“ಬೆಂಗಳೂರು ಹಾಗೂ ಮದರಾಸಿನ ಅಣ್ಣಾವ್ರ ಆಸ್ತಿಗಳು”

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 13


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)


1976ರಲ್ಲಿ ಒಂದೇ ವರ್ಷದಲ್ಲಿ 13 ಸಿನಿಮಾಗಳಲ್ಲಿ ರಾಜ್‌ಕುಮಾರ್‌ ಮಾಡಿದ್ರು. ಮಲಯಾಳಂನ ಪ್ರೇಮ್‌ನಜೀರ್‌ ಒಂದೇ ವರ್ಷದಲ್ಲಿ 24 ಸಿನಿಮಾಗಳಲ್ಲಿ ನಟಿಸಿದ್ರು. ಅವರು 500 ಸಿನಿಮಾಗಳಲ್ಲಿ ಹೀರೊ ಆಗಿದ್ದಾರೆ. ಅವರ ಮೊದಲ ಕ್ಯಾಮೆರಾಮ್ಯಾನ್‌ ದೊರೆ. ಕೊಚ್ಚಿನ್‌ಗೆ ಹೋಗಿ ಚಿತ್ರೀಕರಣ ಮಾಡಿಕೊಂಡು ಬಂದಿದ್ರು.


‘ಎರಡು ಕನಸು’ ಯಶಸ್ಸು ಕಂಡು ಎವಿಎಂ ಅವರು ಬಂದು ಅದರ ರೈಟ್ಸ್‌ ತೆಗೆದುಕೊಂಡ್ರು. ನೀವೇ ನಿರ್ದೇಶನ ಮಾಡಿ ಅಂದ್ರು. ಅದರಲ್ಲಿ ನಾಲ್ಕು ಲಕ್ಷ ರೂಪಾಯಿ ಲಾಭ ಬಂತು. ದುಡ್ಡಿಗೇನು ಕೊರತೆ ಇರಲಿಲ್ಲ. ಮೂರು ವರ್ಷ ರಾಜ್‌ಕುಮಾರ್‌ ಕಾಲ್‌ಶೀಟ್‌ ಇರಲಿಲ್ಲ. ಆರ್ಥಿಕವಾಗಿ ಚೆನ್ನಾಗಿದ್ದ ಕಾರಣ ಸಂಕಷ್ಟದ ಸ್ಥಿತಿ ಎದುರಾಗಿರಲಿಲ್ಲ. ಎರಡು ಕನಸುವರೆಗೂ ರಾಜ್‌ಕುಮಾರ್‌ ಇಲ್ಲದೆ ಸಿನಿಮಾವನ್ನೇ ಮಾಡಿಲ್ಲ. ಮೂರು ವರ್ಷ ಹೇಗೆ ಸುಮ್ನೆ ಕೂತಿರುವುದು ಎಂದು ನಮಗೂ ಯೋಚನೆಯಾಗಿತ್ತು. ನಮಗಿಂತ ಹೆಚ್ಚಾಗಿ ಪಾರ್ವತಮ್ಮ ಮತ್ತು ರಾಜ್‌ಕುಮಾರ್ ಅವರಿಗೆ ಅದರ ಯೋಚನೆ ಹೆಚ್ಚು ಕಾಡಿತ್ತು. ಇವರಿಬ್ಬರನ್ನೂ ಹೇಗೆ ಮೂರು ವರ್ಷ ಸುಮ್ನೆ ಕೂರಿಸಿರೋದು ಎನ್ನುತ್ತಿದ್ರು.
ಮದ್ರಾಸ್‌ನಲ್ಲಿ ಮೊದಲ ಮಹಡಿಯಲ್ಲಿ ನಮ್ಮ ಆಫೀಸ್‌ ಇತ್ತು. ಕೆಳಗಡೆ ದೊರೆ ಅವರ ಸಹೋದರರೊಬ್ಬರಿಗೆ ಮನೆ ಮಾಡಿ ಕೊಟ್ಟಿದ್ದೆವು. ಅವರು ಸೀತಾರ್‌ ವಾದಕ. ರಾಧಕೃಷ್ಣ ಎಂದು ಅವರ ಹೆಸರು. ರಾಜ್‌ಕುಮಾರ್‌ ಅವರಿಗೆ ಸಿತಾರ್‌ ಕಲಿಯೋ ಆಸಕ್ತಿ ಇತ್ತು. ಹಾಗಾಗಿ ರಾಧಕೃಷ್ಣ ಅವರ ಬಳಿ ಪ್ರತಿದಿನ ಬಂದು ಸಿತಾರ್‌ ಕಲಿಯುತ್ತಿದ್ರು. ಬೆಳಿಗ್ಗೆ 11 ಕ್ಕೆ ಬಂದು 1 ಗಂಟೆ ಹೋಗುತ್ತಿದ್ರು. ಪಾರ್ವತಮ್ಮ ಅವರು ನಮ್ಮ ಕಚೇರಿಯಲ್ಲಿ ಕುಳಿತಿರುತ್ತಿದ್ರು. ನಾವು ಆಫೀಸ್‌ನಲ್ಲಿ ಬ್ಯುಸಿ ಇದ್ರೆ, ಅಥವಾ ಬೇರೆಯವರು ಇದ್ರೆ, ನಮ್ಮ ಕಚೇರಿಯ ಬಳಿಯೇ ಉದಯ್‌ಶಂಕರ್‌ ಅವರ ಮನೆ ಇತ್ತು ಅಲ್ಲಿಗೆ ಹೋಗಿ ಅವರ ತಾಯಿ ಜೊತೆ ಮಾತಾಡಿಕೊಂಡು ಇರುತ್ತಿದ್ರು. ನಾವು ರಾಜ್‌ಕುಮಾರ್‌ ಅವರನ್ನು ಕರೆದುಕೊಂಡು ಹೋಗಿ ಉದಯ್‌ಶಂಕರ್‌ ಮನೆಗೆ ಬಿಟ್ಟ ಮೇಲೆ, ಅವರು ಕಾರಿನಲ್ಲಿ ಅವರ ಮನೆಗೆ ಹೋಗುತ್ತಿದ್ರು.


