ಮೈಕೊರೆಯುವ ಚಳಿಯಲ್ಲಿ ಅಣ್ಣಾವ್ರು ಮಾಡಿದ್ದೇನು?

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 29


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ನಿರ್ದೇಶಕರ ಜೊತೆಗೆ ಅಣ್ಣಾವ್ರು ನಡೆದುಕೊಳ್ಳುತ್ತಿದ್ದ ರೀತಿ

‘ನಾದಮಯ’ ಒಂಬತ್ತು ನಿಮಿಷದ ಹಾಡು. ಹಾಗಾಗಿ ಚಿಕ್ಕ, ಚಿಕ್ಕ ಶಾಟ್‌ಗಳು ಇರದೇ ಹೋದ್ರೆ ಜನ ಕೊನೆಯವರೆಗೂ ನೋಡುವುದು ಕಷ್ಟ ಎಂದ ಹೇಳಿದ ತಕ್ಷಣ, ರಾಜ್‌ಕುಮಾರ್‌ ಸರಿ ಎಂದು ಒಪ್ಪಿಕೊಂಡ್ರು. ಅವರು ಯಾವ ನಿರ್ದೇಶಕರ ಬಳಿಯೂ ವಾದ ಮಾಡುತ್ತಿರಲಿಲ್ಲ. ಅದರಲ್ಲೂ ನಮ್ಮಿಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇತ್ತು.

ಅವರೊಂದಿಗೆ ಮಾಡಿದ ಎಲ್ಲ ಸಿನಿಮಾಗಳಲ್ಲೂ ಶಾಟ್‌ ಓಕೆ ಎಂದು ನಾನು ಹೇಳುವ ಧ್ವನಿಯಲ್ಲಿಯೇ ಅವರು ಅದರ ಭಾವವನ್ನು ಗುರುತಿಸುತ್ತಿದ್ರು. ಶಾಟ್‌ಗಳು ನನಗೆ ಅಷ್ಟೊಂದು ‌ಹಿಡಿಸಲಿಲ್ಲ ಎಂಬುದು ಗೊತ್ತಾದ ತಕ್ಷಣ ‘ಒನ್ಸ್‌ಮೋರ್‌’ ಎನ್ನುತ್ತಿದ್ರು. ನಮ್ಮಿಬ್ಬರ ನಡುವೆ ಅಷ್ಟೊಂದು ಅವಿನಾಭಾವ ಸಂಬಂಧ ಇತ್ತು. ಅವರ ಮಾತುಗಳೆಂದ್ರೆ ನಮಗೆ ಸುಭಾಷಿತ. ಬೇರೆ ಯಾವ ನಿರ್ದೇಶಕರಿಗೂ ಇನ್ನು ಮುಂದೆ ನನ್ನ ಸಿನಿಮಾ ನಿರ್ದೇಶನಕ್ಕೆ ಹೇಳಬೇಡ. ದೊರೆ ಭಗವಾನ್‌ ಕರೆಸು, ಅವರ ಸಿನಿಮಾ ಆದರೆ ನೆಮ್ಮದಿಯಿಂದ ನಿದ್ದೆ ಮಾಡ್ತೇನೆ ಎಂದು ಕೊನೆಯಲ್ಲಿ ಪಾರ್ವತಮ್ಮ ಅವರಿಗೆ ಅವರು ಹೇಳಿದ್ರು.


