ಬೂದಿ ಮುಚ್ಚಿದ ಕೆಂಡದಲ್ಲಿ ಕೈ ಇಟ್ಟ ನರಸಿಂಹರಾಜು ಅವರ ಪ್ರೀತಿಯ ಮಗ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 68


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ
ನರಸಿಂಹರಾಜ ಅವರ ಮಗ ಶ್ರೀಕಾಂತ್‌ ಎಂದು. ಅವನು ಹಿರಿಯ ಮಗ. ಅವನನ್ನು ಕಂಡರೆ ಅಪಾರವಾದ ಪ್ರೀತಿ ಅವರಿಗೆ. ನಾಟಕ ಮಾಡಲು ಸಾಗರದಲ್ಲೊಮ್ಮೆ ಕ್ಯಾಂಪ್‌ ಹಾಕಿದೆವು. ಅಲ್ಲಿಗೆ ಕುಟುಂಬವನ್ನು ಕರೆದುಕೊಂಡು ಬಂದಿದ್ರು. ಆಗ ಅವರ ಮಗನಿಗೆ ಹತ್ತು ವರ್ಷ ಇರಬಹುದು. ಅಲ್ಲೊಂದು ಛತ್ರದಲ್ಲಿ ಉಳಿಯಲು ಏರ್ಪಾಡು ಮಾಡಿದ್ದೆ. ಅಲ್ಲಿಯೇ ಊಟ, ತಿಂಡಿ ವ್ಯವಸ್ಥೆ ಇತ್ತು. ಹೋಟೆಲ್‌ನವರು ಅಡುಗೆ ಮಾಡಿದ ಬೂದಿಯನ್ನು ಅಲ್ಲಿಯೇ ಅಂಗಳದಲ್ಲಿ ತಂದು ಹಾಕುತ್ತಿದ್ರು. ಅಲ್ಲಿ ಎಲ್ಲಾ ಮಕ್ಕಳು ಆಟ ಆಡುತ್ತಿದ್ರು. ಈ ವೇಳೆ ಅಂಗಳದಲ್ಲಿ ಆಡುತ್ತಿದ್ದ ಶ್ರೀಕಾಂತ ಬೂದಿ ಮುಚ್ಚಿದ ಕೆಂಡದಲ್ಲಿ ಎರಡು ಕೈಯನ್ನು ಹಾಕಿಬಿಟ್ಟ. ಮೊಣಕೈವರೆಗೂ ಅವನ ಕೈ ಸುಟ್ಟು ಹೋಯ್ತು. ನಮ್ಮ ರಾಮಚಂದ್ರ ಶಾಸ್ತ್ರಿಗಳು ಓಡಿ ಹೋಗಿ ಸವರಿ, ಚರ್ಮ ತೆಗೆದುಬಿಟ್ರು. ನಾನು ಓಡಿ ಬಂದೆ. ಏನು ರಾಮಚಂದ್ರ ಶಾಸ್ತ್ರಿಗಳೇ ಹೀಗೆ ಮಾಡಿದ್ರಿ ಎಂದು ಹೇಳಿ, ತಣ್ಣೀರಿನಲ್ಲಿ ಕೈ ಅದ್ದಿಸಿ, ತಕ್ಷಣ ಡಾಕ್ಟರ್‌ಹತ್ತಿರ ಕರೆದುಕೊಂಡು ಹೋದೆವು. ವೈದ್ಯರು ಚಿಕಿತ್ಸೆ ಕೊಟ್ಟರು. ಮಗು ಪಾಪ ನೋವು ತಡಿಯಲಾಗದೇ ಜೋರಾಗಿ ಕಿರುಚುತ್ತಿತ್ತು. ನರಸಿಂಹರಾಜು ಅವರು ಗೋಳೊ ಎಂದು ಹೃದಯ ಬಡಿದುಕೊಂಡು ಅಳುತ್ತಿದ್ರು. ಅವರ ಅಳು ನೋಡಿದ್ರೆ ಯಾರಿಗಾದರೂ ಕಣ್ಣಲ್ಲಿ ನೀರು ಬರುತ್ತಿತ್ತು. ಇವತ್ತಿಗೂ ನನಗೆ ಆ ದೃಶ್ಯ ನೆನಪಿಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ. ಆ ಮಗು ಎಷ್ಟು ಹಿಂಸೆ ಪಡುತ್ತಿತ್ತು ಎಂಬುದನ್ನು ಜ್ಞಾಪಿಸಿಕೊಂಡರೆ, ಈಗಲೂ ದುಃಖವನ್ನು ತಡೆಯಲು ಸಾಧ್ಯವಾಗುವುದಿಲ್ಲ. ವೈದ್ಯರು ಬರ್ನಲ್‌ಹಾಕಿದ್ರು. ಚರ್ಮವನ್ನು ತೆಗೆಯಬಾರದಿತ್ತೆಂದು ರಾಮಚಂದ್ರಶಾಸ್ತ್ರಿಗಳಿಗೆ ವೈದ್ಯರು ಬೈದ್ರು. ಆಮೇಲೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದ್ರು. ಆದರೆ, ಚರ್ಮನೇ ಹೋಗಿ, ಬೆರಳು, ಕೈಗಳ ಆಕಾರವೇ ಹೋಗಿಬಿಟ್ಟಿತ್ತು.

