“ಬದುಕಿಗಾಗಿ ಡಾ.ರಾಜ್‌ ನಡೆಸಿದ ಹೋರಾಟ”

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ ೪

(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)


‘ವೀರಪುತ್ರ’ ಶೆಡ್ಯೂಲ್‌ ಆಗಿ ನಿಂತು ಹೋಯ್ತು. ನನಗೆ ದುಡ್ಡು ಬರುವುದು ನಿಂತುಹೋಯ್ತು. ನನ್ನ ಕೈಯಲ್ಲಿದ್ದ ದುಡ್ಡೆಲ್ಲ ಖರ್ಚಾಗಿ ಹೋಯ್ತು. ಮನೆ ಮಾಲೀಕ ಬಾಡಿಗೆ ಕೊಡುವಂತೆ ಹಿಂಸೆ ಮಾಡಲು ಶುರು ಮಾಡಿದ್ದ. ಕೈಯಲ್ಲಿದ್ದ ದುಡ್ಡೆಲ್ಲ ಖರ್ಚಾಗಿ ಹೋಯ್ತು. ಬಿಡಿಗಾಸು ಇರಲಿಲ್ಲ. ಊಟ ಮಾಡದೇ ಎರಡು ದಿವಸ ಆಗಿ ಹೋಗಿತ್ತು. ಹೊಟ್ಟೆ ಹಸಿವು ತಾಳಲು ಆಗುತ್ತಿರಲಿಲ್ಲ. ಇನ್ನೊಂದು ದಿವಸ ಹಾಗೆ ಇದಿದ್ದರೆ ಹೊಟ್ಟೆ ಹಸಿವಿನಿಂದ ಸಾಯುತ್ತಿದ್ದೆ ಅನಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇದ್ದೆ.


ಮದ್ರಾಸ್‌ನಲ್ಲಿ ಪಾಂಡಿ ಬಜಾರ್‌ ಎಂದಿದೆ. ಅಲ್ಲಿ ಕನ್ನಡದವರೇ ಹೆಚ್ಚಿದ್ರು. ನಾರಾಯಣ ಕೆಫೆ ಅಲ್ಲೇ ಇತ್ತು. ಕನ್ನಡದವರೆಲ್ಲ ಟಿಫನ್‌ಗೆ ಅಲ್ಲಿಗೆ ಬರುತ್ತಿದ್ರು. ಕೆಫೆ ಬಾಗಿಲಿನಲ್ಲಿ ಮುಂದೆ ಭಿಕ್ಷುಕನ ರೀತಿ ನಿಂತೆ. ಯಾರಾದ್ರು ಕನ್ನಡದವರು ಬಂದ್ರೆ ಅವರ ಬಳಿ ಸಾಲ ಇಸ್ಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಯೋಚನೆ ನನ್ನದಾಗಿತ್ತು. ಹಲವರು ಬಂದ್ರು ಅಲ್ಲಿಗೆ, ಆದ್ರೆ ಅವರ ಬಳಿ ಕೇಳಲು ನನಗೆ ಮನಸ್ಸಾಗಲಿಲ್ಲ. ಅವರೇ ಕಷ್ಟದಲ್ಲಿದ್ದವರು ಎಂಬುದು ನನಗೆ ಗೊತ್ತಿತ್ತು. ಆ ಸಂದರ್ಭದಲ್ಲಿ ಆರ್ಥಿಕ ತೊಂದರೆಯಿಂದಾಗಿ ಹೆಚ್ಚುಕಮ್ಮಿ ಕನ್ನಡ ಚಿತ್ರಗಳು ಸ್ಥಗಿತವಾಗಿದ್ದವು. ದೂರದಲ್ಲಿ ಒಬ್ಬರು ಬಿಳಿ ಪ್ಯಾಂಟ್‌, ಶರ್ಟ್‌ಹಾಕಿಕೊಂಡು ನಡೆದುಕೊಂಡು ಬರುತ್ತಿದ್ರು. ಹತ್ತಿರ ಬರುತ್ತಿದ್ದಂತೆ ಅವರು ಹೋಟೆಲ್‌ಗೆ ಬರುತ್ತಿದ್ದಾರೆ ಎಂಬುದು ಗೊತ್ತಾಯಿತು. ಕೆಂಪುಗೆ ಇದ್ರು. ಅವರು ಕ್ಯಾಮೆರಾಮೆನ್‌ ದೊರೆ ಎಂಬುದು ಗೊತ್ತಿತ್ತು. ಆದ್ರೆ ಅವರ ಪರಿಚಯ ನನಗೆ ಇರಲಿಲ್ಲ. ರಾಜ್‌ಕುಮಾರ್‌ ಅವರ ಎರಡನೇ ಚಿತ್ರದಿಂದ ಅವರು ಕ್ಯಾಮೆರಾಮೆನ್‌ ಆಗಿದ್ರು. ಸೋದರಿ, ಹರಿಭಕ್ತ, ಓಹಿಲೇಶ್ವರ ಇವುಗಳಿಗೆಲ್ಲ ಅವರೇ ಕ್ಯಾಮೆರಾಮೆನ್‌. ರಾಜ್‌ಕುಮಾರ್‌ ಅವರ ಮೊದಲ ಸಿನಿಮಾದಿಂದಲೂ ಜಿ.ಕೆ.ವೆಂಕಟೇಶ್‌ ಸಂಗೀತ ನಿರ್ದೇಶಕರಾಗಿದ್ರು. ಅವರಿಬ್ಬರೂ ನಾಯ್ಡು, ಮೊದಲಿಂದಲೂ ಉತ್ತಮ ಬಾಂಧವ್ಯದಿಂದ ಇದ್ರು.
ದೊರೆ ಹತ್ತಿರ ಬರುತ್ತಿದ್ದಂತೆ, ಅವರ ಬಳಿ ಹೋದೆ. ಅವರ ಹತ್ತಿರ ದುಡ್ಡಿದೆ ಎಂಬುದು ನನಗ ಗೊತ್ತಿತ್ತು. ಏನ್‌ ಮಿಸ್ಟರ್‌ ಭಗವಾನ್‌, ಎಂದ್ರು ಅವರು. ಪರಿಚಯ ಇಲ್ಲದೇ ಹೋದ್ರು. ಒಬ್ಬರಿಗೊಬ್ರು ಯಾರೂ ಎಂಬುದು ಗೊತ್ತಿತ್ತು. ಮಿಸ್ಟರ್‌ ದೊರೆ, ನಿಮ್ಮಿಂದ ನನಗೆ ಉಪಕಾರ ಆಗಬೇಕು ಎಂದೆ. ಏನಾಗಬೇಕು ಹೇಳಿ ಅಂದ್ರು. ನನಗೆ 1 ರೂಪಾಯಿ ಸಾಲ ಬೇಕು. ನಾಳೆ ಅಥವಾ ನಾಡಿದ್ದು ಆಫೀಸ್‌ನಿಂದ ದುಡ್ಡು ಬರುತ್ತದೆ. ಆಗ ಕೊಟ್ಟುಬಿಡುತ್ತೇನೆ ಎಂದೆ. ನನಗೆ ಸಹಾಯ ಮಾಡಿ, ಎರಡು ದಿವಸದಿಂದ ಊಟ ಇಲ್ಲ ಎಂದೆ. ತಕ್ಷಣ ಮುಖ ಪೆಚ್ಚು ಮಾಡಿಕೊಂಡ್ರು. ಇವರ ಹತ್ತಿರ ಕೇಳಿದ್ದು ತಪ್ಪಾಯ್ತು. ಹೋಟೆಲ್‌ಗೆ ಬಂದವರಲ್ಲಿ ಹುಡುಕಿ, ಹುಡುಕಿ ಇವರನ್ನು ಕೇಳಿದ್ದೇನೆ ಅಂದುಕೊಂಡೆ. ಐ ಯಾಮ್‌ ವೇರಿ ಸಾರಿ ಭಗವಾನ್‌ ಅಂದ್ರು. ಪರ್ವಾಗಿಲ್ಲ ಬಿಡಿ ಎಂದೆ. ಜೇಬಿನಿಂದ ಎಂಟಾಣೆ ತೆಗೆದು ನನಗೆ ಕೊಟ್ರು. ನೀವು ಒಂದು ರೂಪಾಯಿ ಕೇಳಿತ್ತಿದ್ದೀರಾ, ನನ್ನ ಬಳಿ ಇರುವುದು ಎಂಟಾಣೆ ಅಷ್ಟೇ. ತೆಗೆದುಕೊಳ್ಳಿ, ನೀವು ಕೊಡದೇ ಹೋದ್ರು ಪರ್ವಾಗಿಲ್ಲ, ಹಿಡ್ಕೊಳ್ಳಿ ಎಂದು ನನ್ನ ಕೈಗೆ ಇಟ್ರು. ಆಯ್ತು ದೊರೆ, ದುಡ್ಡು ಬಂದ ತಕ್ಷಣ ನಿಮಗೆ ಕೊಡ್ತೇನೆ ಎಂದು ಹೋಟೆಲ್‌ ಕಡೆ ಹೋದೆ. ಅವರು ಹೋಟೆಲ್‌ಗೆ ಬರಲೇ ಇಲ್ಲ. ಬೇರೆ ಕಡೆ ಹೋದ್ರು.


