“ಮೌಂಟ್‌ ಎವರೆಸ್ಟ್‌ ಮೇಲೆ ಡೈಮಂಡ್‌ ರಾಕೆಟ್‌ ಶೂಟಿಂಗ್”

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 14


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)


ʼಚಂದನದ ಗೊಂಬೆ’ಯ ಕಥೆ ಏನು ಎಂದು ಕಲ್ಪನಾ ಕೇಳಿದಳು. ಕಥೆಯನ್ನು ಪೂರ್ತಿಯಾಗಿ ಹೇಳಿದೆ. ಆಗ ಆಕೆ ನನ್ನ ಕೈ ಹಿಡಿದುಕೊಂಡು ಭಗವಾನ್‌ ಜೀ ಈ ಪಾತ್ರವನ್ನು ನಾನೇ ಮಾಡುತ್ತೇನೆ ಎಂದಳು. ನನಗೆ ಮೂರು ಕಾಸೂ ಕೊಡುವುದು ಬೇಡ. ಈ ಪಾತ್ರ ನನಗೆ ತುಂಬಾ ಇಷ್ಟವಾಗಿದೆ ಎಂದಳು. ನಾನು ಆಯ್ತು ಎಂದೆ.


ಮದ್ರಾಸ್‌ಗೆ ಬಂದೆವು. ಚಂದನದ ಗೊಂಬೆ ಮಾಡುವ ಯೋಚನೆ ಬಂದಾಗ, ಕಲ್ಪನಾ ಕಾಲ್‌ಶೀಟ್‌ ಕೇಳಬೇಕು ಎಂದು ದೊರೆ ಅವರಿಗೆ ಹೇಳಿದೆ. ಏನು ದುಡ್ಡು ತೆಗೆದುಕೊಳ್ಳದೇ ಸಿನಿಮಾ ಮಾಡುತ್ತೇನೆ ಅಂದಿದ್ಲು ಎಂದೆ. ಆ ಕಾಲದಲ್ಲಿಯೇ ಕಲ್ಪನಾ ಒಂದು ಸಿನಿಮಾಕ್ಕೆ 25 ರಿಂದ 50 ಸಾವಿರ ತೆಗೆದುಕೊಳ್ಳುತ್ತಿದ್ಲು. ಆಗ ದೊರೆ ಅವರು ‘ಚಂದನದ ಗೊಂಬೆ’ ಎಂದಾಗ ಆಕೆಯೂ ಚಂದನದ ಗೊಂಬೆಯ ತರಹವೇ ಇರಬೇಕು. ಬಯಲು ದಾರಿಯಲ್ಲಿ ಆಕೆ ಮಗುವಿನ ತಾಯಿಯ ಪಾತ್ರ ಮಾಡಿದ್ದಾಳೆ. ಆ ಪಾತ್ರಕ್ಕೆ ಕಲ್ಪನಾ ಹೊಂದುತ್ತಿದ್ದಳು. ಆದರೆ, ಚಂದನದ ಗೊಂಬೆ ಎಂದಾಗ ಮುದ್ದು ಮುದ್ದಾಗಿ ಕಾಣಿಸಬೇಕು, ಈ ಪಾತ್ರಕ್ಕೆ ಲಕ್ಷ್ಮೀ ಹೊಂದುತ್ತಾಳೆ. ಆಕೆಯೇ ಚಂದನದ ಗೊಂಬೆ, ಕರೆದುಕೊಂಡು ಬನ್ನಿ ಅಂದ್ರು. ಆಗ ನಾ ನಿನ್ನ ಬಿಡಲಾರೆ ಸಿನಿಮಾ ಮಾಡಿದ್ದಳು ಲಕ್ಷ್ಮೀ. ದೊರೆ ಹೇಳಿದ್ದಕ್ಕೆ ನಾನು ಯಾವತ್ತು ಇಲ್ಲ ಎನ್ನುತ್ತಿರಲಿಲ್ಲ. ನಾನು ಹೇಳಿದ್ದಕ್ಕೆ ಅವರು ಇಲ್ಲ ಎನ್ನುತ್ತಿರಲಿಲ್ಲ. ಹಾಗಾಗಿಯೇ ನಮ್ಮ ಸ್ನೇಹ 50 ವರ್ಷಗಳವರೆಗೆ ಉಳಿದುಕೊಂಡಿದ್ದು, ಅವರು ಕಣ್ಮರೆಯಾದ ನಂತರವೂ ಅದು ಹಾಗೆಯೇ ಇದೆ. ಇವತ್ತಿಗೂ ನಾನು ದೊರೆ-ಭಗವಾನ್‌ ಎಂದೇ ಗುರುತಿಸಿಕೊಳ್ಳುತ್ತೇನೆ.