
ಮಹಾನಟಿ ಸಾವಿತ್ರಿ ಸ್ವಯಂಕೃತ ಅಪರಾಧಗಳು!
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 24
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ಸಮಯದ ಗೊಂಬೆಯ ಎರಡನೇ ಹೀರೊಯಿನ್ ಸ್ಟಾರ್ ನಟಿಯ ತಾಯಿ
ಬೆಂಕಿಯ ಬಲೆ ಆದ ಮೇಲೆ ರಾಜ್ಕುಮಾರ್ ಕಾಲ್ಶೀಟ್ ಸಿಕ್ತು. ದೊರೆ ಭಗವಾನ್ ನಿರ್ದೇಶನ ಕಥೆ ಎಂದ್ರೆ ಅವರು ವಿವರಣೆ ಕೇಳುವ ಗೋಜಿಗೂ ಹೋಗುತ್ತಿರಲಿಲ್ಲ. ನಮ್ಮ ಕಥೆ ಚೆನ್ನಾಗಿರುತ್ತದೆ ಎಂಬ ನಂಬಿಕೆ ಅವರಿಗಿತ್ತು. ಸಮಯದ ಗೊಂಬೆ ಕಾದಂಬರಿ ಆಧಾರಿತ ಸಿನಿಮಾ ನಿರ್ದೇಶನಕ್ಕೆ ಮುಂದಾದೆವು. ಬಾಲಕಾರ್ಮಿಕರ ಕುರಿತಾದ ಚಿತ್ರವದು. ಆ ಸಿನಿಮಾದಲ್ಲಿ ಮೇನಕಾ ಶ್ರೀನಾಥ್ ಅವರು ರಾಜ್ಕುಮಾರ್ ಅವರ ತಂಗಿಯಾಗಿ ನಟಿಸಿದ್ದಾರೆ. ಅದೊಂದು ಅದ್ಭುತವಾದ ಕಥೆ. ರಾಜ್ಕುಮಾರ್ ಅವರು ಈ ಸಿನಿಮಾದ ಕ್ಲೈಮಾಕ್ಸ್ ಮತ್ತು ಚಿತ್ರಣ ತುಂಬಾ ಚೆನ್ನಾಗಿದೆ ಎಂದು ಹೊಗಳಿದ್ದರು.
ಮೇನಕಾ ಶ್ರೀನಾಥ್ಗೆ ಹೀರೊಯಿನ್ ಆಗುವ ಸಾಮರ್ಥ್ಯವಿತ್ತು. ರಾಜ್ಕುಮಾರ್ ಪಿಕ್ಚರ್ ಆದ್ದರಿಂದ ತಮಿಳಿನವರು ಯಾವ ಪಾತ್ರವನ್ನು ಕೊಟ್ಟರೂ ನಟಿಸುತ್ತಿದ್ರು. ಅವಳ ಜೀನ್ಸ್ನಲ್ಲಿಯೇ ನಟನೆಯ ಕಲೆ ಬೇರುಬಿಟ್ಟಿತ್ತು. ಆಕೆಯ ಮಗಳು ಇಂದು ದೊಡ್ಡ ನಟಿ. ಮಹಾನಟಿ ಸಿನಿಮಾದ ಸಾವಿತ್ರಿ ಪಾತ್ರವನ್ನು ನೈಜವಾಗಿ ಮಾಡಿ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿದ್ದಾಳೆ ಅವಳು. ಕೀರ್ತಿ ಸುರೇಶ್, ಮೇನಕಾ ಅವರ ತಾಯಿ. ಮಹಾನಟಿ ಅದ್ಭತವಾದ ಸಿನಿಮಾ. ಅದರಲ್ಲಿ ಅಷ್ಟೇ ಚೆನ್ನಾಗಿ ಕೀರ್ತಿ ನಟಿಸಿದ್ದಾಳೆ. ಆ ಸಿನಿಮಾವನ್ನು ನೆನಪಿಸಿಕೊಂಡರೆ ಮೈ ಜುಂ ಎನ್ನುತ್ತದೆ.
