲಾಘಿಸಿದಾಗ ನಮಗೆ ಆ ಶ್ರಮವೇ ಗೊತ್ತಾಗುವುದಿಲ್ಲ. ಅಷ್ಟು ಸುಸ್ತಾಗಿದ್ದು, ಒಂದು ಸೆಕೆಂಡ್ಗೆ ಮಾಯವಾಗುತ್ತದೆ. ಆ ತಾಯಿ ಕೊಟ್ಟಿದ್ದು ಟೀ ಅಲ್ಲ, ಅಮೃತ. ಇದರಿಂದ ಎಷ್ಟು ಜಾರ್ಜ್ ಆಗ್ತೀವಿ ಅಂದ್ರೆ, ಇನ್ನೊಂದಿನ ಗಲಾಟೆ ಆದ್ರೂ ಕೆಲಸ ಮಾಡುವಷ್ಟು ತಾಕತ್ತು ನಮಗೆ ಬರುತ್ತದೆ. ಇದು ನಮ್ಮ ದೇಶದಲ್ಲಿರುವ ಮಹಿಳೆಯರ ಮನಸು. ಈ ಮನಸು ಎಲ್ಲರಲ್ಲೂ ಬರಬೇಕು. ಆಗ ಭಾವೈಕ್ಯ, ಸಾಮರಸ್ಯ ಭಾರತ, ಕುವೆಂಪು ಅವರು ಹೇಳಿದ ಹಾಗೆ ‘ಮನುಜ ಮತ ವಿಶ್ವ ಪಥ’ ಆ ಭಾರತ ಆಗುತ್ತದೆ.
ಪ್ರಜಾವಾಣಿ, ಡೆಕ್ಕನ್ಹೆರಾಲ್ಡ್ ಕಚೇರಿ ಮುಂದೆ ಗಲಾಟೆ ಆದಾಗ, ಬೆಳಿಗ್ಗೆ ಒಂದು ಕಾರಿನಲ್ಲಿ 20 ಜನ ಪತ್ರಿಕೆಯ ಕಚೇರಿಗೆ ಬರ್ತಾರೆ. ಈ ರೀತಿ ಆಗಿದೆ ವಾಪಸ್ ತಗೊಳ್ಳಿ ಅಂತಾರೆ. ಇಲ್ಲ ಅದು ಕಥೆ. ವಿಷಾದ ವ್ಯಕ್ತಪಡಿಸುತ್ತೇವೆ. ನೀವು ಆತಂಕ ಪಡಬೇಡಿ ಅಂದ್ರು. ಇಲ್ಲ ಹಾಗೆ, ಹೀಗೆ ಅಂಥ ಕೂಗಾಡಿದ್ರು, ಸಮಾಧಾನ ಮಾಡಿ ಕಳುಹಿಸುತ್ತಾರೆ. ಬಂದವರೆಲ್ಲರ ಕೈಯಲ್ಲಿದ್ದ ವಾಚ್ಗಳು 70–80 ಸಾವಿರದ ವಾಚ್. ಜೀನ್ಸ್, ಶರ್ಟ್ಗಳೆಲ್ಲ ಬ್ರಾಡೆಂಡ್. ಬೆಂಗಳೂರಿನಲ್ಲಿ ಸಿಗದೇ ಇರುವ ಬ್ರಾಂಡೆಡ್ ಶೂ ಹಾಕಿಕೊಂಡಿದ್ರು. ಅವರಿಗೆಲ್ಲ ಸಮಾಧಾನ ಮಾಡಿ ಕಳುಹಿಸಿದ್ರು. ಅದ್ಯಾವ ತಿರುವು ಪಡೆದುಕೊಂಡಿತ್ತೋ, ಇದೆಲ್ಲ ಆಗಿ ಎರಡು ಗಂಟೆ ಆದ ಮೇಲೆ ಕಚೇರಿಗೆ ಸಾವಿರಾರು ಜನ ಬಂದು ನುಗ್ಗಿ ಬಿಟ್ರು. ಬಂದವರೆಲ್ಲ ಎಲ್ಲ ಪಕ್ಷದ ಲೀಡರ್, ಪುಡಿಲೀಡರ್ಗಳು. ಅವರು ಸಮಾಧಾನ ಮಾಡಿ ಹೋಗಿದ್ದಾರೆ ಎಂದು ಭಾವಿಸಿಕೊಂಡಿದ್ವಿ. ಆದರೆ, ದೊಡ್ಡ ಗುಂಪು ಬಂದು ದಾಳಿ ನಡೆಸಿತು. ಪೊಲೀಸ್ ಫೈರಿಂಗ್ ಆಯ್ತು. ಎಷ್ಟೋ ಜನ ಸತ್ರು. ಸತ್ತ ಮೇಲೆ ಗಲಭೆ ನಿಯಂತ್ರಣಕ್ಕೆ ಬಂತು.
