“ಮದರಾಸಿನಲ್ಲಿ ಅಣ್ಣಾವ್ರ ಜೀವನ ಎಷ್ಟು ಕಷ್ಟದಲ್ಲಿತ್ತು ಅಂದ್ರೆ?”

ದೊರೆ-ಭಗವಾನ್‌ ಲೈಫ್‌ ಸ್ಟೋರಿ - ಭಾಗ 3


(ಎಸ್.ಕೆ ಭಗವಾನ್‌ನಿರೂಪಣೆಯಲ್ಲಿ)


ಯಾಕೋ ಈಗಿನ ಕಾಲದಲ್ಲಿ ಪುರಾಣ ಕಥೆಗಳೇ ಬರುತ್ತಿವೆ. ಇದು ಬೇಡ ಸಾಮಾಜಿಕ ಕಥೆ ಕುರಿತ ಚಿತ್ರ ನಿರ್ಮಿಸಬೇಕು ಎಂದು ಯೋಚನೆ ಬಂದಾಗ ತಯಾರಾಗಿದ್ದೇ ’ಭಾಗ್ಯೋದಯ’ ಸಿನಿಮಾ. ಉದಯ ಪ್ರೊಡಕ್ಷನ್‌ ಅವರ ಬ್ಯಾನರ್‌ನಲ್ಲಿ ಸಿನಿಮಾ ತಯಾರಾಯಿತು. ಆ ಸಿನಿಮಾಕ್ಕೆ ಯಾರನ್ನು ಹೀರೊ ಮಾಡುವುದು ಎಂಬ ಚರ್ಚೆ ಆರಂಭವಾಯ್ತು. ಆಗ ಪ್ರಭಾಕರ್‌ ಶಾಸ್ತ್ರಿ ಅವರು, ಮಂಡ್ಯದಲ್ಲಿ ಗುಬ್ಬಿ ಕಂಪನಿಯ ನಾಟಕ ನಡೆಯುತ್ತಿದೆ. ಅಲ್ಲಿ ಬುದ್ಧನ ಪಾತ್ರ ಮಾಡುತ್ತಿರುವವನನ್ನು ನೋಡಿ, ಒಪ್ಪಿಗೆಯಾದ್ರೆ ಕರೆದುಕೊಂಡು ಬರೋಣ ಅಂದ್ರು.
ನಾನು ಭೀಮರಾವ್ ಮಂಡ್ಯಕ್ಕೆ ಹೋದೆವು. ಪ್ರೊಡಕ್ಷನ್‌ಗೆ ಭೀಮರಾವ್ ಇನ್‌ಚಾರ್ಚ್‌ ಆಗಿದ್ದ. ನಾಟಕ ನೋಡಿದ್ವಿ. ಬುದ್ಧನ ಪಾತ್ರದಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದ. ನಿನಗೆ ಸಿನಿಮಾದಲ್ಲಿ ಮಾಡಲು ಇಷ್ಟ ಇದೆಯಾ ಎಂದು ಅವನಿಗೆ ಕೇಳಿದ್ವಿ. ಅವನು ತಕ್ಷಣವೇ ನನ್ನ ಕಾಲು ಹಿಡಿದುಕೊಂಡ. ನನಗೊಂದು ಚಾನ್ಸ್‌ ಕೊಡಿಸಿ ಸರ್‌, ನಾನು ರಾಜ್‌ಕುಮಾರ್‌ ಅವರ ಹಾಗೆ ಆಗಿ ಬಿಡುತ್ತೇನೆ ಎಂದ. 54ನೇ ಇಸವಿಯದು. ಆಗ ರಾಜ್‌ಕುಮಾರ್‌ ಅವರು ಬೇಡರ ಕಣ್ಣಪ್ಪ ಸಿನಿಮಾ ಮಾಡಿದ್ರು. ಅವರಿಗೆ ಒಳ್ಳೆಯ ಹೆಸರಿನ ಜೊತೆ ಜನಪ್ರಿಯತೆ ಬಂದಿತ್ತು. ಅವನಿಗೆ ಸರಿ, ನಾಳೆ 12 ಗಂಟೆಗೆ ನಮ್ಮ ಆಫೀಸ್‌ಗೆ ಬಾ ಎಂದು ನಮ್ಮ ಆಫೀಸ್‌ ನಂಬರ್‌ ಕೊಟ್ಟು ಬಂದ್ವಿ. 10.45 ಗಂಟೆಗೆ ಆಫೀಸ್‌ ಮುಂದೆ ಕಾಯುತ್ತಿದ್ದ. ಇನ್ನು ಕಚೇರಿಯ ಬಾಗಿಲು ತೆರೆದಿರಲಿಲ್ಲ.ಪ್ರಭಾಕರ ಶಾಸ್ತ್ರಿಗಳು ಪ್ರೊಡ್ಯೂಸರ್‌ ಜೊತೆಯಲ್ಲಿ ಬಂದ್ರು. ಅವನನ್ನು ಮೇಲೆ ಕಳಿಸಿ ಎಂದ್ರು. ಅವನು ಹೋದ. ಅವರು ಅವನಿಗೆ ಎರಡು, ಮೂರು ಡೈಲಾಗ್‌ ಕೊಟ್ರು. ಅವನು ನಾಟಕದವನಾದ್ದರಿಂದ ಸರಾಗವಾಗಿ ಹೇಳಿದ. ಇವನನ್ನು ಹೀರೊ ಆಗಿ ಫೈನಲ್‌ ಮಾಡಿ ಎಂದ್ರು. ಅವನಿಗೆ ಅಲ್ಲಿಯೇ ಸಾವಿರ ರೂಪಾಯಿ ಅಡ್ವಾನ್ಸ್‌ಕೊಟ್ರು. 3 ಸಾವಿರ ಅವನ ಸಂಭಾವನೆ ನಿಗದಿ ಮಾಡಿದ್ರು. ಅವನ ಹೆಸರು ಸೂರ್ಯನಾರಾಯಣ ಶಾಸ್ತ್ರಿ. ಪ್ರಭಾಕರ ಶಾಸ್ತ್ರಿ ಅವರು ಇಷ್ಟು ಉದ್ದ ಹೆಸರು ಚೆನ್ನಾಗಿ ಅನಿಸಲ್ಲ. ಮುತ್ತುರಾಜ್‌ ಹೆಸರನ್ನು ರಾಜ್‌ಕುಮಾರ್‌ ಅಂಥ ಮಾಡಿಲ್ವಾ. ಹಾಗೆ ನಿನಗೂ ಹೆಸರು ಬದಲಾಯಿಸಿದ್ರೆ ಚೆನ್ನಾಗಿರುತ್ತದೆ ಅಂದ್ರು. ಏನಾದ್ರೂ ಹೆಸರು ಬದಲಾಯಿಸಿ ನಿಮಿಷ್ಟ ಎಂದ. ಅವನಿಗೆ ಆ್ಯಕ್ಟ್‌ ಮಾಡಲು ಕೊಟ್ಟರೆ ಸಾಕು ಎಂಬಂತೆ ಇತ್ತು. ಯೋಚನೆ ಮಾಡಿ ಉದಯ ಪ್ರೊಡಕ್ಷನ್ಸ್ ಲಾಂಛನ ಮತ್ತು ಭಾಗ್ಯೋದಯ ಸಿನಿಮಾಕ್ಕೆ ಹೊಂದುವಂತೆ ಉದಯ್‌ಕುಮಾರ್‌ ಎಂದು ಹೆಸರಿಟ್ರು. ಉದಯ್ ಕುಮಾರ್‌ ಮೊದಲ ಪಿಕ್ಚರ್‌ ಭಾಗ್ಯೋದಯ.

