ಬ್ಲಾಕ್‌ ನಲ್ಲಿ ಟಿಕೆಟ್‌ ಹಂಚುವವರು ಈ ಸಿನಿಮಾದ ಟೀಕೆಟ್‌ ಮಾರಿ ಸೈಟ್‌ ತೆಗೆದುಕೊಂಡಿದ್ರಂತೆ


ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 32


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)

‘ಜೀವನ ಚೈತ್ರ’ ಸಿನಿಮಾದ ಕೊನೆಯಲ್ಲಿ ತಾಯಿ –ಮಗನ ಭಾವನಾತ್ಮಕ ದೃಶ್ಯವಿದೆ. ಇದೇ ರೀತಿ ತಾಯಿ– ಮಗನ ಸಂಬಂಧವನ್ನು ತೋರಿಸಿದ ಇನ್ನೊಂದು ಚಿತ್ರ ‘ಸಮಯದ ಗೊಂಬೆ’. ಅದರ ಕ್ಲೈಮಾಕ್ಸ್‌ನಲ್ಲಿ ಮಗನಿಗೆ ತಾಯಿಯ ಕೊನೆ ಕ್ಷಣದಲ್ಲಿ ಮುಟ್ಟಲು ಸಾಧ್ಯವಾಗುವುದಿಲ್ಲ. ಕಣ್ಣೀರು ತರಿಸುವಂತಹ ದೃಶ್ಯಗಳಿವು. ಅದರಲ್ಲೂ ಇಂತಹ ಸೀನ್‌ಗಳನ್ನು ರಾಜ್‌ಕುಮಾರ್‌ ಮಾಡಿದ್ರೆ ಕೇಳಬೇಕೇ? ಆಗಿನ ಕಾಲಕ್ಕೆ ಅದ್ಭುತವಾದಂತಹ ದೃಶ್ಯಗಳಿವೆ. ಈಗಿನ ಕಾಲದಲ್ಲಿ ಜನರ ಜೀವನ ಶೈಲಿಯೇ ಬದಲಾಗಿದೆ. ಹಾಗಾಗಿ ಈ ರೀತಿಯ ಸಿನಿಮಾಗಳನ್ನು ಇಷ್ಟಪಡುತ್ತಾರೋ ಇಲ್ವೋ ಗೊತ್ತಿಲ್ಲ ನನಗೆ.


ಜೀವನ ಚೈತ್ರ ಸಿನಿಮಾ ಇತಿಹಾಸವನ್ನೇ ಸೃಷ್ಟಿ ಮಾಡಿತು. ಒಂದು ವರ್ಷ ಈ ಸಿನಿಮಾ ಪ್ರದರ್ಶನ ಕಂಡಿತು. ಜೀವನ ಚೈತ್ರ ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಿದ್ದೆ. ಸಿನಿಮಾ ನೋಡಿ ಹೊರಗೆ ಬಂದಾಗ ನಾಲ್ಕೈದು ಜನ ಬಂದು, ಸ್ವಾಮಿ ಎಂದು ಕಾಲಿಗೆ ಬಿದ್ರು. ಏನಪ್ಪ ಏನು ಬೇಕು ಎಂದೆ. ನಮಗೆ ಏನು ಬೇಡ. ಈ ರೀತಿಯ ಇನ್ನೊಂದು ಸಿನಿಮಾ ತೆಗೀರಿ ಅಂದ್ರು. ಈ ರೀತಿಯ ಕಥೆ ಸಿಗಬೇಕಲ್ಲ ಎಂದೆ. ನೀವು ತೆಗಿಲೇ ಬೇಕು ಇಲ್ಲದಿದ್ರೆ ನಾವು ಬಿಡೋಲ್ಲ. ಈ ಸಿನಿಮಾದ ಟಿಕೆಟನ್ನು ಬ್ಲಾಕ್‌ನಲ್ಲಿ ಮಾರಿ ಸೈಟ್‌ ತೆಗೆದುಕೊಂಡಿದ್ದೇವೆ. ಇನ್ನೊಂದು ಸಿನಿಮಾ ಮಾಡಿದ್ರೆ ಆ ಸಿನಿಮಾದ ಟಿಕೆಟನ್ನು ಹೀಗೆಯೇ ಮಾರಿ ಮನೆ ಕಟ್ಟಿಸಿಕೊಳ್ಳುತ್ತೇವೆ ಎಂದರು. ಈ ಸಿನಿಮಾದಿಂದ ಬ್ಲಾಕ್‌ನಲ್ಲಿ ಟಿಕೆಟ್‌ ಮಾರುವವರು ಅಷ್ಟೊಂದು ದುಡ್ಡು ಮಾಡಿಕೊಂಡಿದ್ರು. ಇದು ನಿಜವಾಗಿಯೂ ನಡೆದ ಘಟನೆ. ಇದರಲ್ಲಿ ಉತ್ಪ್ರೇಕ್ಷೆ ಇಲ್ಲ.
ಮುಂದುವರಿಯುವುದು...


15 views