“ಪೊಲೀಸ್ ಮಾಹಿತಿದಾರನ ಬಗ್ಗೆ ಕೋರ್ಟಿಗೂ ಕೂಡ ನಾವು ತಿಳಿಸೋ ಹಾಗಿಲ್ಲ”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು - ಭಾಗ 1


ಸಮಾಜದ ಪ್ರತಿಯೊಬ್ಬರಿಗೂ ಪೊಲೀಸ್‌ ಎಂದಾಕ್ಷಣ ದರ್ಪ, ದೌಲತು, ಭ್ರಷ್ಟರು ಎಂಬ ಭಾವನೆ ಬರುತ್ತದೆ. ಬ್ರಿಟಿಷರ ಕಾಲದಲ್ಲಿದ್ದ ಪೊಲೀಸರ ದರ್ಪ ಹಾಗೆ ನಡೆದುಕೊಂಡು ಬರುತ್ತಿತ್ತು ಅನಿಸುತ್ತದೆ. ಆದರೆ, ಕಾನ್‌ಸ್ಪೆಬಲ್‌, ಸಬ್‌ ಇನ್‌ಸ್ಪೆಕ್ಟರ್‌, ಡಿವೈಎಸ್ಪಿ ಅಥವಾ ಐಪಿಎಸ್‌ ಅಧಿಕಾರಿಗಳು ಸಾಮಾನ್ಯ ವರ್ಗದಿಂದ ಬಂದಿರುವಂತಹ ಜನಗಳು ಎಂಬುದನ್ನು ಸಮಾಜ ಗಮನಿಸಬೇಕು. ಪೊಲೀಸ್‌ ಇಲಾಖೆಗೆ ಸೇರುವ ಬಹುತೇಕ ಜನರಿಗೆ ಸಮಾಜದ ಆಗುಹೋಗುಗಳ ಅರಿವಿರುತ್ತದೆ. ಕೆಲವರು ದಾರಿ ತಪ್ಪಬಹುದು. ಭಾರತ ದೇಶದ ಎಲ್ಲಾ ಕಾನೂನಿನ ಅಡಿಯಲ್ಲಿಯೂ ಪೊಲೀಸರು ಕೇಸು ದಾಖಲು ಮಾಡಬಹುದು. ಅಲ್ಲಿ ಸಿಗುವಂತಹ ಅಧಿಕಾರದಿಂದ ಕೆಲವರು ದಾರಿ ತಪ್ಪುವ ಸಾಧ್ಯತೆಗಳಿರುತ್ತವೆ.

ಅಬಕಾರಿ, ಅರಣ್ಯ ಇಲಾಖೆ ಪೊಲೀಸ್‌ ಇಲಾಖೆಗೆ ಸರಿಸಮಾನವಾದುದು. ಅಬಕಾರಿ ಕಾಯ್ದೆಯಲ್ಲಿ ದಾಖಲಿಸಬಹುದಾದ ಕೇಸನ್ನು ಪೊಲೀಸರು ದಾಖಲು ಮಾಡಿ ಕ್ರಮ ಜರುಗಿಸಬಹುದು. ಅರಣ್ಯ ಕಾಯ್ದೆಯನ್ನು ಪೊಲೀಸರು ದಾಖಲಿಸಬಹುದು. ಅದೇ ಪ್ರಕರಣವನ್ನು ಅಬಕಾರಿ ಮತ್ತು ಅರಣ್ಯ ಇಲಾಖೆಯವರು ದಾಖಲಿಸಲು ಸಾಧ್ಯವಿಲ್ಲ. ಬಹುಶಃ ಈ ಅಧಿಕಾರವೇ ಕೆಲವು ಪೊಲೀಸರನ್ನು ದಾರಿ ತಪ್ಪಿಸುತ್ತದೆ ಎಂದು ಅನಿಸುತ್ತದೆ.ಬೇರೆಯವರು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಾಗ ಪರವಾನಗಿ ಬೇಕು. ಅದೇ ಪೊಲೀಸ್‌ ಇನ್‌ಸ್ಪೆಕ್ಟರ್‌, ಕಾನ್‌ಸ್ಟೆಬಲ್‌ಗಳು ಬಳಸುವ ಶಸ್ತ್ರಸ್ತ್ರಗಳಿಗೆ ಪರವಾನಗಿಯ ಅಗತ್ಯವೇ ಇರುವುದಿಲ್ಲ. ಇದು ಪೊಲೀಸರಿಗೆ ಬಂದಿರುವ ಸಂವಿಧಾನದತ್ತವಾದ ಕೊಡುಗೆ. ಇದರ ಜೊತೆಗೆ ರಾಷ್ಟ್ರಪತಿಗಳ ವಾಹನದ ಮುಂದೆ ರಾಷ್ಟ್ರಲಾಂಛನ ಇರುತ್ತದೆ. ರಾಜ್ಯಪಾಲರ ಕಾರಿಗೆ ರಾಜ್ಯದ ಗಂಡಬೇರುಂಡ ಲಾಂಛನ ಇರುತ್ತದೆ. ಅವರ ಕಾರಿಗೆ ನಂಬರ್‌ ಇರುವುದಿಲ್ಲ. ಇದನ್ನು ಹೊರತು ಪಡಿಸಿದರೆ ಬೇರೆಲ್ಲೂ ಲಾಂಛನಗಳು ಇರುವುದಿಲ್ಲ. ಆದರೆ, ಪೊಲೀಸ್‌ ಕಾನ್‌ಸ್ಟೆಬಲ್‌ ಸಮವಸ್ತ್ರದ ಗುಂಡಿಯ ಮೇಲೆ ರಾಷ್ಟ್ರದ ಲಾಂಛನ ಇದೆ. ಸಬ್‌ಇನ್‌ಸ್ಪೆಕ್ಟರ್‌ ಕ್ಯಾಪ್‌ ಮೇಲೆ ರಾಜ್ಯದ ಲಾಂಛನ ಇರುತ್ತದೆ. ರಾಜ್ಯವನ್ನು ಪ್ರತಿನಿಧಿಸುವ ಮೊದಲ ವ್ಯಕ್ತಿ ಪೊಲೀಸ್‌ ಕಾನ್‌ಸ್ಟೆಬಲ್‌ನಿಂದ ಡೈರೆಕ್ಟರ್‌ ಜನರಲ್‌ವರೆಗೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ಇದು ಪೊಲೀಸ್‌ ಇಲಾಖೆಯ ಮಹತ್ವ. ಬಹುಶಃ ಈ ಅಧಿಕಾರದ ಅಮಲು, ಮದದಿಂದ ಕೆಲವರು ದಾರಿ ತಪ್ಪಬಹುದು. ದರ್ಪತನ ಬೆಳೆಯಬಹುದು. ಬೆಳೆದು ಬಂದ ದಾರಿಯನ್ನು ಅವರು ಮರೆತಿರುತ್ತಾರೆ. ಅದನ್ನು ಮರೆಯದೇ ಇರುವವರಿಗೆ ಮಾತ್ರವೇ ಪೊಲೀಸ್‌ ವೃತ್ತಿಯ ಇನ್ನೊಂದು ಮುಖ ಗೊತ್ತಿರುತ್ತದೆ.