ಡೈಮೆಂಡ್ ನಲ್ಲೇ ಮುಳುಗಿ ಏಳುತ್ತಿದ್ದ ನಟಿಯ ಕೊನೆಗಳಿಗೆಯ ಪರಿಸ್ತಿತಿ
ಸಾವಿತ್ರಿ ಜೀವನವನ್ನು ನಾನು ನೋಡಿದ್ದೇನೆ. ಸಿನಿಮಾ ರಂಗದಲ್ಲಿ ಏನು ಇಲ್ಲದವನು ರಾತ್ರಿ ಕಳೆದು ಬೆಳಗಾಗುವುದರೊಳಗೆ ದೊಡ್ಡ ಸ್ಟಾರ್ ಆಗುತ್ತಾನೆ. ಗೋಲ್ಡನ್ ಸ್ಟಾರ್ ಗಣೇಶ್, ದರ್ಶನ್, ಚಿಕ್ಕಣ್ಣ... ಹೀಗೆ ಹಲವಾರು ಉದಾಹರಣೆಗಳಿವೆ. ಇದೇ ಸಿನಿಮಾರಂಗದಲ್ಲಿ ಉನ್ನತ ಮಟ್ಟದಲ್ಲಿ ಇರುವವರು ಬಹಳ ಕಷ್ಟದ ದಿನಗಳನ್ನು ಕಾಣುವುದನ್ನು ನಾನು ನೋಡಿದ್ದೇನೆ. ಇದಕ್ಕೆ ಸಾವಿತ್ರಿ ಅತ್ಯುತ್ತಮವಾದ ನಿದರ್ಶನ.
ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಸದಸ್ಯನಾಗಿದ್ದರಿಂದ ಬೇರೆ, ಬೇರೆ ಭಾಷೆಯ ನಿರ್ದೇಶಕರು, ಪ್ರೊಡ್ಯುಸರ್ಗಳು ನನಗೆ ಗೊತ್ತು. ಸಾವಿತ್ರಿಯ ಹುಟ್ಟುಹಬ್ಬದ ದಿನ ನನಗೆ ಆಹ್ವಾನ ಬಂದಿದ್ದರಿಂದ ಹೋಗಿದ್ದೆ. ಆಕೆ ಕೈತುಂಬ ಡೈಮಂಡ್ ಬಳೆ, ಡೈಮಂಡ್ ವಾಚ್, ಕತ್ತಿಗೆ ನಾಲ್ಕೈದು ಡೈಮಂಡ್ ಸರ. ಕಿವಿಗೆ ಅಗಲವಾದ ಡೈಮಂಡ್ ಓಲೆ ಹಾಕಿಕೊಂಡಿದ್ದಳು. ಆಕೆಯ ಹುಟ್ಟುಹಬ್ಬದಂದು ಅತ್ಯಂತ ಭರ್ಜರಿಯಾದ ಸಂತೋಷ ಕೂಟ ಏರ್ಪಡಿಸಲಾಗಿತ್ತು. ಸಿನಿಮಾ ರಂಗದಲ್ಲಿದ್ದ ಬಹುತೇಕರು ಅಲ್ಲಿಗೆ ಬಂದಿದ್ರು. ಅದೇ ಸಾವಿತ್ರಿ ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ 10 ಸಾವಿರ ಕೊಟ್ಟಾಗ ಕಣ್ಣಿಗೆ ಒತ್ತಿಕೊಂಡ ಪರಿಸ್ಥಿತಿಯನ್ನು ನೋಡಿದ್ದೇನೆ. ಆಕೆಯ ರಾಜವೈಭೋಗದ ಸಂಭ್ರಮಾಚರಣೆ ಮತ್ತು ವಿಷಾದವನ್ನು ಕಂಡಿದ್ದೇನೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಆಕೆ, ಕನ್ನಡಕ್ಕೆ ಕರೆದರೂ ಬರುತ್ತಿರಲಿಲ್ಲ. ಆದರೆ, ಕೊನೆ ದಿವಸಗಳಲ್ಲಿ ಹೇಗಾಗಿ ಬಿಟ್ಟಿದ್ದಳು ಎಂದರೆ, ಯಾರಾದರೂ ಕರೆದರೆ ಸಾಕು ಎನ್ನುವಂತಹ ಸ್ಥಿತಿಗೆ ಬಂದಿದ್ದಳು. ಅದು ಆಕೆಯ ಸ್ವಯಂಕೃತವಾದ ಅಪರಾಧ.