ಮಾಣಿಕ್ಯಂ ಎನ್ನುವವರನ್ನು ಸಿನಿಮಾದ ನಿರ್ದೇಶಕರಾಗಿ ಆಯ್ಕೆ ಮಾಡಿದ್ರು. ಮದ್ರಾಸ್‌ ಸ್ಟುಡಿಯೊದಿಂದ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದು ನಾನೇ. ಕೊಂಚ ವಿದ್ಯಾವಂತನಾದ್ದರಿಂದ ಜವಾಬ್ದಾರಿಯೂ ಹೆಚ್ಚಿತ್ತು. ಹೇಳಿದ ಕೆಲಸವನ್ನು ನೀಟಾಗಿ ಮಾಡುತ್ತಿದ್ದೆ. ಹಾಗಾಗಿ ಎಲ್ಲಾ ಕಡೆ ನನಗೆ ಪರಿಚಯವಾಗಿತ್ತು. ಆಗ 1 ರೂಪಾಯಿಗೆ 1 ಗ್ಯಾಲನ್‌ (5 ಲೀಟರ್) ಪೆಟ್ರೋಲ್‌ ಸಿಗುತ್ತಿತ್ತು. ಇಲ್ಲೇ ಪೆಟ್ರೋಲ್‌ ಹಾಕಿಸಿಕೊಳ್ಳಿ, ಬೇರೆಡೆ ಹೋಗಬೇಡಿ ಎಂದು ಬಂಕ್‌ ನವನು ನನಗೆ ಒಂದಾಣೆ ಕಮಿಷನ್‌ ಕೊಡುತ್ತಿದ್ದ.


ಪಿಕ್ಚರ್‌ ಶುರುವಾಯ್ತು. ಸಾವಿರ ಅಡಿ ಕೊಡ್ಯಾಕ್‌ ನೆಗೆಟಿವ್‌ 35 ರೂಪಾಯಿ, ಸೌಂಡ್‌ ನೆಗೆಟಿವ್‌ ಸಾವಿರ ಅಡಿ 16 ರೂಪಾಯಿ. ಪಾಸಿಟಿವ್‌ ಸಾವಿರ ಅಡಿ 11 ರೂಪಾಯಿಗೆ ಸಿಗುತ್ತಿತ್ತು. ಕೊಡ್ಯಾಕ್‌ ಕಂಪನಿ ಮೌಂಟ್‌ ರಸ್ತೆಯಲ್ಲಿತ್ತು. ಅವರೊಬ್ಬರೇ ಫಿಲ್ಮ್‌ ತರಿಸಿ ಕೊಡುತ್ತಿದುದ್ದು. ಅವರಿಗೆ ಸೇಲ್‌ ಆಗಬೇಕಲ್ವಾ ಹಾಗಾಗಿ ಅವರು ಐದು ರೋಲ್‌ಗಳನ್ನು ಸಾಲ ಕೊಡುತ್ತಿದ್ರು. ಅದನ್ನು ತೀರಿಸಲು ಒಂದು ತಿಂಗಳು ಟೈಂ ಕೊಡುತ್ತಿದ್ರು. ಹೆಚ್ಚು ಕಮ್ಮಿ 300–400 ರೂಪಾಯಿ ಆಗುತ್ತಿತ್ತು. ಸಾಲ ಸರಿಯಾಗಿ ತೀರಿಸಿದ್ರೆ, ಮತ್ತೆ ಐದು ರೋಲ್ ಸಾಲ ಕೊಡುತ್ತಿದ್ರು. ಸಾಲ ಸರಿಯಾಗಿ ತೀರಿಸಿಲ್ಲ ಎಂದ್ರೆ, ಮತ್ತೊಮ್ಮೆ ಬಂದಾಗ ದುಡ್ಡು ಕೊಟ್ಟೇ ತೆಗೆದುಕೊಂಡು ಹೋಗಬೇಕಿತ್ತು. ಬಹಳ ಅದ್ಭುತವಾದ ವ್ಯವಸ್ಥೆ ಮಾಡಿದ್ರು ಅವರು.

