“ಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ ಅಣ್ಣಾವ್ರು ಅನುಭವಿಸಿದ ಅವಮಾನಗಳು”

ದೊರೈ-ಭಗವಾನ್ ಲೈಫ್ ಸ್ಟೋರಿ - ಭಾಗ 7

(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)


1959ರಲ್ಲಿ ನನಗೆ ಮದುವೆ ಆಯ್ತು. ನನಗೆ ಆಗ ಕೆಲಸ ಇರಲಿಲ್ಲ. ನಮ್ಮ ಮನೆ ಬಳಿ ಜುಪಿಟರ್‌ ಎಂಬ ಕಂಪನಿಯೊಂದಿತ್ತು. ಮದುವೆ ಆದ 10–15 ದಿವಸಗಳ ಒಳಗೆ ಅಲ್ಲಿಂದ ನನಗೆ ಕರೆ ಬಂತು. ವಾಲ್ಮೀಕಿ ಎಂದು ಕನ್ನಡ ಪಿಕ್ಚರ್‌ ತೆಗೆಯುತ್ತಿದ್ದೇವೆ. ಅದಕ್ಕೆ ಇನ್‌ಚಾರ್ಜ್ ನೀವೇ ಆಗಬೇಕು. ನಿಮ್ಮ ಬಗ್ಗೆ ತುಂಬ ಕೇಳಿದ್ದೇವೆ. ಅದನ್ನು ರಾವ್‌ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಅಸೋಸಿಯೇಟೆಡ್‌ ಆಗಿ ನೀವು ಇರಬೇಕು ಅಂದ್ರು. 300 ರೂಪಾಯಿ ಸಂಬಳ ಇತ್ತು. ನಮ್ಮ ಆಫೀಸ್‌ನಲ್ಲಿ ಕೆಲಸ ಮಾಡುವ ಯಾರಿಗೂ ಕಾರು ಕಳುಹಿಸುವುದಿಲ್ಲ. ಆದ್ರೆ ನಿಮಗೆ ಕಳುಹಿಸುತ್ತೇವೆ ಅಂದ್ರು. ಪ್ರತಿದಿನ ಬೆಳಿಗ್ಗೆ 9ಕ್ಕೆ ಬಂದು, 5 ಕ್ಕೆ ಹೋಗಿ ಅಂದ್ರು. ರಾಜ್‌ಕುಮಾರ್‌ ಆ ಸಿನಿಮಾಕ್ಕೆ ಹೀರೊ.


ಕೆಲಸ ಪ್ರಾರಂಭಿಸಿದೆ. ನನ್ನ ಜೀವನದ ಟರ್ನಿಂಗ್ ಪಾಯಿಂಟ್‌ ಅದೇ. ಹೆಚ್ಚು ಕಮ್ಮಿ ಕೆಲಸ ಪ್ರಾರಂಭಿಸಿ ಒಂದು ವಾರ ಆಗಿರಬೇಕು. ಅಷ್ಟರಲ್ಲಿ ಕೇಶವ್‌ ರಾವ್‌ ಕೆಲಸ ಚೆನ್ನಾಗಿಲ್ಲ. ಭಗವಾನ್‌ ಅವರನ್ನೇ ಅಲ್ಲಿಗೆ ಹಾಕಿ ಎಂದು ಪ್ರೊಪ್ರೈಟರ್ಸ್‌ಗಳಿಗೆ ಸಂಬಂಧಪಟ್ಟವರು ಹೇಳಿದ್ರು. ಭಗವಾನ್‌ಗೆ ಡೈರೆಕ್ಟರ್‌ ಆಗುವ ಪ್ರತಿಯೊಂದು ಲಕ್ಷಣಗಳಿವೆ. ಅವನನ್ನೇ ಡೈರೆಕ್ಟರ್‌ ಮಾಡಿ ಅಂದ್ರು. ತೆಲುಗಿನಲ್ಲೂ ‘ವಾಲ್ಮೀಕಿ’ ಸಿನಿಮಾ ತಯಾರಾಗುತ್ತಿತ್ತು. ಅಲ್ಲಿಗೂ ನನನ್ನೇ ಇನ್‌ಚಾರ್ಜ್ ಮಾಡಿದ್ರು. ನನ್ನ ಸಂಬಳ ಡಬಲ್‌ ಆಯ್ತು. ಒಂದೇ ವಾರದಲ್ಲಿ 300 ಇದ್ದ ಸಂಬಳ 600 ರೂಪಾಯಿ ಆಯ್ತು.ಆ ಸಮಯದಲ್ಲಿ ದೊರೆ ಅವರು ಹೇಗಾದ್ರು 15 ಸಾವಿರ ಅರೆಂಜ್‌ ಮಾಡಿ. ನಾವೇ ಸಿನಿಮಾ ಮಾಡೋಣ. ನಿಮಗಾದರೆ ಒಂದು ಕೆಲಸ ಸಿಕ್ತು. ನನಗೂ ಕೆಲಸ ಇಲ್ಲ ಎಂದ್ರು. ನಾನು ಆಯ್ತು ಅಂದೆ. ನನ್ನ ಅತ್ತೆ ಮನೆ ಕಡೆ ಚೆನ್ನಾಗಿದ್ರು. ಹಾಗಾಗಿ 15 ಸಾವಿರ ತಂದು ಬಿಡ್ತೇನೆ ಅನ್ನೋ ಧೈರ್ಯ ಅವರಿಗೆ. 15 ಸಾವಿರ ಕೊಡಿಸು, ನಾನು, ದೊರೆ ಸಿನಿಮಾ ಮಾಡೋಣ ಅಂತಿದ್ದೇವೆ. ನಿನ್ನ ಅಮ್ಮನ ಹತ್ತಿರ ಕೇಳು ಎಂದು ನನ್ನ ಪತ್ನಿಗೆ ಹೇಳಿದೆ. ಅವಳು ಪೆಚ್ಚು ಮೋರೆ ಹಾಕಿಕೊಂಡು ಬಂದ್ಲು. ಯಾಕೆ ಎಂದೆ, ನಾನು ಹೋಗಿ ಕೇಳಿದೆ. ಅಮ್ಮ ಬೈದುಬಿಟ್ಲು. ಬೇಕಿದ್ರೆ ಕಾರು ತೆಗೆಸಿಕೊಡ್ತೇನೆ. ಪಿಕ್ಚರ್‌ಗೆ ದುಡ್ಡು ಕೊಡೊಲ್ಲ ಅಂಥ ಅಳಿಯನಿಗೆ ಹೋಗಿ ಹೇಳು ಅಂದ್ರು ಅಂದ್ಲು. ಅವರಿಗೆ ಇದಿದ್ದು ಒಬ್ಬಳೇ ಮಗಳು. ನನಗೆ ತುಂಬಾ ಬೇಸರ ಆಯ್ತು.


