ಭಾರತದಲ್ಲಿ ಮಾಡಿದ ಮೊದಲ ಅಂಡರ್‌ ವಾಟರ್ ಶೂಟಿಂಗ್‌. ಅಲ್ಲಿ ನಾನು ಸಹಾಯಕನಾಗಿದ್ದೆ

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 134

(ಶಂಕರ್ ನಾಗ್ ಅವರ‌ ಒಡನಾಡಿ‌ ಬಿ.ಸುರೇಶ ಅವರ ನೆನಪುಗಳು)
ಮಾಲ್ಗುಡಿಯಲ್ಲಿ ಜಾನ್ ದೇವರಾಜ್ ಜೊತೆಯಲ್ಲಿ ಕೆಲವು ಶಿಶ್ಯರು ಕೂಡ ಇರ್ತಿದ್ರು, ನಾನೂ ಫೈನ್ ಆರ್ಟ್ಸ ಕಲ್ತಿದ್ದರಿಂದ ಅವ್ರಿಗೆ ಸಹಾಯ ಮಾಡ್ತಿದ್ದೆ. ಹಾಗಾಗಿ ಮಾಲ್ಗುಡಿ ಡೇಸ್ ಒಂದು ಅಪರೂಪದ ಅನುಭವ ಆಮೇಲೆ ಎರಡು ಮೂರು ಎಪಿಸೋಡ್ ಗೆ ನಾನು ಆಗುಂಬೆಗೆ ಜಾನ್ ದೇವರಾಜ್ ಜೊತೆಯಲ್ಲಿ ಹೋಗಿದ್ದೆ. ಅದ್ರಲ್ಲಿ ವಿಶಿಷ್ಟ ಅಂದ್ರೆ, ಲೊಕೇಶನ್ ನೋಡಕ್ಕೆ ಹೋದಾಗ ಅಲ್ಲಿ ಒಂದು ಫಾಲ್ಸ್ ಹರೀತಾ ಇತ್ತಂತೆ, ಶೂಟಿಂಗ್ ಮಾಡಕ್ಕೆ ಹೋದಾಗ ಆ ಫಾಲ್ಸ್ ಹರೀತಾ ಇರ್ಲಿಲ್ಲ. ಹಂಗಾಗಿ ಶಂಕರ್ “ ಏನ್ಮಾಡೋದು ಜಾನ್ ನೀರೇ ಇಲ್ಲ, ನಮಿಗೆ ಬ್ಯಾಕ್ ಗ್ರೌಂಡಲ್ಲಿ ಫಾಲ್ಸ್ ಬೇಕೇ ಬೇಕು” ಅಂದ್ರು. ಅಂಡರ್ ವಾಟರ್ನಿಂದ ಯಾವುದೋ ವಿಗ್ರಹ ಎತ್ಕೊಂಡು ಬರೋದು ಆ ತರಹದ ಕತೆ ಅದು. ಅದ್ರಲ್ಲಿ ಬ್ಯಾಕ್ ಗ್ರೌಂಡಲ್ಲಿ ಫಾಲ್ಸ್ ಬೇಕೇಬೇಕು ಅಂದ್ರು.


ನಾವು ಪಕ್ಕದ ಹಳ್ಳಿಗಳಿಂದ ಎತ್ತಿನ ಗಾಡಿಗಳಲ್ಲಿ ಎಂಟೆಂಟು ಡ್ರಮ್ ಗಳಲ್ಲಿ ನೀರು ತುಂಬಿಸಿಕೊಂಡು ತಂದು, ಅಲ್ಲಿ ಮೇಲೆ ಫಾಲ್ಸ್ ಇದ್ದ ಜಾಗದಲ್ಲೇ ಪ್ಲೈವುಡ್ ಗಳಲ್ಲಿ ನೀರನ್ನು ಬ್ಲಾಕ್ ಮಾಡಿ ತುಂಬಿಸಿಡುವುದು. ಅವ್ರು ಆಕ್ಷನ್ ಅಂತ ಹೇಳಿದ ತಕ್ಷಣ ಪ್ಲೈವುಡ್ ತಗಿತಾ ಇದ್ವಿ, ಆಗ ನೀರು ಹರ್ಕೊಂಡು ಹೋಗಿ ಫಾಲ್ಸ್ ಕ್ರಿಯೇಟ್ ಆಗ್ತಿತ್ತು. ಆಮೇಲೆ ಅಂಡರ್ ವಾಟರ್ ಶೂಟಿಂಗ್ ಮಾಡೋದಕ್ಕಾಗಿ ಒಂದು ಗ್ಲಾಸ್ ಬಾಕ್ಸ್ ಮಾಡಿದ್ವಿ. ಅದ್ರಲ್ಲಿ ಎಸ್,ರಾಮಚಂದ್ರ ಅವ್ರೂ ಕೂಡ ಇದ್ರು. ಅವ್ರು ನನಿಗೆ ಬಾಲ್ಯದಿಂದಲೇ ನಾನು ಬಾಲನಟನಾಗಿದ್ದಾಗದಿಂದಲೇ ಪರಿಚಯ. ಮತ್ತೆ ನಾವು ಮಾಡಿದ್ದ ನಾಟಕಗಳ ಫೋಟೋ ಕೂಡ ತೆಗೆದಿದ್ದರು. ಅವ್ರು ಒಂಥರಾ ಮನೆಯವರ ಹಾಗೇ ಇದ್ದರು. ಸೋ ಅವ್ರೂ ಕೂಡ ಐಡಿಯಾ ಕೊಡ್ತಾ ಇದ್ರು.


ನಾವು ಒಂದು ಅಕ್ವೇರಿಯಮ್ ನ ಐಡಿಯಾ ಇಟ್ಕೊಂಡು ಮಾಡಿದ್ವಿ. ಅದರೊಳಗಡೆ ಇಷ್ಟೊಂದು ಜನ ನೀರಿಗೆ ಇಳ್ದಾಗ ಪ್ರಷರ್ ಏನಾಗುತ್ತೆ ಅನ್ನೋದು ನಮಿಗೂ ಐಡಿಯಾ ಇರ್ಲಿಲ್ಲ. ಜಾನ್ ದೇವರಾಜ್ ಸಿವಿಲ್ ಇಂಜಿನಿಯರ್, ನಾನು ಸಿರಾಮಿಕ್ ಇಂಜಿನಿಯರ್. ಇನ್ನೂ ಕೆಲವು ಇಂಜಿನಿಯರ್ ಗಳು ಇದ್ರೇನೋ, ನಾವು ನಮ್ಮ ತಿಳುವಳಿಕೆಯಲ್ಲಿ ಏನು ಮಾಡಬಹುದೋ ಅದನ್ನ ಮಾಡಿದ್ವಿ. ಅದು ನಮ್ಮ ಅದೃಷ್ಟಕ್ಕೆ ಬಹಳ ಅದ್ಭುತವಾಗಿ ಬಂದ್ಬಿಡ್ತು. ಮತ್ತೆ ಅದ್ರಲ್ಲಿ ಒಳಗೆ ಹೋಗಿ ಕಲ್ಲು ಬದಲಾಯಿಸಿ ಹಾಗೇ ಮಲ್ಟಿಪಲ್ ಶಾಟ್ಗಳನ್ನು ಕೂಡ ತಗೊಂಡಿದ್ವಿ. ಕ್ಯಾಮರಾ ಮುಂದೆ ನೀರು ತಗೊಂಡುಹೋಗಿ ಬಿಡೋದು, ಏನೇನೆಲ್ಲಾ ಮಾಡಿದ್ವಿ.

ಮುಂದುವರೆಯುವುದು…

24 views