‘ತಾಯಿಗೆ ತಕ್ಕ ಮಗ’ದ ‘ವಿಶ್ವನಾಥನು ತಂದೆಯಾದರೆ’... ಹಾಡನ್ನು ಬನಾರಸ್ನಲ್ಲಿ ನಾನೇ ಚಿತ್ರೀಕರಿಸಿದ್ದೆ. ಸಾವಿತ್ರಿಯವರು ಅಲ್ಲಿಗೆ ಬಂದಿದ್ರು. ಆಕೆಯನ್ನು ನೋಡಿದಾಗ ಅಯ್ಯೋ ಅನಿಸಿತ್ತು. ರಾಜಕುಮಾರಿ ತರಹ ಜೀವನ ನಡೆಸಿದವರು, ಹತ್ತು, ಹದಿನೈದು ಸಾವಿರಕ್ಕೆ ಕೆಲಸ ಮಾಡುವ ಪರಿಸ್ಥಿತಿಗೆ ಬಂದಿದ್ದಳು. ಮೊದಲೆಲ್ಲ ಆಕೆಗೆ ಫೈವ್ ಸ್ಟಾರ್ ಹೋಟೆಲ್ ಬೇಕಿತ್ತು. ಈಗ ಕೊಟ್ಟ ಹೋಟೆಲ್ನಲ್ಲಿ ಇರುತ್ತಿದ್ದಳು. ಇರುವುದಕ್ಕೆ ಜಾಗ ಕೊಟ್ಟರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದಳು. ಅಲ್ಲಿ ಸಾವಿತ್ರಿಯ ಪರಿಚಯ ಚೆನ್ನಾಗಿಯೇ ಆಗಿದ್ದರಿಂದ ಚಂದನಗೊಂಬೆ ಸಿನಿಮಾದಲ್ಲಿ ತಾಯಿಯ ಪಾತ್ರ ಮಾಡಲು ಆಕೆಯನ್ನು ಕರೆದೆ. ಎರಡು ದಿವಸದ ಕೆಲಸಕ್ಕೆ 5 ಸಾವಿರ ಮಾತನಾಡಿದ್ದೆ. ಪಿಕ್ಚರ್ ಶೂಟಿಂಗ್ ಇದಿದ್ದೇ 20 ದಿವಸ. 2 ಸಾವಿರ ಅಡ್ವಾಸ್ ಕೊಟ್ಟು, ಬಂದು ಹೋಗಿ ಖರ್ಚಿಗೆ ಕೊಡುತ್ತೇನೆ ಎಂದೆ. ಫಸ್ಟ ಕ್ಲಾಸ್ ಎ.ಸಿ ರೈಲಿನಲ್ಲಿ ಬಂದಳು. ಆಕೆ ಏಳು, ಬೀಳು ಎರಡನ್ನೂ ಕಂಡಿದ್ದಾಳೆ. ಸಿನಿಮಾ ರಂಗದಲ್ಲಿ ಇವೆಲ್ಲ ಸಹಜವಾಗಿ ನಡೆದು ಹೋಗುತ್ತದೆ. ಈ ರೀತಿಯ ಬೇಕಾದಷ್ಟು ನಿದರ್ಶನಗಳಿವೆ. ಇಲ್ಲಿ ಬಂದು ಶೂಟಿಂಗ್ ಮುಗಿಸಿ ಹೋಗುವಾಗ 3 ಸಾವಿರ ಕೊಟ್ಟೆ. ಆ ಹಣವನ್ನು ಆಕೆ ಕಣ್ಣಿಗೆ ಒತ್ತಿಕೊಂಡಳು. ಆಕೆಯ ಉನ್ನತ ಸ್ಥಿತಿಯಲ್ಲಿ ಇದ್ದ ಕಾಲದಲ್ಲಿ ಅವಳು ಕೇಳಿದ್ರೆ ಲಕ್ಷ ಕೊಡುವ ಜನಗಳಿದ್ರು. ಆಕೆಯ ಜೀವನ ಚರಿತ್ರೆಯಲ್ಲಿ ಕೀರ್ತಿ ನಟಿಸಿದ್ದು, ಸಾವಿತ್ರಿಯೇ ನಟಿಸುತ್ತಿದ್ದಾಳೆ ಎನ್ನುವಂತಿತ್ತು. ಕೀರ್ತಿ ಮಹಾನಟಿಯೇ ಎಂಬುದನ್ನು ಸಾಬೀತು ಮಾಡಿದಳು.