ಆ ಹೊತ್ತಿಗೆ ರಾಜ್‌ಕುಮಾರ್‌, ವರದಪ್ಪ ಅವರಿಗೆ ಒಂದು ಯೋಚನೆ ಬಂತು. ಸಿಐಡಿ 999 ಜಾಕ್‌ಪಾಟ್‌ ಕೊನೆಯಲ್ಲಿ ಆಪರೇಷನ್‌ ಡೈಮಂಡ್‌ ರಾಕೆಟ್‌ ಎಂದು ಅನೌನ್ಸ್‌ ಮಾಡಿದ್ರಲ್ಲ, ಅದನ್ನು ಯಾಕೆ ಈಗ ಮಾಡಬಾರದು, ಒಂದು ಬಾಂಡ್‌ ಪಿಕ್ಚರ್‌ ಮಾಡೋಣ ಎಂದ್ರು. ಕಾಲ್‌ಶೀಟ್‌ ರೆಡಿಯಾಯ್ತು. ‘ಬಯಲುದಾರಿ’, ‘ಎರಡು ಕನಸು’ ಹಾಡುಗಳು ಯಶಸ್ಸು ಕಂಡಿತ್ತು. ಈ ಸಿನಿಮಾದಲ್ಲಿಯೂ ರಾಜನ್‌– ನಾಗೇಂದ್ರ ಅವರನ್ನು ಬಿಡಲು ಮನಸ್ಸಾಗಲಿಲ್ಲ. ಆದ್ರೆ ಎಲ್ಲ ಬಾಂಡ್‌ ಸಿನಿಮಾಗಳಿಗೂ ವೆಂಕಟೇಶ್‌ ಅವರೇ ಸಂಗೀತ ನೀಡಿದ್ರು. ಹಾಗಾಗಿ ಅವರನ್ನೇ ಕೇಳಿದ್ವಿ. ಬಾಂಡ್‌ ಸಿನಿಮಾಗಳಲ್ಲಿ ವಿಶೇಷತೆ ಇರಬೇಕು. ಇಲ್ಲಿಯವರೆಗೂ ಯಾರೂ ವಿದೇಶದಲ್ಲಿ ಶೂಟಿಂಗ್‌ ಮಾಡಿರಲಿಲ್ಲ. ಹಾಗಾಗಿ ಅಲ್ಲಿಗೆ ಹೋಗೋಣ ಎಂದು ನಿರ್ಧರಿಸಿದೆವು. ಆಗಿನ ಕಾಲದಲ್ಲಿ ಪಾಸ್‌ಪೋರ್ಟ್ ಸಿಗೋದು ತುಂಬಾ ಕಷ್ಟ ಇತ್ತು. ಅಪ್ಲೈ ಮಾಡಿದ್ರೆ ತಿಂಗಳಾನುಗಟ್ಟನೆ ಆಗುತ್ತಿತ್ತು ಸಿಗೋದಕ್ಕೆ. ಕನಿಷ್ಠ ಹತ್ತು ಜನಕ್ಕಾದ್ರೂ ಪಾಸ್‌ಪೋರ್ಟ್‌ ಬೇಕಿತ್ತು. ಅದೆಲ್ಲ ನಮ್ಮ ಕೈಯಲ್ಲಿ ಆಗದಿರುವುದು ಎನಿಸಿತು. ಅದಕ್ಕೆ ನೇಪಾಳಕ್ಕೆ ಹೋಗಲು ನಿರ್ಧರಿಸಿದೆವು. ಅಲ್ಲಿಗೆ ಹೋಗುವುದಾದ್ರೆ ಪೋಸ್ಟ್‌ ಆಫೀಸ್‌ನಿಂದ ನಾವು ಭಾರತೀಯರು ಎಂದು ಸರ್ಟಿಫಿಕೆಟ್‌ ತೆಗೆದುಕೊಂಡ್ರೆ ಸಾಕಿತ್ತು. ವಿಮಾನದಲ್ಲಿ ಹೋಗುವವರಿಗೆ ಒಂದು ಲೆಟರ್‌, ಬಸ್‌ನಲ್ಲಿ ಬರುವವರಿಗೆ ಸೇರಿ ಎರಡು ಸರ್ಟಿಫಿಕೆಟ್‌ ತೆಗೆದುಕೊಂಡೆ. ಉತ್ತರ ಪ್ರದೇಶದ ಗಡಿ ದಾಟಿ ನೇಪಾಳಕ್ಕೆ ಹೋಗಬೇಕಿತ್ತು. ಕ್ಯಾಮೆರಾಗಳನ್ನೆಲ್ಲ ವಿಮಾನದಲ್ಲಿ ಬಿಡುತ್ತಿರಲಿಲ್ಲ. ಅವುಗಳನ್ನೆಲ್ಲ ಬಸ್‌ನಲ್ಲಿ ತರಬೇಕಿತ್ತು. ನೇಪಾಳಕ್ಕೆ ಹೋದೆವು. ವಿದೇಶಕ್ಕೆ ಹೋಗಿ ಚಿತ್ರೀಕರಣದ ಮಾಡಿದ ಮೊದಲ ಸಿನಿಮಾ ಇದು. ‘ಸಿಂಗಪುರ್‌ನಲ್ಲಿ ರಾಜಾ ಕುಳ್ಳ’ ಎರಡನೇ ಸಿನಿಮಾ ವಿದೇಶದಲ್ಲಿ ಚಿತ್ರೀಕರಣವಾಗಿದ್ದು.

