
ಬೂಸ್ಟ್ ಹಿಡಿದುಬಿಟ್ಟಿದ್ದ ಕ್ಯಾಸೆಟ್ ಒಳಗೆ ಸಿಕ್ಕಿದ್ದು ನಾದಮಯ ಹಾಡು
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 27
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ಅವರ ಆಸ್ಥಾನ ನಿರ್ದೇಶಕರು ನಾವೇ. ಮೂವತ್ತೇರಡು ಸಿನಿಮಾಗಳನ್ನು ಒಬ್ಬ ನಟನ ಜೊತೆಗೆ ಮಾಡುವುದೆಂದರೆ ಸುಲಭದ ವಿಷಯವಲ್ಲ. ಭಾರತ ಇತಿಹಾಸದಲ್ಲಿಯೇ ಪ್ರಥಮ. ಇದೊಂದು ದಾಖಲೆ.
ನಮ್ಮನ್ನು ಕರೆಸಿ ಕೂರಿಸಿ ಕಥೆ ಕೊಟ್ರು. ಉಪೇಂದ್ರ ಕುಮಾರ್ ಅದರ ಮ್ಯೂಸಿಕ್ ಡೈರೆಕ್ಟರ್. ರಾಜ್ಕುಮಾರ್ ಅವರಿಗೆ ಸಿನಿಮಾದಲ್ಲಿ ಜ್ಞಾಪಕ ಹೋಗಿರುತ್ತದೆ. ಜ್ಞಾಪಕ ಬರುವ ಸನ್ನಿವೇಶವನ್ನು ಹಾಡಿನ ರೂಪದಲ್ಲಿಯೇ ತರಬೇಕು. ಯಾಕಂದ್ರೆ ಅವರು ಹಾಡುಗಾರ. ಏನು ಮಾಡಬೇಕು ಎಂದು ಯೋಚಿಸುತ್ತಿದ್ದಾಗ, ವರದಪ್ಪ ಅಮೃತವರ್ಷಿಣಿ ಅಂಥ ಪಿಕ್ಚರ್ ಮಾಡಿದ್ದೇವೆ ಜ್ಞಾಪಕ ಇದೆಯಾ ಎಂದ. ನಾನು ಇಲ್ಲ ಎಂದೆ. ಅದರಲ್ಲಿ ಒಂದು ಹಾಡಿದೆ. ಅದನ್ನು ಇಲ್ಲಿಗೆ ಹಾಕೋಣ. ಈ ಪಿಕ್ಚರ್ಗೆ ತುಂಬಾ ಚೆನ್ನಾಗಿರುತ್ತದೆ ಅನಿಸುತ್ತದೆ ಎಂದ್ರು. ಅರುಣಾಚಲಂ ಸ್ಟುಡಿಯೊದಲ್ಲಿ ರೆಕಾರ್ಡ್ ಮಾಡಿದ್ದು ಅದು. ಅಲ್ಲಿ ಅಮರ್ ಅಂಥ ಇದ್ರು. ಈಗ ಸ್ಟುಡಿಯೊ ಮುಚ್ಚಿ ಹೋಗಿದೆ. ಎಲ್ಲಿರುತ್ತದೋ ಗೊತ್ತಿಲ್ಲ ಎಂದ್ರು. ಆ ಸಿನಿಮಾದ ಎಲ್ಲಾ ಹಾಡುಗಳನ್ನು ತೆಗೆದುಕೊಂಡು ಬರುವುದು ಎಂದು ಯೋಚಿಸಿದೆವು.
