“ಬಾಂಡ್‌ ಸಿನಿಮಾ ಶೂಟಿಂಗ್‌ನಲ್ಲಿ ಹೆಜ್ಜೆ ಹೆಜ್ಜೆಗೂ ಪ್ರಾಣಪಾಯಾ”

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 11


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)


ಶೂಟಿಂಗ್‌ ಶುರುವಾಯಿತು. ಸ್ವಿಮ್ಮಿಂಗ್‌ ಪೂಲ್‌ ಶೂಟಿಂಗ್‌ ನಡೆಯುತ್ತಿತ್ತು. ಲಕ್ಷ್ಮೀಗೆ ಮೇಲಿಂದ ಸ್ವಿಮ್ಮಿಂಗ್‌ ಪೂಲ್‌ಗೆ ಹಾರುವಂತೆ ಹೇಳಿದೆವು. ಆಕೆ ಹಾರಿದಳು. ಈಜು ಬರುತ್ತದೆ ಎಂದಿದ್ದಳು. ಒಳಗೆ ಹೋದವಳು, ಮೇಲೆ ಬರಲೇ ಇಲ್ಲ. ಜೂಡೋ ರತ್ನಂ ಸ್ಟಂಟ್‌ ಮಾಸ್ಟರ್‌ ತಕ್ಷಣವೇ ಹಾರಿ, ಒಳಗಡೆ ಹೋದವಳನ್ನು ಮೇಲೆ ಎತ್ತಿಕೊಂಡು ಬಂದ. ನೀರು ಕುಡಿದು ಬಿಟ್ಟಿದ್ದಳು. ಹೊಟ್ಟೆ ಅಮುಕಿ, ನೀರು ತೆಗೆಯಲಾಯಿತು. ಆಮೇಲೆ ಜ್ಞಾನ ಬಂದು, ಎದ್ದು ಕುಳಿತುಕೊಂಡಳು.


ನನಗೆ ಮೈಯೆಲ್ಲ ನಡುಕ ಬಂದಿತ್ತು. ಏನಾದ್ರು ಹೆಚ್ಚುಕಮ್ಮಿ ಆಗಿದ್ರೆ, ನಿರ್ದೇಶಕರ ತಲೆಗೆ ಬರುತ್ತಿತ್ತು. ಅಲ್ಲಮ್ಮ, ಅವತ್ತು ಕೇಳಿದ್ದಕ್ಕೆ ಈಜು ಬರುತ್ತದೆ ಅಂದೆ, ಈಗ ನೋಡಿದ್ರೆ ನಿಂಗೆ ಈಜೇ ಬರಲ್ಲ ಅಲ್ವಾ, ಒಳಗೆ ಹೋಗಿ ಸಿಕ್ಕಾಕಿಕೊಂಡಿದ್ದೆ. ಮೇಲಕ್ಕೆ ಬರೋದಲ್ವಾ ಅಂದೆ. ನನಗೇ ಈಜೇ ಬರಲ್ಲ ಅಂದ್ಲು. ಮತ್ತೇ ಈಜು ಬರುತ್ತೆ ಅಂಥ ಯಾಕೆ ಅಂದೆ ಎಂದು ಕೇಳಿದ್ದಕ್ಕೆ, ಎಲ್ಲಿ ನೀವು ಸಿನಿಮಾದಲ್ಲಿ ಅವಕಾಶ ಕೊಡಲ್ವೋ ಅಂಥ ಹಾಗೆ ಸುಳ್ಳು ಹೇಳಿದೆ ಅಂದ್ಲು. ಅಲ್ಲಮ್ಮ, ನಿನ್ನ ಪ್ರಾಣ ಹೋಗಿದ್ರೆ, ಗತಿ ಯಾರು ಎಂದೆ. ಇಷ್ಟು ಅಪಾಯಕಾರಿ ಸುಳ್ಳು ಹೇಳ್ತಾರ ಎಂದು ಕೇಳಿದೆ. ನನಗೆ ಆಕೆ ಮೇಲೆ ತುಂಬಾ ಬೇಸರವಾಗಿತ್ತು. ವುಂಡ್‌ ಲಾಂಡ್ಸ್‌ ಹೋಟೆಲ್‌ನಲ್ಲಿ ಶೂಟಿಂಗ್‌ ನಡೆಯುತ್ತಿತ್ತು. ಅದು ಕನ್ನಡದವರದು. ಶ್ರೀನಿವಾಸ್‌ರಾವ್‌ ಎಂಬುವರು ಅಲ್ಲಿ ಸ್ವಿಮ್ಮಿಂಗ್‌ ಕಲಿಸುತ್ತಿದ್ರು. ಅವರನ್ನು ಕರೆದು ಈ ಹುಡುಗಿಗೆ ಈಜು ಕಲಿಸೋದಕ್ಕೆ ಆಗುತ್ತಾ ಅಂದೆ. ಮೂರು ದಿವಸದಲ್ಲಿ ಕಲಿಸುತ್ತೇನೆ. ದಿನ ಎರಡು ಗಂಟೆ ಬರಬೇಕು ಅಂದ್ರು. ನೀನು ಮೂರು ಗಂಟೆಗೆ ಕಾನ್ವೆಂಟ್‌ ಮುಗಿಸಿ, ನಾಲ್ಕೂವರೆಗೆ ಇಲ್ಲಿಗೆ ಬಾ. 5.30 ವರೆಗೆ ಬೇರೆ ಜನಗಳೂ ಇರುತ್ತಾರೆ. ಅವರ ಜತೆಗೆ ಕಲಿಸುತ್ತಾರೆ. ಆಮೇಲೆ ಒಂದು ಗಂಟೆ ನಿನಗೆ ಪ್ರತ್ಯೇಕವಾಗಿ ಹೇಳಿಕೊಡುತ್ತಾರೆ ಎಂದು ಹೇಳಿದೆ.
ಅವಳಿಗೆ ಕಲಿಯುವುದು ಎಂದ್ರೆ ಸಿಕ್ಕಾಪಟ್ಟೆ ಆಸಕ್ತಿ. ಒಂದು ನಿಮಿಷದಲ್ಲಿ ಏನು ಬೇಕಾದ್ರು ಕಲಿಯುತ್ತಾಳೆ. ಮೂರು ದಿನ ಟೈಂ ಕೇಳಿದ್ರು. ಆದ್ರೆ ಆಕೆ ಎರಡೇ ದಿನದಲ್ಲಿ ಈಜು ಕಲಿತಳು. ನಮ್ಮ ಜತೆ ಕನ್ನಡದಲ್ಲಿಯೇ ಮಾತನಾಡಿ, ಕೊನೆಗೆ ಡಬ್ಬಿಂಗ್‌ ಅವಳೇ ಮಾಡಿದ್ಲು. ಕಲಿಕೆಯ ಆಸಕ್ತಿ ಅಷ್ಟರ ಮಟ್ಟಿಗಿತ್ತು ಆಕೆಗೆ.