ಆ ಕಾಲದಲ್ಲಿ ರಾಜ್‌ಕುಮಾರ್‌ ಅವರಿಗೆ ಬರುತ್ತಿದ್ದ ಅಲ್ಪ ಸಂಪಾದನೆಯಲ್ಲಿಯೇ ವರದಪ್ಪ ಮತ್ತು ಪಾರ್ವತಮ್ಮ ಹೊಟ್ಟೆ, ಬಟ್ಟೆ ಕಟ್ಟಿ 50 ಸಾವಿರ ಸಂಪಾದನೆ ಕೂಡಿಟ್ಟಿದ್ರು. ಮೂವತ್ತು ಸಾವಿರಕ್ಕೆ ಸಿಐಟಿ ಕಾಲೋನಿಯಲ್ಲಿ ಎರಡು ರೂಮಿನ ಮನೆ ತೆಗೆದುಕೊಂಡಿದ್ರು. ರಾಜ್‌ಕುಮಾರ್‌ ಅವರು ಚಿತ್ರರಂಗದಲ್ಲಿ ಬೆಳೆಯುತ್ತ ಬಂದಂತೆ ದುಡ್ಡು ಬರಲು ಶುರುವಾಯಿತು. ಆ ಹೊತ್ತಿಗೆ ರಾಜ್‌ಕುಮಾರ್‌ ಅವರ ದೊಡ್ಡ ತಂಗಿ, ಚಿಕ್ಕ ತಂಗಿ ಅವರ ಮಕ್ಕಳು, ವರದಪ್ಪನ ಮಕ್ಕಳು, ರಾಜ್‌ಕುಮಾರ್‌ ಮಕ್ಕಳು ಎಲ್ಲ ಸೇರಿ ಹೆಚ್ಚು ಕಮ್ಮಿ 20–25 ಮಕ್ಕಳು ಮನೆಯಲ್ಲಿದ್ರು. ಹಾಗಾಗಿ, ದೊಡ್ಡ ಮನೆ ಬೇಕಾಗಿತ್ತು. ಪಾರ್ವತಮ್ಮ ಮತ್ತು ವರದಪ್ಪ ಅವರಿಗೆ ವ್ಯವಹಾರಿಕ ಜ್ಞಾನ ತುಂಬಾ ಚೆನ್ನಾಗಿತ್ತು. ಕೊದಮ್ಬಕ್ಕಂನಲ್ಲಿ ಮೂಲೆ ಮನೆಯೊಂದು ಬಿಕರಿಗೆ ಇದೆ ಎಂಬುದು ಗೊತ್ತಾಯಿತು. 3.25 ಲಕ್ಷಕ್ಕೆ ಆ ಮನೆ ತೆಗೆದುಕೊಂಡ್ರು. ಇವತ್ತಿಗೂ ಆ ಮನೆಯಿಂದ ತಿಂಗಳಿಗೆ 60 ಸಾವಿರ ಬಾಡಿಗೆ ಬರುತ್ತಿದೆ. ಆ ಮನೆಯಲ್ಲಿ ಇದ್ದುಕೊಂಡು ಅಷ್ಟು ಜನರನ್ನು ಸಾಕಿ, ಸಲಹಿ ಎಲ್ಲರಿಗೂ ಮದುವೆ ಮಾಡಿದ್ರು. ಸದಾಶಿವ ನಗರದಲ್ಲಿ ಇರುವುದು ಎವಿಎಂ ಮನೆ. ಅದು ಬೆಂಗಳೂರು ಗೆಸ್ಟ್‌ಹೌಸ್‌ ಆಗಿತ್ತು. 1981ರಲ್ಲಿ 13.25 ಲಕ್ಷಕ್ಕೆ ಆ ಮನೆಯನ್ನು ತೆಗೆದುಕೊಂಡ್ರು. ‘ದೊಡ್ಡ ಮನೆ’ ಎಂದೇ ಜನಜನಿತವಾಗಿರುವ ಆ ಮನೆಗೆ ಇವತ್ತಿಗೆ 8 ಕೋಟಿ ರೂಪಾಯಿ. ಮನೆಯ ವಿಷಯ ಬಂದಕ್ಕೆ ಇವಿಷ್ಟು ನೆನಪಾಯ್ತು.


