
“ಬಾಡಿಗೆ ಕಟ್ಟಲು ಮಿನುಗು ತಾರೆ ಕಲ್ಪನಾ ಮಾಡಿದ್ದೇನು!”
ದೊರೈ-ಭಗವಾನ್ ಲೈಫ್ ಸ್ಟೋರಿ - ಭಾಗ 8
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)
15 ಸಾವಿರ ಕೊಡದೇ ಹೋಗಿದ್ದರೆ ಸಿನಿಮಾ ಶುರು ಮಾಡಲು ಆಗುತ್ತಿರಲಿಲ್ಲ. ಹಾಗಾಗಿ ‘ಮಂತ್ರಾಲಯ ಮಹಾತ್ಮೆ’ ಟೈಟಲ್ ಕಾರ್ಡ್ನಲ್ಲಿ ಯು.ಎಸ್.ರಾಜಾರಂ ಹೆಸರು ಹಾಕಿಸಿದೆವು. ಆಗ ಮಂತ್ರಾಲಯದಲ್ಲಿ ರಸ್ತೆಯಿರಲಿಲ್ಲ. ಹಳ್ಳ, ಕೊಳ್ಳ, ಕಚ್ಚಾ ರಸ್ತೆ ಇತ್ತು. ಯಾವುದೇ ವಿಧವಾದ ಸೌಲಭ್ಯ ಇರಲಿಲ್ಲ. ಟೀ ಅಂಗಡಿಯೊಂದಿತ್ತು. ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಅರ್ಚಕರ ಮನೆಯ ಬೀದಿಯಿತ್ತು. ನಾನು, ರಾಜ್ಕುಮಾರ್ ರಾಯಚೂರು, ಗುಲ್ಬರ್ಗಾಕ್ಕೆ ಹೋದಾಗ ಮಂತ್ರಾಲಯದಲ್ಲಿ ಒಂದು ದಿನ ಇದ್ದೇ ಹೋಗುತ್ತಿದೆವು. 7 ಗಂಟೆಯಿಂದ ಒಂದು– ಒಂದೂವರೆ ಗಂಟೆ ರಾಜ್ಕುಮಾರ್ ಅವರು ಭಕ್ತಿಗೀತೆಗಳ ಉಣಬಡಿಕೆ ನೀಡುತ್ತಿದ್ರು. ಆ ಸಿನಿಮಾ ಮಾಡಿದ ಮೇಲೆ ರಾಜ್ಕುಮಾರ್ ಅವರು ರಾಘವೇಂದ್ರ ಸ್ವಾಮಿಗಳ ಎಂಥಹ ಭಕ್ತರಾದರೆಂದ್ರೆ, ಸ್ವಾಮಿಗಳಿಗೆ ರಾಜ್ಕುಮಾರ್ ಅವರು ಪಟ್ಟ ಶಿಷ್ಯರಾಗಿ ಬಿಟ್ರು. ಅಂದಿನಿಂದ ಈವರೆಗೂ ಆ ಸಿನಿಮಾದಲ್ಲಿ ಕೆಲಸ ಮಾಡಿದ ಒಬ್ಬರೂ ಹಿಂದಿರುಗಿ ನೋಡಿಲ್ಲ. ವೆಂಕಣ್ಣನ ಪಾತ್ರ ಮಾಡಿದವ ದೊಡ್ಡ ಹೀರೊ ಆದ. ಜಯಂತಿ ದೊಡ್ಡ ಹೀರೊಯಿನ್ ಆದಳು.
ಕಲ್ಪನಾಗೆ ಎರಡೂವರೆ ಸಾವಿರ ಸಂಬಳ ಮಾತಾಡಿದ್ವಿ. ಜಯಂತಿಗೂ ಅಷ್ಟೇ ಸಂಭಾವನೆ ಕೊಡುವುದಾಗಿ ಹೇಳಿದ್ವಿ. ರಾಜ್ಕುಮಾರ್ ಅವರಿಗೆ ಆರು ಸಾವಿರ ಸಂಭಾವನೆ. ಐದು ಸಾವಿರ ಕೊಟ್ಟಿದ್ದೆ. ಇನ್ನೊಂದು ಸಾವಿರ ಕೊಡಲು ಹೋದಾಗ, ಬೇಡ ಅದನ್ನು ಮಠಕ್ಕೆ ಕಳುಹಿಸಿ ಬಿಡಿ ಅಂದ್ರು.