ನಂತರದಲ್ಲಿ ಆವರಿಗೆ ನಾಟಕದಲ್ಲಿ ಆಸಕ್ತಿಯೇ ಇರಲಿಲ್ಲ. ನಾವು ಕ್ಯಾಂಪ್‌ಕ್ಲೋಸ್‌ಮಾಡಿ ಬಂದುಬಿಟ್ಟೆವು. ಇವರು ವಿಕ್ಟೋರಿಯಾ ಆಸ್ಪತ್ರೆಗೆಲ್ಲ ಕರೆದುಕೊಂಡು ಹೋದರು. ಕಾಸ್ಮೋ ಸರ್ಜರಿ ಎಂದಿದೆ. ಅದನ್ನು ಮಾಡಿದ್ರೆ ಸರಿ ಹೋಗುತ್ತದೆ ಎಂದು ವೈದ್ಯರು ಹೇಳಿದ್ರು. ಮುನಿರೆಡ್ಡಿಪಾಳ್ಯದಲ್ಲಿ ಅವರ ಮನೆಯಿತ್ತು. ತಮ್ಮ ಸಂಪಾದನೆಯನ್ನೆಲ್ಲ ಮಗುವಿನ ಕೈ ಸರಿ ಮಾಡಲು ಖರ್ಚು ಮಾಡಿದ್ರು. ಅವರಿಗೆ ನಟನೆಯ ಅವಕಾಶ ಚೆನ್ನಾಗಿತ್ತು.


ಸಾಕಷ್ಟು ಚಿಕಿತ್ಸೆ ಬಳಿಕವೂ ಕೈ ಸರಿಹೋಗಲಿಲ್ಲ. ಶೇಕಡ 50–60 ಗುಣ ಆದಂತೆ ಇತ್ತು. ಅದೇ ನೋವಿನಲ್ಲೇ ಕೊರಗಿ, ಕೊರಗಿ ಆ ಹುಡುಗ ಹೋಗಿಬಿಟ್ಟ. ಪುತ್ರ ಶೋಕ ಬಹಳ ಕಷ್ಟದ್ದು. ವರದಪ್ಪ ಅವರ ಸಾವು ರಾಜ್‌ಕುಮಾರ್‌ ಅವರಿಗೆ ಎಷ್ಟು ಆಘಾತ ಉಂಟು ಮಾಡಿತ್ತೋ, ಅದೇ ಆಘಾತ ಮಗ ಹೋದಾಗ ನರಸಿಂಹರಾಜು ಅವರಿಗೂ ಆಗಿತ್ತು. ಆ ಕೊರಗಿನಲ್ಲಿಯೇ ಅವರು ಹೋಗಿಬಿಟ್ಟರು. ಎಲ್ಲ ವಿಧಿ ಬರಹ.
ಮುಂದುವರೆಯುವುದು...

29 views