ಮಕ್ಕಳಿಗೆ ಮದ್ವೆ ಮಾಡದೆ ಸಿನಿಮಾಗೆ ಕಳಿಸಬೇಡ ಅಂದಿದ್ರು ಅಣ್ಣಾವ್ರು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 25


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ದೊರೆ ಭಗವಾನ್‌ ಜೋಡಿಯ ಸಕ್ಷಸ್ ಗೆ ಕಾರಣ

‘ಯಾರಿವನು’ ಆದ ಮೇಲೆ ರಾಜ್‌ಕುಮಾರ್‌ ಅವರು ಹೆಚ್ಚಾಗಿ ಸಿನಿಮಾಗಳಲ್ಲಿ ನಟಿಸುತ್ತಿರಲಿಲ್ಲ. ತರಾಸು ಅವರ ‘ಬಿಡುಗಡೆಯ ಬೇಡಿ’ ಕಾದಂಬರಿ ಓದಿದೆವು. ಕಥೆ ಚೆನ್ನಾಗಿತ್ತು. ಅನಂತ್‌ನಾಗ್‌ ಮತ್ತು ಲಕ್ಷ್ಮೀ ಅವರನ್ನು ಹಾಕಿಕೊಂಡು ಆ ಸಿನಿಮಾವನ್ನು ತೆಗೆದೆವು. ಅದು ಬಹಳ ಯಶಸ್ಸು ಗಳಿಸಿತು. ನಾವು ಮಾಡಿದ ಸಿನಿಮಾಗಳು ಸೋಲನ್ನೇ ಕಂಡಿಲ್ಲ. ಅನೇಕ ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರಿಂದ ನಮಗೂ, ಲಕ್ಷ್ಮೀಗೂ ನಿಕಟವಾದ ಸಂಬಂಧ ಇತ್ತು. ನಮ್ಮ ಕೆಲಸದ ರೀತಿ ಆಕೆಗೆ ಗೊತ್ತಿತ್ತು. ಹಾಗಾಗಿ, ಆಕೆ ನಾನೊಂದು ಪಿಕ್ಚರ್‌ ಪ್ರೊಡ್ಯೂಸ್ ಮಾಡೋಣ ಅಂತಿದ್ದೀನಿ, ನೀವು ನಿರ್ದೇಶನ ಮಾಡುತ್ತೀರಾ ಎಂದು ನಮ್ಮನ್ನು ಕೇಳಿದಳು. ನಾವು ಹೇಳಿದ ಸಿನಿಮಾಗಳಲ್ಲೆಲ್ಲ ನಟಿಸಿದ್ದೀಯಾ, ಇನ್ನು ನೀನು ಹೇಳಿದ ಸಿನಿಮಾವನ್ನು ನಾವು ಡೈರೆಕ್ಟ್‌ ಮಾಡಲ್ಲ ಅಂತೀವಾ ಎಂದು ಕೇಳಿದೆವು. ಆಕೆ, ಸಂತೋಷದಲ್ಲಿ ಕುಳಿದು ಬಿಟ್ಟಿದ್ದಳು. ಯಾವುದಾದರೂ ಕಥೆ ಆರಿಸಿ ಎಂದಳು. ತರಾಸು ಅವರ ‘ಸೇಡಿನ ಹಕ್ಕಿ’ ಕಾದಂಬರಿಯನ್ನೇ ಆರಿಸಿದೆವು.