ಮಾಣಿಕ್ಯಂ ಅವರಿಗೆ ಈ ಸಿನಿಮಾದ ನಿರ್ದೇಶನಕ್ಕೆ ಆಯ್ಕೆ ಮಾಡಲಾಯಿತು. ಅವರು ತಮಿಳು ನಿರ್ದೇಶಕರು. ಅವರಿಗೆ ಕನ್ನಡ ಗೊತ್ತಿರಲಿಲ್ಲ. ಸಾಹುಕಾರ ಜಾನಕಿ ಅದರ ಹೀರೊಯಿನ್‌. ನಾನು ಸೆಕೆಂಡ್‌ ಹೀರೊ. ನನಗೆ ಕೃಷ್ಣಜ್ಯೋತಿ ಹೀರೊಯಿನ್‌. ಕೃಷ್ಣಜ್ಯೋತಿ ಸಾಯಿಕುಮಾರ್‌, ರವಿಶಂಕರ್‌ ಅವರ ತಾಯಿ. ನಾನು ಆ್ಯಕ್ಟಿಂಗ್‌ ಗಿಂತ ನಿರ್ದೇಶನದ ಕಡೆ ಪ್ರೀತಿ ಹೆಚ್ಚಾಗಿ, ಆ ಕಡೆ ವಾಲಿದೆ.

1957ರಲ್ಲಿ ಸೇಲಂನ ರತ್ನ ಸ್ಟುಡಿಯೊದವರು ಕನ್ನಡ ಪಿಕ್ಚರ್‌ ತೆಗೆಯಬೇಕು ಎಂದು ಯೋಚನೆ ಮಾಡುತ್ತಿದ್ರು. ಕನ್ನಡ ಬರುವವರನ್ನು ಇನ್‌ಚಾರ್ಜ್‌ ಮಾಡಬೇಕು. ಅಸೋಸಿಯೇಟೆಡ್‌ ಆಗಿಯೂ ಇರಬೇಕು ಯಾರನ್ನು ಹಾಕಿಕೊಳ್ಳುವುದು ಎಂದು ಯೋಚಿಸಿದಾಗ, ನನ್ನ ಕೆಲಸ ನೋಡಿ ಇಷ್ಟಪಟ್ಟಿದ್ದ ಟಿ.ಎನ್‌. ಬಾಲಕೃಷ್ಣ ಭಗವಾನ್‌ ಅಂತಿದ್ದಾರೆ ಕರೆಸುತ್ತೇನೆ ಎಂದ್ರು. ಆಗ ರತ್ನ ಸ್ಟುಡಿಯೊದವರು ಕರೆಸಿ, ಕನ್ನಡ ವಿಭಾಗಕ್ಕೆ ಇನ್‌ಜಾರ್ಜ್‌ ಮಾಡಿದ್ರು. ಮದ್ರಾಸ್‌ ಆಫೀನಲ್ಲಿ ನನ್ನ ಕೆಲಸ ಇತ್ತು. ತಿಂಗಳಿಗೆ 500 ರೂಪಾಯಿ ಕಳುಹಿಸುತ್ತಿದ್ರು. ಮನೆ ಬಾಡಿಗೆಯನ್ನು ಅವರೇ ಕಳುಹಿಸುತ್ತಿದ್ರು. ಆ ಹಣ ನನಗೆ ಸಾಕಾಗುತ್ತಿತ್ತು.