‘ಗೋವಾದಲ್ಲಿ ಸಿಐಡಿ 999’ ಪೋಸ್ಟರ್‌ ಕೊನೆಗೆ ಅವರ್‌ ನೆಕ್ಸ್ಟ್‌‘ಆಪರೇಷನ್ ಜ್ಯಾಕ್‌ಪಾಟ್‌ ಸಿಐಡಿ 999’ ಎಂದು ಹಾಕಿದ್ವಿ. ಬಾಂಡ್‌ ಸಿನಿಮಾಗಳಲ್ಲಿ ಕುದುರೆ ರೇಸ್‌ ಇದಿದ್ದನ್ನು ನೋಡಿದ್ವಿ. ಆ ದೃಶ್ಯಕ್ಕೆ ನಾವು ಪಟ್ಟ ಕಷ್ಟ ಒಂದೊಂದಲ್ಲ.


ಜೇಡರ ಬಲೆಯಲ್ಲೂ ಅಷ್ಟೇ ಒಂದು ದೃಶ್ಯವಿದೆ. ರೈಲಿನಲ್ಲಿ ಜಯಂತಿ ಬರುತ್ತಿರುತ್ತಾಳೆ. ಕ್ಯಾಮೆರಾ ರೈಲಿನ ಜೊತೆಗೆ ಬರಬೇಕಿತ್ತು. ಬಸ್‌ನಲ್ಲಿ ಕ್ಯಾಮೆರಾ ಹಿಡಿದುಕೊಂಡಿದ್ದೆ. ದೊಡ್ಡಬಳ್ಳಾಪುರದಲ್ಲಿ 2 ಕಿ.ಮೀ.ವರೆಗೆ ರೈಲ್ವೆ ಟ್ರ್ಯಾಕ್‌ ಮತ್ತು ರಸ್ತೆ ಎರಡೂ ಇದೆ. ಅಲ್ಲಿ ಪ್ಯಾರಲಾಲ್‌ ಟ್ರಾಕ್ ಹಾಕಿಕೊಳ್ಳಬೇಕಿತ್ತು. ಚಿಟ್ಟಿ ಬಾಬು ಕೂಡ ಇದ್ದ. ರೈಲಿನ ಜತೆಯಲ್ಲಿ ಹೋಗು ಎಂದು ಬಸ್‌ಡ್ರೈವರ್‌ಗೆ ಹೇಳಿದ್ದೆ. ರಸ್ತೆಯಲ್ಲಿ ಹಳ್ಳ ಇತ್ತು. ಒಮ್ಮೆಲ್ಲೇ ನಮ್ಮ ಬಸ್‌ ‌ಜಂಪ್‌ ಆಗಿ ನಾನು ಕೆಳಗೆ ಬಿದ್ದೆ. ಅದೃಷ್ಟವಶಾತ್‌ ರಸ್ತೆಯ ಬದಿಗೆ ನಾನು ಬಿದಿದ್ದೆ. ಹಾಗಾಗಿ ಏನು ತೊಂದರೆ ಆಗಲಿಲ್ಲ. ಚಿಟ್ಟಿ ಶಾಟ್‌ ಸಂಪೂರ್ಣ ಮುಗಿಸಿದ್ದ. ಅಂದು ಚಕ್ರ ಹರಿದಿದ್ದರೆ ನಾನು ಸತ್ತು ಹೋಗುತ್ತಿದ್ದೆ.