ಆಗ, ದೊರೆಯವರು ಸ್ನೇಹಿತರ ಬಳಿ 15 ಸಾವಿರ ತಗೋಳಿ ಅಂದ್ರು. ಯು.ಎಸ್‌. ರಾಜರಾಂ ಎಂಬ ಒಳ್ಳೆಯ ಸ್ನೇಹಿತನಿದ್ದ. ಅವನು ಕನ್ನಡದವನು. ಅವನು ಮದ್ರಾಸ್‌ ಕಾರ್ಪೊರೇಷನ್‌ನಲ್ಲಿ ಸಿವಿಲ್ ಕಂಟ್ರಾಕ್ಟರ್‌. ಅವನ ಬಳಿ ದುಡ್ಡಿದೆ ಎಂಬುದು ಗೊತ್ತಿತ್ತು. ಅವನು ಅನುಕೂಲವಾಗಿದ್ದ. ಹೋಗಿ ಕೇಳಿದೆ. ಒಂದು ತಿಂಗಳು ಬಿಟ್ಟು ಬಾ. ನಾನು ಕಾರ್ಪೊರೇಷನ್‌ಗೆ ಹಲವು ಬಿಲ್‌ಗಳನ್ನು ಪ್ರೊಡ್ಯೂಸ್‌ ಮಾಡಿದ್ದೇನೆ. ಅದರಲ್ಲಿ ಯಾವುದಾದ್ರು ಬಿಲ್‌ ಬರುತ್ತೆ, ನಂತರ ಕೊಡುತ್ತೇನೆ ಎಂದ. ಇನ್ನೊಂದು ತಿಂಗಳಲ್ಲಿ ದುಡ್ಡು ಕೊಡ್ತಾನೆ. ನಾವೇನು ಯೋಚನೆ ಮಾಡೋದು ಬೇಡ ಎಂದು ದೊರೆಯವರಿಗೆ ಹೇಳಿದೆ. ಜಿ.ವಿ.ಅಯ್ಯರ್‌ ಬಳಿ ಹೋಗಿ, ಹೀಗೆ ದುಡ್ಡು ಬರುತ್ತೆ ನಾವು ಸಿನಿಮಾ ಶುರು ಮಾಡೋಣ ಎಂದೆವು. ಆಯ್ತು ಮಾಡೋಣ ಅಂದ್ರು. ಕಥೆ ಬಗ್ಗೆ ಯೋಚಿಸಿದಾಗ, ದೊರೆ ಅವರು ಹೇಳಿದ್ರು. ನಾನು ಮೈಸೂರಿನ ಯಾವುದೇ ಮನೆಗೆ ಹೋದರೂ, ಅಲ್ಲೊಂದು ಬೃಂದಾವನ ಇರುತ್ತೆ. ಅದರ ಮುಂದೆ ಒಬ್ರು ಖಾವಿ ಬಟ್ಟೆ ಹಾಕಿ ಕೂತಿರುತ್ತಾರೆ. ಅವರ ಕಥೆ ತೆಗೆದರೆ ಚೆನ್ನಾಗಿರುತ್ತದೆ ಅಂಥ ನನಗೆ ಅನಿಸುತ್ತದೆ ಅಂದ್ರು.


ಅಯ್ಯೋ ನೀವು ರಾಘವೇಂದ್ರ ಸ್ವಾಮಿಗಳ ವಿಷಯ ಹೇಳುತ್ತಿದ್ದೀರಾ ದೊರೆ ಎಂದೆ. ನಮ್ಮನೆಯಲ್ಲಿ ರಾಘವೇಂದ್ರ ಸ್ವಾಮಿಗಳನ್ನು ಪೂಜೆ ಮಾಡುತ್ತಿದ್ರು. ಒಂದು ಪುಸ್ತಕ ಇದೆ ತೆಗೆದುಕೊಂಡು ಬಂದು ಕೊಡ್ತೇನೆ ಓದಿ ಎಂದೆ. ‘ರಾಯರ ಕರುಣೆ’ ಎಂಬ ಪುಸ್ತಕ ಇತ್ತು ನನ್ನ ಬಳಿ. ಅವರು ಓದಿದ ಮೇಲೆ ಇದನ್ನೇ ಮಾಡೋಣ ಅಂದ್ರು. ಅಯ್ಯರ್ ಬಳಿ ಹೋದಾಗ, ವೇದವ್ಯಾಸಾಚಾರಿ ಎಂದು ನನ್ನ ಸ್ನೇಹಿತನಿದ್ದಾನೆ ಅವನೊಂದು ಪುಸ್ತಕ ಕೊಡುತ್ತಾನೆ ಅಂದ್ರು. ರಾಯರ ಮೂಲ ಮಠ ಇರುವುದು ನಂಜನಗೂಡಿನಲ್ಲಿ. ಸಿನಿಮಾ ತೆಗೆಯಲು ಅನುಮತಿ ಕೇಳಿಕೊಂಡು ಅಲ್ಲಿಗೆ ಹೋದೆವು. ರಾಯರು ಕಥೆ ಅಂದ್ರೆ ಯಾರು ಬೇಡ ಅಂತಾರೆ ಮಾಡಿ ಅಂದ್ರು. ‘ತುಂಗಾ ತೀರಾ ವಿರಾಜಂ’ ಹಾಡನ್ನು ಅವರು ಬರೆದ್ರು.