‘ವೀರಪುತ್ರ’ ಸಿನಿಮಾ ಶುರುವಾಯ್ತು. ಆ ಸಿನಿಮಾದ ಹೀರೊಗೆ ಕತ್ತಿ, ಲಾಠಿ ವರಸೆ ಬರಬೇಕಿತ್ತು. ಅದರ ಹೀರೊ ರಾಜ್‌ಕುಮಾರ್‌. ಅಲ್ಲಿಯವರೆಗೂ ಪೌರಾಣಿಕ ಸಿನಿಮಾಗಳಲ್ಲಿಯೇ ಮಾಡಿದ್ದ, ರಾಜ್‌ಕುಮಾರ್‌ ಅವರಿಗೆ ಕತ್ತಿ, ಲಾಠಿವರಸೆ ಗೊತ್ತಿರಲಿಲ್ಲ. ಅವರಿಗೆ ಪ್ರಾಕ್ಟೀಸ್‌ ಬೇಕಿತ್ತು. ಸ್ಟೆಂಟ್‌ಮಾಸ್ಟರ್‌ ಶಿವಯ್ಯ ಅವರನ್ನು ಕರೆಸಿ ಅವರಿಗೆ ನಮ್ಮ ಆಫೀಸ್‌ನಲ್ಲಿಯೇ ಲಾಠಿ, ಕತ್ತಿವರಸೆ ಹೇಳಿಕೊಡಲಾಗುತ್ತಿತ್ತು. ಬೆಳಿಗ್ಗೆ 10.30, ರಿಂದ 1 ಗಂಟೆವರೆಗೆ ತರಬೇತಿ ಇತ್ತು. ಅವರಿಬ್ಬರೂ ಕಚೇರಿಗೆ ಬಂದು ಪ್ರಾಕ್ಟೀಸ್‌ ಮಾಡಿ ಹೋಗುತ್ತಿದ್ರು. ಕಚೇರಿ ಎದುರಿಗೆ ನಾರಾಯಣ ಕೆಫೆ ಇತ್ತು. ನಾನು ಮಧ್ಯಾಹ್ನ ಊಟಕ್ಕೆ ಹೋಗುತ್ತಿದ್ದಾಗ, ರಾಜ್‌ಕುಮಾರ್ ಅವರು ಊಟಕ್ಕೆ ಎಲ್ಲಿ ಹೋಗ್ತೀರಾ ಎಂದ್ರು. ಹೇಳಿದೆ. ಆಗ ಅವರು ಊಟಕ್ಕೆ ಹೋಟೆಲ್‌ಗೆ ಯಾಕೆ ಹೋಗ್ತೀರಾ ನಮ್ಮನೆಗೆ ಬನ್ನಿ ಅಂದ್ರು.

ಹಾಸನದ ಕ್ಯಾಂಪ್‌ನಲ್ಲಿ ಕರ್ನಾಟಕದ ನಾಟಕ ಸಭಾ ಮತ್ತು ಗುಬ್ಬಿ ಕಂಪನಿಯ ನಾಟಕ ಅಕ್ಕ ಪಕ್ಕದ ವೇದಿಕೆಯಲ್ಲಿಯೇ ಇತ್ತು. ಆಗಿನ ಕಾಲದಲ್ಲಿ ನಾಟಕ ಎಂದ್ರೆ ಜನ ತುಂಬಿರುತ್ತಿದ್ದರು. ಇವರು ಗುಬ್ಬಿ ಕಂಪನಿಯಲ್ಲಿ ಕೃಷ್ಣ ಲೀಲಾ ನಾಟಕ ಮಾಡುತ್ತಿದ್ರು. ರಾಜ್‌ಕುಮಾರ್‌ ತಂಗಿ ಶಾರದಮ್ಮ ಎನ್ನುವವರಿದ್ರು. ಬಹಳ ಮುದ್ದು ಮುಖ ಆಕೆಯದು. ಆಕೆ ಕೃಷ್ಣನ ಪಾತ್ರ ಮಾಡುತ್ತಿದ್ದಳು. ಮುಖ್ಯಪಾತ್ರ ಅದು. ಹಾಸ್ಯ ಪಾತ್ರವನ್ನು ವರದಪ್ಪ ಮಾಡುತ್ತಿದ್ದ. ಸಿಕ್ಕಾಪಟ್ಟೆ ಕಾಮಿಡಿ ಮಾಡುತ್ತಿದ್ದ. ನಕ್ಕು ನಕ್ಕು ಸಾಕಾಗುತ್ತಿತ್ತು. ರಾಜ್‌ಕುಮಾರ್‌ ಅವರ ಮತ್ತೊಬ್ಬ ಸಹೋದರಿ ನಾಗಮ್ಮನನ್ನು ಬೇಗ ಮದುವೆ ಮಾಡಿ ಕಳುಹಿಸಿಬಿಟ್ರು ಗಾಜನೂರಿಗೆ. ಕಲಾವತಿ ಎಂಬ ಹೆಣ್ಣು ಪಾತ್ರವನ್ನು ರಾಜ್‌ಕುಮಾರ್‌ ಮಾಡುತ್ತಿದ್ರು. ಅವರಿಗೆ ಯಾರೋ, ಕರ್ನಾಟಕ ನಾಟಕ ಸಭಾದಲ್ಲಿ ಗಾಯತ್ರಿ ಪಾತ್ರ ಮಾಡುವವರು ತುಂಬಾ ಚೆನ್ನಾಗಿದ್ದಾರೆ ಎಂದಿದ್ರು, ಹಾಗಾಗಿ, ಅವರು ಅಲ್ಲಿ ಬಿಡುವು ಮಾಡಿಕೊಂಡು ಬಂದು ನನ್ನ ಪಾತ್ರ ನೋಡುತ್ತಿದ್ರು. ನನಗೆ ಯಾರೋ, ಕಲಾವತಿ ಪಾತ್ರವನ್ನು ಮುತ್ತುರಾಜು ಎನ್ನುವವರು ತುಂಬಾ ಚೆನ್ನಾಗಿ ಮಾಡ್ತಾರೆ ಎಂದಿದ್ರು. ನಾನು ನೋಡಲು ಹೋಗುತ್ತಿದ್ದೆ. ಒಂದು ದಿನ ಇಬ್ಬರೂ ಭೇಟಿ ಮಾಡಿದೆವು. ಇಬ್ಬರೂ ಒಬ್ಬೊಬ್ಬರನ್ನು ಪ್ರಶಂಸಿಕೊಂಡಿದ್ದೆವು. ಅಲ್ಲಿ ನಮ್ಮಿಬ್ಬರ ಚಿಕ್ಕ ಪರಿಚಯವಾಗಿತ್ತು.


