ಮಂಡ್ಯ ರಮೇಶ ಅವರ ಬಾಲ್ಯದ ಊರು ಯಾವುದು…

ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಲೈಫ್ ಸ್ಟೋರಿ - ಭಾಗ 1ಪರಮ್: ಗುರುವೇ ನಮಸ್ತೆ


ಮಂಡ್ಯ ರಮೇಶ್: ನಮಸ್ಕಾರ ಗೆಳೆಯ. ಧನ್ಯವಾದಗಳು, ಇಡೀ ಜಗತ್ತಿಗೇ, ಲಕ್ಷಾಂತರ ಜನಗಳಿಗೆ ಈವಿಧ್ಯೆಯ ಮೂಲಕ ತಲುಪ್ತಾ ಇರೋದ್ರಿಂದ ಅನೇಕ ಮಾಹಿತಿಗಳು ನಿಮ್ಮಿಂದ ಕಲಿಸುತ್ತಿರೋದ್ರಿಂದ ಎಷ್ಟೋ ಜನಗಳಿಗೆ ಗೊತ್ತಿರೋದಿಲ್ಲ, ಹಾಗಾಗಿ ನೀವು ಕೂಡ ಒಬ್ಬ ಗುರು. ನಿಮಗೂ ಕೂಡ ಶಿಕ್ಷಕ ದಿನಾಚರಣೆಯ ಶುಭಾಶಯಗಳು.


ಪರಮ್: ಧನ್ಯವಾದಗಳು. ಹೆಸರಲ್ಲೇ ಊರು ಇದೆ ಮಂಡ್ಯ. ಏನು ನಿಮ್ಮ ಕುಟುಂಬದ ಹಿನ್ನೆಲೆ?

ಮಂಡ್ಯ ರಮೇಶ್: ಗೆಳೆಯ ನಮ್ಮ ತಂದೆ ಸುಬ್ರಮಣ್ಯಮ್ ಅಂತ, ತಾಯಿ ನಾಗಲಕ್ಷಮ್ಮ. ತಾಯಿ ಗೃಹಿಣಿ. ತಂದೆ ಸರ್ಕಾರೀ ಖಚೇರಿಯಲ್ಲಿ ಎರಡನೇ ದರ್ಜೆಯ ಗುಮಾಸ್ಥರಾಗಿದ್ರು. ಊರಿಂದ ಊರಿಗೆ ಸುತ್ತುತ್ತಾ ಇದ್ರು. ಸಾಧಾರಣ ಕೆಳ ಮಧ್ಯಮ ವರ್ಗದ ಒಂದು ಕುಟುಂಬ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಮ್ಮ ತಾಯಿಯ ತವರು ಮನೆ. ಮಖಾಜಿ ಶಾಮಣ್ಣನವರು ಅಂತ ನಮ್ಮ ತಾತ. ನಮ್ಮ ತಂದೆ ಎಲ್ಲಿಂದಲೋ ಸುತ್ತಾಡ್ತಾ ಮಂಡ್ಯ ಜಿಲ್ಲೆಗೆ ಬಂದ್ರು. ಮಂಡ್ಯ ಜಿಲ್ಲೆಯ ಅನೇಕ ಭಾಗಗಳಲ್ಲಿ ಬೆಳ್ಳೂರು, ನಾಗಮಂಗಲ, ಮಂಡ್ಯ, ಮದ್ದೂರು, ಮಳವಳ್ಳಿ ಈಕಡೆ ತುಂಬಾ ಪ್ರದೇಶಗಳ ಸರ್ಕಾರಿ ಖಚೇರಿಗಳಲ್ಲಿ ಸುತ್ತಾಡ್ತಾ ಇದ್ದಿದ್ರಿಂದ, ಆತನಿಗೆ ಮಂಡ್ಯದಲ್ಲೇ ಒಂದು ಮನೆ ಮಾಡ್ಕೊಂಡ್ರೆ ಒಳ್ಳೆಯದೇನೋ ಅನ್ಸುತ್ತೆ. ಬಾಲ್ಯದಲ್ಲಿ ಎಲ್ಲಾದ್ರೊಂದು ಕಡೆ ನೆಲೆ ನಿಲ್ಬೇಕಲ್ವಾ? ಎಷ್ಟೋ ಊರುಗಳಲ್ಲಿ ಹೈಸ್ಕೂಲ್ ಕಾಲೇಜುಗಳಿಗೆ ಅವಕಾಶಗಳಿರಲ್ಲ. ಹಾಗಾಗಿ ಹೈ ಸ್ಕೂಲು ಕಾಲೇಜುಗಳಿಗೋಸ್ಕರ ಮುಂದುವರೆದರು. ಬಾಲ್ಯ ಶಿಶುವಿಹಾರ ಬೆಳ್ಳೂರು ಅಲ್ಲಿ ಸೇರ್ಸಿದ್ರು.


ಪರಮ್; ನಾಗಮಂಗಲದ ಬೆಳ್ಳೂರು ಕ್ರಾಸ್?


ಮಂಡ್ಯ ರಮೇಶ್: ಹೌದು ಬೆಳ್ಳೂರು ಕ್ರಾಸ್. ಬೆಳ್ಳೂರು ನನ್ನ ಬಾಲ್ಯ. ಆಮೇಲೆ ಪ್ರೈಮರಿ ಸ್ಕೂಲ್‍ಗೆ ನಾಗಮಂಗಲಕ್ಕೆ ಕರ್ಕೊಂಡು ಬಂದ್ರು. ನಮ್ಮಪ್ಪನಿಗೆ ಇದ್ದಕ್ಕಿದ್ದಂಗೆನೇ ಜ್ಞಾನೋದಯ ಆಗಿ “ಈ ಮಕ್ಕಳು ಇಲ್ಲೇ ಇದ್ರೆ ಓದಲ್ಲ. ಇವರಿಗೆ ಇನ್ನೂ ಸ್ವಲ್ಪ ಕಷ್ಟ ನಷ್ಟಗಳ ಅರಿವಾಗ್ಬೇಕು. ಮಾಡ್ತೀನಿ ತಡಿ” ಅಂತ ಮಂಡ್ಯದ ನಮ್ಮ ಅಜ್ಜಿ ಮನೆಗೆ ಕಳಿಸ್ತಾರೆ ನನ್ನನ್ನ.ಮುಂದುವರೆಯುವುದು…

23 views