ಜೇಡರ ಬಲೆಯ ಚಿತ್ರೀಕರಣದ ವೇಳೆ ಇನ್ನೊಂದು ಸಮಸ್ಯೆಯಾಗಿತ್ತು. ಮದ್ರಾಸ್‌ನಲ್ಲಿ ಕಾರಿನ ಫಾಲೋ ಶಾಟ್‌ ತೆಗೆಯುತ್ತಿದೆವು. ಆಗೆಲ್ಲ ಇದಿದ್ದೇ ಅಂಬಾಸಿಡರ್ ಕಾರು. ಡಿಕ್ಕಿಯಲ್ಲಿದ್ದ ಎರಡು ಕ್ಲ್ಯಾಂಪ್‌ಗೆ ಅದು ಬೀಳದ ಹಾಗೆ ಬಟ್ಟೆ ಕಟ್ಟಿದ್ದೆವು. ಅದರ ಕೆಳಗೆ ದೊರೆ ಅವರು ಕ್ಯಾಮೆರಾ ಹಿಡ್ಕೊಂಡು ಕಾರು ಫಾಲೋ ಶಾಟ್‌ ತೆಗೆಯುತ್ತಿದ್ರು. ಹಿಂದಿನಿಂದ ರಾಜ್‌ಕುಮಾರ್‌ ಬರುತ್ತಿದ್ರು. ಕಾರು ಒಂದು ಕಡೆ ಜಂಪ್‌ಆಯ್ತು. ಆಗ ಡಿಕ್‌ ಹುಡ್‌ ಬಿದ್ದು ಬಿಡ್ತು. ಅದು ದೊರೈ ಅವರ ತಲೆ ಮೇಲೆ ಬಿತ್ತು. ಅವರಿಗೆ ಒಂದು ಕಣ್ಣು ದೃಷ್ಟಿ ಕಾಣದೇ ಹೋಯ್ತು. ತಕ್ಷಣವೇ ಶೂಟಿಂಗ್‌ ಕ್ಯಾನ್ಸಲ್‌ ಮಾಡಿ ಅವರನ್ನು ಮಿಂಟೊ ಆಸ್ಪತ್ರೆಗೆ ಕರೆದಕೊಂಡು ಹೋದೆವು. ಅವರು ಆಸ್ಪತ್ರೆಯಲ್ಲಿ ಒಂದು ತಿಂಗಳು ಇರಬೇಕು ಎಂದ್ರು. ಐದು–ಆರು ಗಂಟೆವರೆಗೆ ಶೂಟಿಂಗ್‌ ಮುಗಿಸಿ, ರಾತ್ರಿ 10 ಗಂಟೆವರೆಗೂ ಅವರ ಜೊತೆ ಆಸ್ಪತ್ರೆಯಲ್ಲಿ ಇರುತ್ತಿದ್ದೆ. ಅವರ ಸಹಾಯಕನೇ ಚಿಟ್ಟಿ ಬಾಬು. ನಾ ನಿನ್ನ ಮರೆಯಲಾರೆ ಸೇರಿದಂತೆ ಬೇಕಾದಷ್ಟು ಸಿನಿಮಾಗಳಲ್ಲಿ ಅವನು ಕೆಲಸ ಮಾಡಿದ್ದಾನೆ. ದೊರೆ ಅವರ ಸಂಬಂಧಿ ಅವನು. ಬಾಂಡ್‌ ಸಿನಿಮಾ ಚಿತ್ರೀಕರಣದ ವೇಳೆ ನನಗೆ, ದೊರೆಗೆ ಲಕ್ಷ್ಮೀಗೆ ಅಪಘಾತಗಳ ಸಾಹಸಗಾಥೆಯೇ ನಡೆದಿದೆ.

