“ಬೆಂಕಿಯ ಬಲೆ ಶೂಟಿಂಗ್ ರೋಚಕ ಅನುಭವಗಳು”

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 23


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ಕಥೆಗೆ ಹೊಂದುವಂತೆಯೇ ನಾವು ಕಲಾವಿದರನ್ನು ಹುಡುಕುತ್ತಿದ್ದೆವು. ಬೆಂಕಿಯ ಬಲೆಗೆ ಅನಂತ್‌ ನಾಗ್‌ ಮತ್ತು ಲಕ್ಷ್ಮೀ ಅವರೇ ಸೂಕ್ತವಾದ ಕಲಾವಿದರು ಎಂದು ಅನಿಸಿತು. ಆ ಸಿನಿಮಾ ರಾಜ್‌ಕುಮಾರ್‌ಗೆ ಅಲ್ಲ.ಬಿಸಿಲಾದರೇನು ಮಳೆಯಾದರೇನು ಹಾಡು ಉದಯಿಸಿದ್ದು

ಹಾಡು ಚೆನ್ನಾಗಿದ್ರೆ ಅದನ್ನು ರಿಪೀಟ್‌ ಮಾಡಿಸುವುದು ನನ್ನ ಅಭ್ಯಾಸ. ಸಂಧ್ಯಾರಾಗದಲ್ಲಿಯೂ ಒಂದೇ ಹಾಡನ್ನು ಮೂರು ವಿಧದಲ್ಲಿ ಹಾಡಿಸಿದ್ದೇನೆ. ಮದ್ರಾಸ್‌ನ ಸ್ವಾಗತ್‌ ಹೋಟೆಲ್‌ನಲ್ಲಿ ರಾಜನ್‌– ನಾಗೇಂದ್ರ ಅವರಿಗೆ ಒಂದು ರೂಂ ಮಾಡಿಕೊಟ್ಟು, ಬೆಂಕಿಯ ಬಲೆ ಕಥೆ, ಸನ್ನಿವೇಶ ಹೇಳಿದೆವು. ಅದಕ್ಕೆ ಹೊಂದುವಂತೆ ಟ್ಯೂನ್‌ ಮಾಡುವಂತೆ ಹೇಳಿದೆವು. ಅವರು ಟ್ಯೂನ್‌ ಮಾಡಿದ್ರು. ಅದು ನಮಗೆ ಇಷ್ಟವಾಯ್ತು. ಉದಯ್‌ಶಂಕರ್‌ ಅವರಿಗೆ ಸಾಹಿತ್ಯ ಬರೆಯಲು ಕರೆಸಿದೆವು. ಅವನಿಗೂ ಕಥೆ, ಸನ್ನಿವೇಶ ಹೇಳಿದೆವು. ಸನ್ನಿವೇಶ ತುಂಬಾ ಚೆನ್ನಾಗಿದೆ ವಿಭಿನ್ನವಾದ ಹಾಡು ಕೊಡಬೇಕು ಎಂದು ಯೋಚನೆ ಮಾಡಿದ. ಮೂರು ದಿನ ಯೋಚನೆ ಮಾಡಿದ್ರು ಅವನಿಗೆ ಐಡಿಯಾನೇ ಬರಲಿಲ್ಲ. ಕಸ್ತೂರಿ ನಿವಾಸದಲ್ಲಿ ಸಿಗರೇಟ್‌ ಸೇದುವುದರೊಳಗೆ ಹಾಡು ಬರೆದಿದ್ದ ಎಂದು ನಿಮಗೆ ಹೇಳಿದ್ದೆ. ಅಷ್ಟು ಚುರುಕಾಗಿದ್ದ ಮನುಷ್ಯನಿಗೆ ಹಾಡನ್ನು ಪ್ರಾರಂಭಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದರೆ ಏನರ್ಥ. ಮೂರು ನಿಮಿಷದಲ್ಲಿ ಹಾಡು ಕೊಡುತ್ತಿದ್ದವನೂ, ಮೂರು ದಿವಸವಾದರೂ ಕೊಡುತ್ತಿಲ್ಲವಲ್ಲ ಏಕೆ ಎಂದು ನಾನು ಕೇಳಿದೆ. ಏನು ಹೊಳಿಯುತ್ತಲೇ ಇಲ್ಲ ಎಂದು ಅವನು ಹೇಳಿದ. ರಾಜನ್‌– ನಾಗೇಂದ್ರ ಅವರು ಹಾಡಿಗಾಗಿ ಕಾಯುತ್ತಿದ್ರು. ನಾನು, ದೊರೆ ಪ್ರತಿದಿನ ಊಟ ಮಾಡಿ ನಾಲ್ಕು ಗಂಟೆಗೆ ಹೋಟೆಲ್‌ಗೆ ಹೋಗುವುದು ಅಭ್ಯಾಸ. ನಮ್ಮ ಕಾರು ಬಂದಿದ್ದನ್ನು ಉದಯ್‌ಶಂಕರ್‌ ಹೋಟೆಲ್‌ ರೂಮಿನಿಂದಲೇ ನೋಡಿದ್ದಾನೆ. ಅಲ್ಲಿಂದ ಮೆಟ್ಟಿಲು ಇಳಿದು ಓಡೋಡಿ ಬಂದವನೇ ಸಿಕ್ಕೇ ಬಿಡ್ತು ನನಗೆ, ಪಲ್ಲವಿ ಸಿಕ್ಕಿ ಬಿಡ್ತು ಎಂದ. ಏನು ಬರೆದಿದ್ದೀಯಾ ಎಂದೆವು. ಬಾ ಕೇಳಿಸುತ್ತೇವೆ ಎಂದು ಕರೆದುಕೊಂಡು ಹೋದ.