‘ಬಿಡುಗಡೆಯ ಬೇಡಿ’ ಸಿನಿಮಾ ಮಾಡುವಾಗ ಉದಯಶಂಕರ್‌ ನಮ್ಮ ಕೈಗೆ ಸಿಗಲಿಲ್ಲ. ಆತ ಬೇರೆ, ಬೇರೆ ಸಿನಿಮಾಗಳಲ್ಲಿ ಬಹಳ ಬ್ಯುಸಿ ಆಗಿಬಿಟ್ಟ. ಒಂದು ತಿಂಗಳು ಆದ ಮೇಲೆ ಸಂಭಾಷಣೆ ಬರೆದುಕೊಟ್ತೀನಿ ಎಂದ. ಅಷ್ಟೊತ್ತು ಕಾಯಲು ನಮಗೆ ಸಮಯ ಇರಲಿಲ್ಲ. ಆಗ ನಮಗೆ ಬಿ.ಎಲ್‌ ವೇಣು ಅವರು ನೆನಪಾದ್ರು. ಅವರ ಕಥೆ ಓದಿದ್ದೆವು. ಅವರು ಬಹಳ ಚೆನ್ನಾಗಿ ಬರೆಯುತ್ತಿದ್ರು. ಈಗ ಅವರು ಇನ್ನಷ್ಟು ಜನಪ್ರಿಯರಾಗಿದ್ದು, ಬಹಳಷ್ಟು ಮಂದಿ ಅವರ ಹತ್ತಿರ ಕಥೆ ಬರೆಸುತ್ತಿದ್ದಾರೆ. ನಮ್ಮ ಸಿನಿಮಾಗಳಲ್ಲಿ ಮಾಡಿರುವವರೆಲ್ಲ ಉನ್ನತ ಸ್ಥಾನಕ್ಕೆ ಹೋಗಿದ್ದಾರೆ. ಇದಕ್ಕಿಂತ ತೃಪ್ತಿ ಇನ್ನೊಂದಿಲ್ಲ. ರಾಜ್‌ಕುಮಾರ್‌, ರಾಜನ್‌–ನಾಗೇಂದ್ರ, ಉದಯ್‌ಕುಮಾರ್‌, ಕಲ್ಪನಾ, ಭಾರತಿ, ಜಯಂತಿ, ವೆಂಕಟೇಶ್‌... ಎಲ್ಲರೂ ಅತ್ಯುನ್ನತ ಮಟ್ಟದಲ್ಲಿದ್ದವರೇ. ನಮ್ಮ ಸಹವಾಸದ ಫಲವೇನು ಗೊತ್ತಿಲ್ಲ.


ಕುಮಾರ್‌ ಬಂಗಾರಪ್ಪ ಅವರ ಸಿನಿಮಾ ರಂಗ ಪ್ರವೇಶ

ಸಿನಿಮಾ ರಂಗಕ್ಕೆ ಬರುವ ಮೊದಲೇ ಮಕ್ಕಳಿಗೆ ಮದುವೆ ಮಾಡಬೇಕು ಎಂಬುದು ರಾಜ್‌ಕುಮಾರ್ ಅವರ ನಿಯಮವಾಗಿತ್ತು. ಇಲ್ಲದಿದ್ರೆ ಅವರು ಸಿನಿಮಾ ರಂಗದಲ್ಲಿಯೇ ಯಾರನ್ನಾದರೂ ಇಷ್ಟಪಟ್ಟರೆ ನಮಗೆ ಬೇಡ ಎನ್ನಲು ಆಗುವುದಿಲ್ಲ. ಆಗ ತಮ್ಮ ಇಷ್ಟದಂತೆ ಮದುವೆ ಮಾಡಲು ಆಗುವುದಿಲ್ಲ. ಹಾಗಾಗಿ ಹೆಣ್ಣು ಹುಡುಕಿ ಮದುವೆ ಮಾಡಿ ನಂತರ ಸಿನಿಮಾ ರಂಗಕ್ಕೆ ಕಳುಹಿಸಬೇಕು. ಆಗ ಯಾವ ರೀತಿಯ ಅಪವಾದ ಬರುವುದಕ್ಕೂ ಅವಕಾಶ ಇರುವುದಿಲ್ಲ. ನಮ್ಮ ಮಕ್ಕಳು ನಮ್ಮ ಹಿಡಿತದಲ್ಲಿಯೇ ಇರುತ್ತಾರೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಹಾಗಾಗಿಯೇ ಬಂಗಾರಪ್ಪ ಅವರ ಮಗಳು ಗೀತಾ ಅವರನ್ನು ಶಿವರಾಜ್‌ಕುಮಾರ್‌ ಅವರಿಗೆ ಮದುವೆ ಮಾಡಿಸಿದ್ರು. ನಂತರವೇ ಶಿವರಾಜ್‌ಕುಮಾರ್‌ ಸಿನಿಮಾ ರಂಗ ಪ್ರವೇಶಿಸಿದ್ದು. ಮೂರು ಮಕ್ಕಳಿಗೂ ಹಾಗೆಯೇ ಮಾಡಿದ್ರು. ಗೀತಾ ಅವರ ಸಹೋದರ ವಸಂತ್‌ ಎಂದು. ಬಂಗಾರಪ್ಪ ಅವರ ಮೊದಲನೇ ಮಗ ವಸಂತ್‌ (ಕುಮಾರ್‌ ಬಂಗಾರಪ್ಪ ). ಪಾರ್ವತಮ್ಮ ಅವರು, ಗೀತಾ ಅಣ್ಣ ತುಂಬಾ ಚೆನ್ನಾಗಿದ್ದಾನೆ ಅವನಿಗೊಂದು ಕಥೆ ಮಾಡಿ ಅಂದ್ರು. ‘ವಿಜಯೋತ್ಸವ’ ಕಥೆ ಮಾಡಿದೆವು. ಆಗ ಕುಮಾರ್‌ ಬಂಗಾರಪ್ಪ ಪರಿಚಯವಾಯ್ತು. ತುಂಬಾ ಒಳ್ಳೆಯ ಮನುಷ್ಯ. ರಾಜ್‌ಕುಮಾರ್‌ ಅವರ ಕುಟುಂಬಕ್ಕೆ ಅಂಟಿಕೊಳ್ಳುವವರೆಲ್ಲ ಒಳ್ಳೆಯವರೇ ಆಗಿರುತ್ತಾರೆ. ಬಂಗಾರಪ್ಪ ಅವರು ಜೀವನದಲ್ಲಿ ನಿಜವಾಗಿಯೂ ಬಂಗಾರಪ್ಪನೇ. ರಾಜ್‌ಕುಮಾರ್‌ ಬೀಗರಾದ್ದರಿಂದ ಅವರನ್ನು ಹತ್ತಿರದಿಂದ ನಾನು ಬಲ್ಲೆ.


ವಿಜಯೋತ್ಸವ ಮುಗಿದ ಮೇಲೆ ಜಯಲಕ್ಷ್ಮೀ ಅವರ ಕಾದಂಬರಿ ಗಗನವನ್ನು ಸಿನಿಮಾ ಮಾಡಲು ತಯಾರಾದೆವು. ಖುಷ್ಬು ಮತ್ತು ಮಹಾಲಕ್ಷ್ಮೀಯನ್ನು ಮದ್ರಾಸ್‌ನಿಂದ ಕರೆಸಿದೆವು. ಖುಷ್ಬುಗೆ ಒಳ್ಳೆಯ ಮಾರ್ಕೆಟ್‌ ಇತ್ತು. ಆದರೆ, ಆಕೆಗೆ ಕನ್ನಡ ಬರುತ್ತಿರಲಿಲ್ಲ. ಎಲ್ಲ ಡೈಲಾಗನ್ನು ಹಿಂದಿಯಲ್ಲಿ ಬರೆದುಕೊಟ್ಟು, ಓದುತ್ತಿದ್ದೆ. ಎರಡು, ಮೂರು ಸಲ ಆಕೆಯೂ ಓದಿ, ಚೆನ್ನಾಗಿ ಡೈಲಾಗ್‌ ಹೇಳುತ್ತಿದ್ದಳು. ಮಹಾಲಕ್ಷ್ಮೀ ಒಳ್ಳೆಯ ಕಲಾವಿದೆ. ಯಾವ ಕಿರಿಕ್‌ ಮಾಡುತ್ತಿರಲಿಲ್ಲ. ಅಚ್ಚುಕಟ್ಟಾಗಿ ಕೆಲಸ ಮಾಡಿಕೊಟ್ಟು ಹೋಗುತ್ತಿದ್ದಳು.