‘ನಾದಮಯ’ ಎಂಬ ಹಾಡು ಎಂದು ಹೇಳಿದ. ಪಾರ್ವತಮ್ಮ ಅವರ ಸಹೋದರ ಗೋವಿಂದರಾಜು ಅವರನ್ನು ಕರೆಸಿ, ಅರುಣಾಚಲಂ ಸ್ಟುಡಿಯೊದವರು ಟೇಪ್ಗಳನ್ನು ಎಲ್ಲಿ ಇಟ್ಟಿದ್ದಾರೆ ಎಂಬುದನ್ನು ತಿಳಿದಿಕೊ. ಹಾಡಿದ್ದರೆ ತೆಗೆದುಕೊಂಡು ಬಾ ಅಂದ್ರು. ಅವರು ಸೀದಾ ಮದ್ರಾಸ್ಗೆ ಹೋದ್ರು. ಅಲ್ಲಿ ಹೋದ್ರು ಕೇಳಿದ್ರೆ, ಎಲ್ಲಾ ಟೇಪ್ಗಳನ್ನು ಗೋಡನ್ನಲ್ಲಿ ಬಿಸಾಕಿದ್ದೇವೆ. ಎಲ್ಲ ತುಕ್ಕು ಹಿಡಿದು ಹೋಗಿದೆ. ಅಲ್ಲಿ ನೋಡಿ, ನಿಮಗೆ ಯಾವುದು ಬೇಕೋ ಅದನ್ನು ತೆಗೆದುಕೊಂಡು ಹೋಗಿ ಅಂದ್ರು. ಗೋಡನ್ ಒಳಗೆ ಹೋಗಿ ಹುಡುಕಿದ್ರೆ ಎಲ್ಲೂ ಸಿಗುತ್ತಿರಲಿಲ್ಲ. ತುಂಬಾ ಹೊತ್ತು ಹುಡುಕಿದ ಮೇಲೆ ಈ ಹಾಡಿನ ಟೇಪ್ ಸಿಕ್ತು. ಬೂಸ್ಟ್ ಹಿಡಿದುಬಿಟ್ಟಿತ್ತು. ತಕ್ಷಣ ಪ್ರಸಾದ್ ಲ್ಯಾಬ್ಗೆ ಕಳುಹಿಸಿದೆವು. ಅಲ್ಲಿ ಅದನ್ನು ಸ್ವಚ್ಛ ಮಾಡಿದ್ರು. ಆಮೇಲೆ ಕೇಳಿದ್ರೆ, ಹಾಡು ಫಸ್ಟ್ಕ್ಲಾಸ್ ಆಗಿತ್ತು.
ಆ ಹಾಡಿನ ಮ್ಯೂಸಿಕ್ ಡೈರೆಕ್ಟರ್ ರಂಗರಾವ್. ಅದನ್ನು ಹೇಗೆ ಈ ಸಿನಿಮಾಕ್ಕೆ ಹಾಕುವುದು ಎಂಬ ಯೋಚನೆಯಾಯ್ತು. ನೀವು ಹಾಕಿ ಪರ್ವಾಗಿಲ್ಲ ಎಂದು ಪಾರ್ವತಮ್ಮ ಅವರು ಧೈರ್ಯ ಕೊಟ್ಟರು. ರಂಗರಾವ್ ಮಾಡಿದ ಹಾಡನ್ನು ಉಪೇಂದ್ರ ಕುಮಾರ್ ನಿರ್ದೇಶನಕ್ಕೆ ಹಾಕಿದ್ರೆ ತಪ್ಪಾಗುತ್ತದೆ ಅಲ್ವಾ ಎಂದೆ. ನೀವು ಹಾಕಿ ಉಪೇಂದ್ರ ಕುಮಾರ್ಗೆ ನಾನು ಹೇಳ್ತೇನೆ ಅಂದ್ರು. ವರದಪ್ಪ ಕೂಡ ಹಾಗೆಯೇ ಅಂದ್ರು. ಟೇಪ್ನಲ್ಲಿ ಅಲ್ಲಲ್ಲಿ ಫಂಗಸ್ ಹಿಡಿದಿದ್ದರಿಂದ ಮಧ್ಯೆ, ಮಧ್ಯೆ ಸ್ವಲ್ಪ ಸಮಸ್ಯೆಯಾಗುತ್ತಿತ್ತು. ಪ್ರಸಾದ್ ಥಿಯೇಟರ್ಗೆ ಕಳುಹಿಸಿ, ರಿರೆಕಾರ್ಡ್ ಮಾಡಿಸಿ, ಸರಿ ಮಾಡಿಸಿದ್ದೇವು. 9 ನಿಮಿಷದ ಹಾಡದು.
ಮುಂದುವರೆಯುವುದು...