ಆಗಲೇ ಪಲ್ಲವಿ ಸಾಲನ್ನು ರಾಜನ್‌– ನಾಗೇಂದ್ರ ಅವರಿಗೆ ಕೊಟ್ಟುಬಿಟ್ಟಿದ್ದ. ಅದುವೇ ‘ಬಿಸಿಲಾದರೇನು, ಮಳೆಯಾದರೇನು’... ಮೂರು ದಿವಸ ತೆಗೆದುಕೊಂಡೆ, ಈಗ ನೋಡಿದ್ರೆ ಇಷ್ಟು ಚೆನ್ನಾಗಿ ಬರೆದಿದ್ದೀಯಲ್ಲ ಎಂದೆ. ಹೊರಗಿನ ವಾತಾವರಣ ನೋಡಿದ್ದೀಯಾ ನೀನು ಎಂದ. ಆಗ ಬಿಸಿಲು, ಮಳೆ ಎರಡು ಇತ್ತು. ಸಾಹಿತ್ಯ ಹೊಳೆಯದೇ ಅವನು ಬಾಲ್ಕನಿಯಲ್ಲಿ ನಿಂತಿದ್ದನಂತೆ. ಆಗ, ಬಿಸಿಲು, ಮಳೆ ಎರಡೂ ಬಂದಿದೆ. ಅದನ್ನು ನೋಡಿ ಅವನಿಗೆ ಈ ಹಾಡು ಹೊಳೆದಿದೆ. ರಾಜನ್‌– ನಾಗೇಂದ್ರ ಅವರು ಸಂಗೀತದ ಜೊತೆಗೆ ಸಾಹಿತ್ಯ ಪ್ರೇಮಿಗಳು ಹೌದು. ಸಾಹಿತ್ಯ ಚೆನ್ನಾಗಿರದಿದ್ದರೆ, ಚೆನ್ನಾಗಿಲ್ಲ ಬೇರೆ ಬರೆಯಿರಿ ಎಂದು ಅವರು ಹೇಳುತ್ತಿದ್ರು. ಈ ಹಾಡನ್ನು ಕೇಳಿ ಅವರು ಬಹಳ ಖುಷಿಪಟ್ಟರು. ಆ ಹಾಡು ಚೆನ್ನಾಗಿದಿದ್ದರಿಂದ ಅದನ್ನು ರಿಪೀಟ್ ಮಾಡಿಸಿದೆ. ಜಾನಕಿ ಮತ್ತು ಎಸ್‌.ಬಿ. ಬಾಲಸುಬ್ರಹ್ಮಣ್ಯಂ ಅವರು ಆ ಹಾಡನ್ನು ಹಾಡಿದ್ದಾರೆ. ಆ ಸಿನಿಮಾವನ್ನು ಎಷ್ಟು ಬಾರಿ ನೋಡಿದರೂ ನನಗೆ ಕಣ್ಣಲ್ಲಿ ನೀರು ಬರುತ್ತದೆ. ಈಗಲೂ ಆ ದೃಶ್ಯವನ್ನು ನೆನಪಿಸಿಕೊಂಡ್ರೆ ದುಃಖವಾಗುತ್ತದೆ. ಅಂತಹ ಒಂದು ಎಫೆಕ್ಟಿವ್‌ ಸಿನಿಮಾ ಅದು. ತೂಗುದೀಪ ಶ್ರೀನಿವಾಸ, ಅನಂತನಾಗ್‌, ಲಕ್ಷ್ಮೀ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ.