ಪಿಕ್ಚರ್ ಮುಗಿದ ಮೇಲೆ ಎರಡೂವರೆ ಸಾವಿರ ರೂಪಾಯಿಯನ್ನು ಕಲ್ಪನಾಗೆ ಕೊಡಲು ಹೋದೆ. ನನಗೆ ಬೇಡ ಅಂದಳು. ಯಾಕೆ ಇದು ಸಾಕಾಗುವುದಿಲ್ವಮ್ಮ ಎಂದೆ. ಅದಕ್ಕೆ ಅವಳು, ಸಾಲದು ಅಂಥ ಅಲ್ಲ. ಭಗವಂತನಿಗೆ ಇದು ನನ್ನ ಸೇವೆ ಅಂದಳು. ಆಯ್ತಮ್ಮ ಎಂದು ಕಾರಿನ ಬಳಿ ಬಂದೆ. ಆಗ ಭಗವಾನ್ ಜೀ ಒಂದು ನಿಮಿಷ ಬನ್ನಿ ಅಂದಳು. ಏನಮ್ಮ ಅಂದೆ. ಕತ್ತಿನಲ್ಲಿರುವ ಚಿನ್ನದ ಚೈನ್ ತೆಗೆದು ಕೊಟ್ಟಳು. ಇದನ್ನು ಎಲಾದ್ರು ಅಡವಿಟ್ಟು, ಮೂರು ಸಾವಿರ ತೆಗೆದುಕೊಂಡು ಬಂದು ಕೊಡಿ. ಎರಡು ತಿಂಗಳಿನಿಂದ ಮನೆ ಬಾಡಿಗೆ ಕೊಟ್ಟಿಲ್ಲ ಅಂದಳು. ಆ ಮೂರು ಸಾವಿರ ರೂಪಾಯಿಯನ್ನು ನಾನೇ ಕೊಡ್ತೇನೆ. ಸಿನಿಮಾ ಸಂಭಾವನೆಗೆ 500 ರೂಪಾಯಿ ಹಾಕಿ ಕೊಡ್ತೇನೆ ಅಂದೆ. ಆ ದುಡ್ಡು ಬೇಡ ನನಗೆ ಅಂದಳು. ಸರಿ ಅಂಥ ಚೈನ್ ಇಸ್ಕೊಂಡು ಬಂದೆ. ಮೂರು ಸಾವಿರ ಕೊಟ್ಟು ಆಮೇಲೆ ಚೈನ್ ಕೂಡ ಕೊಡೋದು ಅನ್ನೋ ಯೋಚನೆ ನಂದಾಗಿತ್ತು. ಕಾರಿನಲ್ಲಿ ನಾನು ಕೂತ ತಕ್ಷಣ ಮತ್ತೆ ಬಂದ ಆಕೆ, ಭಗವಾನ್ ಜೀ ಇದನ್ನು ಯಾವ ಅಂಗಡಿಯಲ್ಲಿ ಇಡುತ್ತೀರೋ ಆ ಮಾರ್ವಾಡಿ ಅಂಗಡಿಯ ಚೀಟಿ ನನಗೆ ತಂದು ಕೊಡಬೇಕು. ಆಮೇಲೆ ನಾನು ಬಿಡಿಸಿಕೊಳ್ಳುತ್ತೇನೆ ಅಂದಳು. ಅಷ್ಟು ಒತ್ತಾಯ ಮಾಡಿದ ಮೇಲೆ ಸರಿ ಎಂದು ನಾನು ಒಪ್ಪಿಕೊಂಡೆ.