ಕಚೇರಿಗೆ ಒಮ್ಮೆ ಬಂದಿದ್ದ ಪಾರ್ವತಮ್ಮ ಯಾಕೆ ಸುಮ್ನೆ ಕೂತಿದ್ದೀರಾ ಅಂದ್ರು. ಆಫೀಸ್‌ನಲ್ಲಿ ಕೆಲಸ ಮಾಡ್ತೀದ್ದೀವಲ್ಲ ಅಂದೆವು. ಅದೆಲ್ಲ ಇಲ್ಲ, ಈ ಪುಸ್ತಕ ತಗೋಳಿ ಎಂದು ಕೊಟ್ರು. ಒಳ್ಳೆ ಕಥೆ ಹುಡುಕಿದ್ದೀನಿ. ಈ ಕಥೆ ನಿಮ್ಮ ಅಣ್ಣನಿಗೆ(ರಾಜ್‌ಕುಮಾರ್‌) ಸರಿ ಹೋಗಲ್ಲ. ಬೇರೆಯವರನ್ನು ಹಾಕಿಕೊಂಡು ಮಾಡಿ ಅದ್ಭುತವಾಗಿ ನಡೆಯುತ್ತೆ ಅಂದ್ರು. ಅವರ ಜಡ್ಜ್‌ಮೆಂಟ್‌ನಲ್ಲಿ ನಮಗೆ ಬಹಳ ಭರವಸೆ ಇತ್ತು.