ನಾನು ಬೆಂಗಳೂರಿನಲ್ಲಿಯೇ ಹುಟ್ಟಿ, ಬೆಳೆದು ಇಲ್ಲಿಯೇ ವಿದ್ಯಾಭ್ಯಾಸ ಮಾಡಿದವನು. 1977ರ ಬ್ಯಾಚ್‌ನಲ್ಲಿ 250 ಜನರಿದ್ದ ದೊಡ್ಡ ತಂಡ ನಮ್ಮದು. ಮೈಸೂರಿನಲ್ಲಿ ತರಬೇತಿ ಪಡೆಯುವ ಸಂದರ್ಭದಲ್ಲಿ ನನಗೊಂದು ಪ್ರಶ್ನೆ ಕೇಳಿದ್ದರು. ತರಬೇತಿ ಮುಗಿದ ತಕ್ಷಣ ನಮ್ಮ ಹತ್ತಿರ ಒಂದು ಪತ್ರ ಕೊಟ್ಟಿದ್ರು. ಅದರಲ್ಲಿ ಪ್ರಾಕ್ಟಿಕಲ್‌ ತರಬೇತಿಗೆ ಯಾವ ಸ್ಥಳ ಬೇಕು ಕೇಳಿ ಎಂದು ಹೇಳಿದ್ದರು. ಸ್ವಂತ ಸ್ಥಳವನ್ನು ಬಿಟ್ಟು ಬೇರೆ ಕೇಳಬೇಕು ಎಂದಿದ್ದರು. ಬೆಂಗಳೂರು ಬಿಟ್ಟು ಎಲ್ಲಿಯಾದರೂ ಕೊಡಿ ಮಾಡುತ್ತೇನೆ ಎಂದು ನಾನು ಬರೆದುಕೊಟ್ಟಿದೆ. ಆಮೇಲೆ ನೋಡಿದ್ರೆ ಬೆಂಗಳೂರಿನವರಿಗೆಲ್ಲ ನಗರದಲ್ಲಿಯೇ ನೇಮಕ ಮಾಡಿದ್ರು. ಹಾಗೆ ಯಾಕೆ ಮಾಡಿದ್ರು ಎಂಬುದು ನನಗೆ ಗೊತ್ತಿಲ್ಲ. ಆದರೆ, ನನಗೆ ತುಂಬಾ ಮುಜುಗರ ಅನಿಸಿಬಿಟ್ಟಿತ್ತು. ನಾನು ಹುಟ್ಟಿ, ಬೆಳೆದಿರುವ ಜಾಗ ಬೆಂಗಳೂರು ಆಗಿರುವುದರಿಂದ ಇಲ್ಲಿ ಬಹಳಷ್ಟು ಜನ ಪರಿಚಯ ಇದ್ದರು, ಎಲ್ಲ ವರ್ಗಗಳ ಜನ ನನಗೆ ಪರಿಚಯ ಇದುದ್ದರಿಂದ ಕೆಲಸ ಮಾಡಲು ಆತಂಕವಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಇದು ನನಗೆ ಸಿಕ್ಕ ದೊಡ್ಡ ವರದಾನ ಎನಿಸಿತು. ಯಾಕೆಂದ್ರೆ, ಒಬ್ಬ ಪೊಲೀಸ್‌ ಅಧಿಕಾರಿ ಯಶಸ್ವಿ ಆಗಬೇಕೆಂದರೆ, ಆತನಿಗೆ ಮಾಹಿತಿ ಜಾಲ ತುಂಬ ದೊಡ್ಡದಿರಬೇಕು. ಜನರಿಗೆ ಪೊಲೀಸರ ಮೇಲೆ ನಂಬಿಕೆ ಇರಬೇಕು. ಆಗ ಅವರೇ ಮಾಹಿತಿ ಕೊಡುತ್ತಾರೆ. ಪೊಲೀಸರಿಗೆ ಕನಸಲ್ಲಿ ಮಾಹಿತಿ ಸಿಗುವುದಿಲ್ಲ. ನನ್ನ ಪ್ರಕಾರ, ಪೊಲೀಸರು ಮತ್ತು ವ್ಯವಸ್ಥೆ ವಿರುದ್ಧ ಗಂಟೆಗಟ್ಟಲೆ ಮಾತನಾಡುವ ಒಬ್ಬರೂ ಪೊಲೀಸರಿಗೆ ಮಾಹಿತಿಯನ್ನು ಇದುವರೆಗೆ ಕೊಟ್ಟಿಲ್ಲ. ದೊಡ್ಡ, ದೊಡ್ಡ ಹುದ್ದೆಯಲ್ಲಿರುವವರು ಪೊಲೀಸರಿಗೆ ಮಾಹಿತಿ ಕೊಡುವುದಿಲ್ಲ. ಸಾಮಾನ್ಯ ಜನರು ಮಾತ್ರವೇ ಪೊಲೀಸರಿಗೆ ಮಾಹಿತಿ ಕೊಡ್ತಾರೆ. ಅದರಲ್ಲೂ ನೊಂದವರು ಪೊಲೀಸರಿಗೆ ತುಂಬಾ ಮಾಹಿತಿ ಕೊಡುತ್ತಾರೆ. ಪೊಲೀಸ್‌ ಮತ್ತು ವ್ಯವಸ್ಥೆಯ ಮೇಲೆ ನಂಬಿಕೆ ಬಂದಾಗ ಅವರು ಮಾಹಿತಿ ನೀಡುತ್ತಾರೆ. ಮಾಹಿತಿಯ ಮಹಾಪೂರವೇ ಸಿಗುವಂತಹ ಪೊಲೀಸ್‌ ಅಧಿಕಾರಿ ಯಶಸ್ವಿಯಾಗುತ್ತಾರೆ.