ನಾನು ಮಾರ್ವಾಡಿ ಅಂಗಡಿಯಲ್ಲಿ ಮೂರು ಸಾವಿರಕ್ಕೆ ಸರ ಇಟ್ಟು, ಆ ಚೀಟಿಯನ್ನು ಅವಳಿಗೆ ಕೊಟ್ಟೆ. ಇದಾದ ಏಳು ದಿನಗಳ ಒಳಗೆ ಪಂತಲು ಅವರ ಕಚೇರಿಯಿಂದ ಸಾಕು ಮಗಳು ಸಿನಿಮಾಕ್ಕೆ ಆಫರ್ ಬಂತು. ಆಕೆಗೆ ಅವರು ಐದು ಸಾವಿರ ಕಳುಹಿಸಿದ್ರು. ಸ್ವಾಮಿಗಳ ಕೃಪೆಯೇನೊ ನಾನು ತಿಳಿಯೇ. ಆ ಹಣದಲ್ಲಿ ಸರ ಬಿಡಿಸಿಕೊಂಡಳು. ಆಗ ಎರಡು ಸಾವಿರದಲ್ಲಿ ಎರಡು ತಿಂಗಳು ಜೀವನ ನಡೆಸಬಹುದಾಗಿತ್ತು.
ನರಸಿಂಹಮೂರ್ತಿ ಅವರು ಮತ್ತೆ ನಮ್ಮ ಬಳಿ ಬಂದ್ರು, ಮಂತ್ರಾಲಯ ಮಹಾತ್ಮೆಗೆ ಡಿಸ್ಟ್ರಿಬ್ಯೂಟರ್ ನಾನೇ ಆಗಿರುವುದರಿಂದ ಎಷ್ಟು ಹಣ ಬಂದಿದೆ ಎಂಬುದು ಗೊತ್ತು. ನಾನೀಗ ಕಷ್ಟದಲ್ಲಿದ್ದೇನೆ. ನನಗೊಂದು ಸಿನಿಮಾ ಮಾಡಿಕೊಡಿ ಅಂದ್ರು. ಒಳ್ಳೆಯ ಕಥೆ ಸಿಕ್ರೆ ಮಾಡಿಕೊಡ್ತೇವೆ. ಒಳ್ಳೆಯ ಕಾದಂಬರಿ ತೆಗೆದುಕೊಂಡು ಬಂದ್ರೆ ಸಿನಿಮಾ ಮಾಡ್ತೇವೆ ಅಂದೆವು. ಒಳ್ಳೆಯ ಕಥೆನೇ ಇದೆ. ನನ್ನ ಸೋದರ ಅಳಿಯ ಬರೆದಿರುವುದು. ನಿಮ್ಮ ಸೋದರ ಅಳಿಯ ಯಾರು? ನಿಮ್ಮ ಕಥೆ ಏನು? ಅಂದೆವು. ಅ.ನ.ಕೃಷ್ಣರಾವ್ ನನ್ನ ಸೋದರ ಅಳಿಯ. ಅವನು ಬರೆದಿರುವ ಸಂಧ್ಯಾರಾಗ ಕಾದಂಬರಿಯನ್ನು ನೀವು ಚಿತ್ರ ಮಾಡಿದ್ರೆ ಚೆನ್ನಾಗಿರುತ್ತದೆ ಅಂದ್ರು. ನಾವು ಆ ಕಾದಂಬರಿಯನ್ನು ಈಗಾಗಲೇ ಓದಿದ್ವಿ. ಆ ಕಥೆ ಸಿಕ್ರೆ ನಾವು ಸಂತೋಷದಿಂದ ಮಾಡ್ತೇವೆ ಎಂದು ಹೇಳಿದ್ವಿ.