ಚಿಟ್ಟಿ ನಾಯ್ದು ಮದ್ರಾಸ್‌ನಲ್ಲಿ ಬ್ಯುಸಿ ಆಗಿದ್ದ. ಗೌರಿಶಂಕರ್‌ ಇಲ್ಲಿಯೇ ಬೇರೆ ಯಾವುದೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದ. ಆಗ ದೊರೆಯವರಿಗೆ ಹೊಳೆದ ವ್ಯಕ್ತಿ ಜೆ.ಜಿ ಕೃಷ್ಣ. ಆತ ಒಳ್ಳೆಯ ಕೆಲಸಗಾರ ಎಂಬುದು ಗೊತ್ತಿತ್ತು. ಅವನನ್ನು ಕರೆದು, ಪಿಕ್ಚರ್‌ ಮಾಡ್ತೀಯಾ ಎಂದು ಕೇಳಿದೆವು. ಅವನೆಷ್ಟು ಚುರುಕು ಎಂದ್ರೆ, ಶಾಟ್‌ ಹೇಳಿ, ಆರ್ಟಿಸ್ಟ್‌ಗೆ ಡೈಲಾಗ್‌ ಹೇಳುವುದರೊಳಗೆ ನಾನು ರೆಡಿ ಸರ್‌, ಎನ್ನುತ್ತಿದ್ದ. ನಿನ್ನ ವೇಗವನ್ನು ತಲುಪಲು ನಮಗೆ ಸಾಧ್ಯವಾಗುತ್ತಿಲ್ಲ. ಎಷ್ಟು ಫಾಸ್ಟ್ ಕಣೋ ನೀನು ಅನ್ನುತ್ತಿದ್ದೆವು. ಅಷ್ಟೊಂದು ಚಾಣಾಕ್ಷತೆ ಇತ್ತು ಅವನಿಗೆ. ಇವತ್ತಿಗೂ ಅವನನ್ನು ಕಂಡರೆ ನನಗೆ ತುಂಬಾ ಇಷ್ಟ


ವಿಷ್ಣುವರ್ಧನ್‌ ಅವರ ಜೊತೆಗಿನ ಮೊದಲ ಸಿನಿಮಾ

ರಜಸ್ಸು ಫಿಲ್ಮ್ಸ್‌ನವರು ಮುತ್ತಿನ ಹಾರ ಸಿನಿಮಾ ತೆಗೆದ್ರು. ಅದರಿಂದ ನಮಗೆ ತುಂಬಾ ನಷ್ಟವಾಯ್ತು. ಆ ಸಿನಿಮಾಕ್ಕೆ ಸಿಕ್ಕಾಪಟ್ಟೆ ಖರ್ಚು ಮಾಡಿದ್ರು ಅವರು. ಖರ್ಚು ಬಂತು ಆದರೆ, ಲಾಭ ಬಂದಿರಲಿಲ್ಲ. ನಿರೀಕ್ಷೆಯ ಮಟ್ಟ ತಲುಪಿರಲಿಲ್ಲ. ರಜಸ್ಸು ಫಿಲ್ಮ್ಸ್‌ ಅವರು ಮುಂದಿನ ಸಿನಿಮಾಕ್ಕೆ ವಿಷ್ಣವರ್ಧನ್‌ ಕಾಲ್‌ ಶೀಟ್‌ ಕೇಳಿದ್ರು. ಮುತ್ತಿನ ಹಾರದಲ್ಲೂ ವಿಷ್ಣವರ್ಧನ್‌ ಅವರೇ ಹೀರೊ. ಆಯ್ತು ಕಾಲ್‌ಶೀಟ್‌ ಕೊಡ್ತೇನೆ. ನಷ್ಟ ಆಗಿದೆ ಎನ್ನುತ್ತಿದ್ದೀರಿ, ಹಾಗಾಗಿ ಸಂಭಾವನೆ ಕೊಡುವುದು ಬೇಡ ಎಂದು ವಿಷ್ಣವರ್ಧನ್‌ ಹೇಳಿದ್ರು. ಆ ಸಿನಿಮಾಕ್ಕಾಗಿ ನಿರ್ದೇಶಕರನ್ನು ಹುಡುಕುತ್ತಿದ್ರು, ಆಗ ಅವರಿಗೆ ನಮ್ಮ ಬಗ್ಗೆ ಗೊತ್ತಾಗಿ ನಮ್ಮ ಬಳಿ ಬಂದ್ರು. ವಿಷ್ಣವರ್ಧನ್‌ ಕಾಲ್‌ಶೀಟ್‌ ಇದೆ. ನೀವೊಂದು ಕಥೆ ಮಾಡಿ ನಮಗೊಂದು ಸಿನಿಮಾ ಮಾಡಿಕೊಡಿ ಎಂದು ಕೇಳಿದ್ರು. ಆಯ್ತು ಎಂದು ಹೇಳಿದೆವು.