ಎಷ್ಟೋ ಜನ ಮಾಹಿತಿ ಕೊಟ್ಟರೆ ನಮ್ಮನ್ನು ಹೊಡೆದು ಹಾಕುತ್ತಾರೆ ಎಂದುಕೊಂಡಿರುತ್ತಾರೆ. ಮಾಹಿತಿ ಸ್ವೀಕಾರ ಮಾಡುವ ಅಧಿಕಾರಿಯೂ ಆತನ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಗೋಪ್ಯತೆಗೆ ಸಂವಿಧಾನದತ್ತವಾದ ಕವಚ ಇದೆ ಎನ್ನುವುದು ಸಾಮಾನ್ಯ ಜನರ ಜೊತೆಗೆ ಪೊಲೀಸ್‌ ಅಧಿಕಾರಿಗಳಿಗೂ ಗೊತ್ತಿಲ್ಲ. ಯಾರೂ ಮಾಹಿತಿ ಕೊಡುತ್ತಾರೋ ಅವರ ಹೆಸರನ್ನು ಯಾವ ಕಾರಣಕ್ಕೂ ದಾಖಲು ಮಾಡುವ ಹಾಗಿಲ್ಲ. ಮತ್ತು ಯಾರಿಗೂ ಹೇಳುವ ಹಾಗಿಲ್ಲ. ಈ ದೇಶದ ಉಚ್ಚ ನ್ಯಾಯಾಲಯಗಳಾದ ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್‌ಗಳಿಗೂ ಕೊಡುವ ಹಾಗಿಲ್ಲ. ಹೀಗೊಂದು ಕಾನೂನು ಕೂಡ ಇದೆ. ಇದು ಮಾಹಿತಿದಾರನಿಗಿರುವ ರಕ್ಷಣೆ. ಈ ಕುರಿತು ಪ್ರಚಾರವಾಗಬೇಕು. ಪೊಲೀಸರಿಗೆ ಮಾಹಿತಿಗಳ ಮಹಾಪೂರ ಬರಬೇಕು. ಹೀಗೆ ಬರುವ ಮಾಹಿತಿಗಳಲ್ಲಿ ಸುಳ್ಳು ಬರಬಹುದು, ಸತ್ಯವೂ ಬರಬಹುದು. ಅದನ್ನು ಹೆಕ್ಕಿ ತೆಗೆಯುವಂತಹ ಚಾಣಾಕ್ಷತೆಯನ್ನು ಪೊಲೀಸರು ಬೆಳೆಸಿಕೊಳ್ಳಬೇಕು.