ಕಥೆಯನ್ನೆಲ್ಲ ಮಾಡಿಕೊಂಡೆವು. ಒಂದು ತಿಂಗಳು ಆದ ಮೇಲೆ ರಾಜರಾಂ ಅವರ ಹತ್ತಿರ ಹೋಗಿ, ದುಡ್ಡು ಕೊಡ್ತೇನೆ ಅಂದಿದ್ದೆ ಅಲ್ವಾ ಕೊಡ್ತೀಯಾ ಅಂದೆ. ಒಂದು ಬಿಲ್‌ ಕೂಡ ಪಾಸ್‌ ಆಗಿಲ್ಲ, ಏನು ಮಾಡೋದು ಗೊತ್ತಾಗುತ್ತಿಲ್ಲ. ನನ್ನ ಹತ್ತಿರ ಕಾಸೇ ಇಲ್ಲ. ನಾನೇ ಎಲ್ಲಾದ್ರು ಸಾಲ ಮಾಡೋಣ ಅಂತಿದ್ದೇನೆ. ಯಾವಾಗ ಕೊಡ್ತೇನೆ ಅಂಥ ಹೇಳೋಕ್ಕೆ ಆಗಲ್ಲ. ಬಿಲ್‌ ಪಾಸ್‌ ಆದ್ರೆ ನೋಡೋಣ. ಫೋನ್‌ ಮಾಡ್ತೇನೆ ಆಗ ಬಾ ನೀನು ಎಂದ. ನನಗೆ ಭೂಮಿಯೇ ಕುಸಿದ ಹಾಗೆ ಆಯ್ತು. ಕಣ್ಣಲ್ಲಿ ನೀರು ಬಂತು. ಇಲ್ಲಿ ಎಲ್ಲರಿಗೂ ಸಿನಿಮಾ ಮಾಡೋದು ಅಂಥ ಹೇಳಿ ಬಿಟ್ಟಿದ್ದೇನೆ. ಅಲ್ಲಿ ಅತ್ತೆ ಹಣ ಕೊಡುತ್ತಿಲ್ಲ, ಇಲ್ಲಿ ರಾಜರಾಂ ಕೈ ಎತ್ತಿಬಿಟ್ಟ. ಏನು ಮಾಡೋದೇ ತಿಳಿಯಲಿಲ್ಲ.