ಮೈಸೂರು ರಾಜಕುಮಾರ್ ಅವರ ಇಷ್ಟವಾದ ಸ್ಥಳ
ರಾಜ್ಕುಮಾರ್ ಅವರಿಗೆ ಶೂಟಿಂಗ್ಗೆ ಇಷ್ಟವಾದ ಸ್ಥಳ ಮೈಸೂರು. ನಮಗೂ ಅದೇ ಸ್ಥಳ ಇಷ್ಟ. ಯಾವುದೇ ತರಹದ ಲೋಕೇಷನ್ ಬೇಕಿದ್ರು ಮೈಸೂರಿನ ಸುತ್ತಮುತ್ತಲೇ ಇದೆ. ಬೆಳಿಗ್ಗೆ 7 ಗಂಟೆಗೆ ಹೊರಟ್ರು ಅಂದುಕೊಂಡ ಜಾಗವನ್ನು 8 ಗಂಟೆಯೊಳಗೆ ಅಲ್ಲಿಗೆ ತಲುಪಿ, ಚಿತ್ರೀಕರಣ ಮಾಡಬಹುದು. ಬಿಸಿಲನ್ನು ನಂಬಿಕೊಂಡೇ ಶೂಟಿಂಗ್ ಮಾಡಬೇಕಾದ ಕಾಲವದು. 5–5.30ಗೆ ಶೂಟಿಂಗ್ ಮುಗಿಸಿಬಿಡುತ್ತಿದ್ವಿ. ಸೂರ್ಯಾಸ್ತದ ದೃಶ್ಯ ಇದ್ರೆ ಇರುತ್ತೇನೆ, ಇಲ್ಲದಿದ್ರೆ ಹೋಗಿಬಿಡ್ತೇನೆ ಎಂದು ಗೌರಿಶಂಕರ್ ಹೇಳುತ್ತಿದ್ದ. ಬಲಮುರಿ, ಕೆಆರ್ಎಸ್, ಶ್ರೀರಂಗಪಟ್ಟಣ, ಸಂಗಮ, ಕರಿಬೆಟ್ಟ, ನಂಜನಗೂಡು, ಕಪಿಲ ನದಿ, ಬ್ರಿಡ್ಜ್, ಚುಂಚನಕಟ್ಟೆ, ಗಗನಚುಕ್ಕಿ, ಬರಚುಕ್ಕಿ ಫಾಲ್ಸ್... ಕೊಂಚ ದೂರ ಹೋದ್ರೆ ಮೇಲುಕೋಟೆ, ಸಾಲಿಗ್ರಾಮ, ತಲಕಾಡು... ಹೀಗೆ ಅದ್ಭುತ ಸ್ಥಳಗಳಿವೆ. ಮೈಸೂರಿನ ಮೂರು ಕಿ.ಮೀ. ಸುತ್ತಮುತ್ತ 16–18 ಹಳ್ಳಿಗಳಿವೆ. ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದ್ದಾರೆ. ಕಾಂಕ್ರಿಟ್ ಕಾಡಾಗಿಲ್ಲ ಅದು. ಸುಜಾತಾ ಹೋಟೆಲ್ ಫುಲ್ ಬುಕ್ ಮಾಡಿ ಎಂದು ರಾಜ್ಕುಮಾರ್ ಹೇಳುತ್ತಿದ್ರು. ಅವರು ಫೈವ್ ಸ್ಟಾರ್ ಹೋಟೆಲೇ ಬೇಕು ಎಂದು ಕೇಳುತ್ತಿರಲಿಲ್ಲ. ಎಲ್ಲ ಟೆಕ್ನಿಷಿಯನ್ಗಳು ಅಲ್ಲಿಯೇ ಇರಬೇಕಿತ್ತು. 