ಅಣ್ಣಾವ್ರು ಎಲ್ಲ ಪರ್ಫೆಕ್ಟ್‌ ಮಾಡಿಕೊಂಡೇ ಕೆಲಸ ಮಾಡೋದು. ಅವರನ್ನು ಸುರಕ್ಷಿತವಾಗಿ ಇಡಲು ಬೇಕಾದಷ್ಟು ಜನ ಫೈಟರ್ಸ್‌ ಇರುತ್ತಿದ್ರು. ಅವರ ಸುರಕ್ಷತೆಯನ್ನು ನೋಡಿಕೊಂಡೆ ನಾವು ಕೆಲಸಕ್ಕೆ ಇಳಿಯುತ್ತಿದೆವು. ಕಷ್ಟಕರವಾಗಿದ್ದ ಫೈಟಿಂಗ್‌ ದೃಶ್ಯಕ್ಕೆ ಡ್ಯೂಪ್‌ ಮಾಡುತ್ತಿದ್ದೆವು. ರಾಜ್‌ಕುಮಾರ್‌ ಡ್ಯೂಪ್‌ಗೆ ಒಪ್ಪಿಕೊಳ್ಳುತ್ತಿರಲಿಲ್ಲ. ತುಂಬಾ ಜಂಪಿಂಗ್ ಎಲ್ಲ ಇದ್ರೆ ಮಾತ್ರವೇ ಒಪ್ಪಿಕೊಳ್ಳೋರು. ಸಾಮಾನ್ಯವಾದ ಫೈಟಿಂಗ್‌ಗೆಲ್ಲ ಡ್ಯೂಪ್‌ ಬೇಡ ಎನ್ನುತ್ತಿದ್ರು.


ಜ್ಯಾಕ್‌ಪಾಟ್‌ ಶೂಟಿಂಗ್‌ ಶುರುವಾಯ್ತು. ವಿಜಯ ಸತ್ನಂ ಹೇಳಿದ, ವೇದಾಂತಂ ರಾಘವಯ್ಯ ಅವರ ಮಗಳು ರೇಖಾ ಅಂತಿದ್ದಾಳೆ. ಅವಳನ್ನು ಹೋಗಿ ನೋಡಿ, ಫೋಟೊಜನಿಕ್‌ ಆಗಿ ತುಂಬಾ ಚೆನ್ನಾಗಿದ್ದಾಳೆ ಎಂದ. ಸರಿ ಎಂದು ಆಕೆಯ ತಾಯಿ ಪುಷ್ಪವಲ್ಲಿ ಮನೆಗೆ ಹೋದ್ವಿ. ಆಕೆಯೂ ಕಾನ್ವೆಂಟ್‌ನಲ್ಲಿ ಓದುತ್ತಿದ್ದಳು. ಕಾನ್ವೆಂಟ್‌ನಿಂದ ಬರುವವರೆಗೂ ಕಾದೆವು. ರೇಖಾ ಮತ್ತು ಆಕೆಯ ಸಹೋದರಿ ರಾಧಾ ಇಬ್ರೂ ಬಂದ್ರು. ರೇಖಾ ಕಪ್ಪುಗಿದ್ದಳು. ರಾಧಾ ಬೆಳ್ಳಗೆ ಇದ್ದಳು. ದೊರೆ ಅವರು, ರೇಖಾನನ್ನು ತೋರಿಸಿ ಈಕೆ ಚೆನ್ನಾಗಿದ್ದಾಳೆ. ಪೋಟೊಜನಿಕ್‌ ಆಗಿದ್ದಾಳೆ ಎಂದ್ರು. ಡಾ.ರಾಜ್‌ಕುಮಾರ್‌ ಜೊತೆಗೆ ಮಾಡ್ತೀಯಾ ಎಂದು ಆಕೆಯನ್ನು ಕೇಳಿದೆ. ಎಲ್ಲಾ ನಿಯಮಗಳನ್ನು ಹೇಳಿದೆ. ಎಲ್ಲದಕ್ಕೂ ಒಪ್ಪಿಕೊಂಡಳು. ಶೂಟಿಂಗ್‌ ಶುರು ಮಾಡಿದ್ವಿ. ಒಬ್ಬ ಹಿಂದಿ ಕಲಾವಿದ ಶೂಟಿಂಗ್‌ ಸ್ಥಳಕ್ಕೆ ಬಂದು ಇವಳನ್ನೇ ನೋಡಿಕೊಂಡು ಕೂರುತಿದ್ದ. ಮೇಕಪ್‌ ಹಾಕಿಬಿಟ್ರೆ ಬಹಳ ಚೆನ್ನಾಗಿ ಕಾಣುತ್ತಿದಳು. ಕೊನೆಗೆ ಅವಳನ್ನು ಹಿಂದಿಗೆ ಕರೆದುಕೊಂಡು ಹೋದ. ಬಾಂಬೆಗೆ ಹೋದವಳು ತಿರುಗಿ ಈ ಕಡೆ ಬಂದೇ ಇಲ್ಲ. ಎವರ್‌ಗ್ರೀನ್‌ ಬ್ಯೂಟಿ ಎಂದು ಹೇಳುವ ಆಕೆ ಕೃಷ್ಣ ಸುಂದರಿ. ಆಗ ಆಕೆಗೆ 16 ವಯಸ್ಸು.