1978ರಲ್ಲಿ ಡೈಮಂಡ್‌ ರಾಕೆಟ್‌ ಸಿನಿಮಾಕ್ಕೆ 38 ಲಕ್ಷ ಖರ್ಚಾಗಿತ್ತು. ಒಂದೊಂದು ಸೆಟ್‌ಗೆ 3 ಲಕ್ಷ ಆಗಿತ್ತು. ಎವಿಎಂ ಸ್ಟುಡಿಯೊದಲ್ಲಿ ಆರು ಮಹಡಿಯನ್ನು ಚಿತ್ರೀಕರಣಕ್ಕೆ ತೆಗೆದುಕೊಂಡಿದ್ದೆ. ಎಲ್ಲ ಮಹಡಿಗಳಲ್ಲೂ ಸೆಟ್‌ ಹಾಕಿದ್ದೆ. ತಮಿಳು, ತಮಿಳಿನವರು ಕನ್ನಡ ಸಿನಿಮಾಕ್ಕೆ ಈ ಮಾದರಿಯ ಸೆಟ್‌ ಹಾಕಿದ್ದಾರೆ ಎಂದು ಆಶ್ಚರ್ಯಪಟ್ಟಿದ್ರು. ಬಾಯಿ ಪ್ರಚಾರವಾಗಿ, ಕಾರಿನಲ್ಲಿ ಬಂದು ಎಲ್ಲಾ ನೋಡಿಕೊಂಡು ಹೋಗುತ್ತಿದ್ರು. ಮೂರು ಮಹಡಿಯ ಸೆಟ್‌ಹಾಕಿ ಫೈಟಿಂಗ್‌ ಸೀನ್‌ ಮಾಡಿದ್ರಂತೆ ಎಂದು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿತ್ತು. ಡಬ್ಬಿಂಗ್‌ ರೈಟ್ಸ್‌ 16 ಲಕ್ಷ ಬಂತು. ಅರ್ಧ ಬಜೆಟ್ ಅಲ್ಲೇ ಸಿಕ್ಕಿತ್ತು.