ನ್ಯಾಯಾಲಯಗಳಲ್ಲಿ ಸಾಕ್ಷಿ ಹೇಳುವಾಗಲೂ, ನನಗೆ ಸಿಕ್ಕಂತಹ ಗುಪ್ತ ಮಾಹಿತಿ ಪ್ರಕಾರ ನಾನು ಇಂಥ ಕಡೆ ದಾಳಿ ನಡೆಸಿದೆ ಎಂದು ಹೇಳುತ್ತೇವೆ. ದಾಳಿಯಲ್ಲಿ ಶಸ್ತ್ರಾಸ್ತ್ರ, ಶ್ರೀಗಂಧ, ಮಾದಕವಸ್ತುಗಳು ಸಿಕ್ಕವು... ಹೀಗೆ ಆ ಪ್ರಕರಣದ ವಿಚಾರಣೆ ಸಾಗುತ್ತದೆ. ಆಗ ಕೆಲವೊಮ್ಮೆ ಮಾಹಿತಿಯ ಮೂಲ ಹೇಳಿ ಎಂದು ನ್ಯಾಯಾಲಯದಲ್ಲಿ ಕೇಳಿದ್ದು ಇದೆ. ಅದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದೇನೆ. ದುರಂತ ಏನೆಂದರೆ, ನ್ಯಾಯಾಧೀಶರೇ ಮಾಹಿತಿ ಕೇಳುತ್ತಿದ್ದಾರಲ್ಲ ಹೇಳ್ರಿ ಎಂದಿದ್ದು ಇದೆ. ಅದು ಹೇಳಲು ಸಾಧ್ಯವಿಲ್ಲ. ನೀವು ಕೇಳಿದ್ರು ಆಗಲ್ಲ ಎಂದು ಎರಡು, ಮೂರು ಪ್ರಕರಣದಲ್ಲಿ ನಾನು ಹೇಳಿದ್ದೇನೆ.


ಪೊಲೀಸರು ಭ್ರಷ್ಟರು, ದರ್ಪಿಷ್ಟರು, ದೌರ್ಜನ್ಯ ಮಾಡುತ್ತಾರೆ, ಅವರಿಗೆ ಸೌಜನ್ಯವಾಗಿ ಮಾತನಾಡಲು ಬರಲ್ಲ ಎಂಬ ಭಾವನೆ ಸಾಮಾನ್ಯ ಜನರಲ್ಲಿದೆ. ಕೆಲವರು ಹಾಗಿರಬಹುದು. ಇನ್ನು ಕೆಲವರು ಕೆಲಸದ ಒತ್ತಡಕ್ಕೆ ಹಾಗೆ ಆಗಿರಬಹುದು. ಆದರೆ, ಪೊಲೀಸರು ನ್ಯಾಯವನ್ನು ಕೊಡುವಂತಹ ರೀತಿ ಇದೆಯಲ್ಲಾ ಅದನ್ನು ಯಾವ ನ್ಯಾಯಾಲಯದಲ್ಲೂ ಕೊಡಲು ಸಾಧ್ಯವಿಲ್ಲ.


ಇಬ್ಬರು ಪೊಲೀಸ್‌ ಠಾಣೆಗೆ ಬರುತ್ತಾರೆ ಎಂದಿಟ್ಟುಕೊಳ್ಳಿ. ಅದರಲ್ಲಿ ಒಬ್ಬ ಅಪರಾಧ ಮಾಡಿರುವವನು ಇನ್ನೊಬ್ಬ ತೊಂದರೆ ಒಳಗಾದವನು. ನಾವು ತೊಂದರೆಗೊಳಗಾದವನ ಸಮಸ್ಯೆಯನ್ನು ಬಗೆಹರಿಸಿದಾಗ ಅವನು ಸಾಮಾಧಾನವಾಗಿ ಹೋಗಿ, ಪೊಲೀಸರನ್ನು ಹೊಗಳುತ್ತಾನೆ. ಆದರೆ, ಅಪರಾಧಿ ನಮ್ಮ ಮೇಲೆ ಕಥೆ ಕಟ್ಟುತ್ತಾನೆ. ಸುಳ್ಳು ಕೇಸು ಹಾಕಿದ್ರು, ದೌರ್ಜನ್ಯ ಮಾಡಿಬಿಟ್ರು ಎಂದೆಲ್ಲ ಬೈಕೊಂಡು ತಿರುಗ್ತಾನೆ. ಪೊಲೀಸರ ಮೇಲೆ ಹೀಗೆಲ್ಲ ಮಾತನಾಡುವುದು ಬಹಳ ಸುಲಭ.