ಆ ಪರಿಚಯ ಮದ್ರಾಸ್‌ನಲ್ಲಿ ಬಹಳ ಸಹಾಯ ಮಾಡಿತು. ಅವರು ಮನೆಗೆ ಕರೆದುಕೊಂಡು ಹೋದರು. ಮದ್ರಾಸ್‌ನ ಸುಡು ಬಿಸಿಲಿನಲ್ಲಿ ನಮ್ಮ ಆಫೀಸ್‌ನಿಂದ ಅವರ ಮನೆಗೆ ಮಧ್ಯಾಹ್ನ ಹೋದೆವು. 8 ರೂಪಾಯಿ ಬಾಡಿಗೆ ಮನೆಯಲ್ಲಿ ಇದ್ರು. ರಾಜ್‌ಕುಮಾರ್‌ ಅವರ ತಾಯಿ, ಪಾರ್ವತಮ್ಮ, ವರದಪ್ಪ ಇದ್ರು. ಮದ್ರಾಸ್‌ನಲ್ಲಿ ಚಂಡಮಾರುತ ಬಂದ್ರೆ, ನಾಲ್ಕು ದಿನ ಆದ್ರೂ ಕೊಚ್ಚೆ ನಿಂತಿರುತ್ತದೆ ಅಂತಹ ಪರಿಸ್ಥಿತಿ ಅಲ್ಲಿಯದು. ಕೊಚ್ಚೆಗಳ ಮಧ್ಯೆ ನಡೆದುಕೊಂಡು ಅವರ ಮನೆಗೆ ತಲುಪಬೇಕಿತ್ತು. ಚೂಲೈ ಮೆದುವಿನ ರೈಲ್ವೆ ಲೈನ್ ಪಕ್ಕದಲ್ಲಿ ಅವರ ಮನೆಯಿತ್ತು. ಕೊಚ್ಚೆ ನಿಲ್ಲುತ್ತಿದ್ದರಿಂದ ಜನ ಕಲ್ಲಿಟ್ಟು ಅಲ್ಲಿ ನಡೆದುಕೊಂಡು ಹೋಗುತ್ತಿದ್ರು.