ಸಂಧ್ಯಾರಾಗ ಸಿನಿಮಾ ಮಾಡಿದೆವು. ಜಿ.ಕೆ.ವೆಂಕಟೇಶ್ಗಿಂತ ಕರ್ನಾಟಕ ವಿದ್ವತ್ ಇರುವ ಮ್ಯೂಸಿಕ್ ಡೈರೆಕ್ಟರ್ ಸಿಕ್ರೆ ಒಳ್ಳೆಯದು ಎನಿಸಿತು. ಆಗ, ಬಾಲಮುರಳಿಕೃಷ್ಣಯ್ಯ ಅವರನ್ನು ಸಂಪರ್ಕ ಮಾಡಿ ಕರೆದುಕೊಂಡು ಬಂದೆವು. ಕಥೆ ಕೇಳಿದ ಅವರು ಇದಕ್ಕೊಂದು ಒಳ್ಳೆಯ ರಾಗ ಕೊಡ್ತೇನೆ, ಯೋಚಿಸಬೇಡಿ. ನನಗೊಂದು ಹತ್ತು ದಿವಸ ಸಮಯ ಕೊಡಿ ಅಂದ್ರು. ‘ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯನನ್ನʼ... ಈ ಹಾಡನ್ನು ಮಾಡಿಕೊಟ್ರು. ಈ ಸಮಯದಲ್ಲಿ ನನಗೆ ಸಿನಿಮಾ ಸಂಭಾಷಣೆ ಬರೆಯಬೇಕಿತ್ತು. ಅ.ನ.ಕೃಷ್ಣರಾವ್ ಮತ್ತು ಬೀಚಿ ಅವರು ಸಂಭಾಷಣೆ ಬರೆಯಲು ನೆರವಾದ್ರು. ಬೆಳಿಗ್ಗೆ ಎಲ್ಲ ಅವರ ಒಡನಾಟ, ಸಂಜೆ ಬಾಲಮುರಳಿಕೃಷ್ಣಯ್ಯ ಅವರ ಒಡನಾಟ. ಸಂಗೀತ, ಸಾಹಿತ್ಯ ದಿಗ್ಗಜರ ಒಡನಾಟ. ನನ್ನ ಭಾಗ್ಯಕ್ಕೆ ಯಾರೂ ಎಣೆ. ಇಡೀ ಇಂಡಸ್ಟ್ರಿಯಲ್ಲಿ ಯಾವ ನಿರ್ದೇಶಕನಿಗೂ ಸಿಗದಿರುವ ಅವಕಾಶಗಳು ನನಗೆ ಸಿಕ್ಕಿರುವ ಹೆಮ್ಮೆ ಇದೆ. ಅದೇ ಸಂಧ್ಯಾರಾಗ ಸಿನಿಮಾದಲ್ಲಿ ಭೀಮಸೇನ ಜೋಷಿ ಅವರ ಪಕ್ಕದಲ್ಲಿ ಕುಳಿತೆ.
ಆಗ ಮದ್ರಾಸ್ನಲ್ಲಿ ಪಾನ ನಿರೋಧ ಚಳವಳಿ ಬಲವಾಗಿತ್ತು. ಮದ್ಯ ಇರುವುದು ಗೊತ್ತಾದರೆ ಜೈಲಿಗೆ ಹಾಕುತ್ತಿದ್ರು. ಬೀಚಿ ಅವರಿಗೆ ಎಣ್ಣೆ ಹಾಕದೇ ಹೋದರೆ ಆಗುತ್ತಿರಲಿಲ್ಲ. ಸಂಜೆ ಏಳು ಗಂಟೆ ಆದ್ರೆ ಹುಚ್ಚು ಹಿಡಿಯುತ್ತಿತ್ತು. ಭಗವಾನ್, ತಂದಿದ್ದೆಲ್ಲ ಆಗಿ ಹೋಗಿದೆ ನನಗೀಗ ಎಣ್ಣೆ ಬೇಕೆ ಬೇಕು ಎಂದು ಶುರು ಹಚ್ಚಿಕೊಂಡ್ರು. ಎಲ್ಲಿ ಸಿಗುತ್ತದೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಏಲ್ಲಾದ್ರು ಸಿಗುತ್ತದಾ ಎಂದು ನನ್ನ ಮ್ಯಾನೇಜರ್ ಬಳಿ ಕೇಳಿದೆ. ಅಣ್ಣಾಮಲೈ ಎಂಬುವವನಿದ್ದಾನೆ ಅವನ ಬಳಿ ಇರುತ್ತದೆ ಎಂದ. ನನಗೆ ಬ್ರಾಂಡ್ ಎಲ್ಲ ಗೊತ್ತಿಲ್ಲ ಸಿಕ್ಕರೆ ನೀವೇ ನೋಡಿ ತೆಗೆದುಕೊಳ್ಳಿ ಎಂದು ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಹೊರಟೆ. ಎರಡು ಬಾಟಲ್ ತೆಗೆದುಕೊಂಡು ಕಾರಿನಲ್ಲಿ ಇಟ್ಟುಕೊಂಡು ಬರುತ್ತಿರಬೇಕಾದ್ರೆ, ರೈಲ್ವೆ ಗೇಟ್ ಬಳಿ ಪೊಲೀಸರು ಶೋಧ ನಡೆಸಬೇಕು ಎಂದು ಕಾರು ನಿಲ್ಲಿಸಿದ್ರು. ಚೆಕ್ಮಾಡಿದ್ರೆ ಎರಡು ಬಾಟಲ್ ಸಿಕ್ತು. ನನಗೆ ನಡುಕ. ಬೀಚಿ ಅವರು ಆರಾಮಾಗಿ ಕೂತಿದ್ರು. ಸಿಕ್ಕಿದ ಮೇಲೆ ಕಾರಿನಿಂದ ಇಳಿದ್ರು. ಪೊಲೀಸ್ನವರು ಏನಿದು ಎಂದು ಕೇಳಿದ್ರು. ನಾನು ಬೆಂಗಳೂರಿನಿಂದ ಬಂದಿದ್ದೇನೆ. ನನಗೆ ಕುಡಿಯೋ ಅಭ್ಯಾಸವಿದೆ. ನನಗೆ ಬೇಕು ಅದಕ್ಕೆ ಅಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದ್ರು. ಅದೆಲ್ಲ ನನಗೆ ಗೊತ್ತಿಲ್ಲ ಪೊಲೀಸ್ ಸ್ಟೇಷನ್ಗೆ ಬನ್ನಿ ಅಂದ್ರು. ಆಗ ಬೀಚಿ ಅವರು ಜೇಬಿನಿಂದ ಐಡೆಂಟಿಟಿ ಕಾರ್ಡ್ ತೆಗೆದು, ನಾನು ಪೊಲೀಸ್ನವನೇ ನನಗೆ ಅಲ್ಲಿ ತೆಗೆದುಕೊಂಡು ಅಭ್ಯಾಸ. ಅದಕ್ಕೆ ಇಲ್ಲಿಂದ ತೆಗೆದುಕೊಂಡು ಹೋಗ್ತಿದ್ದೇನೆ ಅಂದ್ರು. ಆಗ ಪೊಲೀಸ್ ಅವರು ಸೆಲ್ಯೂಟ್ ಹೊಡೆದು ಕಳುಹಿಸಿಕೊಟ್ರು. ಇದು ಮರೆಯಲಾಗದ ಘಟನೆ ನನ್ನ ಜೀವನದಲ್ಲಿ.
ಇನ್ನೊಬ್ಬ ಮಹಾನ್ ಸರಸ್ವತಿ ಪುತ್ರ. ಆತನನ್ನು ಹೇಗೆ ಹೊಗಳುವುದೇ ನನಗೆ ಗೊತ್ತಿಲ್ಲ. ಆತನೇ ಬಿಸ್ಮಿಲ್ಲಾ ಖಾನ್. ಸನಾದಿ ಅಪ್ಪಣ್ಣ ಸಿನಿಮಾ ಮಾಡುವಾಗ ರಾಜ್ಕುಮಾರ್ ಅವರು, ಇದಕ್ಕೆ ಬಿಸ್ಮಿಲ್ಲಾ ಖಾನ್ ಶೆಹನಾಯಿ ಇದ್ರೆ ಚೆನ್ನಾಗಿರುತ್ತದೆ ಅಂದ್ರು. ವಿಕ್ರಂ ಶ್ರೀನಿವಾಸ್ ಆ ಸಿನಿಮಾದ ಪ್ರೊಡ್ಯೂಸರ್. ಅವರು ನನ್ನನ್ನು ಕರೆದುಕೊಂಡು ಬನಾರಸ್ಗೆ ಹೋದ್ರು. ಅಲ್ಲಿ ಬಿಸ್ಮಿಲ್ಲಾ ಖಾನ್ ಮನೆಗೆ ಹೋದೆವು. ನೀವು ಬರಲೇಬೇಕು ಎಂದು ವಿಕ್ರಂ ಶ್ರೀನಿವಾಸ್ ಒತ್ತಾಯ ಮಾಡಿದ. ಅವನು ಇಂಥ ವಿಷಯದಲ್ಲಿ ಬಹಳ ಕಿಲಾಡಿ. ಅವರು ಆಯಿತು ಎಂದು ಒಪ್ಪಿದ್ರು. ನನಗೆ ಸಿನಿಮಾದಲ್ಲಿ ಮಾಡಿ ಅಭ್ಯಾಸ ಇಲ್ಲ. ಆದ್ರೂ ಮಾಡ್ತೇನೆ ಎಂದು ಹೇಳಿದ್ರು. ನನ್ನ ಜೊತೆಗೆ 16 ಹುಡುಗರಿರುತ್ತಾರೆ. ನನಗೆ ಫಸ್ಟ್ ಕ್ಲಾಸ್, ಅವರಿಗೆ ಸೆಕೆಂಡ್ ಕ್ಲಾಸ್ ಬುಕ್ ಮಾಡಿದ್ರೆ ಬರ್ತೇನೆ ಅಂದ್ರು. ಎವಿಎಂ ಗೆಸ್ಟ್ ಹೌಸ್ನಲ್ಲಿ ಮೂರು ರೂಂ ಬುಕ್ ಮಾಡಿದ್ವಿ. ಬಿಸ್ಮಿಲ್ಲಾ ಖಾನ್ ಅವರಿಗೆ ಎ.ಸಿ ರೂಂ ಇತ್ತು. ಅವರಿಗೆ ಸಿನಿಮಾ ಕಥೆ ಹೇಳಿದ್ರೆ ಅರ್ಥ ಆಗುತ್ತಿರಲಿಲ್ಲ. ನೀವು ಏನು ಬಾರಿಸಬೇಕು ಹೇಳಿ ಅದನ್ನು ನಾನು ಬಾರಿಸುತ್ತೇನೆ ಅಂತಿದ್ರು. ನಮ್ಮ ಮ್ಯೂಸಿಕ್ ಡೈರೆಕ್ಟರ್ ಜಿ.ಕೆ.ವೆಂಕಟೇಶ್ ಬರ್ತಾರೆ ಅವರು ಹೇಳಿದ ಹಾಗೆ ಬಾರಿಸಿ ಅಂದೆವು. ಅವರು ಯಾವ ರಾಗ ಹೇಳ್ತಾರೊ ಅದನ್ನು ಬಾರಿಸುತ್ತೇನೆ ಅಂದ್ರು. ಅವರ ಶಿಷ್ಯಂದಿರಿಗೆಲ್ಲ ಬೆಳಿಗ್ಗೆ 9 ಗಂಟೆಗೆ ಹೊಟ್ಟೆ ತುಂಬ ಬಿರ್ಯಾನಿ, ಇವರಿಗೊಂದು ಬಿರ್ಯಾನಿ ಪ್ಯಾಕ್ ಕೊಡಬೇಕಿತ್ತು. ಶಿಷ್ಯಂದಿರು ಮೊದಲು ಬಂದು ಕೂತಿರುತ್ತಿದ್ರು. ಇವರು 11 ಗಂಟೆಗೆ ಸರಿಯಾಗಿ ಬರುತ್ತಿದ್ರು. ಮದ್ರಾಸ್ನಲ್ಲಿ ನನ್ನೊಬ್ಬನನ್ನು ಬಿಟ್ಟು ಬೇರೆ ಯಾರಿಗೂ ಹಿಂದಿ ಬರುತ್ತಿರಲಿಲ್ಲ. ವಿಕ್ರಂ ಶ್ರೀನಿವಾಸ್ಗೆ ತಮಿಳು ಬಿಟ್ರೆ ಏನು ಬರುತ್ತಿರಲಿಲ್ಲ. ಬಿಸ್ಮಿಲ್ಲಾ ಖಾನ್ ಮತ್ತು ಅವರ ಶಿಷ್ಯಂದಿರ ಬೇಕು, ಬೇಡಗಳನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಬಿರ್ಯಾನಿ ಒಂದು ಬಿಟ್ರೆ ಬೇರೇನೂ ಕೇಳುತ್ತಿರಲಿಲ್ಲ. ನಾನು ಬ್ರಾಹ್ಮಣ ಆದ್ರೂ, ಹೈದ್ರಾಬಾದ್ ಬಿರ್ಯಾನಿ ತಂದುಕೊಡುತ್ತಿದ್ದೆ. ರಾಜ್ಕುಮಾರ್ ಅವರ ಪಕ್ಕದಲ್ಲೇ ಕುಳಿತು ಊಟ ಮಾಡುತ್ತಿದ್ದೆ. ಅವರು ಮಾಂಸ ತಿನ್ನುತ್ತಿದ್ರೆ. ನಾನು ಸೊಪ್ಪು ತಿನ್ನುತ್ತಿದ್ದೆ. ನಮ್ಮಲ್ಲಿ ಯಾವ ಬೇಧ–ಭಾವ ಇರಲಿಲ್ಲ.
