‘ಮೊದಲು ಅಮೆರಿಕಕ್ಕೆ ಕಾಲಿಟ್ಟಾಗ ಕೆಲಸದವನಂತೆ ಕಂಡರು’

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 20
ಶೋಗೆಂದು ಅಮೆರಿಕಕ್ಕೆ ಹೋದಾಗ ಒಬ್ಬರ ಮನೆಯಲ್ಲಿದ್ದೆ. ಬಹಳ ಒಳ್ಳೆಯ ಜನ ಅವರು. ಈಗ ಬೆಂಗಳೂರಿನಲ್ಲಿಯೇ ಇದ್ದಾರೆ. ಆದರೀಗ ಅವರ ಹೆಸರು ಹೇಳುವುದಿಲ್ಲ. ಅವರಿಗೆ ನಾನು ಮಿಮಿಕ್ರಿ ಕಲಾವಿದ ಎಂಬುದು ಗೊತ್ತಿರಲಿಲ್ಲ. ಏಕೆಂದರೆ, ಪಾಂಪ್ಲೆಟ್‌ಗೆ ಹಾಕಿಸಲು ಫೋಟೊ ಕೊಡಲು ನನಗೆ ಆ ಸಂದರ್ಭದಲ್ಲಿ ಸಾಧ್ಯವಾಗಿರಲಿಲ್ಲ. ಪುತ್ತೂರು ನರಸಿಂಹನಾಯ್ಕ, ತಬಲ– ವೇಣು, ಕೊಳಲು–ಪ್ರವೀಣ್‌ ಗೋಡ್ಖಿಂಡಿ... ಹೀಗೆ ಒಳ್ಳೊಳ್ಳೆ ಕಲಾವಿದರಿದ್ದರು. ಗುರು ಸೌಂಡ್ಸ್‌ ಆಫ್‌ ಮ್ಯೂಸಿಕ್‌ ವತಿಯಿಂದ ಹೋದ ಕಾರ್ಯಕ್ರಮವದು. ಸುಮಾರು 11 ಜನ ಇದ್ವಿ. ಅಮೆರಿಕದಲ್ಲಿ ನಾವಿದ್ದ ಮನೆಯವರು ಸೇರಿ ಒಟ್ಟು 14 ಜನ. ಒಂದು ಲುಂಗಿ ಹಾಕಿಕೊಂಡು ಅಲ್ಲಿದ್ದವರೆಗೆಲ್ಲ ನಾನೇ ಅಡುಗೆ ಮಾಡುತ್ತಿದ್ದೆ. ಉಳಿದ ಕಲಾವಿದರೆಲ್ಲ ರಿಹರ್ಸಲ್‌ ಮಾಡುತ್ತಿದ್ರು. ಮಿಮಿಕ್ರಿ ಕಲಾವಿದರಿಗೆ ರಿಹರ್ಸಲ್‌ ಮಾಡುವ ಅಗತ್ಯವಿರುವುದಿಲ್ಲ. ಹಾಗಾಗಿ ನಾನು ಕೆಲಸ ಮಾಡುತ್ತಿದ್ದೆ. ನಾನು ಆರೇಳು ಸಲ ಎಲ್ಲರಿಗೂ ಕಾಫಿ ಮಾಡಿ ಕೊಡುತ್ತಿದ್ದೆ.