ಯಾಕೆ ಸಪ್ಪುಗಿದ್ದೀಯಾ ಎಂದ. ನೀನು ಈಗ ಕೊಡಲ್ಲ ಅಂದ್ರೆ ಹೇಗೆ. ನಾನು ಅವರಿಗೆಲ್ಲ ಹೇಳಿದ್ದೇನೆ. ಈಗ ಹೇಗೆ ಮುಖ ತೋರಿಸಲಿ. ನಾವು ಎಷ್ಟು ಒಳ್ಳೆ ಕಥೆ ಮಾಡಿದ್ದೇವೆ ಗೊತ್ತಾ ಅಂಥೆಲ್ಲ ಅಂದೆ. ನನ್ನ ಮಾತನ್ನೆಲ್ಲ ಕೇಳಿಸಿಕೊಂಡ. ಏನ್‌ ಮಹಾ ಕಥೆ ಮಾಡಿಬಿಟ್ಟಿದ್ದೀಯಾ ನೀನು ಎಂದು ಕೈ ಅಲ್ಲಾಡಿಸುತ್ತ ಕೇಳಿದ. ಏನಿಲ್ಲಪ್ಪ, ಬಿಡು ಅದನ್ಯಾಕೆ ಕೇಳ್ತೀಯಾ ಎಂದೆ. ಅದೇನು ದೊಡ್ಡ ಕಥೆ ಮಾಡಿದ್ದೀಯಾ ಹೇಳು ಎಂದ. ಏನಿಲ್ಲ, ರಾಘವೇಂದ್ರ ಸ್ವಾಮಿಗಳ ಕಥೆ ಮಾಡಿದ್ದೇನೆ ಎಂದೆ. ಏನಂದೆ ಅಂದ... ಅವನ ಮುಖ ಕೊಂಚ ಸಪ್ಪಗಾಯಿತು. ಅವನ ಹೆಂಡತಿಯನ್ನು ಕರೆದು ನನಗೊಂದು ಲೋಟ ಕಾಫಿ ಕೊಡುವಂತೆ ಹೇಳಿದ. ನಿನ್‌ ಕಾಫಿನೂ ಬೇಡ, ಏನು ಬೇಡ ಹೋಗಯ್ಯ ಎಂದೆ. ಇಲ್ಲ, ಕಾಫಿ ಕುಡಿ ಸ್ವಲ್ಪ ಸಮಾಧಾನ ಮಾಡ್ಕೊ ಎಂದ. ನಾನು ಸಮಾಧಾನ ಮಾಡ್ಕೊಂಡೆ. ಮನಸ್ಸಿಲ್ಲದ ಮನಸ್ಸಲ್ಲಿ ಕಾಫಿ ಕುಡಿದೆ. ಇವನು ಒಳಗೆ ಹೋದವನು ಹೊರಗೆ ಬಂದ. ಕೈಯಲ್ಲಿ ಹದಿನೈದು ಸಾವಿರದ ಚೆಕ್ ಹಿಡ್ಕೊಂಡು ಬಂದಿದ್ದ. ತಗೋ ಇದನ್ನು ಎಂದ. ಈಗ್ತಾನೆ ಇಲ್ಲ ಅಂದೆ ಅಲ್ವಾ ಎಂದೆ. ನೀನು ರಾಘವೇಂದ್ರ ಸ್ವಾಮಿಗಳ ಕಥೆ ಮಾಡ್ತಿದ್ದೀಯಾ, ದೇವರ ಮನೆಯಲ್ಲಿ ನೋಡು ಯಾರಿದ್ದಾರೆ ಅಂಥ, ಅವರ ಕಥೆ ಮಾಡ್ತೇನೆ ಎಂದಾಗ ನಾನು ದುಡ್ಡು ಕೊಡದೇ ಇರುತ್ತೇನಾ. ಇದನ್ನು ಸಾಲ ಎಂದು ಕೇಳ್ದೆ ಅಲ್ವಾ, ಇದು ಸಾಲ ಅಲ್ಲ, ಇದು ನನ್ನ ಡೊನೇಷನ್. ನಿನಗೆ ದುಡ್ಡು ಬಂದ್ರೆ ಕೊಡು. ಇಲ್ಲಂದ್ರೆ ದೇವರ ಸೇವೆಗೆ ಕೊಟ್ಟೆ ಎಂದು ತಿಳಿದುಕೊಳ್ತೇನೆ. ಹಣ ಕೊಡಬೇಕು ಎಂದು ನನಗೆ ದೇವರ ಅಪ್ಪಣೆ ಎಂದ. ಅಷ್ಟೊತ್ತು ಅಳುತ್ತಿದ್ದ ನನ್ನ ಕಣ್ಣಲ್ಲಿ, ಆನಂದ ಭಾಷ್ಪ ಬರಲು ಶುರುವಾಯ್ತು.


ಹದಿನೈದು ಸಾವಿರ ರೂಪಾಯಿನಲ್ಲಿ ಪಿಕ್ಚರ್‌ ಶುರು ಮಾಡಿದೆವು. ನರಸಿಂಹಮೂರ್ತಿ ಅವರದು ಡಿಸ್ಟ್ರಿಬ್ಯೂಷನ್‌ ಕಂಪನಿ ಇತ್ತು. ಸಿನಿಮಾದ ಡಿಸ್ಟ್ರಿಬ್ಯೂಷನ್‌ ನಾನೇ ಮಾಡ್ತೇನೆ ಎಂದು 65 ಸಾವಿರಕ್ಕೆ ಅಗ್ರಿಮೆಂಟ್‌ ಮಾಡಿಕೊಂಡ್ರು. ಬಾಂಬೆ ಕರ್ನಾಟಕದ ಪ್ರದೇಶದಲ್ಲಿ ನಮ್ಮೆಲ್ಲ ಪಿಕ್ಚರ್‌ಗಳನ್ನು ಡಿಸ್ಟ್ರಿಬ್ಯೂಷನ್‌ ಮಾಡುತ್ತಿದುದ್ದು ಶ್ರೀನಿವಾಸ ಪಿಕ್ಚರ್ಸ್‌ ಗದಗ್‌ ಎಂದು, ಅವರು 35 ಸಾವಿರ ಕೊಟ್ರು. 1 ಲಕ್ಷ ಸಂಗ್ರಹವಾಯ್ತು. ಸಿನಿಮಾಕ್ಕೆ ನಮಗೆ 1 ಲಕ್ಷದ 3 ಸಾವಿರ ಖರ್ಚಾಗಿತ್ತು. ಅದು ಪರಾಮತ್ಮನ ಕೃಪೆ. ಆ ಸಿನಿಮಾದಿಂದ ಬಂದ ಹಣವನ್ನು ಹೇಳಲು ಆಗುವುದಿಲ್ಲ. ಅಷ್ಟೊಂದು ಬಂತು. ದುಡ್ಡಿಗಿಂತ ಜಾಸ್ಥಿಯಾಗಿ ಸ್ವಾಮಿಗಳು ತಮ್ಮ ಕೃಪೆಯನ್ನು ನಮ್ಮ ಮೇಲೆ ಧಾರೆ ಎರೆದರು. ಇವತ್ತಿನವರೆಗೂ ನಾವು ಹಿಂದಿರುಗಿ ನೋಡಿಲ್ಲ. ಆ ಸಿನಿಮಾದಲ್ಲಿ ಯಾರ‍್ಯಾರು ಕೆಲಸ ಮಾಡಿದ್ರೊ ಅವರಿಗೆಲ್ಲ ಒಳ್ಳೆಯದಾಯಿತು.