ಹತ್ತಾರು ಕಾದಂಬರಿಗಳನ್ನು ಓದಿದೆವು. ಸರಿಯಾದ ಕಥೆಯೇ ಸಿಗಲಿಲ್ಲ. ನಂತರ ನಾನೇ ವಿಷ್ಣುವರ್ಧನ್‌ಗಾಗಿ ಕಥೆ ಮಾಡಿದೆ. ಉದಯ್‌ಶಂಕರ್‌ ಅದ್ಭತವಾದ ಡೈಲಾಗ್‌ ಬರೆದುಕೊಟ್ಟ. ಮ್ಯೂಸಿಕ್‌ ಯಾರಿಗೆ ಕೊಡಬೇಕು ಎಂದು ಯೋಚಿಸಿದಾಗ ರಜಸ್ಸು ಫಿಲ್ಮ್ಸ್‌ನವರು ಹಂಸಲೇಖ ಅವರಿಗೆ ಕೊಡಲು ಹೇಳಿದ್ರು. ಮೊದಲು ನಾವು ರಾಜನ್‌– ನಾಗೇಂದ್ರ ಹೆಸರು ಹೇಳಿದೆವು. ಅವರು ಬೇಡ ಅಂದ್ರು.

ಈ ಸಿನಿಮಾ ಮಾಡುವ ಎರಡು ವರ್ಷದ ಹಿಂದೆ, ನಾವು ಬೆಂಗಳೂರಿಗೆ ಬರಲು ಮದ್ರಾಸ್‌ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದೆವು. ಆಗ ಹಂಸಲೇಖ ಅವರೂ ಬೆಂಗಳೂರಿಗೆ ಬರಲು ವಿಮಾನ ನಿಲ್ದಾಣಕ್ಕೆ ಬಂದ್ರು. ನಮ್ಮ ಬಳಿ ಬಂದ ಅವರು, ನಮಸ್ಕಾರ ಹೇಳಿ, ‘ನಿಮ್ಮ ಒಂದು ಸಿನಿಮಾದಲ್ಲಾದರೂ ಸಂಗೀತ ನಿರ್ದೇಶನ ಮಾಡಬೇಕೆಂಬ ಆಸೆಯಿದೆ’ ಎಂದು ಹೇಳಿದ್ರು. ಅವಕಾಶ ಬಂದರೆ ಮಾಡುವ ಬಿಡಿ ಎಂದು ನಾವು ಹೇಳಿದ್ದೆವು. ರಜಸ್ಸು ಕಂಬೈನ್ಸ್‌ನಿಂದ ಹಂಸಲೇಖ ಹೆಸರು ಬಂದಾಗ, ದಯವಿಟ್ಟು ಕರೆಸಿ ಅವರನ್ನು, ಅವರಿಗೂ ನಮ್ಮ ಜೊತೆಗೆ ಕೆಲಸ ಮಾಡುವ ಆಸೆಯಿದೆ ಎಂದು ಹೇಳಿದೆವು. ಆ ಸಿನಿಮಾದಲ್ಲಿ ಅದ್ಭುತವಾದ ಸಾಹಿತ್ಯ ಮತ್ತು ಮ್ಯೂಸಿಕ್‌ ಕೊಟ್ಟರು. ‘ನೀನು ನಕ್ಕರೆ ಹಾಲು ಸಕ್ಕರೆ’ ಸಿನಿಮಾದ ಎಲ್ಲ ಹಾಡುಗಳು ಹಿಟ್‌ ಆದವು.