16 ರೂಮ್ ಇತ್ತು ಅಲ್ಲಿ. ಹಾಲ್ನಲ್ಲಿ ಕೆಲಸಗಾರರಿರುತ್ತಿದ್ರು. ಈಗಿನಂತೆ ಶೂಟಿಂಗ್ ಸ್ಥಳದಲ್ಲಿ 60 ಜನ ಇರುತ್ತಿರಲಿಲ್ಲ. 15–16 ಜನ ಇರುತ್ತಿದ್ರು. ಅಬ್ಬಬ್ಬಾ ಎಂದ್ರೆ 20 ಜನ ಇರುತ್ತಿದ್ರು. ಡಾನ್ಸ್ ಮಾಸ್ಟರ್ ಜಯರಾಂ ಬಂದ್ರೆ ದಾಸ ಪ್ರಕಾಶ್ ಹೋಟೆಲ್ನಲ್ಲಿಯೇ ರೂಮ್ ಬೇಕು ಅನ್ನುತ್ತಿದ್ರು. ಅನಂತನಾಗ್ ಬಂದ್ರೆ ಹೈಪಾಯಿಂಟ್ ಹೋಟೆಲ್ ರೂಂ ಕೇಳುತ್ತಿದ್ರು. ಅದು ತ್ರಿ ಸ್ಟಾರ್ ಹೋಟೆಲ್. ಲಕ್ಷ್ಮೀ ಕೂಡ ಅದೇ ಹೋಟೆಲ್ ಕೇಳುತ್ತಿದ್ರು. ಪಕ್ಕದಲ್ಲಿಯೇ ಸುಜಾತಾ ಇತ್ತು. ನಾವೆಲ್ಲ ಅಲ್ಲಿಯೇ ಇರುತ್ತಿದೆವು. ಅಕ್ಕಪಕ್ಕನೇ ಹೋಟೆಲ್ ಇದ್ದಿದ್ದರಿಂದ 6 ಗಂಟೆಗೆ ಎಲ್ಲರನ್ನು ಏಳಿಸಿ, ಮೇಕಪ್ ಮಾಡ್ಸಿ, ಎಂಟು ಗಂಟೆಗೆಲ್ಲ ಚಿತ್ರೀಕರಣ ಶುರುಮಾಡುತ್ತಿದೆವು.
‘ನಿನ್ನ ನಗುವು ಹೂವಂತೆ’ ಹಾಡಿನ ಸೈಕಲ್ ಎಫೆಕ್ಟ್
ಬೆಂಕಿ ಬಲೆಯ ಸಿನಿಮಾದ ‘ನಿನ್ನ ನಗುವು ಹೂವಂತೆ’ ಹಾಡಿನ ಚಿತ್ರೀಕರಣವನ್ನು ಮೈಸೂರಿನ ಸುತ್ತಮುತ್ತ ಹಳ್ಳಿ, ಗದ್ದೆಗಳಲ್ಲಿಯೇ ಮಾಡಿದ್ದು. ಆ ಸಿನಿಮಾ ನೋಡಿ, ಸೈಕಲ್ಗೆ ಜನಪ್ರಿಯತೆ ಬಂದಿದ್ದಲ್ಲದೇ, ಸೈಕಲ್ ಮೇಲೆ ಪ್ರೇಮಿಗಳನ್ನು ಕೂರಿಸಿಕೊಂಡು ಹೋಗುವುದು ಖ್ಯಾತಿ ಗಳಿಸಿತು. ಅಲ್ಲಿಯವರೆಗೂ ಬಹುತೇಕ ಜನರಿಗೆ ಸೈಕಲ್ನಲ್ಲಿ ಹುಡುಗಿಯರನ್ನು ಮುಂದಕ್ಕೆ ಕೂರಿಸಿಕೊಂಡು ಹೋಗಬಹುದು ಎಂಬುದು ಗೊತ್ತಿರಲಿಲ್ಲ. ರ್ಯಾಲಿ ಸೈಕಲ್ ಇದ್ರೆ ಸಾಹುಕಾರ, ಬಿಎಸ್ಎ ಫಿಲಿಪ್ಸ್ ಇದ್ರೆ ಮಧ್ಯಮ ವರ್ಗದವನು ಎಂದು ಪರಿಗಣಿಸಲಾಗುತ್ತಿತ್ತು. ಬಡವನಿಗೆ ಕಾಲೇ ಸೈಕಲ್.