ಆ ಪುಸ್ತಕ ತೆಗೆದು ನೋಡಿದ್ರೆ ‘ಬಯಲು ದಾರಿ’ ಎಂದಿತ್ತು. ಕಥೆ ಓದಿದ್ವಿ. ಆ್ಯಂಟಿ ಸೆಂಟಿಮೆಂಟ್‌ ಇತ್ತು. ಅಣ್ಣ ಇಲ್ಲದೇ ಮಾಡೋದಕ್ಕೆ ನಮಗೆ ಮನಸೇ ಇರಲಿಲ್ಲ. ಆದ್ರೆ ಪಾರ್ವತಮ್ಮನವರು ಮಾಡಲೇಬೇಕು ಅಂದ್ರು. ‘ಕಬ್ಬಿಣ್ಣವನ್ನು ಉಪಯೋಗಿಸದೇ ಒಂದು ಕಡೆ ಬಿಸಾಕಿದ್ರೆ ತುಕ್ಕು ಹಿಡಿಯುತ್ತೆ, ಹಾಗೆ ನೀವು ತುಕ್ಕು ಹಿಡಿದು ಬಿಡ್ತೀರಾ’ ಎಂದು ರಾಜ್‌ಕುಮಾರ್‌ ಅವರು ಸಿನಿಮಾ ಮಾಡಲು ಒತ್ತಾಯಿಸಿದ್ರು. ಸುಮ್ನೆ ಕೂತಿರಬಾರದು. ಏನಾದ್ರು ಕೆಲಸ ಮಾಡ್ತೀರಬೇಕು. ಪಾರ್ವತಿ ಏನೋ ಕಥೆ ಕೊಟ್ಟಿದ್ದಾಳಂತಲ್ಲ, ಚೆನ್ನಾಗಿದೆಯಂತೆ, ಮಾಡಿ ಅದನ್ನು ಅಂದ್ರು. ಈಗ ಜನ ರಾಜ್‌ಕುಮಾರ್‌ ಯಶಸ್ಸೇ ಇವರ ಯಶಸ್ಸು ಅಂತಿದ್ದಾರೆ. ರಾಜ್‌ಕುಮಾರ್‌ ಇಲ್ಲದೇ ಒಂದು ಸಕ್ಸಸ್‌ ಮಾಡಿ ತೋರಿಸಿ. ನಿಮಗೆ ಸಾಮರ್ಥ್ಯ ಇದೆಯಲ್ವಾ ಅಂದ್ರು. ನೀವು ಡೈರೆಕ್ಟ್‌ ಮಾಡಿ, ಕಲಾವಿದರನ್ನೆಲ್ಲ ಆಯ್ಕೆ ಮಾಡಿ. ನಾನು ಪ್ರೊಡ್ಯೂಸ್ ಮಾಡ್ತೇನೆ. ಲಾಭ–ನಷ್ಟ ನನಗೆ ಇದ್ದು ಬಿಡ್ಲಿ ಎಂದ್ರು ಪಾರ್ವತಮ್ಮ ಅವರು. ಆಗ ನಮಗೆ ಅದು ಸವಾಲೆನಿಸಿತು. ದುಡ್ಡಿಗೋಸ್ಕರನಾ ನಾವು ಇಷ್ಟುದಿನ ರಾಜ್‌ಕುಮಾರ್‌ ಇಲ್ಲದೇ ಮಾಡಲ್ಲ ಅಂತಿದಿದ್ದು. ಒಂದು ಸಂಪ್ರದಾಯ, ಪರಂಪರೆಯಲ್ಲಿ ನಡೆದುಕೊಂಡು ಬರುತ್ತಿದ್ವಿ. ಅದಕ್ಕೋಸ್ಕರ ಬೇಡ ಅಂತಿದ್ದೀವಿ ಅಂದಿದ್ದೇವು ಅಷ್ಟೇ. ಆದರೆ, ಅವರು ಒತ್ತಾಯ ಬಿಡಲಿಲ್ಲ. ನೀವು ಸಿನಿಮಾ ಮಾಡಲೇಬೇಕು ಎಂದ್ರು.


ಅನಂತ್‌ನಾಗ್‌ನನ್ನು ಕೇಳಿದೆವು. ಬಾಂಬೆನಲ್ಲಿ ಇದ್ದ. ತಕ್ಷಣ ಸಿನಿಮಾ ಮಾಡಲು ಒಪ್ಪಿ ಬಂದ. ಕಲ್ಪನಾ ಆಗ ತಾನೇ ಎರಡು ಕನಸು ಮುಗಿಸಿದ್ಲು. ಅವಳ ಸಾಮರ್ಥ್ಯದ ಮೇಲೆ ನಮಗೆ ತುಂಬ ನಂಬಿಕೆ ಇತ್ತು. ಆ ಪಾತ್ರಕ್ಕೆ ಅವಳೇ ಸೂಕ್ತ ಎಂದು ಬಯಲು ದಾರಿಗೆ ಹಾಕಿಕೊಂಡೆವು. ಹೊಸ ಹೀರೊನಾ ಹಾಕಿಕೊಳ್ಳುತ್ತಿದ್ದೆವು. ಏನಾದ್ರು ವಿಶೇಷತೆ ತರಬೇಕೆಂದು ಯೋಚಿಸಿದೆವು.