ಆ ಶೂಟಿಂಗ್‌ ವೇಳೆ ನನಗೆ ದೊರೆಗೆ ಇಬ್ಬರಿಗೂ ಅಪಾಯಕಾರಿ ಸಂದರ್ಭ ಎದುರಾಗಿತ್ತು. ಟರ್ಫ್‌ ಕ್ಲಬ್‌ ಆರ್‌ಟಿಸಿಯಲ್ಲಿ ರೇಸ್‌ ನಡೆಯುವಾಗ ಪ್ಯಾರಲಾಲ್ ಶೂಟ್‌ ಮಾಡ್ತೇವೆ ಎಂದು ಅನುಮತಿ ಪಡೆದಿದೆವು. ಗಫೂರ್‌ ಎಂದು ನಮ್ಮ ಕಾರ್‌ ಡ್ರೈವರ್‌. ಕಾನ್ಸೂಲ್‌ ಕಾರ್‌ ಬಳಸುತ್ತಿದ್ವಿ. ಅದರ ಟಾಪ್‌ ತೆಗೆದಿದ್ವಿ. ಅಲ್ಲಿ ಸೈಡ್‌ ಟ್ರ್ಯಾಕ್‌ನಲ್ಲಿ ಶೂಟಿಂಗ್‌ ಮಾಡಲು ಅವಕಾಶ ಕೊಟ್ಟಿದ್ದರು. ನಾನು, ದೊರೆ ಕ್ಯಾಮೆರಾ ಹಿಂದೆ ಇದ್ದೆವು. ಮುಂದೆ ಡ್ರೈವರ್‌ ಡ್ರೈವಿಂಗ್‌ ಮಾಡುತ್ತಿದ್ದ. ಕುದುರೆ 180–200 ಕಿ.ಮೀ. ವೇಗವಾಗಿ ಓಡುತ್ತೆ. ಅವತ್ತಿನ ರೇಸ್‌ನಲ್ಲಿ ಕುದುರೆಗಳು 100 ಕಿ.ಮೀ. ವೇಗವಾಗಿ ಓಡುತ್ತಿತ್ತು. ಇವನು ಕಾರನ್ನು 100 ಕಿ.ಮೀ ವೇಗವಾಗಿ ಓಡಿಸುತ್ತಿದ್ದ. ನಮಗೆ ಗೊತ್ತಿಲ್ಲದೇ ಒಂದು ಹಂಪ್‌ಬಂತು. ಅದು ಬಹಳ ಚಿಕ್ಕದಿತ್ತು. ಕಾರು ವೇಗವಾಗಿ ಹೋಗುತ್ತಿದ್ದ ಕಾರಣ ಒಮ್ಮೆಲೇ ಹಂಪ್‌ನಲ್ಲಿ ಏರಿ ಬಿತ್ತು. ಗಫೂರ್‌ ಬಹಳ ಒಳ್ಳೆಯ ಡ್ರೈವರ್‌. ಅವನು ಹಂಗೂ, ಹಿಂಗೂ ಕಂಟ್ರೋಲ್‌ಗೆ ತಂದ. ನಾವೆಲ್ಲ ಹೆಚ್ಚು ಕಮ್ಮಿ, ನಾಲ್ಕೈದು ಅಡಿ ಗಾಳಿಗೆ ಹಾರಿ ಕೆಳಗೆ ಕೂತೆವು. ಅಲ್ಲಿಯವರೆಗೂ ಶೂಟ್‌ ಮಾಡಿದ್ದು, ಅಷ್ಟೆ ಸಿಕ್ಕಿತು. ತುಂಬಾ ಕಷ್ಟವಾಯ್ತು. ನಾವು ಮತ್ತು ಕ್ಯಾಮೆರಾಗಳು ಉಳಿದಿದ್ದೇ ಹೆಚ್ಚು.