ನಾಲ್ಕಣೆಗೆ ಮೂರು ಇಡ್ಲಿ, ಕಾಫಿ ಸಿಗುತ್ತಿತ್ತು. ಮೂರು ಇಡ್ಲಿಗೆ ಒಂದು ಬಕೆಟ್‌ ಸಾಂಬಾರು ಹಾಕಿಕೊಂಡು ಹೊಟ್ಟೆ ತುಂಬಿಸಿಕೊಂಡು, ಕಚೇರಿಗೆ ಹೋಗಿ ಪೇಪರ್‌ ಓದುತ್ತ ಕೂತಿದ್ದೆ. ಮೆಟ್ಟಿಲು ಹತ್ತಿಕೊಂಡು ಯಾರೋ ಬರುತ್ತಿರುವ ಶಬ್ದ ಆಯ್ತು. ಬಾಗಿಲು ತಳ್ಳಿಕೊಂಡು ಒಳಗೆ ಬಂದ್ರು. ನೋಡಿದ್ರೆ ದೈತ್ಯಾಕಾರವಾಗಿ ಜಿ.ವಿ.ಅಯ್ಯರ್‌ ನಿಂತಿದ್ರು. ಏನೋ, ಇಲ್ಲಿ ಕೂತಿದ್ದೀಯಾ ಎಳು ಮೇಲೆ, ಬಟ್ಟೆ,ಗಿಟ್ಟೆ ತಗೋ, ನಾನು ಹೇಳಿದ ಹಾಗೆ ಮಾಡು ಎಂದ್ರು. ಆಯ್ತು, ಏನ್‌ ಸಮಾಚಾರ ಎಂದೆ. ಏನೋ ಎರಡು ದಿವಸದಿಂದ ಹೊಟ್ಟೆಗಿಲ್ಲದೇ ಬಿದ್ದಿದ್ದೀಯಾ ನೀನು ಇಲ್ಲಿ. ನಾನು ಸತ್ತು ಹೋಗಿದ್ದೀನಾ?. ಇದನ್ನು ಕೇಳಿ ನಿನ್ನ ಅಕ್ಕ ಅಳುತ್ತಿದ್ದಾಳೆ ನೋಡು ಅಂದ್ರು. ಅಕ್ಕ ಅಂದ್ರೆ ಅವರ ಹೆಂಡತಿ ಸುಂದರಮ್ಮ. ಅವರನ್ನು ನಾಟಕದ ಕಂಪನಿಯಲ್ಲಿ ಅಕ್ಕ ಎನ್ನುತ್ತಿದ್ದೆ. ನನ್ನ ಕಂಡ್ರೆ ಬಹಳ ಪ್ರೀತಿ. ಮಕ್ಕಳಿರಲಿಲ್ಲ ಅವರಿಗೆ. ನನ್ನನ್ನು ಮಗನಾಗಿ ಸಾಕುತ್ತಿದ್ರು.