ಮದ್ರಾಸ್‌ನಲ್ಲಿದ್ದ ನಾನು ಪ್ರತಿ ದಿನವೂ ಥಿಯೇಟರ್‌ಗೆ ಫೋನ್‌ ಮಾಡಿ ಎಷ್ಟು ಪ್ರೇಕ್ಷಕರು ಸಿನಿಮಾ ನೋಡಲು ಬಂದಿದ್ದಾರೆ ಎಂದು ಕೇಳುತ್ತಿದ್ದೆ. ಶೇ.60ಕ್ಕಿಂತ ಹೆಚ್ಚು ಮಹಿಳೆಯರೇ ಬಂದಿದ್ದಾರೆ. ಪ್ರತಿಯೊಬ್ಬರ ಕೈಯಲ್ಲೂ ಕರ್ಚೀಫ್‌ ಇದೆ. ಕಣ್ಣೋರಿಸಿಕೊಂಡು ಹೋಗುತ್ತಿದ್ದಾರೆ ಸರ್‌ ಎಂದು ಅವರು ಹೇಳುತ್ತಿದ್ರು.


ಲಕ್ಷ್ಮೀಯನ್ನು ನೆನಪಿಸಿಕೊಳ್ಳಬೇಕು. ಅವಳು ಅದ್ಭುತವಾದ ನಟಿ. ರಾಜ್‌ಕುಮಾರ್‌ ಅವರು ಸಿನಿಮಾದಲ್ಲಿ ಹೇಗೆ ತೊಡಗಿಸಿಕೊಳ್ಳುತ್ತಿದ್ದರೋ, ಹಾಗೆ ಲಕ್ಷ್ಮೀ ಕೂಡ ಸಿನಿಮಾದ ಪಾತ್ರದಲ್ಲಿಯೇ ಮುಳುಗಿ ಹೋಗುತ್ತಾಳೆ. ಅದನ್ನು ನಾನು ಚಂದನದ ಗೊಂಬೆಯಲ್ಲಿಯೇ ಕಂಡುಕೊಂಡಿದ್ದೆ.


ಕಸ್ತೂರಿ ನಿವಾಸದ ಕೋಟು ಹಳೆಯದಾಗಲು ರಾಜಣ್ಣ ಉಪಯೋಗಿಸಿದ ಬಾಲ್ಯದ ಐಡಿಯಾ

ಕಸ್ತೂರಿ ನಿವಾಸದಲ್ಲಿ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಕೋಟ್‌ನ್ನೆಲ್ಲ ಹರಿದುಕೊಂಡಿರಬೇಕು. ನಾನು ಕಾಸ್ಟ್ಯೂಮ್‌ ಡಿಸೈನರ್‌ಗೆ ಬ್ಲೇಡ್‌ ತರುವಂತೆ ಹೇಳಿದೆ. ಬ್ಲೇಡ್‌ ಯಾಕೆ ಎಂದು ರಾಜ್‌ಕುಮಾರ್‌ ಕೇಳಿದ್ರು. ನಿಮ್ಮ ಕೋಟನ್ನು ಹರಿಯಲು ಎಂದು ಹೇಳಿದೆ. ಅದಕ್ಕವರು ಎರಡು ಕಲ್ಲು ತೆಗೆದುಕೊಂಡು ಬರಲು ಹೇಳಿದ್ರು. ನಂತರ ಒಂದು ಕಲ್ಲನ್ನು ಕೋಟ್‌ ಹೊರಭಾಗದಲ್ಲಿ, ಇನ್ನೊಂದನ್ನು ಒಳಭಾಗದಲ್ಲಿ ಇಟ್ಟು ಜಜ್ಜಿದ್ರು. ಅದು ಹರಕಲು ಬಟ್ಟೆಯಂತೆಯೇ ಕಾಣುತ್ತಿತ್ತು. ಆಗ ನಾನು ಹೇಗೆ ನಿಮಗೆ ಈ ಐಡಿಯಾ ಬಂತು ಎಂದೆ. ಚಿಕ್ಕ ವಯಸ್ಸಿನಲ್ಲಿ ಇಷ್ಟವಾಗದ ಬಟ್ಟೆಯನ್ನು ಕಲ್ಲಿನಲ್ಲಿ ಜಜ್ಜಿ ತೂತು ಮಾಡಿ, ಹರಕಲು ಬಟ್ಟೆ ತರಹ ಮಾಡುತ್ತಿದ್ದೆ. ಆಗ ಅಪ್ಪ ಹೊಟ್ಟೆಗಿಲ್ಲದಿದ್ದರೂ, ಬಟ್ಟೆ ಚೆನ್ನಾಗಿರಬೇಕು ಎಂದು ಹೊಸ ಬಟ್ಟೆ ತಂದು ಕೊಡುತ್ತಿದ್ರು ಎಂದ್ರು. ಕಿಲಾಡಿಗಳು ನೀವು ಎಂದೆ.


ನಟಿ ಲಕ್ಷ್ಮೀ ಅವರ ಡೆಡಿಕೇಷನ್‌ ಲೆವೆಲ್‌

ಅನಂತ್‌ ನಾಗ್‌ ಮತ್ತು ಲಕ್ಷ್ಮೀ ಇಬ್ಬರೂ ಒಳ್ಳೆಯ ಕಲಾವಿದರಾದ್ದರಿಂದಲೇ ನಾವು ಆ ಜೋಡಿಯನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿದ್ದೆವು. ಅನಂತ್‌ ನಾಗ್ ಅಂಥ ಒಳ್ಳೆಯ ಕಲಾವಿದ ಎಲ್ಲಿಯೂ ಸಿಗಲಿಲ್ಲ. ಸಿನಿಮಾ ಎಂಬ ಈಜುಕೊಳದಲ್ಲಿ ಈಜಿ, ಈಜಿ... ಉನ್ನತ ಮಟ್ಟಕ್ಕೆ ಬಂದಂತಹ ನಟಿ ಲಕ್ಷ್ಮೀ.

ಬೆಂಕಿಯ ಬಲೆಗೆ ಕ್ಲೈಮಾಕ್ಸ್‌ ದೃಶ್ಯದಲ್ಲಿ ಗಂಡನಿಗೆ ಔಷಧಿ ತರಲು ಆಕೆಯ ಬಳಿ ದುಡ್ಡಿರುವುದಿಲ್ಲ. ಏನು ಮಾಡುವುದೆಂದು ಯೋಚಿಸಿಕೊಂಡು ರಸ್ತೆಯಲ್ಲಿ ಹೋಗುವಾಗ, ಕಟ್ಟಡ ಕಾಮಗಾರಿ ನಡೆಯುತ್ತಿರುತ್ತದೆ. ಅಲ್ಲಿ ಹೋಗಿ ಕೆಲಸ ಕೇಳುತ್ತಾಳೆ. ಇಟ್ಟಿಗೆ ಹೋರುವ ಕೆಲಸ ಕೊಡುತ್ತಾರೆ. ಅದರಿಂದ ಬಂದ ಹಣದಲ್ಲಿ ಗಂಡನಿಗೆ ಔಷಧಿ ಕೊಡಿಸುವ ಯೋಚನೆ ಆಕೆಯದು. ಈ ದೃಶ್ಯಕ್ಕಾಗಿ ಮಂಕಾಗಿರುವ ಹುಬ್ಬಳ್ಳಿ ಸೀರೆಯೊಂದನ್ನು ತಂದು ಒಗೆದು ಕೊಡಲು ಕಾಸ್ಟ್ಯೂಮ್‌ ಡಿಸೈನರ್‌ಗೆ ಕೊಟ್ಟೆ. ಅದನ್ನು ಮರುದಿನ ಆತ ಲಕ್ಷ್ಮೀಗೆ ಹಾಕಿಕೊಳ್ಳುವುದಕ್ಕೆ ಹೇಳಿದ. ನಾವು ಆ ದೃಶ್ಯದ ಚಿತ್ರೀಕರಣದ ಸ್ಥಳದಲ್ಲಿಯೇ ಇದ್ದೆವು. ಇದನ್ನು ಹಾಕಿಕೊಳ್ಳುವುದಿಲ್ಲ ಎಂದು ಲಕ್ಷ್ಮೀ ಹೇಳಿದಳು. ಯಾಕೆ ಎಂದು ನಾನು ಕೇಳಿದೆ. ಈ ಸನ್ನಿವೇಶಕ್ಕೆ ಈ ಸೀರೆ ಹೊಂದುವುದಿಲ್ಲ ಎಂದಳು. ಮತ್ತೇನು ಮಾಡುತ್ತೀಯಾ ಎಂದೆ. ಯೋಚನೆ ಮಾಡಿ, ಒಂದು ಗಂಟೆ ಸಮಯ ಕೊಡ್ತೀರಾ ಎಂದಳು. ಸರಿ ಆಯ್ತು ಏನಾದ್ರು ಮಾಡು ಒಂದಿಲ್ಲ ಎಂದ್ರೆ ಎರಡು ಗಂಟೆ ತಗೋ ಅಂದೆ. ಆಕೆ ಸೀದಾ ಹೋಗಿ, ಅಲ್ಲಿದ್ದ ಇಟ್ಟಿಗೆ ಹೋರುವ ಹೆಂಗಸಿನ ಬಳಿ ಮಾತನಾಡಿ, ಆಕೆ ಉಟ್ಟಿದ್ದ ಸೀರೆಯನ್ನು ಇವಳು ತೆಗೆದುಕೊಂಡು, ಇವಳ ಸೀರೆಯನ್ನು ಆಕೆಗೆ ಕೊಟ್ಟಿದ್ದಳು. ಅದು ಹರಕಲು ಸೀರೆ. ಅದನ್ನು ಕಾಸ್ಟ್ಯೂಮ್‌ ಡಿಸೈನರ್‌ಗೆ ಕೊಟ್ಟು, ಇದನ್ನು ಬಿಸಿಲಿಗೆ ಒಣಗಿಸಿ, ಸ್ಪ್ರೇ ಬಳಸಿ ಹಳೆಯ ವಾಸನೆ ಹೋಗಿಸಬೇಕು ಎಂದಳು. ಇವೆಲ್ಲ ಪ್ರಕ್ರಿಯೆ ನಡೆಯಲು ಒಂದು ಗಂಟೆ ಆಯ್ತು. ನಂತರ ಅದರಲ್ಲಿ ಶೂಟಿಂಗ್ ಮಾಡಿದೆವು. ಸ್ವಲ್ಪವೂ ಚೆನ್ನಾಗಿಲ್ಲದ ಬಟ್ಟೆ ಕೊಟ್ಟರೇನೇ ಇದನ್ನು ಚೆನ್ನಾಗಿಲ್ಲ ಹಾಕುವುದಿಲ್ಲ ಎನ್ನುವ ಕಲಾವಿದರಿದ್ದಾರೆ. ಇನ್ನು ಈ ರೀತಿ ಯಾರು ಮಾಡಲು ಸಾಧ್ಯ?


ನಿಮ್ಮ ನಿರ್ದೇಶನದ ‘ಎರಡು ಕನಸು’ ಮತ್ತು ‘ಬೆಂಕಿಯ ಬಲೆ’ ಸಿನಿಮಾವನ್ನು ಬಹಳ ಇಷ್ಟ ಎಂದು ಹಲವು ಮಹಿಳೆಯರು ನನಗೆ ಹೇಳಿದ್ದಾರೆ. ಎರಡೂ ಸಿನಿಮಾಗಳಲ್ಲಿ ಮಹಿಳೆಯರಿಗೆ ಆದ್ಯತೆ ಕೊಟ್ಟಿದ್ದೀರಿ. ಬೆಂಕಿಯ ಬಲೆ ಸಿನಿಮಾ ನೋಡಿದರೆ ಈಗಲೂ ಅಳು ಬರುತ್ತದೆ. ಗಂಡನಿಗೋಸ್ಕರ ಪ್ರಾಣ ಬಿಡುವ ಹೆಂಗಸರನ್ನು ನೀವು ತೋರಿಸಿದ್ದೀರಿ ಅದಕ್ಕೆ ನೀವು ಇಷ್ಟ ಎನ್ನುತ್ತಾರೆ.