ಗೋವಾದಲ್ಲಿ ಇನ್ನೊಂದು ವಿಷಯ ನಡೆದಿತ್ತು. ಸಿಐಡಿ 999 ಸಂದರ್ಭದಲ್ಲಿ ರಾಜ್‌ಕುಮಾರ್‌ ಅವರನ್ನು ಪೊಲೀಸ್‌ನವರು ಅರೆಸ್ಟ್‌ ಮಾಡಿದ್ರು. ಇಲ್ಲಿಂದ ಕಾರ್‌ನಲ್ಲಿ ಹೋಗಿದ್ವಿ. ಸಾಮಾನ್ಯವಾಗಿ ಕಾರಿನ ನಂಬರ್‌ ಕರ್ನಾಟಕ, ಮದ್ರಾಸ್‌ ರಿಜಿಸ್ಟ್ರೇಷನ್‌ ನಲ್ಲಿ ಇರುತ್ತಿತ್ತು. ನಾನು ಇಲ್ಲಿಂದ ಹೋಗುವಾಗ ಜಿಡಿಎ ಎಂದು ಗೋವಾ ರಿಜಿಸ್ಟ್ರೇಷನ್‌ ಸ್ಟಿಕರನ್ನು ಎಲ್ಲ ಕಾರಿಗೂ ಅಂಟಿಸಿಕೊಂಡು ಹೋಗಿದ್ದೆ. ಸಿನಿಮಾದಲ್ಲಿ ನೇಟಿವಿಟಿ ಫೀಲ್‌ ಇರಲಿ ಎಂದು ಹಾಗೆ ಮಾಡಿದ್ವಿ.


ರಾಜ್‌ಕುಮಾರ್‌ ಅವರು ಶೂಟಿಂಗ್‌ ಮುಗಿಸಿಕೊಂಡು ಹೋಟೆಲ್‌ಗೆ ಹೋಗುತ್ತಿದ್ದಾಗ ಕಾರನ್ನು ಪೊಲೀಸರು ಅಡ್ಡ ಹಾಕಿದ್ರು. ನಂಬರ್‌ ಪ್ಲೇಟ್‌ ಪೇಸ್ಟ್‌ ಮಾಡಿದ್ದೀರಾ, ನೀವು ಸ್ಮಗ್ಲರ್‌ ಎಂದು ಅವರನ್ನು ಬಂಧಿಸಿದ್ರು. ರಾಜ್‌ಕುಮಾರ್‌ ಅವರು ಇನ್ನು ಹೋಟೆಲ್‌ಗೆ ಬಂದಿಲ್ವಲ್ಲಾ ಎಂದು ನಾನು ಯೋಚಿಸುತ್ತಿದ್ದೆ. ನೋಡಿದ್ರೆ ಅಲ್ಲಿ ಅವರನ್ನು ಹಿಡ್ಕೊಂಡು ನಿಂತಿದ್ರು. ಇವರಿಗೆ ಇಂಗ್ಲಿಷ್‌ ಸಂಪೂರ್ಣ ಅರ್ಥ ಆಗುತ್ತಿರಲಿಲ್ಲ. ನಾನು ಅಲ್ಲಿಗೆ ಹೋದೆ. ನನ್ನನ್ನು ನೋಡಿದ ಮೇಲೆ ಅವರಿಗೆ ರಿಲೀಫ್‌ ಆಯ್ತು. ಭಗವಾನ್‌ ಇವನೇನೋ ಹೇಳ್ತಿದ್ದಾನೆ ಕೇಳಿ, ಅರೆಸ್ಟ್‌ ಅಂತೆಲ್ಲ ಅಂತಿದ್ದಾನೆ ನೋಡಿ ಅಂದ್ರು. ಏನ್‌ ವಿಷಯ ಎಂದು ಕಾನ್‌ಸ್ಟೆಬಲನ್ನು ಕೇಳಿದೆ. ಫೇಕ್‌ ಬೋರ್ಡ್‌ ಹಾಕಿಕೊಂಡು ಕಾರು ಚಲಾಯಿಸುತ್ತಿದ್ದಾರೆ ಎಂದ. ನಾವು ಸಿನಿಮಾ ಶೂಟಿಂಗ್‌ ಮಾಡುತ್ತಿದ್ದೇವೆ. ಹಾಗಾಗಿ, ನಂಬರ್‌ ಪ್ಲೇಟ್‌ ಹಾಕಿಕೊಂಡಿದ್ದೆವು. ಬದಲಾಯಿಸುತ್ತೇವೆ ಅಂದೆ. ಅದೆಲ್ಲ ನಂಗೆ ಗೊತ್ತಿಲ್ಲ. ಇವರು ನನ್ನ ಜೊತೆ ಬರಲೇಬೇಕು. ಜೊತೆಗೆ ನೀವು ಬನ್ನಿ ನಿಮ್ಮನ್ನು ಬಂಧಿಸುತ್ತೇವೆ ಎಂದು ಇಂಗ್ಲಿಷ್‌ನಲ್ಲಿ ಹೇಳಿದ. ಸರಿ ಅಂಥ ಇಬ್ರೂ ಹೋದೆವು. ಎಸ್ಪಿ ಕಚೇರಿಗೆ ಕರೆದುಕೊಂಡು ಹೋದ. ಎಸ್ಪಿ ಕಚೇರಿಯಲ್ಲಿ ಕುಲಕರ್ಣಿ ಎಂದು ಬೋರ್ಡ್‌ಇತ್ತು. ಕುಲಕರ್ಣಿ ಎಂದು ನೋಡಿದ ತಕ್ಷಣ ಇದು ಕನ್ನಡದ ಹೆಸರು ಎಂಬುದು ತಿಳಿಯಿತು. ಇದು ಶುಭ‌ಸೂಚನೆ ಅನಿಸಿತು ನಮಗೆ.