ನನ್ನ ಕಂಡರೆ ಬಿಸ್ಮಿಲ್ಲಾ ಖಾನ್ ಅವರಿಗೆ ಒಂಥರ ಖುಷಿ. ನಾನು ದೂರ ಇದ್ರೆ ನನ್ನ ಬಳಿ ಬಂದು ಕುಳಿತಿಕೊ ಎಂದು ಪಕ್ಕದಲ್ಲಿ ಕೂರಿಸಿಕೊಳ್ಳುತ್ತಿದ್ರು. ನಾನು ಬಾರಿಸುತ್ತ ಇರುತ್ತೇನೆ, ನೀನು ಕೇಳುತ್ತ ಇರು ಎನ್ನುತ್ತಿದ್ರು. ರಾಜ್ಕುಮಾರ್ ಸಹಾ ಅವರು ಬಾರಿಸುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ರು. ಸಿನಿಮಾಕ್ಕೆ ಬೇಕಾದ ಹಾಗೆ ವೆಂಕಟೇಶ್ ಮನಸ್ಸಿಗೆ ಒಪ್ಪುವಂತೆ ಅವರು ಬಾರಿಸುತ್ತಿರಲಿಲ್ಲ. ವೆಂಕಟೇಶ್ ರಾಗ ಹೇಳಿದ್ರು, ಅವರು ಬೇರೇನೋ ಬಾರಿಸಿ ಬಿಡುತ್ತಿದ್ರು. ಆಗ, ರಾಜ್ಕುಮಾರ್ ಅವರು, ವೆಂಕಟೇಶ್ ಒಂದು ಕೆಲಸ ಮಾಡಿ, ನೀವು ಅವರಿಗೆ ರಾಗ ಹೇಳಿ, ಅವರಿಗೆ ಇಷ್ಟಬಂದಂತೆ ಬಾರಿಸಲಿ. ನೀವು ಅದನ್ನೆಲ್ಲ ಎಡಿಟ್ ಮಾಡಿ ಮ್ಯೂಸಿಕ್ ಮಾಡಿ ಅಂದ್ರು. ಅದೊಂದು ಹೊಸ ಪ್ರಯೋಗ. ಶೆಹನಾಯಿ ಬಾರಿಸಿದ್ದನ್ನು 16 ಟೇಪ್ಗಳಲ್ಲಿ ರೆಕಾರ್ಡ್ ಮಾಡಿದ್ವಿ. ಅದನ್ನು ಎಡಿಟ್ ಮಾಡಿ ಸನಾದಿ ಅಪ್ಪಣ್ಣ ಸಿನಿಮಾದ ಹಾಡಿಗೆ ಬಳಸಿದ್ದೇವೆ. ಚೆನ್ನಾಗಿರುವ ಪೋರ್ಷನ್ಸ್ಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಬಳಸಿಕೊಂಡಿದ್ದೇವೆ. ಇಂಡಸ್ಟ್ರಿಯ ಯಾವುದೇ ನಿರ್ದೇಶಕರಿಗೆ ನಾಡಿನ ಶ್ರೇಷ್ಠ ಸಂಗೀತ ಕಲಾವಿದರು, ಕವಿಗಳ ಜೊತೆಗೆ ಒಡನಾಟ ಸಿಕ್ಕಿದ್ದೇ ಆದ್ರೆ ಅವರ ಕಾಲಿಗೆ ನಾನು ನಮಸ್ಕರಿಸುತ್ತೇನೆ. ನನಗೆ ತಿಳಿದ ಮಟ್ಟಿಗೆ ಯಾರಿಗೂ ಸಿಕ್ಕಿಲ್ಲ...
ಮುಂದುವರಿಯುವುದು...
ಸಂದರ್ಶನ: ಕೆ.ಎಸ್. ಪರಮೇಶ್ವರ್