‘ಮಂತ್ರಾಲಯ ಮಹಾತ್ಮೆ’ ಸಿನಿಮಾದಲ್ಲಿ ನಾವು ಬ್ಯುಸಿ ಯಾಗಿದ್ವಿ. ನರಸಿಂಹಮೂರ್ತಿ ಅವರಿಗೆ ಸಿನಿಮಾ ತೆಗೆಯುವ ಚಟ ಶುರುವಾಗಿತ್ತು. ‘ಆನಂದ ಕಂದ’ ಸೇರಿದಂತೆ ಎರಡು ಮೂರು ಸಿನಿಮಾಗಳನ್ನು ತೆಗೆದು ಕೈ ಸುಟ್ಟುಕೊಂಡುಬಿಟ್ರು. ಮಂತ್ರಾಲಯ ಮಹಾತ್ಮೆ ಮೊದಲ ಬಾರಿಗೆ ರಿಲೀಸ್ ಆದಾಗ 50 ದಿವಸ ಹೋಯ್ತು. ಎರಡನೇ ಸಲ ರಿಲೀಸ್ ಮಾಡಿದಾಗ, 100 ದಿವಸ ಹೋಯ್ತು. ಕೆಂಪೇಗೌಡ ಥಿಯೇಟರ್‌ನಲ್ಲಿ ರಿಲೀಸ್‌ ಮಾಡಿದ್ವಿ. ಬೇರೆ ತರಹದ ಪಿಕ್ಚರ್‌ಗಳೇ ಓಡುತ್ತಿದ್ದ ಜಾಗವದು. ಅಲ್ಲಿ ಹೋಗಿ ಇದನ್ನು ಹಾಕಿದ್ರು 100 ದಿನ ಓಡ್ತು.


ರಾಜ್‌ಕುಮಾರ್‌ ಚಪ್ಪಲಿ ಹಾಕದೇ ನಟಿಸಿದ್ದಾರೆ. ಮಾಂಸವನ್ನು ತ್ಯಜಿಸಿದ್ದರು ಎಂಬುದು ಪ್ರಚಾರವಾಗಿತ್ತು. ಹಾಗಾಗಿ, ಸಿನಿಮಾ ನೋಡಲು ಬರುವವರು ಥಿಯೇಟರ್‌ ಹೊರಗೆ ಚಪ್ಪಲಿ ಬಿಟ್ಟು ಬರುತ್ತಿದ್ರು. ಸಿನಿಮಾ ನೋಡಲು ಬರುವ ದಿನ ಜನರು ಮಾಂಸ ತಿನ್ನುತ್ತಿರಲಿಲ್ಲ. ಸಿನಿಮಾ ನೋಡಿಕೊಂಡು ಬರುತ್ತಿದ್ದವರು ಸ್ವಾಮಿ, ಒಳ್ಳೆಯ ಸಿನಿಮಾ ಕೊಟ್ಟಿದ್ದೀರಿ, ನಮಗೆ ದೇವಸ್ಥಾನಕ್ಕೆ ಹೋಗಿ ಬಂದ ಅನುಭವ ಆಯ್ತು ಎನ್ನುತ್ತಿದ್ರು. ಥಿಯೇಟರ್‌ ಮುಂದೆ ಚಪ್ಪಲಿ ಇಟ್ಟರೂ, ಅದು ಕಳವು ಆಗುತ್ತಿರಲಿಲ್ಲ.


ಚಿತ್ರವನ್ನು ತೆಗೆಯಬಾರದು ಎಂದು ಸಿನಿಮಾ ಅನೌನ್ಸ್ ಮಾಡಿದಾಗ ನಮಗೆ 40–50 ಕಾಗದಗಳು ಬಂತು. ರಾಜ್‌ಕುಮಾರ್‌ ಬ್ರಾಹ್ಮಣರಲ್ಲದ ಕಾರಣ, ಒಬ್ಬ ಅಬ್ರಾಹ್ಮಣರ ಕೈಯಲ್ಲಿ ಶ್ರೇಷ್ಠ ಬ್ರಾಹ್ಮಣ ಯತಿಗಳ ಪಾತ್ರವನ್ನು ಮಾಡಿಸುತ್ತಿದ್ದೀರಾ ಇದಕ್ಕೆ ನಮ್ಮ ವಿರೋಧವಿದೆ ಎಂದು ಬರೆದಿದ್ದರು. ರಾಘವೇಂದ್ರ ರಾಯರು, ಅಚ್ಯುತರಾಯರು, ಕಲ್ಯಾಣ ಕುಮಾರ್‌ ಅವರ ಬಳಿ ಈ ಪಾತ್ರ ಮಾಡಿಸಬಹುದಿತ್ತು. ನಿಮಗೆ ಚಿತ್ರ ತೆಗೆಯಬೇಡಿ ಎಂದು ಹೇಳುತ್ತಿಲ್ಲ. ಆದರೆ ರಾಜ್‌ಕುಮಾರ್‌ ಬಳಿ ಮಾಡಿಸಬಾರದು ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ರು.