ಒಳ್ಳೆಯ ಪೊಲೀಸ್‌ ಅಧಿಕಾರಿ ಆಗಬೇಕೆಂದರೆ, ನೀವು ಒಳ್ಳೆಯ ಕೇಳುಗನಾಗಬೇಕು. ಕೇಳುವ ಕಿವಿ ಇದ್ದರೆ ಎಲ್ಲ ಮಾಹಿತಿ ದೊರಕುತ್ತದೆ. ಸೈಕಲ್‌ ಕಳುವಾಗಿದೆ ಎಂದು ವ್ಯಕ್ತಿ ಹೇಳಿದಾಗ, ಸೈಕಲ್‌ ಬಸ್‌ ಸ್ಟ್ಯಾಂಡ್‌ನಲ್ಲಿ ಏಕೆ ಬಿಟ್ಟೆ ಎಂದರೆ ಹೇಗೆ? ಇನ್ನೆಲ್ಲಿ ಬಿಡುವುದು ಜೇಬಿನಲ್ಲಿ ಇಟ್ಟುಕೊಂಡು ಹೋಗಲು ಸಾಧ್ಯವೇ? ಪೊಲೀಸರ ಕರ್ತವ್ಯದಲ್ಲಿ ಈ ಮಾತುಗಳು ಬರಬಾರದು, ಅವರು ಕೇಳಿಸಿಕೊಳ್ಳಬೇಕು. ಹೊಸದಾಗಿ ಪೊಲೀಸ್‌ ವೃತ್ತಿಗೆ ಸೇರುವ ಎಲ್ಲಾ ಹಂತದ ಅಧಿಕಾರಿಗಳಿಗೆ ನನ್ನ ಅನುಭವದ ಪ್ರಕಾರ ಈ ಕಿವಿಮಾತನ್ನು ಹೇಳುತ್ತೇನೆ.


ಪೊಲೀಸರಿಂದ ಸಾಂತ್ವಾನವನ್ನು ಪಡೆದಿರುವಂತವರು ಹೊಗಳುತ್ತಾರಲ್ಲ ಅದರ ಹಿಂದೆ ಪೊಲೀಸ್‌ ಕಾನ್‌ಸ್ಟೆಬಲ್‌ ಮತ್ತು ಹೆಡ್‌ಕಾನ್‌ಸ್ಟೆಬಲ್‌ಗಳ ಶ್ರಮವಿರುತ್ತದೆ. ಪೊಲೀಸ್ ಇಲಾಖೆಯ ಈವರೆಗಿನ ಯಶಸ್ಸಿಗೆ ಅವರೇ ಕಾರಣ.


ಪ್ರತಿಷ್ಠಿತ ಬಡಾವಣೆಗಳಲ್ಲಿ ಮೊದಲು ಪೊಲೀಸ್‌ನವರು ನಡೆದುಕೊಂಡೇ ಗಸ್ತು ಮಾಡುತ್ತಿದ್ದರು. ಆಮೇಲೆ ಸೈಕಲ್‌ ಬಂತು, ಅದು ಬಂದ ನಂತರವೂ ವಿಶಲ್‌ ಹಾಕಿಕೊಂಡು ಗಲ್ಲಿ ಗಲ್ಲಿ ತಿರುಗುತ್ತಿದ್ದರು. ಲೈಟ್‌ ಕಂಬಗಳಿಗೆ ಲಾಠಿಯಿಂದ ಹೊಡೆದು ಶಬ್ದ ಮಾಡುತ್ತಿದ್ದರು. ಪೊಲೀಸರು ಚಳಿಗಾಲ, ಮಳೆಗಾಲದಲ್ಲಿ ಯಾವ ಕಾಲದಲ್ಲಿಯೂ ರಾತ್ರಿ ಗಸ್ತು ನಿಲ್ಲಿಸುತ್ತಿರಲಿಲ್ಲ. ರೇನ್‌ಕೋಟ್‌ ಹಾಕಿಕೊಂಡು ಮಳೆಗಾಲದಲ್ಲಿ ಮಾಡುತ್ತಿದ್ರು. ಒಂದೊಂದು ಪಾಯಿಂಟ್‌ಗಳಲ್ಲಿ ಪುಸ್ತಕ ಇಡುತ್ತಿದ್ರು. ಅಲ್ಲಿ ಅವರು ಸಹಿ ಹಾಕಿ ಬರಬೇಕಿತ್ತು. ಅಲ್ಲಿಗೆ ಹೋಗಿಲ್ಲ ಅಂದಿದ್ರೆ ಕ್ರಮ ತೆಗೆದುಕೊಳ್ಳುತ್ತಿದ್ರು. ನಾವು