ವಿಮಾನದಲ್ಲಿ ಹೊಡೆದಾಡುವ ದೃಶ್ಯವನ್ನು ಆ ತನಕ ಯಾರೂ ತೋರಿಸಿರಲಿಲ್ಲ. ಆದ್ರೆ ನಾವು ಅದನ್ನು ಜೇಡರ ಬಲೆಯಲ್ಲಿ ತೋರಿಸಿಬಿಟ್ಟಿದ್ವಿ. ಅದರಲ್ಲಿ ರಾಜ್‌ಕುಮಾರ್‌ ಒಂದು ವಿಮಾನದಲ್ಲಿ ಇನ್ನೊಂದು ವಿಮಾನಕ್ಕೆ ಜಂಪ್‌ ಮಾಡ್ತಾರೆ. ಆಗಿನ ಕಾಲದಲ್ಲಿ ಏರಿಯಲ್‌ ಫೋಟೊಗ್ರಾಫಿಗೆ ಅವಕಾಶ ಇರಲಿಲ್ಲ. ಕ್ಯಾಪ್ಟನ್‌ ಗೋಪಿನಾಥ್‌ ನನಗೆ ದೂರದ ಸಂಬಂಧ. ಅವರಿಗೆ ಹೇಳಿ ಡೆಕ್ಕನ್‌ ಏರವೇಸ್‌ನ ಮೂರು ವಿಮಾನ ತೆಗೆದುಕೊಂಡಿದ್ದೆ. ಆ ಮೂರು ವಿಮಾನದಲ್ಲಿಯೇ ಫೈಟಿಂಗ್‌ದೃಶ್ಯ ಶೂಟ್‌ ಮಾಡಿದ್ದು. ಅದಕ್ಕೆ ಡಿಫೆನ್ಸ್‌ನಿಂದ ಅನುಮತಿ ಬೇಕಿತ್ತು. ದೆಹಲಿಗೆ ಹೋಗಿ ಅನುಮತಿ ತೆಗೆದುಕೊಂಡು ಬಂದಿದ್ದೆ. ಈಗಿನ ಕಾಲದಲ್ಲಿ ಮೊಬೈಲ್‌ನಲ್ಲಿ ಶೂಟ್‌ ಮಾಡಿ ಬಿಡ್ತಾರೆ. ಆದ್ರೆ ಆಗೆಲ್ಲ ಹಾಗಿರಲಿಲ್ಲ. ವಿಮಾನದಲ್ಲಿ ಕ್ಯಾಮೆರಾ ಇಡಲು ಆಗ ಅನುಮತಿ ಪಡೆಯಬೇಕಿತ್ತು. ಒಂದು ವಿಮಾನದಲ್ಲಿ ರಾಜ್‌ಕುಮಾರ್‌, ಇನ್ನೊಂದ್ರಲ್ಲಿ ದಿನೇಶ್‌, ಇನ್ನೊಂದು ವಿಮಾನದಲ್ಲಿ ಕ್ಯಾಮೆರಾ ಇತ್ತು. ಕ್ಯಾಮೆರಾ ಇದ್ದ ವಿಮಾನದ ಪೈಲಟ್‌ ಎರಡು ಪೆಗ್‌ ಹಾಕಿಕೊಂಡಿದ್ದ. ಅವನು ಆ ಎರಡು ವಿಮಾನದವರು ಯಾಕೆ ನನಗಿಂತ ಮುಂದೆ ಹೋಗ್ತಿದ್ದಾರೆ ನಾನು ಮುಂದೆ ಹೋಗಲು ಬಿಡುವುದಿಲ್ಲ ಎಂದು ಹೇಳಿ ಆತ ಮುಂದೆ ಹೋಗಿಬಿಟ್ಟಿದ್ದ. ಅವನು ಎರಡು ವಿಮಾನಗಳ ಹಿಂದೆ ಇರಬೇಕಿತ್ತು. ಎಲ್ಲರನ್ನು ಕಮಾಂಡ್‌ ಮಾಡಿ ಇಳಿಸಿ, ಅವನನ್ನು ಕೈ ಮುಗಿದು ಕೇಳಿಕೊಂಡೆವು. ಕ್ಯಾಪ್ಟನ್‌ ಬಂದು, ಅವರು ಹೇಳಿದ ಪ್ರಕಾರ ಹೋಗು, ಅವರ ಆದೇಶವನ್ನು ಪಾಲಿಸು ಎಂದು ಹೇಳಿದ್ರು. ನಂತರ ಒಪ್ಪಿಕೊಂಡು, ಅವರ ಹಿಂದೆಯೇ ಹೋದ. ಶೂಟ್‌ ಮಾಡಿರುವುದನ್ನು ಡಿಫೆನ್ಸ್‌ನವರಿಗೆ ತೋರಿಸಬೇಕು. ಜಂಪ್‌ ಮಾಡಿದ ದೃಶ್ಯವನ್ನು ಅವರಿಗೆ ತೋರಿಸಿದೆವು. ಆಗ ನಾಲ್ಕೈದು ಪೈಲಟ್‌ಗಳು ಜೋರಾಗಿ ನಗಲು ಶುರು ಮಾಡಿದ್ರು. ಯಾಕೆ ನಗುತ್ತಿದ್ದೀರಾ ಎಂದು ಕೇಳಿದ್ರೇ, ಹೀಗೆ ಪ್ರಪಂಚದಲ್ಲಿ ಆಗಲು ಸಾಧ್ಯವೇ ಇಲ್ಲ. ಒಂದು ವಿಮಾನದಿಂದ ಇನ್ನೊಂದು ವಿಮಾನಕ್ಕೆ ಯಾರೂ ಹಾರಲು ಸಾಧ್ಯವಿಲ್ಲ ಎಂದು ಹೇಳಿ ಜೋರಾಗಿ ನಗುತ್ತಿದ್ರು.


ಆ ಸಿನಿಮಾದ ರೀತಿಯಲ್ಲೇ ‘ಬಯಲು ದಾರಿ’ಯಲ್ಲೂ ಏನಾದ್ರೂ ವಿಶೇಷತೆ ಇರಬೇಕು ಎನಿಸಿದಾಗ ಹೆಲಿಕಾಪ್ಟರ್‌ ಬಳಸುವ ಯೋಚನೆ ಬಂತು. ಒಳ್ಳೊಳ್ಳೆ ಲೊಕೇಷನ್‌ ಬೇಕೆಂದು ಹುಡುಕುತ್ತಿದ್ದೆವು. ಕುದುರೆ ಮುಖ ಕಂಪನಿಯಲ್ಲಿ ಜಪಾನ್‌ನವರು ಮಂಗಳೂರಿಗೆ ಹೋಗಿ ಬಂದು ಮಾಡಲು ಅಲ್ಲಿ ಒಂದು ಹೆಲಿಕಾಪ್ಟರ್‌ ಇಟ್ಟಿದ್ರು. ಕುದುರೆಮುಖ ಕಂಪನಿ ವ್ಯವಸ್ಥಾಪಕ ನಿರ್ದೇಶಕ ದೇವೇಂದ್ರನಾಥ್‌ ಅವರು ಶೂಟಿಂಗ್‌ಗೆ ಹೆಲಿಕಾಪ್ಟರ್‌ ಕೊಡ್ತೇವೆ ಬನ್ನಿ ಅಂದ್ರು. ಆಯ್ತು ಎಂದು ಹೋದೆವು. ‘ಚೆಲುವೆ ಎಲ್ಲಿರುವೆ’ ಹಾಡನ್ನು ಹೆಲಿಕಾಪ್ಟರ್‌ನಲ್ಲಿಯೇ ಶೂಟ್‌ ಮಾಡಬೇಕೆಂದು ಯೋಚಿಸಿದ್ದೆವು. ಶೂಟಿಂಗ್‌ಗೆ ಹೋದಾಗ ಹೆಲಿಕಾಪ್ಟರ್‌ ಕೆಟ್ಟು ಕೂತ್ತಿತ್ತು. ಟೇಕ್‌ಆಫ್‌ ಆಗುತ್ತಲೇ ಇರಲಿಲ್ಲ. ಬೇರೆ ದೃಶ್ಯಗಳ ಶೂಟಿಂಗ್‌ ಇತ್ತು. ನೀವು ಅದನ್ನು ಮಾಡಿ, ನಾನು ಅರೆಂಜ್ ಮಾಡ್ತೇನೆ ಅಷ್ಟೊತ್ತಿಗೆ ಅಂದೆ. ನಂತರ ಕ್ಯಾಪ್ಟನ್‌ ಗೋಪಿನಾಥ್‌ ಅವರಿಗೆ ಹೀಗೆ ಆಗಿದೆ ಏನು ಮಾಡುವುದು ಎಂದು ಕೇಳಿದೆ. ಬಾಂಬೆನಲ್ಲಿ ಒಂದು ಅಡ್ರಸ್‌ ಕೊಡ್ತೇನೆ. ಅವರು ಹೆಲಿಕಾಪ್ಟರ್‌ ಕಳುಹಿಸುತ್ತಾರೆ. ಎಷ್ಟು ದುಡ್ಡು ಆಗುತ್ತೋ ಅದನ್ನು ಕೊಡು ಅಂದ್ರು. ಸರಿ ಎಂದು ಅವರು ಕೊಟ್ಟ ನಂಬರ್‌ಗೆ ಕರೆ ಮಾಡಿದೆ. ದಿನಕ್ಕೆ 25 ಸಾವಿರ ಆಗುತ್ತದೆ. ಒಂದು ದಿನ ಬಾಂಬೆಯಿಂದ ಮಂಗಳೂರಿಗೆ ಹೋಗಿ ಬರಲು ಬೇಕು. ಇನ್ನೊಂದು ದಿನ ಶೂಟಿಂಗ್‌, ಜೊತೆಗೆ ಫ್ಯುಯೆಲ್ ಶುಲ್ಕವನ್ನು ಕೊಡಬೇಕು ಒಟ್ಟು 75 ಸಾವಿರ ಆಗುತ್ತದೆ ಅಂದ್ರು. ಎರಡು ಲಾರಿಗಳಲ್ಲಿ ಕಳುಹಿಸುತ್ತೇವೆ ಅಂದ್ರು. ಹೆಲಿಕಾಪ್ಟರ್‌ ಬಾಡಿಯನ್ನು ಇಲ್ಲಿ ಬಂದು ಜೋಡಿಬೇಕಿತ್ತು. ಅದನ್ನು ಜೋಡಿಸಲು ಎಂಜಿನಿಯರ್‌ಒಬ್ರು ಬರಬೇಕಿತ್ತು. ಎಂಜಿನಿಯರ್‌ ಬರ್ತಾರೆ. ಅವರಿಗೆ ಇರಲು ವ್ಯವಸ್ಥೆ ಮಾಡಬೇಕು ಅಂದ್ರು. ಆ ಎಂಜಿನಿಯರ್‌ ಸುಬ್ರಹ್ಮಣ್ಯಂ ಎಂದು. ನನ್ನ ಸೊಸೆ ಅವರ ಮಾವ ಅವರು. ಆಕಸ್ಮಾತ್‌ ಅವಘಡ ಸಂಭವಿಸಿದ್ರೂ, ಹೆಲಿಕಾಪ್ಟರ್‌ಗೆ ಏನೂ ಆಗಬಾರದೆಂದು ಒಂದು ಲಾರಿಯಲ್ಲಿ ಬರೀ ಪೆಟ್ರೋಲ್‌ ಮಾತ್ರವೇ ಕಳುಹಿಸಿದ್ರು. ಇನ್ನೊಂದು ಲಾರಿಯಲ್ಲಿ ಹೆಲಿಕಾಪ್ಟರ್‌ ಇತ್ತು. ಅವರ ಎಲ್ಲಾ ನಿಯಮಕ್ಕೂ ಒಪ್ಪಿದೆ. ಮೂಡಿಗೆರೆಯಲ್ಲಿ ಶೂಟಿಂಗ್ ಇತ್ತು. ಫಸ್ಟ್‌ಕ್ಲಾಸ್‌ ಆಗಿ ಶೂಟಿಂಗ್ ಆಯ್ತು. ಪೆಟ್ರೋಲ್‌ ಉಳಿದಿತ್ತು. ಹಾಗಾಗಿ, ಇವತ್ತು ಬೇಡ ನಾಳೆ ಹೋಗ್ತೇವೆ ಅಂದ್ರು. ಹಾಗಾಗಿ, ಹಳ್ಳಿಯವರನ್ನೆಲ್ಲ ಕರೆದು ಎಲ್ಲರೂ ಒಂದೊಂದು ರೌಂಡ್‌ ಹೋಗಿ ಅಂದೆ. ಕ್ಯೂನಲ್ಲಿ ನಿಂತುಕೊಂಡು ಆರಾರು ಜನ ರೌಂಡ್‌ ಹೋಗಿ ಬಂದ್ರು.