ಆ ವಿರೋಧ ಬಂದಾಗ ನಮಗೆ ತಲೆಕೆಟ್ಟು ಹೋಯ್ತು. ರಾಜ್‌ಕುಮಾರ್‌ ಇಲ್ಲದೇ ನಾವು ಪಿಕ್ಚರ್‌ ಮಾಡುತ್ತಿರಲಿಲ್ಲ. ಈ ಪಿಕ್ಚರ್‌ ಅನೌನ್ಸ್‌ ಮಾಡಿ ಆಗಿದ್ದರಿಂದ ಅದನ್ನು ನಿಲ್ಲಿಸುವ ಹಾಗಿರಲಿಲ್ಲ. ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ರಾಜ್‌ಕುಮಾರ್‌ ಅವರು, ಯಾಕಿಷ್ಟು ಯೋಚನೆ ಮಾಡುತ್ತಿದ್ದೀರಾ ದೇವರ ಮುಂದೆ ಚೀಟಿ ಹಾಕಿ ಯಾರ ಹೆಸರು ಬರುತ್ತದೋ ಅವರಿಂದ ಈ ಪಾತ್ರ ಮಾಡಿಸಿ ಎಂದ್ರು. ದೇವರ ಮುಂದೆ ಚೀಟಿ ಹಾಕಿದ್ವಿ. ಅದರಲ್ಲಿ ರಾಜ್‌ಕುಮಾರ್‌ ಹೆಸರು ಬಂತು. ರಾಜ್‌ಕುಮಾರ್‌ ಅವರು ಹೆಸರು ನೋಡಿದ ತಕ್ಷಣವೇ ಕಾಲಿನಿಂದ ಚಪ್ಪಲಿ ಬಿಟ್ರು. ಇವತ್ತಿನಿಂದ ನಾನು ಕಾಲಿಗೆ ಚಪ್ಪಲಿ ಹಾಕುವುದಿಲ್ಲ. ಈ ಚಿತ್ರದ ಚಿತ್ರೀಕರಣ ಮುಗಿದು 50 ದಿವಸ ಓಡುವವರೆಗೂ ನಾನು ಕಾಲಿಗೆ ಚಪ್ಪಲಿ ಹಾಕುವುದಿಲ್ಲ. ಈ ಕ್ಷಣದಿಂದ ನಾನು ಮಾಂಸಹಾರಿ ಅಲ್ಲ. ಸಸ್ಯಹಾರಿ ಎಂದ್ರು. ಅವರು ಆವರೆಗೂ ಮಾಂಸ ಇಲ್ಲದೆ ಊಟನೇ ಮಾಡುತ್ತಿರಲಿಲ್ಲ. ನನಗೆ ಸ್ವಾಮಿಗಳ ಪ್ರೇರಣೆ ಆಗಿದೆ. ಆ ಪ್ರೇರಕ ಶಕ್ತಿಯಿಂದ ನಾನು ಸಿನಿಮಾ ಮಾಡುತ್ತಿದ್ದೇನೆ ಎಂದ್ರು. ಭಗವಾನ್‌ ಕಿಲಾಡಿ ಎಲ್ಲ ಚೀಟಿಗಳಲ್ಲೂ ನನ್ನ ಹೆಸರು ಬರೆದಿರಬಹುದು ಎಂಬ ಯೋಚನೆ ಬಂತು ಅವರಿಗೆ. ಆಗ ನಾನು ಇಲ್ಲ ಹಾಗೆ ಮಾಡಿಲ್ಲ ಎಂದೆ. ಆ ರೀತಿ ಮೋಸ ಮಾಡಲು ಹೋಗಲ್ಲ ಎಂದು ಚೀಟಿಗಳನ್ನೆಲ್ಲ ತೋರಿಸಿದೆ. ಅದರಲ್ಲಿ ಬೇರೆ, ಬೇರೆ ಹೆಸರಿತ್ತು. ಆಗ ಅವರಿಗೆ ನಂಬಿಕೆ ಬಂತು.


ಆ ಚಿತ್ರವನ್ನು ಎಷ್ಟು ನಿಷ್ಠೆ ಮತ್ತು ನಿಯಮದಿಂದ ಅವರು ಮಾಡಿದ್ರು ಎಂದ್ರೆ, ಪ್ರತಿ ಶಾಟ್‌ಗೂ ಮುಂಚೆ 10 ನಿಮಿಷ ರಾಘವೇಂದ್ರ ಸ್ವಾಮಿಯ ಧ್ಯಾನ ಮಾಡುತ್ತಿದ್ರು. ಅವರ ಕೃಪೆ, ಆಹ್ವಾನೆ ಮಾಡಿಕೊಳ್ಳಲು ಹಾಗೆ ಮಾಡುತ್ತಿದ್ರು. ನಾವ್ಯಾರು ಸ್ಟಾರ್ಟ್‌ ಹೇಳುತ್ತಿರಲಿಲ್ಲ. ಅವರ ತುಟಿಯ ಚಲನೆ ನೋಡಿಕೊಂಡು ನಾನು ಸ್ಟಾರ್ಟ್‌ ಎಂದು ಸನ್ನೆ ಮೂಲಕ ಹೇಳುತ್ತಿದ್ದೆ. ಕಟ್‌ ಮಾತ್ರ ಹೇಳುತ್ತಿದ್ವಿ. ಸೆಟ್‌ ಅಷ್ಟು ನಿಶಬ್ಧ ಆಗಿರಬೇಕಿತ್ತು.