ಸಾರ್ವಜನಿಕ ಸಂಪರ್ಕ ಸಭೆ ಮಾಡಿದಾಗ ಎಷ್ಟೋ ಕಡೆ ಪ್ರತಿಷ್ಠಿತ ಮನೆಯವರು ಪೊಲೀಸರ ಮೇಲೆ ತಿರುಗಿ ಬಿದಿದ್ದಾರೆ. ಕಳ್ಳನಿಗೆ ಮೊದಲೇ ಸೂಚನೆ ಕೊಡಲು ವಿಶಲ್‌ ಹೊಡೆಯುತ್ತೀರಾ? ನೀವು ಕಳ್ಳರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುತ್ತೀರಾ ಎಂದೆಲ್ಲ ಅನ್ನುತ್ತಿದ್ದರು. ಲಾಠಿ ಹೊಡೆಯುವುದರಿಂದ ನಿದ್ದೆಗೆ ತೊಂದರೆಯಾಗುತ್ತದೆ. ಕ್ಲಬ್‌ಗೆ ಹೋಗಿ 12, 1 ಗಂಟೆಗೆ ಬಂದಿರುತ್ತೇವೆ. ನಿಮ್ಮ ಪೊಲೀಸರಿಗೆ ಹೇಳಿ ನಮ್ಮ ರಸ್ತೆಯಲ್ಲಿ ವಿಶಲ್ ಮಾಡಬೇಡಿ ಎಂದೆಲ್ಲ ಅನ್ನುತ್ತಿದ್ರು.


ನೀವು ನೆಮ್ಮದಿಯಾಗಿ ಮಲಗುವಾಗ ಅವರು ಎಲ್ಲವನ್ನು ಬಿಟ್ಟು ಕೆಲಸ ಮಾಡುತ್ತಾರೆ. ಹೀಗೆಲ್ಲ ಮಾತನಾಡುವವರು ಅವರ ಜೀವಮಾನದಲ್ಲಿ ಒಂದು ದಿನವೂ ರಾತ್ರಿ ಗಸ್ತು ತಿರುಗುವ ಪೊಲೀಸರಿಗೆ ಒಂದು ಕಪ್‌ ಚಹಾ ಕೊಟ್ಟಿರಲಿಲ್ಲ. ನಾನು ಅವರಿಗೆ ಉತ್ತರ ಕೊಡಬೇಕು ಅನಿಸಿತು ಆದರೆ ಏನಂತ ಉತ್ತರ ಕೊಡಲಿ. ಆಗ ನಾನು ಸಬ್‌ ಇನ್‌ಸ್ಪೆಕ್ಟರ್‌, ಪೊಲೀಸ್‌ ವೃತ್ತಿಗೆ ಸೇರಿದ ಹೊಸತು. ಸೇವೆಗೆ ಸೇರಿ ನಾಲ್ಕೈದು ವರ್ಷವಾಗಿತ್ತು ಅಷ್ಟೆ. ಮೇಲಾಧಿಕಾರಿಗಳು ಇದ್ರೂ ಏನು ಉತ್ತರ ಕೊಟ್ಟಿರಲಿಲ್ಲ. ಆ ಕುರಿತು ವಿಚಾರ ಮಾಡೋಣ ಎನ್ನುತ್ತಿದ್ರು. ಆಗ ನಾನು ಉತ್ತರ ಕೊಡುತ್ತೇನೆ ಎಂದೆ. ಅದಕ್ಕವರು ಉತ್ತರ ಕೊಡಿ ನೋಡೋಣ ಎಂದ್ರು. ನೋಡಿ ಮೇಡಂ, ನೀವು ಕ್ಲಬ್‌ಯಿಂದ, ಇನ್ನೊಬ್ರು ಬಾರ್‌ಯಿಂದ ಬಂದಿರುತ್ತಾರೆ. ನಿಮಗೆ ಡಿಸ್ಟರ್ಬ್‌ ಆಗುತ್ತದೆ ನಿಜ. ನೀವು ಅದಕ್ಕೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದೆ. ಆಗ ಅವರು, ಅದಕ್ಕೆ ನೀವು ಲಾಠಿ, ವಿಶಲ್‌ ಹೊಡೆದುಕೊಂಡು ಹೋಗಬಹುದಾ? ಅದು ನ್ಯೂ ಸೆನ್ಸ್‌ ಅಂದ್ರು. ಅದು ಸೆನ್ಸ್‌ ಅಲ್ಲ ಎಂದಾಗ, ನೀವು ನಾನ್ ಸೆನ್ಸ್‌ ಮಾತನಾಡುತ್ತಿದ್ದೀರಾ ಅಂದ್ರು. ಇದು ಎರಡೂ ಅಲ್ಲ. ಇದಕ್ಕೊಂದು ಸೆನ್ಸ್‌ ಇದೆ ಎಂದೆ. ಆಗ, ಅದನ್ನು ವಿವರಿಸಿ ಅಂದ್ರು. ನೋಡಿ ನಿಮ್ಮ ಬಡಾವಣೆಯಲ್ಲಿ ನೀವೊಬ್ಬರೇ ವಾಸ ಮಾಡುತ್ತಿಲ್ಲ. ಈ ಬಡಾವಣೆಯಲ್ಲಿಯೇ ನೈಟ್‌ ಶಿಫ್ಟ್‌ಗೆ ಕೆಲಸಕ್ಕೆ ಹೋಗುವ ತಂದೆ ತಾಯಿಯ ಮಕ್ಕಳಿದ್ದಾರೆ. ನೈಟ್‌ ಶಿಫ್ಟ್‌ ಮಾಡುವ ವೈದ್ಯರು, ಮಿಲ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಹೋಟೆಲ್‌ಗಳಲ್ಲಿ ಕೆಲಸ ಮಾಡುವವರು ವಾಸ ಮಾಡುತ್ತಾರೆ. ಮನೆಯಲ್ಲಿ ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗುವ ಮನೆಯಲ್ಲಿ ಮಕ್ಕಳು ಒಬ್ಬರೇ ಇರುತ್ತಾರೆ. ಕ್ರೈಂ ಸ್ಟೋರಿ, ಕ್ರೈಂ ಡೈರಿ, ಹಾರಾರ್‌ ಮೂವಿಗಳನ್ನೆಲ್ಲ ನೋಡುವ ಮಕ್ಕಳಿಗೆ ದೂರದಲ್ಲಿ ಬೆಕ್ಕು ಕೂಗಿದರೂ, ಭೂತ, ದೆವ್ವ ಬಂತೆನೋ, ಕಳ್ಳ ಬಂದನೇನೊ ಎಂಬ ಭಯ ಆಗುತ್ತದೆ. ಆ ವೇಳೆಯಲ್ಲಿ ಸಣ್ಣ ಶಬ್ದ ಆದರೂ, ಆತಂಕಕ್ಕೊಳಗಾಗುತ್ತಾರೆ, ಮಾನಸಿಕ ಅಸ್ವಸ್ಥಗೊಳ್ಳುತ್ತಾರೆ. ಅಂಥ ಮಕ್ಕಳು ಪೊಲೀಸರ ಲಾಠಿ ಶಬ್ದದಿಂದ ಧೈರ್ಯ ತುಂಬಿಕೊಳ್ಳುತ್ತಾರೆ ಎಂದೆ. ಆಶ್ಚರ್ಯದಿಂದ ಅದು ಹೇಗೆ ಎಂದು ಮರುಪ್ರಶ್ನೆ ಕೇಳಿದರು. ಏನೋ ಬೇರೆ ಲಾಜಿಕ್‌ ಹೇಳುತ್ತಿದ್ದೀರಲ್ಲಾ ಎಂದ್ರು. ಲಾಜಿಕ್‌ ಅಲ್ಲ ಪರಿಸ್ಥಿತಿ ಇರುವುದೇ ಹೀಗೆ ಎಂದು ವಿವರಿಸಿದೆ...


ಮುಂದುವರೆಯುವುದು…


ಸಂದರ್ಶಕರು ಕೆ.ಎಸ್. ಪರಮೇಶ್ವರ

62 views