ನೀವು ಕುಲಕರ್ಣಿ ಅಲ್ವಾ, ಕನ್ನಡಿಗರ ಎಂದು ಇಂಗ್ಲಿಷ್‌ನಲ್ಲಿ ಕೇಳಿದೆ. ಅವರು, ಹೌದ್ರಿ, ನಾನು ಕನ್ನಡದವನೇ ಅಂದ್ರು. ಐಪಿಎಸ್‌ ಮುಗಿಸಿ ಇಲ್ಲಿಗೆ ಬಂದಿದ್ದೇನೆ ಅಂದ್ರು. ಸರ್‌, ಹೀಗಿಗೆ ಆಗಿದೆ ಎಂದು ಅವರಿಗೆ ವಿವರಿಸಿದೆ. ರಾಜ್‌ಕುಮಾರ್‌ ಅವರನ್ನು ಬಂಧಿಸಿದ್ದಾರೆ ಅಂದೆ. ಅವರು, ಯಾರು ರಾಜ್‌ಕುಮಾರ್‌ ಅವರನ್ನೇ ಬಂಧಿಸಿದ್ದಾರಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ರು. ಕಾನ್‌ಸ್ಟೆಬಲ್‌ನನ್ನು ಕರೀರಿ ಅಂದ್ರು, ಆಚೆ ಕಡೆ ನಿಂತಿದ್ದ. ಅವನು ಬಂದ. ಏನಪ್ಪ ಇದು, ಫಿಲ್ಮ್‌ ಶೂಟ್‌ ಮಾಡ್ತಿದ್ದಾರೆ, ನೀನು ಅರ್ಥಮಾಡಿಕೊಳ್ಳಬೇಕು ಅಂದ್ರು. ಒಳ್ಳೆಯ ಮಾತಲ್ಲೇ ಹೇಳಿದ್ರು. ಇದು ನಿಯಮಕ್ಕೆ ವಿರುದ್ಧ ಅಲ್ವಾ ಅಂಥ ಅವನು ಅಂದ. ಹೌದು, ನಿಯಮಕ್ಕೆ ವಿರುದ್ಧವೇ, ಆದ್ರೆ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಅಂದ್ರು. ಆದರೂ, ಅವನು ಒಪ್ಪಿಕೊಳ್ಳಲು ತಯಾರೇ ಇರಲಿಲ್ಲ. ನೀನು ಹೋಗು ನಾನು ಸನ್ನಿವೇಶವನ್ನು ನಿಭಾಯಿಸುತ್ತೇನೆ ಎಂದು ಅವನನ್ನು ಕಳುಹಿಸಿಬಿಟ್ರು.


ಅವನು ಅವನ ಡ್ಯೂಟಿ ಮಾಡಿದ್ದಾನೆ. ನೀವು ಮಾಡಿರುವುದು ತಪ್ಪು. ಇಲ್ಲಿ ಸ್ಮಗ್ಲಿಂಗ್‌ ತುಂಬಾ ಆಗುತ್ತಿದೆ. ಹಾಗಾಗಿ ಅವನು ಹಿಡಿದಿದ್ದಾನೆ. ಅವನ ತಪ್ಪಿಲ್ಲ. ನೀವು ಬೆಳಿಗ್ಗೆಯಿಂದ ಸಂಜೆವರೆಗೆ ಇಲ್ಲಿಯ ನಂಬರ್‌ ಪ್ಲೇಟ್‌ ಹಾಕಿಕೊಳ್ಳಿ. ಆಮೇಲೆ ತೆಗೆದುಬಿಡಿ. ಶೂಟಿಂಗ್‌ ಮುಗಿದ ಮೇಲೆ ವರ್ಜಿನಲ್‌ ನಂಬರ್‌ನಲ್ಲೇ ಕಾರನ್ನು ಬಳಸಿ. ಅಲ್ಲಿಯವರೆಗೂ ಒರಲ್‌ ಪರ್ಮಿಷನ್‌ ಕೊಡುತ್ತೇನೆ ಅಂದ್ರು. ಯಾರಾದ್ರು ಬಂದು ಕೇಳಿದ್ರೆ ಎಸ್ಪಿಗೆ ಹೇಳಿ ಎಂದು ಹೇಳಿಬಿಡಿ. ನಾನು ಲಿಖಿತವಾಗಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದ್ರು.