ನನಗೆ ಹೊಟ್ಟೆಗಿಲ್ಲ ಎಂದು ಯಾರು ಹೇಳಿದ್ರು ನಿಮಗೆ ಎಂದು ಬಿಗುಮಾನದಿಂದ ಕೇಳಿದೆ. ದೊರೆ ಹೇಳ್ದಾ ಕಣೋ ಅಂದ್ರು. ಅವರ ಹತ್ತಿರ ದುಡ್ಡು ಇಸ್ಕೊಂಡಿದ್ದೇ ತಪ್ಪಾಯ್ತು ಎಂದು ಮನಸ್ಸಿನಲ್ಲಿ ಅಂದುಕೊಂಡೆ. ಅವರ ಹತ್ತಿರ ಎಂಟಾಣೆ ಎಲ್ಲಿಂದ ಬಂತು ಗೊತ್ತಾ ನಿನಗೆ. ನನ್ನ ಬಳಿ ಅವರು ಸಾಲ ಇಸ್ಕೊಂಡು ಬಂದಿದ್ರು. ಅವರ ಹತ್ತಿರವೂ ದುಡ್ಡಿರಲಿಲ್ಲ ಎಂದ್ರು. ಅವರ ಹತ್ತಿರ ದುಡ್ಡು ಕೇಳಿದ್ದೇ ತಪ್ಪಾಯ್ತು ಎಂದುಕೊಂಡಿದ್ದ ನನ್ನ ಮನಸ್ಸು ತಕ್ಷಣ ಬದಲಾಯ್ತು. ಎಂಥ ತ್ಯಾಗಿ ಮನುಷ್ಯ. ತಾನು ಹೊಟ್ಟೆ ಹಸಿದುಕೊಂಡಿದ್ರು, ಇನ್ನೊಬ್ರ ಹೊಟ್ಟೆ ತುಂಬಿಸಲು ಸಹಾಯ ಮಾಡಿದ್ರಲ್ಲ ಎಂಥ ಉದಾತ್ತ ಮನಸ್ಸಿನವರು ಎನಿಸಿತು. ಆಗಲೇ ಅವರ ಬಗ್ಗೆ ನನಗೆ ಗೌರವ ಬಂತು.