ಮೊದಲನೇ ದಿವಸ ಹೋದಾಗ, ಪಾರ್ವತಮ್ಮ ನವರಿಗೆ ನನ್ನ ಪರಿಚಯವನ್ನು ಮಾಡಿಕೊಟ್ರು. ನಾಟಕ ಕಂಪನಿಯಿಂದ ಗೊತ್ತು ಎಂದು ಎಲ್ಲ ಕಥೆಯನ್ನು ಹೇಳಿದ್ರು. ನಮ್ಮ ಮನೆಗೆ ಊಟಕ್ಕೆ ಬಂದಿದ್ದು ತುಂಬಾ ಸಂತೋಷ ಎಂದು ಪಾರ್ವತಮ್ಮ ಅವರು ಹೇಳಿದ್ರು. ಪಾರ್ವತಮ್ಮನವರು ದಬ್ರಿನಲ್ಲಿ ಸಾಂಬಾರು ಅನ್ನವನ್ನು ನನ್ನ ಮುಂದೆಯೇ ಕಲಿಸಿದ್ರು. ನಂತರ ಮೂವರಿಗೂ ಕೈತುತ್ತು ಕೊಟ್ರು. ಯಾಕೆ ತಟ್ಟೆಗೆ ಹಾಕದೇ ಕೈತುತ್ತು ಕೊಡುತ್ತಿದ್ದಾರೆ ಎಂದು ಕೂತೂಹಲ ಆಯ್ತು. ಆದ್ರೆ ನನಗೆ ಊಟ ತಾನೇ ಮುಖ್ಯ ಎಂದು ಸುಮ್ಮನಾದೆ. ರಾಜ್‌ಕುಮಾರ್‌ ಅವರು ಊಟ ಹೇಗಿತ್ತು ಅಂದ್ರು. ತುಂಬಾ ಚೆನ್ನಾಗಿತ್ತು ಮನೆ ಊಟ ಎಂದೆ. ಹಾಗಿದ್ರೆ ನಿಮಗೆ ಇನ್ನು ಮುಂದೆ ನಮ್ಮನೆಯಲ್ಲಿಯೇ ಊಟ ಎಂದ್ರು. ಹೀಗೆ ಪ್ರತಿದಿನ ಅವರ ಮನೆಗೆ ಊಟಕ್ಕೆ ಹೋಗುತ್ತಿದ್ದೆ. ನಾಲ್ಕು ದಿವಸ ಆದ್ರೂ ಕೈತುತ್ತೇ ತಿನ್ನುತ್ತಿದ್ದೆ. ನನಗೆ ಕುತೂಹಲ ತಡೆದುಕೊಳ್ಳಲು ಆಗಲಿಲ್ಲ. ರಾಜ್‌ಕುಮಾರ್‌ ಅವರನ್ನು ಮುತ್ತುರಾಜಣ್ಣ ಎನ್ನುತ್ತಿದ್ದೆ. ಪಾರ್ವತಮ್ಮ ಅವರನ್ನು ಅತ್ತಿಗೆ ಎನ್ನಲು ಶುರು ಮಾಡಿದ್ದೆ. ಅಲ್ಲ ಅತ್ತಿಗೆ, ಸಾಮಾನ್ಯವಾಗಿ ಎಲ್ಲ ಕಡೆ ನೋಡಿದ್ದೇನೆ ತಟ್ಟೆಯಲ್ಲಿ ಬಡಿಸುತ್ತಾರೆ. ನೀವ್ಯಾಕೆ ಕೈತುತ್ತು ಕೊಡುತ್ತೀರಾ ಎಂದೆ. ನೋಡಿ ಭಗವಾನ್‌, ನಾನೊಂದು ವಿಷ್ಯ ಹೇಳ್ತೇನೆ. ತಟ್ಟೆಯಲ್ಲಿ ಬಡಿಸುತ್ತೇನೆ ಎಂದಿಟ್ಟುಕೊಳ್ಳಿ. ಒಂದು ಸಲ ಅನ್ನ ಬಡಿಸಿ, ಅದರ ಮೇಲೆ ಸಾಂಬಾರು ಹಾಕಿ ಬಿಡ್ತೇನೆ. ನಿಮಗೆ ಹೊಟ್ಟೆ ತುಂಬುತ್ತೋ ಇಲ್ವೋ ನನಗೆ ಗೊತ್ತಾಗುವುದಿಲ್ಲ. ಅಷ್ಟು ಅನ್ನ ತಿಂದ ಮೇಲೆ ಎರಡನೇ ಸಲ ಕೇಳಲು ಸಂಕೋಚ ಆಗಿ, ನೀವು ಎದ್ದು ಹೊರಟು ಹೋಗ್ತೀರಾ. ಹೊಟ್ಟೆ ತುಂಬಿದ್ದು ನನಗೆ ಗೊತ್ತಾಗುವುದಿಲ್ಲ. ಕೈತುತ್ತು ಹಾಕಿದ್ರೆ, ನಿಮಗೆ ಎಷ್ಟು ತಿನ್ನುತ್ತೇನೆ ಎನ್ನುವುದು ಗೊತ್ತಾಗುವುದಿಲ್ಲ. ಹೊಟ್ಟೆ ತುಂಬಿದ ಮೇಲೆ ನೀವೇ ಸಾಕು ಎನ್ನುತ್ತೀರಾ. ಹೊಟ್ಟೆ ತುಂಬಾ ಊಟ ಹಾಕಬೇಕು ಎನ್ನುವುದು ನನಗೆ ಪಾಲಿಸಿ ಎಂದ್ರು. ಅವರ ವಿಚಾರ ಧಾರೆಗೆ ಅವತ್ತೆ ಸಲಾಂ ಹೊಡೆದೆ ನಾನು. ‘ಅತಿಥಿ ದೇವೋ ಭವ’ ಅಂತಾರೆ ಅದನ್ನು ನೀವು ಪರಿಪಾಲಿಸುತ್ತಿದ್ದೀರಾ ಒಪ್ಪಿಕೊಳ್ಳುತ್ತೇನೆ. ಆದ್ರೆ ಇಷ್ಟು ಆಳವಾಗಿ ಯೋಚನೆ ಮಾಡಿರುವ ನಿಮಗೆ ಹ್ಯಾಂಡ್ಸ್‌ ಆಫ್‌ ಎಂದೆ.