ಅದ್ಧೂರಿ ಕಾರ್ಯಕ್ರಮವದು. ಅಮೆರಿಕದಲ್ಲಿ ನಾವು ನಡೆಸಿದ ಮೊದಲ ಶೋ ಅದು. ಆ ಮನೆಯವರು ಸಂಜೆ ನೀವು ಬರುತ್ತೀರಾ ಎಂದು ನನಗೆ ಕೇಳಿದ್ರು. ಹೌದು ಮೇಡಂ ಎಂದೆ. ಆಮೇಲೆ ಕೆಳಗೆ ಹೋಗಿ ಬಿಳಿ ಶರ್ಟ್‌, ಪ್ಯಾಂಟ್‌, ವಿಗ್‌ ಹಾಕಿ, ಮೇಕಪ್‌ ಮಾಡಿಕೊಂಡು ಬಂದೆ. ಅವರ ಮನೆಯಲ್ಲಿ ಒಂದು ಚಿಕ್ಕ ಮಗುವಿತ್ತು. ರಾತ್ರಿಯೆಲ್ಲ ನನ್ನ ಜೊತೆಗೆ ಮಲಗುತ್ತಿತ್ತು. ಆದರೆ, ನಾನು ರೆಡಿ ಆಗಿ ಬಂದ ತಕ್ಷಣ, ನಮ್ಮನೆಗೆ ಯಾರೋ ಬಂದಿದ್ದಾರೆ ಎಂದು ಅಳುತ್ತ ಓಡಿ ಹೋಯ್ತು. ದಯಾನಂದ್‌ ಯು ಲುಕ್‌ ಗಾರ್ಜಿಯಸ್‌. ಬಹಳ ಚೆನ್ನಾಗಿ ರೆಡಿಯಾಗಿದ್ದೀರಿ, ಗ್ರೇಟ್ ಅಂದ್ರು. ನಾನು ಥ್ಯಾಂಕ್ಯು ಎಂದೆ. ಕಾರ್ಯಕ್ರಮಕ್ಕೆ ಹೋಗುವಾಗ ಎಲ್ಲ ಒಂದೊಂದು ಬಗೆಯ ತಿಂಡಿಯನ್ನು ಮಾಡಿ ತೆಗೆದುಕೊಂಡು ಹೋಗುವುದು ವಾಡಿಕೆ. ನಾನು ಐದು ಕೆ.ಜಿ ರವೆಯಿಂದ ಮಾಡಿದ ಉಪ್ಪಿಟ್ಟನ್ನು ಹಿಡ್ಕೊಂಡು ಕಾರಿನಲ್ಲಿ ಕುಳಿತುಕೊಂಡೆ. ಅಲ್ಲಿಗೆ ಹೋದ ತಕ್ಷಣ ಚಾಮರಾಜಪೇಟೆ ಹುಡುಗ್ರು ನೀವ್ಯಾಕೆ ಹಿಡ್ಕೊಂಡಿದ್ದೀರಿ ಸರ್‌. ಎಂದು ಓಡಿ ಬಂದ್ರು. ಆಗ ಆ ಮನೆಯ ಯಜಮಾನಿ ಹಿಡ್ಕೊಳ್ಳಿ ಬಿಡಿ ಎಂದ್ರು. ಅವರಿಗೆ ನಾನು ಕಲಾವಿದ ಎಂಬುದು ಗೊತ್ತಿರಲಿಲ್ಲ. ಅವರ ಮನೆಯಲ್ಲಿ ಏಳು ದಿವಸ ಇದ್ದೆ. ನನಗೂ ಗೊತ್ತಿತ್ತು ಅವರಿಗೆ ನಾನು ಕಲಾವಿದ ಎಂಬುದು ಗೊತ್ತಿಲ್ಲ ಎಂಬುದು. ಆದರೆ, ನಾನು ಹೇಳಲು ಹೋಗಿಲ್ಲ.


ಪ್ರದರ್ಶನ ಆಯೋಜಿಸಿದ್ದ ಸ್ಥಳಕ್ಕೆ ಹೋದ ಮೇಲೆ, ನೀವು ಕಲಾವಿದರ ಬಳಿ ಹೋಗಿ ಸಹಾಯ ಮಾಡ್ತೀರಾ ಅಥವಾ ಇಲ್ಲಿಯೇ ಇರ್ತೀರಾ ಎಂದು ಅವರು ಕೇಳಿದ್ರು. ಅದಕ್ಕೆ ನಾನು ಅಲ್ಲಿಗೆ ಹೋಗ್ತೇನೆ ಎಂದು ಹೇಳಿ, ಹೊರಟೆ. ನಾನು ವೇದಿಕೆ ಏರಿ ಮಿಮಿಕ್ರಿ ಶುರು ಮಾಡುತ್ತಿದ್ದಂತೆ, ಜನ ಚಪ್ಪಾಳೆ ಹೊಡೆದು, ಹೊಟ್ಟೆತುಂಬ ನಗಲು ಪ್ರಾರಂಭಿಸಿದ್ರು. ಅದನ್ನು ನೋಡಿ, ಗುರು ಮತ್ತು ಮಂಜುಳಾ ಅವರ ಕಣ್ಣಲ್ಲಿ ನೀರು. ನಮ್ಮ ಶೋ ಇಷ್ಟು ಯಶಸ್ಸು ಕಂಡಿತು ಎಂಬ ಖುಷಿ ಅವರಲ್ಲಿತ್ತು. ಎಲ್ಲಾ ಕಲಾವಿದರ ಕಾರ್ಯಕ್ರಮಗಳೂ ಅದ್ಭುತವಾಗಿ ಮೂಡಿಬಂತು. ಕಾರ್ಯಕ್ರಮವನ್ನು 2 ಗಂಟೆ ಹೆಚ್ಚುವರಿಯಾಗಿ ಮಾಡಿದ್ರು. ನಾನು ಮೂರು ಕಾರ್ಯಕ್ರಮ ನಡೆಸಿಕೊಟ್ಟೆ. ಜನ ಬಹಳ ಖುಷಿಯಿಂದ ಕಾರ್ಯಕ್ರಮವನ್ನು ಆನಂದಿಸಿದ್ರು.


