
ಬಾಂಬೆ ಕನ್ನಡಿಗರಿಗೆ ಡಾ.ರಾಜ್ ಕೊಡುಗೆ
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 105
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ಬಾಂಬೆಯಲ್ಲಿ ನನ್ನ ಕನ್ನಡ ಸಂಘವಿದೆ. ಅಲ್ಲೊಂದು ಮ್ಯೂಸಿಕಲ್ ನೈಟ್ಸ್ ಮಾಡಿಕೊಡಿ ಅಲ್ಲಿ ಆಡಿಟೋರಿಯಂ ಕಟ್ಟಿಸುತ್ತೇನೆ’ ಎಂದು ಅದಮಾರು ಸ್ವಾಮೀಜಿ ಹೇಳಿದರು. ಅಲ್ಲಿ ಶಂಕರಾನಂದ ಎಂಬ ಹಾಲ್ ಇದೆ. ಅದರಲ್ಲಿ 7 ಸಾವಿರ ಜನ ಕೂರಬಹುದು. ಅಂಥ ದೊಡ್ಡ ಹಾಲ್ನಲ್ಲಿ ಮ್ಯೂಸಿಕಲ್ ನೈಟ್ಸ್ ಮಾಡಿದೆವು.
ಅಲ್ಲಿ ನಾವು ಹೋಟೆಲ್ನಲ್ಲಿ ಉಳಿದುಕೊಂಡಿದ್ದೆವು. ಸ್ವಾಮಿಗಳು ನಮ್ಮನ್ನು ಭೇಟಿಯಾಗಲು ಬಂದರು. ನಾವು ಕಾರಿಡಾರ್ನಲ್ಲಿಯೇ ಅವರನ್ನು ಭೇಟಿಯಾದೆವು. ನಾನು ರಾಜ್ಕುಮಾರ್ ಹಿಂದೆ ನಿಂತಿದ್ದೆ. ರಾಜ್ಕುಮಾರ್ ಅವರು ಸ್ವಾಮಿಗಳಿಗೆ ನಮಸ್ಕಾರ ಮಾಡಿದ್ರು. ಅವರು ರಾಜ್ಕುಮಾರ್ ಅವರ ಯೋಗ, ಕ್ಷೇಮ ವಿಚಾರಿಸಿಕೊಂಡರು. ಭಗವಾನ್ ನೀವು ಬಂದ್ರಾ ಎಂದ್ರು. ನಾನು ಏನ್ ಸ್ವಾಮಿ, ಹೂವಿನ ಹಿಂದೆ ನಾರು ಎಂದು ರಾಜ್ಕುಮಾರ್ ಅವರನ್ನು ತೋರಿಸಿದೆ. ಆಗ ಅವರು ನಾರಿನ ಬೆಲೆ ನಿಮಗೆ ಗೊತ್ತಿಲ್ಲ ಅನಿಸುತ್ತದೆ. ಯಾಕೆ ಸ್ವಾಮಿ ಎಂದೆ. ನೋಡಿ ನಾನೊಂದು ವಿಷಯ ಹೇಳುತ್ತೇನೆ. ದೇವರಿಗೆ ಹೂವು ಹಾಕುತ್ತೀರಾ. ಆಗ ಅದು ದೇವರ ಪಾದದತ್ತ ಹೋಗಿ ನಿಲ್ಲುತ್ತದೆ. ದೇವರ ಹತ್ತಿರ ಹೋಗಿ ನಿಲ್ಲುವುದಿಲ್ಲ. ನಾರಿನಲ್ಲಿ ಕಟ್ಟಿ ಹಾಕಿದರೆ ಕತ್ತಿಗೆ ಹೋಗಿ ಹಾರವಾಗಿ ಬೀಳುತ್ತದೆ. ನಾರಿನ ಪ್ರಾಮುಖ್ಯತೆ ನಿಮಗೆ ಗೊತ್ತಿಲ್ಲ. ನೀವು ನಾರು ಎಂದರು. ನನಗೆ ಮೈಜುಂ ಎನಿಸಿತು. ಇವತ್ತಿಗೂ ನನಗೆ ಅವರ ಮಾತು ನೆನಪಾಗುತ್ತಲೇ ಇರುತ್ತದೆ. ಎಷ್ಟೋ ಬಾರಿ ನಾರಿನ ಮಹತ್ವವವನ್ನು ನಾನು ಹಲವೆಡೆ ಹೇಳಿದ್ದೇನೆ.
ಮುಂದುವರೆಯುವುದು...