ಅವತ್ತಿನಿಂದ ಶೂಟಿಂಗ್‌ ಮುಗಿಸುವವರೆಗೂ ನಂಬರ್‌ ಪ್ಲೇಟ್‌ ಅಂಟಿಸುವುದು ಆಮೇಲೆ ತೆಗೆಯುವುದು ಮಾಡುತ್ತಿದ್ವಿ. ರಾಜ್‌ಕುಮಾರ್‌ ಅವರು ಯಾವಾಗಲೂ ಈ ಸನ್ನಿವೇಶವನ್ನು ನೆನಪಿಸಿಕೊಳ್ಳುತ್ತಿದ್ರು.

ಹೀಗೆಲ್ಲ ಅನೇಕ ಅನಾಹುತಗಳು ಆಗಿದ್ದರಿಂದ ದೊರೆಯವರು ಬಹಳ ಹೆದರಿದ್ರು. ಅವರ ಕಣ್ಣಿಗೂ ಬಹಳ ಸಮಸ್ಯೆ ಆಗಿತ್ತು. ಹಾಗಾಗಿ, ರಿಸ್ಕ್‌ ಪಿಕ್ಚರ್ಸ್‌ಬೇಡ, ನಾವು ಮೊದಲು ಮಾಡಿದ ಚಿತ್ರಗಳನ್ನೇ ಮಾಡಿಕೊಂಡು ಹೋಗೋಣ ಭಗವಾನ್‌ ಅಂದ್ರು. ಅಷ್ಟೋತ್ತಿಗೆ ಸರಿಯಾಗಿ ನಮ್ಮ ಗಾಂಧಿನಗರದಲ್ಲೂ ‘ಏನ್ನಯ್ಯ, ಯಾವಾಗ ನೋಡಿದ್ರು ಫೈಟಿಂಗ್‌ ಪಿಕ್ಚರೇ ತೆಗೆಯುತ್ತಾರೆ. ಬೇರೆ ಪಿಕ್ಚರ್‌ ತೆಗೆಯೋಕ್ಕೆ ಬರಲ್ವಾ’ ಎಂಬ ಮಾತು ಹರಿದಾಡುತ್ತಿತ್ತು.


ಈ ಮೂರು ಬಾಂಡ್‌ ಸಿನಿಮಾಗಳಿಂದ ನಾನು ಸಿನಿಮಾಕ್ಕೆ ಖರ್ಚು ಮಾಡಿದ್ದ ಹಣಕ್ಕಿಂತ ಎರಡು, ಮೂರು ಪಟ್ಟು ಡಬ್ಬಿಂಗ್‌ ಹಣ ಡಬ್ಬಿಂಗ್‌ ರೈಟ್ಸ್‌ ನಿಂದಲೇ ಬಂದಿತ್ತು. ಪಿಕ್ಚರ್‌ ಅನೌನ್ಸ್‌ ಆಗುತ್ತಲೇ ಡಬ್ಬಿಂಗ್‌ ರೈಟ್ಸ್‌ ಹೊರಟು ಹೋಗೋದು. ಬೇರೆ ಭಾಷೆಗಳಲ್ಲಿ ಬಾಂಡ್‌ ಸಿನಿಮಾಗಳು ಯಶಸ್ವಿಯಾಗದ ಕಾರಣಕ್ಕೆ ಇವುಗಳಿಗೆ ಬೇಡಿಕೆ ಇತ್ತು.


ಗೋವಾದಲ್ಲಿ ಸಿಐಡಿಗೆ 3.50–4 ಲಕ್ಷ, ಜಾಕ್‌ಪಾಟ್‌ಗೆ 4,5 ಲಕ್ಷ ಖರ್ಚಾಗಿತ್ತು. 1969ರಲ್ಲಿ ಗೋವಾದಲ್ಲಿ ಸಿಐಡಿ ಬಂದಿದ್ದು, 70 ರಲ್ಲಿ ಜಾಕ್‌ಪಾಟ್‌ ಸಿನಿಮಾ ಬಂದಿತ್ತು, 71 ರಲ್ಲಿ ಕಸ್ತೂರಿ ನಿವಾಸ ಬಂತು.

ಮುಂದುವರೆಯುವುದು...


ಸಂದರ್ಶಕರು - ಕೆ ಎಸ್‌.ಪರಮೇಶ್ವರ34 views