ವಿಶ್ವಕಲಾ ಚಿತ್ರ ಜಿ.ವಿ ಅಯ್ಯರ್ ಮನೆ. ವಿಶ್ವನಾಥ ಶೆಟ್ರು ಮೈಸೂರಿನಿಂದ ಮದ್ರಾಸ್‌ಗೆ ಹೋಗಿ ಪ್ರತ್ಯೇಕವಾಗಿ ಪ್ರೊಡಕ್ಷನ್‌ ಮಾಡಿಕೊಂಡಿದ್ರು. ವಿಶ್ಚಕಲಾ ಚಿತ್ರ ಆಗ ಜಗಜ್ಯೋತಿ ಬಸವೇಶ್ವರ ತೆಗೆಯುತ್ತಿತ್ತು. ರಾಜ್‌ಕುಮಾರ್‌ ಬಿಜ್ಜಳ, ಹೊನ್ನಪ್ಪ ಭಾಗವತಾರ್ ಬಸವೇಶ್ವರ, ಬಿಜ್ಜಳನ ಹೆಂಡತಿ ಸರೋಜದೇವಿ. ಆರ್ಥಿಕ ಸಮಸ್ಯೆಯಿಂದ ಚಿತ್ರ ನಿಂತುಹೋಗಿತ್ತು. ವಿಶ್ವಕಲಾ ಚಿತ್ರವನ್ನು ವಿಶ್ವಕಲಾ ಛತ್ರ ಎನ್ನುತ್ತಿದ್ದರು. ಅದು ಕನ್ನಡಿಗರ ಪಾಲಿಗೆ ಛತ್ರದ ತರಹವೇ ಇತ್ತು. ಕನ್ನಡಿಗರು ಯಾರೇ ಹೊಟ್ಟಿಗಿಲ್ಲ ಎಂದು ಬರುವವರಿಗೆ ವಿಶ್ವನಾಥ ಶೆಟ್ರು ಊಟ ತರಿಸಿ ಕೊಡುತ್ತಿದ್ರು. ವಿಶ್ವಕಲಾ ಚಿತ್ರದಲ್ಲಿ ಮಂದೆ ಆಫೀಸ್‌, ಹಿಂದೆಯೇ ಅಯ್ಯರ್‌ ಮನೆಯಿತ್ತು.


ನನ್ನ ಬಟ್ಟೆಯನ್ನೆಲ್ಲ ಬ್ಯಾಗಿಗೆ ಅಯ್ಯರ್‌ ಅವರೇ ಹಾಕಿದ್ರು, ನಡಿ ಮನೆಗೆ ಅಂದ್ರು. ಅವರ ಜೊತೆ ಹೋದೆ. ಮನೆ ಮಾಲೀಕ ಬೇರೆ ಬಾಡಿಗೆ ಕೊಡು ಎಂದು ಪೀಡಿಸುತ್ತಿದ್ದ. ಹಾಗಾಗಿ, ಆಫೀಸ್‌ ಅಡ್ರಸ್ ಕೊಟ್ಟು, ಅವರು ಏನಾದ್ರು ಮಾಡಿಕೊಳ್ಳಲಿ ಎಂದು ಸೀದಾ ಅಯ್ಯರ್‌ ಮನೆಗೆ ಹೋದೆ. ವಿಶ್ವನಾಥ ಶೆಟ್ರು ಬಹಳ ಒಳ್ಳೆಯವರು. ಯಾರೇ ಹೋಗಿ ಕಷ್ಟ ಅಂದ್ರು, ದುಡ್ಡು ಕೊಡುತ್ತಿದ್ರು. ಸಿನಿಮಾಗಳು ನಿಂತು ಹೋಗಿ ಅವರೇ ಕಷ್ಟದಲ್ಲಿ ಸಿಲುಕಿಕೊಂಡಿದ್ರು.