ಮೂಡಿಗೆರೆಯ ಲಿಂಗೇಗೌಡ ಎನ್ನುವವರು ತುಂಬಾ ಸಹಾಯ ಮಾಡಿದ್ರು. ದೊಡ್ಡ ಕಾಫಿ ಎಸ್ಟೇಟ್‌ ಅವರದು. ಊಟ, ತಿಂಡಿಯ ವ್ಯವಸ್ಥೆ ಮಾಡಿದ್ರು. ಕಾಫಿ ಒಣಗಿಸಲು ದೊಡ್ಡ ಯಾರ್ಡ್‌ ಇತ್ತು. ಅವರಿಗೆ ವಯಸ್ಸಾಗಿತ್ತು. ನಡೆಯಲು ಕಷ್ಟವಾಗುತ್ತಿತ್ತು. ಹೆಲಿಕಾಪ್ಟರನ್ನು ಅವರ ಯಾರ್ಡ್‌ನಲ್ಲಿ ಇಳಿಸಿದೆ. ಇದರಲ್ಲಿ ಕುಳಿತುಕೊಳ್ಳಿ ಅಂದೆ. ಕಷ್ಟಪಟ್ಟು ಕುಳಿತುಕೊಂಡ್ರು, ಚಾರ್ಮಾಡಿ ಘಾಟ್‌ಮೂರು ರೌಂಡ್‌ ಹೊಡಿಸಿದೆ ಅವರಿಗೆ. ನಾನು ಕುಳಿತುಕೊಂಡಿದ್ದೆ. ಆ ಹಾಡು ಭರ್ಜರಿ ಹಿಟ್‌ಆಯ್ತು.

ಹಾರುವ ವಿಮಾನದಲ್ಲಿ ಮೊದಲು ಶೂಟ್‌ ಮಾಡಿದ್ದು, ಹೆಲಿಕಾಪ್ಟರ್‌ ಬಳಸಿದ್ದು, ವಿದೇಶಕ್ಕೆ ಶೂಟಿಂಗ್‌ಗೆಂದು ಹೋಗಿದ್ದು, ಕನ್ನಡ ಕವನಗಳನ್ನು ಸಿನಿಮಾಗಳಲ್ಲಿ ಬಳಸಿದ್ದು ನಾವೇ ಮೊದಲು... ಹೀಗೆ ಸಿನಿಮಾ ರಂಗದಲ್ಲಿ ಅನೇಕ ಮೊದಲುಗಳು ಇವೆ ನಮ್ಮದು.


ಬಯಲುದಾರಿ ಶೂಟಿಂಗ್‌ ಮುಗಿಸಿಕೊಂಡು ಕಾರಿನಲ್ಲಿ ನಾನು, ಕಲ್ಪನಾ, ಆಕೆಯ ಕೆಲಸದವಳು ಮತ್ತು ದೊರೆಯವರು ಹೋಗುತ್ತಿದೆವು. ಮುಂದೆ ಏನು ಮಾಡಬೇಕೆಂದಿದ್ದೀರಿ ಎಂದಳು ಕಲ್ಪನಾ. ತರಾಸು ಅವರ ‘ಚೆಂದನದ ಗೊಂಬೆ’ ಕಾದಂಬರಿಯ ರೈಟ್ಸ್‌ ತೆಗೆದುಕೊಂಡಿದ್ದೇವೆ. ಮಾಡೋಣ ಅಂದಿದ್ದೇವೆ ಎಂದೆ. ಅದು 1976ರಲ್ಲಿ.


ಮುಂದುವರೆಯುವುದು...

ಸಂದರ್ಶಕರು - ಕೆ.ಎಸ್‌ ಪರಮೇಶ್ವರ


40 views