ನಾನು ಆ ಮನೆಯ ಯಜಮಾನರ ಕಾರಿನಲ್ಲಿ ಬಂದಿದ್ದೆ. ಕಾರಿನ ಬಳಿಯೇ ಮನೆಯ ಒಡತಿ ನಿಂತಿದ್ರು. ನಾನು ಅವರ ಬಳಿ ಹೋದೆ. ಅವರ ಧ್ವನಿಯಲ್ಲಿ ಸಹಜತೆ ಇರಲಿಲ್ಲ. ಏನಾಯ್ತು ಮೇಡಂ ಎಂದು ಕೇಳಿದೆ. ನನ್ನನ್ನು ಕ್ಷಮಿಸಿ, ನನಗೆ ನೀವು ಕಲಾವಿದ ಎಂಬುದು ಗೊತ್ತಿರಲಿಲ್ಲ. ಅಯ್ಯೋ, ಪರ್ವಾಗಿಲ್ಲ ಬಿಡಿ ಎಂದ್ರು ಬಿಡುತ್ತಿರಲಿಲ್ಲ. ನೀವು ನಮ್ಮನೆಯಲ್ಲಿ ಪಾತ್ರೆ ತೊಳೆದ್ರಿ, ಅಡುಗೆ ಮಾಡಿದ್ರಿ ಎಂದು ನನ್ನನ್ನು ತಬ್ಬಿಕೊಂಡು ದಯವಿಟ್ಟು ಕ್ಷಮಿಸಿ ಎಂದು ಕೇಳಿದ್ರು. ಇರಲಿ ಬಿಡಿ ಮೇಡಂ ಎಂದು ನಾನು ಹೇಳುತ್ತಿದ್ದೆ. ಅವರ ಪತಿ ದೂರದಿಂದ ನೋಡುತ್ತಿದ್ರು. ನಂತರದಲ್ಲಿ ಅವರು ಹತ್ತಿರ ಬಂದು, ದಯಾನಂದ್‌ ನಾನು ಅವಳಂತೆಯೇ ನಿನ್ನ ಬಳಿ ಕ್ಷಮೆ ಕೇಳಬೇಕಿತ್ತು. ಆದರೆ, ನಾನು ಕಂಟ್ರೋಲ್‌ ಮಾಡಿಕೊಂಡಿದ್ದೇನೆ. ಅವಳಿಗೆ ಕಂಟ್ರೋಲ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ರು.

ನಾನು ಮೇಡಂ ತಾಳ್ಮೆ ತಗೊಳ್ಳಿ ಪರ್ವಾಗಿಲ್ಲ ಎಂದೆ. ನಾನು ಅವರಿಗೆಲ್ಲ ಸಹಾಯಕ್ಕೆ ನೀವು ಬಂದಿದ್ದೀರಿ ಎಂದುಕೊಂಡೆ. ಪಾಂಪ್ಲೆಟ್‌ನಲ್ಲಿ ನಿಮ್ಮ ಫೋಟೊ ಇರಲಿಲ್ಲ. ನಾನು ತಪ್ಪು ತಿಳಿದುಕೊಂಡುಬಿಟ್ಟೆ ಎಂದು ಬಹಳ ಬೇಸರ ಮಾಡಿಕೊಂಡ್ರು. ಅವರು ಕಾಲು ಹಿಡಿದುಕೊಳ್ಳಲು ಬಂದ್ರು. ನಾನು ಆದಷ್ಟು ಸಮಾಧಾನ ಮಾಡಿದೆ. ಸುಮಾರು ಒಂದು ಗಂಟೆ ಸಮಾಧಾನ ಮಾಡಿದ್ದೇನೆ. ಅಷ್ಟರಲ್ಲಿ ಚಾಮರಾಜಪೇಟೆಯ ಹುಡುಗ ಬಂದು, ಏಳು ದಿನಗಳಿಂದ ಇವರ ಸೇವೆ ಮಾಡಿದ್ದೀರಿ ಮೇಡಂ, ಇವತ್ತು ನಮ್ಮ ಜೊತೆಗೆ ಕಳುಹಿಸಿ ನಾವು ಅವರನ್ನು ನೋಡಿಕೊಳ್ಳುತ್ತೇವೆ ಎಂದ್ರು. ಆಗ ಇವರಿಗೆ ಮತ್ತೊಮ್ಮೆ ಸಂಕಟವಾಗಿ ಅಳಲು ಪ್ರಾರಂಭಿಸಿದ್ರು. ಆಮೇಲೆ ಮನೆಗೆ ಬಂದ ಮೇಲೆ ಕಾಮಿಡಿ ಮಾಡಿ, ಮಾಡಿ ಅವರಿಗೆ ಹೊಟ್ಟೆ ಹುಣಾಗುವಷ್ಟು ನಗಿಸಿದ್ದೆ. ಇದು ಅಮೆರಿಕದಲ್ಲಿ ಆದ ನನ್ನ ಮೊದಲ ಅನುಭವ.ಮುಂದುವರೆಯುವುದು...

49 views