ಕಾಲಿಗೆ ಚಪ್ಪಲಿ ಹಾಕದೇ ಇರುವುದಕ್ಕೂ ಒಂದು ಘಟನೆಯಿದೆ. ಎಲ್ಲ ಲೈಟ್‌ ಬಾಯ್‌ಗಳು ಶೂ ಇಲ್ಲದೇ ಬರುತ್ತಿದ್ರು. ಆದರೆ, ಒಬ್ಬ ಶೂ ಹಾಕಿಕೊಂಡು ಬಂದೇ ಕೆಲಸ ಮಾಡುತ್ತಿದ್ದ. ಶಾಕ್‌ ಹೊಡೆಯುತ್ತದೆ ಎಂದು ಲೈಟ್‌ ಬಾಯ್ಸ್‌ಗಳಿಗೆ ಸ್ಟುಡಿಯೊ ಮಾಲೀಕರು ಕ್ಯಾನ್ವಾಸ್‌ ಶೂ ಕೊಡುತ್ತಿದ್ರು. ಅಲ್ಲಿದ್ದ ಲೈಟ್‌ ಬಾಯ್ಸ್‌ಗಳು ಶೂ ಆಚೆಕಡೆ ಬಿಟ್ಟು ಒಳಗೆ ಬಾ ಅಂದ್ರು. ಶಾಕ್‌ ಹೊಡೆದ್ರೆ ಇವರಪ್ಪ ಕೊಡ್ತಾನಾ ದುಡ್ಡು ಎಂದು ನಿರ್ದಾಕ್ಷಿಣ್ಯವಾಗಿ ಮಾತನಾಡಿದ. ನಿನ್ನಿಷ್ಟ ಎಂದು ಎಲ್ರೂ ಸುಮ್ಮನಾದ್ರು. ಎರಡರಿಂದ ಮೂರು ಗಂಟೆ ಶೂಟಿಂಗ್‌ ನಡೆದಿರಬಹುದು ಅವನು ಲೈಟ್‌ಗಳನ್ನೆಲ್ಲ ಅಡ್ಜಸ್ಟ್‌ ಮಾಡಿ ನಿಂತಾಗ ಲೈಟ್‌ ಸ್ಟ್ಯಾಂಡ್‌ ಧಡಾರೆಂದು ಅವನ ಕಾಲ ಮೇಲೆ ಬಿದ್ದು ಅವನ ಹೆಬ್ಬೆರಳು ಫ್ರ್ಯಾಕ್ಚರ್‌ ಆಗಿಹೋಯ್ತು. ಅವನು ಚಪ್ಪಲಿ ಹಾಕುವ ಸ್ಥಿತಿಯಲ್ಲೇ ಇರಲಿಲ್ಲ. ಅವನಿಗೆ ಅವನ ತಪ್ಪಿನ ಅರಿವಾಯ್ತು.

ರಾಜ್‌ಕುಮಾರ್‌ ಅವರಿಗೆ ಕೋಪನೇ ಬರುವುದಿಲ್ಲ. ಅವರು ನಿಜಯವಾಗಿಯೂ ಕೋಪಿಸಿಕೊಂಡಿದ್ದು ಎರಡು ಸಂದರ್ಭದಲ್ಲಿ. ಒಂದು ನಾಟಕದಲ್ಲಾದರೆ, ಇನ್ನೊಂದು ಚಿತ್ರೀರಕಣದ ವೇಳೆ. ರಾಜ್‌ಕುಮಾರ್‌ ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಊರೂರು ಸುತ್ತಬೇಕಾದ ಸನ್ನಿವೇಶವೊಂದಿತ್ತು. ಇಬ್ಬರು ಮುಂದೆ, ಇಬ್ಬರೂ ಹಿಂದೆ ಪಲ್ಲಕ್ಕಿ ತೆಗೆದುಕೊಂಡು ಹೋಗಬೇಕಿತ್ತು. ಆ ಪ್ರಸಂಗದಲ್ಲಿ ಶಾಟ್‌ ರೆಡಿ ಆಗಿತ್ತು. ಪಲ್ಲಕ್ಕಿ ಎತ್ತುವ ಹುಡುಗರು ಎಷ್ಟು ಕರೆದ್ರು ಬಂದಿಲ್ಲ. ಹುಡುಕಿದ್ರು ಸಿಕ್ಕಿಲ್ಲ. ಕೊನೆಗೆ ನೋಡಿದ್ರೆ, ಸ್ಟುಡಿಯೊದ ಒಂದು ಮೂಲೆಯಲ್ಲಿ ಮರದ ಕೆಳಗೆ ಕುಳಿತುಕೊಂಡಿ ಸಿಗರೇಟ್‌ ಸೇದುತ್ತಿದ್ರು. ಅವರು ಖಾವಿ ಬಟ್ಟೆಯಲ್ಲಿಯೇ ಸಿಗರೇಟ್‌ ಸೇದುತ್ತಿದ್ರು. ನಾನು ಬೈದು ಕರೆದುಕೊಂಡು ಬಂದೆ. ಎಲ್ಲಿ ಹಾಳಾಗಿ ಹೋಗಿದ್ರಂತೆ ಎಂದು ಬೇಜಾರಿಂದ ರಾಜ್‌ಕುಮಾರ್‌ ಕೇಳಿದ್ರು. ಮರದ ಕೆಳಗೆ ಭಂಗಿ ಹೊಡಿತ ಕುಳಿತಿದ್ರು ಮುತ್ತುರಾಜಣ್ಣ ಎಂದೆ. ಅವರಿಗೆ ಎಲ್ಲಿತ್ತೋ ಕೋಪ. ಈ ವೇಷದಲ್ಲಿ ಭಂಗಿ ಸೇದಿತ್ತೀರಾ ಬುದ್ಧಿ, ಜ್ಞಾನ, ಇದೆಯಾ ನಿಮಗೆ. ಹೊಟ್ಟೆಗೆ ಏನು ತಿಂತಿರಾ ಎಂದು ಸಿಕ್ಕಾಪಟ್ಟೆ ರೇಗಿದ್ರು. ನಂತರ ಶಾಟ್‌ ಮುಗಿತು.


