ಬಾನೆತ್ತರಕ್ಕೇರಿದರೂ ಇವರು ಮಗುವಿನ ಮನಸ್ಸಿನವರೇ ಆಗಿದ್ದರು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 38


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ರಾಜ್‌ಕುಮಾರ್‌ ಮುಗ್ಧತೆಗೆ ಹಲವು ನಿದರ್ಶನಗಳಿವೆ. ಎರಡು ಕನಸು ಶೂಟಿಂಗ್‌ ಸಮಯದಲ್ಲಿ ಮಧ್ಯಾಹ್ನದ ಊಟ ಆದ ಮೇಲೆ, ಶಾಟ್‌ ರೆಡಿ ಮಾಡಿ ರಾಜ್‌ಕುಮಾರ್‌ ಅವರನ್ನು ಕರೆದರೆ ಅವರು ಬರಲಿಲ್ಲ. ನಂತರ ನಾನೇ ಅವರನ್ನು ಹುಡುಕಿಕೊಂಡು ಹೋದೆ. ನೋಡಿದ್ರೆ ಅವರ ಮೇಕಪ್‌ ಕಲಾವಿದ ದೊರೆಸ್ವಾಮಿ ಜೊತೆ ಕಾರ್ಡ್ಸ್ ಆಡುತ್ತಾ ಕೂತಿದ್ರು. ಏನು ಮುತ್ತುರಾಜಣ್ಣ ಶಾಟ್‌ ರೆಡಿ ಆಗಿದೆ. ನೀವು ಬರುತ್ತಿಲ್ಲವಲ್ಲಾ ಎಂದೆ. ಆಗ ಅವರು, ಈ ಆಟ ಮುಗಿಸಿ ಬರುತ್ತೇನೆ ಅಂದ್ರು. ನನಗೆ ಕೋಪ ಬಂತು. ಅವರ ಕೈಯಲ್ಲಿದ್ದ ಕಾರ್ಡ್ಸ್‌ಗಳನ್ನು ತೆಗೆದು ಎಸೆದುಬಿಟ್ಟೆ. ಯಾಕೆ ಭಗವಾನ್‌ ಹೀಗೆ ಮಾಡಿಬಿಟ್ರಿ ಅಂದ್ರು. ಅದಕ್ಕೆ ನಾನು ನಿಮ್ಮ ಸ್ಟೇಟಸ್‌ಗೆ ಕಾರ್ಡ್ಸ್‌ ಆಡುವುದು ಸರಿಯಲ್ಲ. ನಿಮ್ಮ ಘನತೆಗೆ ತಕ್ಕಂತ ಆಟ ಹೇಳುತ್ತೇನೆ. ನಿಮಗೆ ಬಿಡುವಿದ್ದಾಗ, ಬೋರ್‌ ಆದರೆ ಅದನ್ನು ಆಡಿ ಎಂದು ಹೇಳಿದೆ. ಅವತ್ತು ಸಂಜೆಯೇ ಶೂಟಿಂಗ್‌ ಮುಗಿಸಿ, ರಾತ್ರಿ ಒಲಿಂಪಿಕ್ಸ್‌ ಸ್ಪೋರ್ಟ್ಸ್‌ ಶಾಪ್‌ಗೆ ಹೋಗಿ ಚೆಸ್‌ ಬೋರ್ಡ್‌ ತೆಗೆದುಕೊಂಡೆ. ಅದನ್ನು ರಾಜ್‌ಕುಮಾರ್‌ ಅವರಿಗೆ ಮರುದಿನ ಕೊಟ್ಟೆ. ಇದೇನು ಭಗವಾನ್‌ ಇದನ್ನು ಹೇಗೆ ಆಡುವುದು ಎಂದು ನನಗೆ ಗೊತ್ತಿಲ್ಲವಲ್ಲ ಎಂದ್ರು. ಬಿಡುವಿನ ಸಮಯದಲ್ಲಿ ಇದನ್ನು ನಿಮಗೆ ಕಲಿಸಿಕೊಡುತ್ತೇನೆ. ಇದರಿಂದ ಜ್ಞಾನ ಹೆಚ್ಚಾಗುತ್ತದೆ ಎಂದೆ. ಅವತ್ತಿನಿಂದ ಅವರು ಕಾರ್ಡ್ಸ್‌ ಮುಟ್ಟಲಿಲ್ಲ. ಚೆಸ್‌ ಆಟವನ್ನು ತುಂಬಾ ಇಷ್ಟಪಡಲು ಶುರುಮಾಡಿದ್ರು.
ಮುಂದುವರೆಯುವುದು...

22 views