ಮಾಸ್ಟರ್ ಲೋಹಿತ್ ಮಾಸ್ಟರ್ ಪುನಿತ್ ಆದದ್ದು ಹೀಗೆ
ಪಾರ್ವತಮ್ಮನವರು, ‘ಅಪ್ಪು ತುಂಬಾ ಚೆನ್ನಾಗಿ ನಟನೆ ಮಾಡುತ್ತಾನೆ. ಅವನಿಗಾಗಿಯೇ ಒಂದು ಕಥೆ ಮಾಡಿ’ ಎಂದು ಹೇಳಿದ್ರು. ಸಮಯದ ಗೊಂಬೆ ಸಮಯದಲ್ಲಿ ಪಾರ್ವತಮ್ಮನವರು ಹೇಳಿದ ಮಾತು ನೆನಪಿಗೆ ಬಂತು. ಆಗ ನಾನು ಯಾವ ಕಥೆ ಚೆನ್ನಾಗಿರುತ್ತದೆ ಎಂದು ಯೋಚನೆ ಮಾಡಿದೆ. ಚೇಸ್ ಎ ಕ್ರೂಕೆಡ್ ಶ್ಯಾಡೋ ಎಂಬ ಸಿನಿಮಾ ಬಂದಿತ್ತು. ಅದರಲ್ಲಿ ಕೊನೆಯವರೆಗೂ ಕೊಲೆ ಮಾಡಿದ್ದಾರೆ ಎಂಬುದು ಗೊತ್ತಾಗುವುದಿಲ್ಲ. ಅಂತಿಮವಾಗಿ ತಿಳಿಯುತ್ತದೆ. ಆ ಪ್ರಕರಣ ಬೇಧಿಸಲು ಪೊಲೀಸ್ ಇನ್ಸ್ಪೆಕ್ಟರೊಬ್ಬ ತನ್ನ ಮಗನನ್ನೇ ಬಲಿ ಕೊಡಲು ತಯಾರಾಗಿರುತ್ತಾನೆ. ಅದರಿಂದ ಪ್ರೇರಣೆ ಪಡೆದು ‘ಯಾರಿವನು’ ಕಥೆ ಮಾಡಿದೆ. ರಾಜ್ಕುಮಾರ್ ತಂದೆ ಪುನೀತ್ ಅದರಲ್ಲಿ ಮಗ. ಪಾರ್ವತಮ್ಮ, ರಾಜ್ಕುಮಾರ್, ವರದಪ್ಪ ಎಲ್ಲರೂ ಆ ಕಥೆಯನ್ನು ಮೆಚ್ಚಿಕೊಂಡ್ರು. ಆ ಸಿನಿಮಾದಲ್ಲಿ ಅಪ್ಪು ಹೀರೊ. ಆಗ ಅಪ್ಪು ಹೆಸರು ಲೋಹಿತ್ ಎಂದಿತ್ತು. ಜಾತಕ ತೋರಿಸಿದಾಗ ಜ್ಯೋತಿಷಿಗಳ ಸಲಹೆ ಮೇರೆಗೆ ಅವನ ಹೆಸರನ್ನು ಪುನೀತ್ ಎಂದು ಬದಲಿಸಲಾಯ್ತು. ಜೊತೆಗೆ ಶ್ರೀನಾಥ್ ಮಗನ ಹೆಸರು ಲೋಹಿತ್ ಎಂದಿತ್ತು. ಹಾಗಾಗಿ ಹೆಸರು ಬದಲಾಯಿಸಲು ನಿರ್ಧಾರ ತೆಗೆದುಕೊಂಡ್ರು.