ಸಂಗೀತಗಾರನಾಗಿ ನಾನು

ಕಾಲೇಜಿನ ಕಾರ್ಯಕ್ರಮಗಳಲ್ಲಿ ನಾನು ಸಾಮಾನ್ಯವಾಗಿ ಪಂಕಜ್‌ ಮಲ್ಲಿಕ್‌ ಹಾಡು ಹೇಳುತ್ತಿದ್ದೆ. ಹಿಂದಿ ಹಾಡುಗಳನ್ನು ಹಾಡಿದ್ರೆ ಕಾಲೇಜಿನಲ್ಲಿ ಅಷ್ಟೊಂದು ಮಜಾ ಇರುತ್ತಿರಲಿಲ್ಲ. ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿದ್ದೇನೆ. ನನ್ನ ಭಾವ ಮಲ್ಯ ಎಂದಿದ್ರು. ನನ್ನ ತಂಗಿ ಗಂಡ. ಅವರಿಗೆ ನಾಲ್ವರು ಅಕ್ಕಂದಿರಿದ್ರು. ಅವರಿಗಾಗಿ ನನ್ನನ್ನು ಕೂರಿಸಿ ಹಾಡು ಹೇಳಿಸುತ್ತಿದ್ರು. ಒಬ್ಬೊಬ್ಬರು ಒಂದೊಂದು ಹಾಡಿಗೆ ಬೇಡಿಕೆ ಇಡುತ್ತಿದ್ರು. ಕೇಳುಗರ ಕೋರಿಕೆ ಮೇಲೆ ಹಾಡುತ್ತಿದ್ದೆ. ಹಿಂದಿ ಹಾಡುಗಳನ್ನೇ ಯಾಕೆ ಹಾಡಬೇಕು ಎನಿಸಿದಾಗ, ಕಾಳಿಂಗ ರಾವ್ ಅವರ ಸುಗಮ ಸಂಗೀತವನ್ನು ಅಭ್ಯಾಸ ಮಾಡಿದೆ. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ‘ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ’, ‘ಯಾರು ಹಿತವರು ನಿನಗೆ ಈ ಮೂವರೊಳಗೆ’... ಈ ರೀತಿಯ ಹಾಡುಗಳನ್ನು ಕಲಿತುಕೊಂಡು ಕಾಲೇಜಿನಲ್ಲಿ ಜನಪ್ರಿಯವಾಗಿಬಿಟ್ಟೆ.


ಸೆಂಟ್ರಲ್‌ ಕಾಲೇಜಿನಲ್ಲಿ ರಾಮ್‌ ರಾವ್ ಎಂಬುವವನೊಬ್ಬ ಇದ್ದ. ಅವನಿಗೆ ಒಂದು ಕೈ ಇರಲಿಲ್ಲ. ಕೆ.ಎಲ್‌. ಸೈಗಲ್‌ ತರಹವೇ ಹಾಡುತ್ತಿದ್ದ. ನಾನು ಪಂಕಜ್‌ ಮಲ್ಲಿಕ್‌ ರೀತಿಯೇ ಹಾಡುತ್ತಿದ್ದೆ. ಇಬ್ಬರ ನಡುವೆ ಬಹಳ ಸ್ಪರ್ಧೆ ಇತ್ತು. ನಾನು ವಿಜಯ ಕಾಲೇಜಿನಲ್ಲಿದ್ದೆ. ನಾವಿಬ್ಬರೂ ಒಳ್ಳೆಯ ಸ್ನೇಹಿತನಾಗಿದ್ದೆವು. ಕನ್ನಡ ಹಾಡು ಹಾಡಲು ಶುರು ಮಾಡಿದ ಮೇಲೆ ನನಗೆ ಬೇಡಿಕೆ ಹೆಚ್ಚಾಯ್ತು. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡನ್ನು ಪ್ರಾರ್ಥನ ಗೀತೆಯಾಗಿ ಹಾಡಲು ಹಲವು ಕಾರ್ಯಕ್ರಮಗಳಿಗೆ ನನ್ನನ್ನು ಕರೆಸುತ್ತಿದ್ರು.