ನೀನು ಇಂಗ್ಲಿಷ್‌ ಸಿನಿಮಾದ ಮಾದರಿಯಲ್ಲಿಯೇ ತೆಗೆಯುತ್ತೀಯಾ ಇಂಗ್ಲಿಷ್‌ ಹಾಡು ಹಾಕಿದ್ರೆ ಹೇಗೆ ಎಂದ ವೆಂಕಟೇಶ್‌. ನೀನು ಟ್ಯೂನ್‌ ಮಾಡು, ನಾನೇ ಬರೆದುಕೊಡ್ತೇನೆ ಅಂದೆ. ಅವನು ಟ್ಯೂನ್‌ಹಾಕಿದ. ನಾನು ಬರೆದುಕೊಟ್ಟೆ. ‘ಇಫ್‌ ಯೂ ಕಮ್‌ ಟುಡೇ’ ನಂದೇ ಸಾಹಿತ್ಯ. ಹೀಗೆ ಒಂದೊಂದು ಸಿನಿಮಾದಲ್ಲಿ ಒಂದೊಂದು ಸಾಹಸ ಮಾಡುತ್ತಿದ್ವಿ. ಡೈಮಂಡ್‌ ರಾಕೆಟ್‌ನಲ್ಲಿ ಕಾರ್‌ ಚೇಸ್‌ ದೃಶ್ಯವಿದೆ. ಕಾರ್‌ ಚೇಸ್‌ ಮಾಡ್ತಾ ಮಾಡ್ತಾ ಚೀನಾ ಗಡಿಗೆ ಕೇವಲ 6 ಕಿ.ಮೀ ದೂರದಲ್ಲಿದ್ದೆವು. ಸೇನೆ ಅವರು ಬಂದು ಮುಂದೆ ಹೋಗುವುದನ್ನು ತಡೆದ್ರು. ಶೂಟಿಂಗ್ ಮಾಡುತ್ತಿದ್ದೇವೆ ಅಂದೆವು. ಸಾಧ್ಯವಿಲ್ಲ, ಇದು ಸಂಪೂರ್ಣ ಸೇನಾ ವ್ಯಾಪ್ತಿ ಎಂದು ಹೇಳಿ, ವಾಪಸ್‌ ಕಳುಹಿಸಿದ್ರು. ಆ ಸಿನಿಮಾದ ಹಾಡುಗಳೆಲ್ಲ ಸೂಪರ್‌ ಹಿಟ್‌ ಆಯ್ತು. ನಮ್ಮ ಚಿತ್ರಗಳಲ್ಲಿ ಹಾಡುಗಳಿಗೆ ಪ್ರಾಮುಖ್ಯತೆ ಏಕೆ ಕೊಡುತ್ತಿದ್ವಿ ಎಂದ್ರೆ, ನನಗೆ ಕಾಲೇಜು ದಿವಸಗಳಿಂದಲೂ ಒಳ್ಳೆಯ ಹಾಡುಗಳನ್ನು ಕೇಳುತ್ತಿದ್ದೆ. ಮತ್ತು ಹಾಡುತ್ತಿದ್ದೆ. ಸಂಗೀತದ ಜ್ಞಾನ ನನಗಿರಲಿಲ್ಲ. ಆದ್ರೆ ಅದನ್ನು ಆಸ್ವಾದಿಸುವ ಗುಣ ಇತ್ತು. ಅದರಿಂದ ಒಳ್ಳೆಯ ಹಾಡುಗಳು ಯಾವುದೆಂದು ಗೊತ್ತಿತ್ತು. ದೊರೆ, ಸೀತಾರ್‌ ವಾದಕ ಆದದ್ದರಿಂದ ಹಿಂದೂಸ್ತಾನಿ ರಾಗಗಳೆಲ್ಲ ಗೊತ್ತಿತ್ತು. ಮ್ಯೂಸಿಕ್ ಡೈರೆಕ್ಟರ್‌ ಕೊಡುತ್ತಿದ್ದ ಟ್ಯೂನ್‌ ಜನರಿಗೆ ಇಷ್ಟವಾಗುತ್ತದೋ, ಇಲ್ವೋ ಎಂಬುದು ನಮಗೆ ತಿಳಿಯುತ್ತಿತ್ತು. ಸಂಗೀತದ ನಮ್ಮ ಅಭಿರುಚಿ ಶೇ 10 ರಷ್ಟಿದ್ದರೆ, ರಾಜನ್‌– ನಾಗೇಂದ್ರ, ಜಿ.ಕೆ. ವೆಂಕಟೇಶ್‌, ಎಂ. ರಂಗರಾವ್‌ ಅವರ ಕೊಡುಗೆ, ಉದಯಶಂಕರ್‌ ಅವರ ಅದ್ಭುತ ಸಾಹಿತ್ಯ ಜನಪ್ರಿಯತೆಗೆ ಕಾರಣವಾಗುತ್ತಿತ್ತು.