ಆ ಸಿನಿಮಾದಲ್ಲಿ ವಯಸ್ಸಾದ ಪಾತ್ರವೊಂದಿದೆ. ಅವರು ಉಟ್ಟಿದ್ದ ಸೀರೆ ಈ ಸನ್ನಿವೇಶಕ್ಕೆ ಬಹಳ ಅದ್ದೂರಿ ಎನಿಸುತ್ತಿದೆ ಬದಲಾಯಿಸಿ ಎಂದು ಕೇಳಿದೆ. ಅದಕ್ಕವರು ದೊರೆಯವರನ್ನು ಕರೆಯಿರಿ ಎಂದ್ರು. ಅಲ್ಲಿಗೆ ಬಂದ ದೊರೆ, ನಿಮ್ಮಿಗಿಷ್ಟ ಬಂದಿದ್ದನ್ನು ಹಾಕಿಕೊಳ್ಳಿ ಎಂದುಬಿಟ್ರು. ನೋಡಿದ್ರಾ, ಅವರಿಗೂ ನಿಮಗಿರುವ ವ್ಯತ್ಯಾಸ ಇಷ್ಟೆನೆ. ನಾನು ಇದನ್ನೇ ಹಾಕಿಕೊಳ್ಳುತ್ತೇನೆ ಬದಲಾಯಿಸುವುದಿಲ್ಲ ಎಂದು ಅವರು ಹೇಳಿದ್ರು. ದೊರೆಯವರು ಹೇಳಿದ ಮೇಲೆ ಮುಗಿದು ಹೋಯ್ತು. ನನ್ನ ಲಕ್ಷ್ಮಣ ರೇಖೆ ಅವರು. ಸರಿ ಆಯ್ತು ಬಿಡಿ ಎಂದೆ. ನಂತರ ನಾನು ದೊರೆಯವರಿಗೆ ಆ ಸೀರೆ ಸರಿ ಕಾಣುವುದಿಲ್ಲ ಎಂದೆ. ಅದಕ್ಕವರು ಪ್ರೇಕ್ಷಕರು ಅದನ್ನೆಲ್ಲ ಎಲ್ಲಿ ನೋಡ್ತಾರೆ. ಅವರಿಗೆ ಚಿತ್ರಕಥೆ ಮುಖ್ಯ. ಕಲಾವಿದರ ಮುಖವನ್ನು ನೋಡ್ತಾರೆ. ಅಲ್ಲದೇ ಯಾರು ಬಂದು ನಮಗೆ ಆ ಕಲಾವಿದೆಗೆ ಅಷ್ಟು ಅದ್ದೂರಿ ಬಟ್ಟೆ ಕೊಟ್ಟಿದ್ದೀರಿ ಎಂದು ಯಾರು ನಮ್ಮನ್ನು ಕೇಳ್ತಾರೆ. ಸುಮ್ನೆ ಇರ್ರಿ ಭಗವನ್ ಅಂದುಬಿಟ್ರು. ಆಯ್ತು ಬಿಡಿ ಎಂದೆ.
ಕೆಲವರು ಸನ್ನಿವೇಶಕ್ಕೆ ತಕ್ಕ ಬಟ್ಟೆಗಳನ್ನು ಕೇಳಿಯೂ ಹಾಕಿಕೊಳ್ತಾರೆ. ಮತ್ತೆ ಕೆಲವರು ತಮ್ಮಗಿಷ್ಟವಾದ ಬಟ್ಟೆಗಳೇ ಬೇಕು ಎನ್ನುತ್ತಾರೆ. ನಾವು ಸನ್ನಿವೇಶಕ್ಕೆ ಹೊಂದುವುದಿಲ್ಲ ಎಂದು ಹೇಳ್ತೇವೆ. ಆದ್ರೆ ಅವರು ಅದೇ ಬೇಕು ಎಂದ್ರೆ ಸಮ್ಮನಾಗುತ್ತೇವೆ. ಕಥೆ, ಸಂಭಾಷಣೆ ಮೇಲೆಯೇ ಜನರ ಗಮನ ಇರುತ್ತದೆ ಎಂಬುದು ನಮಗೆ ಗೊತ್ತು.
ಮುಂದುವರಿಯುವುದು....
ಸಂದರ್ಶನ: ಕೆ.ಎಸ್. ಪರಮೇಶ್ವರ