ಈ ಸಿನಿಮಾದ ಮೂಲಕ ನಮ್ಮ ಮತ್ತು ರಜಸ್ಸು ಅವರ ಬಂಧ ಗಟ್ಟಿಯಾಯಿತು. ಮುತ್ತಿನ ಹಾರದಲ್ಲಿ ಕಳೆದುಕೊಂಡಿದ್ದ ಹಣದ ಜೊತೆಗೆ ಸಾಕಷ್ಟು ಲಾಭ ಅವರಿಗೆ ಬಂತು. ನಮಗೂ ಕೈತುಂಬ ದುಡ್ಡು ಕೊಟ್ಟರು. ‘ನೀನು ನಕ್ಕರೆ ಹಾಲು ಸಕ್ಕರೆ’ ಯಲ್ಲಿ ವಿನಯ ಪ್ರಕಾಶ್‌ ಪಾತ್ರ ಅದ್ಭುತವಾಗಿತ್ತು. ಉದಯಶಂಕರ್‌ ಸೃಷ್ಟಿ ಅದು. ನಾನು ಬರೆದ ಕಥೆಯಲ್ಲಿ ಆ ಪಾತ್ರ ಇತ್ತು. ಆದರೆ, ಉದಯಶಂಕರ್‌ ಆಕೆಯನ್ನು ‘ಸಿನಿಮಾ ಹುಚ್ಚಿ’ ಎನ್ನುವಂತೆ ಬಿಂಬಿಸು ಎಂದ. ನಾನೇ ಆ ಪಾತ್ರದ ಕಥೆ ಬರೆಯುತ್ತೇನೆ ಎಂದ. ಬರಿ ಎಂದು ನಾನು ಹೇಳಿದೆ. ‘ಬಾರೋ ಸಂತೆಗೆ ಹೋಗೋಣ ಬಾ... ಅದ್ಭುತವಾದಂತಹ ಹಾಡದು. ಹಂಸಲೇಖ ಅವರು ಸಾಹಿತ್ಯ, ಸಂಗೀತ ಕ್ಷೇತ್ರದ ಇನ್ನೊಬ್ಬ ಸೂಪರ್‌ ಮ್ಯಾನ್‌.


ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದು ಸಿನಿಮಾಕ್ಕೆ ಒಬ್ಬ ಮ್ಯೂಸಿಕ್‌ ಡೈರೆಕ್ಟರ್‌ ಎಂಬಂತಾಗಿದೆ. ಇಂದಿನ ಸಂಗೀತ ನಿರ್ದೇಶಕರ ಹೆಸರೇ ನನಗೆ ಜ್ಞಾಪಕ ಬರುವುದಿಲ್ಲ. ಅರ್ಜುನ್‌ ಜನ್ಯ, ಸಾಧು ಕೋಕಿಲ, ಗುರುಕಿರಣ್‌... ಹೀಗೆ ಮೂರ್ನಾಲ್ಕು ಜನರ ಹೆಸರು ಬಿಟ್ರೆ. ಮಿಕ್ಕವರ ಹೆಸರು ನೆನಪಿಗೆ ಬರುವುದೇ ಇಲ್ಲ. ಆಗ ನಾಲ್ಕೈದು ಜನ ಇರುತ್ತಿದ್ರು. ಆ ಸಿನಿಮಾಕ್ಕೆ ಹಂಸಲೇಖ ಜೀವ ತುಂಬಿದ್ರು. ಎರಡನೆಯದಾಗಿ ವಿನಯ ಪ್ರಕಾಶ್‌ ಪಾತ್ರ ಸಿನಿಮಾದ ಆಕರ್ಷಣೆ. ಆಕೆ ಆ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದಳು. ಅಷ್ಟು ಜನ ಹುಡುಗಿಯರಲ್ಲಿ ಎಲ್ಲರ ನೆನಪಿನಲ್ಲಿ ಉಳಿದಿದ್ದು ವಿನಯ ಪ್ರಕಾಶ್‌. 26 ದಿವಸ ಶೂಟಿಂಗ್‌ ಮಾಡಿದ್ದೆವು. ನಾವು 30– 35 ದಿವಸ ಶೂಟಿಂಗ್‌ ಮಾಡಿದ್ದು ತೀರ ವಿರಳ.
ಮುಂದುವರಿಯುವುದು...

17 views