ಚಿತ್ರೀಕರಣಕ್ಕೆ ನೇಪಾಳಕ್ಕೆ ಹೋದೆವು. ಆದ್ರೆ ಅಲ್ಲಿ ಒಂದು ಪಬ್‌ ಕೂಡ ಇರಲಿಲ್ಲ. ಬಂಗಿ ಹೊಡೆದ್ರೆ ಜೈಲ್‌ಗೆ ಹಾಕುತ್ತಿದ್ರು. ಅಲ್ಲಿ ಒಬ್ಬ ಟಿಬೇಟಿಯನ್ ಪರಿಚಯ ಆದ. ಅವನು ಮತ್ತು ಆತನ ಹೆಂಡತಿ ನಮ್ಮ ಸಿನಿಮಾದಲ್ಲಿ ನಟಿಸಿದ್ದಾರೆ. ಆತನಿಗೆ ಕೇಳಿದೆ ಏನು ಮಾಡೋದು ಹೀಗೆ ಸಮಸ್ಯೆ ಆಗಿದೆ ಎಂದು, ನಾನು ಒಂದು ಕಡೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ಟಿಬೇಟಿಯನ್‌ ಮಾತ್ರ ಇರ್ತಾರೆ. ಅಲ್ಲಿ ಬಂಗಿ ಹೊಡೆಯುತ್ತಾರೆ. ಅದು ಯಾರಿಗೂ ಗೊತ್ತಿಲ್ಲ. ನೀವು ಬಂದ್ರೆ ಹೋಗೋಣ ಅಂದ. ಅಲ್ಲಿಗೆ ಕರೆದುಕೊಂಡು ಹೋದ. ಅಲ್ಲಿ ಚಿತ್ರೀಕರಣ ಮಾಡುವ ಹಾಗಿರಲಿಲ್ಲ. ಹಾಗಾಗಿ ನಂತರದಲ್ಲಿ ಇಲ್ಲಿಯೇ ಸೆಟ್‌ ಹಾಕಿಕೊಂಡು ಚಿತ್ರೀಕರಣ ಮಾಡಿದೆವು. ಆದ್ರೆ ಅಲ್ಲಿಗೆ ಹೋಗಿದ್ದರಿಂದ ಚೇಸಿಂಗ್‌, ಹಾಡುಗಳ ಚಿತ್ರೀಕರಣ ಎಲ್ಲಾ ಮಾಡಿದ್ವಿ.