ಮುಂದಿನ ಶಾಟ್‌ಗೆ ರೆಡಿ ಮಾಡಿ ರಾಜ್‌ಕುಮಾರ್‌ ಅವರನ್ನು ಹುಡುಕಿದ್ರೆ, ಅವರು ಸಿಗುತ್ತಿಲ್ಲ. ಎಲ್ಲಿ ಹೋದ್ರು ಎಂದು ಯೋಚನೆ ಮಾಡಿ, ಹುಡುಕಿದ್ವಿ. ಆಗಿನ ಕಾಲದಲ್ಲಿ ಸ್ಟುಡಿಯೊ ಗೋಡೆ ಮತ್ತು ಪರದೆಗೆ ಒಂದೂವರೆ ಅಡಿ ಜಾಗ ಇರುತ್ತಿತ್ತು. ಸೌಂಡ್‌ ಪ್ರೂಫಿಂಗ್‌ಗೆ ಇಟ್ಟಿರುತ್ತಿದ್ವಿ. ಅಲ್ಲಿ ಒಂದು ಕಡೆ ಹೋಗಿ ರಾಜ್‌ಕುಮಾರ್‌ ನಿಂತಿದ್ರು. ಹತ್ತಿರ ಹೋಗಿ ನೋಡಿದ್ರೆ ಕಣ್ಣಲ್ಲಿ ನೀರಿತ್ತು, ಅಳುತ್ತಿದ್ರು. ಏನಾಯ್ತು ಮುತ್ತುರಾಜಣ್ಣ ಎಂದೆ. ಆಗ, ಅವರು ನಾನು ದೊಡ್ಡ ತಪ್ಪು ಮಾಡಿದ್ದೇನೆ ಇವತ್ತು ಎಂದ್ರು. ಏನು ಮಾಡಿದ್ರಿ ಅಣ್ಣ ಎಂದೆ. ಈ ವೇಷದಲ್ಲಿ ಇದ್ದು ನಾನು ಕೋಪ ಮಾಡಿಕೊಳ್ಳಬಾರದಿತ್ತು ನನ್ನ ಕೈಯಲ್ಲಿ ತಡೆದುಕೊಳ್ಳಲು ಆಗುತ್ತಿಲ್ಲ ಅಂದ್ರು. ನಾನು ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡೆ. ಇದಕ್ಕೆ ಯಾಕೆ ಇಷ್ಟೊಂದು ಅಳುತ್ತಿದ್ದೀರಾ, ನೀವೇನು ಅಪರಾಧ ಮಾಡಿದ್ದೀರಾ? ನೀವು ಈ ವೇಷದಲ್ಲಿದ್ದಾಗ ರಾಘವೇಂದ್ರ ಸ್ವಾಮಿಗಳೇ ಆಹ್ವಾನೆ ಆಗಿರುತ್ತಾರೆ ಎಂದು ಭಾವಿಸಿರುತ್ತೀರಾ ಅಲ್ವಾ. ಅದೇ ರೀತಿ ಆ ಸ್ವಾಮಿಗಳೇ ಬಂದು ಹುಡುಗರಿಗೆ ಏಕೆ ಬೈದಿರಬಾರದು. ನೀವ್ಯಾಕೆ ಅದನ್ನು ಯೋಚಿಸುವುದಿಲ್ಲ ಎಂದೆ. ಆಗ ಅವರಿಗೆ ಸ್ವಲ್ಪ ಸಮಾಧಾನ ಆಯ್ತು. ಯಾಕೋ ನನಗೆ ಶೂಟಿಂಗ್ ಮಾಡಲು ಮನಸ್ಸಿಲ್ಲ ಭಗವಾನ್‌ ಇವತ್ತು ಅಂದ್ರು. ತಕ್ಷಣವೇ ಪ್ಯಾಕ್‌ಅಪ್‌ ಮಾಡಿದೆವು. ಇದು ಅವರಿಗೆ ಕೋಪ ಬಂದ ಎರಡನೇ ಸನ್ನಿವೇಶ. ಯಾರ ಮೇಲಾದ್ರು ಕೋಪ ಮಾಡಿಕೊಂಡ್ರು ಪಶ್ಚತ್ತಾಪ ಪಡುತ್ತಿದ್ರು. ಅದು ಅವರಲ್ಲಿದ್ದ ದೊಡ್ಡ ಗುಣ. ಅದು ಅವರ ತಂದೆಯಿಂದ ಬಂದ ಗುಣ. ಅವರ ತಂದೆಯೂ ತಪ್ಪು ಮಾಡಿದಾಗ ಮಕ್ಕಳಿಗೆ ಸರಿಯಾಗಿ ಬಾರಿಸುತ್ತಿದ್ದರಂತೆ, ಹತ್ತು ನಿಮಿಷದ ಮೇಲೆ ಮಗುವಿನ ಬಳಿ ಹೋಗಿ, ‘ಏಟು ಬಿತ್ತಾ ಕಂದ. ನೋವಾಯ್ತಾ, ನೀನು ತಪ್ಪು ಮಾಡಿದೆ ಎಂದು ಹೊಡೆದೆ, ಇನ್ನು ತಪ್ಪು ಮಾಡಬೇಡ ಕಂದ. ತಪ್ಪು ಮಾಡಿ ನನ್ನ ಬಳಿ ಹೊಡಿಸಿಕೊಳ್ಳಬೇಡ’ ಅನ್ನುತ್ತಿದ್ದರಂತೆ. ಅಪ್ಪನ ವಿದ್ಯೆಗಳನ್ನೆಲ್ಲ ಕಲಿತವರಲ್ಲಿ ನಾನು ಕಂಡಂತೆ ರಾಜ್‌ಕುಮಾರ್ ಅಗ್ರ ಗಣ್ಯರು.


ಮುಂದುವರಿಯುವುದು...


ಸಂದರ್ಶನ: ಕೆ.ಎಸ್‌. ಪರಮೇಶ್ವರ್‌

92 views