ಅವತ್ತು ಅವರ ಕುಟುಂಬದ ಜೊತೆಗೆ ನನ್ನ ಬಾಂಧವ್ಯ ಶುರುವಾಯ್ತು. 8 ರೂಪಾಯಿ ಬಾಡಿಗೆ ಮನೆಯಿಂದ ಶುರುವಾಗಿ, 8 ಕೋಟಿವರೆಗೆ ಸದಾಶಿವ ನಗರದಲ್ಲಿ ಮನೆ ತೆಗೆದುಕೊಂಡ ಸಂದರ್ಭದವರೆಗೂ ನಾನು ಸಾಕ್ಷಿಯಾಗಿದ್ದೆ. ಅದೇ ಬಾಂಧವ್ಯ, ಸಾಮರಸ್ಯ ಕಾಪಾಡಿಕೊಂಡು ಬಂದೆ. ಅವರ ಬೇರಿನ ದಿನಗಳಿಂದ, ಅವರು ಬಿಟ್ಟುಹೋಗುವ ದಿನಗಳವರೆಗೂ ಜೊತೆಯಲ್ಲಿದ್ದ ಏಕೈಕ ವ್ಯಕ್ತಿ ನಾನು. ಪಾರ್ವತಮ್ಮನವರು ಅಂದು ನನ್ನನ್ನು ಯಾವ ರೀತಿ ನೋಡಿದ್ರೋ ಕೊನೆವರೆಗೂ, ನನ್ನೊಂದಿಗೆ ಅದೇ ರೀತಿ ಇದ್ರು.


ಮುಂದುವರೆಯುವುದು...

ಸಂದರ್ಶಕರು

ಕೆ.ಎಸ್‌ ಪರಮೇಶ್ವರ


57 views