ಮೌಂಟ್‌ ಎವರೆಸ್ಟ್‌ಗೆ ಹೋಗಲು ನೇಪಾಳದ ಅನುಮತಿ ಬೇಕು. ಹೇಗಿದ್ರು ಬಂದಿದ್ದೇವೆ ಏಕೆ ಮೌಂಟ್‌ ಎವರೆಸ್ಟ್‌ನಲ್ಲಿ ಚಿತ್ರೀಕರಣ ಮಾಡಬಹುದಲ್ಲಾ ಎಂಬ ಯೋಜನೆ ಬಂತು. ನಂತರ ರಾಯಲ್‌ ನೇಪಾಳ್‌ ಏರ್‌ಲೈನ್ಸ್‌ ಅನ್ನು ಸಂಪರ್ಕ ಮಾಡಿದೆ. ಮೌಂಟ್‌ ಎವರೆಸ್ಟ್‌ಗೆ ಹೋಗಲು ಅನುಮತಿ ಕೊಡುತ್ತೀರಾ ಎಂದು ಕೇಳಿದೆ. ಕೊಡುತ್ತೇವೆ, ಆದ್ರೆ ವಿಮಾನದ ಚಾರ್ಟರ್‌ ಮಾಡಬೇಕು, 25 ಸಾವಿರ ಆಗುತ್ತದೆ ಎಂದ್ರು. ಅದನ್ನು ಒಪ್ಪಿಕೊಂಡೆ. ಮೌಂಟ್‌ ಎವರೆಸ್ಟ್‌ನಲ್ಲಿ ಚಿತ್ರೀಕರಣ ಮಾಡಲು ಎಲ್ಲ ತಯಾರಿ ಮಾಡಿಕೊಂಡೆವು. ಕ್ಯಾಮೆರಾ ಇನ್ನೇನು ಇಡಬೇಕಿತ್ತು ಅಷ್ಟರಲ್ಲಿ ವಿಮಾನದಲ್ಲಿ ಇಡುತ್ತಿದ್ದ ಸಾಮಗ್ರಿಗಳನ್ನು ಪೈಲಟ್‌ ಬಂತು ಪರಿಶೀಲಿಸಿದ. ಆಗಿನ ಕಾಲದಲ್ಲಿ ಕ್ಯಾಮೆರಾಗಳಲ್ಲಿ ಬ್ಯಾಟರಿ ಬಳಸುತ್ತಿದ್ವಿ. ಅದರಲ್ಲಿ ಆ್ಯಸಿಡ್‌ ಇರುತ್ತಿತ್ತು. ಅದನ್ನು ನೋಡಿದ ಅವನು ವಿಮಾನದಲ್ಲಿ ಇದನ್ನು ತೆಗೆದುಕೊಂಡು ಹೋಗಲು ಅನುಮತಿ ಕೊಡುವುದಿಲ್ಲ ಎಂದ. ಒಂದು ಡ್ರಾಪ್‌ ಆ್ಯಸಿಡ್‌ ಬಿದ್ರು ವಿಮಾನ ತೂತಾಗಿ ಹೋಗುತ್ತದೆ. ಬ್ಯಾಟರಿ ಇಲ್ಲದೇ ನಾವೇನು ಶೂಟ್‌ ಮಾಡಲು ಸಾಧ್ಯ. ಹೃದಯವನ್ನೇ ಕಿತ್ತುಕೊಂಡ ಮೇಲೆ ಮನುಷ್ಯನಿಗೆ ಉಸಿರಾಡು ಎಂದ್ರೆ ಸಾಧ್ಯವೇ?. ಮುಂದೆ ಏನು ಮಾಡುವುದು ಎಂದು ಯೋಚಿಸಿದೆ. ಬ್ಯಾಟರಿ ತೆಗೆದುಕೊಂಡು ಹೋಗಲು ಪೈಲಟ್‌ ಬಿಡುತ್ತಿಲ್ಲ ಏನು ಮಾಡುವುದು ಎಂದು ಏರ್‌ಪೋರ್ಟ್‌ ಮ್ಯಾನೇಜರ್‌ಗೆ ಕೇಳಿದೆ. ಅದಕ್ಕೆ ಅವರು, ನಮ್ಮ ಮುಖ್ಯಸ್ಥರನ್ನು ಸಂಪರ್ಕಿಸಿ ಅಂದ್ರು. ರಾಯಲ್‌ ನೇಪಾಳ್‌ ಏರ್‌ಲೈನ್ಸ್‌ ಕೇಂದ್ರ ಕಚೇರಿಗೆ ಹೋದೆ. ಮುಖ್ಯಸ್ಥರನ್ನು ಭೇಟಿ ಆದೆ. ‘ಪೈಲಟ್‌ ವಿಮಾನದ ರಾಜ ಇದ್ದಂತೆ. ಅವನು ಹೇಳಿದ್ದೆ ಕೊನೆ. ಆತನ ಕರ್ತವ್ಯದಲ್ಲಿ ಮಧ್ಯ ಪ್ರವೇಶಿಸುವ ಅಧಿಕಾರ ನನಗೆ ಇಲ್ಲ’ ಎಂದುಬಿಟ್ಟರು.


