ಬ್ರಾಹ್ಮಣರೆಲ್ಲ ಅಣ್ಣಾವ್ರ ಕಾಲಿಗೆ ಬೀಳಲು ಕಾರಣವಾದ ಘಟನೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 57


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಇದೇ ರೀತಿಯ ಇನ್ನೊಂದು ಘಟನೆ ನಡೆಯಿತು. ಕೊನೆಯ ದೃಶ್ಯದಲ್ಲಿ ಬೃಂದಾವನ ಮಾಡಬೇಕಾದರೆ ಕಲ್ಲುಗಳನ್ನು ಇಡುತ್ತಾ ಬಂದ್ರು. ಶಾಟ್‌ ಓಕೆ ಆಯ್ತು. ಅವರು ಹಾಗೆ ಕೂತಿದ್ರು. ನಾವ್ಯಾರೂ ತೊಂದರೆ ಕೊಡಲು ಹೋಗಲಿಲ್ಲ. ಸಮಾಧಿ ಆಗುವ ಸಮಯದಲ್ಲಿ ಬ್ರಾಹ್ಮಣರೇ ಇರಬೇಕೆಂದು, ರಾಯಪೀಠ ಮಠಕ್ಕೆ ಹೋಗಿ ಬ್ರಾಹ್ಮಣರನ್ನೇ ಕಳುಹಿಸಿಕೊಡುವಂತೆ ಕೇಳಿದೆ. ನೂರು ಜನ ಬ್ರಾಹ್ಮಣರನ್ನು ಕಳುಹಿಸಿಕೊಟ್ಟಿದ್ದರು. ಆ ದೃಶ್ಯದ ಚಿತ್ರೀಕರಣದ ವೇಳೆ ಬ್ರಾಹ್ಮಣರ ಕಣ್ಣಲ್ಲಿ ನೀರಿತ್ತು. ರಾಘವೇಂದ್ರ ಸ್ವಾಮಿ ಅವರದ್ದು ಜೀವಂತ ಸಮಾಧಿ, ರಾಜ್‌ಕುಮಾರ್‌ ಅವರು ಅಲಗಾಡದ್ದನ್ನು ನೋಡಿ ಇವರು ಹಾಗೆಯೇ ಆಗಿಬಿಟ್ರ ಎಂಬ ಭಯ ಶುರುವಾಯ್ತು ನನಗೆ.


ರಾಘವೇಂದ್ರ ಸ್ವಾಮಿಗಳು ಆಹ್ವಾಹನೆ ಆಗುತ್ತಾರೆ ಎಂಬ ಭಾವನೆ ರಾಜ್‌ಕುಮಾರ್‌ ಅವರಲ್ಲಿ ಇತ್ತು. ಅವರು ಅಚಲರಾಗಿ ಕೂತಿದ್ರು. ಅಲ್ಲಾಡುತ್ತಲೇ ಇರಲಿಲ್ಲ. ಕೊನೆಗೆ ನನಗೆ ತಡಿಯಲಿಲ್ಲ. ಹೋಗಿ, ಅವರ ಭುಜ ಮುಟ್ಟಿ, ಅಣ್ಣಯ್ಯ ಎಂದೆ. ಅವರಿಗೆ ಎಚ್ಚರವಾಯ್ತು. ಎದ್ದು ಬಂದ ಅವರು, ಏನು ಭಗವಾನ್‌ ಏನಾಯ್ತು ನನಗೆ. ಏನು ಗೊತ್ತಾಗಲೇ ಇಲ್ಲ ಎಂದರು. ಅವರಲ್ಲಿ ಸಾಮಾನ್ಯವಾದ ನಡೆಯೇ ಇರಲಿಲ್ಲ. ಅವರ ಮೇಲೆ ಅವರಿಗೆ ನಿಯಂತ್ರಣವೇ ಇರಲಿಲ್ಲ. ಅವರು ಬಂದ ತಕ್ಷಣ ಹತ್ತಾರು ಜನ ಬ್ರಾಹ್ಮಣರು ಓಡಿ ಬಂದು ಅವರ ಕಾಲನ್ನು ಹಿಡಿದುಕೊಂಡ್ರು. ನಮಗೆ ದೇವರನ್ನೇ ಕಂಡ ಹಾಗೆ ಆಯ್ತು ಎಂದು ಅವರು ಹೇಳಿದ್ರು. ನನಗೆ ಮೈಯೆಲ್ಲ ರೋಮಾಂಚನ ಆಯ್ತು.


ಭಗವಾನ್‌, ಈ ದೃಶ್ಯದ ಚಿತ್ರೀಕರಣದ ವೇಳೆ ನಾನು ನಾನಾಗಿರಲಿಲ್ಲ ಎಂದಿದ್ರು. ರಾಘವೇಂದ್ರ ಸ್ವಾಮಿಗಳೇ ಅವರಿಗೆ ಆಶೀರ್ವಾದ ಮಾಡಿರಬಹುದು ಅಥವಾ ಅವರು ಅಷ್ಟರ ಮಟ್ಟಿಗೆ ತ‌ನ್ಮಯರಾಗಿದ್ದರೂ ಎಂದ್ರೆ, ಆ ಸ್ವಾಮಿಗಳನ್ನೇ ತಮ್ಮಲ್ಲಿ ಆಹ್ವಾನೆ ಮಾಡಿಕೊಂಡು ಬಿಟ್ಟಿದ್ರು. ಎಲ್ಲವೂ ರಾಯರ ಕೃಪೆ. ರಾಯರ ಪರಮಾಪ್ತ ಭಕ್ತರು ರಾಜ್‌ಕುಮಾರ್‌. ಚಿತ್ರ ಮಾಡುವಾಗ ಆದ ಅನುಭವಗಳೆಲ್ಲ ಅವರ ಮನಸ್ಸಿನಲ್ಲಿ ಭದ್ರವಾಗಿ ಬೇರೂರಿ ಬಿಟ್ಟಿತ್ತು. ಹಾಗಾಗಿ ರಾಜ್‌ಕುಮಾರ್‌ ಅವರಿಗೆ ನಿಮಗೆ ಇಷ್ಟವಾದ ಸಿನಿಮಾ ಯಾವುದು ಎಂದು ಕೇಳಿದ್ರೆ ಎಲ್ಲಾ ಸಮಯದಲ್ಲಿಯೂ ‘ಮಂತ್ರಾಲಯ ಮಹಾತ್ಮೆ’ ಎಂದೇ ಹೇಳುತ್ತಿದ್ರು.
ಮುಂದುವರೆಯುವುದು...

20 views