ನಮ್ಮ ಸಿನಿಮಾಗಳಲ್ಲಿ ಒಳ್ಳೆಯ ಕ್ಯಾಮೆರಾಮೆನ್‌ ಇದ್ರು. ದೊರೆಯವರು ನಿರ್ದೇಶನದ ಕಡೆ ಬಂದ ಮೇಲೆ ಅವರ ಸಹಾಯಕ ಚಿಟ್ಟಿ ಬಾಬು ಅದರ ಜವಾಬ್ದಾರಿ ವಹಿಸಿಕೊಂಡಿದ್ದ. ನಂತರದಲ್ಲಿ ನಮಗೆ ಗೌರಿ ಶಂಕರ್‌ ಸಿಕ್ಕಿದ್ರು. ಅವರು ಎಷ್ಟು ಅದ್ಭುತ ಕ್ಯಾಮೆರಾಮೆನ್‌ ಎನ್ನುವುದು ಎಲ್ಲರಿಗೂ ತಿಳಿದಿದೆ. ಕಸ್ತೂರಿ ನಿವಾಸ ಮಾಡಬೇಕಾದ್ರೆ, ಕಂಠೀರವ ಸ್ಟುಡಿಯೊದಲ್ಲಿ ಗೌರಿ ಶಂಕರ್‌ ಕ್ಯಾಮೆರಾ ಅಪರೇಟರ್‌ ಆಗಿದ್ದ. ಇನ್‌ಸ್ಟಿಟ್ಯೂಟ್‌ನಿಂದ ತರಬೇತಿ ಪಡೆದು ಬಂದವನೆಂದು ಗೊತ್ತಿತ್ತು. ಆಮೇಲೆ ನಾವು ಅವನನ್ನೇ ಕ್ಯಾಮೆರಾಮೆನ್ ಆಗಿ ಸೇರಿಸಿಕೊಂಡೆವು. ಅವನು ಕೇಳಿದಂತಹ ಮೆಟಿರೀಯಲ್‌ ತರಿಸಿ ಕೊಡುತ್ತಿದ್ದೆವು. ಅವನ ಜೀವನ ದುರಂತ. ಅವನ ವೈಯಕ್ತಿಕ ಜೀವನದ ಬಗ್ಗೆ ಹೇಳಲು ಇಷ್ಟವಿಲ್ಲ. ಮನುಷ್ಯನ ವೈಯಕ್ತಿಕ ಜೀವನದ ಕುರಿತು ಮಾತನಾಡುವುದು ಅಸಂಬದ್ಧವಾಗುತ್ತದೆ. ನಮಗೆ ಬೇಡದಿರುವ ವಿಷಯವಾಗುತ್ತದೆ. ಮನುಷ್ಯನ ಒಳ್ಳೆಯ ಗುಣವನ್ನು ಮಾತ್ರವೇ ಹೊಗಳಬೇಕು. ಅದನ್ನು ಅನುಸರಿಸಬೇಕು. ಮತ್ತು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಅವನ ಖಿನ್ನತೆಗಳನ್ನು ಮತ್ತು ಇತರ ಹವ್ಯಾಸಗಳನ್ನು ಮಾತನಾಡುವುದು ಕಷ್ಟವಾಗುತ್ತದೆ. ಮಾಡಲುಬಾರದು ಮತ್ತು ಹೇಳಲುಬಾರದು. ಮನುಷ್ಯನ ಒಳ್ಳೆಯ ಗುಣಗಳನ್ನು ಮಾತ್ರವೇ ಕಲಿಯಬೇಕು. ಅಪಗುಣಗಳನ್ನು ಮರೆತುಬಿಡಬೇಕು.
ಬೆಂಕಿಯ ಬಲೆ ಮುಗಿದ ಮೇಲೆ ರಾಜ್‌ಕುಮಾರ್‌ ಕಾಲ್‌ಶೀಟ್‌ ನಮಗಾಗಿ ರೆಡಿಯಾಗಿತ್ತು.


ಮುಂದುವರಿಯುವುದು...

ಸಂದರ್ಶನ: ಕೆ.ಎಸ್‌. ಪರಮೇಶ್ವರ

69 views