ಏನು ಮಾಡುವುದು ಎಂದು ತಿಳಿಯಲೇ ಇಲ್ಲ. 25 ಸಾವಿರ ಬೇರೆ ಕಟ್ಟಿದ್ದೆ. ವಾಪಸ್‌ ಕೊಡುತ್ತಾರೋ, ಇಲ್ವೋ ಗೊತ್ತಿರಲಿಲ್ಲ. ಬಹಳ ಯೋಚನೆ ಮಾಡುತ್ತ ಬರುತ್ತಿದ್ದೆ, ರಸ್ತೆಯಲ್ಲಿ ಟೈರ್ ವಲ್ಕನೈಸಿಂಗ್ ಎಂದು ಬೋರ್ಡ್‌ ಹಾಕಿದ್ರು. ಆಗ, ನನಗೊಂದು ಐಡಿಯಾ ಬಂತು. ಅಂಬಾಸಿಡರ್‌ ಕಾರುಗಳಲ್ಲಿ ಬ್ಯಾಟರಿ ಇಡಬೇಕಾದ್ರೆ, ಟ್ಯೂಬ್‌ಗಳಲ್ಲಿರುವ ರಬ್ಬರ್‌ ಶೀಟ್‌ಗಳನ್ನು ಇಟ್ಟು, ಅದರ ಮೇಲೆ ಬ್ಯಾಟರಿ ಇಡುತ್ತಿದ್ದೆವು. ಆಕಸ್ಮಾತ್‌ ಆ್ಯಸಿಡ್‌ ಬಿದ್ರು ಫ್ರೇಮ್‌ ಒಡೆಯಬಾರದೆಂದು ಹೀಗೆ ಪ್ಲಾನ್ ಮಾಡುತ್ತಿದೆವು. ರಬ್ಬರ್‌ ಟ್ಯೂಬ್‌ಗೆ ಆ್ಯಸಿಡ್‌ ಬಿದ್ರು ಏನು ಆಗಲ್ಲ. ಅದು ಜ್ಞಾಪಕಕ್ಕೆ ಬಂತು. ಗಾಡಿ ನಿಲ್ಲಿಸು ಎಂದು, ಒಂದು ಟ್ಯೂಬ್‌ ತೆಗೆದುಕೊಂಡು ಕಟ್‌ ಮಾಡಿಸಿಕೊಂಡೆ. ಮತ್ತೆ ಪೈಲಟ್‌ ಹತ್ತಿರ ಬಂದೆ. ನಿಮಗೆ ಏನು ಬೇಕೋ ಅದನ್ನು ಮಾಡುವೆ. ನಮಗೆ ಬ್ಯಾಟರಿ ತೆಗೆದುಕೊಂಡು ಹೋಗಲು ಅನುಮತಿ ಕೊಡಿ. ಆ್ಯಸಿಡ್‌ ಬೀಳದಂತೆ ಒಂದು ಪರಿಹಾರವೂ ಇದೆ. ನಾವು ಭಾರತದಲ್ಲಿ ಹೀಗೆ ಮಾಡ್ತೇವೆ ಎಂದು ವಿವರಿಸಿದೆ. ತೋರಿಸಿ ಎಂದ. ಒಂದು ಡ್ರಾಪ್‌ ಆ್ಯಸಿಡ್‌ ತೆಗೆದು ಟ್ಯೂಬ್‌ಗೆ ಹಾಕಿದೆ. ಪುಣ್ಯಕ್ಕೆ ಅದಕ್ಕೆ ಏನು ಆಗಲಿಲ್ಲ. ನಂತರ ಅನುಮತಿ ಸಿಕ್ತು. ಅವನಿಗೆ ಏನು ಖುಷಿ ಆಯ್ತೋ ಗೊತ್ತಿಲ್ಲ. ರಾಜ್‌ಕುಮಾರ್‌ ಅವರನ್ನು ತೋರಿಸಿ ಇವರೇನಾ ಹೀರೊ ಎಂದ. ಹೌದು ಅಂದ್ವಿ. ಒಂದು ಸಲ ಮೌಂಟ್‌ ಎವರೆಸ್ಟ್‌ ಮೇಲೆ ಸುತ್ತಿಸಿದ. ಮತ್ತೇ ನೋಡಬೇಕಾ ಎಂದ, ಹೌದು ಅಂದ್ವಿ. ಎರಡೆರಡು ಸಲ ರೌಂಡ್‌ ಹೊಡೆಸಿದ. ಆಗ ಸಿನಿಮಾದಲ್ಲಿ ಎವರೆಸ್ಟ್‌ ಮೇಲೆ ಹೋಗಿ ಯಾರೂ ಶೂಟ್‌ ಮಾಡಿ ತೋರಿಸಿರಲಿಲ್ಲ.


ಡೈಮಂಡ್‌ ರಾಕೆಟ್‌ ಶೂಟ್‌ ಮಾಡಿ ಬಂದು, ಚಂದನದ ಗೊಂಬೆ ಚಿತ್ರೀಕರಣ ಮಾಡಿದೆವು. ಲಕ್ಷ್ಮೀ ನಿಜವಾಗಿಯೂ ಚಂದನದ ಗೊಂಬೆಯೇ. ಆಕೆಗೆ ಸರಿಯಾದ ಜೋಡಿ ಅನಂತ್‌ನಾಗ್‌. ನಂತರದಲ್ಲಿ ಅನಂತ್‌ ನಮಗೆ ಶಾಶ್ವತ ಎನ್ನುವಂತೆ ಆಗಿಹೋದ. ರಾಜ್‌ಕುಮಾರ್‌ ಬಿಟ್ರೆ ಅನಂತ್‌ ಅನ್ನೋ ಹಾಗಾಯ್ತು.


ಮುಂದುವರೆಯುವುದು...

ಸಂದರ್ಶಕರು - ಕೆ.ಎಸ್‌ ಪರಮೇಶ್ವರ


23 views