ರಾಜ್‌ಕುಮಾರ್‌ ಅವರು ಪ್ರತಿದಿನ ವಿಶ್ವಕಲಾ ಚಿತ್ರಕ್ಕೆ ಬಂದು 1 ಗಂಟೆ ಕೂತು ಹೋಗುತ್ತಿದ್ರು. ನರಸಿಂಹ ರಾಜು, ಬಾಲಕೃಷ್ಣ ಅವರು ಬೆಳಿಗ್ಗೆ 10 ಗಂಟೆಗೆ ಬಂದು, ಮಧ್ಯಾಹ್ನ 1 ಗಂಟೆಗೆ ಊಟ ಮಾಡಿಕೊಂಡು ಮನೆಗೆ ಹೋಗುತ್ತಿದ್ರು. ಈಶ್ವರಪ್ಪ, ವೀರಭದ್ರಪ್ಪ ಅಂಥೆಲ್ಲ ಇದ್ರು, ವೀರಭದ್ರಪ್ಪಗೆ ಕಾರ್ಡ್‌ ಹುಚ್ಚು. ವಿಶ್ವಕಲಾ ಚಿತ್ರದ ಹಾಲ್ ತುಂಬಾ ದೊಡ್ಡದಿತ್ತು. ಕೆಲಸ ಏನು ಇರಲಿಲ್ವಲ್ಲ ಹಾಗಾಗಿ ಅಲ್ಲಿ ಕೂತು ಕಾರ್ಡ್ಸ್‌ ಆಡುತ್ತಿದ್ರು. ಬೆಳಿಗ್ಗೆ ಎದ್ರೆ ಎಷ್ಟು ಗಂಟೆಗೆ ಕಾರ್ಡ್‌ ಓಪನ್ ಮಾಡ್ತೇನೆ ಅಂಥ ವೀರಭದ್ರಪ್ಪ ಕಾಯುತ್ತಿದ್ದ. ಇವರೆಲ್ಲ ನಾಟಕದವರೇ. ಅವರೆಲ್ಲ ಕಾರ್ಡ್ಸ್ ಆಡುತ್ತಿದ್ರೆ, ಜೆ.ಕೆ.ವೆಂಕಟೇಶ್‌ ಹಾರ್ಮೊನಿಯಂ ನುಡಿಸುತ್ತ ಕುಳಿತಿರುತ್ತಿದ್ದ.


ಎರಡು ರೂಂ ಇತ್ತು ಅಲ್ಲಿ. ಒಂದು ರೂಂನಲ್ಲಿ ದೊರೆಯವರು, ಇನ್ನೊಂದರಲ್ಲಿ ವಿಶ್ವನಾಥ್‌ಶೆಟ್ರು ಮತ್ತು ಅವರ ತಮ್ಮ ಶಶಿ ಇರುತ್ತಿದ್ರು. ನಾನು ಅಯ್ಯರ್‌ ಮನೆಯಲ್ಲಿದ್ದೆ. ಹರಟೆ ಹೊಡೆಯಲು ದೊರೆಯವರ ಬಳಿ ಬರುತ್ತಿದ್ದೆ. ‘ಫಸ್ಟ್‌ ಇಂಪ್ರೆಷನ್‌ ಇಸ್‌ ದಿ ಬೆಸ್ಟ್‌ ಇಂಪ್ರೆಷನ್‌’ ಎನ್ನುವಂತೆ, ದೊರೆಯವರ ಬಗ್ಗೆ ನನಗೆ ಮೊದಲ ಬಾರಿಗೆ ವೆರಿ ಗ್ರೇಟ್‌ ಪರ್ಸನ್‌ ಅನಿಸಿತ್ತು. ಅವರ ಜೊತೆಗೆ ಮಾತಾಡುವುದೇ ಸಂತೋಷ, ಖುಷಿ. ಅವರು ಕನ್ನಡ, ಇಂಗ್ಲಿಷ್‌ ಕಾದಂಬರಿಗಳನ್ನು ಕೋಣೆಯಲ್ಲಿ ಇಟ್ಟುಕೊಂಡಿದ್ರು, ಬಿಡುವಾದಾಗ ಓದುತ್ತಿದ್ರು. ನನಗೂ ಆ ಹವ್ಯಾಸ ಇತ್ತು. ನಮ್ಮಿಬ್ಬರ ಇಷ್ಟ, ಕಷ್ಟಗಳು ಒಂದೇ ಇತ್ತು. ಅದರಿಂದಾಗಿ ನಾವು ಬಹುಬೇಗ ಒಬ್ಬರಿಗೊಬ್ರು ಹೊಂದಿಕೊಂಡ್ವಿ. ಅಲ್ಲಿಗೆ ರಾಜ್‌ಕುಮಾರ್‌ ಬರುತ್ತಿದ್ರು. ಅವರಿಗೆ ದೊರೆಯವರನ್ನು ಕಂಡ್ರೆ, ಅಪಾರವಾದ ಗೌರವ. ಸಿನಿಮಾಗಳಲ್ಲಿ ನಿರಂತರವಾಗಿ ಅವರ ಜೊತೆಗೆ ಕೆಲಸ ಮಾಡಿದ್ರಿಂದಾಗಿ ಅವರಿಬ್ಬರ ನಡುವೆ ಸಲುಗೆ ಇತ್ತು. ನಮ್ಮ ಮೂವರದು ಭಾವನಾತ್ಮಕವಾದ ಜೋಡಿ.