2 ಡಿಗ್ರಯಷ್ಟು ಕೊರಿಯುವ ಚಳಿಯಲ್ಲಿ ಚಪ್ಪಲಿ ಕೂಡ ಹಾಕದೆ ನಟಿಸಿದ್ದರು

‘ನಾದಮಯ’ ಒಂದೇ ಹಾಡನ್ನು ಹಿಮಾಲಯದಲ್ಲಿ ಹದಿನೇಳು ದಿನ ಶೂಟಿಂಗ್‌ ಮಾಡಿದೆವು. ಕೇದರನಾಥ 18 ಸಾವಿರ ಅಡಿ ಇದೆ. ಅದಕ್ಕಿಂತ ಒಂದು ಸಾವಿರ ಅಡಿ ಮೇಲೆ ಹೋಗಿದ್ದೆವು. ಮಿಲಿಟರಿ ಅವರು ಇದು ನಿಷೇಧಿತ ಪ್ರದೇಶ ದಯವಿಟ್ಟು ಇಲ್ಲಿಂದ ದೂರ ಹೋಗಿ ಎಂದು ಹೇಳಿದ್ರು. ಅಲ್ಲಿಂದ ಸ್ವಲ್ಪ ದೂರಕ್ಕೆ ಬಂದು ಶೂಟಿಂಗ್‌ ಮಾಡಿದೆವು. ಕ್ಯಾಂಪ್‌ ಕಾಣಿಸುವ ಹಾಗೆಯೇ ಶೂಟ್‌ ಮಾಡಿದ್ದೇವೆ. 2 ಡಿಗ್ರಿ ತಾಪಮಾನ ಇತ್ತು ಅನಿಸುತ್ತದೆ. ನಾವೆಲ್ಲ ಎರಡರಿಂದ ಮೂರು ಉಲನ್‌ ಸಾಕ್ಸ್‌, ಶೂ, ಎರಡು ಜರ್ಕಿನ್ ಹಾಕಿಕೊಂಡಿದ್ದೆವು. ಆ ಚಳಿಯಲ್ಲಿಯೂ ರಾಜ್‌ಕುಮಾರ್‌ ಅವರು ಒಂದು ಜುಬ್ಬ ಮತ್ತು ಪಂಜೆ ಹಾಕಿಕೊಂಡು ಶೂಟಿಂಗ್‌ ಮಾಡುತ್ತಿದ್ರು. ದೇವರ ಹಾಡಾಗಿರುವುದರಿಂದ ಕಾಲಿಗೆ ಚಪ್ಪಲಿಯೂ ಹಾಕುತ್ತಿರಲಿಲ್ಲ. ಶಾಟ್‌ ಓಕೆ ಆಗುವವರೆಗೂ ಬರೀ ಕಾಲಿನಲ್ಲಿಯೇ ನಿಂತಿರುತ್ತಿದ್ರು. ಅವರ ಆತ್ಮಸ್ಥೈರ್ಯವನ್ನು ವಿವರಿಸಲು ಸಾಧ್ಯವೇ ಇಲ್ಲ. ಅವರಂತಹ ನಟನನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ದಿವಸವೂ ಸೌಕರ್ಯಗಳನ್ನು ಕೇಳುತ್ತಿರಲಿಲ್ಲ. ಇಲ್ಲಿಂದಲೇ ಅವರಿಗೆ ಕೈಮುಗಿಯಬೇಕು ಅವರಿಗೆ. ಈಗಿರುವವರು ಸಾವಿರಾರು ಸೌಕರ್ಯಗಳನ್ನು ಕೇಳುತ್ತಾರೆ.

ಕೇದರನಾಥರಿಂದ ಬದರೀನಾಥಕ್ಕೆ ಶೂಟಿಂಗ್‌ ಹೋದೆವು. ಬೆಳಿಗ್ಗೆ 8.30 ಗಂಟೆ ಶೂಟಿಂಗ್‌ ಶುರುವಾದರೆ ಮಧ್ಯಾಹ್ನ 2 ಗಂಟೆಗೆಲ್ಲ ಪ್ಯಾಕ್‌ಅಪ್‌ ಮಾಡುತ್ತಿದೆವು. ಬಿಸಿಲು ಕಡಿಮೆ ಆಗುತ್ತಿದ್ದರಿಂದ ಕ್ಯಾಮೆರಾಮೆನ್‌ ಶ್ರೀಕಾಂತ್‌ ಅವರು ಸಂಜೆ ಮೇಲೆ ಶೂಟಿಂಗ್‌ ಮಾಡುವುದು ಬೇಡ ಅನ್ನುತ್ತಿದ್ರು. ದಿನಕ್ಕೆ ನಾಲ್ಕೈದು ಶಾಟ್‌ ಮಾಡಲು ಮಾತ್ರವೇ ಸಾಧ್ಯವಾಗುತ್ತಿತ್ತು. ಹಾಗಾಗಿಯೇ ಚಿತ್ರೀಕರಣ ತುಂಬಾ ದಿನಗಳನ್ನು ತೆಗೆದುಕೊಂಡಿತು. ಚಿತ್ರೀಕರಣಕ್ಕೆ ಸೂಕ್ತ ಸ್ಥಳಗಳನ್ನು ಹುಡುಕಿಕೊಂಡು ಅಲೆದಾಡುತ್ತಿದ್ದೆವು. ಕ್ಯಾಮೆರಾ ಯೂನಿಟ್‌ನವರು ಓಮಿನಿಯಲ್ಲಿ ಹೋಗುತ್ತಿದ್ವಿ. ಉಳಿದವರಿಗೆ ಟಿ.ಟಿ ಇತ್ತು. ನಮ್ಮ ಹಿಂದೆ ಅವರು ಬರುತ್ತಿದ್ರು. ನಾವು ಎಲ್ಲಿ ಓವಿಮಿ ನಿಲ್ಲಿಸುತ್ತೇವೋ ಅಲ್ಲಿ ಅವರ ಟಿ.ಟಿ. ಬಂದು ನಿಲ್ಲಬೇಕಿತ್ತು. ಕೇದರನಾಥ ಮತ್ತು ಬದರೀನಾಥಗೆ ಕುದುರೆಯಲ್ಲಿಯೇ ಹೋಗಬೇಕಿತ್ತು. ಅಲ್ಲಿ ಪೇಜಾವರ ಸ್ವಾಮೀಜಿ ಮಠ ಇದೆ. ಅಲ್ಲಿ ಉಳಿದುಕೊಳ್ಳುತ್ತಿದ್ದೆವು. ರಾಜ್‌ಕುಮಾರ್‌ ಬಂದಿದ್ದಾರೆ ಎಂದ್ರೆ ಅಲ್ಲಿ ರಾಜಾತೀತ್ಯ ಇರುತ್ತಿತ್ತು. ನಾವು ಅಲ್ಲಿ ಏನು ಕೇಳಿದ್ರು ಕೊಡುತ್ತಿದ್ರು.


ಮುಂದುವರೆಯುವುದು...

20 views