ಕವಿ ರಂಜಾನ್ದರ್ಗಾ ಅವರು, ಕೋಮು ಗಲಭೆ ಬಗ್ಗೆ ಮಾತನಾಡುತ್ತಿದ್ದಾಗ ಹೇಳಿದ್ರು, ಶಿವರಾಂ ಸರ್, ಬೆಳಿಗ್ಗೆ ಪ್ರಜಾವಾಣಿ ಕಚೇರಿಗೆ ಬಂದವರೆಲ್ಲ ಬ್ರಾಂಡೆಡ್ ಶೂ, ವಾಚ್, ಜೀನ್ಸ್ ಹಾಕಿದ್ರು. ಅವರ ಫರ್ಫ್ಯೂಮ್ ಪರಿಮಳ ಇಡೀ ಕಚೇರಿಗೆ ವ್ಯಾಪಿಸಿತ್ತು. ಎಲ್ಲ ದುಬಾರಿ ಫರ್ಫ್ಯೂಮ್. ಎಲ್ಲರ ಕತ್ತಲ್ಲೂ ಚೈನ್ ಇತ್ತು. ಅವರೇನೋ ಸರಿ ಮಾಡ್ತಾರೆ ಅನ್ಕೊಂಡ್ವಿ. ಆದರೆ, ಗಲಾಟೆ ಶುರುವಾಯಿತು. ಪೊಲೀಸ್ ಫೈರಿಂಗ್ ಆಯ್ತು. ಆಮೇಲೆ ಪ್ರದೇಶ ನಿರ್ಜನವಾಯಿತು. ಗಲಭೆಕೋರರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿ ಹೋದ್ರು. ಪೊಲೀಸ್ ಎಸ್ಕಾರ್ಟ್ನಲ್ಲಿ ನಮ್ಮನ್ನೆಲ್ಲ ಕಚೇರಿಯಿಂದ ಮನೆಗೆ ಬಿಡುವ ವ್ಯವಸ್ಥೆ ಆಗಿತ್ತು. ಆಗ ಹೊರಗಡೆ ಬಂದ್ವಿ. ಇಡೀ ಎಂ.ಜಿ ರಸ್ತೆಯನ್ನು ನಿಂತು ನೋಡಿದಾಗ ನನ್ನ ಕಣ್ಣಲ್ಲಿ ನೀರು ಬಂತು ಅಂದ್ರು. ಯಾಕೆ ಸರ್ ಬಂತು ಅಂದೆ. ಇಡೀ ಎಂ.ಜಿ ರಸ್ತೆಯಲ್ಲಿ ಹವಾಯಿ ಚಪ್ಪಲಿ, ಕಿತ್ತುಹೋದ ಚಪ್ಪಲಿಗಳು ಇತ್ತು. ಒಂದೇ ಒಂದು ಬಾಟಾ ಕಂಪನಿಯ ಶೂ, ಚಪ್ಪಲಿ ಅಲ್ಲಿ ಬಿದ್ದಿರಲಿಲ್ಲ. ಎಲ್ಲ ಕಿತ್ತೋಗಿರುವ ಹವಾಯಿ ಚಪ್ಪಲಿ, ಪಿನ್ ಸಿಕ್ಕಿಸಿರುವುದು, ಹೊಲಿಗೆ ಹಾಕಿರುವ ಚಪ್ಪಲಿಗಳೇ ಇದ್ದವು ಅಂದ್ರು. ಶ್ರೀಮಂತ ಶಕ್ತಿಗಳು ಅಮಾಯಕರನ್ನು ಹೇಗೆ ದುರುಪಯೋಗ ಮಾಡಿಕೊಳ್ತಾರೆ. ಕೋಮುಗಲಭೆಗಳ ಹಿಂದೆ ಶ್ರೀಮಂತ ಶಕ್ತಿಗಳು ನೀಚ ರಾಜಕಾರಣಿಗಳು ಇರ್ತಾರೆ. ಇದು ಒಂದು ಧರ್ಮಕ್ಕೆ ಸೀಮಿತವಲ್ಲ. ಎಲ್ಲ ಧರ್ಮಗಳಲ್ಲಿಯೂ ಈ ರೀತಿಯ ಕೆಟ್ಟ ಮನಸ್ಥಿತಿಯ ಜನರು ಇರುತ್ತಾರೆ. ಇದಕ್ಕೆ ಧರ್ಮ ಭೇದವೇ ಇಲ್ಲ. ಇದರಲ್ಲಿ ಅನ್ಯಾಯಕ್ಕೆ ಒಳಗಾಗುವವನು ಬಡವ.
ಬಡತನಕ್ಕೆ ಜಾತಿಯಿಲ್ಲ, ಧರ್ಮ ಇಲ್ಲ, ಭಾಷೆಯಿಲ್ಲ, ಗಡಿಗಳ ಮಿತಿಯಿಲ್ಲ. ಹೊಟ್ಟೆ ತುಂಬಿರುವವನಿಗೆ ಜಾತಿ, ಧರ್ಮ, ಅಸೂಯೆ, ಪಂಗಡ, ಪಕ್ಷ, ನೀಚ ಬುದ್ಧಿ ಇರುತ್ತದೆ. ದೇಶದ ಬಡವನಿಗೆ ದಾರಿ ತಪ್ಪಿಸಿದ್ರೆ ಈ ರೀತಿಯ ಕೋಮು ಗಲಭೆ ಆಗುತ್ತದೆ. ಯಾವ ಧರ್ಮವೂ ಅಧರ್ಮವನ್ನು ಬೋಧಿಸಿಲ್ಲ. ಹಾಗೆ ಬೋಧಿಸಿದರೆ ಅದು ಅಧರ್ಮವಾಗುತ್ತದೆ. ಪ್ರಪಂಚದ ಎಲ್ಲಾ ಧರ್ಮಗಳು, ಧರ್ಮ ಮತ್ತು ಶಾಂತಿಯನ್ನು ಬೋಧಿಸುತ್ತವೆ. ಅದನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗಿ, ಅಧರ್ಮವನ್ನು, ಕೆಟ್ಟತನವನ್ನು, ಅಶಾಂತಿಯನ್ನು ಹುಟ್ಟು ಹಾಕಲು ಬೋಧಿಸುವವರು ನೀಚ ಧರ್ಮೀಯರು. ಇಂಥವರ ಸಂತತಿ ನಾಶ ಆದ್ರೆ, ಬರೀ ದೇಶ ಅಲ್ಲ, ಪ್ರಪಂಚಕ್ಕೇ ಶಾಂತಿ ಸಿಗುತ್ತದೆ.
ಮುಂದುವರೆಯುವುದು…
ಸಂದರ್ಶಕರು - ಕೆ.ಎಸ್. ಪರಮೇಶ್ವರ