ದೊರೆಯವರ ಭಾವ ವೇಣುಗೋಪಾಲ್‌ ಫೈನಾನ್ಷಿಯರ್ ಆಗಿದ್ರು. ಆದ್ರೆ, ಆ ಸಂದರ್ಭದಲ್ಲಿ ಅವರ ಬಳಿಯೂ ಹಣವಿರಲಿಲ್ಲ. ಕೆಲಸ ಇಲ್ಲದೇ ಕೂತಿದ್ದೇವೆ, ಸಂಸಾರ ಸಾಗಿಸುವುದು ಹೇಗೆ ಎಂಬ ದೊಡ್ಡ ಪ್ರಶ್ನೆ ರಾಜ್‌ಕುಮಾರ್‌, ನರಸಿಂಹರಾಜು, ಬಾಲಕೃಷ್ಣ, ಅಯ್ಯರ್‌ ಅವರಿಗೆ ಬಂತು. ಹೇಗೋ ನಾಟಕದಿಂದಲೇ ಬಂದಿದ್ದೇವೆ. ಮತ್ತೆ ನಾಟಕ ಪ್ರಾರಂಭಿಸೋಣ ಎಂಬ ಯೋಚನೆ ಅವರಿಗೆ ಬಂತು. ಅಯ್ಯರ್‌ ಅವರು ನಾಟಕ ಮಾಡೋಣ ಹೇಗೋ ನಮ್ಮ 30 ಜನ ಕಲಾವಿದರು ಹೊಟ್ಟೆ ಹಸಿದುಕೊಂಡಿದ್ದಾರೆ. ಅಷ್ಟು ಮಂದಿಗೂ ಊಟ ಹಾಕೋಣ ಅಂದ್ರು. ಆಗ ರಾಜ್‌ಕುಮಾರ್‌ ಅವರು ಇದಕ್ಕಿಂತ ದೊಡ್ಡ ಕೆಲಸವೇ ಇಲ್ಲ. ನಾವು ನಾಟಕದ ಕಂಪನಿ ಪ್ರಾರಂಭಿಸೋಣ ಅಂದ್ರು. ನಾಲ್ಕು ಜನ ಒಂದು ಸಂಸ್ಥೆಯನ್ನು ಕಟ್ಟಿದ್ರು. ಅದಕ್ಕೇನು ಹೆಸರಿಡುವುದು ಎಂಬ ಚರ್ಚೆ ನಡೆಯಿತು. ನಂತರ ಎಲ್ಲ ಚರ್ಚೆ ಮಾಡಿ, ಕನ್ನಡ ಚಲನಚಿತ್ರ ಕಲಾವಿದರ ಸಂಘ ಅಂಥ ಹೆಸರಿಟ್ರು. ಅದಕ್ಕೆ ಜಿ.ವಿ.ಅಯ್ಯರ್‌, ರಾಜ್‌ಕುಮಾರ್‌, ಬಾಲಕೃಷ್ಣ, ನರಸಿಂಹರಾಜು ಅವರನ್ನು ಪ್ರೊಪ್ರೈಟರ್ಸ್‌ ಮಾಡಲಾಯಿತು.

ಮುಂದುವರೆಯುವುದು...


ಸಂದರ್ಶಕರು

ಕೆ.ಎಸ್‌ ಪರಮೇಶ್ವರ48 views